Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 12:27-50

ತನ್ನ ಮರಣದ ಕುರಿತು ಯೇಸುವಿನ ಹೇಳಿಕೆ

27 ಯೇಸು ಮಾತನ್ನು ಮುಂದುವರಿಸಿ, “ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ನನ್ನನ್ನು ಈ ಸಂಕಟ ಕಾಲದಿಂದ ರಕ್ಷಿಸು ಎನ್ನಬೇಕೇ?’ ಇಲ್ಲ! ಸಂಕಟಪಡುವುದಕ್ಕೋಸ್ಕರವೇ ನಾನು ಬಂದಿದ್ದೇನೆ. 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೊ!” ಎಂದು ಹೇಳಿದನು.

ಆಗ ಪರಲೋಕದಿಂದ, “ನನ್ನ ಹೆಸರನ್ನು ಮಹಿಮೆಪಡಿಸಿಕೊಂಡಿದ್ದೇನೆ. ನಾನು ಮತ್ತೆ ಮಹಿಮೆಪಡಿಸಿಕೊಳ್ಳುವೆನು” ಎಂಬ ವಾಣಿ ಆಯಿತು.

29 ಅಲ್ಲಿ ನಿಂತಿದ್ದ ಜನರು ಈ ವಾಣಿಯನ್ನು ಕೇಳಿ “ಅದು ಗುಡುಗು” ಎಂದರು.

ಆದರೆ ಇತರರು, “ದೇವದೂತನೊಬ್ಬನು ಯೇಸುವಿನೊಂದಿಗೆ ಮಾತಾಡಿದನು!” ಎಂದರು.

30 ಯೇಸು ಜನರಿಗೆ, “ಆ ವಾಣಿಯಾದದ್ದು ನನಗೋಸ್ಕರವಲ್ಲ, ನಿಮಗೋಸ್ಕರ. 31 ಈ ಲೋಕಕ್ಕೆ ತೀರ್ಪಾಗುವ ಕಾಲ ಇದೇ ಆಗಿದೆ. ಈಗ ಈ ಲೋಕದ ಅಧಿಪತಿಯನ್ನು (ಸೈತಾನ) ಹೊರಗೆ ದಬ್ಬಲಾಗುವುದು. 32 ನಾನು ಭೂಮಿಯಿಂದ ಮೇಲೆತ್ತಲ್ಪಡುವೆನು. ಆಗ ನಾನು ಎಲ್ಲಾ ಜನರನ್ನು ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33 ತಾನು ಸಾಯುವ ರೀತಿಯನ್ನು ಯೇಸು ಈ ಮಾತಿನ ಮೂಲಕ ಸೂಚಿಸಿದನು.

34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.

35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.

ಯೆಹೂದ್ಯರ ಅಪನಂಬಿಕೆ

37 ಯೇಸು ಅನೇಕ ಮಹತ್ಕಾರ್ಯಗಳನ್ನು ಮಾಡಿದನು. ಜನರು ಆ ಕಾರ್ಯಗಳನ್ನೆಲ್ಲಾ ನೋಡಿದರೂ ಆತನಲ್ಲಿ ನಂಬಿಕೆ ಇಡಲಿಲ್ಲ. 38 ಇದರಿಂದಾಗಿ, ಪ್ರವಾದಿಯಾದ ಯೆಶಾಯನು ಹೇಳಿದ್ದ ಮಾತುಗಳು ನೆರವೇರಿದವು. ಅದೇನೆಂದರೆ:

“ಪ್ರಭುವೇ, ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು?
    ಪ್ರಭುವಿನ ಬಾಹುಬಲವು ಯಾರಿಗೆ ಗೋಚರವಾಯಿತು?”(A)

39 ಆದಕಾರಣವೇ ಜನರು ನಂಬಲಾಗಲಿಲ್ಲ. ಏಕೆಂದರೆ ಯೆಶಾಯನು ಮತ್ತೊಂದು ಕಡೆಯಲ್ಲಿ ಹೀಗೆ ಹೇಳಿದ್ದಾನೆ:

40 “ತಮ್ಮ ಕಣ್ಣುಗಳಿಂದ ಕಾಣದಂತೆ
    ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆ
ಪರಿವರ್ತನೆಗೊಂಡು ಗುಣಹೊಂದದಂತೆ ಆತನು ಅವರನ್ನು ಕುರುಡರನ್ನಾಗಿ ಮಾಡಿದ್ದಾನೆ,
ಅವರ ಮನಸ್ಸುಗಳನ್ನು ಕಲ್ಲಾಗಿಸಿದ್ದಾನೆ.”(B)

41 ಯೆಶಾಯನು ಆತನ (ಯೇಸುವಿನ) ಮಹಿಮೆಯನ್ನು ನೋಡಿದ್ದರಿಂದಲೇ ಹೀಗೆ ಹೇಳಿದನು.

42 ಆದರೆ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅನೇಕ ಯೆಹೂದ್ಯನಾಯಕರು ಸಹ ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಅವರು ಫರಿಸಾಯರಿಗೆ ಹೆದರಿಕೊಂಡು ತಮ್ಮ ನಂಬಿಕೆಯನ್ನು ಬಹಿರಂಗಪಡಿಸಲಿಲ್ಲ. ತಮ್ಮನ್ನು ಫರಿಸಾಯರು ಸಭಾಮಂದಿರದಿಂದ ಬಹಿಷ್ಕರಿಸುತ್ತಾರೆ ಎಂಬ ಭಯ ಅವರಿಗಿತ್ತು. 43 ಈ ಜನರು ದೇವರ ಹೊಗಳಿಕೆಗಿಂತಲೂ ಜನರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.

ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು

44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.

47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International