Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 8:1-25

ಯೇಸುವಿನೊಂದಿಗಿದ್ದ ಜನರು

ಮರುದಿನ, ಯೇಸು ಕೆಲವು ನಗರಗಳ ಮತ್ತು ಊರುಗಳ ಮೂಲಕ ಪ್ರಯಾಣ ಮಾಡಿ ಜನರಿಗೆ ಬೋಧಿಸಿದನು ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಿದನು. ಹನ್ನೆರಡು ಮಂದಿ ಅಪೊಸ್ತಲರು ಆತನೊಡನೆ ಇದ್ದರು. ಕೆಲವು ಸ್ತ್ರೀಯರೂ ಆತನೊಡನೆ ಇದ್ದರು. ಈ ಸ್ತ್ರೀಯರು ಆತನಿಂದ ತಮ್ಮ ಕಾಯಿಲೆಗಳಿಂದ ಗುಣಹೊಂದಿದವರೂ ದೆವ್ವಗಳ ಕಾಟದಿಂದ ಬಿಡುಗಡೆ ಹೊಂದಿದವರೂ ಆಗಿದ್ದರು. ಈ ಸ್ತ್ರೀಯರಲ್ಲಿ ಒಬ್ಬಳ ಹೆಸರು ಮರಿಯಳು. ಆಕೆ ಮಗ್ದಲ ಎಂಬ ಊರಿನವಳು. ಯೇಸು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದನು. ಇದಲ್ಲದೆ ಕೂಜನ (ಹೆರೋದನ ಸಹಾಯಕ) ಹೆಂಡತಿಯಾದ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕ ಸ್ತ್ರೀಯರು ಇದ್ದರು. ಈ ಸ್ತ್ರೀಯರು ಯೇಸುವಿಗೂ ಆತನ ಅಪೊಸ್ತಲರಿಗೂ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದರು.

ಯೇಸು ಹೇಳಿದ ಬೀಜ ಬಿತ್ತುವವನ ಸಾಮ್ಯ

(ಮತ್ತಾಯ 13:1-17; ಮಾರ್ಕ 4:1-12)

ಅನೇಕ ಜನರು ಊರೂರುಗಳಿಂದ ಯೇಸುವಿನ ಬಳಿಗೆ ಸೇರಿಬಂದರು. ಆಗ ಯೇಸು ಅವರಿಗೆ ಈ ಸಾಮ್ಯ ಹೇಳಿದನು:

“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವುಗಳು ಮೊಳೆಯತೊಡಗಿದರೂ ನೀರಿಲ್ಲದೆ ಒಣಗಿಹೋದವು. ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯೆ ಬಿದ್ದವು. ಅವುಗಳು ಮೊಳೆತರೂ ಮುಳ್ಳುಗಿಡಗಳಿಂದ ಬೆಳೆಯಲಾಗಲಿಲ್ಲ. ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಮೊಳೆತು ಬೆಳೆದು ನೂರರಷ್ಟು ಹೆಚ್ಚು ಫಲವನ್ನು ಕೊಟ್ಟವು.”

ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ಮೇಲೆ, “ನನ್ನ ಮಾತನ್ನು ಆಲಿಸುತ್ತಿರುವ ಜನರೇ, ಕೇಳಿರಿ” ಎಂದು ಹೇಳಿದನು.

ಶಿಷ್ಯರು ಆತನಿಗೆ, “ಈ ಸಾಮ್ಯದ ಅರ್ಥವೇನು?” ಎಂದು ಕೇಳಿದರು.

10 ಯೇಸು, “ನೀವು ದೇವರ ರಾಜ್ಯದ ಗುಟ್ಟುಗಳನ್ನು ತಿಳಿದುಕೊಳ್ಳಬೇಕೆಂದು ನಿಮ್ಮನ್ನು ಆರಿಸಿಕೊಳ್ಳಲಾಗಿದೆ. ಆದರೆ ಬೇರೆ ಜನರೊಂದಿಗೆ ನಾನು ಸಾಮ್ಯಗಳ ಮೂಲಕ ಮಾತಾಡುತ್ತೇನೆ, ಏಕೆಂದರೆ,

‘ಅವರು ನೋಡಿದರೂ ಕಾಣುವುದಿಲ್ಲ,
    ಕೇಳಿದರೂ ಗ್ರಹಿಸಿಕೊಳ್ಳುವುದಿಲ್ಲ.’(A)

ಬೀಜಗಳ ಕುರಿತು ಯೇಸು ಕೊಟ್ಟ ವಿವರಣೆ

(ಮತ್ತಾಯ 13:18-23; ಮಾರ್ಕ 4:13-20)

11 “ಈ ಸಾಮ್ಯದ ಅರ್ಥ ಹೀಗಿದೆ: ಬೀಜವು ದೇವರ ವಾಕ್ಯ. 12 ಕಾಲ್ದಾರಿಯಲ್ಲಿ ಬಿದ್ದ ಬೀಜವೆಂದರೇನು? ದೇವರ ವಾಕ್ಯವನ್ನು ಕೆಲವರು ಕೇಳುತ್ತಾರೆ. ಆದರೆ ಸೈತಾನನು ಬಂದು ಅವರ ಹೃದಯದೊಳಗಿಂದ ಆ ವಾಕ್ಯವನ್ನು ತೆಗೆದುಬಿಡುತ್ತಾನೆ. ಅವರು ಆ ವಾಕ್ಯವನ್ನು ನಂಬದಿರುವುದರಿಂದ ರಕ್ಷಣೆಯನ್ನು ಹೊಂದಲಾರರು. 13 ಬಂಡೆಯ ಮೇಲೆ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯ ಕೇಳಿ ಸಂತೋಷದಿಂದ ಸ್ವೀಕರಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಆಳವಾದ ಬೇರುಗಳಿರುವುದಿಲ್ಲ. ಅವರು ಸ್ವಲ್ಪಕಾಲ ಮಾತ್ರವೇ ನಂಬುತ್ತಾರೆ. ಬಳಿಕ ತೊಂದರೆಯೇನಾದರೂ ಬಂದರೆ ತಮ್ಮ ನಂಬಿಕೆಯನ್ನು ಕಳೆದುಕೊಂಡು ದೇವರಿಂದ ದೂರ ಸರಿಯುತ್ತಾರೆ.

14 “ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯಲಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು. 15 ಒಳ್ಳೆಯ ನೆಲದಲ್ಲಿ ಬಿದ್ದ ಬೀಜವೆಂದರೇನು? ಒಳ್ಳೆಯದಾದ ಮತ್ತು ಯಥಾರ್ಥವಾದ ಹೃದಯದಿಂದ ದೇವರ ವಾಕ್ಯವನ್ನು ಕೇಳುವ ಜನರೇ ಬೀಜಬಿದ್ದ ಒಳ್ಳೆಯ ನೆಲವಾಗಿದ್ದಾರೆ. ಅವರು ದೇವರ ವಾಕ್ಯಕ್ಕೆ ವಿಧೇಯರಾಗಿ ತಾಳ್ಮೆಯಿಂದ ಒಳ್ಳೆಯ ಫಲವನ್ನು ನೀಡುವರು.

ನಿಮ್ಮ ತಿಳುವಳಿಕೆಯನ್ನು ಉಪಯೋಗಿಸಿರಿ

(ಮಾರ್ಕ 4:21-25)

16 “ಯಾವ ವ್ಯಕ್ತಿಯೂ ದೀಪವನ್ನು ಹಚ್ಚಿ ಅದನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಬಚ್ಚಿಡುವುದಿಲ್ಲ. ಮನೆಯೊಳಗೆ ಬರುವವರಿಗೆ ಸಾಕಷ್ಟು ಬೆಳಕು ದೊರೆಯಲಿ ಎಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾನೆ. 17 ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ; ಬಯಲಿಗೆ ಬಾರದ ಯಾವ ಗುಟ್ಟೂ ಇಲ್ಲ. 18 ಆದ್ದರಿಂದ ನೀವು ಕಿವಿಗೊಡುವಾಗ ಜಾಗರೂಕರಾಗಿರಿ; ಸ್ವಲ್ಪ ತಿಳುವಳಿಕೆ ಇರುವ ವ್ಯಕ್ತಿಯು ಹೆಚ್ಚು ತಿಳುವಳಿಕೆಯನ್ನು ಹೊಂದುವನು. ಆದರೆ ತಿಳುವಳಿಕೆ ಇಲ್ಲದ ವ್ಯಕ್ತಿಯು ತನಗಿದೆ ಎಂದುಕೊಂಡಿದ್ದ ತಿಳುವಳಿಕೆಯನ್ನೂ ಕಳೆದುಕೊಳ್ಳುವನು” ಎಂದು ಹೇಳಿದನು.

ಯೇಸುವಿನ ಶಿಷ್ಯರೇ ಆತನ ಕುಟುಂಬದವರು

(ಮತ್ತಾಯ 12:46-50; ಮಾರ್ಕ 3:31-35)

19 ಯೇಸುವಿನ ತಾಯಿ ಮತ್ತು ತಮ್ಮಂದಿರು ಆತನನ್ನು ಭೇಟಿಯಾಗಲು ಬಂದರು. ಅಲ್ಲಿ ಬಹಳ ಜನರು ಇದ್ದುದರಿಂದ ಯೇಸುವಿನ ತಾಯಿಯಾಗಲಿ ಆತನ ತಮ್ಮಂದಿರಾಗಲಿ ಆತನ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಒಬ್ಬನು, 20 “ನಿನ್ನ ತಾಯಿ ಮತ್ತು ತಮ್ಮಂದಿರು ಹೊರಗೆ ನಿಂತಿದ್ದಾರೆ. ಅವರು ನಿನ್ನನ್ನು ನೋಡಬೇಕೆಂದಿದ್ದಾರೆ” ಎಂದು ಯೇಸುವಿಗೆ ತಿಳಿಸಿದನು.

21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು!” ಎಂದು ಉತ್ತರಕೊಟ್ಟನು.

ಯೇಸುವಿನ ಶಕ್ತಿಯನ್ನು ಶಿಷ್ಯರು ಕಂಡರು

(ಮತ್ತಾಯ 8:23-27; ಮಾರ್ಕ 4:35-41)

22 ಒಂದು ದಿನ ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಹತ್ತಿ ಕುಳಿತುಕೊಂಡರು. ಯೇಸು ಅವರಿಗೆ, “ನಾವು ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. ಅಂತೆಯೇ ಅವರು ಆಚೆದಡಕ್ಕೆ ಹೊರಟರು. 23 ಅವರು ಸರೋವರದ ಮೇಲೆ ದೋಣಿಯಲ್ಲಿ ಹೋಗುತ್ತಿರುವಾಗ ಯೇಸುವಿಗೆ ನಿದ್ದೆ ಹತ್ತಿತು. ಇತ್ತ ಸರೋವರದ ಮೇಲೆ ಬಿರುಗಾಳಿ ಬೀಸತೊಡಗಿತು. ದೋಣಿಯೊಳಗೆ ನೀರು ತುಂಬತೊಡಗಿತು. ದೋಣಿಯಲ್ಲಿದ್ದವರೆಲ್ಲರೂ ಅಪಾಯಕ್ಕೀಡಾದರು. 24 ಆಗ ಶಿಷ್ಯರು ಯೇಸುವಿನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಗುರುವೇ! ಗುರುವೇ! ನಾವು ಮುಳುಗಿಹೋಗುತ್ತಿದ್ದೇವೆ!” ಎಂದು ಹೇಳಿದರು.

ಕೂಡಲೇ ಯೇಸು ಎದ್ದು, ಆ ಗಾಳಿಗೂ ತೆರೆಗಳಿಗೂ ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತಿತು ಮತ್ತು ಸರೋವರ ಶಾಂತವಾಯಿತು. 25 ಯೇಸು ತನ್ನ ಶಿಷ್ಯರಿಗೆ, “ಎಲ್ಲಿ ಹೋಯಿತು ನಿಮ್ಮ ನಂಬಿಕೆ?” ಎಂದು ಕೇಳಿದನು.

ಶಿಷ್ಯರು ಭಯಪಟ್ಟರು ಮತ್ತು ವಿಸ್ಮಯಗೊಂಡರು. “ಈತನು ಯಾರಿರಬಹುದು? ಈತನು ಗಾಳಿಗೂ ನೀರಿಗೂ ಆಜ್ಞಾಪಿಸುತ್ತಾನೆ. ಅವು ವಿಧೇಯವಾಗುತ್ತವೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International