Revised Common Lectionary (Semicontinuous)
ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
2 ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
ನಾಶನದ ಸಂಚುಗಳನ್ನೇ ಮಾಡುವುದು.
3 ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.
4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5 ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.
6 ಒಳ್ಳೆಯವರು ಇದನ್ನು ಕಂಡು
ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
7 “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”
8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
9 ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.
ಇಸ್ರೇಲರ ಸುಭಿಕ್ಷೆ ತೆಗೆಯಲ್ಪಡುವದು
6 ಚೀಯೋನಿನಲ್ಲಿ ಸುಖದಿಂದಿರುವ ಜನರಿಗೂ
ಸಮಾರ್ಯದ ಪರ್ವತಗಳ ಮೇಲೆ ಸುರಕ್ಷಿತರಾಗಿರುವ ಜನರಿಗೂ ಕೇಡು ಸಂಭವಿಸುವದು.
ನೀವು ವಿಶೇಷವಾದ ದೇಶದ ವಿಶೇಷ ನಾಯಕರು.
ಇಸ್ರೇಲಿನ ಮನೆತನವು ಸಲಹೆಗಾಗಿ ನಿಮ್ಮ ಹತ್ತಿರ ಬರುತ್ತದೆ.
2 ಹೋಗಿ ಕಲ್ನೆಯ ಕಡೆಗೆ ದಿಟ್ಟಿಸಿರಿ.
ಅಲ್ಲಿಂದ ದೊಡ್ಡ ಪಟ್ಟಣವಾದ ಹಾಮಾತಿಗೆ ಹೋಗಿರಿ.
ಫಿಲಿಷ್ಟಿಯರ ಗತ್ ಪಟ್ಟಣಕ್ಕೆ ಹೋಗಿರಿ.
ಆ ಜನಾಂಗಗಳಿಗಿಂತ ನೀವು ಉತ್ತಮರೋ? ಇಲ್ಲ.
ಅವರ ರಾಜ್ಯವು ನಿಮಗಿಂತ ವಿಸ್ತಾರವಾಗಿದೆ.
3 ಶಿಕ್ಷಿಸಲ್ಪಡುವ ದಿವಸದ ಕಡೆಗೆ ನೀವು ಧಾವಿಸುತ್ತಿದ್ದೀರಿ.
ಅಕ್ರಮ ಆಳ್ವಿಕೆಯನ್ನು ನೀವು ಹತ್ತಿರಕ್ಕೆ ಬರಮಾಡಿಕೊಳ್ಳುತ್ತಾ ಇದ್ದೀರಿ.
4 ಆದರೆ ಈಗ ನೀವು ಸುಖದ ಜೀವಿತದಲ್ಲಿ ಆನಂದಿಸುತ್ತಿದ್ದೀರಿ,
ದಂತದ ಮಂಚದಲ್ಲಿ ಮಲಗುವಿರಿ;
ಸುಖಾಸನಗಳ ಮೇಲೆ ಬಿದ್ದುಕೊಳ್ಳುವಿರಿ.
ಹಿಂಡಿನಿಂದ ಎಳೇ ಕುರಿಮರಿಯನ್ನೂ ಹಟ್ಟಿಯಿಂದ ಎಳೇ ಕರುವನ್ನೂ ಭಕ್ಷಿಸುತ್ತೀರಿ.
5 ನಿಮ್ಮ ತಂತಿವಾದ್ಯಗಳಿಂದ ಹಾಡನ್ನು ಬಾರಿಸುವಿರಿ;
ದಾವೀದನಂತೆ ನಿಮ್ಮ ವಾದ್ಯಗಳನ್ನು ಅಭ್ಯಾಸಿಸುವಿರಿ.
6 ಅಂದವಾದ ಪಾತ್ರೆಗಳಲ್ಲಿ ದ್ರಾಕ್ಷಾರಸ ಕುಡಿಯುವಿರಿ.
ಉತ್ತಮವಾದ ಸುಗಂಧತೈಲವನ್ನು ಉಪಯೋಗಿಸುವಿರಿ.
ಯೋಸೇಫನ ಕುಟುಂಬದ
ನಾಶನದ ಬಗ್ಗೆಯೂ ನೀವು ಬೇಸರಗೊಳ್ಳಲಿಲ್ಲ.
7 ಈಗ ಆ ಜನರು ತಮ್ಮ ಸುಖಾಸನಗಳಲ್ಲಿ ಕಾಲನ್ನು ನೇರವಾಗಿ ಚಾಚಿಕೊಂಡು ಮಲಗಿದ್ದಾರೆ. ಆದರೆ ಅವರ ಸುಖದ ಸಮಯಗಳು ಅಂತ್ಯವಾಗುವವು. ಅವರು ಕೈದಿಗಳಂತೆ ಸೆರೆಹಿಡಿಯಲ್ಪಟ್ಟು ಪರದೇಶಕ್ಕೆ ಒಯ್ಯಲ್ಪಡುವರು. ಅವರಲ್ಲಿ ಕೆಲವರು ಸೆರೆ ಒಯ್ಯಲ್ಪಡುವವರಲ್ಲಿ ಮೊದಲಿಗರಾಗುವರು. 8 ನನ್ನ ಒಡೆಯನಾದ ಯೆಹೋವನು ತನ್ನ ಹೆಸರಿನ ಮೇಲೆ ಆಣೆಯಿಟ್ಟು ಈ ಮಾತುಗಳನ್ನು ನುಡಿದಿದ್ದಾನೆ. ಸರ್ವಶಕ್ತನಾದ ಯೆಹೋವನ ನುಡಿಗಳಿವು:
“ಯಾಕೋಬನು ಹೆಚ್ಚಳಪಡುವಂಥವುಗಳನ್ನು ನಾನು ದ್ವೇಷಿಸುತ್ತೇನೆ.
ಅವನ ಬಲವಾದ ಬುರುಜುಗಳನ್ನು ದ್ವೇಷಿಸುತ್ತೇನೆ.
ಆದ್ದರಿಂದ ಶತ್ರುಗಳು ಬಂದು ಪಟ್ಟಣವನ್ನೂ
ಪಟ್ಟಣದಲ್ಲಿರುವದೆಲ್ಲವನ್ನೂ ಸೂರೆಮಾಡುವಂತೆ ಮಾಡುವೆನು.”
ಸ್ವಲ್ಪ ಮಂದಿ ಇಸ್ರೇಲರು ಬದುಕಿಕೊಳ್ಳುವರು
9 ಆ ಸಮಯದಲ್ಲಿ ಒಂದು ಮನೆಯಲ್ಲಿ ಹತ್ತು ಮಂದಿ ಇದ್ದರೂ ಅವರು ಸಾಯುವರು. 10 ಒಬ್ಬ ವ್ಯಕ್ತಿಯು ಸತ್ತಾಗ ಅವನ ಸಂಬಂಧಿಕರಲ್ಲಿ ಒಬ್ಬನು ಬಂದು ಶವವನ್ನು ಸುಡಲು ತೆಗೆದುಕೊಂಡು ಹೋಗುವನು. ಸಂಬಂಧಿಕನು ಬಂದು ಎಲುಬುಗಳನ್ನು ಕೊಂಡೊಯ್ಯುವನು. ಮನೆಯೊಳಗೆ ಅವಿತುಕೊಂಡಿರುವವರನ್ನು ಕರೆಯುವನು. “ಇನ್ನೂ ಸತ್ತ ಹೆಣಗಳು ಒಳಗಿವೆಯೋ?” ಎಂದು ವಿಚಾರಿಸುವನು.
ಒಳಗಿದ್ದವರು “ಇಲ್ಲ” ಎಂದು ಉತ್ತರಿಸುವರು.
ಆಗ ಆ ಸಂಬಂಧಿಕನು ಅವರನ್ನು ತಡೆದು, “ಯೆಹೋವನ ನಾಮವನ್ನು ನಾವು ಉಚ್ಚರಿಸಬಾರದು” ಎಂದು ಹೇಳುವನು.
11 ನೋಡು, ಯೆಹೋವನು ಆಜ್ಞೆಯನ್ನು ಕೊಡುವನು.
ಆಗ ಭವ್ಯಭವನಗಳು ಒಡೆದು ಚೂರುಚೂರಾಗಿ ಬೀಳುವವು.
ಮತ್ತು ಸಣ್ಣ ಮನೆಗಳು ಚಿಂದಿಚಿಂದಿಯಾಗಿ ಚೂರಾಗುವವು.
12 ಕುದುರೆಗಳು ಬಂಡೆಗಳ ಮೇಲೆ ಓಡುವವೋ? ಇಲ್ಲ!
ಬಂಡೆಗಳನ್ನು ಊಳಲು ನಿಮ್ಮ ಹಸುಗಳನ್ನು ಉಪಯೋಗಿಸುವಿರೋ? ಇಲ್ಲ!
ಆದರೆ ನೀವು ಎಲ್ಲವನ್ನು ತಿರುವುಮುರುವು ಮಾಡುತ್ತೀರಿ.
ಒಳ್ಳೆಯತನವನ್ನು ನೀವು ವಿಷವಾಗಿ ಮಾಡಿದ್ದೀರಿ.
ನ್ಯಾಯವನ್ನು ಕಹಿಯಾದ ವಿಷವನ್ನಾಗಿ ಮಾಡಿದ್ದೀರಿ.
13 ಲೊ ಡೆಬಾರಿನಲ್ಲಿ ನೀವು ಸಂತೋಷವಾಗಿದ್ದೀರಿ.
“ಕರ್ನಯಿಮನ್ನು ನಾವು ನಮ್ಮ ಬಲದಿಂದಲೇ ಗೆದ್ದಿದ್ದೇವೆ” ಎಂದು ನೀವು ಹೇಳುತ್ತೀರಿ.
14 “ಆದರೆ ಇಸ್ರೇಲೇ, ನಿನಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು. ಆ ಜನಾಂಗವು ನಿನ್ನ ದೇಶದಲ್ಲಿ ಪೂರ್ತಿ ಸಂಕಟವನ್ನುಂಟು ಮಾಡುವದು; ಅದು ಲೆಬೋಹಮಾತಿನಿಂದ ಹಿಡಿದು ಅರಾಬಾ ಹಳ್ಳದ ತನಕ ಸಂಕಟವನ್ನುಂಟು ಮಾಡುವದು.” ಸರ್ವಶಕ್ತನಾದ ಯೆಹೋವನು ಇದನ್ನು ಹೇಳಿದ್ದಾನೆ.
ಯೇಸು ಹೇಳಿದ ಬೀಜ ಬಿತ್ತುವವನ ಸಾಮ್ಯ
(ಮತ್ತಾಯ 13:1-17; ಮಾರ್ಕ 4:1-12)
4 ಅನೇಕ ಜನರು ಊರೂರುಗಳಿಂದ ಯೇಸುವಿನ ಬಳಿಗೆ ಸೇರಿಬಂದರು. ಆಗ ಯೇಸು ಅವರಿಗೆ ಈ ಸಾಮ್ಯ ಹೇಳಿದನು:
5 “ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು. 6 ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವುಗಳು ಮೊಳೆಯತೊಡಗಿದರೂ ನೀರಿಲ್ಲದೆ ಒಣಗಿಹೋದವು. 7 ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯೆ ಬಿದ್ದವು. ಅವುಗಳು ಮೊಳೆತರೂ ಮುಳ್ಳುಗಿಡಗಳಿಂದ ಬೆಳೆಯಲಾಗಲಿಲ್ಲ. 8 ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಮೊಳೆತು ಬೆಳೆದು ನೂರರಷ್ಟು ಹೆಚ್ಚು ಫಲವನ್ನು ಕೊಟ್ಟವು.”
ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ಮೇಲೆ, “ನನ್ನ ಮಾತನ್ನು ಆಲಿಸುತ್ತಿರುವ ಜನರೇ, ಕೇಳಿರಿ” ಎಂದು ಹೇಳಿದನು.
9 ಶಿಷ್ಯರು ಆತನಿಗೆ, “ಈ ಸಾಮ್ಯದ ಅರ್ಥವೇನು?” ಎಂದು ಕೇಳಿದರು.
10 ಯೇಸು, “ನೀವು ದೇವರ ರಾಜ್ಯದ ಗುಟ್ಟುಗಳನ್ನು ತಿಳಿದುಕೊಳ್ಳಬೇಕೆಂದು ನಿಮ್ಮನ್ನು ಆರಿಸಿಕೊಳ್ಳಲಾಗಿದೆ. ಆದರೆ ಬೇರೆ ಜನರೊಂದಿಗೆ ನಾನು ಸಾಮ್ಯಗಳ ಮೂಲಕ ಮಾತಾಡುತ್ತೇನೆ, ಏಕೆಂದರೆ,
‘ಅವರು ನೋಡಿದರೂ ಕಾಣುವುದಿಲ್ಲ,
ಕೇಳಿದರೂ ಗ್ರಹಿಸಿಕೊಳ್ಳುವುದಿಲ್ಲ.’(A)
Kannada Holy Bible: Easy-to-Read Version. All rights reserved. © 1997 Bible League International