M’Cheyne Bible Reading Plan
ಬಂಡೆಯೊಳಗಿಂದ ನೀರು
17 ಇಸ್ರೇಲರೆಲ್ಲರೂ ಸಿನ್ ಮರುಭೂಮಿಯಿಂದ ಒಟ್ಟಾಗಿ ಪ್ರಯಾಣಮಾಡಿದರು. ಯೆಹೋವನು ಆಜ್ಞಾಪಿಸಿದಂತೆಲ್ಲಾ ಅವರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣಮಾಡಿದರು. ಅವರು ರೆಫೀದೀಮಿಗೆ ಪ್ರಯಾಣಮಾಡಿ ಅಲ್ಲಿ ತಂಗಿದರು. ಅವರಿಗೆ ಕುಡಿಯಲು ಅಲ್ಲಿ ನೀರಿರಲಿಲ್ಲ. 2 ಆದ್ದರಿಂದ ಅವರು ಮೋಶೆಗೆ ವಿರುದ್ಧವಾಗಿ ದಂಗೆ ಎದ್ದು ಅವನೊಡನೆ ವಾಗ್ವಾದ ಮಾಡತೊಡಗಿದರು. “ನಮಗೆ ಕುಡಿಯಲು ನೀರು ಕೊಡು” ಎಂದು ಅವರು ಕೇಳಿದರು.
ಮೋಶೆ ಅವರಿಗೆ, “ನೀವು ಯಾಕೆ ನನಗೆ ವಿರುದ್ಧವಾಗಿ ದಂಗೆಯೆದ್ದಿರಿ? ನೀವು ಯಾಕೆ ಯೆಹೋವನನ್ನು ಪರೀಕ್ಷಿಸುತ್ತಿದ್ದೀರಿ? ಯೆಹೋವನು ನಮ್ಮೊಡನೆ ಇಲ್ಲವೆಂದು ನೀವು ಭಾವಿಸುತ್ತೀರೋ?” ಎಂದು ಹೇಳಿದನು.
3 ಆದರೆ ಜನರು ನೀರಿಲ್ಲದೆ ಬಹಳ ಬಾಯಾರಿಕೆಗೆ ಒಳಗಾಗಿದ್ದರು. ಆದ್ದರಿಂದ ಅವರು ಮೋಶೆಯ ಮೇಲೆ ಗುಣುಗುಟ್ಟುತ್ತಿದ್ದರು. “ನೀನು ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದದ್ದೇಕೆ? ನಾವು, ನಮ್ಮ ಮಕ್ಕಳು ಮತ್ತು ನಮ್ಮ ದನಕರುಗಳೆಲ್ಲಾ ನೀರಿಲ್ಲದೆ ಸಾಯುವುದಕ್ಕೆ ನೀನು ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದೆಯಾ?” ಎಂದು ಅವರು ಕೇಳಿದರು.
4 ಆದ್ದರಿಂದ ಮೋಶೆಯು ಯೆಹೋವನಿಗೆ ಮೊರೆಯಿಟ್ಟು, “ಈ ಜನರ ವಿಷಯದಲ್ಲಿ ನಾನೇನು ಮಾಡಲಿ? ಅವರು ಕಲ್ಲೆಸೆದು ನನ್ನನ್ನು ಕೊಲ್ಲುವುದಕ್ಕೆ ಸಿದ್ಧರಾಗಿದ್ದಾರೆ” ಅಂದನು.
5 ಯೆಹೋವನು ಮೋಶೆಗೆ, “ಇಸ್ರೇಲ್ ಜನರ ಮುಂದೆ ಹೋಗು. ನಿನ್ನೊಡನೆ ಜನರ ಕೆಲವು ಹಿರಿಯರನ್ನು ಕರೆದುಕೊ. ನಿನ್ನ ಊರುಗೋಲನ್ನು ಹಿಡಿದುಕೊಂಡು ಹೋಗು. ನೀನು ನೈಲ್ ನದಿಯನ್ನು ಹೊಡೆಯಲು ಉಪಯೋಗಿಸಿದ ಕೋಲು ಇದಾಗಿದೆ. 6 ಹೋರೇಬಿನಲ್ಲಿ ನಾನು ನಿನ್ನ ಮುಂದೆ ಒಂದು ಬಂಡೆಯ ಮೇಲೆ ನಿಲ್ಲುವೆನು. ಊರುಗೋಲಿನಿಂದ ಆ ಬಂಡೆಯನ್ನು ಹೊಡೆ; ಆಗ ನೀರು ಅದರೊಳಗಿಂದ ಬರುವುದು. ಆಗ ಜನರು ಕುಡಿಯಬಹುದು” ಎಂದು ಹೇಳಿದನು.
ಅಂತೆಯೇ ಮೋಶೆ ಮಾಡಿದನು. ಇಸ್ರೇಲರ ಹಿರಿಯರು ಇದನ್ನು ನೋಡಿದರು. 7 ಮೋಶೆ ಆ ಸ್ಥಳಕ್ಕೆ ಮಸ್ಸಾ ಮತ್ತು ಮೆರೀಬಾ ಎಂದು ಹೆಸರಿಟ್ಟನು. ಯಾಕೆಂದರೆ ಈ ಸ್ಥಳದಲ್ಲಿ ಇಸ್ರೇಲರು ಅವನಿಗೆ ವಿರುದ್ಧವಾಗಿ ದಂಗೆ ಎದ್ದು ಯೆಹೋವನನ್ನು ಪರೀಕ್ಷಿಸಿದರು. ಯೆಹೋವನು ಅವರೊಡನೆ ಇದ್ದಾನೋ ಇಲ್ಲವೋ ಎಂದು ಜನರು ತಿಳಿಯಬಯಸಿದರು.
8 ರೆಫೀದೀಮಿನಲ್ಲಿ ಅಮಾಲೇಕ್ಯರು ಬಂದು ಇಸ್ರೇಲರಿಗೆ ವಿರುದ್ಧವಾಗಿ ಯುದ್ಧಮಾಡಿದರು. 9 ಆದ್ದರಿಂದ ಮೋಶೆ ಯೆಹೋಶುವನಿಗೆ, “ಕೆಲವು ಪುರುಷರನ್ನು ಆರಿಸಿಕೊಂಡು, ನಾಳೆ ಅಮಾಲೇಕ್ಯರೊಡನೆ ಯುದ್ಧಮಾಡು. ನಾನು ಬೆಟ್ಟದ ತುದಿಯಲ್ಲಿ ನಿಂತು ಗಮನಿಸುವೆನು, ದೇವರು ನನಗೆ ಕೊಟ್ಟ ಊರುಗೋಲನ್ನು ನಾನು ಹಿಡಿದುಕೊಂಡಿರುವೆನು” ಎಂದು ಹೇಳಿದನು.
10 ಯೆಹೋಶುವನು ಮೋಶೆಯ ಮಾತಿಗೆ ವಿಧೇಯನಾಗಿ ಮರುದಿನ ಅಮಾಲೇಕ್ಯರೊಡನೆ ಯುದ್ಧಮಾಡಲು ಹೋದನು. ಅದೇ ಸಮಯದಲ್ಲಿ ಮೋಶೆಯೂ ಆರೋನನೂ ಹೂರನೂ ಬೆಟ್ಟದ ತುದಿಗೆ ಹೋದರು. 11 ಮೋಶೆ ತನ್ನ ಕೈಗಳನ್ನು ಮೇಲೆತ್ತಿದಾಗ ಇಸ್ರೇಲರು ಜಯಗಳಿಸಿದರು. ಆದರೆ ಮೋಶೆಯು ತನ್ನ ಕೈಗಳನ್ನು ಕೆಳಗಿಳಿಸಿದಾಗ ಅಮಾಲೇಕ್ಯರು ಜಯಗಳಿಸಿದರು.
12 ಸ್ವಲ್ಪ ಸಮಯದ ನಂತರ ಮೋಶೆಯ ತೋಳುಗಳು ಆಯಾಸಗೊಂಡವು. ಆದ್ದರಿಂದ ಅವರು ಒಂದು ದೊಡ್ಡಕಲ್ಲನ್ನು ಇಟ್ಟು ಮೋಶೆಯನ್ನು ಅದರ ಮೇಲೆ ಕುಳ್ಳಿರಿಸಿದರು. ಬಳಿಕ ಆರೋನನು ಮತ್ತು ಹೂರನು ಮೋಶೆಯ ಕೈಗಳನ್ನು ಮೇಲೆತ್ತಿ ಹಿಡಿದುಕೊಂಡರು. ಆರೋನನು ಮೋಶೆಯ ಒಂದು ಕಡೆಯಲ್ಲಿದ್ದನು; ಹೂರನು ಮೋಶೆಯ ಇನ್ನೊಂದು ಕಡೆಯಲ್ಲಿದ್ದನು. ಸೂರ್ಯನು ಮುಳುಗುವವರೆಗೆ ಅವರು ಅವನ ಕೈಗಳನ್ನು ಮೇಲೆತ್ತಿ ಹಿಡಿದರು. 13 ಆದ್ದರಿಂದ ಯೆಹೋಶುವನು ಮತ್ತು ಅವನ ಸೈನಿಕರು ಅಮಾಲೇಕ್ಯರನ್ನು ಯುದ್ಧದಲ್ಲಿ ಸೋಲಿಸಿದರು.
14 ಬಳಿಕ ಯೆಹೋವನು ಮೋಶೆಗೆ, “ಈ ಯುದ್ಧದ ಕುರಿತು ಬರೆ: ಜನರು ಇಲ್ಲಿ ನಡೆದದ್ದನ್ನು ಜ್ಞಾಪಿಸಿಕೊಳ್ಳುವಂತೆ ಈ ಸಂಗತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡು. ನಾನು ಅಮಾಲೇಕ್ಯರನ್ನು ಭೂಮಿಯ ಮೇಲಿಂದ ಸಂಪೂರ್ಣವಾಗಿ ನಾಶಮಾಡುವೆನೆಂದು ಯೆಹೋಶುವನಿಗೆ ಹೇಳಲು ಮರೆಯಬೇಡ” ಎಂದು ಹೇಳಿದನು.
15 ಆಗ ಮೋಶೆಯು ಒಂದು ಯಜ್ಞವೇದಿಕೆಯನ್ನು ಕಟ್ಟಿದನು. ಮೋಶೆಯು ಯಜ್ಞವೇದಿಕೆಗೆ, “ಯೆಹೋವನು ನನ್ನ ಧ್ವಜ” ಎಂದು ಹೆಸರಿಟ್ಟನು. 16 ಮೋಶೆ, “ನಾನು ನನ್ನ ಕೈಗಳನ್ನು ಯೆಹೋವನ ಸಿಂಹಾಸನದ ಕಡೆಗೆ ಎತ್ತಿದೆನು. ಆದ್ದರಿಂದ ಯೆಹೋವನು ಎಂದಿನಂತೆ ಅಮಾಲೇಕ್ಯರ ವಿರುದ್ಧವಾಗಿ ಯುದ್ಧಮಾಡಿದನು” ಅಂದನು.
ಯೆಹೂದ್ಯನಾಯಕರು ಯೇಸುವಿಗೆ ಕೇಳಿದ ಪ್ರಶ್ನೆ
(ಮತ್ತಾಯ 21:23-27; ಮಾರ್ಕ 11:27-33)
20 ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು, 2 “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.
3 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. 4 ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.
5 ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು. 6 ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು. 7 ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.
8 ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು.
ದೇವರು ತನ್ನ ಮಗನನ್ನು ಕಳುಹಿಸಿದನು
(ಮತ್ತಾಯ 21:33-46; ಮಾರ್ಕ 12:1-12)
9 ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿತೋಟವನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. 10 ಸ್ವಲ್ಪಕಾಲದ ನಂತರ ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂತು. ಆದ್ದರಿಂದ ಅವನು ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಬರುವುದಕ್ಕಾಗಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರು ಆ ಸೇವಕನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11 ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನೂ ಹೊಡೆದು, ಅವಮಾನ ಮಾಡಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12 ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಗೆ ಅಟ್ಟಿದರು.
13 “ಆಗ ತೋಟದ ಯಜಮಾನನು, ‘ನಾನೀಗ ಏನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮರ್ಯಾದೆ ಕೊಡಬಹುದು’ ಅಂದುಕೊಂಡನು. 14 ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು. 15 ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು.
“ಆಗ ತೋಟದ ಯಜಮಾನನು ಏನು ಮಾಡುವನು? 16 ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಟವನ್ನು ಬೇರೆ ಕೆಲವು ರೈತರಿಗೆ ಕೊಡುವನು.”
ಜನರು ಈ ಸಾಮ್ಯವನ್ನು ಕೇಳಿ, “ಇಲ್ಲ! ಹಾಗೆಂದಿಗೂ ಆಗಬಾರದು!” ಅಂದರು. 17 ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, “ಹಾಗಾದರೆ,
‘ಕಟ್ಟುವವರು ಬೇಡವೆಂದು ಬಿಟ್ಟ
ಕಲ್ಲೇ ಮೂಲೆಗಲ್ಲಾಯಿತು’(A)
ಎಂಬ ವಚನದ ಅರ್ಥವೇನು? 18 ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ನಿಮ್ಮ ಮೇಲೆ ಬಿದ್ದರೆ ಅದು ನಿಮ್ಮನ್ನು ಜಜ್ಜಿಹಾಕುವುದು!” ಎಂದು ಹೇಳಿದನು.
19 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯ ನಾಯಕರು ಕೇಳಿದರು. ತಮ್ಮನ್ನು ಕುರಿತಾಗಿಯೇ ಆತನು ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದುಕೊಂಡರು. ಆದ್ದರಿಂದ ಅವರು ಆಗಲೇ ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಅವರು ಜನರಿಗೆ ಭಯಪಟ್ಟು ಆತನನ್ನು ಬಂಧಿಸಲಿಲ್ಲ.
ಯೇಸುವನ್ನು ಮೋಸಗೊಳಿಸಲು ಯೆಹೂದ್ಯ ನಾಯಕರ ಪ್ರಯತ್ನ
(ಮತ್ತಾಯ 22:15-22; ಮಾರ್ಕ 12:13-17)
20 ಆದ್ದರಿಂದ ಧರ್ಮೋಪದೇಶಕರು ಮತ್ತು ಯಾಜಕರು ಯೇಸುವನ್ನು ಬಂಧಿಸಲು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ಅವರು ಕೆಲವು ಜನರನ್ನು ಯೇಸುವಿನ ಬಳಿಗೆ ಕಳುಹಿಸಿದರು. ಒಳ್ಳೆಯವರಂತೆ ನಟಿಸಲು ಅವರು ಆ ಜನರಿಗೆ ಹೇಳಿಕೊಟ್ಟಿದ್ದರು. ಅವರು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಬೇಕೆಂದಿದ್ದರು. (ಅವರು ಏನಾದರೂ ತಪ್ಪು ಕಂಡುಹಿಡಿದರೆ, ಆಗ ಯೇಸುವನ್ನು ಆತನ ಮೇಲೆ ಅಧಿಕಾರವಿದ್ದ ರಾಜ್ಯಪಾಲನಿಗೆ ಒಪ್ಪಿಸಿಕೊಡಬಹುದಾಗಿತ್ತು.) 21 ಆದ್ದರಿಂದ ಅವರು ಯೇಸುವಿಗೆ, “ಉಪದೇಶಕನೇ, ನೀನು ಸತ್ಯವನ್ನೇ ಹೇಳುವೆ ಮತ್ತು ಉಪದೇಶಿಸುವೆ ಎಂದು ನಮಗೆ ಗೊತ್ತಿದೆ. ನೀನು ಮುಖದಾಕ್ಷಿಣ್ಯ ಮಾಡುವವನಲ್ಲ. ದೇವರ ಮಾರ್ಗದ ಕುರಿತಾಗಿ ನೀನು ಯಾವಾಗಲೂ ಸತ್ಯವನ್ನೇ ಬೋಧಿಸುವೆ! 22 ಈಗ ಹೇಳು, ನಾವು ಸೀಸರನಿಗೆ[a] ತೆರಿಗೆ ಕೊಡುವುದು ಸರಿಯೋ? ತಪ್ಪೋ?” ಎಂದು ಕೇಳಿದರು.
23 ಆದರೆ ಈ ಜನರು ತನಗೆ ಮೋಸಮಾಡಲು ಪ್ರಯತ್ನಿಸುತ್ತಿದ್ದಾರೆಂದು ಯೇಸುವಿಗೆ ತಿಳಿದಿತ್ತು. 24 ಆದ್ದರಿಂದ ಯೇಸು ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಆ ನಾಣ್ಯದ ಮೇಲೆ ಯಾರ ಹೆಸರಿದೆ? ಅದರ ಮೇಲೆ ಯಾರ ಮುಖಚಿತ್ರವಿದೆ?” ಎಂದು ಕೇಳಿದನು.
ಅವರು, “ಸೀಸರನದು” ಎಂದು ಹೇಳಿದರು.
25 ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದನು.
26 ಆ ಜನರು ಆತನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿ ಆಶ್ಚರ್ಯಪಟ್ಟು ಮರುಪ್ರಶ್ನೆ ಕೇಳದಂತಾದರು. ಜನರ ಮುಂದೆ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಅವರಿಂದಾಗಲಿಲ್ಲ.
ಯೇಸುವನ್ನು ಮೋಸಗೊಳಿಸಲು ಕೆಲವು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಮಾರ್ಕ 12:18-27)
27 ಕೆಲವು ಸದ್ದುಕಾಯರು[b] ಯೇಸುವಿನ ಬಳಿಗೆ ಬಂದರು. (ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದು ಸದ್ದುಕಾಯರು ನಂಬುತ್ತಾರೆ.) ಅವರು ಯೇಸುವಿಗೆ, 28 “ಉಪದೇಶಕನೇ, ಮದುವೆಯಾದ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ಆ ಸ್ತ್ರೀಯನ್ನು ಮದುವೆಯಾಗಿ, ಸತ್ತುಹೋದ ಸಹೋದರನಿಗಾಗಿ ಮಕ್ಕಳನ್ನು ಪಡೆಯಬೇಕೆಂದು[c] ಮೋಶೆಯು ಬರೆದಿದ್ದಾನಷ್ಟೆ. 29 ಒಂದು ಕಾಲದಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯ ಸಹೋದರನು ಒಬ್ಬ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. 30 ಆಗ ಎರಡನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. 31 ಆಗ ಮೂರನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು. ಬಳಿಕ ಅವನೂ ಸತ್ತುಹೋದನು. ಇನ್ನುಳಿದ ಸಹೋದರರಿಗೂ ಹೀಗೆಯೇ ಆಯಿತು. ಅವರೆಲ್ಲರೂ ಮಕ್ಕಳಿಲ್ಲದೆ ಸತ್ತರು. 32 ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. 33 ಆದರೆ ಆ ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿದ್ದರು. ಹೀಗಿರಲಾಗಿ, ಸತ್ತವರು ಪುನರುತ್ಥಾನ ಹೊಂದುವಾಗ, ಆ ಸ್ತ್ರೀಯು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
34 ಯೇಸು ಸದ್ದುಕಾಯರಿಗೆ, “ಭೂಲೋಕದಲ್ಲಿ ಜನರು ಒಬ್ಬರನ್ನೊಬ್ಬರು ಮದುವೆ ಆಗುತ್ತಾರೆ. 35 ಪುನರುತ್ಥಾನಕ್ಕೆ ಯೋಗ್ಯರಾದ ಕೆಲವು ಜನರು ಜೀವಂತವಾಗಿ ಎದ್ದುಬಂದು ಮತ್ತೆ ಜೀವಿಸುತ್ತಾರೆ. ಆ ಹೊಸ ಜೀವನದಲ್ಲಿ ಅವರು ಮದುವೆ ಆಗುವುದಿಲ್ಲ. 36 ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ. 37 ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯು ಸ್ಪಷ್ಟವಾಗಿ ತೋರಿಸಿದ್ದಾನೆ. ಉರಿಯುವ ಪೊದೆಯ[d] ಕುರಿತು ಮೋಶೆ ಬರೆಯುವಾಗ ‘ಪ್ರಭುವಾದ ದೇವರೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದಾನೆ. 38 ದೇವರು ಅವರೆಲ್ಲರಿಗೆ ದೇವರಾಗಿರುವುದರಿಂದ ಅವರೆಲ್ಲರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ ದೇವರು ಜೀವಿಸುವ ಜನರಿಗೇ ದೇವರಾಗಿದ್ದಾನೆ. ದೇವರಿಗೆ ಸೇರಿದವರೆಲ್ಲರೂ ಜೀವಂತರಾಗಿದ್ದಾರೆ” ಎಂದು ಹೇಳಿದನು.
39 ಧರ್ಮೋಪದೇಶಕರಲ್ಲಿ ಕೆಲವರು, “ಬೋಧಕನೇ, ನೀನು ಒಳ್ಳೆಯ ಉತ್ತರವನ್ನು ಕೊಟ್ಟಿರುವೆ” ಎಂದು ಹೇಳಿದರು. 40 ಇನ್ನೊಂದು ಪ್ರಶ್ನೆಯನ್ನು ಆತನಿಗೆ ಕೇಳುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
ಕ್ರಿಸ್ತನು ದಾವೀದನ ಮಗನೋ?
(ಮತ್ತಾಯ 22:41-46; ಮಾರ್ಕ 12:35-37)
41 ಆಗ ಯೇಸು, “ಕ್ರಿಸ್ತನು ದಾವೀದನ ಮಗನೆಂದು ಜನರು ಏಕೆ ಹೇಳುತ್ತಾರೆ? 42 ಕೀರ್ತನೆಗಳ ಪುಸ್ತಕದಲ್ಲಿ ಸ್ವತಃ ದಾವೀದನೇ ಇಂತೆಂದಿದ್ದಾನೆ:
‘ಪ್ರಭುವು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ) ಹೇಳಿದ್ದೇನೆಂದರೆ,
43 ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವನ್ನಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲೇ ಕುಳಿತುಕೊಂಡಿರು.’(B)
44 ದಾವೀದನು ಕ್ರಿಸ್ತನನ್ನು ‘ಪ್ರಭು’ವೆಂದು ಕರೆದ ಮೇಲೆ ಆತನು ಅವನಿಗೆ ಮಗನಾಗಲು ಹೇಗೆ ಸಾಧ್ಯ?” ಎಂದು ಹೇಳಿದನು.
ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆ
(ಮತ್ತಾಯ 23:1-36; ಮಾರ್ಕ 12:38-40; ಲೂಕ 11:37-54)
45 ಜನರೆಲ್ಲರೂ ಯೇಸುವಿನ ಮಾತನ್ನು ಆಲಿಸಿದರು. ಯೇಸು ತನ್ನ ಶಿಷ್ಯರಿಗೆ, 46 “ಧರ್ಮೋಪದೇಶಕರ ಕುರಿತು ಎಚ್ಚರಿಕೆಯಾಗಿರಿ. ಅವರು ಪ್ರಾಮುಖ್ಯ ವ್ಯಕ್ತಿಗಳಂತೆ ಬಟ್ಟೆ ಧರಿಸಿಕೊಂಡು ತಿರುಗಾಡುತ್ತಾರೆ. ಮಾರುಕಟ್ಟೆಗಳಲ್ಲಿ ಜನರಿಂದ ಗೌರವ ಹೊಂದಲು ಆಶಿಸುತ್ತಾರೆ. ಸಭಾಮಂದಿರಗಳಲ್ಲಿ ಮತ್ತು ಔತಣಕೂಟಗಳಲ್ಲಿ ಉನ್ನತವಾದ ಆಸನಗಳನ್ನು ಆಶಿಸುತ್ತಾರೆ. 47 ಆದರೆ ಅವರು ವಿಧವೆಯರಿಗೆ ಮೋಸಮಾಡಿ ಅವರ ಮನೆಗಳನ್ನು ಕಸಿದುಕೊಳ್ಳುತ್ತಾರೆ. ಬಳಿಕ ಉದ್ದವಾದ ಪ್ರಾರ್ಥನೆಗಳನ್ನು ಮಾಡಿ ಒಳ್ಳೆಯವರಂತೆ ನಟಿಸುತ್ತಾರೆ. ದೇವರು ಇವರನ್ನು ಕಠಿಣವಾದ ದಂಡನೆಗೆ ಗುರಿಪಡಿಸುತ್ತಾನೆ” ಎಂದು ಹೇಳಿದನು.
35 ಎಲೀಹು ಮಾತನ್ನು ಮುಂದುವರಿಸಿ,
2 “ಯೋಬನೇ, ‘ನಾನು ದೇವರಿಗಿಂತ ನೀತಿವಂತನೆಂದು’
ನೀನು ಹೇಳುವುದು ನ್ಯಾಯವಲ್ಲ.
3 ಅಲ್ಲದೆ ನೀನು ದೇವರಿಗೆ,
‘ಮನುಷ್ಯನು ಪಾಪ ಮಾಡದೆ ದೇವರನ್ನು ಮೆಚ್ಚಿಸುವುದರಿಂದ ಅವನಿಗೆ ಪ್ರಯೋಜನವೇನು?
ನಾನು ಪಾಪಮಾಡದಿದ್ದರೆ ನನಗೇನು ಒಳಿತಾಗುವುದು’ ಎಂದು ಕೇಳು.
4 “ಯೋಬನೇ, ನಾನು ನಿನಗೂ ನಿನ್ನೊಂದಿಗಿರುವ ಸ್ನೇಹಿತರಿಗೂ ಉತ್ತರಕೊಡುವೆ.
5 ಕಣ್ಣೆತ್ತಿ ಆಕಾಶವನ್ನು ನೋಡು.
ಮೋಡಗಳನ್ನು ದೃಷ್ಟಿಸು, ಅವು ನಿನಗಿಂತ ಎಷ್ಟೋ ಎತ್ತರವಾಗಿವೆ.
6 ಯೋಬನೇ, ನೀನು ಪಾಪಮಾಡಿದರೆ, ಅದರಿಂದ ದೇವರಿಗೇನೂ ಕೇಡಾಗುವುದಿಲ್ಲ.
ನೀನು ಅನೇಕ ಪಾಪಗಳನ್ನು ಮಾಡಿದ್ದರೂ ಅದರಿಂದ ದೇವರಿಗೇನೂ ಆಗುವುದಿಲ್ಲ.
7 ಯೋಬನೇ, ನೀನು ಒಳ್ಳೆಯವನಾಗಿದ್ದರೆ, ಅದರಿಂದ ದೇವರಿಗೇನೂ ಸಹಾಯವಾಗುವುದಿಲ್ಲ.
ದೇವರಿಗೆ ನಿನ್ನಿಂದೇನೂ ಲಾಭವಾಗುವುದಿಲ್ಲ.
8 ಯೋಬನೇ, ನಿನ್ನ ದುಷ್ಟತನದಿಂದ ನಿನ್ನಂಥವನಿಗೇ ಕೇಡಾಗುವುದು;
ನಿನ್ನ ಒಳ್ಳೆಯ ಕಾರ್ಯಗಳಿಂದ ನಿನ್ನಂಥವನಿಗೇ ಒಳ್ಳೆಯದಾಗುವುದು.
9 “ಹಿಂಸೆಗೂ ಅನ್ಯಾಯಕ್ಕೂ ಒಳಗಾಗಿರುವವರು
ತಮ್ಮನ್ನು ಬಲಿಷ್ಠರಿಂದ ಬಿಡಿಸಬಲ್ಲ ಯಾರಿಗಾದರೂ ಮೊರೆಯಿಡುವರು.
10 ಆದರೆ ಆ ಕೆಟ್ಟ ಜನರು ಸಹಾಯಕ್ಕಾಗಿ ದೇವರನ್ನು ಕೇಳಿಕೊಳ್ಳುವುದಿಲ್ಲ.
ಅವರು, ‘ನನ್ನನ್ನು ಸೃಷ್ಟಿಸಿದ ದೇವರೆಲ್ಲಿ?’ ಎಂದು ಕೇಳುವುದಿಲ್ಲ.
‘ಕುಗ್ಗಿಹೋದವರಿಗೆ ಸಹಾಯಮಾಡುವ ದೇವರೆಲ್ಲಿ?’ ಎಂದು ಕೇಳುವುದಿಲ್ಲ.
11 ‘ನಮ್ಮನ್ನು ಪಕ್ಷಿಗಳಿಗಿಂತಲೂ ಪ್ರಾಣಿಗಳಿಗಿಂತಲೂ
ಜ್ಞಾನಿಗಳನ್ನಾಗಿ ಮಾಡುವ ದೇವರೆಲ್ಲಿ?’ ಎಂದು ಅವರು ಕೇಳುವುದಿಲ್ಲ.
12 “ಅಲ್ಲದೆ ಆ ಕೆಟ್ಟವರು ದೇವರನ್ನು ಸಹಾಯಕ್ಕಾಗಿ ಕೇಳಿಕೊಂಡರೂ ಆತನು ಅವರಿಗೆ ಉತ್ತರಿಸುವುದಿಲ್ಲ.
ಯಾಕೆಂದರೆ ಅವರು ದುಷ್ಟರೂ ದುರಾಭಿಮಾನಿಗಳೂ ಆಗಿದ್ದಾರೆ.
13 ಹೌದು, ದೇವರು ಅವರ ಬೆಲೆಯಿಲ್ಲದ ಬೇಡಿಕೆಯನ್ನು ಕೇಳುವುದಿಲ್ಲ;
ಸರ್ವಶಕ್ತನಾದ ದೇವರು ಅವರಿಗೆ ಗಮನ ಕೊಡುವುದಿಲ್ಲ.
14 ಯೋಬನೇ, ನೀನು, ‘ದೇವರನ್ನು ಕಾಣಲಾರೆನು’ ಎಂದು ಹೇಳುವಾಗ
ಆತನು ನಿನಗೆ ಕಿವಿಗೊಡುವುದಿಲ್ಲ.
ನಿನ್ನ ವ್ಯಾಜ್ಯವು ಆತನ ಮುಂದೆ ಇರುವುದರಿಂದ
ನೀನು ಆತನಿಗಾಗಿ ಕಾದುಕೊಂಡಿರಬೇಕು.
15 “ದೇವರು ಕೆಟ್ಟಜನರನ್ನು ದಂಡಿಸುವುದಿಲ್ಲ;
ಪಾಪವನ್ನು ಗಮನಿಸುವುದಿಲ್ಲ ಎಂಬುದು ಯೋಬನ ಆಲೋಚನೆ.
16 ಆದ್ದರಿಂದ ಯೋಬನು ತನ್ನ ನಿಷ್ಪ್ರಯೋಜಕ ಮಾತನ್ನು ಮುಂದುವರಿಸುತ್ತಿದ್ದಾನೆ;
ದುರಾಭಿಮಾನದಿಂದ ವರ್ತಿಸುತ್ತಿದ್ದಾನೆ; ತಿಳುವಳಿಕೆಯಿಲ್ಲದೆ ಮಾತಾಡುತ್ತಿದ್ದಾನೆ.”
5 ಭೂಮಿಯ ಮೇಲೆ ನಾವು ವಾಸವಾಗಿರುವ ಈ ಗುಡಾರವು ಅಂದರೆ ಈ ದೇಹವು ನಾಶವಾಗುವುದೆಂದು ನಮಗೆ ಗೊತ್ತಿದೆ. ಆದರೆ ಅದು ಸಂಭವಿಸಿದಾಗ, ನಮ್ಮ ವಾಸಕ್ಕಾಗಿ ದೇವರು ನಮಗೊಂದು ಮನೆಯನ್ನು ಕೊಡುವನು. ಅದು ಮನುಷ್ಯರಿಂದ ನಿರ್ಮಿತವಾದ ಮನೆಯಲ್ಲ. ಅದು ಪರಲೋಕದಲ್ಲಿರುವ ಶಾಶ್ವತವಾದ ಮನೆಯಾಗಿದೆ. 2 ಆದರೆ ಈಗ ನಾವು ಈ ದೇಹದಲ್ಲಿ ಬಳಲಿ ಹೋಗಿದ್ದೇವೆ. ಪರಲೋಕದಲ್ಲಿರುವ ನಮ್ಮ ಮನೆಯನ್ನು ದೇವರು ನಮಗೆ ಯಾವಾಗ ಕೊಡುವನೊ ಎಂದು ಹಾತೊರೆಯುತ್ತಿದ್ದೇವೆ. 3 ನಾವು ಅದನ್ನು ಧರಿಸಿಕೊಂಡಾಗ ಬೆತ್ತಲೆಯಾಗಿರುವುದಿಲ್ಲ. 4 ಈ ಗುಡಾರದಲ್ಲಿರುವ ತನಕ ನಮಗೆ ಭಾರವಾದ ಹೊರೆಗಳಿವೆ ಮತ್ತು ನಾವು ನರಳುತ್ತೇವೆ. ಬೆತ್ತಲೆಯಾಗಿರಲು ನಾವು ಇಷ್ಟಪಡದೆ ಪರಲೋಕದ ಮನೆಯನ್ನು ಧರಿಸಿಕೊಳ್ಳಲು ಇಷ್ಟಪಡುತ್ತೇವೆ. ಸತ್ತುಹೋಗುವ ಈ ದೇಹವನ್ನು ಜೀವವು ಪೂರ್ಣವಾಗಿ ಆವರಿಸಿಕೊಳ್ಳುವುದು. 5 ಇದಕ್ಕೋಸ್ಕರವಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾನೆ ಮತ್ತು ಇದನ್ನು ಖಚಿತಪಡಿಸಲು ಪವಿತ್ರಾತ್ಮನನ್ನೇ ನಮಗೆ ಅನುಗ್ರಹಿಸಿದ್ದಾನೆ.
6 ಆದ್ದರಿಂದ ಯಾವಾಗಲೂ ಧೈರ್ಯದಿಂದಿದ್ದೇವೆ. ಈ ದೇಹದಲ್ಲಿ ವಾಸವಾಗಿರುವ ತನಕ ಪ್ರಭುವಿನಿಂದ ದೂರವಾಗಿರುತ್ತೇವೆಂಬುದು ನಮಗೆ ತಿಳಿದಿದೆ. 7 ನಾವು ಯಾವುದನ್ನು ನೋಡುತ್ತಿದ್ದೇವೋ ಅದರಿಂದ ಜೀವಿಸುತ್ತಿಲ್ಲ. ಆದರೆ ಯಾವುದನ್ನು ನಂಬಿದ್ದೇವೋ ಅದರಿಂದ ಜೀವಿಸುತ್ತಿದ್ದೇವೆ. 8 ಆದ್ದರಿಂದ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಪ್ರಭುವಿನೊಂದಿಗೆ ವಾಸಿಸುವುದನ್ನೇ ನಿಜವಾಗಿಯೂ ಅಪೇಕ್ಷಿಸುತ್ತೇವೆ. 9 ದೇವರನ್ನು ಮೆಚ್ಚಿಸಬೇಕೆಂಬುದೊಂದೇ ನಮಗಿರುವ ಉದ್ದೇಶವಾಗಿದೆ. ನಾವು ನಮ್ಮ ದೇಹದಲ್ಲಿ ಇಲ್ಲಿ ವಾಸವಾಗಿರುವಾಗಲೂ ಪ್ರಭುವಿನೊಂದಿಗೆ ಅಲ್ಲಿ ವಾಸವಾಗಿರುವಾಗಲೂ ಆತನನ್ನು ಮೆಚ್ಚಿಸಬೇಕೆಂಬುದೊಂದೇ ನಮ್ಮ ಬಯಕೆಯಾಗಿದೆ. 10 ನಾವೆಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತನ ಮುಂದೆ ನಿಂತುಕೊಳ್ಳಲೇಬೇಕು. ಪ್ರತಿಯೊಬ್ಬನು ಇಹಲೋಕದ ದೇಹದಲ್ಲಿ ವಾಸವಾಗಿದ್ದಾಗ ಮಾಡಿದ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಪ್ರತಿಫಲವನ್ನು ಹೊಂದುವನು.
ಜನರನ್ನು ದೇವರ ಸ್ನೇಹಿತರನ್ನಾಗಿಸಲು ಮಾಡತಕ್ಕ ಸಹಾಯ
11 ಪ್ರಭುವಿನ ಭಯ ಎಂದರೇನೆಂಬುದು ನಮಗೆ ತಿಳಿದಿದೆ. ಆದ್ದರಿಂದ ಸತ್ಯವನ್ನು ಸ್ವೀಕರಿಸಿಕೊಳ್ಳುವಂತೆ ಜನರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲನು. ನೀವು ಸಹ ನಿಮ್ಮ ಹೃದಯಗಳಲ್ಲಿ ನಮ್ಮನ್ನು ತಿಳಿದುಕೊಂಡಿದ್ದೀರೆಂದು ನಂಬುತ್ತೇವೆ. 12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ. 13 ನಾವು ಹುಚ್ಚರಾಗಿದ್ದರೆ ಅದು ದೇವರಿಗೋಸ್ಕರವಾಗಿಯೇ. ನಮಗೆ ಸ್ವಸ್ಥಬುದ್ಧಿಯಿದ್ದರೆ ಅದು ನಿಮಗೋಸ್ಕರವಾಗಿಯೇ. 14 ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ, ಎಲ್ಲಾ ಜನರಿಗೋಸ್ಕರವಾಗಿ ಆತನು ಸತ್ತನೆಂಬುದು ನಮಗೆ ಗೊತ್ತಿದೆ. ಆದ್ದರಿಂದ ಎಲ್ಲರೂ ಸತ್ತುಹೋದರು. 15 ಜೀವಿಸುವವರು ಇನ್ನು ಮೇಲೆ ತಮಗೋಸ್ಕರ ಜೀವಿಸಬಾರದೆಂದು ಕ್ರಿಸ್ತನು ಎಲ್ಲಾ ಜನರಿಗಾಗಿ ಸತ್ತನು. ಆ ಜನರು ತನಗೋಸ್ಕರ ಜೀವಿಸಲೆಂದು ಆತನು ಅವರಿಗೋಸ್ಕರ ಸತ್ತನು ಮತ್ತು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನು.
16 ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ. 17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು. 18 ಇದೆಲ್ಲಾ ದೇವರಿಂದಲೇ ಆಯಿತು. ಕ್ರಿಸ್ತನ ಮೂಲಕವಾಗಿ ದೇವರು ನಮ್ಮನ್ನು ತನ್ನೊಂದಿಗೆ ಸಮಾಧಾನ ಪಡಿಸಿಕೊಂಡಿದ್ದಾನೆ. ಇದಲ್ಲದೆ ಇತರರನ್ನು ಈ ಸಮಾಧಾನಕ್ಕೆ ಕರೆದುಕೊಂಡು ಬರುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 19 ಅಂದರೆ, ದೇವರು ಕ್ರಿಸ್ತನಲ್ಲಿ ಇಡೀ ಜಗತ್ತನ್ನೇ ತನ್ನೊಂದಿಗೆ ಸಮಾಧಾನಪಡಿಸಿಕೊಳ್ಳುತ್ತಿದ್ದನು. ದೇವರು ಕ್ರಿಸ್ತನಲ್ಲಿ ಜನರ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಈ ಸಮಾಧಾನದ ಸಂದೇಶವನ್ನು ಜನರಿಗೆ ತಿಳಿಸುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 20 ಆದ್ದರಿಂದ ಕ್ರಿಸ್ತನ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೊಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಡಿಕೊಳ್ಳುವಾಗ ಕ್ರಿಸ್ತನ ಪರವಾಗಿ ಮಾತಾಡುವವರಾಗಿದ್ದೇವೆ. 21 ಕ್ರಿಸ್ತನಲ್ಲಿ ಪಾಪವಿರಲಿಲ್ಲ. ಆದರೆ ನಾವು ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಆತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.
Kannada Holy Bible: Easy-to-Read Version. All rights reserved. © 1997 Bible League International