M’Cheyne Bible Reading Plan
ಬಿಳಾಮನ ಮೊದಲನೆಯ ಸಂದೇಶ
23 ಬಿಳಾಮನು ಬಾಲಾಕನಿಗೆ, “ಇಲ್ಲಿ ನೀನು ಏಳು ಯಜ್ಞವೇದಿಕೆಗಳನ್ನು ನನಗೆ ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ನನಗೆ ಸಿದ್ಧಪಡಿಸು” ಅಂದನು. 2 ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನೂ ಬಿಳಾಮನೂ ಪ್ರತಿಯೊಂದು ಯಜ್ಞವೇದಿಕೆಯ ಮೇಲೆ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದಾಗ, 3 ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು. ನಾನು ಸ್ವಲ್ಪದೂರ ಹೋಗಿ ಬರುತ್ತೇನೆ. ಒಂದುವೇಳೆ ಯೆಹೋವನು ನನ್ನನ್ನು ಸಂಧಿಸಲು ಬರಬಹುದು. ಆತನು ನನಗೆ ಪ್ರಕಟಿಸುವುದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ದಿಣ್ಣೆಗೆ ಹೋದನು.
4 ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು.
5 ಆಗ ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ತಿರುಗಿಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.
6 ಬಿಳಾಮನು ಬಾಲಾಕನ ಬಳಿಗೆ ತಿರುಗಿಬಂದಾಗ ಬಾಲಾಕನು ಯಜ್ಞವೇದಿಕೆಯ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನೊಡನೆ ನಿಂತಿದ್ದರು. 7 ಆಗ ಬಿಳಾಮನು ಹೀಗೆ ಹೇಳಿದನು:
“ಮೋವಾಬ್ಯರ ಅರಸನಾದ ಬಾಲಾಕನು
ನನ್ನನ್ನು ಅರಾಮಿನ ಪೂರ್ವ ದಿಕ್ಕಿನ ಬೆಟ್ಟಗಳಿಂದ ನನ್ನನ್ನು ಕರೆಸಿದನು.
‘ನೀನು ಬಂದು ನನಗೋಸ್ಕರ ಯಾಕೋಬ್ಯರನ್ನು ಶಪಿಸು;
ಇಸ್ರೇಲರ ವಿರುದ್ಧ ಮಾತನಾಡು’ ಎಂದು ಬಾಲಾಕನು ಹೇಳಿದನು.
8 ಆದರೆ ದೇವರು ಅವರನ್ನು ಆಶೀರ್ವದಿಸಿರುವಾಗ
ನಾನು ಅವರನ್ನು ಶಪಿಸಲು ಆಗುವುದಿಲ್ಲ.
ಯೆಹೋವನು ಅವರ ಮೇಲೆ ನಾಶನವನ್ನು ಬರಮಾಡಲಿಲ್ಲ.
ಆದ್ದರಿಂದ ನಾಶನವು ಅವರ ಮೇಲೆ ಇಳಿದುಬರುವಂತೆ ಮಾಡಲು ನನಗೆ ಸಾಧ್ಯವಿಲ್ಲ.
9 ಬೆಟ್ಟದ ಶಿಖರದಿಂದ ಅವರನ್ನು ನಾನು ನೋಡಿದೆನು;
ಗುಡ್ಡದಿಂದ ಅವರನ್ನು ಕಂಡೆನು.
ಅವರು ತಮ್ಮನ್ನು ಇತರ ಜನಾಂಗಗಳಿಗಿಂತ
ಬೇರೆಯಾದವರು ಎಂದು ಪರಿಗಣಿಸಿಕೊಂಡಿದ್ದಾರೆ.
10 ಧೂಳಿನಷ್ಟು ಅಸಂಖ್ಯವಾದ ಯಾಕೋಬ್ಯರನ್ನು ಲೆಕ್ಕಿಸುವುದಕ್ಕೆ ಯಾರಿಂದಾದೀತು;
ಇಸ್ರೇಲರ ಕಾಲು ಭಾಗವನ್ನಾದರೂ ಯಾರೂ ಲೆಕ್ಕಿಸಲಾರರು.
ಸಜ್ಜನರಾದ ಅವರು ಸಾಯುವ ರೀತಿಯಲ್ಲೇ ನಾನೂ ಸಾಯಲು ಬಯಸುವೆ.
ಅವರಿಗುಂಟಾಗುವ ಅಂತ್ಯ ನನಗೂ ಉಂಟಾಗಲಿ.”
11 ಬಾಲಾಕನು ಬಿಳಾಮನಿಗೆ, “ಇದೇನು ನೀನು ನನಗೆ ಮಾಡಿದ್ದು! ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟೆ” ಎಂದು ಹೇಳಿದನು.
12 ಅದಕ್ಕೆ ಬಿಳಾಮನು, “ಯೆಹೋವನು ನನಗೆ ತಿಳಿಸುವುದನ್ನು ನಾನು ಹೇಳಬಾರದೇ?” ಎಂದು ಕೇಳಿದನು.
13 ಆಗ ಬಾಲಾಕನು, “ದಯಮಾಡಿ ನನ್ನೊಂದಿಗೆ ಇನ್ನೊಂದು ಸ್ಥಳಕ್ಕೆ ಬಾ; ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರೂ ಕಾಣಿಸದೆ ಕಡೇ ಭಾಗವು ಮಾತ್ರ ಕಾಣಿಸುವುದು. ಅಲ್ಲಿಂದ ನನಗೋಸ್ಕರ ಅವರನ್ನೇ ಶಪಿಸಬೇಕು” ಎಂದು ಹೇಳಿದನು. 14 ಹೀಗೆ ಬಾಲಾಕನು ಬಿಳಾಮನನ್ನು “ಕಾವಲುಗಾರರ ಬೆಟ್ಟಗಳು” ಎಂಬ ಸ್ಥಳಕ್ಕೆ ಕರೆದುಕೊಂಡು ಹೋದನು. ಇದು ಪಿಸ್ಗಾ ಪರ್ವತಶ್ರೇಣಿಯ ತುದಿಯಲ್ಲಿತ್ತು. ಅಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಪ್ರತಿಯೊಂದು ವೇದಿಕೆಯಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದನು.
15 ಬಿಳಾಮನು ಬಾಲಾಕನಿಗೆ, “ನೀನು ನಿನ್ನ ಯಜ್ಞವೇದಿಕೆಯ ಬಳಿಯಲ್ಲಿರು. ನಾನು ಆ ಕಡೆ ಹೋಗಿ ಯೆಹೋವನನ್ನು ಸಂಧಿಸುವೆನು” ಎಂದು ಹೇಳಿದನು.
16 ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಮತ್ತೆ ಹೋಗಿ ಹೀಗೆ ಹೇಳಬೇಕು” ಅಂದನು. 17 ಬಿಳಾಮನು ಬಾಲಾಕನ ಬಳಿಗೆ ಬಂದಾಗ ಅವನು ಇನ್ನೂ ಯಜ್ಞಪೀಠದ ಬಳಿಯಲ್ಲಿ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದು ಕೇಳಿದನು.
ಬಿಳಾಮನ ಎರಡನೆಯ ಸಂದೇಶ
18 ಆಗ ಬಿಳಾಮನು ಈ ಸಂಗತಿಗಳನ್ನು ಹೇಳಿದನು,
“ಬಾಲಾಕನೇ, ಎದ್ದುನಿಂತು ನಾನು ಹೇಳುವುದನ್ನು ಕೇಳು.
ಚಿಪ್ಪೋರನ ಮಗನಾದ ಬಾಲಾಕನೇ, ಕೇಳು:
19 ದೇವರು ಮನುಷ್ಯನಲ್ಲ;
ಆತನು ಸುಳ್ಳಾಡುವುದಿಲ್ಲ.
ದೇವರು ಮಾನವನಲ್ಲ;
ಆತನ ಉದ್ದೇಶಗಳು ಬದಲಾಗುವುದಿಲ್ಲ.
ಯೆಹೋವನು ತಾನು ಮಾಡುತ್ತೇನೆಂದು ಹೇಳಿದರೆ,
ಅದನ್ನು ಮಾಡಿಯೇ ಮಾಡುತ್ತಾನೆ.
ಯೆಹೋವನು ವಾಗ್ದಾನ ಮಾಡಿದರೆ,
ಅದನ್ನು ನೆರವೇರಿಸುತ್ತಾನೆ.
20 ಆ ಜನರನ್ನು ಆಶೀರ್ವದಿಸಬೇಕೆಂದು ಯೆಹೋವನು ನನಗೆ ಆಜ್ಞಾಪಿಸಿದನು;
ಯೆಹೋವನು ಅವರನ್ನು ಆಶೀರ್ವದಿಸಿದ್ದಾನೆ. ಅದನ್ನು ಬದಲಾಯಿಸಲು ನನಗೆ ಸಾಧ್ಯವಿಲ್ಲ.
21 ಯಾಕೋಬನ ಜನರಲ್ಲಿ ಯಾವ ದೋಷವೂ ಇಲ್ಲ.
ಇಸ್ರೇಲಿನ ಜನರಲ್ಲಿ ಯಾವ ಆಪತ್ತು ಕಾಣುತ್ತಿಲ್ಲ.
ಯೆಹೋವನೇ ಅವರ ದೇವರು.
ಆತನು ಅವರೊಂದಿಗಿದ್ದಾನೆ.
22 ದೇವರು ಅವರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು.
ಅವರು ಕಾಡು ಕೋಣದಂತೆ ಬಲಿಷ್ಠರಾಗಿದ್ದಾರೆ.
23 ನಿಜವಾಗಿಯೂ ಯಾಕೋಬನ ಜನರ ಮಧ್ಯದಲ್ಲಿ ಶಕುನ ನೋಡುವವರು ಇಲ್ಲ.
ಇಸ್ರೇಲಿನಲ್ಲಿ ಕಣಿ ಹೇಳುವವರು ಇಲ್ಲ.
ಜನರು, ಯಾಕೋಬನ ಮತ್ತು ಇಸ್ರೇಲರ ಬಗ್ಗೆ ಹೀಗೆ ಹೇಳುವರು:
‘ದೇವರು ಮಾಡಿದ ಮಹಾಕಾರ್ಯಗಳನ್ನು ನೋಡಿರಿ!’
24 ಆ ಜನರು ಪ್ರಾಯಸಿಂಹದಂತೆ ಬಲಿಷ್ಠರು.
ಅವರು ಸಿಂಹದಂತೆ ಹೋರಾಡುತ್ತಾರೆ.
ಆ ಸಿಂಹ ತನ್ನ ವೈರಿಯನ್ನು ತಿಂದುಬಿಡುವತನಕ ವಿಶ್ರಮಿಸುವುದಿಲ್ಲ.
ಆ ಸಿಂಹವು ತನಗೆ ಬಲಿಯಾದವರ ರಕ್ತವನ್ನು ಹೀರುವವರೆಗೆ ಎಂದಿಗೂ ವಿಶ್ರಮಿಸುವುದಿಲ್ಲ.”
25 ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ” ಎಂದು ಹೇಳಿದನು.
26 ಅದಕ್ಕೆ ಬಿಳಾಮನು, “ಯೆಹೋವನು ಹೇಳುವುದನ್ನೇ ನಾನು ಮಾಡುತ್ತೇನೆ ಎಂದು ನಾನು ನಿನಗೆ ಮೊದಲೇ ಹೇಳಲಿಲ್ಲವೆ?” ಅಂದನು.
27 ಆಮೇಲೆ ಬಾಲಾಕನು ಬಿಳಾಮನಿಗೆ, “ಸರಿ, ಇನ್ನೊಂದು ಸ್ಥಳಕ್ಕೆ ಬಾ. ಒಂದುವೇಳೆ ನೀನು ಅವರನ್ನು ಶಪಿಸಬೇಕೆಂದು ದೇವರು ಅಪೇಕ್ಷೆಪಡಬಹುದು” ಎಂದು ಹೇಳಿದನು. 28 ಬಾಲಾಕನು ಬಿಳಾಮನನ್ನು “ಪೆಗೋರ್” ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿಂದ ಕೆಳಗಿರುವ ಮರುಭೂಮಿಯು ಕಾಣಿಸುತ್ತದೆ.
29 ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಕೆಗಳನ್ನು ಕಟ್ಟಿಸಿ ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸು” ಎಂದು ಹೇಳಿದನು. 30 ಬಾಲಾಕನು ಅವನ ಅಪ್ಪಣೆಯ ಮೇರೆಗೆ ಮಾಡಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸರ್ವಾಂಗಹೋಮವಾಗಿ ಅರ್ಪಿಸಿದನು.
ರಚನೆಗಾರ: ದಾವೀದ.
64 ದೇವರೇ, ನನಗೆ ಕಿವಿಗೊಡು.
ವೈರಿಯು ನನಗೆ ಬೆದರಿಕೆ ಹಾಕಿದ್ದಾನೆ.
ನನ್ನ ಪ್ರಾಣವನ್ನು ರಕ್ಷಿಸು.
2 ನನ್ನ ಶತ್ರುಗಳ ಒಳಸಂಚುಗಳಿಂದ ನನ್ನನ್ನು ಸಂರಕ್ಷಿಸು.
ಆ ದುಷ್ಟರಿಗೆ ಸಿಕ್ಕದಂತೆ ನನ್ನನ್ನು ಮರೆಮಾಡು.
3 ಅವರು ನನ್ನ ಬಗ್ಗೆ ಕಡುಸುಳ್ಳುಗಳನ್ನು ಹೇಳಿದ್ದಾರೆ.
ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
ಅವರ ಮಾತುಗಳು ವಿಷಬಾಣಗಳಂತಿವೆ.
4 ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದು ನಿರ್ಭಯದಿಂದ[a]
ನೀತಿವಂತನ ಮೇಲೆ ಆ ಬಾಣಗಳನ್ನು ಎಸೆಯುತ್ತಾರೆ.
5 ಕೇಡುಮಾಡಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಬಲೆಯೊಡ್ಡಲು ಆಲೋಚಿಸುವರು.
“ತಮ್ಮ ಬಲೆಗಳು ಯಾರಿಗೂ ಕಾಣುವುದಿಲ್ಲ” ಎಂದು ಮಾತಾಡಿಕೊಳ್ಳುವರು.
6 ಅವರು ತಮ್ಮ ಬಲೆಗಳನ್ನು ಅಡಗಿಸಿಟ್ಟಿದ್ದಾರೆ; ಬೇಟೆಗಳಿಗಾಗಿ ಎದುರುನೋಡುತ್ತಿದ್ದಾರೆ.
ಜನರು ಕುತಂತ್ರಿಗಳಾಗಿದ್ದರೆ, ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಬಹು ಕಷ್ಟ.[b]
7 ಆದರೆ ದೇವರು ಇದ್ದಕ್ಕಿದ್ದಂತೆ ತನ್ನ ಬಾಣಗಳನ್ನು ಎಸೆಯುವನು.
ಆಗ ಆ ದುಷ್ಟರು ಗಾಯಗೊಳ್ಳುವರು.
8 ದುಷ್ಟರು ಬೇರೆಯವರಿಗೆ ಕೇಡುಮಾಡಲು ಆಲೋಚಿಸುವರು.
ಆದರೆ ಆ ಕೇಡುಗಳು ಅವರಿಗೇ ಸಂಭವಿಸುವಂತೆ ದೇವರು ಮಾಡುವನು.
ಆಗ ಅವರನ್ನು ಕಂಡ ಪ್ರತಿಯೊಬ್ಬನೂ
ಆಶ್ಚರ್ಯದಿಂದ ತಲೆಯಾಡಿಸುವನು.
9 ದೇವರ ಕಾರ್ಯವನ್ನು ಜನರು ಕಂಡು
ಅದರ ಬಗ್ಗೆ ಬೇರೆಯವರಿಗೂ ತಿಳಿಸುವರು.
ಹೀಗೆ ಪ್ರತಿಯೊಬ್ಬರೂ ದೇವರ ಬಗ್ಗೆ ಹೆಚ್ಚಾಗಿ ಕಲಿತುಕೊಂಡು
ಆತನಲ್ಲಿ ಭಯಭಕ್ತಿಯುಳ್ಳವರಾಗುವರು.
10 ಸಜ್ಜನರು ಯೆಹೋವನಲ್ಲಿ ಸಂತೋಷಿಸುತ್ತಾ
ಆತನನ್ನೇ ಆಶ್ರಯಿಸಿಕೊಳ್ಳುವರು.
ಯಥಾರ್ಥವಂತರು ಯೆಹೋವನನ್ನು ಕೊಂಡಾಡುವರು.
ರಚನೆಗಾರ: ದಾವೀದ.
65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
2 ಪ್ರಾರ್ಥನೆಯನ್ನು ಕೇಳುವಾತನೇ,
ಜನರೆಲ್ಲರೂ ನಿನ್ನ ಬಳಿಗೆ ಬರುವರು.
3 ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
ನಮ್ಮನ್ನು ಆ ಪಾಪಗಳಿಂದ ಬಿಡಿಸು.
4 ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
ನಾವು ಉಲ್ಲಾಸಗೊಂಡಿದ್ದೇವೆ.
5 ನಮ್ಮ ರಕ್ಷಕನಾದ ದೇವರೇ,
ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
6 ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
7 ಭೋರ್ಗರೆಯುವ ಸಮುದ್ರಗಳನ್ನೂ
ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
8 ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
9 ದೇವರೇ, ಭೂಪಾಲಕನು ನೀನೇ.
ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.
ಬಾಬಿಲೋನಿಗೆ ದೇವರ ಸಂದೇಶ
13 ಆಮೋಚನ ಮಗನಾದ ಯೆಶಾಯನಿಗೆ ಬಾಬಿಲೋನಿನ ಬಗ್ಗೆ ದೊರೆತ ದೈವಸಂದೇಶ:
2 “ಬೋಳುಗುಡ್ಡದ ಮೇಲೆ ಧ್ವಜವನ್ನೆತ್ತಿರಿ.
ಜನರನ್ನು ಕರೆಯಿರಿ;
ಕೈಸನ್ನೆ ಮಾಡಿರಿ;
ದ್ವಾರಗಳ ಮೂಲಕ ಪ್ರವೇಶಿಸಲು ಪ್ರಮುಖರಿಗೆ ಹೇಳಿರಿ.
3 “ನಾನು ಅವರನ್ನು ಆ ಜನರಿಂದ ಪ್ರತ್ಯೇಕಿಸಿದ್ದೇನೆ;
ನಾನೇ ಅವರಿಗೆ ಆಜ್ಞಾಪಿಸುವೆನು.
ನಾನು ಕೋಪಗೊಂಡಿರುವುದರಿಂದ ಆ ಜನರನ್ನು ಶಿಕ್ಷಿಸಲು ನನ್ನ ಉತ್ತಮವಾದ ಜನರನ್ನು ಒಟ್ಟಾಗಿ ಸೇರಿಸಿದ್ದೇನೆ.
ಉತ್ಸಾಹಶಾಲಿಗಳಾದ ನನ್ನ ಜನರ ಬಗ್ಗೆ ನಾನು ಹೆಮ್ಮೆಪಡುತ್ತೇನೆ.
4 “ಪರ್ವತಗಳಲ್ಲಿ ಒಂದು ದೊಡ್ಡ ಶಬ್ದ ಕೇಳಿಸುತ್ತದೆ. ಆ ಶಬ್ದಕ್ಕೆ ಕಿವಿಗೊಡಿರಿ.
ದೊಡ್ಡ ಜನಸಮೂಹದ ಶಬ್ದದಂತೆ ಕೇಳಿಸುತ್ತದೆ.
ಅನೇಕ ರಾಜ್ಯಗಳ ಜನರು ಒಟ್ಟಾಗಿ ಸೇರುತ್ತಿದ್ದಾರೆ.
ಸರ್ವಶಕ್ತನಾದ ಯೆಹೋವನು ತನ್ನ ಸೈನ್ಯವನ್ನು ಒಟ್ಟುಗೂಡಿಸುತ್ತಿದ್ದಾನೆ.
5 ಯೆಹೋವನೂ ಆ ಸೈನ್ಯವೂ ದೂರದಿಂದ ಬರುತ್ತಿದ್ದಾರೆ.
ದಿಗಂತದ ಆಚೆಯಿಂದ ಅವರು ಬರುತ್ತಿದ್ದಾರೆ.
ತನ್ನ ಸಿಟ್ಟನ್ನು ಪ್ರದರ್ಶಿಸುವದಕೋಸ್ಕರ ಯೆಹೋವನು ಈ ಸೈನ್ಯವನ್ನು ಉಪಯೋಗಿಸುವನು.
ಈ ಸೈನ್ಯವು ಇಡೀ ಭೂಮಿಯನ್ನು ಹಾಳು ಮಾಡುವುದು.”
6 ಯೆಹೋವನ ದಿನವು ಹತ್ತಿರವಾಗಿದೆ. ಆದ್ದರಿಂದ ದುಃಖಿಸಿರಿ, ರೋಧಿಸಿರಿ. ವೈರಿಯು ಬಂದು ನಿಮ್ಮ ಐಶ್ವರ್ಯವನ್ನು ಸೂರೆಮಾಡುವ ಸಮಯವು ಬರುತ್ತದೆ. ಸರ್ವಶಕ್ತನಾದ ದೇವರು ಅದನ್ನು ನೆರವೇರಿಸುವನು. 7 ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು. ಭಯದಿಂದ ಬಲಹೀನರಾಗುವರು. 8 ಪ್ರತಿಯೊಬ್ಬರೂ ಭಯಪೀಡಿತರಾಗುವರು. ಯಾತನೆವೇದನೆಗಳು ಅವರನ್ನು ಆಕ್ರಮಿಸುವವು. ಪ್ರಸವವೇದನೆಯಿಂದ ನರಳುವ ಹೆಂಗಸಿನಂತೆ ಅವರ ಹೊಟ್ಟೆಯಲ್ಲಿ ನೋವು ಉಂಟಾಗುವದು; ಅವರ ಮುಖಗಳು ಬೆಂಕಿಯಂತೆ ಕೆಂಪಗಾಗುವವು. ಭಯದ ಮುಖವು ತಮ್ಮ ನೆರೆಯವರಲ್ಲಿಯೂ ಇರುವದನ್ನು ನೋಡಿ ಜನರು ಆಶ್ಚರ್ಯಪಡುವರು.
ಬಾಬಿಲೋನಿನ ವಿರುದ್ಧವಾಗಿ ದೇವರ ತೀರ್ಪು
9 ಇಗೋ, ಯೆಹೋವನ ದಿನವು ಬರುತ್ತಿದೆ. ಅದು ಭಯಂಕರವಾದ ದಿನವಾಗಿದೆ. ದೇವರು ಅತ್ಯಂತ ಕೋಪದಿಂದ ದೇಶವನ್ನೆಲ್ಲಾ ನಾಶಮಾಡುವನು; ದುಷ್ಟಜನರನ್ನೆಲ್ಲಾ ದೇಶವನ್ನು ಬಿಟ್ಟುಹೋಗುವಂತೆ ಮಾಡುವನು. 10 ಆಕಾಶವು ಕತ್ತಲಾಗುವದು; ಸೂರ್ಯ, ಚಂದ್ರ, ನಕ್ಷತ್ರಾದಿಗಳು ಪ್ರಕಾಶವನ್ನು ಕಳೆದುಕೊಳ್ಳುವವು.
11 ದೇವರು ಹೇಳುವುದೇನೆಂದರೆ: “ಈ ಲೋಕಕ್ಕೆ ನಾನು ಕೆಡುಕನ್ನು ಉಂಟುಮಾಡುವೆನು. ದುಷ್ಟಜನರನ್ನು ಅವರ ಪಾಪಗಳಿಗಾಗಿ ನಾನು ಶಿಕ್ಷಿಸುವೆನು. ಅಹಂಕಾರಿಗಳು ಗರ್ವವನ್ನು ಕಳೆದುಕೊಳ್ಳುವಂತೆ ಮಾಡುವೆನು; ಕೀಳುಜನರ ಹೊಗಳಿಕೆಗಳನ್ನು ನಿಲ್ಲಿಸುವೆನು. 12 ಬಂಗಾರವು ಯಾವ ರೀತಿಯಲ್ಲಿ ಅಪರೂಪವಾಗಿ ದೊರಕುವದೋ, ಅದೇ ಪ್ರಕಾರ ದೇಶದಲ್ಲಿ ಬಹು ಸ್ವಲ್ಪವೇ ಜನರು ಉಳಿಯುವದರಿಂದ ಅವರು ನೋಡಸಿಗುವದೇ ಅಪರೂಪ. ಅಂಥವರು ಚೊಕ್ಕಬಂಗಾರಕ್ಕಿಂತಲೂ ಬೆಲೆಬಾಳುವರು. 13 ನನ್ನ ಕೋಪದಿಂದ ಆಕಾಶಮಂಡಲವನ್ನು ನಡುಗಿಸುವೆನು. ಭೂಮಿಯನ್ನು ಅದರ ಸ್ಥಳದಿಂದ ಕದಲಿಸುವೆನು.”
ಸರ್ವಶಕ್ತನಾದ ಯೆಹೋವನು ತನ್ನ ಮಹಾಕೋಪವನ್ನು ಪ್ರದರ್ಶಿಸುವ ದಿನದಲ್ಲಿ ಅದು ನೆರವೇರುವುದು. 14 ಆಗ ಗಾಯಗೊಂಡ ಜಿಂಕೆಯಂತೆ ಬಾಬಿಲೋನು ಓಡಿಹೋಗುವದು. ಅವರು ಕುರುಬನಿಲ್ಲದ ಕುರಿಗಳಂತೆ ಚದರಿ ಹೋಗುವರು. ಪ್ರತಿಯೊಬ್ಬನು ಹಿಂದಿರುಗಿ ತನ್ನ ದೇಶಕ್ಕೂ ತನ್ನ ಜನರ ಬಳಿಗೂ ಓಡುವನು. 15 ಆದರೆ ಶತ್ರುವು ಬಾಬಿಲೋನಿನವರನ್ನು ಹಿಂದಟ್ಟಿಕೊಂಡು ಹೋಗುವನು. ಶತ್ರುವು ಅವನನ್ನು ಹಿಡಿದು ತನ್ನ ಕತ್ತಿಯಿಂದ ಕೊಲ್ಲುವನು. 16 ಅವರ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕಿತ್ತುಕೊಳ್ಳುವರು; ಅವರ ಹೆಂಡತಿಯರನ್ನು ಬಲಾತ್ಕಾರದಿಂದ ಸಂಭೋಗಿಸುವರು; ಅವರ ಮಕ್ಕಳನ್ನು ಜನರ ಕಣ್ಣೆದುರಿನಲ್ಲಿಯೇ ಹೊಡೆದು ಸಾಯಿಸುವರು.
17 ದೇವರು ಹೇಳುವುದೇನೆಂದರೆ: “ಮೇದ್ಯರ ಸೈನ್ಯವು ಬಾಬಿಲೋನನ್ನು ಮುತ್ತುವಂತೆ ಮಾಡುವೆನು. ಮೇದ್ಯರ ಸೈನ್ಯಕ್ಕೆ ಬೆಳ್ಳಿಬಂಗಾರ ಸುರಿಸಿದರೂ ಅವರು ಬಾಬಿಲೋನಿನ ಮೇಲೆ ಧಾಳಿ ಮಾಡುವದನ್ನು ನಿಲ್ಲಿಸುವದಿಲ್ಲ. 18 ಸೈನಿಕರು ಬಾಬಿಲೋನಿನ ಯುವಕರನ್ನು ಹಿಡಿದು ಕೊಲ್ಲುವರು. ಶಿಶುಗಳಿಗೂ ದಯೆತೋರುವುದಿಲ್ಲ; ಮಕ್ಕಳಿಗೆ ಕರುಣೆತೋರುವುದಿಲ್ಲ. 19 ಬಾಬಿಲೋನು ಸೊದೋಮ್ ಗೊಮೋರಗಳಂತೆ ನಾಶವಾಗುವದು. ದೇವರೇ ಇದನ್ನು ಮಾಡುವನು. ಆಗ ಅಲ್ಲಿ ಏನೂ ಉಳಿಯದು.
“ಎಲ್ಲಾ ರಾಜ್ಯಗಳಿಗಿಂತ ಬಾಬಿಲೋನ್ ಬಹಳ ಸುಂದರವಾಗಿದೆ. ಬಾಬಿಲೋನಿಯರು ತಮ್ಮ ನಗರದ ಬಗ್ಗೆ ತುಂಬಾ ಹೆಚ್ಚಳಪಡುತ್ತಾರೆ. 20 ಆದರೆ ಬಾಬಿಲೋನ್ ಇನ್ನು ಮುಂದೆ ಸುಂದರವಾಗಿರದು. ಮುಂದಿನ ದಿವಸಗಳಲ್ಲಿ, ಜನರು ಅಲ್ಲಿ ವಾಸಿಸರು. ಅರಬ್ಬಿಯರು ತಮ್ಮ ಗುಡಾರಗಳನ್ನು ಅಲ್ಲಿ ಹಾಕುವದಿಲ್ಲ. ಕುರುಬರು ತಮ್ಮ ಮಂದೆಯನ್ನು ಮೇಯಿಸಲು ಅಲ್ಲಿಗೆ ಬರುವದಿಲ್ಲ. 21 ಅಲ್ಲಿ ಮರುಭೂಮಿಯ ಕಾಡುಪ್ರಾಣಿಗಳು ಮಾತ್ರವೇ ವಾಸಿಸುವವು. ಜನರು ಬಾಬಿಲೋನಿನಲ್ಲಿರುವ ತಮ್ಮ ಮನೆಗಳಲ್ಲಿ ವಾಸಿಸುವದಿಲ್ಲ. ಅವರ ಮನೆಗಳಲ್ಲಿ ಗೂಬೆಗಳು ಮತ್ತು ಉಷ್ಟ್ರಪಕ್ಷಿಗಳು ವಾಸಮಾಡುವವು. ಕಾಡುಮೇಕೆಗಳು ಮನೆಯೊಳಗೆ ಆಡುವವು. 22 ಕಾಡುನಾಯಿ ಮತ್ತು ತೋಳಗಳು ಬಾಬಿಲೋನಿನ ಭವ್ಯಭವನಗಳೊಳಗಿಂದ ಅರಚುವವು. ಬಾಬಿಲೋನ್ ಕೊನೆಗೊಳ್ಳುವುದು. ಅದರ ಅಂತ್ಯವು ಸಮೀಪದಲ್ಲಿಯೇ ಇದೆ. ಅದರ ಪೂರ್ಣ ನಾಶನಕ್ಕಾಗಿ ನಾನು ಇನ್ನು ಹೆಚ್ಚು ಹೊತ್ತು ಕಾಯುವದಿಲ್ಲ.”
1 ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನಿಯ ಎಂಬ ಪ್ರದೇಶಗಳಲ್ಲಿ ಚದರಿಹೋಗಿ ಪ್ರವಾಸಿಗಳಾದ ದೇವಜನರಿಗೆ ಬರೆಯುವ ಪತ್ರ.
2 ದೇವರು ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದರ ಮೂಲಕ ಆರಿಸಿಕೊಳ್ಳಲು ಬಹುಕಾಲದ ಹಿಂದೆಯೇ ಯೋಜನೆ ಮಾಡಿದ್ದನು. ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದು ಪರಿಶುದ್ಧಾತ್ಮನ ಕಾರ್ಯ. ನೀವು ಯೇಸು ಕ್ರಿಸ್ತನ ರಕ್ತದ ಮೂಲಕ ಪರಿಶುದ್ಧರಾಗಿ ತನಗೆ ವಿಧೇಯರಾಗಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಕೃಪೆಯೂ ಶಾಂತಿಯೂ ನಿಮಗೆ ಅಧಿಕವಾಗಿ ಲಭಿಸಲಿ.
ಜೀವಂತವಾದ ನಿರೀಕ್ಷೆ
3 ನಮ್ಮ ಪ್ರಭುವಾಗಿರುವ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ದೇವರು ಮಹಾ ಕರುಣಾಳುವಾಗಿದ್ದಾನೆ. ಆತನು ತನ್ನ ಕರುಣೆಯಿಂದಲೇ ನಮಗೆ ಹೊಸ ಜೀವವನ್ನು ನೀಡಿದನು. ಸತ್ತವರೊಳಗಿಂದ ಎದ್ದುಬಂದ ಯೇಸು ಕ್ರಿಸ್ತನ ಮೂಲಕ ಅದು ನಮಗೆ ಒಂದು ಜೀವಂತ ನಿರೀಕ್ಷೆಯನ್ನು ತರುತ್ತದೆ. 4 ದೇವರು ತನ್ನ ಮಕ್ಕಳಿಗೆ ನೀಡುವ ಆಶೀರ್ವಾದಗಳಲ್ಲಿ ಈಗ ನಮಗೆ ನಿರೀಕ್ಷೆಯಿದೆ. ಅವು ನಿಮಗಾಗಿ ಪರಲೋಕದಲ್ಲಿ ಇಡಲ್ಪಟ್ಟಿವೆ. ಅವು ಹಾಳಾಗುವುದಿಲ್ಲ, ನಾಶವಾಗುವುದಿಲ್ಲ ಮತ್ತು ಸೌಂದರ್ಯವನ್ನು ಕಳೆದುಕೊಳ್ಳುವುದಿಲ್ಲ.
5 ದೇವರ ಶಕ್ತಿಯು ನಿಮ್ಮ ನಂಬಿಕೆಯ ಮೂಲಕ ನಿಮ್ಮನ್ನು ಕಾಯುತ್ತದೆ. ನಿಮಗೆ ರಕ್ಷಣೆಯಾಗುವವರೆಗೆ ನಿಮ್ಮನ್ನು ಸುರಕ್ಷಿತವಾಗಿಡುತ್ತದೆ. ಸಿದ್ಧವಾಗಿರುವ ಆ ರಕ್ಷಣೆಯು ಅಂತ್ಯಕಾಲದಲ್ಲಿ ನಿಮಗೆ ದೊರೆಯುವುದು. 6 ಇದು ನಿಮ್ಮನ್ನು ಬಹಳ ಸಂತೋಷಗೊಳಿಸುತ್ತದೆ. ಆದರೆ ಈಗ ಸ್ವಲ್ಪಕಾಲ ಅನೇಕ ವಿಧವಾದ ತೊಂದರೆಗಳು ನಿಮ್ಮಲ್ಲಿ ದುಃಖವನ್ನು ಉಂಟುಮಾಡಬಹುದು. 7 ನಿಮ್ಮ ನಂಬಿಕೆಯು ಪರಿಶುದ್ಧವಾಗಿದೆ ಎಂಬುದನ್ನು ಪ್ರಕಟಿಸಲು ಈ ತೊಂದರೆಗಳು ಸಂಭವಿಸುತ್ತವೆ. ನಿಮ್ಮ ನಂಬಿಕೆಯ ಪರಿಶುದ್ಧತೆಯು ಬಂಗಾರದ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಬಂಗಾರವು ನಶಿಸಿಹೋಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟ ಹಾಕಿ ಅದರ ಪರಿಶುದ್ಧತೆಯನ್ನು ಶೋಧಿಸುವರು. ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ನಂಬಿಕೆಯ ಪರಿಶುದ್ಧತೆಯು ನಿಮಗೆ ಕೀರ್ತಿ, ಪ್ರಭಾವ ಮತ್ತು ಗೌರವಗಳನ್ನು ತರುತ್ತದೆ.
8 ನೀವು ಕ್ರಿಸ್ತನನ್ನು ನೋಡದಿದ್ದರೂ ಆತನನ್ನು ಪ್ರೀತಿಸುವಿರಿ. ಈಗ ಆತನನ್ನು ನೋಡದಿದ್ದರೂ ಆತನಲ್ಲಿ ನಂಬಿಕೆಯಿಟ್ಟಿದ್ದೀರಿ. ನಿಮ್ಮಲ್ಲಿ ಹೇಳಲಾಗದಷ್ಟು ಆನಂದವು ತುಂಬಿಕೊಂಡಿದೆ. ಆ ಆನಂದವು ಪ್ರಭಾವಪೂರ್ಣವಾಗಿದೆ. 9 ನಿಮ್ಮ ನಂಬಿಕೆಗೆ ಒಂದು ಗುರಿಯಿದೆ. ನಿಮ್ಮ ಆತ್ಮವನ್ನು ರಕ್ಷಿಸಬೇಕೆಂಬುದೇ ಆ ಗುರಿ. ನಿಮ್ಮ ಗುರಿಯಾಗಿರುವ ರಕ್ಷಣೆಯನ್ನು ಹೊಂದಿಕೊಳ್ಳುವಿರಿ.
10 ಪ್ರವಾದಿಗಳು ಈ ರಕ್ಷಣೆಯನ್ನು ಕುರಿತು ಸೂಕ್ಷ್ಮವಾಗಿ ಹುಡುಕಿ ಪರಿಶೀಲಿಸಲು ಪ್ರಯತ್ನಿಸಿದರು. ನಿಮಗೆ ಮುಂದೆ ಬರಲಿರುವ ಕೃಪೆಯನ್ನು ಕುರಿತು ಅವರು ಮಾತನಾಡಿದರು. 11 ಕ್ರಿಸ್ತನ ಆತ್ಮನು ಅವರಲ್ಲಿದ್ದನು. ಆ ಆತ್ಮನು ಕ್ರಿಸ್ತನಿಗೆ ಸಂಭವಿಸಬಹುದಾದ ಸಂಕಟವನ್ನು ಮತ್ತು ಆ ಸಂಕಟಗಳ ನಂತರ ಬರಲಿದ್ದ ಮಹಿಮೆಯನ್ನು ಕುರಿತು ತಿಳಿಸುತ್ತಿದ್ದನು. ಆ ಪ್ರವಾದಿಗಳು ತಮಗೆ ಆತ್ಮನು ತೋರಿಸುತ್ತಿದ್ದುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆ ಸಂಗತಿಗಳು ಯಾವಾಗ ಸಂಭವಿಸುತ್ತವೆ ಹಾಗೂ ಆ ಕಾಲದಲ್ಲಿ ಈ ಲೋಕವು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು.
12 ಆ ಪ್ರವಾದಿಗಳು ಮಾಡಿದ ಈ ಸೇವೆಯು ನಿಮಗೋಸ್ಕರವೇ ಹೊರತು ಅವರಿಗೋಸ್ಕರವಲ್ಲ ಎಂಬುದು ಅವರಿಗೆ ಪ್ರಕಟವಾಯಿತು. ಈಗ ನೀವು ಕೇಳಿದ ಸಂಗತಿಗಳನ್ನು ಅವರು ತಿಳಿಸಿದಾಗ ಅವರು ನಿಮ್ಮ ಸೇವೆಯನ್ನೇ ಮಾಡುತ್ತಿದ್ದರು. ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಸಹಾಯದಿಂದ ನಿಮಗೆ ಸುವಾರ್ತೆಯನ್ನು ತಿಳಿಸಿದವರೇ ನಿಮಗೆ ಆ ಸಂಗತಿಗಳನ್ನು ತಿಳಿಸಿದರು. ನಿಮಗೆ ತಿಳಿಸಿದ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲು ದೇವದೂತರೂ ಕಾತುರರಾಗಿದ್ದಾರೆ.
ಪರಿಶುದ್ಧರಾಗಿ ಜೀವಿಸಲು ಆಹ್ವಾನ
13 ಆದ್ದರಿಂದ ನೀವು ನಿಮ್ಮ ಮನಸ್ಸುಗಳನ್ನು ಸೇವೆಗಾಗಿ ಸಿದ್ಧಪಡಿಸಿರಿ. ಅಲ್ಲದೆ ನಿಮ್ಮನ್ನು ಹತೋಟಿಯಲ್ಲಿಟ್ಟುಕೊಂಡಿರಿ. ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರೆಯುವ ಕೃಪಾವರದ ಮೇಲೆಯೇ ನಿಮ್ಮ ನಿರೀಕ್ಷೆಯೆಲ್ಲಾ ಇರಬೇಕು. 14 ನೀವು ಮೊದಲು ಈ ಸಂಗತಿಗಳ ಕುರಿತು ಅರ್ಥಮಾಡಿಕೊಳ್ಳದಿದ್ದ ಕಾರಣ, ನೀವು ನಿಮ್ಮ ಇಚ್ಛೆಯಂತೆ ಕೆಟ್ಟಕಾರ್ಯಗಳನ್ನು ಮಾಡಿದಿರಿ. ಆದರೆ ಈಗ ನೀವು ವಿಧೇಯರಾಗಿರುವ ದೇವಮಕ್ಕಳು, ಆದ್ದರಿಂದ ಈಗ ಮೊದಲಿನಂತೆ ಜೀವಿಸಬೇಡಿ. 15 ದೇವರು ಪರಿಶುದ್ಧನಾಗಿರುವಂತೆ ನಿಮ್ಮ ನಡೆನುಡಿಗಳು ಪರಿಶುದ್ಧವಾಗಿರಲಿ. ನಿಮ್ಮನ್ನು ಕರೆದಾತನು ದೇವರೇ. 16 “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು”(A) ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದೆ.
17 ನೀವು ದೇವರಲ್ಲಿ ಪ್ರಾರ್ಥಿಸುವಾಗ ಆತನನ್ನು ತಂದೆಯೆಂದು ಕರೆಯುತ್ತೀರಿ. ದೇವರು ಪ್ರತಿಯೊಬ್ಬರಿಗೆ ಅವರವರ ಕೆಲಸಕ್ಕೆ ತಕ್ಕಂತೆ ತೀರ್ಪುಕೊಡುವನು. ನೀವು ಈ ಲೋಕದಲ್ಲಿ ಪ್ರವಾಸಿಗಳಾಗಿರುವುದರಿಂದ ದೇವರಿಗೆ ಭಯಪಟ್ಟು ಜೀವಿಸಿ. 18 ಮೊದಲು ನೀವು ನಿರರ್ಥಕವಾದ ರೀತಿಯಲ್ಲಿ ಜೀವಿಸುತ್ತಿದ್ದಿರೆಂಬುದು ನಿಮಗೇ ತಿಳಿದಿದೆ. ನಿಮಗಿಂತಲೂ ಮೊದಲು ಜೀವಿಸಿದ್ದವರಿಂದ ಅಂತಹ ಜೀವಿತವನ್ನು ಕಲಿತುಕೊಂಡಿರಿ. ಆದರೆ ಅದರಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿಬಂಗಾರಗಳಿಂದಲ್ಲ. 19 ಪೂರ್ಣಾಂಗವಾದ ಮತ್ತು ಪರಿಶುದ್ಧವಾದ ಕುರಿಮರಿಯಾದ ಕ್ರಿಸ್ತನ ಅಮೂಲ್ಯವಾದ ರಕ್ತದಿಂದ ನಿಮಗೆ ಬಿಡುಗಡೆಯಾಯಿತು. 20 ಈ ಲೋಕವು ಸೃಷ್ಟಿಯಾಗುವುದಕ್ಕೆ ಮೊದಲೇ ಕ್ರಿಸ್ತನು ಆರಿಸಲ್ಪಟ್ಟನು. ಆದರೆ ಆತನು ನಿಮಗೋಸ್ಕರ ಈ ಅಂತ್ಯಕಾಲದಲ್ಲಿ ಪ್ರತ್ಯಕ್ಷನಾದನು. 21 ನೀವು ಕ್ರಿಸ್ತನ ಮೂಲಕ ದೇವರನ್ನು ನಂಬಿದ್ದೀರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ನಂತರ ದೇವರು ಆತನಿಗೆ ಪ್ರಭಾವವನ್ನು ದಯಪಾಲಿಸಿದನು. ಆದ್ದರಿಂದ ನಿಮ್ಮ ನಂಬಿಕೆ ಮತ್ತು ನಿರೀಕ್ಷೆಗಳು ದೇವರಲ್ಲಿರಲಿ.
22 ನೀವು ಸತ್ಯಕ್ಕೆ ವಿಧೇಯರಾಗಿರುವುದರ ಮೂಲಕ ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡಿಕೊಂಡಿದ್ದೀರಿ. ಈಗ ನಿಮ್ಮ ಸಹೋದರ ಸಹೋದರಿಯರನ್ನು ನಿಜವಾಗಿಯೂ ಪ್ರೀತಿಸಬಲ್ಲವರಾಗಿದ್ದೀರಿ. ಆದ್ದರಿಂದ ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿ[a] ಪ್ರೀತಿಸಿರಿ. 23 ನೀವು ಹೊಸದಾಗಿ ಹುಟ್ಟಿದವರಾಗಿದ್ದೀರಿ. ಈ ಹೊಸಜೀವವು ನಾಶವಾಗುವಂಥದ್ದರಿಂದ ಬರದೆ ನಾಶವಾಗದೆ ಇರುವಂಥದ್ದರಿಂದ ಬಂದದ್ದಾಗಿದೆ. ಸಜೀವವೂ ಶಾಶ್ವತವೂ ಆಗಿರುವ ದೇವರ ವಾಕ್ಯದ ಮೂಲಕ ನೀವು ಹೊಸದಾಗಿ ಹುಟ್ಟಿದ್ದೀರಿ. 24 ಪವಿತ್ರ ಗ್ರಂಥವು ಹೇಳುವುದೇನೆಂದರೆ,
“ಜನರೆಲ್ಲರೂ ಹುಲ್ಲಿನಂತಿದ್ದಾರೆ.
ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತಿದೆ.
ಹುಲ್ಲು ಒಣಗಿಹೋಗುವುದು,
ಹೂವು ಉದುರಿಹೋಗುವುದು,
25 ಆದರೆ ದೇವರ ವಾಕ್ಯವು ಎಂದೆಂದಿಗೂ ಜೀವಂತವಾಗಿರುತ್ತದೆ.”(B)
ನಿಮಗೆ ಈ ವಾಕ್ಯವನ್ನೇ ತಿಳಿಸಲಾಯಿತು.
Kannada Holy Bible: Easy-to-Read Version. All rights reserved. © 1997 Bible League International