M’Cheyne Bible Reading Plan
ಫರೋಹನ ಮುಂದೆ ಮೋಶೆ ಆರೋನರು
5 ಮೋಶೆ ಆರೋನರು ಜನರೊಡನೆ ಮಾತಾಡಿದ ನಂತರ ಫರೋಹನ ಬಳಿಗೆ ಹೋಗಿ, “ಇಸ್ರೇಲರ ದೇವರಾದ ಯೆಹೋವನು ನಿನಗೆ, ‘ನನ್ನ ಜನರು ಅರಣ್ಯದೊಳಗೆ ಹೋಗಿ ಜಾತ್ರೆ ನಡೆಸಲು ಅಪ್ಪಣೆಕೊಡಬೇಕು’ ಎನ್ನುತ್ತಾನೆ” ಎಂದು ಹೇಳಿದರು.
2 ಆದರೆ ಫರೋಹನು, “ಯೆಹೋವನು ಯಾರು? ನಾನು ಆತನಿಗೆ ಯಾಕೆ ವಿಧೇಯನಾಗಬೇಕು. ಇಸ್ರೇಲರನ್ನು ನಾನು ಯಾಕೆ ಹೋಗಗೊಡಿಸಬೇಕು. ನೀವು ಯೆಹೋವನೆಂದು ಕರೆಯುವ ಆತನನ್ನು ನಾನು ಅರಿಯೆನು, ಆದ್ದರಿಂದ ಇಸ್ರೇಲರನ್ನು ಹೋಗಗೊಡಿಸುವುದಿಲ್ಲ” ಅಂದನು.
3 ಅದಕ್ಕೆ ಮೋಶೆ ಆರೋನರು, “ಇಬ್ರಿಯರ ದೇವರು ನಮ್ಮ ಸಂಗಡ ಮಾತಾಡಿದ್ದಾನೆ. ಆದ್ದರಿಂದ ನಾವು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞವನ್ನು ಸಮರ್ಪಿಸುವೆವು. ಇಲ್ಲವಾದರೆ ಆತನು ನಮ್ಮನ್ನು ಕಾಯಿಲೆಯಿಂದಲೋ ಕತ್ತಿಯಿಂದಲೋ ಸಂಹರಿಸುವನು” ಎಂದು ಹೇಳಿದರು.
4 ಆದರೆ ಈಜಿಪ್ಟಿನ ರಾಜನು ಅವರಿಗೆ, “ಮೋಶೆ ಆರೋನರೇ, ನೀವು ಕೆಲಸಗಾರರಿಗೆ ತೊಂದರೆ ಮಾಡುತ್ತಿದ್ದೀರಿ, ಅವರು ತಮ್ಮ ಕೆಲಸ ಮಾಡಲಿ! ನೀವು ನಿಮ್ಮ ಕೆಲಸವನ್ನು ಮಾಡಿ! 5 ಇಲ್ಲಿ ಬಹಳ ಮಂದಿ ಕೆಲಸಗಾರರಿದ್ದಾರೆ; ಅವರು ಕೆಲಸ ಮಾಡದಂತೆ ನೀವು ತಡೆಯುವುದೇಕೆ?” ಎಂದು ಹೇಳಿದನು.
ಫರೋಹನು ಜನರನ್ನು ದಂಡಿಸಿದ್ದು
6 ಅದೇ ದಿನ ಫರೋಹನು ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳಿಗೆ ಮತ್ತು ಮೇಸ್ತ್ರಿಗಳಿಗೆ, 7 “ಇಟ್ಟಿಗೆಗಳನ್ನು ಮಾಡುವುದಕ್ಕೆ ಬೇಕಾದ ಹುಲ್ಲನ್ನು ನೀವು ಜನರಿಗೆ ಇಲ್ಲಿಯವರೆಗೆ ಕೊಟ್ಟಿದ್ದೀರಿ. ಆದರೆ ಈಗ ಇಟ್ಟಿಗೆಗಳನ್ನು ಮಾಡಲು ಅವರೇ ಹುಲ್ಲನ್ನು ಕಂಡುಕೊಳ್ಳಬೇಕೆಂದು ಅವರಿಗೆ ಹೇಳಿರಿ. 8 ಆದರೂ ಅವರು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲೂ ಮಾಡಬೇಕು. ಅವರು ಸೋಮಾರಿಗಳಾಗಿದ್ದಾರೆ. ಆದಕಾರಣ ತಮ್ಮನ್ನು ಹೋಗಬಿಡಬೇಕೆಂದು ಕೇಳುತ್ತಿದ್ದಾರೆ. ಅವರಿಗೆ ಸಾಕಷ್ಟು ಕೆಲಸವಿಲ್ಲ. ಆದ್ದರಿಂದ ತಮ್ಮ ದೇವರಿಗೆ ಯಜ್ಞಗಳನ್ನು ಅರ್ಪಿಸಲು ಹೋಗಗೊಡಿಸಬೇಕೆಂದು ಕೇಳುತ್ತಾರೆ. 9 ಈ ಜನರಿಗೆ ಇನ್ನೂ ಕಷ್ಟಕರವಾದ ಕೆಲಸವನ್ನು ಕೊಡಿರಿ. ಅವರು ಕಾರ್ಯಮಗ್ನರಾಗಿರುವಂತೆ ನೋಡಿಕೊಳ್ಳಿರಿ. ಆಗ ಅವರಿಗೆ ಮೋಶೆಯ ಸುಳ್ಳುಗಳನ್ನು ಕೇಳುವುದಕ್ಕೆ ಸಮಯವಿರುವುದಿಲ್ಲ” ಎಂದು ಹೇಳಿದನು.
10 ಆದ್ದರಿಂದ ಈಜಿಪ್ಟಿನ ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು ಮತ್ತು ಮೇಸ್ತ್ರಿಗಳು ಇಸ್ರೇಲರ ಬಳಿಗೆ ಬಂದು, “ಫರೋಹನು ಇಟ್ಟಿಗೆಗಳನ್ನು ಮಾಡಲು ನಿಮಗೆ ಹುಲ್ಲು ಕೊಡುವುದಿಲ್ಲವೆಂದು ತೀರ್ಮಾನಿಸಿದ್ದಾನೆ. 11 ಆದ್ದರಿಂದ ನೀವೇ ಹೋಗಿ ಹುಲ್ಲನ್ನು ಕಂಡುಕೊಳ್ಳಿರಿ. ಆದರೆ ನೀವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಹೇಳಿದರು.
12 ಆದ್ದರಿಂದ ಜನರು ಹುಲ್ಲನ್ನು ಹುಡುಕುತ್ತಾ ಈಜಿಪ್ಟಿನ ಪ್ರತಿಯೊಂದು ಕಡೆಗೂ ಹೋದರು. 13 ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳು, ಜನರಿಂದ ಕಷ್ಟಕರವಾದ ಕೆಲಸಗಳನ್ನು ಬಲವಂತದಿಂದ ಮಾಡಿಸುತ್ತಲೇ ಇದ್ದರು. ಮೊದಲು ಅವರಿಗೆ ಹುಲ್ಲನ್ನು ಕೊಟ್ಟಿದ್ದಾಗ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಈಗಲೂ ಬಲವಂತದಿಂದ ಮಾಡಿಸಿದರು. 14 ಈಜಿಪ್ಟಿನ ಈ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಆರಿಸಿ ಜನರು ಮಾಡಿದ ಕೆಲಸಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿದರು. ಈಜಿಪ್ಟಿನ ಅಧಿಕಾರಿಗಳು ಇಬ್ರಿಯ ಮೇಸ್ತ್ರಿಗಳನ್ನು ಹೊಡೆದು, “ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಯಾಕೆ ಮಾಡುತ್ತಿಲ್ಲ? ಹಿಂದೆ ನೀವು ಮಾಡಲು ಸಾಧ್ಯವಾಗಿದ್ದರೆ, ಈಗಲೂ ನೀವು ಮಾಡಬಹುದು” ಎಂದು ಹೇಳಿದರು.
15 ಆಗ ಇಬ್ರಿಯ ಮೇಸ್ತ್ರಿಗಳು ಫರೋಹನ ಬಳಿಗೆ ಹೋಗಿ, “ನಿನ್ನ ಸೇವಕರಾದ ನಮಗೆ ನೀನು ಯಾಕೆ ಈ ರೀತಿ ಮಾಡುತ್ತಿ? 16 ನೀನು ನಮಗೆ ಹುಲ್ಲು ಕೊಡುವುದಿಲ್ಲ. ಆದರೆ ನಾವು ಮೊದಲು ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕೆಂದು ನಮಗೆ ಅಪ್ಪಣೆಯಾಗಿರುವುದರಿಂದ ನಾವು ಅಧಿಕಾರಿಗಳಿಂದ ಹೊಡೆತ ತಿನ್ನಬೇಕಾಯಿತು. ಹೀಗೆ ನಿನ್ನ ಜನರು ತಪ್ಪು ಮಾಡುತ್ತಿದ್ದಾರೆ” ಎಂದು ದೂರು ಹೇಳಿದರು.
17 ಫರೋಹನು, “ನೀವು ಸೋಮಾರಿಗಳು. ನಿಮಗೆ ಕೆಲಸ ಮಾಡಲು ಇಷ್ಟವಿಲ್ಲ. ಆದ್ದರಿಂದ ನಿಮ್ಮನ್ನು ಹೋಗಗೊಡಿಸಬೇಕೆಂದು ನೀವು ನನ್ನನ್ನು ಕೇಳುತ್ತೀರಿ. ಇಲ್ಲಿಂದ ಹೊರಟುಹೋಗಿ ಯೆಹೋವನಿಗೆ ಯಜ್ಞಗಳನ್ನು ಮಾಡಬೇಕೆಂದು ಅಪೇಕ್ಷಿಸುತ್ತೀರಿ. 18 ಈಗ ನಿಮ್ಮ ಕೆಲಸಕ್ಕೆ ಹೋಗಿರಿ! ನಾವು ನಿಮಗೆ ಹುಲ್ಲನ್ನು ಕೊಡುವುದಿಲ್ಲ. ಆದರೆ ನೀವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ಮಾಡಬೇಕು” ಎಂದು ಉತ್ತರಿಸಿದನು.
19 ಇಬ್ರಿಯ ಮೇಸ್ತ್ರಿಗಳಿಗೆ ತಾವು ತೊಂದರೆಯಲ್ಲಿದ್ದೇವೆಂದು ತಿಳಿಯಿತು. ತಾವು ಹಿಂದೆ ಮಾಡುತ್ತಿದ್ದಷ್ಟೇ ಇಟ್ಟಿಗೆಗಳನ್ನು ತಮ್ಮಿಂದ ಮಾಡಲಾಗುವುದಿಲ್ಲವೆಂದು ಅವರಿಗೆ ಗೊತ್ತಿತ್ತು.
20 ಅವರು ಫರೋಹನನ್ನು ಸಂಧಿಸಿ ಹೊರಟುಹೋಗುವಾಗ ತಮಗಾಗಿ ಕಾಯತ್ತಿದ್ದ ಮೋಶೆ ಆರೋನರನ್ನು ಕಂಡು, 21 “ನಮಗೆ ಹೋಗಲು ಅಪ್ಪಣೆಕೊಡಬೇಕೆಂದು ನೀವು ಫರೋಹನನ್ನು ಕೇಳಿ ನಮಗೆ ಕೆಟ್ಟದ್ದನ್ನು ಮಾಡಿದಿರಿ. ಫರೋಹನು ಮತ್ತು ಅವನ ಅಧಿಕಾರಿಗಳು ನಮ್ಮನ್ನು ದ್ವೇಷಿಸುವಂತೆ ನೀವು ಮಾಡಿದ್ದರಿಂದ ಯೆಹೋವನು ನಿಮಗೆ ತೀರ್ಪು ನೀಡಲಿ. ಅವರು ನಮ್ಮನ್ನು ಕೊಲ್ಲುವುದಕ್ಕೆ ನೀವು ಅವಕಾಶ ಮಾಡಿಕೊಟ್ಟಿರಿ” ಎಂದು ಹೇಳಿದರು.
ಮೋಶೆಯು ದೇವರಿಗೆ ಸಲ್ಲಿಸಿದ ದೂರು
22 ಆಗ ಮೋಶೆಯು ಯೆಹೋವನಿಗೆ ಪ್ರಾರ್ಥಿಸಿ, “ಯೆಹೋವನೇ, ನಿನ್ನ ಜನರಿಗೆ ಈ ಕೇಡನ್ನು ಏಕೆ ಮಾಡಿದೆ? ನನ್ನನ್ನು ಯಾಕೆ ಇಲ್ಲಿಗೆ ಕಳುಹಿಸಿದೆ? 23 ನಾನು ಫರೋಹನ ಬಳಿಗೆ ಹೋಗಿ ನೀನು ಹೇಳಿದ್ದನ್ನೇ ತಿಳಿಸಿದೆ. ಆದರೆ ಅಂದಿನಿಂದ ಅವನು ಜನರನ್ನು ಕೀಳಾಗಿ ಕಾಣುತ್ತಿದ್ದಾನೆ. ಅಲ್ಲದೆ ನೀನೂ ನಿನ್ನ ಜನರಿಗೆ ಸಹಾಯ ಮಾಡುತ್ತಿಲ್ಲ” ಅಂದನು.
ಯೇಸುವಿನೊಂದಿಗಿದ್ದ ಜನರು
8 ಮರುದಿನ, ಯೇಸು ಕೆಲವು ನಗರಗಳ ಮತ್ತು ಊರುಗಳ ಮೂಲಕ ಪ್ರಯಾಣ ಮಾಡಿ ಜನರಿಗೆ ಬೋಧಿಸಿದನು ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಿದನು. ಹನ್ನೆರಡು ಮಂದಿ ಅಪೊಸ್ತಲರು ಆತನೊಡನೆ ಇದ್ದರು. 2 ಕೆಲವು ಸ್ತ್ರೀಯರೂ ಆತನೊಡನೆ ಇದ್ದರು. ಈ ಸ್ತ್ರೀಯರು ಆತನಿಂದ ತಮ್ಮ ಕಾಯಿಲೆಗಳಿಂದ ಗುಣಹೊಂದಿದವರೂ ದೆವ್ವಗಳ ಕಾಟದಿಂದ ಬಿಡುಗಡೆ ಹೊಂದಿದವರೂ ಆಗಿದ್ದರು. ಈ ಸ್ತ್ರೀಯರಲ್ಲಿ ಒಬ್ಬಳ ಹೆಸರು ಮರಿಯಳು. ಆಕೆ ಮಗ್ದಲ ಎಂಬ ಊರಿನವಳು. ಯೇಸು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದನು. 3 ಇದಲ್ಲದೆ ಕೂಜನ (ಹೆರೋದನ ಸಹಾಯಕ) ಹೆಂಡತಿಯಾದ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕ ಸ್ತ್ರೀಯರು ಇದ್ದರು. ಈ ಸ್ತ್ರೀಯರು ಯೇಸುವಿಗೂ ಆತನ ಅಪೊಸ್ತಲರಿಗೂ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದರು.
ಯೇಸು ಹೇಳಿದ ಬೀಜ ಬಿತ್ತುವವನ ಸಾಮ್ಯ
(ಮತ್ತಾಯ 13:1-17; ಮಾರ್ಕ 4:1-12)
4 ಅನೇಕ ಜನರು ಊರೂರುಗಳಿಂದ ಯೇಸುವಿನ ಬಳಿಗೆ ಸೇರಿಬಂದರು. ಆಗ ಯೇಸು ಅವರಿಗೆ ಈ ಸಾಮ್ಯ ಹೇಳಿದನು:
5 “ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು. 6 ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವುಗಳು ಮೊಳೆಯತೊಡಗಿದರೂ ನೀರಿಲ್ಲದೆ ಒಣಗಿಹೋದವು. 7 ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯೆ ಬಿದ್ದವು. ಅವುಗಳು ಮೊಳೆತರೂ ಮುಳ್ಳುಗಿಡಗಳಿಂದ ಬೆಳೆಯಲಾಗಲಿಲ್ಲ. 8 ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಮೊಳೆತು ಬೆಳೆದು ನೂರರಷ್ಟು ಹೆಚ್ಚು ಫಲವನ್ನು ಕೊಟ್ಟವು.”
ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ಮೇಲೆ, “ನನ್ನ ಮಾತನ್ನು ಆಲಿಸುತ್ತಿರುವ ಜನರೇ, ಕೇಳಿರಿ” ಎಂದು ಹೇಳಿದನು.
9 ಶಿಷ್ಯರು ಆತನಿಗೆ, “ಈ ಸಾಮ್ಯದ ಅರ್ಥವೇನು?” ಎಂದು ಕೇಳಿದರು.
10 ಯೇಸು, “ನೀವು ದೇವರ ರಾಜ್ಯದ ಗುಟ್ಟುಗಳನ್ನು ತಿಳಿದುಕೊಳ್ಳಬೇಕೆಂದು ನಿಮ್ಮನ್ನು ಆರಿಸಿಕೊಳ್ಳಲಾಗಿದೆ. ಆದರೆ ಬೇರೆ ಜನರೊಂದಿಗೆ ನಾನು ಸಾಮ್ಯಗಳ ಮೂಲಕ ಮಾತಾಡುತ್ತೇನೆ, ಏಕೆಂದರೆ,
‘ಅವರು ನೋಡಿದರೂ ಕಾಣುವುದಿಲ್ಲ,
ಕೇಳಿದರೂ ಗ್ರಹಿಸಿಕೊಳ್ಳುವುದಿಲ್ಲ.’(A)
ಬೀಜಗಳ ಕುರಿತು ಯೇಸು ಕೊಟ್ಟ ವಿವರಣೆ
(ಮತ್ತಾಯ 13:18-23; ಮಾರ್ಕ 4:13-20)
11 “ಈ ಸಾಮ್ಯದ ಅರ್ಥ ಹೀಗಿದೆ: ಬೀಜವು ದೇವರ ವಾಕ್ಯ. 12 ಕಾಲ್ದಾರಿಯಲ್ಲಿ ಬಿದ್ದ ಬೀಜವೆಂದರೇನು? ದೇವರ ವಾಕ್ಯವನ್ನು ಕೆಲವರು ಕೇಳುತ್ತಾರೆ. ಆದರೆ ಸೈತಾನನು ಬಂದು ಅವರ ಹೃದಯದೊಳಗಿಂದ ಆ ವಾಕ್ಯವನ್ನು ತೆಗೆದುಬಿಡುತ್ತಾನೆ. ಅವರು ಆ ವಾಕ್ಯವನ್ನು ನಂಬದಿರುವುದರಿಂದ ರಕ್ಷಣೆಯನ್ನು ಹೊಂದಲಾರರು. 13 ಬಂಡೆಯ ಮೇಲೆ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯ ಕೇಳಿ ಸಂತೋಷದಿಂದ ಸ್ವೀಕರಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಆಳವಾದ ಬೇರುಗಳಿರುವುದಿಲ್ಲ. ಅವರು ಸ್ವಲ್ಪಕಾಲ ಮಾತ್ರವೇ ನಂಬುತ್ತಾರೆ. ಬಳಿಕ ತೊಂದರೆಯೇನಾದರೂ ಬಂದರೆ ತಮ್ಮ ನಂಬಿಕೆಯನ್ನು ಕಳೆದುಕೊಂಡು ದೇವರಿಂದ ದೂರ ಸರಿಯುತ್ತಾರೆ.
14 “ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯಲಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು. 15 ಒಳ್ಳೆಯ ನೆಲದಲ್ಲಿ ಬಿದ್ದ ಬೀಜವೆಂದರೇನು? ಒಳ್ಳೆಯದಾದ ಮತ್ತು ಯಥಾರ್ಥವಾದ ಹೃದಯದಿಂದ ದೇವರ ವಾಕ್ಯವನ್ನು ಕೇಳುವ ಜನರೇ ಬೀಜಬಿದ್ದ ಒಳ್ಳೆಯ ನೆಲವಾಗಿದ್ದಾರೆ. ಅವರು ದೇವರ ವಾಕ್ಯಕ್ಕೆ ವಿಧೇಯರಾಗಿ ತಾಳ್ಮೆಯಿಂದ ಒಳ್ಳೆಯ ಫಲವನ್ನು ನೀಡುವರು.
ನಿಮ್ಮ ತಿಳುವಳಿಕೆಯನ್ನು ಉಪಯೋಗಿಸಿರಿ
(ಮಾರ್ಕ 4:21-25)
16 “ಯಾವ ವ್ಯಕ್ತಿಯೂ ದೀಪವನ್ನು ಹಚ್ಚಿ ಅದನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಬಚ್ಚಿಡುವುದಿಲ್ಲ. ಮನೆಯೊಳಗೆ ಬರುವವರಿಗೆ ಸಾಕಷ್ಟು ಬೆಳಕು ದೊರೆಯಲಿ ಎಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾನೆ. 17 ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ; ಬಯಲಿಗೆ ಬಾರದ ಯಾವ ಗುಟ್ಟೂ ಇಲ್ಲ. 18 ಆದ್ದರಿಂದ ನೀವು ಕಿವಿಗೊಡುವಾಗ ಜಾಗರೂಕರಾಗಿರಿ; ಸ್ವಲ್ಪ ತಿಳುವಳಿಕೆ ಇರುವ ವ್ಯಕ್ತಿಯು ಹೆಚ್ಚು ತಿಳುವಳಿಕೆಯನ್ನು ಹೊಂದುವನು. ಆದರೆ ತಿಳುವಳಿಕೆ ಇಲ್ಲದ ವ್ಯಕ್ತಿಯು ತನಗಿದೆ ಎಂದುಕೊಂಡಿದ್ದ ತಿಳುವಳಿಕೆಯನ್ನೂ ಕಳೆದುಕೊಳ್ಳುವನು” ಎಂದು ಹೇಳಿದನು.
ಯೇಸುವಿನ ಶಿಷ್ಯರೇ ಆತನ ಕುಟುಂಬದವರು
(ಮತ್ತಾಯ 12:46-50; ಮಾರ್ಕ 3:31-35)
19 ಯೇಸುವಿನ ತಾಯಿ ಮತ್ತು ತಮ್ಮಂದಿರು ಆತನನ್ನು ಭೇಟಿಯಾಗಲು ಬಂದರು. ಅಲ್ಲಿ ಬಹಳ ಜನರು ಇದ್ದುದರಿಂದ ಯೇಸುವಿನ ತಾಯಿಯಾಗಲಿ ಆತನ ತಮ್ಮಂದಿರಾಗಲಿ ಆತನ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಒಬ್ಬನು, 20 “ನಿನ್ನ ತಾಯಿ ಮತ್ತು ತಮ್ಮಂದಿರು ಹೊರಗೆ ನಿಂತಿದ್ದಾರೆ. ಅವರು ನಿನ್ನನ್ನು ನೋಡಬೇಕೆಂದಿದ್ದಾರೆ” ಎಂದು ಯೇಸುವಿಗೆ ತಿಳಿಸಿದನು.
21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು!” ಎಂದು ಉತ್ತರಕೊಟ್ಟನು.
ಯೇಸುವಿನ ಶಕ್ತಿಯನ್ನು ಶಿಷ್ಯರು ಕಂಡರು
(ಮತ್ತಾಯ 8:23-27; ಮಾರ್ಕ 4:35-41)
22 ಒಂದು ದಿನ ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಹತ್ತಿ ಕುಳಿತುಕೊಂಡರು. ಯೇಸು ಅವರಿಗೆ, “ನಾವು ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. ಅಂತೆಯೇ ಅವರು ಆಚೆದಡಕ್ಕೆ ಹೊರಟರು. 23 ಅವರು ಸರೋವರದ ಮೇಲೆ ದೋಣಿಯಲ್ಲಿ ಹೋಗುತ್ತಿರುವಾಗ ಯೇಸುವಿಗೆ ನಿದ್ದೆ ಹತ್ತಿತು. ಇತ್ತ ಸರೋವರದ ಮೇಲೆ ಬಿರುಗಾಳಿ ಬೀಸತೊಡಗಿತು. ದೋಣಿಯೊಳಗೆ ನೀರು ತುಂಬತೊಡಗಿತು. ದೋಣಿಯಲ್ಲಿದ್ದವರೆಲ್ಲರೂ ಅಪಾಯಕ್ಕೀಡಾದರು. 24 ಆಗ ಶಿಷ್ಯರು ಯೇಸುವಿನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಗುರುವೇ! ಗುರುವೇ! ನಾವು ಮುಳುಗಿಹೋಗುತ್ತಿದ್ದೇವೆ!” ಎಂದು ಹೇಳಿದರು.
ಕೂಡಲೇ ಯೇಸು ಎದ್ದು, ಆ ಗಾಳಿಗೂ ತೆರೆಗಳಿಗೂ ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತಿತು ಮತ್ತು ಸರೋವರ ಶಾಂತವಾಯಿತು. 25 ಯೇಸು ತನ್ನ ಶಿಷ್ಯರಿಗೆ, “ಎಲ್ಲಿ ಹೋಯಿತು ನಿಮ್ಮ ನಂಬಿಕೆ?” ಎಂದು ಕೇಳಿದನು.
ಶಿಷ್ಯರು ಭಯಪಟ್ಟರು ಮತ್ತು ವಿಸ್ಮಯಗೊಂಡರು. “ಈತನು ಯಾರಿರಬಹುದು? ಈತನು ಗಾಳಿಗೂ ನೀರಿಗೂ ಆಜ್ಞಾಪಿಸುತ್ತಾನೆ. ಅವು ವಿಧೇಯವಾಗುತ್ತವೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯ
(ಮತ್ತಾಯ 8:28-34; ಮಾರ್ಕ 5:1-20)
26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು. 27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು.
28-29 ದೆವ್ವವು ಅವನನ್ನು ಪದೇಪದೇ ವಶಪಡಿಸಿಕೊಳ್ಳುತ್ತಿತ್ತು. ಆ ಮನುಷ್ಯನನ್ನು ಸೆರೆಮನೆಗೆ ಹಾಕಿ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿದರೂ ಅವನು ಅವುಗಳನ್ನು ಕಿತ್ತೊಗೆದುಬಿಡುತ್ತಿದ್ದನು. ಅವನೊಳಗಿದ್ದ ದೆವ್ವವು ಅವನನ್ನು ಜನರಿಲ್ಲದ ಸ್ಥಳಗಳಿಗೆ ಬಲವಂತವಾಗಿ ಕೊಂಡೊಯ್ಯುತ್ತಿತ್ತು. ಯೇಸು ಆ ದೆವ್ವಕ್ಕೆ, “ಅವನನ್ನು ಬಿಟ್ಟು ಹೋಗು” ಎಂದು ಆಜ್ಞಾಪಿಸಿದನು. ಆ ಮನುಷ್ಯನು ಯೇಸುವಿನ ಮುಂದೆ ಅಡ್ಡಬಿದ್ದು ಗಟ್ಟಿಯಾದ ಸ್ವರದಿಂದ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನಿಂದ ನಿನಗೇನಾಗಬೇಕಾಗಿದೆ? ದಯಮಾಡಿ ನನ್ನನ್ನು ದಂಡಿಸಬೇಡ!” ಎಂದು ಕೂಗಿದನು.
30 “ನಿನ್ನ ಹೆಸರೇನು?” ಎಂದು ಯೇಸು ಕೇಳಿದನು.
“ದಂಡು” ಎಂದು ಅವನು ಉತ್ತರಿಸಿದನು. (ಏಕೆಂದರೆ ಅವನೊಳಗೆ ಅನೇಕ ದೆವ್ವಗಳು ಸೇರಿಕೊಂಡಿದ್ದವು.) 31 ತಮ್ಮನ್ನು ಪಾತಾಳಕ್ಕೆ ಕಳುಹಿಸಕೂಡದೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. 32 ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂದಿಗಳ ಒಂದು ದೊಡ್ಡ ಗುಂಪು ಮೇಯುತ್ತಿತ್ತು. ಹಂದಿಗಳೊಳಗೆ ಹೋಗಲು ತಮಗೆ ಅನುಮತಿ ಕೊಡಬೇಕೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು ಅವುಗಳಿಗೆ ಅನುಮತಿಕೊಟ್ಟನು. 33 ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು. ಆ ಕೂಡಲೇ ಹಂದಿಗಳ ಗುಂಪು ಗುಡ್ಡದ ಕೆಳಗೆ ಓಡಿಹೋಗಿ ಸರೋವರದಲ್ಲಿ ಬಿದ್ದು ಮುಳುಗಿಹೋದವು.
34 ಹಂದಿಗಳನ್ನು ಕಾಯುತ್ತಿದ್ದವರು ಓಡಿಹೋಗಿ, ನಡೆದ ಈ ಸಂಗತಿಯನ್ನು ಹೊಲಗಳಲ್ಲಿಯೂ ಊರುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು. 35 ಅದನ್ನು ನೋಡಲು ಜನರೆಲ್ಲರೂ ಯೇಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿದ್ದುದನ್ನು ಅವರು ನೋಡಿದರು. ಅವನು ಬಟ್ಟೆಗಳನ್ನು ಹಾಕಿಕೊಂಡಿದ್ದನು; ಸ್ವಸ್ಥಬುದ್ಧಿಯುಳ್ಳವನಾಗಿದ್ದನು. ದೆವ್ವಗಳು ಅವನನ್ನು ಬಿಟ್ಟುಹೋಗಿದ್ದವು. ಜನರಿಗೆ ಭಯವಾಯಿತು. 36 ಯೇಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದ್ದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು. 37 ಜನರು ಯೇಸುವಿಗೆ, “ನೀನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಗೊಂಡಿದ್ದರು.
ಆದ್ದರಿಂದ ಯೇಸು ದೋಣಿಯನ್ನು ಹತ್ತಿ ಮತ್ತೆ ಗಲಿಲಾಯಕ್ಕೆ ಹಿಂತಿರುಗಿದನು. 38 ದೆವ್ವಗಳಿಂದ ಬಿಡುಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಹೋಗು,” ಎಂದು ಕೇಳಿಕೊಂಡನು. 39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು.
ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.
ಸತ್ತುಹೋಗಿದ್ದ ಹುಡುಗಿಗೆ ಜೀವದಾನ ಮತ್ತು ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ
(ಮತ್ತಾಯ 9:18-26; ಮಾರ್ಕ 5:21-43)
40 ಯೇಸು ಗಲಿಲಾಯಕ್ಕೆ ಹಿಂತಿರುಗಿದಾಗ ಜನರು ಆತನನ್ನು ಸ್ವಾಗತಿಸಿದರು. ಪ್ರತಿಯೊಬ್ಬರೂ ಆತನಿಗಾಗಿ ಕಾಯುತ್ತಿದ್ದರು. 41 ಯಾಯಿರನೆಂಬ ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದನು. ಅವನು ಸಭಾಮಂದಿರದ ಅಧಿಕಾರಿಯಾಗಿದ್ದನು. ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. 42 ಅವನಿಗೆ ಒಬ್ಬಳೇ ಮಗಳಿದ್ದಳು. ಆಕೆಗೆ ಹನೆರಡು ವರ್ಷ ವಯಸ್ಸಾಗಿತ್ತು. ಆಕೆಯು ಸಾಯುವ ಸ್ಥಿತಿಯಲ್ಲಿದ್ದಳು.
ಯೇಸುವು ಯಾಯಿರನ ಮನೆಗೆ ಹೋಗುತ್ತಿದ್ದಾಗ ಜನರು ಆತನ ಸುತ್ತಲೂ ಸೇರಿಬಂದರು. 43 ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿದ್ದ ಸ್ತ್ರೀಯೊಬ್ಬಳು ಅಲ್ಲಿದ್ದಳು. ಆಕೆ ತನ್ನಲ್ಲಿದ್ದ ಹಣವನ್ನೆಲ್ಲಾ ವೈದ್ಯರಿಗೆ ಖರ್ಚು ಮಾಡಿದ್ದಳು. ಆದರೆ ಯಾವ ವೈದ್ಯನಿಗೂ ಆಕೆಯನ್ನು ವಾಸಿಮಾಡಲು ಸಾಧ್ಯವಾಗಿರಲಿಲ್ಲ. 44 ಆ ಸ್ತ್ರೀಯು ಯೇಸುವಿನ ಹಿಂದೆ ಬಂದು ಆತನ ನಿಲುವಂಗಿಯ ಕೆಳಭಾಗವನ್ನು ಮುಟ್ಟಿದಳು. ಆ ಕ್ಷಣವೇ ಆಕೆಯ ರಕ್ತಸ್ರಾವ ನಿಂತುಹೋಯಿತು. 45 ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.
ಜನರೆಲ್ಲರೂ ತಾವು ಮುಟ್ಟಲಿಲ್ಲವೆಂದು ಹೇಳುತ್ತಿರಲು ಪೇತ್ರನು, “ಗುರುವೇ, ಇಷ್ಟೊಂದು ಜನರು ಮೇಲೆ ಬೀಳುತ್ತಾ ನಿನ್ನನ್ನು ನೂಕುತ್ತಿದ್ದಾರಲ್ಲಾ” ಎಂದನು.
46 ಅದಕ್ಕೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು! ನನ್ನಿಂದ ಶಕ್ತಿ ಹೊರಟದ್ದು ನನಗೆ ತಿಳಿಯಿತು” ಎಂದು ಹೇಳಿದನು. 47 ಇನ್ನು ತಾನು ಅಡಗಿಕೊಂಡಿರಲು ಸಾಧ್ಯವಿಲ್ಲವೆಂದು ತಿಳಿದುಕೊಂಡ ಆ ಸ್ತ್ರೀಯು ನಡುಗುತ್ತಾ ಆತನ ಮುಂದೆ ಬಂದು ಅಡ್ಡಬಿದ್ದು ತಾನು ಮುಟ್ಟಿದ್ದಕ್ಕೆ ಕಾರಣವನ್ನು ಎಲ್ಲರ ಎದುರಿನಲ್ಲಿ ತಿಳಿಸಿದಳು. ಅಲ್ಲದೆ ಆತನನ್ನು ಮುಟ್ಟಿದಾಕ್ಷಣವೇ ತನಗೆ ವಾಸಿಯಾಯಿತೆಂದು ಹೇಳಿದಳು. 48 ಯೇಸು ಆಕೆಗೆ, “ಮಗಳೇ, ನೀನು ನಂಬಿದ್ದರಿಂದ ನಿನಗೆ ಸ್ವಸ್ಥವಾಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.
49 ಯೇಸು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿರದ ಅಧಿಕಾರಿಯ (ಯಾಯಿರನ) ಮನೆಯಿಂದ ಒಬ್ಬ ವ್ಯಕ್ತಿ ಬಂದು, “ನಿನ್ನ ಮಗಳು ಸತ್ತುಹೋದಳು! ಈಗ ಬೋಧಕನಿಗೆ (ಯೇಸುವಿಗೆ) ತೊಂದರೆ ಕೊಡಬೇಡ” ಎಂದು ಹೇಳಿದನು.
50 ಯೇಸು ಇದನ್ನು ಕೇಳಿ ಯಾಯಿರನಿಗೆ, “ಭಯಪಡಬೇಡ. ನಂಬಿಕೆಯೊಂದಿರಲಿ. ನಿನ್ನ ಮಗಳಿಗೆ ಗುಣವಾಗುವುದು” ಎಂದು ಹೇಳಿದನು.
51 ಯೇಸು ಯಾಯಿರನ ಮನೆಗೆ ಹೋದನು. ಪೇತ್ರ, ಯೋಹಾನ, ಯಾಕೋಬ ಮತ್ತು ಹುಡುಗಿಯ ತಂದೆತಾಯಿಗಳಿಗೆ ಮಾತ್ರ ತನ್ನೊಂದಿಗೆ ಬರಲು ಅನುಮತಿಕೊಟ್ಟನು. ಬೇರೆ ಯಾರೂ ಒಳಗೆ ಬರಕೂಡದೆಂದು ಯೇಸು ತಿಳಿಸಿದನು. 52 ಸತ್ತುಹೋದ ಆ ಬಾಲಕಿಗಾಗಿ ಜನರೆಲ್ಲರೂ ದುಃಖದಿಂದ ಗೋಳಾಡುತ್ತಿದ್ದರು. ಆದರೆ ಯೇಸು ಅವರಿಗೆ, “ಅಳಬೇಡಿ, ಆಕೆ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ” ಎಂದನು.
53 ಆಗ ಜನರು ಯೇಸುವನ್ನು ಗೇಲಿಮಾಡಿದರು. ಏಕೆಂದರೆ ಆ ಹುಡುಗಿ ಸತ್ತುಹೋದಳೆಂದು ಅವರಿಗೆ ಖಂಡಿತವಾಗಿ ತಿಳಿದಿತ್ತು. 54 ಆದರೆ ಯೇಸು ಆಕೆಯ ಕೈಯನ್ನು ಹಿಡಿದು, “ಮಗು, ಎದ್ದೇಳು!” ಎಂದನು. 55 ಆ ಕೂಡಲೇ ಆಕೆಗೆ ಜೀವ ಬಂದಿತು. ಆಕೆ ಎದ್ದುನಿಂತುಕೊಂಡಳು. ಯೇಸು ಅವರಿಗೆ, “ಆಕೆಗೆ ತಿನ್ನಲು ಏನಾದರೂ ಕೊಡಿರಿ” ಎಂದು ಹೇಳಿದನು. 56 ಬಾಲಕಿಯ ತಂದೆತಾಯಿಗಳು ಬೆರಗಾದರು. ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.
ಎಲೀಫಜನ ಉತ್ತರ
22 ಬಳಿಕ ತೇಮಾನ್ ಪಟ್ಟಣದ ಎಲೀಫಜನು ಉತ್ತರಕೊಟ್ಟನು:
2 “ಯಾವನೂ ದೇವರಿಗೆ ಸಹಾಯಮಾಡಲಾರನು.
ಮಹಾ ಜ್ಞಾನಿಯು ಸಹ ದೇವರಿಗೆ ಉಪಯುಕ್ತನಾಗಲಾರನು.
3 ನಿನ್ನ ನಡತೆಯು ಒಳ್ಳೆಯದಾಗಿದ್ದರೆ, ಅದರಿಂದ ದೇವರಿಗೆ ಸಹಾಯವಾಗುವುದೇ? ಇಲ್ಲ.
ನೀನು ನೀತಿವಂತನಾಗಿದ್ದರೆ ಸರ್ವಶಕ್ತನಾದ ದೇವರಿಗೆ ಅದರಿಂದೇನಾದರೂ ಲಾಭವಾಗುವುದೇ?
4 ನಿನ್ನ ಆರಾಧನೆಯ ದೆಸೆಯಿಂದ
ದೇವರು ನಿನ್ನ ಮೇಲೆ ಆರೋಪ ಹೊರಿಸಿ ದಂಡಿಸುವನೇ? ಇಲ್ಲ!
5 ನಿನ್ನ ಪಾಪವು ಅತಿಯಾಯಿತು!
ಯೋಬನೇ, ನೀನು ಪಾಪಮಾಡುವುದನ್ನು ನಿಲ್ಲಿಸಲೇ ಇಲ್ಲ.
6 ಯೋಬನೇ, ನೀನು ನಿಷ್ಕಾರಣವಾಗಿ ನಿನ್ನ ಸಹೋದರರ ವಸ್ತುಗಳನ್ನು ಒತ್ತೆಯಿಟ್ಟುಕೊಂಡು ಸಾಲ ಕೊಟ್ಟಿರಬಹುದು.
ಜನರ ಬಟ್ಟೆಗಳನ್ನು ತೆಗೆದುಕೊಂಡು ಅವರನ್ನು ಬೆತ್ತಲೆ ಮಾಡಿರಬಹುದು.
7 ಆಯಾಸಗೊಂಡವರಿಗೆ ನೀರು ಕೊಡದೆ
ಹಸಿದವರಿಗೆ ಊಟ ಕೊಡದೆಹೋಗಿರಬಹುದು.
8 ಯೋಬನೇ, ಬಲಿಷ್ಠನಾಗಿದ್ದ ನಿನ್ನಲ್ಲಿ ಬೇಸಾಯಕ್ಕೆ ಬಹಳ ಭೂಮಿಯಿದೆ.
ಅಲ್ಲದೆ ಜನರು ಸಹ ನಿನ್ನನ್ನು ಗೌರವಿಸುತ್ತಿದ್ದರು.
9 ಆದರೆ ವಿಧವೆಯರಿಗೆ ದಾನಮಾಡದೆ ಅವರನ್ನು ನೀನು ಕಳುಹಿಸಿಬಿಟ್ಟಿರಬಹುದು.
ಒಂದುವೇಳೆ ನೀನು ಅನಾಥರಿಗೆ ಮೋಸಮಾಡಿರಬಹುದು.
10 ಆದಕಾರಣ ನಿನ್ನ ಸುತ್ತಲೆಲ್ಲಾ ಉರುಲುಗಳಿವೆ;
ಫಕ್ಕನೆ ಬರುವ ವಿಪತ್ತು ನಿನ್ನನ್ನು ಭಯಗೊಳಿಸುವುದು.
11 ಆದಕಾರಣ ನಿನಗೆ ಏನೂ ಕಾಣಲಾಗದಷ್ಟು ಕತ್ತಲಾಗಿದೆ,
ಪ್ರವಾಹದ ನೀರು ನಿನ್ನನ್ನು ಆವರಿಸಿಕೊಂಡಿದೆ.
12 “ದೇವರು ಅತ್ಯುನ್ನತವಾದ ಪರಲೋಕದಲ್ಲಿ ವಾಸಿಸುತ್ತಾನೆ.
ಆತನು ಅತ್ಯಂತ ಎತ್ತರದಲ್ಲಿರುವ ನಕ್ಷತ್ರಗಳನ್ನು ಬಗ್ಗಿ ನೋಡುವನು.
ನಕ್ಷತ್ರಗಳು ಎಷ್ಟು ಎತ್ತರದಲ್ಲಿವೆ ಎಂಬುದನ್ನು ನೀನು ನೋಡಬಲ್ಲೆ.
13 ನೀನಾದರೋ, ‘ದೇವರಿಗೆ ಗೊತ್ತಿರುವುದೇನು?
ಕಾರ್ಮೋಡಗಳ ಆಚೆಯಿಂದ ನಮಗೆ ನ್ಯಾಯತೀರಿಸಬಲ್ಲನೇ?
14 ದಟ್ಟವಾದ ಮೋಡಗಳು ಆತನನ್ನು ಮುಚ್ಚಿಕೊಂಡಿವೆ.
ಆಕಾಶದ ಮೇಲ್ಗಡೆಯಲ್ಲಿ ನಡೆದಾಡುವ ಆತನು ನಮ್ಮನ್ನು ಕಾಣಲಾರನು’ ಎಂದು ಹೇಳುತ್ತಿರುವೆ.
15 “ಯೋಬನೇ, ದುಷ್ಟರು ನಡೆಯುವ ಹಳೆದಾರಿಯ ಮೇಲೆ
ನೀನು ನಡೆಯುತ್ತಲೇ ಇರುವಿಯೋ?
16 ಆ ದುಷ್ಟರಿಗೆ ಅಕಾಲಮರಣವು ಬಂದಿತು.
ಪ್ರವಾಹದಲ್ಲಿನ ಕಟ್ಟಡದಂತೆ ಅವರು ಕೊಚ್ಚಿಕೊಂಡು ಹೋದರು.
17 ಅವರು ದೇವರಿಗೆ, ‘ನಮ್ಮಿಂದ ತೊಲಗಿಹೋಗು;
ಸರ್ವಶಕ್ತನಾದ ದೇವರು ನಮಗೇನೂ ಮಾಡಲಾರನು!’ ಎಂದು ಹೇಳಿದ್ದರು.
18 ಆದರೆ ದೇವರು ಅವರ ಮನೆಗಳನ್ನು ಐಶ್ವರ್ಯದಿಂದ ತುಂಬಿಸಿದನು.
ಅಬ್ಬಾ! ದುಷ್ಟರ ಆಲೋಚನೆಯನ್ನು ನಾನು ಅನುಸರಿಸಲಾರೆ.
19 ದುಷ್ಟರ ನಾಶನವನ್ನು ಕಂಡು ನೀತಿವಂತರು ಸಂತೋಷಪಡುವರು.
ನಿರಪರಾಧಿಗಳು ದುಷ್ಟರನ್ನು ಕಂಡು ನಗುತ್ತಾ,
20 ‘ನಮ್ಮ ಶತ್ರುಗಳು ನಾಶವಾದರು!
ಬೆಂಕಿಯು ಅವರ ಐಶ್ವರ್ಯವನ್ನು ಸುಟ್ಟುಹಾಕಿತು!’ ಎಂದು ಹೇಳುವರು.
21 “ಯೋಬನೇ, ಈಗಲಾದರೊ ನಿನ್ನನ್ನು ದೇವರಿಗೆ ಒಪ್ಪಿಸಿಕೊಟ್ಟು ಆತನೊಂದಿಗೆ ಸಮಾಧಾನ ಮಾಡಿಕೊ,
ಆಗ ನೀನು ಆಶೀರ್ವಾದವನ್ನು ಹೊಂದಿಕೊಂಡು ಅಭಿವೃದ್ಧಿಯಾಗುವೆ.
22 ಆತನ ಉಪದೇಶವನ್ನು ಸ್ವೀಕರಿಸಿಕೊ.
ಆತನ ವಾಕ್ಯಗಳನ್ನು ನಿನ್ನ ಹೃದಯದಲ್ಲಿಟ್ಟುಕೊ.
23 ಯೋಬನೇ, ನೀನು ಸರ್ವಶಕ್ತನಾದ ದೇವರಿಗೆ ಅಭಿಮುಖನಾಗಿ
ನಿನ್ನ ಮನೆಯಲ್ಲಿರುವ ಪಾಪವನ್ನು ನಿರ್ಮೂಲಮಾಡಿದರೆ ಉದ್ಧಾರವಾಗುವೆ.
24 ನೀನು ಚಿನ್ನವನ್ನು ಧೂಳೆಂದು ಪರಿಗಣಿಸಬೇಕು.
ನೀನು ಓಫೀರ್ ದೇಶದ ಚಿನ್ನವನ್ನು ನದಿಗಳ ದಂಡೆಯ ಮೇಲಿರುವ ಕಲ್ಲುಗಳಂತೆ ಪರಿಗಣಿಸಬೇಕು.
25 ಆಗ ಸರ್ವಶಕ್ತನಾದ ದೇವರು ನಿನ್ನ ಪಾಲಿಗೆ ಬಂಗಾರವಾಗಿಯೂ
ಬೆಳ್ಳಿಯ ರಾಶಿಗಳಾಗಿಯೂ ಇರುವನು.
26 ನೀನು ಸರ್ವಶಕ್ತನಾದ ದೇವರಲ್ಲಿ ಆನಂದಿಸುವೆ.
ದೇವರ ಕಡೆಗೆ ಕಣ್ಣೆತ್ತಿ ನೋಡುವೆ.
27 ನೀನು ಪ್ರಾರ್ಥಿಸುವೆ, ಆತನು ನಿನಗೆ ಕಿವಿಗೊಡುವನು;
ಆತನಿಗೆ ನಿನ್ನ ಹರಕೆಗಳನ್ನು ಸಲ್ಲಿಸುವೆ.
28 ನಿನ್ನ ಕಾರ್ಯಗಳೆಲ್ಲಾ ಜಯಪ್ರಧವಾಗುವುದು;
ನಿನ್ನ ಭವಿಷ್ಯತ್ತು ಪ್ರಕಾಶಮಾನವಾಗುವುದು;
29 ದೇವರು ಅಹಂಕಾರಿಗಳನ್ನು ನಾಚಿಕೆಗೀಡುಮಾಡುವನು,
ದೀನರಿಗಾದರೋ ಸಹಾಯಮಾಡುವನು.
30 ನಿರಪರಾಧಿಗಳನ್ನು ರಕ್ಷಿಸುವನು.
ನೀನು ಪರಿಶುದ್ಧನಾಗಿರುವುದರಿಂದ ನಿನ್ನ ಪ್ರಾರ್ಥನೆಗೆ ಉತ್ತರವಾಗಿ ಆತನು ಅವರನ್ನು ಕ್ಷಮಿಸುವನು.”
ಪೌಲನು ಉಪಯೋಗಿಸಿಲ್ಲದ ಹಕ್ಕುಗಳು
9 ನಾನು ಸ್ವತಂತ್ರನಾಗಿದ್ದೇನೆ; ಅಪೊಸ್ತಲನಾಗಿದ್ದೇನೆ; ನಮ್ಮ ಪ್ರಭುವಾದ ಯೇಸುವನ್ನು ನೋಡಿದ್ದೇನೆ. ನಾನು ಪ್ರಭುವಿನಲ್ಲಿ ಮಾಡಿದ ಸೇವೆಯ ಫಲವು ನೀವೇ ಆಗಿದ್ದೀರಿ. 2 ಇತರ ಜನರು ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳದಿರಬಹುದು. ಆದರೆ ನೀವಂತೂ ಖಂಡಿತವಾಗಿ ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳುವಿರಿ. ನಾನು ಪ್ರಭುವಿನಲ್ಲಿ ಅಪೊಸ್ತಲನಾಗಿದ್ದೇನೆ ಎಂಬುದಕ್ಕೆ ನೀವೇ ಆಧಾರವಾಗಿದ್ದೀರಿ.
3 ಕೆಲವು ಜನರು ನಮ್ಮನ್ನು ವಿಚಾರಣೆ ಮಾಡಲು ಬಯಸುತ್ತಾರೆ. ನಾನು ಅವರಿಗೆ ಕೊಡುವ ಉತ್ತರ ಇಂತಿದೆ: 4 ಊಟಮಾಡುವುದಕ್ಕೆ ಮತ್ತು ಪಾನೀಯಗಳನ್ನು ಕುಡಿಯುವುದಕ್ಕೆ ನಮಗೆ ಹಕ್ಕಿಲ್ಲವೇ? 5 ಕ್ರಿಸ್ತ ವಿಶ್ವಾಸಿಯಾದ ಹೆಂಡತಿಯನ್ನು ನಮ್ಮೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಲು ಉಳಿದ ಅಪೊಸ್ತಲರಂತೆ, ಪ್ರಭುವಿನ ಸಹೋದರರಂತೆ ಮತ್ತು ಕೇಫನಂತೆ ನಮಗೆ ಹಕ್ಕಿಲ್ಲವೇ? 6 ಬಾರ್ನಬನು ಮತ್ತು ನಾನು ಮಾತ್ರ ನಮ್ಮ ಜೀವನಕ್ಕೆ ಬೇಕಾದದ್ದನ್ನು ದುಡಿದು ಸಂಪಾದಿಸಿಕೊಳ್ಳಬೇಕೇ? 7 ಸೈನ್ಯದಲ್ಲಿ ಸೇವೆಮಾಡುವ ಯಾವ ಸೈನಿಕನಾದರೂ ತನಗೆ ತಾನೇ ಸಂಬಳವನ್ನು ಕೊಡುವುದಿಲ್ಲ. ಯಾವ ದ್ರಾಕ್ಷಿತೋಟಗಾರನಾಗಲಿ ತಾನು ಬೆಳೆದ ಹಣ್ಣಿನಲ್ಲಿ ಸ್ವಲ್ಪವನ್ನು ತಿನ್ನದೆ ಇರುವುದಿಲ್ಲ. ಹಸುಗಳನ್ನು ಸಾಕಿದ ಯಾವನೇ ಆಗಲಿ ಅವುಗಳ ಹಾಲಿನಲ್ಲಿ ಸ್ವಲ್ಪವನ್ನು ಕುಡಿಯದೆ ಇರುವುದಿಲ್ಲ.
8 ಇವುಗಳು ಕೇವಲ ಮಾನುಷ ಉದಾಹರಣೆಗಳಲ್ಲ. ದೇವರ ಧರ್ಮಶಾಸ್ತ್ರವೂ ಈ ಸಂಗತಿಗಳನ್ನು ತಿಳಿಸುತ್ತದೆ. 9 “ಕಣ ತುಳಿಯುವ ಎತ್ತು ಧಾನ್ಯ ತಿನ್ನದಂತೆ ಅದರ ಬಾಯನ್ನು ಕಟ್ಟಬೇಡಿ”(A) ಎಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಹೀಗೆ ಹೇಳಿದಾಗ, ಕಣತುಳಿಯುವ ಎತ್ತಿನ ಬಗ್ಗೆ ಮಾತ್ರ ಆತನು ಆಲೋಚಿಸುತ್ತಿದ್ದನೇ? ಇಲ್ಲ! 10 ಆತನು ನಿಜವಾಗಿಯೂ ನಮ್ಮ ಬಗ್ಗೆ ಮಾತಾಡುತ್ತಿದ್ದನು. ಹೌದು, ಪವಿತ್ರ ಗ್ರಂಥವು ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಮತ್ತು ಒಕ್ಕುವವನು ತಮ್ಮ ಕೆಲಸಕ್ಕೆ ಸ್ವಲ್ಪ ಧಾನ್ಯ ದೊರೆಯುತ್ತದೆ ಎಂದು ನಿರೀಕ್ಷಿಸುತ್ತಾರೆ. 11 ನಾವು ನಿಮ್ಮ ಮಧ್ಯದಲ್ಲಿ ಆತ್ಮಿಕ ಬೀಜವನ್ನು ಬಿತ್ತಿದೆವು. ಆದ್ದರಿಂದ ಈ ಜೀವನಕ್ಕೆ ಬೇಕಾದ ದೈನಂದಿನ ಅಗತ್ಯತೆಗಳನ್ನು ನಿಮ್ಮಿಂದ ನಾವು ಪಡೆದುಕೊಳ್ಳಬೇಕು. ಖಂಡಿತವಾಗಿ ಇದು ಹೆಚ್ಚೇನೂ ಅಲ್ಲ. 12 ತಮಗೆ ಅಗತ್ಯವಾದುವುಗಳನ್ನು ನಿಮ್ಮಿಂದ ಪಡೆದುಕೊಳ್ಳಲು ಇತರರಿಗೆ ಹಕ್ಕಿದೆ. ಆದ್ದರಿಂದ ಖಂಡಿತವಾಗಿ ನಮಗೂ ಈ ಹಕ್ಕಿದೆ. ಆದರೆ ನಾವು ಈ ಹಕ್ಕನ್ನು ಉಪಯೋಗಿಸುವುದಿಲ್ಲ. ಕ್ರಿಸ್ತನ ಸುವಾರ್ತೆಗೆ ವಿಧೇಯರಾಗಲು ಯಾರಿಗೂ ತೊಂದರೆ ಆಗಕೂಡದೆಂದು ನಾವು ಪ್ರತಿಯೊಂದನ್ನು ಸಹಿಸಿಕೊಳ್ಳುತ್ತೇವೆ. 13 ದೇವಾಲಯದಲ್ಲಿ ಸೇವೆಮಾಡುವ ಜನರು ದೇವಾಲಯದಿಂದಲೇ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತಾರೆ ಎಂಬುದು ನಿಮಗೆ ನಿಶ್ಚಯವಾಗಿ ತಿಳಿದಿಲ್ಲವೇ? ಯಜ್ಞವೇದಿಕೆಯ ಬಳಿ ಸೇವೆ ಮಾಡುವವರು ಯಜ್ಞವೇದಿಕೆಯ ಮೇಲೆ ಅರ್ಪಿತವಾದದ್ದರಲ್ಲಿ ಸ್ವಲ್ಪಭಾಗವನ್ನು ಪಡೆದುಕೊಳ್ಳುವರು. 14 ಸುವಾರ್ತೆಯನ್ನು ಬೋಧಿಸುವ ಜನರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸುವಾರ್ತೆಯನ್ನು ಬೋಧಿಸುವವರು ತಮಗೆ ಅಗತ್ಯವಾದುವುಗಳನ್ನು ಈ ಸೇವೆಯ ಮೂಲಕ ಪಡೆದುಕೊಳ್ಳಬೇಕೆಂದು ಪ್ರಭುವು ಆಜ್ಞಾಪಿಸಿದ್ದಾನೆ.
15 ಆದರೆ ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಉಪಯೋಗಿಸಲಿಲ್ಲ. ನನಗೆ ಅಗತ್ಯವಾದುವುಗಳನ್ನು ಪಡೆದುಕೊಳ್ಳುವುದಕ್ಕಾಗಿಯೂ ನಾನು ಪ್ರಯತ್ನಿಸುತ್ತಿಲ್ಲ. ನಿಮಗೆ ಇದನ್ನು ಬರೆಯುತ್ತಿರುವ ಉದ್ದೇಶವೂ ಅದಲ್ಲ. ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವನ್ನು ಕಳೆದುಕೊಳ್ಳುವುದಕ್ಕಿಂತ ಸಾಯುವುದೇ ನನಗೆ ಲೇಸು. 16 ಸುವಾರ್ತೆಯನ್ನು ಬೋಧಿಸುತ್ತೇನೆಂಬುದು ಹೆಮ್ಮೆಪಡುವುದಕ್ಕೆ ನನಗಿರುವ ಕಾರಣವಲ್ಲ. ಸುವಾರ್ತೆಯನ್ನು ಬೋಧಿಸುವುದು ನನ್ನ ಕರ್ತವ್ಯವಾಗಿದೆ. ಅದನ್ನು ನಾನು ಮಾಡಲೇಬೇಕು. ನಾನು ಸುವಾರ್ತೆಯನ್ನು ಬೋಧಿಸದಿದ್ದರೆ, ನನ್ನ ಗತಿಯನ್ನು ಏನು ಹೇಳಲಿ! 17 ನಾನು ನನ್ನ ಸ್ವಂತ ಇಷ್ಟದಿಂದ ಸುವಾರ್ತೆಯನ್ನು ಬೋಧಿಸುವುದಾಗಿದ್ದರೆ, ಬಹುಮಾನಕ್ಕೆ ಅರ್ಹನಾಗಿದ್ದೇನೆ. ಆದರೆ ಬೇರೊಂದನ್ನು ಆರಿಸಿಕೊಳ್ಳಲು ನನಗೆ ಅವಕಾಶವೇ ಇಲ್ಲ. ನಾನು ಸುವಾರ್ತೆಯನ್ನು ಸಾರಲೇಬೇಕು. ಇದು ನನಗೆ ಕೊಡಲ್ಪಟ್ಟಿರುವ ಕರ್ತವ್ಯವಷ್ಟೆ. 18 ಹೀಗಿರಲು, ನನಗೆ ಯಾವ ಬಹುಮಾನ ಸಿಕ್ಕುವುದು? ಸುವಾರ್ತೆಯನ್ನು ಉಚಿತವಾಗಿ ಬೋಧಿಸುವುದೊಂದೇ ನನಗೆ ದೊರೆಯುವ ಬಹುಮಾನವಾಗಿದೆ. ಆದ್ದರಿಂದ ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳುವುದಿಲ್ಲ.
19 ನಾನು ಸ್ವತಂತ್ರನಾಗಿದ್ದೇನೆ; ಯಾರ ಅಧೀನದಲ್ಲಿಯೂ ಇಲ್ಲ. ಆದರೆ ನನ್ನಿಂದ ಸಾಧ್ಯವಾದಷ್ಟು ಜನರನ್ನು ರಕ್ಷಣಾ ಮಾರ್ಗಕ್ಕೆ ನಡೆಸಲು ನನ್ನನ್ನು ಎಲ್ಲರಿಗೂ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ. 20 ಯೆಹೂದ್ಯರನ್ನು ರಕ್ಷಣಾಮಾರ್ಗಕ್ಕೆ ತರಲು ಅವರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಾಗಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ಅಧೀನರಾಗಿರುವ ಜನರನ್ನು ರಕ್ಷಣಾಮಾರ್ಗಕ್ಕೆ ತರಬೇಕೆಂದು ಧರ್ಮಶಾಸ್ತ್ರಕ್ಕೆ ಅಧೀನನಾದೆನು. 21 ಧರ್ಮಶಾಸ್ತ್ರವಿಲ್ಲದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಧರ್ಮಶಾಸ್ತ್ರವಿಲ್ಲದ ವ್ಯಕ್ತಿಯಂತಾದೆನು. (ಆದರೆ ನಿಜವಾಗಿಯೂ, ನಾನು ಧರ್ಮಶಾಸ್ತ್ರವಿಲ್ಲದವನಲ್ಲ. ನಾನು ಕ್ರಿಸ್ತನ ಧರ್ಮಶಾಸ್ತ್ರಕ್ಕೆ ಅಧೀನನಾಗಿದ್ದೇನೆ.) 22 ಬಲಹೀನರಾದ ಜನರನ್ನು ರಕ್ಷಣಾಮಾರ್ಗಕ್ಕೆ ನಡೆಸಬೇಕೆಂದು ಅವರಿಗೆ ಬಲಹೀನನಂತಾದೆನು. ಯಾವ ರೀತಿಯಲ್ಲಾದರೂ ರಕ್ಷಣಾ ಮಾರ್ಗಕ್ಕೆ ನಡೆಸಬೇಕೆಂದು ಯಾರ್ಯಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾದೆನು. 23 ಇವುಗಳನ್ನೆಲ್ಲ ಮಾಡುವುದು ಸುವಾರ್ತೆಗಾಗಿಯೇ. ಸುವಾರ್ತೆಯ ಆಶೀರ್ವಾದಗಳಲ್ಲಿ ಪಾಲುಗಾರನಾಗಬೇಕೆಂದು ಇವುಗಳನ್ನೆಲ್ಲ ಮಾಡುತ್ತೇನೆ.
24 ಓಟದ ಸ್ಪರ್ಧೆಯಲ್ಲಿ ಎಲ್ಲಾ ಓಟಗಾರರು ಓಡುತ್ತಾರೆಂಬುದು ನಿಮಗೆ ಗೊತ್ತಿದೆ. ಆದರೆ ಅವರಲ್ಲಿ ಒಬ್ಬನು ಮಾತ್ರ ಬಹುಮಾನವನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದ ಆ ರೀತಿಯಲ್ಲಿ ಓಡಿರಿ; ಗೆಲ್ಲುವುದಕ್ಕಾಗಿ ಓಡಿರಿ. 25 ಪಂದ್ಯಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಪದಕಗಳಿಸಲು ಕಟ್ಟುನಿಟ್ಟಾದ ತರಬೇತಿಯಲ್ಲಿರುತ್ತಾರೆ. ಆದರೆ ಈ ಲೋಕದ ಆ ಪದಕವು ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ನಮ್ಮ ಪದಕವು ಶಾಶ್ವತವಾದದ್ದು. 26 ಆದ್ದರಿಂದ ಗುರಿಯನ್ನು ಹೊಂದಿರುವ ವ್ಯಕ್ತಿಯಂತೆ ಓಡುತ್ತೇನೆ. ಕೇವಲ ಗಾಳಿಯನ್ನು ಗುದ್ದದೆ, ನಿಜವಾಗಿಯೂ ಗುದ್ದಿ ಮುಷ್ಠಿಕಾಳಗ ಮಾಡುವ ವ್ಯಕ್ತಿಯಂತೆ ಹೋರಾಡುತ್ತೇನೆ. 27 ನಾನು ಗುದ್ದುವುದು ನನ್ನ ಸ್ವಂತ ದೇಹವನ್ನೇ. ಇತರ ಜನರಿಗೆ ಬೋಧಿಸಿದ ಮೇಲೆ ಸ್ವತಃ ನಾನೇ ತಿರಸ್ಕೃತನಾಗದಂತೆ ಅದನ್ನು ನನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International