Daily Reading for Personal Growth, 40 Days with God
5 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. 2 ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.
3 ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ. 4 ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು. 5 ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.
Kannada Holy Bible: Easy-to-Read Version. All rights reserved. © 1997 Bible League International