Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 10:24-48

24 ಮರುದಿನ ಅವರು ಸೆಜರೇಯ ಪಟ್ಟಣವನ್ನು ತಲುಪಿದರು. ಕೊರ್ನೇಲಿಯನು ಅವರಿಗೋಸ್ಕರ ಕಾಯುತ್ತಿದ್ದನು. ಅವನು ತನ್ನ ಸಂಬಂಧಿಕರನ್ನು ಮತ್ತು ಆಪ್ತಸ್ನೇಹಿತರನ್ನು ಆಗಲೇ ತನ್ನ ಮನೆಗೆ ಆಹ್ವಾನಿಸಿದ್ದನು.

25 ಪೇತ್ರನು ಮನೆಯನ್ನು ಪ್ರವೇಶಿಸುತ್ತಿರಲು ಕೊರ್ನೇಲಿಯನು ಅವನನ್ನು ಎದುರುಗೊಂಡನು. ಕೊರ್ನೇಲಿಯನು ಪೇತ್ರನ ಪಾದಕ್ಕೆ ಅಡ್ಡಬಿದ್ದು ನಮಸ್ಕಾರ ಮಾಡಿದನು. 26 ಆದರೆ ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ, “ಎದ್ದುನಿಲ್ಲು! ನಾನೂ ನಿನ್ನಂತೆಯೇ ಕೇವಲ ಒಬ್ಬ ಮನುಷ್ಯನು” ಎಂದು ಹೇಳಿದನು. 27 ಪೇತ್ರನು ಕೊರ್ನೇಲಿಯನೊಂದಿಗೆ ಮಾತನ್ನು ಮುಂದುವರಿಸಿದನು. ಬಳಿಕ ಪೇತ್ರನು ಒಳಗೆ ಹೋದಾಗ, ಅಲ್ಲಿ ನೆರೆದು ಬಂದಿದ್ದ ಜನರ ದೊಡ್ಡ ಗುಂಪನ್ನು ಕಂಡನು.

28 ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಜನರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದಾಗಲಿ ಅವರನ್ನು ಭೇಟಿಮಾಡುವುದಾಗಲಿ ನಮ್ಮ ಯೆಹೂದ್ಯ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು ಎಂಬುದು ನಿಮಗೆ ಗೊತ್ತೇ ಇದೆ. ಆದರೆ ಯಾವ ವ್ಯಕ್ತಿಯನ್ನೂ ಅಪವಿತ್ರನೆಂದಾಗಲಿ ಅಶುದ್ಧನೆಂದಾಗಲಿ ಕರೆಯಕೂಡದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ. 29 ಆದ್ದರಿಂದ, ನನ್ನನ್ನು ಇಲ್ಲಿಗೆ ಬರಬೇಕೆಂದು ಕರೆದ ಜನರೊಂದಿಗೆ ನಾನು ವಾದಮಾಡಲಿಲ್ಲ. ಆದರೆ ನೀವು ನನ್ನನ್ನು ಯಾಕೆ ಕರೆಸಿದಿರೆಂದು ದಯವಿಟ್ಟು ಈಗ ಹೇಳಿರಿ” ಎಂದನು.

30 ಆಗ ಕೊರ್ನೇಲಿಯನು, “ನಾಲ್ಕು ದಿನಗಳ ಹಿಂದೆ, ನಾನು ನನ್ನ ಮನೆಯಲ್ಲಿ ಪ್ರಾರ್ಥಿಸುತ್ತಿದ್ದೆನು. ಆಗ ಮಧ್ಯಾಹ್ನದ ಸುಮಾರು ಮೂರು ಗಂಟೆ ಸಮಯವಾಗಿತ್ತು. ಇದ್ದಕ್ಕಿದ್ದಂತೆ ಒಬ್ಬ ಮನುಷ್ಯನು ನನ್ನ ಮುಂದೆ ನಿಂತನು. ಅವನು ಧರಿಸಿಕೊಂಡಿದ್ದ ಬಟ್ಟೆಗಳು ಪ್ರಕಾಶಮಾನವಾಗಿ ಹೊಳೆಯುತ್ತಿದ್ದವು. 31 ಆ ಮನುಷ್ಯನು, ‘ಕೊರ್ನೇಲಿಯನೇ! ದೇವರು ನಿನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ. ನೀನು ಬಡಜನರಿಗೆ ಕೊಡುವಂಥವುಗಳನ್ನು ನೋಡಿದ್ದಾನೆ. ದೇವರು ನಿನ್ನನ್ನು ಮೆಚ್ಚಿಕೊಂಡಿದ್ದಾನೆ. 32 ಆದ್ದರಿಂದ ಕೆಲವು ಜನರನ್ನು ಜೊಪ್ಪಪಟ್ಟಣಕ್ಕೆ ಕಳುಹಿಸಿ ಸೀಮೋನ್ ಪೇತ್ರನನ್ನು ಬರಬೇಕೆಂದು ಕೇಳಿಕೊ. ಪೇತ್ರನು ಚರ್ಮಕಾರನಾದ ಸೀಮೋನ ಎಂಬವನ ಮನೆಯಲ್ಲಿ ಇಳಿದುಕೊಂಡಿದ್ದಾನೆ. ಅವನ ಮನೆಯು ಸಮುದ್ರ ತೀರದಲ್ಲಿದೆ’ ಎಂದನು. 33 ಆದ್ದರಿಂದ, ನಾನು ತಕ್ಷಣ ನಿನಗೆ ಕರೆಕಳುಹಿಸಿದೆ. ನೀನು ಇಲ್ಲಿಗೆ ಬಂದದ್ದು ಉಪಕಾರವಾಯಿತು. ನಮಗೆ ತಿಳಿಸಬೇಕೆಂದು ಪ್ರಭುವು ನಿನಗೆ ಆಜ್ಞಾಪಿಸಿರುವ ಪ್ರತಿಯೊಂದನ್ನು ಕೇಳಲು ನಾವೆಲ್ಲರು ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ” ಎಂದು ಹೇಳಿದನು.

ಕೊರ್ನೇಲಿಯನ ಮನೆಯಲ್ಲಿ ಪೇತ್ರನ ಪ್ರಸಂಗ

34 ಪೇತ್ರನು ಮಾತಾಡಲಾರಂಭಿಸಿ ಹೀಗೆಂದನು: “ದೇವರಿಗೆ ಎಲ್ಲರೂ ಒಂದೇ ಎಂಬುದು ನನಗೆ ಈಗ ಅರ್ಥವಾಯಿತು. 35 ತನ್ನನ್ನು ಆರಾಧಿಸುವ ನೀತಿವಂತರು ಯಾರೇ ಆಗಿದ್ದರೂ ಅವರನ್ನು ದೇವರು ಸ್ವೀಕರಿಸಿಕೊಳ್ಳುವನು. ಅವನು ಯಾವ ದೇಶದವನು ಎಂಬುದು ಮುಖ್ಯವಲ್ಲ. 36 ದೇವರು ಯೆಹೂದ್ಯ ಜನರೊಂದಿಗೆ ಮಾತಾಡಿದ್ದಾನೆ. ಯೇಸು ಕ್ರಿಸ್ತನ ಮೂಲಕವಾಗಿ ಶಾಂತಿ ಬಂದಿದೆ ಎಂಬ ಸುವಾರ್ತೆಯನ್ನು ದೇವರು ಅವರಿಗೆ ಕಳುಹಿಸಿದನು. ಯೇಸುವು ಎಲ್ಲಾ ಜನರಿಗೆ ಪ್ರಭುವಾಗಿದ್ದಾನೆ!

37 “ಜುದೇಯದಲ್ಲೆಲ್ಲಾ ಏನಾಯಿತೆಂಬುದು ನಿಮಗೆ ಗೊತ್ತಿದೆ. ಗಲಿಲಾಯದಲ್ಲಿ ಯೋಹಾನನು[a] ದೀಕ್ಷಾಸ್ನಾನದ ಬಗ್ಗೆ ಜನರಿಗೆ ಬೋಧಿಸಿದ ಮೇಲೆ ಅದು ಆರಂಭವಾಯಿತು. 38 ನಜರೇತಿನ ಯೇಸುವಿನ ಬಗ್ಗೆ ನಿಮಗೆ ಗೊತ್ತಿದೆ. ದೇವರು ಆತನಿಗೆ ಪವಿತ್ರಾತ್ಮನನ್ನೂ ಶಕ್ತಿಯನ್ನೂ ಕೊಡುವುದರ ಮೂಲಕ ಆತನನ್ನು ಅಭಿಷೇಕಿಸಿದನು. ಆತನು ಎಲ್ಲಾ ಕಡೆಗಳಲ್ಲೂ ಜನರಿಗೆ ಒಳ್ಳೆಯದನ್ನು ಮಾಡುತ್ತಾ ಸಂಚರಿಸಿದನು. ದೆವ್ವದಿಂದ ಪೀಡಿತರಾಗಿದ್ದವರನ್ನು ಯೇಸು ಗುಣಪಡಿಸಿದನು. ದೇವರು ಯೇಸುವಿನೊಂದಿಗೆ ಇದ್ದನೆಂಬುದನ್ನು ಇದು ತೋರಿಸಿಕೊಟ್ಟಿತು.

39 “ಜುದೇಯದಲ್ಲಿ ಮತ್ತು ಜೆರುಸಲೇಮಿನಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನ್ನು ನಾವು ನೋಡಿದೆವು. ಆ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. ಆದರೆ ಯೇಸು ಕೊಲ್ಲಲ್ಪಟ್ಟನು. ಅವರು ಆತನನ್ನು ಮರದ ಶಿಲುಬೆಗೆ ಏರಿಸಿದರು. 40 ಆದರೆ, ದೇವರು ಆತನನ್ನು ಮೂರನೆಯ ದಿನದಲ್ಲಿ ಜೀವಂತವಾಗಿ ಎಬ್ಬಿಸಿದನು! ಯೇಸುವನ್ನು ಸ್ಪಷ್ಟವಾಗಿ ನೋಡುವ ಅವಕಾಶವನ್ನು ದೇವರು ಜನರಿಗೆ ಒದಗಿಸಿಕೊಟ್ಟನು. 41 ಆದರೆ ಯೇಸುವು ಎಲ್ಲಾ ಜನರಿಗೆ ಕಾಣಿಸಿಕೊಳ್ಳಲಿಲ್ಲ. ದೇವರಿಂದ ಮೊದಲೇ ಸಾಕ್ಷಿಗಳಾಗಿ ಆಯ್ಕೆಗೊಂಡಿದ್ದವರು ಮಾತ್ರ ಆತನನ್ನು ಕಂಡರು! ನಾವೇ ಆ ಸಾಕ್ಷಿಗಳು! ಯೇಸು ಜೀವಂತವಾಗಿ ಎದ್ದುಬಂದ ಮೇಲೆ ನಾವು ಆತನೊಂದಿಗೆ ಊಟ ಮಾಡಿದೆವು ಮತ್ತು ಪಾನ ಮಾಡಿದೆವು.

42 “ಜನರಿಗೆ ಬೋಧಿಸಬೇಕೆಂದು ಯೇಸು ನಮಗೆ ಹೇಳಿದನು. ಜೀವಂತವಾಗಿರುವ ಜನರಿಗೂ ಮತ್ತು ಸತ್ತುಹೋಗಿರುವ ಜನರಿಗೂ ದೇವರಿಂದ ನ್ಯಾಯಾಧಿಪತಿಯಾಗಿ ಆಯ್ಕೆಯಾಗಿರುವ ವ್ಯಕ್ತಿ ತಾನೇ ಎಂಬುದನ್ನು ಜನರಿಗೆ ತಿಳಿಸಬೇಕೆಂದು ಆತನು ನಮಗೆ ಹೇಳಿದನು. 43 ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನ ಪಾಪಗಳನ್ನು ದೇವರು ಯೇಸುವಿನ ಮೂಲಕ ಕ್ಷಮಿಸುವನು. ಇದು ಸತ್ಯವೆಂದು ಪ್ರವಾದಿಗಳು ಹೇಳಿದ್ದಾರೆ” ಅಂದನು.

ಯೆಹೂದ್ಯರಲ್ಲದವರಿಗೆ ಪವಿತ್ರಾತ್ಮಧಾರೆ

44 ಪೇತ್ರನು ಇನ್ನೂ ಹೀಗೆ ಹೇಳುತ್ತಿರುವಾಗಲೇ, ಅವನ ಉಪದೇಶವನ್ನು ಕೇಳುತ್ತಿದ್ದವರ ಮೇಲೆ ಪವಿತ್ರಾತ್ಮನು ಇಳಿದು ಬಂದನು. 45 ಪೇತ್ರನೊಂದಿಗೆ ಬಂದಿದ್ದ ಯೆಹೂದ್ಯ ವಿಶ್ವಾಸಿಗಳು ವಿಸ್ಮಿತರಾದರು. ಯೆಹೂದ್ಯರಲ್ಲದ ಜನರಿಗೂ ಸಹ ಪವಿತ್ರಾತ್ಮಧಾರೆಯಾದದ್ದನ್ನು ಕಂಡು ಅವರು ಆಶ್ಚರ್ಯಪಟ್ಟರು. 46 ಅವರು ಬೇರಬೇರೆ ಭಾಷೆಗಳನ್ನು ಮಾತಾಡುತ್ತಾ ದೇವರಿಗೆ ಸ್ತೋತ್ರ ಸಲ್ಲಿಸುತ್ತಿರುವುದನ್ನು ಆ ಯೆಹೂದ್ಯ ವಿಶ್ವಾಸಿಗಳು ಕೇಳಿದರು. ಬಳಿಕ ಪೇತ್ರನು, 47 “ನೀರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳದಂತೆ ನಾವು ಈ ಜನರಿಗೆ ಅಡ್ಡಿಮಾಡಲು ಸಾಧ್ಯವಿಲ್ಲ. ನಾವು ಹೊಂದಿಕೊಂಡಂತೆ ಇವರೂ ಪವಿತ್ರಾತ್ಮನನ್ನು ಹೊಂದಿಕೊಂಡರು!” ಎಂದು ಹೇಳಿ, 48 ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಲು ಅವರಿಗೆ ಅಪ್ಪಣೆಕೊಟ್ಟನು. ಬಳಿಕ ಅವರು ತಮ್ಮೊಂದಿಗೆ ಕೆಲವು ದಿನಗಳವರೆಗೆ ಇರಬೇಕೆಂದು ಪೇತ್ರನನ್ನು ಕೇಳಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International