Daily Reading for Personal Growth, 40 Days with God
ನಮಗೆ ಸಾಕ್ಷಿ ಕೊಡು!
(ಮತ್ತಾಯ 12:38-42; ಮಾರ್ಕ 8:12)
29 ಜನರ ಗುಂಪು ದೊಡ್ಡದಾಗುತ್ತಿರಲು ಯೇಸು ಅವರಿಗೆ, “ಈ ಸಂತತಿಯು ಕೆಟ್ಟ ಸಂತತಿಯೇ ಸರಿ! ಇದು ಸೂಚಕಕಾರ್ಯವನ್ನು ನೋಡಬೇಕೆನ್ನುತ್ತದೆ. ಆದರೆ ಯೋನನ ಜೀವಿತದಲ್ಲಾದ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಇದಕ್ಕೆ ದೊರೆಯುವುದಿಲ್ಲ. 30 ನಿನೆವೆಯಲ್ಲಿ ಜೀವಿಸುತ್ತಿದ್ದ ಜನರಿಗೆ ಯೋನನು ಒಂದು ಸೂಚನೆಯಾಗಿದ್ದನು. ಅದೇ ರೀತಿಯಲ್ಲಿ ಈ ಕಾಲದ ಜನರಿಗೆ ಮನುಷ್ಯಕುಮಾರನು ಸೂಚನೆಯಾಗಿದ್ದಾನೆ.
31 “ನ್ಯಾಯತೀರ್ಪಿನ ದಿನದಲ್ಲಿ ದಕ್ಷಿಣ ದೇಶದ ರಾಣಿಯು ಈ ಪೀಳಿಗೆಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು. ಏಕೆಂದರೆ ಆ ರಾಣಿಯು ಬಹುದೂರದಿಂದ ಸೊಲೊಮೋನನ ಜ್ಞಾನಬೋಧನೆಯನ್ನು ಕೇಳಲು ಬಂದಳು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಾನು ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ!
32 “ನ್ಯಾಯತೀರ್ಪಿನ ದಿನದಲ್ಲಿ ನಿನೆವೆ ಪಟ್ಟಣದವರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆಂದು ತೋರಿಸುವರು. ಏಕೆಂದರೆ ಅವರು ಪ್ರವಾದಿಯಾದ ಯೋನನ ಬೋಧನೆಯನ್ನು ಕೇಳಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ನಾನು ಪ್ರವಾದಿ ಯೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ.
ಲೋಕಕ್ಕೆ ಬೆಳಕಾಗಿರಿ!
(ಮತ್ತಾಯ 5:15; 6:22-23)
33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International