M’Cheyne Bible Reading Plan
ಜನರು ಮತ್ತೆ ಗೊಣಗುಟ್ಟಿದ್ದು
14 ಆ ರಾತ್ರಿಯಲ್ಲಿ ಜನರೆಲ್ಲರೂ ಗಟ್ಟಿಯಾಗಿ ಕೂಗಿಕೊಂಡರು. 2 ಇಸ್ರೇಲರು ಮೋಶೆ ಆರೋನರ ವಿರುದ್ಧ ಗೊಣಗುಟ್ಟಿದರು. ಜನರೆಲ್ಲರೂ ಒಟ್ಟಾಗಿ ಮೋಶೆ ಆರೋನರ ಬಳಿಗೆ ಬಂದು, “ನಾವು ಈಜಿಪ್ಟಿನಲ್ಲಿಯಾಗಲೀ ಅಥವಾ ಈ ಮರುಭೂಮಿಯಲ್ಲಾಗಲಿ ಸತ್ತಿದ್ದರೆ ಒಳ್ಳೆಯದಿತ್ತು. 3 ಯುದ್ಧದಲ್ಲಿ ನಾವು ಸತ್ತುಹೋಗುವಂತೆ ಯೆಹೋವನು ನಮ್ಮನ್ನು ಈ ಹೊಸ ದೇಶಕ್ಕೆ ತರುತ್ತಿರುವುದೇಕೆ? ವೈರಿಗಳು ನಮ್ಮನ್ನು ಕೊಂದು ನಮ್ಮ ಹೆಂಡತಿಯರನ್ನೂ ಮಕ್ಕಳನ್ನೂ ತೆಗೆದುಕೊಳ್ಳುವರು. ನಾವು ಈಜಿಪ್ಟಿಗೆ ಮರಳಿಹೋಗುವುದೇ ಉತ್ತಮ” ಎಂದು ಹೇಳಿದರು.
4 ಬಳಿಕ ಜನರು, “ನಾವು ಇನ್ನೊಬ್ಬ ನಾಯಕನನ್ನು ಆರಿಸಿಕೊಂಡು ಈಜಿಪ್ಟಿಗೆ ಮರಳಿಹೋಗೋಣ” ಎಂದು ಮಾತಾಡಿಕೊಂಡರು.
5 ಆಗ ಮೋಶೆ ಆರೋನರು ಇಸ್ರೇಲರ ಸರ್ವ ಸಮೂಹದವರ ಮುಂದೆ ಬೋರಲಬಿದ್ದರು. 6 ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ದೇಶದ ವಿಷಯವನ್ನು ಸಂಗ್ರಹಿಸಿಕೊಂಡು ಬಂದವರಲ್ಲಿ ಇಬ್ಬರಾಗಿದ್ದರು. ಅವರು ಬೇಸರಗೊಂಡು ತಮ್ಮ ಬಟ್ಟೆಗಳನ್ನು ಹರಿದುಕೊಂಡರು. 7 ಇವರಿಬ್ಬರು ಇಸ್ರೇಲರೆಲ್ಲರಿಗೆ, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು, 8 ಅದು ಹಾಲೂ ಜೇನೂ ಹರಿಯುವ ದೇಶ. ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಆ ದೇಶದೊಳಗೆ ನಮ್ಮನ್ನು ಕರೆದೊಯ್ದು ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು. 9 ಹೀಗಿರುವುದರಿಂದ ಯೆಹೋವನಿಗೆ ವಿರುದ್ಧವಾಗಿ ಏಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ನಾವು ಅವರನ್ನು ಸೋಲಿಸಬಹುದು. ಅವರಿಗೆ ಯಾವ ಸಂರಕ್ಷಣೆ ಇರುವುದಿಲ್ಲ. ಆದರೆ ನಮ್ಮ ಕಡೆ ಯೆಹೋವನು ಇದ್ದಾನೆ. ಆದ್ದರಿಂದ ಭಯಪಡಬೇಡಿರಿ” ಅಂದರು.
10 ಎಲ್ಲಾ ಜನರು ಯೆಹೋಶುವನನ್ನು ಮತ್ತು ಕಾಲೇಬನನ್ನು ಕಲ್ಲೆಸೆದು ಕೊಲ್ಲಬೇಕೆಂದು ಮಾತಾಡತೊಡಗಿದರು. ಆದರೆ ಯೆಹೋವನ ಮಹಿಮೆ ದೇವದರ್ಶನಗುಡಾರ ಮೇಲೆ ಪ್ರತ್ಯಕ್ಷವಾದದ್ದು ಇಸ್ರೇಲರೆಲ್ಲರಿಗೆ ಕಾಣಿಸಿತು. ಯೆಹೋವನು ಮೋಶೆಯೊಡನೆ ಮಾತಾಡಿ, 11 “ಈ ಜನರು ಇನ್ನೆಷ್ಟು ಕಾಲದವರೆಗೆ ನನ್ನನ್ನು ತಿರಸ್ಕರಿಸುವರು? ನಾನು ಮಾಡಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನೆಷ್ಟು ಕಾಲದವರೆಗೆ ನನ್ನನ್ನು ನಂಬದೆ ಇರುವರು? 12 ಸರಿ, ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು” ಎಂದು ಹೇಳಿದನು.
13 ಅದಕ್ಕೆ ಮೋಶೆ ಯೆಹೋವನಿಗೆ, “ನೀನು ನಿನ್ನ ಜನರಾದ ಇಸ್ರೇಲರನ್ನು ನಿನ್ನ ಶಕ್ತಿಯ ಮೂಲಕ ಈಜಿಪ್ಟಿನಿಂದ ಕರೆದುಕೊಂಡು ಬಂದೆ. ನೀನು ನಿನ್ನ ಜನರನ್ನು ನಾಶಮಾಡಿದರೆ, ಈಜಿಪ್ಟಿನವರು ಈ ಸುದ್ದಿಯನ್ನು ಕೇಳಿ ಕಾನಾನಿನ ನಿವಾಸಿಗಳಿಗೆ ಅದರ ಬಗ್ಗೆ ತಿಳಿಸುವರು. 14 ಅದಲ್ಲದೆ, ಈ ದೇಶದವರು ನೀನು ಇಸ್ರೇಲರ ಮಧ್ಯದಲ್ಲಿರುವ ಸಂಗತಿಯನ್ನು ಕೇಳಿದ್ದಾರೆ. ನೀನು ಇಸ್ರೇಲರಿಗೆ ಪ್ರತ್ಯಕ್ಷನಾಗಿ ಕಾಣಿಸಿಕೊಂಡದ್ದು ಅವರಿಗೆ ತಿಳಿದಿದೆ. ನಿನ್ನ ಮೇಘವು ಇಸ್ರೇಲರ ಮೇಲಿರುವುದು ಅವರಿಗೆ ಗೊತ್ತಿದೆ. ನೀನು ಇಸ್ರೇಲರನ್ನು ಹಗಲಲ್ಲಿ ಮೇಘಸ್ತಂಭದ ಮೂಲಕವಾಗಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದ ಮೂಲಕವಾಗಿಯೂ ಮುನ್ನಡೆಸುತ್ತಿರುವುದು ಅವರಿಗೆ ತಿಳಿದಿದೆ. 15 ಹೀಗಿರಲಾಗಿ, ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ, ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ, 16 ‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಇಸ್ರೇಲರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ ಅವರನ್ನು ಮರುಭೂಮಿಯಲ್ಲಿ ನಾಶಮಾಡಿದನು’ ಎಂದು ಮಾತಾಡಿಕೊಳ್ಳುವರು.
17 “ಆದ್ದರಿಂದ ಒಡೆಯನೇ, ನೀನು ಹೇಳಿದಂತೆಯೇ ನಿನ್ನ ತಾಳ್ಮೆಯು ದೀರ್ಘವಾಗಿರಲಿ. 18 ನೀನು ನಿನ್ನ ವಿಷಯದಲ್ಲಿ ‘ಯೆಹೋವನು ದೀರ್ಘಶಾಂತನು, ಬಹುಪ್ರೀತಿಯುಳ್ಳವನು, ಅಪರಾಧ, ಪಾಪಗಳನ್ನು ಕ್ಷಮಿಸುವವನಾಗಿದ್ದರೂ ಎಲ್ಲಾ ದಂಡನೆಯನ್ನು ರದ್ದುಪಡಿಸದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ನೀನೇ ಹೇಳಿರುವಿಯಲ್ಲಾ! 19 ನಾವು ಈಜಿಪ್ಟಿನಿಂದ ಬಂದದ್ದು ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.
20 ಅದಕ್ಕೆ ಯೆಹೋವನು, “ನೀನು ಕೇಳಿಕೊಂಡಂತೆ ನಾನು ಜನರನ್ನು ಕ್ಷಮಿಸುವೆನು. 21 ಆದಾಗ್ಯೂ ನನ್ನ ಜೀವದಾಣೆ ಮತ್ತು ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರಬೇಕೆಂಬುವ ನಿಶ್ಚಯ ವಾಕ್ಯದ ಆಣೆ, 22 ಈಜಿಪ್ಟಿನಲ್ಲಿಯೂ ಮರುಭೂಮಿಯಲ್ಲಿಯೂ ನಾನು ನಡಿಸಿರುವ ಮಹಾತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಜನರೆಲ್ಲರೂ ಪದೇಪದೇ ನನ್ನನ್ನು ಪರೀಕ್ಷಿಸಿದ್ದರಿಂದ ಮತ್ತು ನನಗೆ ವಿಧೇಯರಾಗದಿದ್ದ ಕಾರಣ, 23 ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ. ನನ್ನನ್ನು ತಿರಸ್ಕರಿಸಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ. 24 ಆದರೆ ನನ್ನ ಸೇವಕನಾದ ಕಾಲೇಬನು ಅವರ ಹಾಗಲ್ಲ, ಅವನು ನನ್ನನ್ನು ಮನಃಪೂರ್ವಕವಾಗಿ ಹಿಂಬಾಲಿಸಿದ್ದಾನೆ. ಆದ್ದರಿಂದ ಅವನು ಸಂಚರಿಸಿ ನೋಡಿದ ದೇಶಕ್ಕೆ ಅವನನ್ನು ಬರಮಾಡುವೆನು ಮತ್ತು ಅವನ ಸಂತತಿಯವರು ಆ ದೇಶವನ್ನು ಹೊಂದುವರು. 25 ಅಮಾಲೇಕ್ಯರೂ ಕಾನಾನ್ಯರೂ ಆ ಕಣಿವೆಯಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಕೆಂಪುಸಮುದ್ರಕ್ಕೆ ಹೋಗುವ ದಾರಿಯ ಮೂಲಕ ಮರುಭೂಮಿಗೆ ಮರಳಿ ಪ್ರಯಾಣ ಮಾಡಬೇಕು” ಎಂದು ಹೇಳಿದನು.
ಯೆಹೋವನು ಜನರನ್ನು ಶಿಕ್ಷಿಸಿದ್ದು
26-27 ಯೆಹೋವನು ಮೋಶೆ ಆರೋನರಿಗೆ, “ಈ ದುಷ್ಟ ಸಮೂಹದವರು ನನಗೆ ವಿರುದ್ಧವಾಗಿ ಇನ್ನೆಷ್ಟರವರೆಗೆ ಗುಣುಗುಟ್ಟುತ್ತಲೇ ಇರುತ್ತಾರೆ. ಇಸ್ರೇಲರು ನನಗೆ ವಿರೋಧವಾಗಿ ಗುಣುಗುಟ್ಟುವುದು ನನಗೆ ಕೇಳಿಸಿದೆ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ‘ಯೆಹೋವನು ಹೇಳುವುದೇನೆಂದರೆ: ನನ್ನ ಜೀವದಾಣೆ. ನೀವು ಏನನ್ನು ಹೇಳಿದಿರೋ ಅದನ್ನೇ ನಿಮಗೆ ಮಾಡುತ್ತೇನೆ; 29 ನಿಮ್ಮ ಶವಗಳು ಈ ಮರುಭೂಮಿಯಲ್ಲಿಯೇ ಬೀಳುವವು. ನೀವು ನನಗೆ ವಿರೋಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಲೆಕ್ಕಿಸಲ್ಪಟ್ಟವರೆಲ್ಲರೂ ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಮರುಭೂಮಿಯಲ್ಲೇ ಸಾಯುವರು. 30 ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಬೇರೆ ಯಾರೂ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಸೇರುವುದಿಲ್ಲ. 31 ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಪ್ರವೇಶಿಸುವಂತೆ ಮಾಡುವೆನು. ನೀವು ತಿರಸ್ಕರಿಸಿದ ದೇಶವನ್ನು ಅವರು ಅನುಭೋಗಿಸುವರು. 32 ನೀವಂತೂ ಈ ಮರುಭೂಮಿಯಲ್ಲಿ ಸಾಯುವಿರಿ. ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲ್ಲಿ ಪರ್ಯಂತರ ಬೀಳುವವು.
33 “‘ನಿಮ್ಮ ಅಪನಂಬಿಗಸ್ತಿಕೆಯ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನೀವು ಸಾಯುವತನಕ ನಲವತ್ತು ವರ್ಷ ಮರುಭೂಮಿಯಲ್ಲಿ ಅಲೆದಾಡುವರು. 34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ ನಲವತ್ತು ವರ್ಷ ನಿಮ್ಮ ಪಾಪದ ಫಲವನ್ನು ಅನುಭವಿಸುವಿರಿ. ನನ್ನನ್ನು ತಿರಸ್ಕರಿಸುವುದೆಂದರೆ ಏನೆಂಬುದು ನಿಮಗೆ ಗೊತ್ತಾಗುತ್ತದೆ.’
35 “ಇದು ಯೆಹೋವನೆಂಬ ನಾನು ಹೇಳಿದ ಮಾತು. ನನಗೆ ವಿರೋಧವಾಗಿ ಕೂಡಿಕೊಂಡಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಖಂಡಿತವಾಗಿ ಮಾಡುತ್ತೇನೆ. ಈ ಮರುಭೂಮಿಯಲ್ಲಿಯೇ ಇವರೆಲ್ಲರೂ ಸಾಯಬೇಕು” ಎಂದು ಹೇಳಿದನು.
36-37 ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟು ಹಿಂದಿರುಗಿಬಂದು ಆ ದೇಶದ ವಿಷಯದಲ್ಲಿ ಅಶುಭಸಮಾಚಾರವನ್ನು ಹೇಳಿ ಸರ್ವಸಮೂಹದರವರನ್ನು ಅವರಿಗೆ ವಿರೋಧವಾಗಿ ಗುಣುಗುಟ್ಟುವಂತೆ ಮಾಡಿದ ಹತ್ತು ಜನರು ಯೆಹೋವನಿಂದ ವ್ಯಾಧಿಗೊಳಗಾಗಿ ಸತ್ತರು. 38 ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನ ಹೊರತು ಉಳಿದ ಹತ್ತು ಮಂದಿ ಸತ್ತರು. ಯೆಹೋವನು ಅವರಿಬ್ಬರನ್ನು ಉಳಿಸಿದನು. ಅವರಿಗೆ ವ್ಯಾಧಿಯು ತಗಲಲಿಲ್ಲ.
ಜನರು ಕಾನಾನಿಗೆ ಹೋಗಲು ಪ್ರಯತ್ನಿಸಿದ್ದು
39 ಮೋಶೆಯು ಈ ಎಲ್ಲಾ ಸಂಗತಿಗಳನ್ನು ಇಸ್ರೇಲರಿಗೆಲ್ಲಾ ಹೇಳಲಾಗಿ ಅವರು ಬಹಳ ದುಃಖಪಟ್ಟರು. 40 ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ. ಯೆಹೋವನು ವಾಗ್ದಾನ ಮಾಡಿರುವ ದೇಶಕ್ಕೆ ಹೋಗಲು ನಾವು ಈಗ ಸಿದ್ಧರಾಗಿದ್ದೇವೆ” ಎಂದು ಹೇಳಿದರು.
41 ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ನೀವು ಯಶಸ್ವಿಯಾಗುವುದಿಲ್ಲ. 42 ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ. ನೀವು ಆ ದೇಶಕ್ಕೆ ಹೋಗಬೇಡಿರಿ. ಇಲ್ಲವಾದರೆ, ನಿಮ್ಮ ಶತ್ರುಗಳಿಂದ ಸೋಲಿಸಲ್ಪಡುವಿರಿ. 43 ಅಮಾಲೇಕ್ಯರೂ ಕಾನಾನ್ಯರೂ ನಿಮ್ಮನ್ನು ಎದುರಿಸಲು ಅಲ್ಲಿರುವುದರಿಂದ ನೀವು ಅವರ ಖಡ್ಗದಿಂದ ಸಾಯುವಿರಿ. ನೀವು ಯೆಹೋವನಿಗೆ ವಿರೋಧವಾಗಿ ದಂಗೆಯೆದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು.
44 ಆದರೆ ಜನರು ಮೋಶೆಯ ಮಾತನ್ನು ನಂಬಲಿಲ್ಲ. ಅವರು ಪರ್ವತಪ್ರದೇಶದ ಕಡೆಗೆ ಹೊರಟರು. ಆದರೆ ಮೋಶೆಯೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯೂ ಜನರೊಂದಿಗೆ ಹೋಗಲಿಲ್ಲ. 45 ಆಗ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾನ್ಯರೂ ಇಳಿದುಬಂದು ಅವರನ್ನು ಸೋಲಿಸಿ ಹೊರ್ಮಾ ಪಟ್ಟಣದವರೆಗೂ ಅಟ್ಟಿಸಿಕೊಂಡುಬಂದು ಸಂಹರಿಸಿದರು.
ರಚನೆಗಾರ: ಆಸಾಫ.
50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
2 ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
3 ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
ಆತನ ಸುತ್ತಲೂ ಬಿರುಗಾಳಿ ಬೀಸುವುದು.
4 ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
5 ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.
6 ದೇವರೊಬ್ಬನೇ ನ್ಯಾಯಾಧಿಪತಿ;
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.
7 ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
ದೇವರಾದ ನಾನೇ ನಿಮ್ಮ ದೇವರು!
8 ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
9 ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”
14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”
16 ದೇವರು ದುಷ್ಟರಿಗೆ ಹೀಗೆನ್ನುವನು:
“ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”
3 ನಾನು ಹೇಳುವದನ್ನೆಲ್ಲಾ ಮನದಟ್ಟುಮಾಡಿಕೊಳ್ಳಿರಿ: ನಮ್ಮ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಯೆಹೂದ ಮತ್ತು ಇಸ್ರೇಲಿನ ಆಧಾರಗಳನ್ನೆಲ್ಲಾ ತೆಗೆದುಬಿಡುವನು. ಆತನು ಅವರ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವನು. 2 ಆತನು ಎಲ್ಲಾ ವೀರರನ್ನೂ ಮಹಾಸೈನಿಕರನ್ನೂ ತೆಗೆದುಬಿಡುವನು. ದೇವರು ಎಲ್ಲಾ ನ್ಯಾಯಾಧೀಶರನ್ನೂ ಪ್ರವಾದಿಗಳನ್ನೂ ಹಿರಿಯರನ್ನೂ ಇಂದ್ರಜಾಲಗಾರರನ್ನು ತೆಗೆದುಬಿಡುವನು. 3 ದೇವರು ಸೇನಾಪತಿಗಳನ್ನೂ ಸರ್ಕಾರದ ಅಧಿಪತಿಗಳನ್ನೂ ತೆಗೆದುಬಿಡುವನು. ಆತನು ಉತ್ತಮ ಸಲಹೆಗಾರರನ್ನೂ ಮಾಂತ್ರಿಕರನ್ನೂ ಭವಿಷ್ಯ ಹೇಳುವವರನ್ನೂ ತೊಲಗಿಸುವನು.
4 ಯೆಹೋವನು ಹೇಳುವುದೇನೆಂದರೆ: “ನಾನು ಬಾಲಕರನ್ನು ನಿಮ್ಮ ನಾಯಕರನ್ನಾಗಿ ಮಾಡುವೆನು. 5 ಪ್ರಜೆಗಳು ಒಬ್ಬರಿಗೊಬ್ಬರು ವಿರೋಧಿಗಳಾಗುವರು; ಬಾಲಕರು ಹಿರಿಯರನ್ನು ಗೌರವಿಸರು. ಸಾಮಾನ್ಯರು ಗಣ್ಯವ್ಯಕ್ತಿಗಳನ್ನು ಸನ್ಮಾನಿಸರು.”
6 ಆ ಸಮಯದಲ್ಲಿ ಒಬ್ಬನು ತನ್ನ ಸ್ವಂತ ಕುಟುಂಬದ ಸಹೋದರನನ್ನು ಹಿಡಿದು, “ನಿನಗೆ ನಿಲುವಂಗಿಯದೆ. ಆದ್ದರಿಂದ ನೀನು ನಮಗೆ ನಾಯಕನಾಗು. ಈ ಅವಶೇಷಗಳೆಲ್ಲಾ ನಿನಗೆ ಅಧೀನವಾಗಿರಲಿ” ಎಂದು ಹೇಳುವರು.
7 ಆದರೆ ಆ ಸಹೋದರನು ಎದ್ದುನಿಂತು, “ನನ್ನಿಂದ ಆಗುವುದಿಲ್ಲ, ನನ್ನ ಮನೆಯಲ್ಲಿ ಸಾಕಷ್ಟು ಧಾನ್ಯವಾಗಲಿ ಬಟ್ಟೆಯಾಗಲಿ ಇಲ್ಲ. ನನ್ನನ್ನು ನಾಯಕನನ್ನಾಗಿ ಮಾಡಬೇಡಿ” ಎಂದು ಹೇಳುವನು.
8 ಜೆರುಸಲೇಮ್ ಮುಗ್ಗರಿಸಿಬಿದ್ದು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಹೀಗಾಗುವದು. ಯೆಹೂದವು ಪಾಪದಲ್ಲಿ ಬಿದ್ದು ದೇವರನ್ನು ಹಿಂಬಾಲಿಸುವುದನ್ನು ನಿಲ್ಲಿಸಿಯದೆ. ಅವರಾಡುವ ಮಾತುಗಳು, ಮಾಡುವ ಕ್ರಿಯೆಗಳು ಯೆಹೋವನಿಗೆ ವಿರುದ್ಧವಾಗಿವೆ. ಯೆಹೋವನ ಮಹಿಮಾಶಕ್ತಿಯಿಂದ ಕೂಡಿದ ಕಣ್ಣುಗಳು ಇವೆಲ್ಲವನ್ನು ನೋಡುವವು.
9 ಜನರ ಮುಖಭಾವವೇ ಅವರ ದುಷ್ಕೃತ್ಯಗಳನ್ನು ಎತ್ತಿತೋರಿಸುವವು. ಅವರು ತಮ್ಮ ಪಾಪಗಳಿಗಾಗಿ ಹೆಚ್ಚಳಪಡುವರು. ಅವರು ಸೊದೋಮಿನ ಜನರಂತಿದ್ದಾರೆ. ತಮ್ಮ ಪಾಪಗಳನ್ನು ಯಾರು ನೋಡಿದರೂ ಅವರಿಗೆ ಚಿಂತೆಯಿಲ್ಲ. ಇದು ನಿಜವಾಗಿಯೂ ಭಯಂಕರವಾದದ್ದು. ಅವರು ತಮಗೆ ಬಹಳ ಸಂಕಟಗಳನ್ನು ಬರಮಾಡಿಕೊಂಡಿದ್ದಾರೆ.
10 ಒಳ್ಳೆಯವರಿಗೆ ಒಳ್ಳೆಯವುಗಳೇ ಸಂಭವಿಸುತ್ತವೆ ಎಂಬುದಾಗಿ ತಿಳಿಸು. ಅವರು ಮಾಡುವ ಒಳ್ಳೆಯ ಕಾರ್ಯಗಳಿಗಾಗಿ ಅವರಿಗೆ ಬಹುಮಾನ ದೊರೆಯುವುದು. 11 ಆದರೆ ದುಷ್ಟರ ಗತಿಯನ್ನು ಏನು ಹೇಳಲಿ. ದುಷ್ಟರಿಗೆ ಕೆಡುಕು ಸಂಭವಿಸುವದು. ಅವರಿಗೆ ಬಹಳ ಸಂಕಟಗಳು ಬಂದೊದಗುವವು. ಅವರು ಮಾಡಿರುವ ಎಲ್ಲಾ ದುಷ್ಟಕ್ರಿಯೆಗಳಿಗೆ ಶಿಕ್ಷೆ ಕೊಡಲ್ಪಡುವದು. 12 ಮಕ್ಕಳು ನನ್ನ ಜನರನ್ನು ಸೋಲಿಸಿಬಿಡುವರು. ಸ್ತ್ರೀಯರು ನನ್ನ ಜನರನ್ನು ಆಳುವರು.
ನನ್ನ ಜನರೇ, ನಿಮ್ಮ ಮಾರ್ಗದರ್ಶಕರು ನಿಮ್ಮನ್ನು ತಪ್ಪುದಾರಿಯಲ್ಲಿ ನಡಿಸುವರು; ಸರಿಯಾದ ದಾರಿಯಿಂದ ನಿಮ್ಮನ್ನು ಅಡ್ಡದಾರಿಗೆ ನಡಿಸುವರು.
ದೇವರು ತನ್ನ ಜನರ ಬಗ್ಗೆ ಮಾಡಿದ ತೀರ್ಮಾನ
13 ಯೆಹೋವನು ತನ್ನ ಜನರಿಗೆ ನ್ಯಾಯತೀರಿಸಲು ಎದ್ದುನಿಂತಿದ್ದಾನೆ. 14 ನಾಯಕರಿಗೂ ಹಿರಿಯರಿಗೂ ಅವರು ಮಾಡಿದ ಕಾರ್ಯಗಳ ವಿರುದ್ಧವಾಗಿ ಆತನು ನ್ಯಾಯತೀರಿಸುವನು.
ಯೆಹೋವನು ಹೇಳುವುದೇನೆಂದರೆ: “ನೀವು ದಾಕ್ಷಾತೋಟವನ್ನು (ಯೆಹೂದವನ್ನು) ಸುಟ್ಟುಹಾಕಿದ್ದೀರಿ; ಬಡಜನರಿಂದ ನೀವು ಕಿತ್ತುಕೊಂಡ ವಸ್ತುಗಳನ್ನು ಈಗಲೂ ನಿಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದೀರಿ. 15 ನನ್ನ ಜನರನ್ನು ಕುಗ್ಗಿಸಲು ನಿಮಗೆ ಯಾವ ಅಧಿಕಾರವಿದೆ? ಬಡಜನರ ಮುಖವನ್ನು ಧೂಳಿನಲ್ಲಿ ಹಾಕಿ ಉಜ್ಜಲು ನಿಮಗೆ ಯಾವ ಅಧಿಕಾರವಿದೆ?” ಇದು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನ ನುಡಿಗಳು.
16 ಯೆಹೋವನು ಹೇಳುವುದೇನೆಂದರೆ: “ಚೀಯೋನಿನ ಸ್ತ್ರೀಯರು ವಯ್ಯಾರದಿಂದ ತಲೆಯಾಡಿಸುತ್ತಾ, ಕುಡಿನೋಟ ಬೀರುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆಯನ್ನು ಝಣಝಣಿಸುತ್ತಾ ನಡೆಯುತ್ತಾರೆ.”
17 ನನ್ನ ಒಡೆಯನಾದ ಯೆಹೋವನು ಚೀಯೋನಿನ ಸ್ತ್ರೀಯರ ತಲೆಯ ಮೇಲೆ ಹುಣ್ಣುಗಳನ್ನು ಬರಮಾಡಿ ಅವರ ತಲೆಕೂದಲು ಉದುರಿ ತಲೆಬೋಳಾಗುವಂತೆ ಮಾಡುವನು. 18 ಆ ಸಮಯದಲ್ಲಿ ಆತನು ಅವರ ಎಲ್ಲಾ ವಸ್ತುಗಳನ್ನು ಅವರಿಂದ ತೆಗೆದುಬಿಡುವನು. ಅವರ ಕಾಲುಸರಗಳನ್ನು, ಸೂರ್ಯಚಂದ್ರಾಕಾರದ ಕೊರಳಿನ ಸರಗಳನ್ನು, 19 ಕಿವಿಯೋಲೆಗಳನ್ನು, ಕೈಬಳೆಗಳನ್ನು, ಸೆರಗುವಸ್ತ್ರಗಳನ್ನು, 20 ರುಮಾಲುಗಳನ್ನು, ಸೊಂಟಪಟ್ಟಿಯನ್ನು, ಪರಿಮಳದ್ರವ್ಯವನ್ನು, ತಾಯಿತಿಗಳನ್ನು, 21 ಮುದ್ರೆಯುಂಗುರವನ್ನು ಮತ್ತು ಮೂಗುತಿಗಳನ್ನು ತೆಗೆದುಬಿಡುವನು. 22 ಅವರ ನಯವಾದ ಮೇಲಂಗಿಗಳನ್ನು, ಮೇಲ್ಹೊದಿಕೆಗಳನ್ನು, ಶಾಲುಗಳನ್ನು, ಕೈಚೀಲಗಳನ್ನು, 23 ಕೈಗನ್ನಡಿಗಳನ್ನು, ಪೋಷಾಕುಗಳನ್ನು, ಮುಂಡಾಸಗಳನ್ನು ಮತ್ತು ಉದ್ದವಾದ ಶಾಲುಗಳನ್ನು ಅವರಿಂದ ತೆಗೆದುಬಿಡುವನು.
24 ಆ ಸಮಯದಲ್ಲಿ ಸ್ತ್ರೀಯರ ಪರಿಮಳದ್ರವ್ಯವು ಕೊಳೆತ ವಾಸನೆಯಿಂದ ಕೂಡಿರುವುದು. ಅವರು ಸೊಂಟಪಟ್ಟಿಯ ಬದಲಿಗೆ ಹಗ್ಗ ಕಟ್ಟಿಕೊಳ್ಳುವರು; ತಲೆಕೂದಲನ್ನು ಅಂದವಾಗಿ ಹೆಣೆದುಕೊಳ್ಳುವ ಬದಲು ಬೋಳಿಸಿಕೊಳ್ಳುವರು. ಈಗ ಅವರಿಗೆ ಆಧುನಿಕ ವಸ್ತ್ರಗಳಿರುವವು; ಆದರೆ ಆಗ ಅವರು ಶೋಕವಸ್ತ್ರಗಳನ್ನೇ ಧರಿಸುವರು. ಈಗ ಅವರು ಮುಖಗಳಿಗೆ ಸೌಂದರ್ಯದ ಬೊಟ್ಟುಗಳನ್ನು ಇಟ್ಟುಕೊಳ್ಳುವರು; ಆದರೆ ಆಗ ಅವರ ಚರ್ಮದಲ್ಲಿ ಸುಟ್ಟಕಲೆಗಳೇ ಇರುವವು.
25 ಆ ಸಮಯದಲ್ಲಿ ನಿಮ್ಮ ಗಂಡಸರೆಲ್ಲಾ ಖಡ್ಗದಿಂದ ಹತರಾಗುವರು. ನಿಮ್ಮ ವೀರರೆಲ್ಲರೂ ಯುದ್ಧದಲ್ಲಿ ಮಡಿಯುವರು. 26 ನಗರದ ಹೆಬ್ಬಾಗಿಲ ಬಳಿಯಲ್ಲಿ ಜನರು ಸೇರಿ ಬರುವಾಗ ರೋಧನವೂ ಶೋಕವೂ ಇರುತ್ತವೆ. ಇದ್ದುದನ್ನೆಲ್ಲಾ ಕಳೆದುಕೊಂಡ ಸ್ತ್ರೀಯಂತೆ ಜೆರುಸಲೇಮು ಸರ್ವವನ್ನೂ ಕಳೆದುಕೊಂಡು ನೆಲದ ಮೇಲೆ ಕುಳಿತು ರೋಧಿಸುವಳು.
4 ಆ ಸಮಯದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಗಂಡಸನ್ನು ಹಿಡಿದುಕೊಂಡು, “ನಮ್ಮ ಆಹಾರವನ್ನು ನಾವೇ ಸಂಪಾದಿಸಿಕೊಳ್ಳುತ್ತೇವೆ. ನಮ್ಮ ಬಟ್ಟೆಬರೆಗಳನ್ನು ನಾವೇ ಮಾಡಿಕೊಳ್ಳುತ್ತೇವೆ, ನಮ್ಮ ಕೆಲಸಗಳನ್ನೆಲ್ಲಾ ನಾವೇ ಮಾಡಿಕೊಳ್ಳುತ್ತೇವೆ. ನೀನು ನಮ್ಮನ್ನು ಮದುವೆಯಾಗು, ನಿನ್ನ ಹೆಸರನ್ನು ನಾವು ಇಟ್ಟುಕೊಳ್ಳುವಂತೆ ಮಾಡು. ದಯಮಾಡಿ ನಮ್ಮ ನಾಚಿಕೆಯನ್ನು ನಮ್ಮಿಂದ ತೊಲಗಿಸು” ಎಂದು ಹೇಳುವರು.
2 ಆ ಸಮಯದಲ್ಲಿ ಯೆಹೋವನ ಸಸಿ (ಯೆಹೂದವು) ಬಹಳ ಚಂದವಾಗಿಯೂ ದೊಡ್ಡದಾಗಿಯೂ ಇರುವುದು. ಆ ಸಮಯದಲ್ಲಿ, ಚೀಯೋನಿನಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ವಾಸಿಸುತ್ತಿರುವ ಜನರು ತಮ್ಮ ದೇಶದಲ್ಲಿ ಬೆಳೆಯುವ ಫಲಗಳಿಗಾಗಿ ತುಂಬಾ ಹೆಚ್ಚಳಪಡುವರು. 3 ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಚೀಯೋನಿನಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವವರು ಪರಿಶುದ್ಧರೆಂದು ಕರೆಯಲ್ಪಡುವರು. ಅವರೆಲ್ಲರೂ ಅಲ್ಲಿಯೇ ನೆಲೆಸುವರು.
4 ಚೀಯೋನಿನ ಸ್ತ್ರೀಯರ ಕಲ್ಮಷವನ್ನು ಯೆಹೋವನು ತೊಳೆದುಬಿಡುವನು. ಆತನು ಜೆರುಸಲೇಮಿನ ಮಧ್ಯದಲ್ಲಿರುವ ರಕ್ತವನ್ನು ತೊಳೆದುಬಿಡುವನು. ಆತನು ನ್ಯಾಯನೀತಿಗಳಿಂದ ತೀರ್ಪುನೀಡುವನು; ದಹಿಸುವ ಆತ್ಮನಿಂದ ಎಲ್ಲವನ್ನು ಶುದ್ಧಗೊಳಿಸುವನು. 5 ಆ ಸಮಯದಲ್ಲಿ ತಾನು ತನ್ನ ಜನರೊಂದಿಗೆ ಇರುವುದಾಗಿ ಹೀಗೆ ಯೆಹೋವನು ರುಜುವಾತುಪಡಿಸುವನು. ಹಗಲಲ್ಲಿ ಆತನು ಧೂಮಮೇಘವನ್ನೂ ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಗುರುತುಗಳು ಚೀಯೋನ್ ಪರ್ವತದ ಮೇಲಿರುವ ಪ್ರತಿಯೊಂದು ಜನರ ಸಭೆಯ ಮೇಲೆ ಆಕಾಶದಲ್ಲಿ ಕಾಣುವುದು. ಪ್ರತಿಯೊಬ್ಬನ ಮೇಲೆಯೂ ಕಾಪಾಡಿಕೊಳ್ಳುವುದಕ್ಕಾಗಿ ಹೊದಿಕೆ ಇರುವುದು. 6 ಈ ಹೊದಿಕೆಯು ಸುರಕ್ಷಿತ ಸ್ಥಳದಂತಿರುವದು. ಅದು ಸೂರ್ಯನ ಶಾಖದಿಂದ ಅವರನ್ನು ರಕ್ಷಿಸುವದು. ಅದೇ ಸಮಯದಲ್ಲಿ ಸಣ್ಣ ದೊಡ್ಡ ಮಳೆಗಳಿಂದಲೂ ಆ ಹೊದಿಕೆಯು ರಕ್ಷಿಸುವದು.
ನಂಬಿಕೆ
11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. 2 ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.
3 ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.
4 ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. 6 ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.
7 ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.
8 ದೇವರು ತಾನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದ ಸ್ಥಳಕ್ಕೆ ಪ್ರಯಾಣ ಮಾಡಬೇಕೆಂದು ಅಬ್ರಹಾಮನನ್ನು ಕರೆದನು. ಆ ಸ್ಥಳವು ಎಲ್ಲಿದೆಯೆಂಬುದು ಅವನಿಗೆ ತಿಳಿದಿರಲಿಲ್ಲ. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ, ದೇವರಿಗೆ ವಿಧೇಯನಾಗಿ ಪ್ರಯಾಣ ಮಾಡಲಾರಂಭಿಸಿದನು. 9 ದೇವರು ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ಅವನು ಪ್ರವಾಸಿಗನಂತೆ ವಾಸಮಾಡಿದ್ದು ನಂಬಿಕೆಯಿಂದಲೇ. ಅದೇ ವಾಗ್ದಾನಕ್ಕೆ ಸಹ ಭಾದ್ಯರಾಗಿದ್ದ ಇಸಾಕನೂ ಯಾಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. 10 ಅಬ್ರಹಾಮನು ಶಾಶ್ವತವಾದ ಅಡಿಪಾಯಗಳುಳ್ಳ ನಗರಕ್ಕಾಗಿ ಕಾದಿದ್ದನು. ದೇವರೇ ಸಂಕಲ್ಪಿಸಿ, ನಿರ್ಮಿಸಿದ ನಗರಕ್ಕಾಗಿ ಅವನು ಕಾದಿದ್ದನು.
11 ಅಬ್ರಹಾಮನು ಮಕ್ಕಳನ್ನು ಪಡೆಯಲಾಗದಷ್ಟು ವೃದ್ಧನಾಗಿದ್ದನು. ಸಾರಳು ಮಕ್ಕಳನ್ನು ಪಡೆಯಲು ಸಮರ್ಥಳಾಗಿರಲಿಲ್ಲ. ಆದರೆ ಅಬ್ರಹಾಮನಿಗೆ ದೇವರಲ್ಲಿ ನಂಬಿಕೆಯಿದ್ದುದರಿಂದ, ಅವರು ಮಕ್ಕಳನ್ನು ಪಡೆಯಲು ಸಮರ್ಥರಾಗುವಂತೆ ದೇವರು ಮಾಡಿದನು. 12 ಅವನು ಮೃತಪ್ರಾಯನಾಗಿದ್ದವನಂತೆ ವೃದ್ಧನಾಗಿದ್ದರೂ ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಉಸುಬಿನಂತೆಯೂ ಅಸಂಖ್ಯಾತವಾಗಿ ಮಕ್ಕಳು ಹುಟ್ಟಿದರು.
13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು. 14 ಅವರು ಹಾಗೆ ಒಪ್ಪಿಕೊಂಡಿದ್ದರಿಂದ ತಾವು ಸ್ವದೇಶಕ್ಕಾಗಿ ಕಾದಿರುವುದಾಗಿ ತೋರ್ಪಡಿಸಿಕೊಂಡಂತಾಯಿತು. 15 ಆ ಜನರು ತಾವು ಬಿಟ್ಟುಬಂದ ದೇಶದ ಮೇಲೇನಾದರೂ ಮನಸ್ಸಿಟ್ಟಿದ್ದರೆ, ಅವರು ಮರಳಿಹೋಗುತ್ತಿದ್ದರು. 16 ಆದರೆ ಆ ಜನರು ಉತ್ತಮ ದೇಶವಾದ ಪರಲೋಕಕ್ಕಾಗಿ ಕಾದಿದ್ದರು. ಆದ್ದರಿಂದ ದೇವರು ತನ್ನನ್ನು ಅವರ ದೇವರೆಂದು ಹೇಳಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ನಗರವನ್ನು ಸಿದ್ಧಪಡಿಸಿದನು.
17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.
20 ಇಸಾಕನು ಯಾಕೋಬನ ಮತ್ತು ಏಸಾವನ ಭವಿಷ್ಯತ್ತನ್ನು ಆಶೀರ್ವದಿಸಿದನು. ಇಸಾಕನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 21 ಯಾಕೋಬನು ಯೋಸೇಫನ ಮಕ್ಕಳಿಬ್ಬರನ್ನೂ ತಾನು ಸಾಯುವ ಗಳಿಗೆಯಲ್ಲಿ ಆಶೀರ್ವದಿಸಿದನು. ಅವನು ಊರುಗೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸುತ್ತಿದ್ದನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ.
22 ಯೋಸೇಫನು ಸಾಯುವ ಗಳಿಗೆಯಲ್ಲಿದ್ದಾಗ, ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವುದರ ಕುರಿತು ಮಾತನಾಡಿದನು; ತನ್ನ ದೇಹವನ್ನು ಏನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಿದನು. ಅದಕ್ಕೆ ಅವನ ನಂಬಿಕೆಯೇ ಕಾರಣ.
23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.
24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.
27 ಅವನು ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಫರೋಹನ ಸಿಟ್ಟಿಗೆ ಅವನು ಭಯಪಡಲಿಲ್ಲ. ಯಾರಿಗೂ ಕಾಣದ ದೇವರು ತನಗೆ ಕಾಣುತ್ತಿರುವನೋ ಎಂಬಂತೆ ಅವನು ದೃಢಚಿತ್ತನಾಗಿದ್ದನು; 28 ಪಸ್ಕಹಬ್ಬವನ್ನು ಆಚರಿಸಿ, ಬಾಗಿಲುಗಳ ಮೇಲೆ ರಕ್ತವನ್ನು ಹಚ್ಚಿದನು. ಯೆಹೂದ್ಯ ಜನರ ಚೊಚ್ಚಲು ಮಕ್ಕಳನ್ನು ಮರಣದೂತನು ಸಂಹರಿಸಿದಂತೆ ರಕ್ತವನ್ನು ಬಾಗಿಲುಗಳ ಮೇಲೆ ಹಚ್ಚಲಾಯಿತು. ಅವನು ತನ್ನಲ್ಲಿದ್ದ ನಂಬಿಕೆಯಿಂದಲೇ ಹೀಗೆ ಮಾಡಿದನು.
29 ಮೋಶೆಯಿಂದ ಮುನ್ನಡೆಸಲ್ಪಟ್ಟ ಜನರು ಕೆಂಪುಸಮುದ್ರವನ್ನು ಒಣಭೂಮಿಯೋ ಎಂಬಂತೆ ದಾಟಿದ್ದು ನಂಬಿಕೆಯಿಂದಲೇ. ಆದರೆ ಈಜಿಪ್ಟ್ ದೇಶದವರು ಕೆಂಪುಸಮುದ್ರವನ್ನು ದಾಟಲು ಪ್ರಯತ್ನಿಸಿ, ಮುಳುಗಿಹೋದರು.
30 ದೇವಜನರ ನಂಬಿಕೆಯಿಂದಲೇ ಜೆರಿಕೊ ಪಟ್ಟಣದ ಗೋಡೆಗಳ ಸುತ್ತಲೂ ಏಳು ದಿನಗಳವರೆಗೆ ಸುತ್ತಿದಾಗ ಅವು ಬಿದ್ದುಹೋದವು.
31 ರಹಾಬಳೆಂಬ ವೇಶ್ಯೆಯು ಇಸ್ರೇಲಿನ ಗೂಢಚಾರರನ್ನು ಬರಮಾಡಿಕೊಂಡು, ಅವರನ್ನು ಸ್ನೇಹಿತರಂತೆ ನೋಡಿಕೊಂಡಳು. ನಂಬಲೊಲ್ಲದ ಜನರನ್ನು ಕೊಂದಾಗ ಅವಳನ್ನು ಕೊಲ್ಲದೆ ಹೋದದ್ದು ಅವಳಲ್ಲಿದ್ದ ಆ ನಂಬಿಕೆಯಿಂದಲೇ.
32 ನಾನು ನಿಮಗೆ ಮತ್ತಷ್ಟು ದೃಷ್ಟಾಂತಗಳನ್ನು ಹೇಳುವ ಅಗತ್ಯವಿದೆಯೋ? ನಾನು ಗಿದ್ಯೋನನ, ಬಾರಾಕನ, ಸಂಸೋನನ, ಯೆಫ್ತಾಹನ, ದಾವೀದನ, ಸಮುವೇಲನ ಮತ್ತು ಪ್ರವಾದಿಗಳ ಕುರಿತು ನಿಮಗೆ ಹೇಳುವಷ್ಟು ಸಮಯ ನನಗಿಲ್ಲ. 33 ಆ ಜನರೆಲ್ಲರೂ ಬಲವಾದ ನಂಬಿಕೆಯುಳ್ಳವರಾಗಿದ್ದರು. ಆ ನಂಬಿಕೆಯಿಂದಲೇ ರಾಜ್ಯಗಳನ್ನು ಸೋಲಿಸಿದರು. ಅವರು ಯೋಗ್ಯವಾದ ಕಾರ್ಯಗಳನ್ನು ಮಾಡಿದರು ಮತ್ತು ದೇವರು ವಾಗ್ದಾನ ಮಾಡಿದ್ದವುಗಳನ್ನು ಪಡೆದುಕೊಂಡರು. ಅವರಲ್ಲಿ ಕೆಲವರು ತಮ್ಮ ನಂಬಿಕೆಯಿಂದ ಸಿಂಹಗಳ ಬಾಯಿಗಳನ್ನು ಮುಚ್ಚಿದರು; 34 ಕೆಲವರು ಉರಿಯುವ ಬೆಂಕಿಯನ್ನು ನಂದಿಸಿದರು; ಇನ್ನು ಕೆಲವರು ಕತ್ತಿಗಳ ಬಾಯಿಂದ ಪಾರಾದರು; ದುರ್ಬಲರಾಗಿದ್ದವರು ತಮ್ಮ ನಂಬಿಕೆಯಿಂದ ಪ್ರಬಲರಾದರು; ಯುದ್ಧದಲ್ಲಿ ಶಕ್ತಿಶಾಲಿಗಳಾಗಿ ಶತ್ರುಗಳನ್ನು ಸೋಲಿಸಿದರು. 35 ಸತ್ತುಹೋಗಿದ್ದವರು ಸಾವಿನಿಂದ ಮೇಲೆದ್ದರು ಮತ್ತು ಅವರನ್ನು ಅವರವರ ಕುಟುಂಬಗಳ ಸ್ತ್ರೀಯರಿಗೆ ಒಪ್ಪಿಸಲಾಯಿತು. ಇತರ ಕೆಲವರು ಯಾತನೆಯನ್ನು ಅನುಭವಿಸುತ್ತಿದ್ದಾಗಲೂ ಪುನರುತ್ಥಾನದ ನಂತರವಿರುವ ಶ್ರೇಷ್ಠ ಜೀವಿತಕ್ಕಾಗಿ ಬಿಡುಗಡೆ ಹೊಂದಲು ಒಪ್ಪಲಿಲ್ಲ. 36 ಕೆಲವರು ಇತರರಿಂದ ಅಪಹಾಸ್ಯಕ್ಕೆ ಗುರಿಯಾದರು, ಪೆಟ್ಟುಗಳನ್ನು ಅನುಭವಿಸಿದರು, ಸೆರೆವಾಸದಲ್ಲಿದ್ದರು. 37 ಕೆಲವರನ್ನು ಕಲ್ಲೆಸೆದು ಕೊಂದರು, ಕೆಲವರನ್ನು ಅರ್ಧಕತ್ತರಿಸಿ ಎರಡು ಭಾಗ ಮಾಡಿದರು. ಕೆಲವರನ್ನು ಕತ್ತಿಗಳಿಂದ ಇರಿದುಕೊಂದರು. ಇವರಲ್ಲಿ ಕೆಲವರು ಕುರಿ ಮತ್ತು ಹೋತಗಳ ಚರ್ಮಗಳನ್ನು ತೊಟ್ಟುಕೊಂಡಿದ್ದರು; ಕೆಲವರು ಬಡವರಾಗಿದ್ದರು; ಹಿಂಸೆಗೆ ಒಳಗಾಗಿದ್ದರು ಮತ್ತು ಜನರ ಕ್ರೂರ ವರ್ತನೆಗೆ ಗುರಿಯಾಗಿದ್ದರು. 38 ಇವರಿಗೆ ಈ ಲೋಕವು ಯೋಗ್ಯವಾಗಿರಲಿಲ್ಲ. ಇವರು ಮರುಭೂಮಿಗಳಲ್ಲಿ, ಬೆಟ್ಟಗಳಲ್ಲಿ ಅಲೆಯುತ್ತಾ ಗುಹೆಗಳಲ್ಲಿಯೂ ನೆಲದ ಕುಣಿಗಳಲ್ಲಿಯೂ ವಾಸಿಸುತ್ತಿದ್ದರು.
39 ಇವರೆಲ್ಲರೂ ತಮ್ಮ ನಂಬಿಕೆಯ ವಿಷಯದಲ್ಲಿ ಪ್ರಸಿದ್ಧರಾಗಿದ್ದರು. ಆದರೆ ದೇವರ ದೊಡ್ಡ ವಾಗ್ದಾನವನ್ನು ಇವರಲ್ಲಿ ಯಾರೂ ಹೊಂದಿಕೊಳ್ಳಲಿಲ್ಲ. 40 ದೇವರು ನಮಗೆ ಶ್ರೇಷ್ಠವಾದದ್ದನ್ನು ಕೊಡಲು ಯೋಜನೆ ಮಾಡಿದನು. ನಮ್ಮೊಡನೆ ಮಾತ್ರ ಅವರು ಪರಿಪೂರ್ಣರಾಗಬೇಕೆಂಬುದೇ ಆ ಯೋಜನೆ.
Kannada Holy Bible: Easy-to-Read Version. All rights reserved. © 1997 Bible League International