Daily Reading for Personal Growth, 40 Days with God
ಸಿಕ್ಕಿಕೊಂಡ ವ್ಯಭಿಚಾರಿಣಿ
8 ಯೇಸು ಆಲಿವ್ ಮರಗಳ ಗುಡ್ಡಕ್ಕೆ ಹೋದನು. 2 ಮರುದಿನ ನಸುಕಿನಲ್ಲೇ ಯೇಸು ದೇವಾಲಯಕ್ಕೆ ಮರಳಿ ಹೋದನು. ಎಲ್ಲಾ ಜನರು ಯೇಸುವಿನ ಬಳಿಗೆ ನೆರೆದುಬಂದರು. ಯೇಸು ಕುಳಿತುಕೊಂಡು ಜನರಿಗೆ ಉಪದೇಶಿಸಿದನು.
3 ಧರ್ಮೋಪದೇಶಕರು ಮತ್ತು ಫರಿಸಾಯರು ಒಬ್ಬ ಸ್ತ್ರೀಯನ್ನು ಅಲ್ಲಿಗೆ ಕರೆದುಕೊಂಡು ಬಂದರು. ಆ ಸ್ತ್ರೀಯು ವ್ಯಭಿಚಾರ ಮಾಡುವಾಗಲೇ ಸಿಕ್ಕಿಕೊಂಡಿದ್ದಳು. ಅವರು ಆ ಸ್ತ್ರೀಯನ್ನು ಜನರ ಮುಂದೆ ಬಲವಂತವಾಗಿ ನಿಲ್ಲಿಸಿ, 4 ಯೇಸುವಿಗೆ, “ಉಪದೇಶಕನೇ, ಈ ಸ್ತ್ರೀಯು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಕೊಂಡಳು. 5 ಇಂಥ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಸ್ತ್ರೀಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸುತ್ತದೆ. ಈಗ ನಾವೇನು ಮಾಡಬೇಕು? ನೀನೇ ಹೇಳು” ಎಂದರು.
6 ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿದರೆ ಆತನ ಮೇಲೆ ಅಪವಾದ ಹೊರಿಸಲು ಸಾಧ್ಯವಾಗುತ್ತದೆ ಎಂದು ಈ ಪ್ರಶ್ನೆಯನ್ನು ಕೇಳಿದರು. ಆದರೆ ಯೇಸು ತಲೆ ಬಾಗಿಸಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು. 7 ಯೆಹೂದ್ಯ ನಾಯಕರು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ಆಗ ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪ ಮಾಡಿಲ್ಲದವನು ಆಕೆಯ ಮೇಲೆ ಮೊದಲನೆಯ ಕಲ್ಲನ್ನು ಎಸೆಯಲಿ” ಎಂದು ಹೇಳಿ, 8 ಮತ್ತೆ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದನು.
9 ಯೇಸುವಿನ ಈ ಮಾತನ್ನು ಕೇಳಿದ ಆ ಜನರು ಒಬ್ಬೊಬ್ಬರಾಗಿ ಅಲ್ಲಿಂದ ಹೊರಟುಹೋದರು. ಮೊದಲು ಹಿರಿಯರು, ನಂತರ ಇತರರು ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ಆ ಸ್ತ್ರೀ. ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು. 10 ಯೇಸು ನೆಟ್ಟಗೆ ಕುಳಿತುಕೊಂಡು, “ಅಮ್ಮಾ, ನಿನ್ನ ಮೇಲೆ ತಪ್ಪು ಹೊರಿಸಿದವರು ಎಲ್ಲಿದ್ದಾರೆ? ಅವರಲ್ಲಿ ಒಬ್ಬರಾದರೂ ನಿನಗೆ ಶಿಕ್ಷೆ ವಿಧಿಸಲಿಲ್ಲವೇ?” ಎಂದು ಕೇಳಿದನು.
11 ಆ ಸ್ತ್ರೀಯು, “ಸ್ವಾಮೀ, ಅವರಲ್ಲಿ ಯಾರೂ ನನಗೆ ತೀರ್ಪು ನೀಡಲಿಲ್ಲ” ಎಂದು ಉತ್ತರಕೊಟ್ಟಳು.
ಯೇಸು ಆಕೆಗೆ, “ಆದ್ದರಿಂದ ನಾನು ಸಹ ನಿನಗೆ ತೀರ್ಪು ನೀಡುವುದಿಲ್ಲ. ಈಗ ನೀನು ಹೋಗಬಹುದು, ಆದರೆ ಇನ್ನು ಮುಂದೆ ಪಾಪ ಮಾಡಬೇಡ” ಎಂದು ಹೇಳಿದನು.
ಯೇಸುವೇ ಲೋಕಕ್ಕೆ ಬೆಳಕು
12 ಬಳಿಕ, ಯೇಸುವು ಜನರೊಂದಿಗೆ ಮತ್ತೆ ಮಾತಾಡುತ್ತಾ, “ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ಎಂದಿಗೂ ಜೀವಿಸುವುದಿಲ್ಲ. ಅವನು ಜೀವಕೊಡುವ ಬೆಳಕನ್ನು ಹೊಂದಿದವನಾಗಿರುವನು” ಎಂದು ಹೇಳಿದನು.
13 ಫರಿಸಾಯರು ಯೇಸುವಿಗೆ, “ನೀನು ನಿನ್ನ ಬಗ್ಗೆ ಮಾತಾಡುವ ಈ ಸಂಗತಿಗಳು ಸತ್ಯವೆಂದು ಹೇಳುವವನು ನೀನೊಬ್ಬನು ಮಾತ್ರ. ಆದ್ದರಿಂದ, ನೀನು ಹೇಳುವ ಈ ಸಂಗತಿಗಳನ್ನು ನಾವು ಸ್ವೀಕರಿಸಿಕೊಳ್ಳಲಾರೆವು” ಎಂದು ಹೇಳಿದರು.
14 ಯೇಸು, “ಹೌದು, ನಾನೇ ನನ್ನ ಬಗ್ಗೆ ಈ ಸಂಗತಿಗಳನ್ನು ಹೇಳುತ್ತಿದ್ದರೂ ಈ ಸಂಗತಿಗಳು ಜನರ ನಂಬಿಕೆಗೆ ಯೋಗ್ಯವಾಗಿವೆ. ಏಕೆಂದರೆ, ನಾನು ಎಲ್ಲಿಂದ ಬಂದೆನೆಂಬುದೂ ನಾನು ಎಲ್ಲಿಗೆ ಹೋಗುತ್ತೇನೆಂಬುದೂ ನನಗೆ ತಿಳಿದಿದೆ. ನಾನು ನಿಮ್ಮಂಥ ವ್ಯಕ್ತಿಯಲ್ಲ. ನಾನು ಎಲ್ಲಿಂದ ಬಂದೆನೆಂಬುದು ಮತ್ತು ಎಲ್ಲಿಗೆ ಹೋಗುತ್ತೇನೆಂಬುದು ನಿಮಗೆ ಗೊತ್ತಿಲ್ಲ. 15 ನೀವು ಹೊರತೋರಿಕೆಯ ಪ್ರಕಾರ ತೀರ್ಪು ಮಾಡುತ್ತಿದ್ದೀರಿ. ಆದರೆ ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16 ನಾನು ಮಾಡುವ ತೀರ್ಪು ನ್ಯಾಯಬದ್ಧವಾಗಿರುತ್ತದೆ. ಏಕೆಂದರೆ ನಾನು ತೀರ್ಪು ಮಾಡುವಾಗ ಒಬ್ಬಂಟಿಗನಾಗಿರುವುದಿಲ್ಲ. ನನ್ನನ್ನು ಕಳುಹಿಸಿದ ತಂದೆಯೂ ನನ್ನೊಂದಿಗಿರುತ್ತಾನೆ. 17 ಇಬ್ಬರ ಸಾಕ್ಷಿ ಒಂದೇ ಆಗಿದ್ದರೆ ಅವರ ಹೇಳಿಕೆಯನ್ನು ಸ್ವೀಕರಿಸಿಕೊಳ್ಳಬೇಕೆಂದು ನಿಮ್ಮ ಧರ್ಮಶಾಸ್ತ್ರವೇ ತಿಳಿಸುತ್ತದೆ. 18 ನನ್ನ ಪರವಾದ ಸಾಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ, ನನ್ನನ್ನು ಕಳುಹಿಸಿದ ತಂದೆಯು ನನ್ನ ಮತ್ತೊಬ್ಬ ಸಾಕ್ಷಿಯಾಗಿದ್ದಾನೆ” ಎಂದು ಉತ್ತರಕೊಟ್ಟನು.
19 ಜನರು, “ನಿನ್ನ ತಂದೆ ಎಲ್ಲಿದ್ದಾನೆ?” ಎಂದು ಕೇಳಿದರು.
ಯೇಸು, “ನಿಮಗೆ ನಾನಾಗಲಿ, ನನ್ನ ತಂದೆಯಾಗಲಿ ಗೊತ್ತಿಲ್ಲ. ನೀವು ನನ್ನನ್ನು ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದಿರುವಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International