Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 5:1-21

ಅನನೀಯ ಮತ್ತು ಸಫೈರ

ಅನನೀಯ ಎಂಬ ಒಬ್ಬನಿದ್ದನು. ಅವನ ಹೆಂಡತಿಯ ಹೆಸರು ಸಫೈರ. ಅನನೀಯ ತನ್ನಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದನು. ಆದರೆ, ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ಅವನು ಅಪೊಸ್ತಲರ ಪಾದಗಳ ಬಳಿ ಇಟ್ಟನು. ಅವನು ಸ್ವಲ್ಪ ಹಣವನ್ನು ತನಗೋಸ್ಕರ ರಹಸ್ಯವಾಗಿಟ್ಟುಕೊಂಡನು. ಅವನ ಹೆಂಡತಿಗೆ ಇದು ತಿಳಿದಿತ್ತು. ಆಕೆಯೂ ಅದಕ್ಕೆ ಒಪ್ಪಿಕೊಂಡಿದ್ದಳು.

ಪೇತ್ರನು, “ಅನನೀಯನೇ, ನಿನ್ನ ಹೃದಯವನ್ನು ಆಳಲು ನೀನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೇಕೆ? ನೀನು ಸುಳ್ಳು ಹೇಳಿ, ಪವಿತ್ರಾತ್ಮನನ್ನು ಮೋಸಪಡಿಸಲು ಪ್ರಯತ್ನಿಸಿದೆ. ನೀನು ನಿನ್ನ ಜಮೀನನ್ನು ಮಾರಿದೆ, ಆದರೆ ಬಂದ ಹಣದಲ್ಲಿ ಒಂದು ಭಾಗವನ್ನು ನೀನು ನಿನಗೋಸ್ಕರ ಇಟ್ಟುಕೊಂಡದ್ದೇಕೆ? ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.

5-6 ಅನನೀಯನು ಇದನ್ನು ಕೇಳಿದ ಕೂಡಲೇ ಕೆಳಗೆ ಬಿದ್ದು ಸತ್ತುಹೋದನು. ಕೆಲವು ಯೌವನಸ್ಥರು ಬಂದು ಅವನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅವರು ಅದನ್ನು ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಭಯಭ್ರಾಂತರಾದರು.

ಸುಮಾರು ಮೂರು ಗಂಟೆಗಳಾದ ನಂತರ ಅವನ ಹೆಂಡತಿಯಾದ ಸಫೈರ ಒಳಗೆ ಬಂದಳು. ನಡೆದ ಸಂಗತಿಯ ಬಗ್ಗೆ ಸಫೈರಳಿಗೆ ಗೊತ್ತಿರಲಿಲ್ಲ. ಪೇತ್ರನು ಆಕೆಗೆ, “ನಿಮ್ಮ ಜಮೀನಿನಿಂದ ನಿಮಗೆ ಎಷ್ಟು ಹಣ ಬಂತೆಂದು ನನಗೆ ಹೇಳು. ಇಷ್ಟೇ ಹಣವೋ?” ಎಂದು ಕೇಳಿದನು.

ಸಫೈರಳು, “ಹೌದು, ಅಷ್ಟೇ!” ಎಂದು ಹೇಳಿದಳು.

ಪೇತ್ರನು ಆಕೆಗೆ, “ನೀನು ಮತ್ತು ನಿನ್ನ ಗಂಡನು ಪ್ರಭುವಿನ ಆತ್ಮನನ್ನು ಪರೀಕ್ಷಿಸಲು ಒಪ್ಪಿಕೊಂಡಿದ್ದೇಕೆ? ಅಗೋ, ನಿನ್ನ ಗಂಡನನ್ನು ಹೂಳಿಟ್ಟ ಜನರು ಬಾಗಿಲ ಬಳಿಗೆ ಬಂದಿದ್ದಾರೆ! ಅವರು ನಿನ್ನನ್ನೂ ಅದೇರೀತಿ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು. 10 ತಕ್ಷಣವೇ ಸಫೈರಳು ಅವನ ಪಾದಗಳ ಮುಂದೆ ಬಿದ್ದು ಸತ್ತುಹೋದಳು. ಆ ಯೌವನಸ್ಥರು ಒಳಗೆ ಬಂದು ನೋಡಿದಾಗ ಆಕೆ ಸತ್ತುಹೋಗಿದ್ದಳು. ಅವರು ಆಕೆಯನ್ನು ಹೊತ್ತುಕೊಂಡು ಹೋಗಿ, ಆಕೆಯ ಗಂಡನ ಪಕ್ಕದಲ್ಲಿ ಹೂಳಿಟ್ಟರು. 11 ಈ ಸಂಗತಿಗಳ ಬಗ್ಗೆ ಕೇಳಿದ ವಿಶ್ವಾಸಿಗಳೆಲ್ಲರೂ ಮತ್ತು ಜನರೆಲ್ಲರೂ ಭಯಗ್ರಸ್ತರಾದರು.

ದೇವರ ಸೂಚಕಕಾರ್ಯಗಳು

12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. 13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು. 14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು. 15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು. 16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.

ಅಪೊಸ್ತಲರನ್ನು ತಡೆಯಲು ಯೆಹೂದ್ಯರ ಪ್ರಯತ್ನ

17 ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರೆಲ್ಲರೂ (ಸದ್ದುಕಾಯರು) ಬಹು ಅಸೂಯೆಗೊಂಡರು. 18 ಅವರು ಅಪೊಸ್ತಲರನ್ನು ಬಂಧಿಸಿ ರಾಜ್ಯಮಟ್ಟದ ಸೆರೆಮನೆಗೆ ಹಾಕಿದರು. 19 ಆದರೆ ರಾತ್ರಿಯಲ್ಲಿ ಪ್ರಭುವಿನ ದೂತನೊಬ್ಬನು ಸೆರೆಮನೆಯ ಬಾಗಿಲುಗಳನ್ನು ತೆರೆದನು. ದೇವದೂತನು ಅಪೊಸ್ತಲರನ್ನು ಕರೆದುಕೊಂಡು ಹೊರಗೆ ಬಂದು ಅವರಿಗೆ, 20 “ಹೋಗಿ ದೇವಾಲಯದಲ್ಲಿ ನಿಂತುಕೊಳ್ಳಿರಿ. ಯೇಸುವಿನಲ್ಲಿರುವ ಈ ಹೊಸ ಜೀವಿತದ ಬಗ್ಗೆ ಪ್ರತಿಯೊಂದನ್ನೂ ಜನರಿಗೆ ಹೇಳಿರಿ” ಎಂದನು. 21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು.

ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International