Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 6:12-42

ಸೊಲೊಮೋನನ ಪ್ರಾರ್ಥನೆ

12 ಯಜ್ಞವೇದಿಕೆಯ ಮುಂದೆ ಸೊಲೊಮೋನನು ಇಸ್ರೇಲರ ಜನರೆದುರಿಗೆ ನಿಂತುಕೊಂಡು ತನ್ನ ಕೈಗಳನ್ನೆತ್ತಿಕೊಂಡು ನಿಂತನು. 13 ಸೊಲೊಮೋನನು ಒಂದು ತಾಮ್ರದ ಪೀಠವನ್ನು ತಯಾರಿಸಿದನು. ಅದರ ಉದ್ದ ಐದು ಮೊಳ; ಅಗಲ ಐದು ಮೊಳ; ಎತ್ತರ ಮೂರು ಮೊಳ; ಅದನ್ನು ಪ್ರಾಕಾರದ ಮಧ್ಯದಲ್ಲಿಟ್ಟು ಅದರ ಮೇಲೆ ಇಸ್ರೇಲಿನ ಸರ್ವಜನರ ಮುಂದೆ ಮೊಣಕಾಲೂರಿ ತನ್ನ ಕೈಗಳನ್ನು ಆಕಾಶದ ಕಡೆ ಎತ್ತಿ,

14 “ಇಸ್ರೇಲರ ದೇವರಾದ ಯೆಹೋವನೇ, ಭೂಪರಲೋಕಗಳಲ್ಲಿ ನಿನಗೆ ಸಮಾನರಾದ ಬೇರೆ ದೇವರುಗಳಿಲ್ಲ. ನೀನು ನಿನ್ನ ಪ್ರೀತಿ ಕರುಣೆಯಿಂದೊಡಗೂಡಿದ ವಾಗ್ದಾನಗಳನ್ನು ನೆರವೇರಿಸುವೆ. ನಿನ್ನ ಸೇವಕರು ಹೃದಯಪೂರ್ವಕವಾಗಿ ನಿನಗೆ ಯೋಗ್ಯರಾಗಿ ನಡೆದು, ನಿನ್ನ ಆಜ್ಞೆಗಳಿಗೆ ವಿಧೇಯರಾಗುವದಾದರೆ ಅವರ ವಿಷಯದಲ್ಲಿ ನಿನ್ನ ವಾಗ್ದಾನವನ್ನು ನೆರವೇರಿಸುವೆ. 15 ನಿನ್ನ ಸೇವಕನಾದ ದಾವೀದನಿಗೆ ನೀನು ಮಾಡಿದ ವಾಗ್ದಾನವನ್ನು ನೆರವೇರಿಸಿರುವೆ. ದಾವೀದನು ನನ್ನ ತಂದೆ. ಅವನಿಗೆ ನೀನು ವಾಗ್ದಾನವನ್ನು ಮಾಡಿರುವೆ. ಈ ದಿನ ನಿನ್ನ ವಾಗ್ದಾನವು ನಿನ್ನ ಹಸ್ತದ ಮೂಲಕ ನೆರವೇರಿತು. 16 ಇಸ್ರೇಲರ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ನನ್ನ ಆಜ್ಞೆಗಳಿಗೆ ವಿಧೇಯರಾಗಿದ್ದರೆ, ನಿನ್ನ ಸಂತಾನದವರೇ ಇಸ್ರೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು.’ ಎಂದು ವಾಗ್ದಾನ ಮಾಡಿದೆಯಲ್ಲಾ? 17 ಇಸ್ರೇಲರ ದೇವರಾದ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನಿಗೆ ಕೊಟ್ಟಿರುವ ನಿನ್ನ ವಾಗ್ದಾನವು ನೆರವೇರಲಿ.

18 “ದೇವರೇ, ನೀನು ಭೂಮಿಯ ಮೇಲೆ ಜನರೊಂದಿಗೆ ವಾಸಿಸುವವನಲ್ಲವೆಂದು ತಿಳಿದಿದ್ದೇವೆ. ಆಕಾಶಮಂಡಲವಾಗಲಿ ಅತ್ಯುನ್ನತವಾದ ಆಕಾಶವಾಗಲಿ ನಿನಗೆ ವಾಸಸ್ಥಾನವಾಗಲು ಸಾಧ್ಯವಿಲ್ಲ. ಈಗ ನಾನು ಕಟ್ಟಿರುವ ಈ ಆಲಯವು ಸಹ ನಿನ್ನ ವಾಸಕ್ಕೆ ಸಾಲದು. 19 ನನ್ನ ಪ್ರಾರ್ಥನೆಗೆ ಲಕ್ಷ್ಯಕೊಡು ಎಂದು ನಿನ್ನನ್ನು ಬೇಡುತ್ತೇನೆ. ದೇವರಾದ ಯೆಹೋವನೇ, ನನ್ನ ಬೇಡಿಕೆಗಳನ್ನು ಮತ್ತು ಸ್ತೋತ್ರಗಳನ್ನು ಲಾಲಿಸು. ನಾನು ನಿನ್ನ ಸೇವಕನಾಗಿದ್ದೇನೆ. 20 ನಿನ್ನ ಕಣ್ಣುಗಳು ಹಗಲಿರುಳು ಈ ಆಲಯವನ್ನು ದೃಷ್ಟಿಸುತ್ತಲೇ ಇರಲಿ. ನೀನು ನಿನ್ನ ನಾಮವನ್ನು ಇಲ್ಲಿ ಸ್ಥಾಪಿಸುತ್ತೇನೆ ಎಂದು ಹೇಳಿರುವೆ. ನಾನು ಈ ದೇವಾಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವಾಗ ಆಲೈಸು. 21 ನಿನ್ನ ಜನರಾದ ಇಸ್ರೇಲರು ಮತ್ತು ನಾನು ಮಾಡುವ ಪ್ರಾರ್ಥನೆಯನ್ನು ಆಲೈಸು. ನಾವು ಈ ದೇವಾಲಯದ ಕಡೆಗೆ ತಿರುಗಿಕೊಂಡು ನಿನಗೆ ಪ್ರಾರ್ಥಿಸುವಾಗ ನಿನ್ನ ನಿವಾಸವಾದ ಪರಲೋಕದಿಂದ ನಮ್ಮ ಪ್ರಾರ್ಥನೆಯನ್ನು ಆಲೈಸು; ನಮ್ಮ ಪಾಪಗಳನ್ನು ಕ್ಷಮಿಸು.

22 “ಒಬ್ಬನು ಇನ್ನೊಬ್ಬನಿಗೆ ವಿರುದ್ಧವಾಗಿ ದುಷ್ಕೃತ್ಯ ನಡೆಸಿದ್ದರೂ ನಿನ್ನ ಯಜ್ಞವೇದಿಕೆಯ ಮುಂದೆ ಬಂದು ತಾನು ಮಾಡಿಲ್ಲವೆಂದು ನಿನ್ನ ಹೆಸರಿನಲ್ಲಿ ಪ್ರಮಾಣ ಮಾಡಿದರೆ 23 ಅದನ್ನು ನೀನು ಪರಲೋಕದಿಂದ ಆಲೈಸಿ ನಿನ್ನ ಸೇವಕರ ನ್ಯಾಯತೀರಿಸು. ಕೇಡುಮಾಡಿದವನನ್ನು ಶಿಕ್ಷಿಸು; ಅವನು ಇನ್ನೊಬ್ಬನಿಗೆ ಮಾಡಿದ ದುಷ್ಕೃತ್ಯವು ಅವನಿಗೇ ತಟ್ಟುವಂತೆ ಮಾಡು. ಯಾವನು ನಿರಪರಾಧಿಯೆಂಬುದನ್ನು ತೋರಿಸಿಕೊಟ್ಟು ಅವನ ನೀತಿಗೆ ತಕ್ಕಂತೆ ಪ್ರತಿಫಲ ಕೊಡು.

24 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ವೈರಿಗಳು ಬಂದು ಅವರನ್ನು ಯುದ್ಧದಲ್ಲಿ ಸೋಲಿಸಿದರೂ ನಿನ್ನ ಜನರು ನಿನ್ನ ಕಡೆಗೆ ತಿರುಗಿ ತಮ್ಮ ಪಾಪಗಳನ್ನು ಒಪ್ಪಿಕೊಂಡು ಈ ದೇವಾಲಯಕ್ಕೆ ಬಂದು ನಿನ್ನ ಹೆಸರನ್ನು ಹೇಳಿಕೊಂಡು ನಿನಗೆ ಪ್ರಾರ್ಥಿಸಿ ಬೇಡಿಕೊಂಡರೆ 25 ಆಗ ನೀನು ಪರಲೋಕದಿಂದ ಅವರ ಮೊರೆಯನ್ನು ಲಾಲಿಸಿ, ನಿನ್ನ ಜನರ ಪಾಪಗಳನ್ನು ಮನ್ನಿಸು. ಅವರ ಪೂರ್ವಿಕರಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮತ್ತೆ ಬರಮಾಡು.

26 “ನಿನ್ನ ಜನರಾದ ಇಸ್ರೇಲರು ನಿನಗೆ ವಿರುದ್ಧವಾಗಿ ಪಾಪಮಾಡಿದಾಗ ನೀನು ಆಕಾಶದಿಂದ ಮಳೆ ಬೀಳದಂತೆ ತಡೆದಾಗ ನಿನ್ನ ಜನರು ಪಶ್ಚಾತ್ತಾಪಪಟ್ಟು ಈ ದೇವಾಲಯದ ಕಡೆಗೆ ತಿರುಗಿ ನಿನ್ನನ್ನು ಪ್ರಾರ್ಥಿಸಿ ತಮ್ಮ ಪಾಪಗಳನ್ನು ಬಿಟ್ಟುಬಿಟ್ಟರೆ 27 ನೀನು ಪರಲೋಕದಿಂದ ಅವರನ್ನು ಆಲೈಸು. ಇಸ್ರೇಲರು ನಿನ್ನ ಸೇವಕರೂ ಪ್ರಜೆಗಳೂ ಆಗಿದ್ದಾರೆ. ಅವರು ಬದುಕುವಂತೆ ಸರಿಯಾದ ಮಾರ್ಗವನ್ನು ಅವರಿಗೆ ತೋರ್ಪಡಿಸು. ಅವರ ದೇಶದ ಮೇಲೆ ಮಳೆಯನ್ನು ಸುರಿಸು. ನಿನ್ನ ಜನರಿಗೆ ನೀನು ಆ ದೇಶವನ್ನೇ ಸ್ವಾಸ್ತ್ಯವಾಗಿ ಕೊಟ್ಟಿರುವೆ.

28 “ಆ ದೇಶದಲ್ಲಿ ಬರಗಾಲ ಬಂದಾಗ ಅಥವಾ ಸೋಂಕುರೋಗ ತಗಲಿದಾಗ, ಅಥವಾ ಮಿಡತೆಗಳಿಂದ ಬಾಧಿಸಲ್ಪಟ್ಟಾಗ, ವೈರಿಗಳು ಬಂದು ನಿನ್ನ ಜನರ ಮೇಲೆ ಅವರ ನಗರಗಳಲ್ಲಿಯೇ ಯುದ್ಧಮಾಡಿದಾಗ, ಅಥವಾ ಭಯಂಕರವಾದ ಕಾಯಿಲೆಯು ದೇಶದ ಜನರನ್ನು ಕಾಡಿದಾಗ 29 ತಮ್ಮ ಸಂಕಟಗಳ ಕುರಿತು ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಮೊರೆಯಿಡುವದಾದರೆ, 30 ನೀನು ಪರಲೋಕದಿಂದ ಅವರ ಮೊರೆಯನ್ನು ಆಲೈಸಿ ಅವರ ಪ್ರಾರ್ಥನೆಗೆ ಉತ್ತರವನ್ನು ದಯಪಾಲಿಸು; ಪ್ರತಿಯೊಬ್ಬನಿಗೂ ತಕ್ಕ ಪ್ರತಿಫಲವನ್ನು ಕೊಡು. ಯಾಕೆಂದರೆ ಪ್ರತಿಯೊಬ್ಬನ ಹೃದಯವನ್ನು ನೀನೊಬ್ಬನೇ ತಿಳಿದಿರುವೆ. 31 ಆಗ, ನಮ್ಮ ಪೂರ್ವಿಕರಿಗೆ ನೀನು ಅನುಗ್ರಹಿಸಿದ ದೇಶದಲ್ಲಿರುವ ನಿನ್ನ ಜನರು ನಿನಗೆ ಭಯಭಕ್ತಿಯಿಂದ ಸೇವೆ ಮಾಡುವರು.

32 “ಇಸ್ರೇಲಿನವನಲ್ಲದ ಪರದೇಶಿಯು ನಿನ್ನ ಪರಾಕ್ರಮವನ್ನೂ ನಿನ್ನ ಸಾಮರ್ಥ್ಯವನ್ನೂ ಕಂಡು ಕೇಳಿ ಇಲ್ಲಿಗೆ ಬಂದು ಈ ಆಲಯದ ಮುಂದೆ ನಿಂತುಕೊಂಡು ನಿನಗೆ ಪ್ರಾರ್ಥಿಸುವದಾದರೆ, 33 ಪರಲೋಕದಲ್ಲಿ ವಾಸಿಸುವ ನೀನು ಆ ಪರದೇಶಿಯ ಪ್ರಾರ್ಥನೆಯನ್ನು ಕೇಳಿ ಉತ್ತರಿಸು. ಆಗ ಇಸ್ರೇಲ್ ಜನರಂತೆ ಈ ಲೋಕದಲ್ಲಿರುವ ಜನರೆಲ್ಲಾ ನಿನ್ನ ವಿಷಯ ಕೇಳಿ ನಿನ್ನನ್ನು ಗೌರವಿಸುವರು. ನಾನು ಕಟ್ಟಿದ ಈ ದೇವಾಲಯವು ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದೆ ಎಂಬದು ಆಗ ಅವರಿಗೆ ಗೊತ್ತಾಗುವುದು.

34 “ನೀನು ನಿನ್ನ ಜನರನ್ನು ಅವರ ವೈರಿಗಳ ವಿರುದ್ಧವಾಗಿ ಯುದ್ಧಮಾಡಲು ಒಂದು ಸ್ಥಳಕ್ಕೆ ಕಳುಹಿಸುವಾಗ ನೀನು ಆರಿಸಿಕೊಂಡ ಈ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿದ ಈ ದೇವಾಲಯದ ಕಡೆಗೂ ಅವರು ತಿರುಗಿಕೊಂಡು ನಿನಗೆ ಪ್ರಾರ್ಥಿಸಿದರೆ 35 ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯ ಮಾಡು.

36 “ಜನರು ನಿನಗೆ ವಿರುದ್ಧವಾಗಿ ಪಾಪಮಾಡಬಹುದು; ಪಾಪಮಾಡದೆ ಇರುವವನು ಯಾವನೂ ಇಲ್ಲ. ಆಗ ನೀನು ಅವರ ಮೇಲೆ ಉರಿಗೊಂಡು ಅವರನ್ನು ಶಿಕ್ಷಿಸಲು ನೀನು ವೈರಿಗಳನ್ನು ಅವರ ಮೇಲೆ ಕಳುಹಿಸಿ ಅವರನ್ನು ಸೆರೆಹಿಡಿದು ದೂರದೇಶಕ್ಕೆ ಒಯ್ಯಲ್ಪಡುವಂತೆ ಮಾಡಿದಾಗ 37 ಒಂದುವೇಳೆ ಅವರು ಪಶ್ಚಾತ್ತಾಪಪಟ್ಟು ನಿನ್ನ ಕಡೆಗೆ ತಿರುಗಿಕೊಂಡು ತಾವು ಸೆರೆಯಲ್ಲಿರುವ ದೇಶದಿಂದ ನಿನಗೆ ಮೊರೆಯಿಟ್ಟು, ‘ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ. ನಾವು ದುಷ್ಟತ್ವದಲ್ಲಿ ಜೀವಿಸಿದ್ದೇವೆ’ ಎಂದು ಅರಿಕೆಮಾಡಿ 38 ತಮ್ಮ ಹೃದಯಪೂರ್ವಕವಾಗಿ ತಮ್ಮ ದೇಶದ ಕಡೆಗೆ, ಅಂದರೆ ನೀನು ಅವರ ಪೂರ್ವಿಕರಿಗೆ ಕೊಟ್ಟ ಈ ದೇಶದ ಕಡೆಗೂ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಿನ್ನ ಹೆಸರಿಗಾಗಿ ನಾನು ಕಟ್ಟಿಸಿದ ಈ ದೇವಾಲಯದ ಕಡೆಗೂ ಮುಖಮಾಡಿಕೊಂಡು ಪ್ರಾರ್ಥಿಸುವಾಗ, 39 ನಿನ್ನ ವಾಸಸ್ಥಾನವಾಗಿರುವ ಪರಲೋಕದಿಂದ ನೀನು ಅವರ ಪ್ರಾರ್ಥನೆಯನ್ನು ಕೇಳಿ ಅವರಿಗೆ ಸಹಾಯಮಾಡು. ನಿನಗೆ ವಿರುದ್ಧವಾಗಿ ಪಾಪಮಾಡಿದವರನ್ನು ಕ್ಷಮಿಸು. 40 ನನ್ನ ದೇವರೇ, ಈ ಸ್ಥಳದಲ್ಲಿ ಪ್ರಾರ್ಥಿಸುವ ನಮ್ಮನ್ನು ವೀಕ್ಷಿಸಿ ನಮ್ಮ ಪ್ರಾರ್ಥನೆಗೆ ಕಿವಿಗೊಡು.

41 “ದೇವರಾದ ಯೆಹೋವನೇ, ಎದ್ದು ನಿನ್ನ ಸಾಮರ್ಥ್ಯವನ್ನು
    ತೋರಿಸುವ ಒಡಂಬಡಿಕೆಯ ಪೆಟ್ಟಿಗೆಯೊಡನೆ ನಿನ್ನ ವಾಸಸ್ಥಳಕ್ಕೆ ಬಾ.
ನಿನ್ನ ಯಾಜಕರು ರಕ್ಷಣಾವಸ್ತ್ರವನ್ನು ಧರಿಸಿಕೊಂಡಿರಲಿ;
    ನಿನ್ನನ್ನು ಪ್ರೀತಿಸುವವರು ನಿನ್ನ ಒಳ್ಳೆಯತನದಲ್ಲಿ ಸಂತೋಷಪಡಲಿ.
42 ದೇವರಾದ ಯೆಹೋವನೇ, ನಿನ್ನಿಂದ ಅಭಿಷೇಕಿಸಲ್ಪಟ್ಟಿರುವ ಅರಸನನ್ನು ತಳ್ಳಿಬಿಡಬೇಡ.
    ನಿನಗೆ ನಂಬಿಗಸ್ತನಾದ ಸೇವಕನಾಗಿದ್ದ ದಾವೀದನನ್ನು ನೆನಪುಮಾಡಿಕೊ”

ಎಂದು ಪ್ರಾರ್ಥಿಸಿದನು.

1 ಯೋಹಾನ 5

ದೇವರ ಮಕ್ಕಳು ಲೋಕದ ವಿರುದ್ಧ ಜಯಗಳಿಸುವರು

ಯೇಸುವೇ ಕ್ರಿಸ್ತನೆಂದು ನಂಬುವವರು ದೇವರ ಮಕ್ಕಳಾಗಿದ್ದಾರೆ. ತಂದೆಯನ್ನು (ದೇವರನ್ನು) ಪ್ರೀತಿಸುವವನು ತಂದೆಯ ಮಕ್ಕಳನ್ನೂ ಪ್ರೀತಿಸುತ್ತಾನೆ. ನಾವು ದೇವರ ಮಕ್ಕಳನ್ನು ಪ್ರೀತಿಸುತ್ತಿದ್ದೇವೆಂಬುದು ನಮಗೆ ಹೇಗೆ ತಿಳಿದಿದೆ? ನಾವು ದೇವರನ್ನು ಪ್ರೀತಿಸುತ್ತಿರುವುದರಿಂದ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಿರುವುದರಿಂದ ದೇವರ ಆಜ್ಞೆಗಳು ನಮಗೆ ತಿಳಿದಿವೆ. ದೇವರನ್ನು ಪ್ರೀತಿಸುವುದು ಎಂದರೆ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದು. ದೇವರ ಆಜ್ಞೆಗಳು ನಮಗೆ ಕಠಿಣವಾದವುಗಳಲ್ಲ. ಏಕೆಂದರೆ ದೇವರಿಂದ ಹೊಸದಾಗಿ ಹುಟ್ಟಿರುವ ಪ್ರತಿಯೊಬ್ಬನೂ ಲೋಕದ ವಿರುದ್ಧ ಗೆಲ್ಲುವ ಶಕ್ತಿಯನ್ನು ಹೊಂದಿದ್ದಾನೆ. ಲೋಕದ ವಿರುದ್ಧ ಜಯಗಳಿಸಿದ್ದು ನಮ್ಮ ನಂಬಿಕೆಯೇ. ಆದ್ದರಿಂದ ಲೋಕದ ವಿರುದ್ಧ ಜಯಗಳಿಸುವವನು ಯಾರು? ಯೇಸುವನ್ನು ದೇವರ ಮಗನೆಂದು ನಂಬುವ ವ್ಯಕ್ತಿಯು ಮಾತ್ರ ಜಯಗಳಿಸುತ್ತಾನೆ.

ದೇವರು ತನ್ನ ಮಗನನ್ನು ಕುರಿತು ನಮಗೆ ತಿಳಿಸಿದನು

ಬಂದಾತನೇ ಯೇಸು ಕ್ರಿಸ್ತನು. ಯೇಸು ನೀರಿನಿಂದ ಮಾತ್ರವಲ್ಲದೆ ರಕ್ತದಿಂದ ಬಂದನು. ಇದು ನಿಜವೆಂದು ನಮಗೆ ಆತ್ಮನು ತಿಳಿಸುತ್ತಾನೆ. ಏಕೆಂದರೆ ಆತ್ಮನು ಸತ್ಯಸ್ವರೂಪನಾಗಿದ್ದಾನೆ. ಆದ್ದರಿಂದ ಯೇಸುವಿನ ಬಗ್ಗೆ ನಮಗೆ ತಿಳಿಸಲು ಮೂರು ಸಾಕ್ಷಿಗಳಿವೆ: ಆತ್ಮ, ನೀರು ಮತ್ತು ರಕ್ತ. ಈ ಮೂರು ಸಾಕ್ಷಿಗಳ ಅಭಿಪ್ರಾಯವು ಒಂದೇ.

ಜನರು ಸಾಕ್ಷಿ ಹೇಳಿದಾಗ ನಾವು ನಂಬುತ್ತೇವೆ. ಆದರೆ ದೇವರ ಸಾಕ್ಷಿಯು ಅದಕ್ಕಿಂತಲೂ ವಿಶೇಷವಾಗಿದೆ. ದೇವರು ತನ್ನ ಸ್ವಂತ ಮಗನ ಕುರಿತು ಹೇಳಿದ ಸತ್ಯವೇ ಆತನು ನಮಗೆ ನೀಡಿದ ಸಾಕ್ಷಿಯಾಗಿದೆ. 10 ದೇವರ ಮಗನನ್ನು ನಂಬುವವನು ದೇವರಿಂದ ಸಾಕ್ಷೀಕರಿಸಲ್ಪಟ್ಟ ಸತ್ಯವನ್ನು ಹೊಂದಿರುತ್ತಾನೆ. ದೇವರನ್ನು ನಂಬದೆ ಇರುವವನು, ದೇವರನ್ನು ಸುಳ್ಳುಗಾರನನ್ನಾಗಿ ಮಾಡುತ್ತಾನೆ. ಏಕೆಂದರೆ ದೇವರು ತನ್ನ ಮಗನ ಬಗ್ಗೆ ನಮಗೆ ಹೇಳಿದುದನ್ನು ಅವನು ನಂಬುವುದಿಲ್ಲ. 11 ನಮಗೆ ನಿತ್ಯಜೀವವನ್ನು ತಾನು ದಯಪಾಲಿಸಿರುವುದಾಗಿ ದೇವರು ಹೇಳಿದನು. ಈ ನಿತ್ಯಜೀವವು ಆತನ ಮಗನಲ್ಲಿದೆ. (ಯೇಸು) 12 ಯಾವನಲ್ಲಿ ಆ ಮಗನಿರುತ್ತಾನೋ ಅವನಲ್ಲಿ ಆ ಜೀವವಿದೆ. ಆದರೆ ಯಾವನಲ್ಲಿ ದೇವರ ಮಗನು ಇರುವುದಿಲ್ಲವೋ ಅವನಲ್ಲಿ ಆ ಜೀವವಿಲ್ಲ.

ಈಗ ನಮಗೆ ನಿತ್ಯಜೀವವಿದೆ

13 ದೇವರ ಮಗನಲ್ಲಿ ನಂಬಿಕೆಯಿಟ್ಟಿರುವ ನಿಮಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈಗ ನಿಮಗೆ ನಿತ್ಯಜೀವವಿದೆ ಎಂಬುದು ನಿಮಗೆ ಗೊತ್ತಾಗುವಂತೆ ನಾನು ಈ ಪತ್ರ ಬರೆಯುತ್ತಿದ್ದೇನೆ. 14 ನಾವು ಯಾವ ಸಂದೇಹಗಳೂ ಇಲ್ಲದೆ ದೇವರ ಬಳಿಗೆ ಬರಲು ಸಾಧ್ಯವಿದೆ. ಇದರ ಅರ್ಥವೇನೆಂದರೆ (ದೇವರ ಚಿತ್ತಕ್ಕನುಸಾರವಾಗಿ) ನಮಗೆ ಬೇಕಾದವುಗಳಿಗಾಗಿ ದೇವರನ್ನು ಕೇಳಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ. 15 ನಾವು ದೇವರನ್ನು ಬೇಡಿಕೊಂಡಾಗಲೆಲ್ಲಾ ಆತನು ನಮ್ಮ ಬೇಡಿಕೆಗಳನ್ನು ಕೇಳುವುದರಿಂದ ಆತನಲ್ಲಿ ಬೇಡಿಕೊಂಡದ್ದನ್ನು ಆತನು ನಮಗೆ ದಯಪಾಲಿಸುತ್ತಾನೆಂಬುದು ನಮಗೆ ತಿಳಿದಿದೆ.

16 ಕ್ರಿಸ್ತನಲ್ಲಿ ಸಹೋದರನಾಗಲಿ ಅಥವಾ ಸಹೋದರಿಯಾಗಲಿ ಪಾಪ ಮಾಡುವುದನ್ನು (ನಿತ್ಯವಾದ ಮರಣಕ್ಕೆ ನಡೆಸುವ ಪಾಪವನ್ನಲ್ಲ) ಕಂಡ ವ್ಯಕ್ತಿಯು ತನ್ನ ಆ ಸಹೋದರನಿಗಾಗಿ ಅಥವಾ ಆ ಸಹೋದರಿಗಾಗಿ ಪ್ರಾರ್ಥಿಸಬೇಕು. ಆಗ ದೇವರು ಆ ಸಹೋದರನಿಗೆ ಅಥವಾ ಆ ಸಹೋದರಿಗೆ ಜೀವವನ್ನು ದಯಪಾಲಿಸುತ್ತಾನೆ. ಶಾಶ್ವತವಾದ ಮರಣದ ಕಡೆಗೆ ನಡೆಸದಿರುವ ಪಾಪವನ್ನು ಮಾಡುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಮರಣದ ಕಡೆಗೆ ನಡೆಸುವ ಪಾಪವಿದೆ. ಈ ಪಾಪ ಮಾಡುವವರಿಗಾಗಿ ಪ್ರಾರ್ಥಿಸಬೇಕೆಂದು ನಾನು ಹೇಳುತ್ತಿಲ್ಲ. 17 ನೀತಿಗೆ ವಿರುದ್ಧವಾದುದೆಲ್ಲಾ ಪಾಪವಾಗಿದೆ. ಆದರೆ ಶಾಶ್ವತ ಮರಣದ ಕಡೆಗೆ ಕೊಂಡೊಯ್ಯದಿರುವ ಪಾಪವೂ ಇದೆ.

18 ದೇವರಿಂದ ಹೊಸದಾಗಿ ಹುಟ್ಟಿದವನು ಪಾಪದಲ್ಲೇ ಮುಂದುವರಿಯುವುದಿಲ್ಲವೆಂದು ನಮಗೆ ತಿಳಿದಿದೆ. ದೇವರ ಮಗನಾದ ಯೇಸು ಅವನನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ. ಕೆಡುಕನು ಅವನಿಗೆ ಕೇಡುಮಾಡಲಾಗುವುದಿಲ್ಲ. 19 ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ಆದರೆ ಈ ಲೋಕವು ಕೆಡುಕನ ವಶದಲ್ಲಿದೆ. 20 ದೇವರ ಮಗನು ಬಂದಿದ್ದಾನೆಂಬುದು ನಮಗೆ ತಿಳಿದಿದೆ. ದೇವರ ಮಗನು ನಮಗೆ ತಿಳುವಳಿಕೆಯನ್ನು ದಯಪಾಲಿಸಿರುವನು. ಈಗ ನಾವು ದೇವರನ್ನು ತಿಳಿದುಕೊಳ್ಳಬಲ್ಲೆವು. ಸತ್ಯವಾಗಿರುವಾತನು ದೇವರೇ. ಸತ್ಯ ದೇವರಲ್ಲಿಯೂ ಮತ್ತು ಆತನ ಮಗನಾದ ಯೇಸು ಕ್ರಿಸ್ತನಲ್ಲಿಯೂ ನಾವು ನೆಲೆಸಿದ್ದೇವೆ. ಆತನು ಸತ್ಯದೇವರೂ ನಿತ್ಯಜೀವವೂ ಆಗಿದ್ದಾನೆ. 21 ಆದ್ದರಿಂದ ಪ್ರಿಯ ಮಕ್ಕಳೇ, ನೀವು ಸುಳ್ಳುದೇವರುಗಳಿಂದ ದೂರವಾಗಿರಿ.

ಹಬಕ್ಕೂಕ 1

ಯೆಹೋವನಿಗೆ ಹಬಕ್ಕೂಕನ ದೂರು

ಪ್ರವಾದಿಯಾದ ಹಬಕ್ಕೂಕನಿಗೆ ಕೊಡಲ್ಪಟ್ಟ ಸಂದೇಶ.

ಯೆಹೋವನೇ, ನಾನು ನಿನ್ನಿಂದ ಸಹಾಯವನ್ನು ಕೇಳುತ್ತಲೇ ಇದ್ದೇನೆ. ನನ್ನ ಮೊರೆಯನ್ನು ಯಾವಾಗ ಕೇಳುವೆ? ನಾನು ಹಿಂಸೆಯ ವಿಷಯವಾಗಿ ನಿನ್ನನ್ನು ಕೂಗಿದರೂ ನೀನು ಏನೂ ಮಾಡಲಿಲ್ಲ. ಜನರು ವಸ್ತುಗಳನ್ನು ಕದ್ದುಕೊಂಡು ಇತರರನ್ನು ಗಾಯಗೊಳಿಸುತ್ತಿದ್ದಾರೆ. ಜನರು ಜಗಳ ಮಾಡುತ್ತಾ ಕಾದಾಡುತ್ತಿದ್ದಾರೆ. ಇಂಥಾ ಭಯಂಕರ ಸಂಗತಿಗಳನ್ನು ನೋಡುವಂತೆ ಯಾಕೆ ಮಾಡುವೆ. ಕಾನೂನು ಬಲಹೀನವಾಗಿದೆ. ಅದು ಸರಿಯಾದ ನ್ಯಾಯಕೊಡುವದಿಲ್ಲ. ದುಷ್ಚರು ಶಿಷ್ಟರ ಮೇಲೆ ವ್ಯಾಜ್ಯವಾಡಿ ಗೆಲ್ಲುತ್ತಿದ್ದಾರೆ. ಆದ್ದರಿಂದ ಕಾನೂನು ನ್ಯಾಯವಾಗಿಯೇ ಇಲ್ಲ. ನ್ಯಾಯಕ್ಕೆ ಜಯವಿಲ್ಲ.

ಹಬಕ್ಕೂಕನಿಗೆ ದೇವರ ಉತ್ತರ

ಯೆಹೋವನು ಉತ್ತರಿಸುತ್ತಾ, “ಇತರ ದೇಶಗಳನ್ನು ನೋಡು, ಅವರನ್ನು ಗಮನಿಸು. ನೀನು ಆಶ್ಚರ್ಯಪಡುವೆ. ನೀನು ನಿನ್ನ ಜೀವಮಾನದಲ್ಲಿಯೇ ಅಚ್ಚರಿಪಡುವಂಥ ವಿಷಯವನ್ನು ನಾನು ನಡಿಸುತ್ತೇನೆ. ನೀನು ಅದನ್ನು ನೋಡಿ ನಂಬುವೆ. ನಿನಗೆ ಅದರ ವಿಷಯವಾಗಿ ತಿಳಿಸಲ್ಪಟ್ಟರೂ ನೀನು ನಂಬುವದಿಲ್ಲ. ನಾನು ಬಾಬಿಲೋನಿನವರನ್ನು ಬಲಾಢ್ಯ ಜನಾಂಗವಾಗಿ ಮಾಡುವೆನು. ಅವರು ಬಲಶಾಲಿಗಳೂ ನಿರ್ದಯಿಗಳೂ ಆಗಿದ್ದಾರೆ. ಅವರು ಲೋಕದಲ್ಲೆಲ್ಲಾ ಸಂಚರಿಸುವರು. ತಮ್ಮದಲ್ಲದ ಮನೆಗಳನ್ನು ಮತ್ತು ನಗರಗಳನ್ನು ತಮ್ಮ ವಶಮಾಡಿಕೊಳ್ಳುವರು. ಬಾಬಿಲೋನಿನ ಜನರು ಇತರರಲ್ಲಿ ಭಯ ಹುಟ್ಟಿಸುವರು. ಅವರು ತಮ್ಮ ಇಷ್ಟಬಂದ ಹಾಗೆ ಮಾಡುವರು; ಇಷ್ಟಬಂದ ಕಡೆಗೆ ಹೋಗುವರು. ಅವರ ಕುದುರೆಗಳು ಚಿರತೆಗಳಿಗಿಂತ ವೇಗವಾಗಿವೆ; ಸೂರ್ಯಸ್ತಮಾನ ಕಾಲದಲ್ಲಿ ತೋಳಗಳಿಗಿಂತ ಭಯಂಕರವಾಗಿವೆ. ಅವರ ರಾಹುತರು ಬಹುದೂರ ದೇಶದಿಂದ ಬಂದರು. ಹಸಿದ ಗಿಡುಗ ಹೇಗೆ ಆಕಾಶದಿಂದ ನೆಲದ ಮೇಲಿರುವ ಆಹಾರದ ಮೇಲೆ ಬೀಳುತ್ತದೋ ಅದೇ ರೀತಿಯಲ್ಲಿ ಅವರ ರಾಹುತರು ವೈರಿಗಳ ಮೇಲೆ ಬೀಳುವರು. ಅವರು ಬಯಸುವುದು ಯುದ್ಧವೊಂದನ್ನೇ. ಅವರ ಸೈನ್ಯವು ಮರುಭೂಮಿಯ ಮೇಲೆ ಬೀಸುವ ಗಾಳಿಯ ತರಹ ವೇಗವಾಗಿ ಸಂಚರಿಸುವದು. ಮತ್ತು ಬಾಬಿಲೋನಿನ ಸೈನಿಕರು ಮರಳಿನಷ್ಟು ಅಸಂಖ್ಯಾತ ಜನರನ್ನು ಸೆರೆಹಿಡಿಯುತ್ತಾರೆ.

10 “ಇತರ ಜನಾಂಗದ ಅರಸರನ್ನು ಬಾಬಿಲೋನಿನ ಸೈನಿಕರು ಗೇಲಿ ಮಾಡುತ್ತಾರೆ. ಪರದೇಶದ ಅರಸರು ಅವರಿಗೆ ಹಾಸ್ಯಾಸ್ಪದವಾಗಿರುತ್ತಾರೆ. ಕೋಟೆಕೊತ್ತಲುಗಳಿರುವ ನಗರವನ್ನು ನೋಡಿ ಅವರು ನಗಾಡುವರು. ಆ ಸೈನಿಕರು ಕೋಟೆಯ ಗೋಡೆಯ ತನಕ ಮಣ್ಣಿನದಿಬ್ಬವನ್ನೇರಿಸಿ, ಸುಲಭವಾಗಿ ಪಟ್ಟಣಗಳನ್ನು ವಶಮಾಡಿಕೊಳ್ಳುವರು. 11 ಆ ಬಳಿಕ ಅವರು ಗಾಳಿಯಂತೆ ಅಲ್ಲಿಂದ ಬೇರೆ ಸ್ಥಳಗಳ ಮೇಲೆ ದಾಳಿಮಾಡಲು ಹೊರಟುಹೋಗುವರು. ಬಾಬಿಲೋನಿನವರು ಆರಾಧಿಸುವ ಒಂದೇ ವಿಷಯ ಯಾವದೆಂದರೆ ಅವರ ಸ್ವಂತ ಶಕ್ತಿಯನ್ನೇ.”

ಹಬಕ್ಕೂಕನ ಎರಡನೇ ದೂರು

12 ಆಗ ಹಬಕ್ಕೂಕನು ಹೇಳಿದ್ದೇನೆಂದರೆ,
ಯೆಹೋವನೇ, ನೀನು ನಿತ್ಯಕಾಲಕ್ಕೂ ಜೀವಿಸುವ ದೇವರು.
    ನೀನು ಎಂದಿಗೂ ಸಾಯದ ನನ್ನ ಪರಿಶುದ್ಧ ದೇವರು.
ನೀನು ಯೋಚಿಸುವದನ್ನು ನೆರವೇರಿಸಲು ಬಾಬಿಲೋನಿನವರನ್ನು ಸೃಷ್ಟಿಸಿರುವೆ.
    ನಮ್ಮ ಬಂಡೆಯಾದ ನೀನು ಯೆಹೂದದ ಜನರನ್ನು ಶಿಕ್ಷಿಸುವುದಕ್ಕಾಗಿಯೇ ಅವರನ್ನು ಸೃಷ್ಟಿಸಿರುವೆ.
13 ಕೆಡುಕನ್ನು ದೃಷ್ಟಿಸಲಾರದಷ್ಟು ನಿನ್ನ ಕಣ್ಣುಗಳು ಶುದ್ಧವಾಗಿವೆ.
    ಜನರು ಮಾಡುವ ದುಷ್ಕೃತ್ಯಗಳನ್ನು ನೀನು ನೋಡಲಾರೆ.
ಹೀಗಿರಲು ಆ ಕೆಡುಕರು ಜಯಗಳಿಸುವದನ್ನು ನೀನು ಹೇಗೆ ವೀಕ್ಷಿಸಬಲ್ಲೆ?
    ದುಷ್ಟರು ಒಳ್ಳೆಯವರನ್ನು ಸೋಲಿಸಿದಾಗ ನೀನು ನಿನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಾರದೇಕೆ?
    ಒಳ್ಳೆಯ ಜನರನ್ನು ಕೆಟ್ಟ ಜನರು ಸೋಲಿಸುವುದನ್ನು ನೀನು ಹೇಗೆ ನೋಡುವೆ?

14 ಸಮುದ್ರದಲ್ಲಿರುವ ಮೀನುಗಳಂತೆ ನೀನು ಜನರನ್ನು ಸೃಷ್ಟಿಸಿರುವೆ.
    ಅವರು ಒಬ್ಬ ನಾಯಕನಿಂದ ಸಮುದ್ರಪ್ರಾಣಿಗಳಂತಿದ್ದಾರೆ,
15 ಅವೆಲ್ಲವನ್ನು ಗಾಳ, ಬಲೆಗಳಿಂದ ವೈರಿಯು ಹಿಡಿಯುತ್ತಾನೆ.
    ಬಲೆಯಲ್ಲಿ ಅವುಗಳನ್ನು ವೈರಿಯು ಹಿಡಿದು ಎಳೆಯುವನು.
    ತಾನು ಹಿಡಿದನೆಂದು ವೈರಿಯು ಹರ್ಷಿಸುವನು.
16 ಅವನ ಬಲೆಗಳು ಅವನು ಧನಿಕನಂತೆ ಜೀವಿಸಲು ಸಹಾಯ ಮಾಡುವವು.
    ಅವನು ಒಳ್ಳೆಯ ಆಹಾರವನ್ನು ಉಣ್ಣುವನು.
ಅದಕ್ಕೆ ವೈರಿಯು ತನ್ನ ಬಲೆಯನ್ನು ಆರಾಧಿಸುವನು.
    ಅವನು ಯಜ್ಞವನ್ನರ್ಪಿಸಿ ಧೂಪ ಹಾಕುವನು.
    ಬಲೆಯನ್ನು ಗೌರವಿಸುವನು.
17 ಅವನು ತನ್ನ ಬಲೆಯಿಂದ ಐಶ್ವರ್ಯವನ್ನು ಹೊಂದುತ್ತಾ ಮುಂದರಿಯುವನೋ?
    ನಿರ್ದಯೆಯಿಂದ ಜನರನ್ನು ನಾಶಮಾಡುತ್ತಲೇ ಇರುವನೋ?

ಲೂಕ 20

ಯೆಹೂದ್ಯನಾಯಕರು ಯೇಸುವಿಗೆ ಕೇಳಿದ ಪ್ರಶ್ನೆ

(ಮತ್ತಾಯ 21:23-27; ಮಾರ್ಕ 11:27-33)

20 ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು, “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.

ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.

ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು. ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು. ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು.

ದೇವರು ತನ್ನ ಮಗನನ್ನು ಕಳುಹಿಸಿದನು

(ಮತ್ತಾಯ 21:33-46; ಮಾರ್ಕ 12:1-12)

ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿತೋಟವನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. 10 ಸ್ವಲ್ಪಕಾಲದ ನಂತರ ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂತು. ಆದ್ದರಿಂದ ಅವನು ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಬರುವುದಕ್ಕಾಗಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರು ಆ ಸೇವಕನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11 ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನೂ ಹೊಡೆದು, ಅವಮಾನ ಮಾಡಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12 ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಗೆ ಅಟ್ಟಿದರು.

13 “ಆಗ ತೋಟದ ಯಜಮಾನನು, ‘ನಾನೀಗ ಏನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮರ್ಯಾದೆ ಕೊಡಬಹುದು’ ಅಂದುಕೊಂಡನು. 14 ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು. 15 ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು.

“ಆಗ ತೋಟದ ಯಜಮಾನನು ಏನು ಮಾಡುವನು? 16 ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಟವನ್ನು ಬೇರೆ ಕೆಲವು ರೈತರಿಗೆ ಕೊಡುವನು.”

ಜನರು ಈ ಸಾಮ್ಯವನ್ನು ಕೇಳಿ, “ಇಲ್ಲ! ಹಾಗೆಂದಿಗೂ ಆಗಬಾರದು!” ಅಂದರು. 17 ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, “ಹಾಗಾದರೆ,

‘ಕಟ್ಟುವವರು ಬೇಡವೆಂದು ಬಿಟ್ಟ
    ಕಲ್ಲೇ ಮೂಲೆಗಲ್ಲಾಯಿತು’(A)

ಎಂಬ ವಚನದ ಅರ್ಥವೇನು? 18 ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ನಿಮ್ಮ ಮೇಲೆ ಬಿದ್ದರೆ ಅದು ನಿಮ್ಮನ್ನು ಜಜ್ಜಿಹಾಕುವುದು!” ಎಂದು ಹೇಳಿದನು.

19 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯ ನಾಯಕರು ಕೇಳಿದರು. ತಮ್ಮನ್ನು ಕುರಿತಾಗಿಯೇ ಆತನು ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದುಕೊಂಡರು. ಆದ್ದರಿಂದ ಅವರು ಆಗಲೇ ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಅವರು ಜನರಿಗೆ ಭಯಪಟ್ಟು ಆತನನ್ನು ಬಂಧಿಸಲಿಲ್ಲ.

ಯೇಸುವನ್ನು ಮೋಸಗೊಳಿಸಲು ಯೆಹೂದ್ಯ ನಾಯಕರ ಪ್ರಯತ್ನ

(ಮತ್ತಾಯ 22:15-22; ಮಾರ್ಕ 12:13-17)

20 ಆದ್ದರಿಂದ ಧರ್ಮೋಪದೇಶಕರು ಮತ್ತು ಯಾಜಕರು ಯೇಸುವನ್ನು ಬಂಧಿಸಲು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ಅವರು ಕೆಲವು ಜನರನ್ನು ಯೇಸುವಿನ ಬಳಿಗೆ ಕಳುಹಿಸಿದರು. ಒಳ್ಳೆಯವರಂತೆ ನಟಿಸಲು ಅವರು ಆ ಜನರಿಗೆ ಹೇಳಿಕೊಟ್ಟಿದ್ದರು. ಅವರು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಬೇಕೆಂದಿದ್ದರು. (ಅವರು ಏನಾದರೂ ತಪ್ಪು ಕಂಡುಹಿಡಿದರೆ, ಆಗ ಯೇಸುವನ್ನು ಆತನ ಮೇಲೆ ಅಧಿಕಾರವಿದ್ದ ರಾಜ್ಯಪಾಲನಿಗೆ ಒಪ್ಪಿಸಿಕೊಡಬಹುದಾಗಿತ್ತು.) 21 ಆದ್ದರಿಂದ ಅವರು ಯೇಸುವಿಗೆ, “ಉಪದೇಶಕನೇ, ನೀನು ಸತ್ಯವನ್ನೇ ಹೇಳುವೆ ಮತ್ತು ಉಪದೇಶಿಸುವೆ ಎಂದು ನಮಗೆ ಗೊತ್ತಿದೆ. ನೀನು ಮುಖದಾಕ್ಷಿಣ್ಯ ಮಾಡುವವನಲ್ಲ. ದೇವರ ಮಾರ್ಗದ ಕುರಿತಾಗಿ ನೀನು ಯಾವಾಗಲೂ ಸತ್ಯವನ್ನೇ ಬೋಧಿಸುವೆ! 22 ಈಗ ಹೇಳು, ನಾವು ಸೀಸರನಿಗೆ[a] ತೆರಿಗೆ ಕೊಡುವುದು ಸರಿಯೋ? ತಪ್ಪೋ?” ಎಂದು ಕೇಳಿದರು.

23 ಆದರೆ ಈ ಜನರು ತನಗೆ ಮೋಸಮಾಡಲು ಪ್ರಯತ್ನಿಸುತ್ತಿದ್ದಾರೆಂದು ಯೇಸುವಿಗೆ ತಿಳಿದಿತ್ತು. 24 ಆದ್ದರಿಂದ ಯೇಸು ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಆ ನಾಣ್ಯದ ಮೇಲೆ ಯಾರ ಹೆಸರಿದೆ? ಅದರ ಮೇಲೆ ಯಾರ ಮುಖಚಿತ್ರವಿದೆ?” ಎಂದು ಕೇಳಿದನು.

ಅವರು, “ಸೀಸರನದು” ಎಂದು ಹೇಳಿದರು.

25 ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದನು.

26 ಆ ಜನರು ಆತನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿ ಆಶ್ಚರ್ಯಪಟ್ಟು ಮರುಪ್ರಶ್ನೆ ಕೇಳದಂತಾದರು. ಜನರ ಮುಂದೆ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಅವರಿಂದಾಗಲಿಲ್ಲ.

ಯೇಸುವನ್ನು ಮೋಸಗೊಳಿಸಲು ಕೆಲವು ಸದ್ದುಕಾಯರ ಪ್ರಯತ್ನ

(ಮತ್ತಾಯ 22:23-33; ಮಾರ್ಕ 12:18-27)

27 ಕೆಲವು ಸದ್ದುಕಾಯರು[b] ಯೇಸುವಿನ ಬಳಿಗೆ ಬಂದರು. (ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದು ಸದ್ದುಕಾಯರು ನಂಬುತ್ತಾರೆ.) ಅವರು ಯೇಸುವಿಗೆ, 28 “ಉಪದೇಶಕನೇ, ಮದುವೆಯಾದ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ಆ ಸ್ತ್ರೀಯನ್ನು ಮದುವೆಯಾಗಿ, ಸತ್ತುಹೋದ ಸಹೋದರನಿಗಾಗಿ ಮಕ್ಕಳನ್ನು ಪಡೆಯಬೇಕೆಂದು[c] ಮೋಶೆಯು ಬರೆದಿದ್ದಾನಷ್ಟೆ. 29 ಒಂದು ಕಾಲದಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯ ಸಹೋದರನು ಒಬ್ಬ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. 30 ಆಗ ಎರಡನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. 31 ಆಗ ಮೂರನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು. ಬಳಿಕ ಅವನೂ ಸತ್ತುಹೋದನು. ಇನ್ನುಳಿದ ಸಹೋದರರಿಗೂ ಹೀಗೆಯೇ ಆಯಿತು. ಅವರೆಲ್ಲರೂ ಮಕ್ಕಳಿಲ್ಲದೆ ಸತ್ತರು. 32 ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. 33 ಆದರೆ ಆ ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿದ್ದರು. ಹೀಗಿರಲಾಗಿ, ಸತ್ತವರು ಪುನರುತ್ಥಾನ ಹೊಂದುವಾಗ, ಆ ಸ್ತ್ರೀಯು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.

34 ಯೇಸು ಸದ್ದುಕಾಯರಿಗೆ, “ಭೂಲೋಕದಲ್ಲಿ ಜನರು ಒಬ್ಬರನ್ನೊಬ್ಬರು ಮದುವೆ ಆಗುತ್ತಾರೆ. 35 ಪುನರುತ್ಥಾನಕ್ಕೆ ಯೋಗ್ಯರಾದ ಕೆಲವು ಜನರು ಜೀವಂತವಾಗಿ ಎದ್ದುಬಂದು ಮತ್ತೆ ಜೀವಿಸುತ್ತಾರೆ. ಆ ಹೊಸ ಜೀವನದಲ್ಲಿ ಅವರು ಮದುವೆ ಆಗುವುದಿಲ್ಲ. 36 ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ. 37 ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯು ಸ್ಪಷ್ಟವಾಗಿ ತೋರಿಸಿದ್ದಾನೆ. ಉರಿಯುವ ಪೊದೆಯ[d] ಕುರಿತು ಮೋಶೆ ಬರೆಯುವಾಗ ‘ಪ್ರಭುವಾದ ದೇವರೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದಾನೆ. 38 ದೇವರು ಅವರೆಲ್ಲರಿಗೆ ದೇವರಾಗಿರುವುದರಿಂದ ಅವರೆಲ್ಲರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ ದೇವರು ಜೀವಿಸುವ ಜನರಿಗೇ ದೇವರಾಗಿದ್ದಾನೆ. ದೇವರಿಗೆ ಸೇರಿದವರೆಲ್ಲರೂ ಜೀವಂತರಾಗಿದ್ದಾರೆ” ಎಂದು ಹೇಳಿದನು.

39 ಧರ್ಮೋಪದೇಶಕರಲ್ಲಿ ಕೆಲವರು, “ಬೋಧಕನೇ, ನೀನು ಒಳ್ಳೆಯ ಉತ್ತರವನ್ನು ಕೊಟ್ಟಿರುವೆ” ಎಂದು ಹೇಳಿದರು. 40 ಇನ್ನೊಂದು ಪ್ರಶ್ನೆಯನ್ನು ಆತನಿಗೆ ಕೇಳುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.

ಕ್ರಿಸ್ತನು ದಾವೀದನ ಮಗನೋ?

(ಮತ್ತಾಯ 22:41-46; ಮಾರ್ಕ 12:35-37)

41 ಆಗ ಯೇಸು, “ಕ್ರಿಸ್ತನು ದಾವೀದನ ಮಗನೆಂದು ಜನರು ಏಕೆ ಹೇಳುತ್ತಾರೆ? 42 ಕೀರ್ತನೆಗಳ ಪುಸ್ತಕದಲ್ಲಿ ಸ್ವತಃ ದಾವೀದನೇ ಇಂತೆಂದಿದ್ದಾನೆ:

‘ಪ್ರಭುವು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ) ಹೇಳಿದ್ದೇನೆಂದರೆ,
43 ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವನ್ನಾಗಿ ಮಾಡುವ ತನಕ
    ನನ್ನ ಬಲಗಡೆಯಲ್ಲೇ ಕುಳಿತುಕೊಂಡಿರು.’(B)

44 ದಾವೀದನು ಕ್ರಿಸ್ತನನ್ನು ‘ಪ್ರಭು’ವೆಂದು ಕರೆದ ಮೇಲೆ ಆತನು ಅವನಿಗೆ ಮಗನಾಗಲು ಹೇಗೆ ಸಾಧ್ಯ?” ಎಂದು ಹೇಳಿದನು.

ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆ

(ಮತ್ತಾಯ 23:1-36; ಮಾರ್ಕ 12:38-40; ಲೂಕ 11:37-54)

45 ಜನರೆಲ್ಲರೂ ಯೇಸುವಿನ ಮಾತನ್ನು ಆಲಿಸಿದರು. ಯೇಸು ತನ್ನ ಶಿಷ್ಯರಿಗೆ, 46 “ಧರ್ಮೋಪದೇಶಕರ ಕುರಿತು ಎಚ್ಚರಿಕೆಯಾಗಿರಿ. ಅವರು ಪ್ರಾಮುಖ್ಯ ವ್ಯಕ್ತಿಗಳಂತೆ ಬಟ್ಟೆ ಧರಿಸಿಕೊಂಡು ತಿರುಗಾಡುತ್ತಾರೆ. ಮಾರುಕಟ್ಟೆಗಳಲ್ಲಿ ಜನರಿಂದ ಗೌರವ ಹೊಂದಲು ಆಶಿಸುತ್ತಾರೆ. ಸಭಾಮಂದಿರಗಳಲ್ಲಿ ಮತ್ತು ಔತಣಕೂಟಗಳಲ್ಲಿ ಉನ್ನತವಾದ ಆಸನಗಳನ್ನು ಆಶಿಸುತ್ತಾರೆ. 47 ಆದರೆ ಅವರು ವಿಧವೆಯರಿಗೆ ಮೋಸಮಾಡಿ ಅವರ ಮನೆಗಳನ್ನು ಕಸಿದುಕೊಳ್ಳುತ್ತಾರೆ. ಬಳಿಕ ಉದ್ದವಾದ ಪ್ರಾರ್ಥನೆಗಳನ್ನು ಮಾಡಿ ಒಳ್ಳೆಯವರಂತೆ ನಟಿಸುತ್ತಾರೆ. ದೇವರು ಇವರನ್ನು ಕಠಿಣವಾದ ದಂಡನೆಗೆ ಗುರಿಪಡಿಸುತ್ತಾನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International