M’Cheyne Bible Reading Plan
ಅಮ್ಮೋನಿಯರು ದಾವೀದನ ಜನರನ್ನು ಅವಮಾನಪಡಿಸಿದ್ದು
19 ನಾಹಾಷನು ಅಮ್ಮೋನಿಯರ ಅರಸನಾಗಿದ್ದನು. ಅವನು ಸತ್ತ ಬಳಿಕ ಅವನ ಮಗನು ಪಟ್ಟಕ್ಕೆ ಬಂದನು. 2 ದಾವೀದನು, “ನಾಹಾಷನು ನನಗೆ ದಯೆ ತೋರಿಸಿದ್ದನು. ಅವನ ಮಗನಾದ ಹಾನೂನನಿಗೆ ನಾನೂ ದಯೆತೋರುವೆನು” ಎಂದು ಹೇಳಿ ಹಾನೂನನನ್ನು ಸಂತೈಸಲು ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನ್ ದೇಶಕ್ಕೆ ಹೋಗಿ ದುಃಖದಲ್ಲಿದ್ದ ಹಾನೂನನನ್ನು ಸಂತೈಸಿದರು.
3 ಆದರೆ ಅಮ್ಮೋನಿಯರ ನಾಯಕರು ಹಾನೂನನಿಗೆ, “ಮೋಸ ಹೋಗಬೇಡ, ದಾವೀದನು ನಿನ್ನ ತಂದೆಯನ್ನು ಗೌರವಿಸಿ ನಿನ್ನನ್ನು ಸಂತೈಸಲು ಸೇವಕರನ್ನು ಕಳುಹಿಸಿದನೆಂದು ಭಾವಿಸಿಕೊಂಡಿರುವೆಯಾ? ಇಲ್ಲ, ಅವನು ನಿನ್ನ ರಾಜ್ಯದಲ್ಲಿ ಹೊಂಚುಹಾಕಲೂ ವಿಷಯಗಳನ್ನು ಸಂಗ್ರಹಿಸಲೂ ಕಳುಹಿಸಿದ್ದಾನೆ” ಎಂದು ಹೇಳಿದರು. 4 ಆಗ ಹಾನೂನನು ದಾವೀದನ ಸೇವಕರನ್ನು ಬಂಧಿಸಿ ಅವರ ಗಡ್ಡಗಳನ್ನು ಬೋಳಿಸಿ ಅವರ ವಸ್ತ್ರಗಳನ್ನು ಸೊಂಟದಿಂದ ಕೆಳಭಾಗದವರೆಗೆ ಕತ್ತರಿಸಿಬಿಟ್ಟು ಅವರನ್ನು ಹಿಂದಕ್ಕೆ ಕಳುಹಿಸಿದನು.
5 ದಾವೀದನ ಸೇವಕರು ತಮ್ಮ ಮನೆಗೆ ಹಿಂದಿರುಗಲು ನಾಚಿಕೆಪಟ್ಟರು. ಇದನ್ನು ಅರಿತ ಕೆಲವರು ದಾವೀದನ ಬಳಿಗೆ ಹೋಗಿ ನಡೆದದ್ದನ್ನು ತಿಳಿಸಿದರು. ಆಗ ದಾವೀದನು, “ನೀವು ನಿಮ್ಮ ಗಡ್ಡ ಬೆಳೆಯುವ ತನಕ ಜೆರಿಕೊ ಪಟ್ಟಣದಲ್ಲಿಯೇ ಇರಿ. ಅನಂತರ ನೀವು ಮನೆಗೆ ಬರಬಹುದು” ಎಂದು ತನ್ನ ಸೇವಕರಿಗೆ ಹೇಳಿಕಳುಹಿಸಿದನು.
6 ದಾವೀದನು ತಮಗೆ ಶತ್ರುವಾದನೆಂದು ಅಮ್ಮೋನಿಯರಿಗೆ ತಿಳಿದಾಗ ಹಾನೂನನು ಮೂವತ್ನಾಲ್ಕು ಸಾವಿರ ಕಿಲೋಗ್ರಾಂ ತೂಕದ ಬೆಳ್ಳಿಯನ್ನು ಕೊಟ್ಟು ಮೆಸೊಪೊಟೆಮಿಯಾದಿಂದ ರಥಗಳನ್ನೂ ರಾಹುತರನ್ನೂ ಕೊಂಡುಕೊಂಡನು. ಅಲ್ಲದೆ ಅರಾಮದ ಮಾಕ ಮತ್ತು ಚೋಬಾ ಪಟ್ಟಣಗಳಿಂದ ರಥಗಳನ್ನು ಮತ್ತು ರಾಹುತರನ್ನು ಕೊಂಡುಕೊಂಡನು. 7 ಹೀಗೆ ಅಮ್ಮೋನಿಯರು ಮೂವತ್ತೆರಡು ಸಾವಿರ ರಥಗಳಿಂದ ಯುದ್ಧಕ್ಕೆ ಸಜ್ಜಾದರು. ಅಲ್ಲದೆ ಮಾಕಾದ ಅರಸನಿಗೆ ಹಣವನ್ನು ಕೊಟ್ಟು ಅವನ ಸೈನ್ಯವನ್ನೂ ತಮ್ಮ ಸಹಾಯಕ್ಕೆ ಬರಮಾಡಿದರು. ಮಾಕದ ಅರಸನೂ ಅವನ ಸೈನಿಕರೂ ಬಂದು ಮೇದೆಬ ಪಟ್ಟಣದ ಬಳಿ ಪಾಳೆಯ ಮಾಡಿಕೊಂಡರು. ಇತ್ತ ಅಮ್ಮೋನಿಯರೂ ಯುದ್ಧಸನ್ನದ್ಧರಾದರು.
8 ಇದನ್ನು ಕೇಳಿದ ದಾವೀದನು ಯೋವಾಬನನ್ನೂ ತನ್ನ ಸಮಸ್ತ ಸೈನ್ಯವನ್ನೂ ಅವರೊಂದಿಗೆ ಯುದ್ಧಮಾಡಲು ಕಳುಹಿಸಿದನು. 9 ಅಮ್ಮೋನಿಯರು ತಮ್ಮ ಪಟ್ಟಣದಿಂದ ಹೊರಬಂದರು. ಅವರ ಸಹಾಯಕ್ಕಾಗಿ ಬಂದಿದ್ದ ಅರಸರು ಪ್ರತ್ಯೇಕವಾಗಿಯೇ ಇದ್ದರು.
10 ಯೋವಾಬನು ರಣರಂಗವನ್ನು ವೀಕ್ಷಿಸಿದಾಗ ಎರಡು ಗುಂಪಿನ ಸೈನ್ಯಗಳಿದ್ದದ್ದನ್ನು ಕಂಡನು. ಒಂದು ಗುಂಪು ಅವನ ಮುಂಭಾಗದಲ್ಲಿಯೂ ಇನ್ನೊಂದು ಗುಂಪು ಅವನ ಹಿಂಭಾಗದಲ್ಲಿಯೂ ಇದ್ದವು. ಆಗ ಯೋವಾಬನು ತನ್ನಲ್ಲಿದ್ದ ರಣವೀರರನ್ನು ಆರಿಸಿ ಅರಾಮ್ಯರ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. 11 ಉಳಿದ ಸೈನಿಕರನ್ನು ಅಬ್ಷೈಯನ ನಾಯಕತ್ವದಲ್ಲಿ ಇರಿಸಿದನು. ಅಬ್ಷೈಯು ಯೋವಾಬನ ತಮ್ಮನು. ಈ ಸೈನಿಕರು ಅಮ್ಮೋನಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. 12 ಯೋವಾಬನು ಅಬ್ಷೈಗೆ, “ಅರಾಮ್ಯರ ಸೈನ್ಯವು ನನಗಿಂತ ಬಲಿಷ್ಠವಾಗಿದ್ದರೆ, ನೀನು ನನ್ನ ಸಹಾಯಕ್ಕೆ ಬರಬೇಕು. ಅಮ್ಮೋನಿಯರ ಸೈನ್ಯವು ನಿನಗಿಂತ ಬಲಿಷ್ಠವಾಗಿದ್ದರೆ ನಾನು ನಿನ್ನ ಸಹಾಯಕ್ಕೆ ಬರುವೆನು. 13 ನಾವು ಧೈರ್ಯಶಾಲಿಗಳಾಗಿದ್ದು ಅಂಜದೆ ನಮ್ಮ ಜನರಿಗಾಗಿಯೂ ನಮ್ಮ ದೇವರ ಪಟ್ಟಣಗಳಿಗಾಗಿಯೂ ಯುದ್ಧಮಾಡೋಣ. ಯೆಹೋವನು ತನ್ನ ಚಿತ್ತದಂತೆ ನಮ್ಮನ್ನು ನಡೆಸಲಿ” ಎಂದು ಹೇಳಿದನು.
14 ಯೋವಾಬನು ತನ್ನ ಸೈನ್ಯದೊಡನೆ ಅರಾಮ್ಯರ ಸೈನ್ಯದ ಮೇಲೆ ದಾಳಿ ಮಾಡಿದನು. ಅರಾಮ್ಯರ ಸೈನ್ಯವು ಅವನೆದುರಿನಿಂದ ಓಡಿಹೋಯಿತು. 15 ಅರಾಮ್ಯರ ಸೈನ್ಯವು ಓಡಿಹೋಗುವುದನ್ನು ನೋಡಿದ ಅಮ್ಮೋನಿಯರು ಸಹ ಇಸ್ರೇಲರ ಎದುರಿನಿಂದ ಹಿಂತಿರಿಗಿ ಓಡಿದರು. ಅಬ್ಷೈ ಮತ್ತು ಅವನ ಸೈನಿಕರಿಂದ ಅವರು ಪಲಾಯನಗೈದು ತಮ್ಮ ಪಟ್ಟಣದೊಳಗೆ ಸೇರಿಕೊಂಡರು. ಯೋವಾಬನು ಜೆರುಸಲೇಮಿಗೆ ಹೋದನು.
16 ಅರಾಮ್ಯರು ತಾವು ಇಸ್ರೇಲರಿಂದ ಸೋತುಹೋದದ್ದನ್ನು ನೋಡಿ ಯೂಫ್ರೇಟೀಸ್ ನದಿಯ ಪೂರ್ವದಲ್ಲಿದ್ದ ಅರಾಮ್ಯರನ್ನು ಸಹಾಯಕ್ಕಾಗಿ ಕರೆಯಿಸಿದರು. ಶೋಫಕನು ಹದದೆಜರನ ಸೇನಾಧಿಪತಿಯಾಗಿದ್ದನು.
17 ಅರಾಮ್ಯರು ಯುದ್ಧಕ್ಕೆ ಜನಕೂಡಿಸುತ್ತಾರೆಂಬ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರೇಲ್ ಸೈನ್ಯವನ್ನು ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಅರಾಮ್ಯರೊಂದಿಗೆ ಯುದ್ಧಮಾಡಿದನು. ಯುದ್ಧಸನ್ನದ್ಧರಾಗಿ ಕಾಳಗವನ್ನು ಆರಂಭಿಸಿಯೇ ಬಿಟ್ಟರು. 18 ಅರಾಮ್ಯರು ಇಸ್ರೇಲರ ಎದುರು ನಿಲ್ಲಲಾರದೆ ಬೆನ್ನುಹಾಕಿ ಓಡಿದರು. ಆ ದಿವಸ ದಾವೀದನೂ ಅವನ ಸೈನಿಕರೂ ಅರಾಮ್ಯರ ಏಳು ಸಾವಿರ ಮಂದಿ ರಾಹುತರನ್ನೂ ನಲವತ್ತು ಸಾವಿರ ಮಂದಿ ಕಾಲಾಳುಗಳನ್ನೂ ಕೊಂದರು. ಇವರಲ್ಲಿ ಅರಾಮ್ಯರ ಸೇನಾಪತಿಯಾದ ಶೋಫಕನೂ ಕೊಲ್ಲಲ್ಪಟ್ಟನು.
19 ಹದದೆಜರನು ತಾನು ದಾವೀದನ ಸೈನ್ಯದಿಂದ ಸೋಲಿಸಲ್ಪಟ್ಟನೆಂದು ಗೊತ್ತಾದಾಗ ದಾವೀದನೊಂದಿಗೆ ಸಂಧಾನ ಮಾಡಿ ಅವನ ಸೇವಕನಾದನು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯ ಮಾಡುವುದನ್ನು ನಿರಾಕರಿಸಿದರು.
ಅಮ್ಮೋನಿಯರನ್ನು ಯೋವಾಬನು ನಾಶಮಾಡಿದ್ದು
20 ವಸಂತಕಾಲದಲ್ಲಿ ರಾಜರುಗಳು ಯುದ್ಧಕ್ಕೆ ಹೊರಡುವ ಸಮಯ. ಯೋವಾಬನೂ ತನ್ನ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟನು. ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಇಸ್ರೇಲಿನ ಸೈನ್ಯವು ಅಮ್ಮೋನ್ ದೇಶದೊಳಗೆ ನುಗ್ಗಿ ಅದನ್ನು ನಾಶಮಾಡಿದರು. ಆಮೇಲೆ ರಬ್ಬ ಪಟ್ಟಣಕ್ಕೆ ಮುತ್ತಿಗೆಹಾಕಿ ಸಂಪೂರ್ಣವಾಗಿ ನಾಶಮಾಡಿದರು.
2 ಅದರ ಅರಸನ ಕಿರೀಟವನ್ನು ದಾವೀದನು ತೆಗೆದುಕೊಂಡನು. ಅದು ಎಪ್ಪತ್ತೈದು ಪೌಂಡು ಭಾರವುಳ್ಳದ್ದಾಗಿತ್ತು ಮತ್ತು ಅಮೂಲ್ಯವಾದ ರತ್ನಗಳಿಂದ ಮಾಡಿದ್ದಾಗಿತ್ತು. ಆ ಕಿರೀಟವನ್ನು ದಾವೀದನು ತನ್ನ ತಲೆಯ ಮೇಲೆ ಇಟ್ಟುಕೊಂಡನು. ಆ ಪಟ್ಟಣದಿಂದ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. 3 ದಾವೀದನು ರಬ್ಬದ ಜನರನ್ನು ಸೆರೆಹಿಡಿದುಕೊಂಡು ಬಂದು ಅವರನ್ನು ಮರಕಡಿಯುವುದಕ್ಕೂ ಕೊಡಲಿ ಮತ್ತು ಹಾರೆಗಳಿಂದ ಕೆಲಸ ಮಾಡುವದಕ್ಕೂ ನೇಮಿಸಿದನು. ಇದೇ ಪ್ರಕಾರ ದಾವೀದನು ಅಮ್ಮೋನಿಯರ ಎಲ್ಲಾ ಪಟ್ಟಣಗಳಲ್ಲಿಯೂ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂತಿರುಗಿ ಬಂದನು.
ಫಿಲಿಷ್ಟಿಯರ ದೈತ್ಯರನ್ನು ಕೊಂದದ್ದು
4 ಇದಾದ ಬಳಿಕ ಇಸ್ರೇಲರು ಗೆಜೆರಿನಲ್ಲಿ ಫಿಲಿಷ್ಟಿಯರ ಜೊತೆಯಲ್ಲಿ ಯುದ್ಧಮಾಡಿದರು. ಹುಷಯದವನಾದ ಸಿಬ್ಬೆಕೈ ಎಂಬವನು, ದೈತ್ಯನ ಮಗನಾದ ಸಿಪ್ಪೈ ಎಂಬವನನ್ನು ಕೊಂದನು. ಇದರಿಂದಾಗಿ ಫಿಲಿಷ್ಟಿಯರು ಇಸ್ರೇಲರಿಗೆ ಸೇವೆಮಾಡುವವರಾದರು.
5 ಇನ್ನೊಂದು ಸಾರಿ, ಇಸ್ರೇಲರು ಫಿಲಿಷ್ಟಿಯರೊಂದಿಗೆ ತಿರುಗಿ ಯುದ್ಧಮಾಡುವಾಗ ಯಾಯೀರನ ಮಗನಾದ ಎಲ್ಹಾನಾನನು ಗೊಲ್ಯಾತನ ತಮ್ಮನಾದ ಲಹ್ಮೀಯನ್ನು ಕೊಂದನು. ಗೊಲ್ಯಾತನು ಗತ್ ಪಟ್ಟಣದವನಾಗಿದ್ದನು. ಲಹ್ಮೀಯ ಈಟಿಯು ಬಹು ಭಾರವಾಗಿತ್ತು. ಕೈಮಗ್ಗದ ದೊಡ್ಡ ಕುಂಟೆಯಷ್ಟಿತ್ತು.
6 ಇದಾದನಂತರ ಇನ್ನೊಂದು ಯುದ್ಧವನ್ನು ಇಸ್ರೇಲರು ಫಿಲಿಷ್ಟಿಯರೊಂದಿಗೆ ಗತ್ ಊರಿನಲ್ಲಿ ಮಾಡಿದರು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನಾಗಿದ್ದನು. 7 ಇವನು ಇಸ್ರೇಲರನ್ನು ಪರಿಹಾಸ್ಯ ಮಾಡಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
8 ಗತ್ ಊರಿನ ರೆಫಾಯರನ್ನು ದಾವೀದನೂ ಅವನ ಜನರೂ ಕೊಂದುಹಾಕಿದರು.
1 ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನಿಯ ಎಂಬ ಪ್ರದೇಶಗಳಲ್ಲಿ ಚದರಿಹೋಗಿ ಪ್ರವಾಸಿಗಳಾದ ದೇವಜನರಿಗೆ ಬರೆಯುವ ಪತ್ರ.
2 ದೇವರು ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದರ ಮೂಲಕ ಆರಿಸಿಕೊಳ್ಳಲು ಬಹುಕಾಲದ ಹಿಂದೆಯೇ ಯೋಜನೆ ಮಾಡಿದ್ದನು. ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದು ಪರಿಶುದ್ಧಾತ್ಮನ ಕಾರ್ಯ. ನೀವು ಯೇಸು ಕ್ರಿಸ್ತನ ರಕ್ತದ ಮೂಲಕ ಪರಿಶುದ್ಧರಾಗಿ ತನಗೆ ವಿಧೇಯರಾಗಬೇಕೆಂಬುದು ದೇವರ ಅಪೇಕ್ಷೆಯಾಗಿತ್ತು. ಕೃಪೆಯೂ ಶಾಂತಿಯೂ ನಿಮಗೆ ಅಧಿಕವಾಗಿ ಲಭಿಸಲಿ.
ಜೀವಂತವಾದ ನಿರೀಕ್ಷೆ
3 ನಮ್ಮ ಪ್ರಭುವಾಗಿರುವ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ದೇವರು ಮಹಾ ಕರುಣಾಳುವಾಗಿದ್ದಾನೆ. ಆತನು ತನ್ನ ಕರುಣೆಯಿಂದಲೇ ನಮಗೆ ಹೊಸ ಜೀವವನ್ನು ನೀಡಿದನು. ಸತ್ತವರೊಳಗಿಂದ ಎದ್ದುಬಂದ ಯೇಸು ಕ್ರಿಸ್ತನ ಮೂಲಕ ಅದು ನಮಗೆ ಒಂದು ಜೀವಂತ ನಿರೀಕ್ಷೆಯನ್ನು ತರುತ್ತದೆ. 4 ದೇವರು ತನ್ನ ಮಕ್ಕಳಿಗೆ ನೀಡುವ ಆಶೀರ್ವಾದಗಳಲ್ಲಿ ಈಗ ನಮಗೆ ನಿರೀಕ್ಷೆಯಿದೆ. ಅವು ನಿಮಗಾಗಿ ಪರಲೋಕದಲ್ಲಿ ಇಡಲ್ಪಟ್ಟಿವೆ. ಅವು ಹಾಳಾಗುವುದಿಲ್ಲ, ನಾಶವಾಗುವುದಿಲ್ಲ ಮತ್ತು ಸೌಂದರ್ಯವನ್ನು ಕಳೆದುಕೊಳ್ಳುವುದಿಲ್ಲ.
5 ದೇವರ ಶಕ್ತಿಯು ನಿಮ್ಮ ನಂಬಿಕೆಯ ಮೂಲಕ ನಿಮ್ಮನ್ನು ಕಾಯುತ್ತದೆ. ನಿಮಗೆ ರಕ್ಷಣೆಯಾಗುವವರೆಗೆ ನಿಮ್ಮನ್ನು ಸುರಕ್ಷಿತವಾಗಿಡುತ್ತದೆ. ಸಿದ್ಧವಾಗಿರುವ ಆ ರಕ್ಷಣೆಯು ಅಂತ್ಯಕಾಲದಲ್ಲಿ ನಿಮಗೆ ದೊರೆಯುವುದು. 6 ಇದು ನಿಮ್ಮನ್ನು ಬಹಳ ಸಂತೋಷಗೊಳಿಸುತ್ತದೆ. ಆದರೆ ಈಗ ಸ್ವಲ್ಪಕಾಲ ಅನೇಕ ವಿಧವಾದ ತೊಂದರೆಗಳು ನಿಮ್ಮಲ್ಲಿ ದುಃಖವನ್ನು ಉಂಟುಮಾಡಬಹುದು. 7 ನಿಮ್ಮ ನಂಬಿಕೆಯು ಪರಿಶುದ್ಧವಾಗಿದೆ ಎಂಬುದನ್ನು ಪ್ರಕಟಿಸಲು ಈ ತೊಂದರೆಗಳು ಸಂಭವಿಸುತ್ತವೆ. ನಿಮ್ಮ ನಂಬಿಕೆಯ ಪರಿಶುದ್ಧತೆಯು ಬಂಗಾರದ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಬಂಗಾರವು ನಶಿಸಿಹೋಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟ ಹಾಕಿ ಅದರ ಪರಿಶುದ್ಧತೆಯನ್ನು ಶೋಧಿಸುವರು. ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ನಂಬಿಕೆಯ ಪರಿಶುದ್ಧತೆಯು ನಿಮಗೆ ಕೀರ್ತಿ, ಪ್ರಭಾವ ಮತ್ತು ಗೌರವಗಳನ್ನು ತರುತ್ತದೆ.
8 ನೀವು ಕ್ರಿಸ್ತನನ್ನು ನೋಡದಿದ್ದರೂ ಆತನನ್ನು ಪ್ರೀತಿಸುವಿರಿ. ಈಗ ಆತನನ್ನು ನೋಡದಿದ್ದರೂ ಆತನಲ್ಲಿ ನಂಬಿಕೆಯಿಟ್ಟಿದ್ದೀರಿ. ನಿಮ್ಮಲ್ಲಿ ಹೇಳಲಾಗದಷ್ಟು ಆನಂದವು ತುಂಬಿಕೊಂಡಿದೆ. ಆ ಆನಂದವು ಪ್ರಭಾವಪೂರ್ಣವಾಗಿದೆ. 9 ನಿಮ್ಮ ನಂಬಿಕೆಗೆ ಒಂದು ಗುರಿಯಿದೆ. ನಿಮ್ಮ ಆತ್ಮವನ್ನು ರಕ್ಷಿಸಬೇಕೆಂಬುದೇ ಆ ಗುರಿ. ನಿಮ್ಮ ಗುರಿಯಾಗಿರುವ ರಕ್ಷಣೆಯನ್ನು ಹೊಂದಿಕೊಳ್ಳುವಿರಿ.
10 ಪ್ರವಾದಿಗಳು ಈ ರಕ್ಷಣೆಯನ್ನು ಕುರಿತು ಸೂಕ್ಷ್ಮವಾಗಿ ಹುಡುಕಿ ಪರಿಶೀಲಿಸಲು ಪ್ರಯತ್ನಿಸಿದರು. ನಿಮಗೆ ಮುಂದೆ ಬರಲಿರುವ ಕೃಪೆಯನ್ನು ಕುರಿತು ಅವರು ಮಾತನಾಡಿದರು. 11 ಕ್ರಿಸ್ತನ ಆತ್ಮನು ಅವರಲ್ಲಿದ್ದನು. ಆ ಆತ್ಮನು ಕ್ರಿಸ್ತನಿಗೆ ಸಂಭವಿಸಬಹುದಾದ ಸಂಕಟವನ್ನು ಮತ್ತು ಆ ಸಂಕಟಗಳ ನಂತರ ಬರಲಿದ್ದ ಮಹಿಮೆಯನ್ನು ಕುರಿತು ತಿಳಿಸುತ್ತಿದ್ದನು. ಆ ಪ್ರವಾದಿಗಳು ತಮಗೆ ಆತ್ಮನು ತೋರಿಸುತ್ತಿದ್ದುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆ ಸಂಗತಿಗಳು ಯಾವಾಗ ಸಂಭವಿಸುತ್ತವೆ ಹಾಗೂ ಆ ಕಾಲದಲ್ಲಿ ಈ ಲೋಕವು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು.
12 ಆ ಪ್ರವಾದಿಗಳು ಮಾಡಿದ ಈ ಸೇವೆಯು ನಿಮಗೋಸ್ಕರವೇ ಹೊರತು ಅವರಿಗೋಸ್ಕರವಲ್ಲ ಎಂಬುದು ಅವರಿಗೆ ಪ್ರಕಟವಾಯಿತು. ಈಗ ನೀವು ಕೇಳಿದ ಸಂಗತಿಗಳನ್ನು ಅವರು ತಿಳಿಸಿದಾಗ ಅವರು ನಿಮ್ಮ ಸೇವೆಯನ್ನೇ ಮಾಡುತ್ತಿದ್ದರು. ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಸಹಾಯದಿಂದ ನಿಮಗೆ ಸುವಾರ್ತೆಯನ್ನು ತಿಳಿಸಿದವರೇ ನಿಮಗೆ ಆ ಸಂಗತಿಗಳನ್ನು ತಿಳಿಸಿದರು. ನಿಮಗೆ ತಿಳಿಸಿದ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲು ದೇವದೂತರೂ ಕಾತುರರಾಗಿದ್ದಾರೆ.
ಪರಿಶುದ್ಧರಾಗಿ ಜೀವಿಸಲು ಆಹ್ವಾನ
13 ಆದ್ದರಿಂದ ನೀವು ನಿಮ್ಮ ಮನಸ್ಸುಗಳನ್ನು ಸೇವೆಗಾಗಿ ಸಿದ್ಧಪಡಿಸಿರಿ. ಅಲ್ಲದೆ ನಿಮ್ಮನ್ನು ಹತೋಟಿಯಲ್ಲಿಟ್ಟುಕೊಂಡಿರಿ. ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರೆಯುವ ಕೃಪಾವರದ ಮೇಲೆಯೇ ನಿಮ್ಮ ನಿರೀಕ್ಷೆಯೆಲ್ಲಾ ಇರಬೇಕು. 14 ನೀವು ಮೊದಲು ಈ ಸಂಗತಿಗಳ ಕುರಿತು ಅರ್ಥಮಾಡಿಕೊಳ್ಳದಿದ್ದ ಕಾರಣ, ನೀವು ನಿಮ್ಮ ಇಚ್ಛೆಯಂತೆ ಕೆಟ್ಟಕಾರ್ಯಗಳನ್ನು ಮಾಡಿದಿರಿ. ಆದರೆ ಈಗ ನೀವು ವಿಧೇಯರಾಗಿರುವ ದೇವಮಕ್ಕಳು, ಆದ್ದರಿಂದ ಈಗ ಮೊದಲಿನಂತೆ ಜೀವಿಸಬೇಡಿ. 15 ದೇವರು ಪರಿಶುದ್ಧನಾಗಿರುವಂತೆ ನಿಮ್ಮ ನಡೆನುಡಿಗಳು ಪರಿಶುದ್ಧವಾಗಿರಲಿ. ನಿಮ್ಮನ್ನು ಕರೆದಾತನು ದೇವರೇ. 16 “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು”(A) ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದೆ.
17 ನೀವು ದೇವರಲ್ಲಿ ಪ್ರಾರ್ಥಿಸುವಾಗ ಆತನನ್ನು ತಂದೆಯೆಂದು ಕರೆಯುತ್ತೀರಿ. ದೇವರು ಪ್ರತಿಯೊಬ್ಬರಿಗೆ ಅವರವರ ಕೆಲಸಕ್ಕೆ ತಕ್ಕಂತೆ ತೀರ್ಪುಕೊಡುವನು. ನೀವು ಈ ಲೋಕದಲ್ಲಿ ಪ್ರವಾಸಿಗಳಾಗಿರುವುದರಿಂದ ದೇವರಿಗೆ ಭಯಪಟ್ಟು ಜೀವಿಸಿ. 18 ಮೊದಲು ನೀವು ನಿರರ್ಥಕವಾದ ರೀತಿಯಲ್ಲಿ ಜೀವಿಸುತ್ತಿದ್ದಿರೆಂಬುದು ನಿಮಗೇ ತಿಳಿದಿದೆ. ನಿಮಗಿಂತಲೂ ಮೊದಲು ಜೀವಿಸಿದ್ದವರಿಂದ ಅಂತಹ ಜೀವಿತವನ್ನು ಕಲಿತುಕೊಂಡಿರಿ. ಆದರೆ ಅದರಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿಬಂಗಾರಗಳಿಂದಲ್ಲ. 19 ಪೂರ್ಣಾಂಗವಾದ ಮತ್ತು ಪರಿಶುದ್ಧವಾದ ಕುರಿಮರಿಯಾದ ಕ್ರಿಸ್ತನ ಅಮೂಲ್ಯವಾದ ರಕ್ತದಿಂದ ನಿಮಗೆ ಬಿಡುಗಡೆಯಾಯಿತು. 20 ಈ ಲೋಕವು ಸೃಷ್ಟಿಯಾಗುವುದಕ್ಕೆ ಮೊದಲೇ ಕ್ರಿಸ್ತನು ಆರಿಸಲ್ಪಟ್ಟನು. ಆದರೆ ಆತನು ನಿಮಗೋಸ್ಕರ ಈ ಅಂತ್ಯಕಾಲದಲ್ಲಿ ಪ್ರತ್ಯಕ್ಷನಾದನು. 21 ನೀವು ಕ್ರಿಸ್ತನ ಮೂಲಕ ದೇವರನ್ನು ನಂಬಿದ್ದೀರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ನಂತರ ದೇವರು ಆತನಿಗೆ ಪ್ರಭಾವವನ್ನು ದಯಪಾಲಿಸಿದನು. ಆದ್ದರಿಂದ ನಿಮ್ಮ ನಂಬಿಕೆ ಮತ್ತು ನಿರೀಕ್ಷೆಗಳು ದೇವರಲ್ಲಿರಲಿ.
22 ನೀವು ಸತ್ಯಕ್ಕೆ ವಿಧೇಯರಾಗಿರುವುದರ ಮೂಲಕ ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡಿಕೊಂಡಿದ್ದೀರಿ. ಈಗ ನಿಮ್ಮ ಸಹೋದರ ಸಹೋದರಿಯರನ್ನು ನಿಜವಾಗಿಯೂ ಪ್ರೀತಿಸಬಲ್ಲವರಾಗಿದ್ದೀರಿ. ಆದ್ದರಿಂದ ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿ[a] ಪ್ರೀತಿಸಿರಿ. 23 ನೀವು ಹೊಸದಾಗಿ ಹುಟ್ಟಿದವರಾಗಿದ್ದೀರಿ. ಈ ಹೊಸಜೀವವು ನಾಶವಾಗುವಂಥದ್ದರಿಂದ ಬರದೆ ನಾಶವಾಗದೆ ಇರುವಂಥದ್ದರಿಂದ ಬಂದದ್ದಾಗಿದೆ. ಸಜೀವವೂ ಶಾಶ್ವತವೂ ಆಗಿರುವ ದೇವರ ವಾಕ್ಯದ ಮೂಲಕ ನೀವು ಹೊಸದಾಗಿ ಹುಟ್ಟಿದ್ದೀರಿ. 24 ಪವಿತ್ರ ಗ್ರಂಥವು ಹೇಳುವುದೇನೆಂದರೆ,
“ಜನರೆಲ್ಲರೂ ಹುಲ್ಲಿನಂತಿದ್ದಾರೆ.
ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತಿದೆ.
ಹುಲ್ಲು ಒಣಗಿಹೋಗುವುದು,
ಹೂವು ಉದುರಿಹೋಗುವುದು,
25 ಆದರೆ ದೇವರ ವಾಕ್ಯವು ಎಂದೆಂದಿಗೂ ಜೀವಂತವಾಗಿರುತ್ತದೆ.”(B)
ನಿಮಗೆ ಈ ವಾಕ್ಯವನ್ನೇ ತಿಳಿಸಲಾಯಿತು.
ದೇವರ ಕರೆಗೆ ಯೋನನ ವಿಧೇಯತೆ
3 ಯೆಹೋವನು ಯೋನನ ಸಂಗಡ ತಿರುಗಿ ಮಾತನಾಡಿದನು. ಆತನು ಹೇಳಿದ್ದೇನೆಂದರೆ, 2 “ಮಹಾನಗರವಾದ ನಿನೆವೆಗೆ ನೀನು ಎದ್ದುಹೋಗಿ ಅಲ್ಲಿ ನಾನು ಹೇಳಿದ್ದನ್ನು ಅವರಿಗೆ ಸಾರು.”
3 ಯೋನನು ಯೆಹೋವನ ಆಜ್ಞೆಗೆ ವಿಧೇಯನಾಗಿ ನಿನೆವೆಗೆ ಬಂದನು. ನಿನೆವೆಯು ಬಹು ವಿಶಾಲವಾದ ಪಟ್ಟಣ. ಅದು ಮೂರು ದಿನಗಳ ಪ್ರಯಾಣದಷ್ಟು ದೊಡ್ಡದಿತ್ತು.
4 ಯೋನನು ನಗರದ ಮಧ್ಯಕ್ಕೆ ಹೋಗಿ ಜನರಿಗೆ ಸಾರಲಿಕ್ಕೆ ಪ್ರಾರಂಭಿಸಿದನು. “ನಲವತ್ತು ದಿನಗಳು ಕಳೆದ ಬಳಿಕ ನಿನೆವೆಯು ನಾಶವಾಗುವದು” ಎಂದು ಜನರಿಗೆ ಸಾರಿದನು.
5 ನಿನೆವೆಯ ಜನರು ದೇವರಿಂದ ಬಂದ ಸಂದೇಶವನ್ನು ನಂಬಿದರು. ಆ ಜನರು ತಮ್ಮ ಪಾಪಗಳ ಕುರಿತು ಯೋಚಿಸಲು ಉಪವಾಸ ಮಾಡಿದರು. ತಮ್ಮ ಪಶ್ಚಾತ್ತಾಪಕ್ಕೆ ಗುರುತಾಗಿ ಶೋಕವಸ್ತ್ರವನ್ನು ಧರಿಸಿದರು. ನಗರದ ಎಲ್ಲಾ ಜನರು ಹೀಗೆ ಮಾಡಿದರು. ಉನ್ನತ ಅಧಿಕಾರಿಗಳಿಂದ ಹಿಡಿದು ಕೀಳು ಜನರ ತನಕ ಹಾಗೆ ಮಾಡಿದರು.
6 ನಿನೆವೆಯ ಅರಸನು ಇದನ್ನು ಕೇಳಿ ತಾನು ಮಾಡಿದ ದುಷ್ಕೃತ್ಯಗಳಿಗಾಗಿ ಮನಮರುಗಿದನು. ತಾನು ಸಿಂಹಾಸನದಿಂದಿಳಿದು ರಾಜವಸ್ತ್ರವನ್ನು ತೆಗೆದಿಟ್ಟು ಶೋಕವಸ್ತ್ರವನ್ನು ಧರಿಸಿ ಬೂದಿಯ ಮೇಲೆ ಕುಳಿತುಕೊಂಡನು. 7 ತನ್ನ ಪ್ರಜೆಗಳಿಗೆ ಒಂದು ವಿಶೇಷ ಸಂದೇಶವನ್ನು ಬರೆಯಿಸಿ ನಗರದಲ್ಲೆಲ್ಲಾ ಪ್ರಚುರಪಡಿಸಿದನು. ಅದರಲ್ಲಿ ಹೀಗೆ ಬರೆದಿತ್ತು.
ಇದು ಅರಸನ ಮತ್ತು ಆತನ ಆಡಳಿತಗಾರರ ಆಜ್ಞೆ:
ಸ್ವಲ್ಪ ಸಮಯದವರೆಗೆ ಯಾವ ವ್ಯಕ್ತಯಾಗಲಿ ಪ್ರಾಣಿಯಾಗಲಿ ಆಹಾರವನ್ನು ತೆಗೆದುಕೊಳ್ಳಬಾರದು. ಮಂದೆಯಾಗಲಿ, ಹಿಂಡಾಗಲಿ ಹುಲ್ಲುಗಾವಲಿಗೆ ಹೋಗಬಾರದು. ನಿನೆವೆಯಲ್ಲಿ ವಾಸಿಸುವ ಯಾರೂ ಊಟಮಾಡಬಾರದು, ನೀರು ಕುಡಿಯಬಾರದು. 8 ಪ್ರತಿ ಮನುಷ್ಯನೂ ಪ್ರಾಣಿಯೂ ಶೋಕವಸ್ತ್ರವನ್ನು ಧರಿಸಬೇಕು. ಜನರು ದೇವರಿಗೆ ಗಟ್ಟಿಯಾಗಿ ಮೊರೆಯಿಡಬೇಕು. ಪ್ರತಿಯೊಬ್ಬನು ತನ್ನ ದುಷ್ಟಜೀವಿತವನ್ನು ಬದಲಾಯಿಸಿ ದುಷ್ಟತನ ಮಾಡುವದನ್ನು ನಿಲ್ಲಿಸಬೇಕು. 9 ಒಂದುವೇಳೆ ದೇವರು ತನ್ನ ಮನಸ್ಸನ್ನು ಬದಲಾಯಿಸಾನು. ತಾನು ಯೋಚಿಸಿದ್ದನ್ನು ನೆರವೇರಿಸದೆ ಇರುವನೋ ಏನೋ? ಆತನು ತನ್ನ ಯೋಜನೆಯನ್ನು ಹಿಂದೆಗೆದು, ಕೋಪಿಸಿಕೊಳ್ಳದೆ, ನಮ್ಮನ್ನು ಶಿಕ್ಷಿಸದೆ ಇರುವನೋ ಏನೋ! ಆಗ ನಾವು ನಾಶವಾಗದಿರಬಹುದು!
10 ಜನರು ಮಾಡಿದವುಗಳನ್ನು ದೇವರು ನೋಡಿದನು; ಅವರು ದುಷ್ಟತನ ಮಾಡುವದನ್ನು ನಿಲ್ಲಿಸಿದ್ದನ್ನು ಗಮನಿಸಿದನು. ಆತನು ಅವರನ್ನು ದಂಡಿಸಲಿಲ್ಲ.
ಯೇಸುವಿನೊಂದಿಗಿದ್ದ ಜನರು
8 ಮರುದಿನ, ಯೇಸು ಕೆಲವು ನಗರಗಳ ಮತ್ತು ಊರುಗಳ ಮೂಲಕ ಪ್ರಯಾಣ ಮಾಡಿ ಜನರಿಗೆ ಬೋಧಿಸಿದನು ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಿದನು. ಹನ್ನೆರಡು ಮಂದಿ ಅಪೊಸ್ತಲರು ಆತನೊಡನೆ ಇದ್ದರು. 2 ಕೆಲವು ಸ್ತ್ರೀಯರೂ ಆತನೊಡನೆ ಇದ್ದರು. ಈ ಸ್ತ್ರೀಯರು ಆತನಿಂದ ತಮ್ಮ ಕಾಯಿಲೆಗಳಿಂದ ಗುಣಹೊಂದಿದವರೂ ದೆವ್ವಗಳ ಕಾಟದಿಂದ ಬಿಡುಗಡೆ ಹೊಂದಿದವರೂ ಆಗಿದ್ದರು. ಈ ಸ್ತ್ರೀಯರಲ್ಲಿ ಒಬ್ಬಳ ಹೆಸರು ಮರಿಯಳು. ಆಕೆ ಮಗ್ದಲ ಎಂಬ ಊರಿನವಳು. ಯೇಸು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದನು. 3 ಇದಲ್ಲದೆ ಕೂಜನ (ಹೆರೋದನ ಸಹಾಯಕ) ಹೆಂಡತಿಯಾದ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕ ಸ್ತ್ರೀಯರು ಇದ್ದರು. ಈ ಸ್ತ್ರೀಯರು ಯೇಸುವಿಗೂ ಆತನ ಅಪೊಸ್ತಲರಿಗೂ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದರು.
ಯೇಸು ಹೇಳಿದ ಬೀಜ ಬಿತ್ತುವವನ ಸಾಮ್ಯ
(ಮತ್ತಾಯ 13:1-17; ಮಾರ್ಕ 4:1-12)
4 ಅನೇಕ ಜನರು ಊರೂರುಗಳಿಂದ ಯೇಸುವಿನ ಬಳಿಗೆ ಸೇರಿಬಂದರು. ಆಗ ಯೇಸು ಅವರಿಗೆ ಈ ಸಾಮ್ಯ ಹೇಳಿದನು:
5 “ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು. 6 ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವುಗಳು ಮೊಳೆಯತೊಡಗಿದರೂ ನೀರಿಲ್ಲದೆ ಒಣಗಿಹೋದವು. 7 ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯೆ ಬಿದ್ದವು. ಅವುಗಳು ಮೊಳೆತರೂ ಮುಳ್ಳುಗಿಡಗಳಿಂದ ಬೆಳೆಯಲಾಗಲಿಲ್ಲ. 8 ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಮೊಳೆತು ಬೆಳೆದು ನೂರರಷ್ಟು ಹೆಚ್ಚು ಫಲವನ್ನು ಕೊಟ್ಟವು.”
ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ಮೇಲೆ, “ನನ್ನ ಮಾತನ್ನು ಆಲಿಸುತ್ತಿರುವ ಜನರೇ, ಕೇಳಿರಿ” ಎಂದು ಹೇಳಿದನು.
9 ಶಿಷ್ಯರು ಆತನಿಗೆ, “ಈ ಸಾಮ್ಯದ ಅರ್ಥವೇನು?” ಎಂದು ಕೇಳಿದರು.
10 ಯೇಸು, “ನೀವು ದೇವರ ರಾಜ್ಯದ ಗುಟ್ಟುಗಳನ್ನು ತಿಳಿದುಕೊಳ್ಳಬೇಕೆಂದು ನಿಮ್ಮನ್ನು ಆರಿಸಿಕೊಳ್ಳಲಾಗಿದೆ. ಆದರೆ ಬೇರೆ ಜನರೊಂದಿಗೆ ನಾನು ಸಾಮ್ಯಗಳ ಮೂಲಕ ಮಾತಾಡುತ್ತೇನೆ, ಏಕೆಂದರೆ,
‘ಅವರು ನೋಡಿದರೂ ಕಾಣುವುದಿಲ್ಲ,
ಕೇಳಿದರೂ ಗ್ರಹಿಸಿಕೊಳ್ಳುವುದಿಲ್ಲ.’(A)
ಬೀಜಗಳ ಕುರಿತು ಯೇಸು ಕೊಟ್ಟ ವಿವರಣೆ
(ಮತ್ತಾಯ 13:18-23; ಮಾರ್ಕ 4:13-20)
11 “ಈ ಸಾಮ್ಯದ ಅರ್ಥ ಹೀಗಿದೆ: ಬೀಜವು ದೇವರ ವಾಕ್ಯ. 12 ಕಾಲ್ದಾರಿಯಲ್ಲಿ ಬಿದ್ದ ಬೀಜವೆಂದರೇನು? ದೇವರ ವಾಕ್ಯವನ್ನು ಕೆಲವರು ಕೇಳುತ್ತಾರೆ. ಆದರೆ ಸೈತಾನನು ಬಂದು ಅವರ ಹೃದಯದೊಳಗಿಂದ ಆ ವಾಕ್ಯವನ್ನು ತೆಗೆದುಬಿಡುತ್ತಾನೆ. ಅವರು ಆ ವಾಕ್ಯವನ್ನು ನಂಬದಿರುವುದರಿಂದ ರಕ್ಷಣೆಯನ್ನು ಹೊಂದಲಾರರು. 13 ಬಂಡೆಯ ಮೇಲೆ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯ ಕೇಳಿ ಸಂತೋಷದಿಂದ ಸ್ವೀಕರಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಆಳವಾದ ಬೇರುಗಳಿರುವುದಿಲ್ಲ. ಅವರು ಸ್ವಲ್ಪಕಾಲ ಮಾತ್ರವೇ ನಂಬುತ್ತಾರೆ. ಬಳಿಕ ತೊಂದರೆಯೇನಾದರೂ ಬಂದರೆ ತಮ್ಮ ನಂಬಿಕೆಯನ್ನು ಕಳೆದುಕೊಂಡು ದೇವರಿಂದ ದೂರ ಸರಿಯುತ್ತಾರೆ.
14 “ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದ ಬೀಜವೆಂದರೇನು? ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಲೋಕದ ಚಿಂತೆಗಳಿಗೂ ಐಶ್ವರ್ಯಗಳಿಗೂ ಭೋಗಗಳಿಗೂ ಅವರು ಅವಕಾಶಕೊಡುವುದರಿಂದ ಅವರು ಬೆಳೆಯಲಾರರು; ಎಂದಿಗೂ ಒಳ್ಳೆಯ ಫಲವನ್ನು ಕೊಡಲಾರರು. 15 ಒಳ್ಳೆಯ ನೆಲದಲ್ಲಿ ಬಿದ್ದ ಬೀಜವೆಂದರೇನು? ಒಳ್ಳೆಯದಾದ ಮತ್ತು ಯಥಾರ್ಥವಾದ ಹೃದಯದಿಂದ ದೇವರ ವಾಕ್ಯವನ್ನು ಕೇಳುವ ಜನರೇ ಬೀಜಬಿದ್ದ ಒಳ್ಳೆಯ ನೆಲವಾಗಿದ್ದಾರೆ. ಅವರು ದೇವರ ವಾಕ್ಯಕ್ಕೆ ವಿಧೇಯರಾಗಿ ತಾಳ್ಮೆಯಿಂದ ಒಳ್ಳೆಯ ಫಲವನ್ನು ನೀಡುವರು.
ನಿಮ್ಮ ತಿಳುವಳಿಕೆಯನ್ನು ಉಪಯೋಗಿಸಿರಿ
(ಮಾರ್ಕ 4:21-25)
16 “ಯಾವ ವ್ಯಕ್ತಿಯೂ ದೀಪವನ್ನು ಹಚ್ಚಿ ಅದನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಬಚ್ಚಿಡುವುದಿಲ್ಲ. ಮನೆಯೊಳಗೆ ಬರುವವರಿಗೆ ಸಾಕಷ್ಟು ಬೆಳಕು ದೊರೆಯಲಿ ಎಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾನೆ. 17 ಬೆಳಕಿಗೆ ಬಾರದ ಯಾವ ರಹಸ್ಯವೂ ಇಲ್ಲ; ಬಯಲಿಗೆ ಬಾರದ ಯಾವ ಗುಟ್ಟೂ ಇಲ್ಲ. 18 ಆದ್ದರಿಂದ ನೀವು ಕಿವಿಗೊಡುವಾಗ ಜಾಗರೂಕರಾಗಿರಿ; ಸ್ವಲ್ಪ ತಿಳುವಳಿಕೆ ಇರುವ ವ್ಯಕ್ತಿಯು ಹೆಚ್ಚು ತಿಳುವಳಿಕೆಯನ್ನು ಹೊಂದುವನು. ಆದರೆ ತಿಳುವಳಿಕೆ ಇಲ್ಲದ ವ್ಯಕ್ತಿಯು ತನಗಿದೆ ಎಂದುಕೊಂಡಿದ್ದ ತಿಳುವಳಿಕೆಯನ್ನೂ ಕಳೆದುಕೊಳ್ಳುವನು” ಎಂದು ಹೇಳಿದನು.
ಯೇಸುವಿನ ಶಿಷ್ಯರೇ ಆತನ ಕುಟುಂಬದವರು
(ಮತ್ತಾಯ 12:46-50; ಮಾರ್ಕ 3:31-35)
19 ಯೇಸುವಿನ ತಾಯಿ ಮತ್ತು ತಮ್ಮಂದಿರು ಆತನನ್ನು ಭೇಟಿಯಾಗಲು ಬಂದರು. ಅಲ್ಲಿ ಬಹಳ ಜನರು ಇದ್ದುದರಿಂದ ಯೇಸುವಿನ ತಾಯಿಯಾಗಲಿ ಆತನ ತಮ್ಮಂದಿರಾಗಲಿ ಆತನ ಬಳಿಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿದ್ದ ಒಬ್ಬನು, 20 “ನಿನ್ನ ತಾಯಿ ಮತ್ತು ತಮ್ಮಂದಿರು ಹೊರಗೆ ನಿಂತಿದ್ದಾರೆ. ಅವರು ನಿನ್ನನ್ನು ನೋಡಬೇಕೆಂದಿದ್ದಾರೆ” ಎಂದು ಯೇಸುವಿಗೆ ತಿಳಿಸಿದನು.
21 ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ನನ್ನ ತಾಯಿ ಮತ್ತು ನನ್ನ ತಮ್ಮಂದಿರು!” ಎಂದು ಉತ್ತರಕೊಟ್ಟನು.
ಯೇಸುವಿನ ಶಕ್ತಿಯನ್ನು ಶಿಷ್ಯರು ಕಂಡರು
(ಮತ್ತಾಯ 8:23-27; ಮಾರ್ಕ 4:35-41)
22 ಒಂದು ದಿನ ಯೇಸು ಮತ್ತು ಆತನ ಶಿಷ್ಯರು ದೋಣಿಯಲ್ಲಿ ಹತ್ತಿ ಕುಳಿತುಕೊಂಡರು. ಯೇಸು ಅವರಿಗೆ, “ನಾವು ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. ಅಂತೆಯೇ ಅವರು ಆಚೆದಡಕ್ಕೆ ಹೊರಟರು. 23 ಅವರು ಸರೋವರದ ಮೇಲೆ ದೋಣಿಯಲ್ಲಿ ಹೋಗುತ್ತಿರುವಾಗ ಯೇಸುವಿಗೆ ನಿದ್ದೆ ಹತ್ತಿತು. ಇತ್ತ ಸರೋವರದ ಮೇಲೆ ಬಿರುಗಾಳಿ ಬೀಸತೊಡಗಿತು. ದೋಣಿಯೊಳಗೆ ನೀರು ತುಂಬತೊಡಗಿತು. ದೋಣಿಯಲ್ಲಿದ್ದವರೆಲ್ಲರೂ ಅಪಾಯಕ್ಕೀಡಾದರು. 24 ಆಗ ಶಿಷ್ಯರು ಯೇಸುವಿನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಗುರುವೇ! ಗುರುವೇ! ನಾವು ಮುಳುಗಿಹೋಗುತ್ತಿದ್ದೇವೆ!” ಎಂದು ಹೇಳಿದರು.
ಕೂಡಲೇ ಯೇಸು ಎದ್ದು, ಆ ಗಾಳಿಗೂ ತೆರೆಗಳಿಗೂ ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತಿತು ಮತ್ತು ಸರೋವರ ಶಾಂತವಾಯಿತು. 25 ಯೇಸು ತನ್ನ ಶಿಷ್ಯರಿಗೆ, “ಎಲ್ಲಿ ಹೋಯಿತು ನಿಮ್ಮ ನಂಬಿಕೆ?” ಎಂದು ಕೇಳಿದನು.
ಶಿಷ್ಯರು ಭಯಪಟ್ಟರು ಮತ್ತು ವಿಸ್ಮಯಗೊಂಡರು. “ಈತನು ಯಾರಿರಬಹುದು? ಈತನು ಗಾಳಿಗೂ ನೀರಿಗೂ ಆಜ್ಞಾಪಿಸುತ್ತಾನೆ. ಅವು ವಿಧೇಯವಾಗುತ್ತವೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯ
(ಮತ್ತಾಯ 8:28-34; ಮಾರ್ಕ 5:1-20)
26 ಯೇಸು ಮತ್ತು ಆತನ ಶಿಷ್ಯರು ಗಲಿಲಾಯದಿಂದ ಸರೋವರವನ್ನು ದಾಟಿ, ಗೆರೆಸೇನರ ನಾಡಿಗೆ ಪ್ರಯಾಣ ಮಾಡಿದರು. 27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು.
28-29 ದೆವ್ವವು ಅವನನ್ನು ಪದೇಪದೇ ವಶಪಡಿಸಿಕೊಳ್ಳುತ್ತಿತ್ತು. ಆ ಮನುಷ್ಯನನ್ನು ಸೆರೆಮನೆಗೆ ಹಾಕಿ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿದರೂ ಅವನು ಅವುಗಳನ್ನು ಕಿತ್ತೊಗೆದುಬಿಡುತ್ತಿದ್ದನು. ಅವನೊಳಗಿದ್ದ ದೆವ್ವವು ಅವನನ್ನು ಜನರಿಲ್ಲದ ಸ್ಥಳಗಳಿಗೆ ಬಲವಂತವಾಗಿ ಕೊಂಡೊಯ್ಯುತ್ತಿತ್ತು. ಯೇಸು ಆ ದೆವ್ವಕ್ಕೆ, “ಅವನನ್ನು ಬಿಟ್ಟು ಹೋಗು” ಎಂದು ಆಜ್ಞಾಪಿಸಿದನು. ಆ ಮನುಷ್ಯನು ಯೇಸುವಿನ ಮುಂದೆ ಅಡ್ಡಬಿದ್ದು ಗಟ್ಟಿಯಾದ ಸ್ವರದಿಂದ, “ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನಿಂದ ನಿನಗೇನಾಗಬೇಕಾಗಿದೆ? ದಯಮಾಡಿ ನನ್ನನ್ನು ದಂಡಿಸಬೇಡ!” ಎಂದು ಕೂಗಿದನು.
30 “ನಿನ್ನ ಹೆಸರೇನು?” ಎಂದು ಯೇಸು ಕೇಳಿದನು.
“ದಂಡು” ಎಂದು ಅವನು ಉತ್ತರಿಸಿದನು. (ಏಕೆಂದರೆ ಅವನೊಳಗೆ ಅನೇಕ ದೆವ್ವಗಳು ಸೇರಿಕೊಂಡಿದ್ದವು.) 31 ತಮ್ಮನ್ನು ಪಾತಾಳಕ್ಕೆ ಕಳುಹಿಸಕೂಡದೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. 32 ಅಲ್ಲಿದ್ದ ಒಂದು ಗುಡ್ಡದ ಮೇಲೆ ಹಂದಿಗಳ ಒಂದು ದೊಡ್ಡ ಗುಂಪು ಮೇಯುತ್ತಿತ್ತು. ಹಂದಿಗಳೊಳಗೆ ಹೋಗಲು ತಮಗೆ ಅನುಮತಿ ಕೊಡಬೇಕೆಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು ಅವುಗಳಿಗೆ ಅನುಮತಿಕೊಟ್ಟನು. 33 ಆಗ ದೆವ್ವಗಳು ಆ ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಸೇರಿಕೊಂಡವು. ಆ ಕೂಡಲೇ ಹಂದಿಗಳ ಗುಂಪು ಗುಡ್ಡದ ಕೆಳಗೆ ಓಡಿಹೋಗಿ ಸರೋವರದಲ್ಲಿ ಬಿದ್ದು ಮುಳುಗಿಹೋದವು.
34 ಹಂದಿಗಳನ್ನು ಕಾಯುತ್ತಿದ್ದವರು ಓಡಿಹೋಗಿ, ನಡೆದ ಈ ಸಂಗತಿಯನ್ನು ಹೊಲಗಳಲ್ಲಿಯೂ ಊರುಗಳಲ್ಲಿಯೂ ಇದ್ದ ಜನರಿಗೆ ತಿಳಿಸಿದರು. 35 ಅದನ್ನು ನೋಡಲು ಜನರೆಲ್ಲರೂ ಯೇಸುವಿದ್ದಲ್ಲಿಗೆ ಬಂದರು. ಆ ಮನುಷ್ಯನು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತಿದ್ದುದನ್ನು ಅವರು ನೋಡಿದರು. ಅವನು ಬಟ್ಟೆಗಳನ್ನು ಹಾಕಿಕೊಂಡಿದ್ದನು; ಸ್ವಸ್ಥಬುದ್ಧಿಯುಳ್ಳವನಾಗಿದ್ದನು. ದೆವ್ವಗಳು ಅವನನ್ನು ಬಿಟ್ಟುಹೋಗಿದ್ದವು. ಜನರಿಗೆ ಭಯವಾಯಿತು. 36 ಯೇಸು ಆ ಮನುಷ್ಯನನ್ನು ಗುಣಪಡಿಸಿದ ರೀತಿಯನ್ನು ನೋಡಿದ್ದವರು ಆತನನ್ನು ನೋಡಲು ಬಂದ ಜನರೆಲ್ಲರಿಗೂ ಆ ಘಟನೆಯನ್ನು ವಿವರಿಸಿ ಹೇಳಿದರು. 37 ಜನರು ಯೇಸುವಿಗೆ, “ನೀನು ಇಲ್ಲಿಂದ ಹೊರಟುಹೋಗು” ಎಂದು ಕೇಳಿಕೊಂಡರು. ಏಕೆಂದರೆ ಅವರು ಬಹಳ ಭಯಗೊಂಡಿದ್ದರು.
ಆದ್ದರಿಂದ ಯೇಸು ದೋಣಿಯನ್ನು ಹತ್ತಿ ಮತ್ತೆ ಗಲಿಲಾಯಕ್ಕೆ ಹಿಂತಿರುಗಿದನು. 38 ದೆವ್ವಗಳಿಂದ ಬಿಡುಗಡೆಯಾಗಿದ್ದವನು, “ನನ್ನನ್ನು ನಿನ್ನ ಜೊತೆಯಲ್ಲೇ ಕರೆದುಕೊಂಡು ಹೋಗು,” ಎಂದು ಕೇಳಿಕೊಂಡನು. 39 ಅದಕ್ಕೆ ಯೇಸು, “ನಿನ್ನ ಮನೆಗೆ ಹಿಂತಿರುಗಿ ಹೋಗು. ದೇವರು ನಿನಗೆ ಮಾಡಿದ ಉಪಕಾರವನ್ನು ಜನರಿಗೆ ತಿಳಿಸು” ಎಂದು ಹೇಳಿ ಅವನನ್ನು ಕಳುಹಿಸಿದನು.
ಆದ್ದರಿಂದ ಆ ಮನುಷ್ಯನು ಅಲ್ಲಿಂದ ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಊರಲ್ಲೆಲ್ಲಾ ತಿಳಿಸಿದನು.
ಸತ್ತುಹೋಗಿದ್ದ ಹುಡುಗಿಗೆ ಜೀವದಾನ ಮತ್ತು ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ
(ಮತ್ತಾಯ 9:18-26; ಮಾರ್ಕ 5:21-43)
40 ಯೇಸು ಗಲಿಲಾಯಕ್ಕೆ ಹಿಂತಿರುಗಿದಾಗ ಜನರು ಆತನನ್ನು ಸ್ವಾಗತಿಸಿದರು. ಪ್ರತಿಯೊಬ್ಬರೂ ಆತನಿಗಾಗಿ ಕಾಯುತ್ತಿದ್ದರು. 41 ಯಾಯಿರನೆಂಬ ಒಬ್ಬ ಮನುಷ್ಯನು ಯೇಸುವಿನ ಬಳಿಗೆ ಬಂದನು. ಅವನು ಸಭಾಮಂದಿರದ ಅಧಿಕಾರಿಯಾಗಿದ್ದನು. ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. 42 ಅವನಿಗೆ ಒಬ್ಬಳೇ ಮಗಳಿದ್ದಳು. ಆಕೆಗೆ ಹನೆರಡು ವರ್ಷ ವಯಸ್ಸಾಗಿತ್ತು. ಆಕೆಯು ಸಾಯುವ ಸ್ಥಿತಿಯಲ್ಲಿದ್ದಳು.
ಯೇಸುವು ಯಾಯಿರನ ಮನೆಗೆ ಹೋಗುತ್ತಿದ್ದಾಗ ಜನರು ಆತನ ಸುತ್ತಲೂ ಸೇರಿಬಂದರು. 43 ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿದ್ದ ಸ್ತ್ರೀಯೊಬ್ಬಳು ಅಲ್ಲಿದ್ದಳು. ಆಕೆ ತನ್ನಲ್ಲಿದ್ದ ಹಣವನ್ನೆಲ್ಲಾ ವೈದ್ಯರಿಗೆ ಖರ್ಚು ಮಾಡಿದ್ದಳು. ಆದರೆ ಯಾವ ವೈದ್ಯನಿಗೂ ಆಕೆಯನ್ನು ವಾಸಿಮಾಡಲು ಸಾಧ್ಯವಾಗಿರಲಿಲ್ಲ. 44 ಆ ಸ್ತ್ರೀಯು ಯೇಸುವಿನ ಹಿಂದೆ ಬಂದು ಆತನ ನಿಲುವಂಗಿಯ ಕೆಳಭಾಗವನ್ನು ಮುಟ್ಟಿದಳು. ಆ ಕ್ಷಣವೇ ಆಕೆಯ ರಕ್ತಸ್ರಾವ ನಿಂತುಹೋಯಿತು. 45 ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.
ಜನರೆಲ್ಲರೂ ತಾವು ಮುಟ್ಟಲಿಲ್ಲವೆಂದು ಹೇಳುತ್ತಿರಲು ಪೇತ್ರನು, “ಗುರುವೇ, ಇಷ್ಟೊಂದು ಜನರು ಮೇಲೆ ಬೀಳುತ್ತಾ ನಿನ್ನನ್ನು ನೂಕುತ್ತಿದ್ದಾರಲ್ಲಾ” ಎಂದನು.
46 ಅದಕ್ಕೆ ಯೇಸು, “ಯಾರೋ ಒಬ್ಬರು ನನ್ನನ್ನು ಮುಟ್ಟಿದರು! ನನ್ನಿಂದ ಶಕ್ತಿ ಹೊರಟದ್ದು ನನಗೆ ತಿಳಿಯಿತು” ಎಂದು ಹೇಳಿದನು. 47 ಇನ್ನು ತಾನು ಅಡಗಿಕೊಂಡಿರಲು ಸಾಧ್ಯವಿಲ್ಲವೆಂದು ತಿಳಿದುಕೊಂಡ ಆ ಸ್ತ್ರೀಯು ನಡುಗುತ್ತಾ ಆತನ ಮುಂದೆ ಬಂದು ಅಡ್ಡಬಿದ್ದು ತಾನು ಮುಟ್ಟಿದ್ದಕ್ಕೆ ಕಾರಣವನ್ನು ಎಲ್ಲರ ಎದುರಿನಲ್ಲಿ ತಿಳಿಸಿದಳು. ಅಲ್ಲದೆ ಆತನನ್ನು ಮುಟ್ಟಿದಾಕ್ಷಣವೇ ತನಗೆ ವಾಸಿಯಾಯಿತೆಂದು ಹೇಳಿದಳು. 48 ಯೇಸು ಆಕೆಗೆ, “ಮಗಳೇ, ನೀನು ನಂಬಿದ್ದರಿಂದ ನಿನಗೆ ಸ್ವಸ್ಥವಾಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.
49 ಯೇಸು ಇನ್ನೂ ಮಾತನಾಡುತ್ತಿದ್ದಾಗ ಸಭಾಮಂದಿರದ ಅಧಿಕಾರಿಯ (ಯಾಯಿರನ) ಮನೆಯಿಂದ ಒಬ್ಬ ವ್ಯಕ್ತಿ ಬಂದು, “ನಿನ್ನ ಮಗಳು ಸತ್ತುಹೋದಳು! ಈಗ ಬೋಧಕನಿಗೆ (ಯೇಸುವಿಗೆ) ತೊಂದರೆ ಕೊಡಬೇಡ” ಎಂದು ಹೇಳಿದನು.
50 ಯೇಸು ಇದನ್ನು ಕೇಳಿ ಯಾಯಿರನಿಗೆ, “ಭಯಪಡಬೇಡ. ನಂಬಿಕೆಯೊಂದಿರಲಿ. ನಿನ್ನ ಮಗಳಿಗೆ ಗುಣವಾಗುವುದು” ಎಂದು ಹೇಳಿದನು.
51 ಯೇಸು ಯಾಯಿರನ ಮನೆಗೆ ಹೋದನು. ಪೇತ್ರ, ಯೋಹಾನ, ಯಾಕೋಬ ಮತ್ತು ಹುಡುಗಿಯ ತಂದೆತಾಯಿಗಳಿಗೆ ಮಾತ್ರ ತನ್ನೊಂದಿಗೆ ಬರಲು ಅನುಮತಿಕೊಟ್ಟನು. ಬೇರೆ ಯಾರೂ ಒಳಗೆ ಬರಕೂಡದೆಂದು ಯೇಸು ತಿಳಿಸಿದನು. 52 ಸತ್ತುಹೋದ ಆ ಬಾಲಕಿಗಾಗಿ ಜನರೆಲ್ಲರೂ ದುಃಖದಿಂದ ಗೋಳಾಡುತ್ತಿದ್ದರು. ಆದರೆ ಯೇಸು ಅವರಿಗೆ, “ಅಳಬೇಡಿ, ಆಕೆ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ” ಎಂದನು.
53 ಆಗ ಜನರು ಯೇಸುವನ್ನು ಗೇಲಿಮಾಡಿದರು. ಏಕೆಂದರೆ ಆ ಹುಡುಗಿ ಸತ್ತುಹೋದಳೆಂದು ಅವರಿಗೆ ಖಂಡಿತವಾಗಿ ತಿಳಿದಿತ್ತು. 54 ಆದರೆ ಯೇಸು ಆಕೆಯ ಕೈಯನ್ನು ಹಿಡಿದು, “ಮಗು, ಎದ್ದೇಳು!” ಎಂದನು. 55 ಆ ಕೂಡಲೇ ಆಕೆಗೆ ಜೀವ ಬಂದಿತು. ಆಕೆ ಎದ್ದುನಿಂತುಕೊಂಡಳು. ಯೇಸು ಅವರಿಗೆ, “ಆಕೆಗೆ ತಿನ್ನಲು ಏನಾದರೂ ಕೊಡಿರಿ” ಎಂದು ಹೇಳಿದನು. 56 ಬಾಲಕಿಯ ತಂದೆತಾಯಿಗಳು ಬೆರಗಾದರು. ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.
Kannada Holy Bible: Easy-to-Read Version. All rights reserved. © 1997 Bible League International