Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ದಾವೀದ.
143 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ನನ್ನ ಬಿನ್ನಹಕ್ಕೆ ಕಿವಿಗೊಡು.
ನಿನ್ನ ನೀತಿಗೂ ನಂಬಿಗಸ್ತಿಕೆಗೂ ತಕ್ಕಂತೆ ನನ್ನ ಪ್ರಾರ್ಥನೆಗೆ ಉತ್ತರ ಕೊಡು.
2 ನಿನ್ನ ಸೇವಕನಾದ ನನಗೆ ತೀರ್ಪುಮಾಡಬೇಡ.
ನನ್ನ ಇಡೀ ಜೀವಮಾನದಲ್ಲಿ ನಿರಪರಾಧಿಯೆಂಬ ತೀರ್ಪನ್ನು ಹೊಂದಲು ನನಗೆ ಸಾಧ್ಯವೇ ಇಲ್ಲ.
3 ಆದರೆ ನನ್ನ ಶತ್ರುಗಳು ನನ್ನನ್ನು ಬೆನ್ನಟ್ಟುತ್ತಿದ್ದಾರೆ.
ಅವರು ನನ್ನ ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾರೆ.
ಬಹುಕಾಲದ ಹಿಂದೆ ಸತ್ತವರನ್ನು ಕಾರ್ಗತ್ತಲೆಯ ಸಮಾಧಿಗೆ ನೂಕುವಂತೆ
ಅವರು ನನ್ನನ್ನು ನೂಕುತ್ತಿದ್ದಾರೆ.
4 ನನ್ನ ಆತ್ಮವು ಕುಂದಿಹೋಗಿದೆ.
ನನ್ನ ಧೈರ್ಯವು ಕಳೆದುಹೋಗುತ್ತಿದೆ.
5 ಆದರೆ ಬಹುಕಾಲದ ಹಿಂದೆ ನಡೆದವುಗಳನ್ನು ಜ್ಞಾಪಿಸಿಕೊಳ್ಳುವೆನು.
ನೀನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ಆಲೋಚಿಸುವೆನು.
6 ನನ್ನ ಕೈಗಳನ್ನು ಮೇಲೆತ್ತಿ ನಿನಗೆ ಪ್ರಾರ್ಥಿಸುವೆನು.
ಒಣಭೂಮಿಯು ಮಳೆಗಾಗಿ ಕಾಯುವಂತೆ ನಾನು ನಿನ್ನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
7 ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು.
ನನ್ನ ಆತ್ಮವು ಕುಂದಿಹೋಗುತ್ತಿದೆ.
ನೀನು ನನಗೆ ವಿಮುಖನಾಗಬೇಡ.
ಸತ್ತು ಸಮಾಧಿಯಲ್ಲಿರುವವರಂತೆ ನನ್ನನ್ನು ಸಾವಿಗೀಡು ಮಾಡಬೇಡ.
8 ಮುಂಜಾನೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ.
ನಾನು ಮಾಡಬೇಕಾದವುಗಳನ್ನು ನನಗೆ ತೋರಿಸು.
ನಾನು ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿದ್ದೇನೆ!
9 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ;
ಶತ್ರುಗಳಿಂದ ನನ್ನನ್ನು ರಕ್ಷಿಸು.
10 ನಿನ್ನ ಇಚ್ಛೆಗನುಸಾರವಾಗಿ ನಾನು ಮಾಡಬೇಕಾದುದನ್ನು ನನಗೆ ತೋರಿಸಿಕೊಡು.
ನೀನೇ ನನ್ನ ದೇವರು.
ನನಗೆ ಒಳ್ಳೆಯವನಾಗಿದ್ದು ಸುರಕ್ಷಿತವಾದ ದಾರಿಯಲ್ಲಿ ನಡೆಸು.
11 ಯೆಹೋವನೇ, ನನ್ನನ್ನು ಉಜ್ಜೀವಿಸಮಾಡು.
ಆಗ ಜನರು ನಿನ್ನ ಹೆಸರನ್ನು ಕೊಂಡಾಡುವರು.
ನೀನು ನಿಜವಾಗಿಯೂ ಒಳ್ಳೆಯವನೆಂಬುದನ್ನು ನನಗೆ ತೋರಿಸಿಕೊಡು.
ನನ್ನನ್ನು ಶತ್ರುಗಳಿಂದ ರಕ್ಷಿಸು.
12 ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನನ್ನನ್ನು ಕೊಲ್ಲಬೇಕೆಂದಿರುವ ಶತ್ರುಗಳನ್ನು ಸೋಲಿಸು.
ನಾನು ನಿನ್ನ ಸೇವಕನಾಗಿರುವೆ.
ಯೆರೆಮೀಯನು ಹೊಲವನ್ನು ಕೊಂಡದ್ದು
32 ಯೆಹೂದದ ರಾಜನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ[a] ಯೆರೆಮೀಯನಿಗೆ ಯೆಹೋವನಿಂದ ಬಂದ ಸಂದೇಶವಿದು. ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷ ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೇ ವರ್ಷವಾಗಿತ್ತು. 2 ಆ ಸಮಯದಲ್ಲಿ ಬಾಬಿಲೋನಿನ ರಾಜನ ಸೈನ್ಯವು ಜೆರುಸಲೇಮನ್ನು ಮುತ್ತಿತ್ತು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. ಈ ಕಾರಾಗೃಹವು ಯೆಹೂದದ ರಾಜನ ಅರಮನೆಗೆ ಸೇರಿತ್ತು. 3 ಯೆಹೂದದ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಆ ಕಾರಾಗೃಹದಲ್ಲಿಟ್ಟಿದ್ದನು. ಯೆರೆಮೀಯನು ಪ್ರವಾದಿಸಿದ ವಿಷಯಗಳನ್ನು ಚಿದ್ಕೀಯನು ಮೆಚ್ಚಿಕೊಂಡಿರಲಿಲ್ಲ. ಯೆರೆಮೀಯನು ಹೇಳಿದ್ದೇನೆಂದರೆ: “ಯೆಹೋವನು ಹೀಗೆನ್ನುತ್ತಾನೆ: ‘ನಾನು ತಕ್ಷಣವೇ ಜೆರುಸಲೇಮ್ ನಗರವನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ನೆಬೂಕದ್ನೆಚ್ಚರನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. 4 ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರ. ಖಂಡಿತವಾಗಿಯೂ ಅವನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು. ಚಿದ್ಕೀಯನು ಮುಖಾಮುಖಿಯಾಗಿ ಬಾಬಿಲೋನಿನ ರಾಜನೊಂದಿಗೆ ಮಾತನಾಡುವನು. ಚಿದ್ಕೀಯನು ತನ್ನ ಕಣ್ಣುಗಳಿಂದ ಅವನನ್ನು ನೋಡುವನು. 5 ಬಾಬಿಲೋನಿನ ರಾಜನು ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು. ನಾನು ಅವನನ್ನು ದಂಡಿಸುವವರೆಗೆ ಚಿದ್ಕೀಯನು ಅಲ್ಲಿರುವನು. ನೀವು ಕಸ್ದೀಯರೊಡನೆ ಯುದ್ಧ ಮಾಡಿದರೂ ನಿಮಗೆ ಜಯವಾಗದು.’” ಇದು ಯೆಹೋವನ ನುಡಿ.
6 ಸೆರೆಯಲ್ಲಿದ್ದಾಗ ಯೆರೆಮೀಯನು ಹೇಳಿದನು, “ನನಗೆ ಯೆಹೋವನಿಂದ ಒಂದು ಸಂದೇಶ ಬಂದಿದೆ. ಅದು ಹೀಗಿದೆ: 7 ಯೆರೆಮೀಯನೇ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾಗಿರುವ ಹನಮೇಲನು ಶೀಘ್ರದಲ್ಲಿ ನಿನ್ನ ಬಳಿಗೆ ಬಂದು, ‘ಯೆರೆಮೀಯನೇ, ಅನಾತೋತ್ ಪಟ್ಟಣದ ಬಳಿಯಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ನೀನು ನನ್ನ ಅತಿ ಸಮೀಪದ ಬಂಧುವಾದುದರಿಂದ ಅದನ್ನು ಕೊಂಡುಕೊ. ಆ ಹೊಲವನ್ನು ಕೊಂಡುಕೊಳ್ಳಲು ನಿನಗೆ ಅಧಿಕಾರವಿದೆ ಮತ್ತು ಅದು ನಿನ್ನ ಹೊಣೆಗಾರಿಕೆಯೂ ಹೌದು’ ಎಂದು ಹೇಳುವನು.
8 “ಆಮೇಲೆ ಯೆಹೋವನು ಹೇಳಿದಂತೆಯೇ ಆಯಿತು. ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕಾರಾಗೃಹದ ಅಂಗಳದಲ್ಲಿದ್ದ ನನ್ನ ಬಳಿಗೆ ಬಂದು ಹೀಗೆ ಹೇಳಿದನು: ‘ಯೆರೆಮೀಯನೇ, ಬೆನ್ಯಾಮೀನ್ ಸೀಮೆಯ ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೊ. ಆ ಹೊಲವನ್ನು ನಿನಗಾಗಿ ಕೊಂಡುಕೊ. ಅದರ ಒಡೆಯನಾಗುವದಕ್ಕೆ ನಿನಗೆ ಹಕ್ಕಿದೆ.’”
ಇದು ಯೆಹೋವನ ಸಂದೇಶವೆಂದು ನನಗೆ ತಿಳಿಯಿತು. 9 ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿರುವ ಹೊಲವನ್ನು ಕೊಂಡು ಅದರ ಕ್ರಯವಾಗಿ ಹದಿನೇಳು ಶೆಕೆಲ್[b] ಬೆಳ್ಳಿಯನ್ನು ತೂಕಹಾಕಿದೆನು.
36 “‘ಬಾಬಿಲೋನಿನ ರಾಜನು ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು. ಈ ಪಟ್ಟಣವನ್ನು ವಶಪಡಿಸಿಕೊಳ್ಳಲು ಅವನು ಖಡ್ಗ, ಕ್ಷಾಮ, ಭಯಂಕರವಾದ ವ್ಯಾಧಿಗಳನ್ನು ಬಳಸಿಕೊಳ್ಳುವನು’ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ: 37 ‘ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ತಮ್ಮ ಪ್ರದೇಶವನ್ನು ಬಿಟ್ಟುಹೋಗಲು ನಾನು ಒತ್ತಾಯಿಸಿದ್ದೇನೆ. ನಾನು ಅವರ ಮೇಲೆ ತುಂಬ ಕೋಪಗೊಂಡಿದ್ದೆ. ಆದರೆ ನಾನು ಅವರನ್ನು ಈ ಸ್ಥಳಕ್ಕೆ ಹಿಂದಿರುಗಿಸುವೆನು. ನಾನು ಒತ್ತಾಯಿಸಿ ಅವರನ್ನು ಅಟ್ಟಿದ ಸ್ಥಳಗಳಿಂದ ಅವರನ್ನು ಒಟ್ಟುಗೂಡಿಸುವೆನು. ಅವರನ್ನು ಪುನಃ ಈ ಸ್ಥಳಕ್ಕೆ ಕರೆತರುವೆನು. ಅವರು ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ಇರುವಂತೆ ಮಾಡುವೆನು. 38 ಇಸ್ರೇಲರು ಮತ್ತು ಯೆಹೂದ್ಯರು ನನ್ನ ಭಕ್ತರಾಗಿರುವರು, ನಾನು ಅವರ ದೇವರಾಗಿರುವೆನು. 39 ಒಂದೇ ಜನಾಂಗವಾಗುವ ಬಯಕೆಯನ್ನು ನಾನು ಅವರಲ್ಲಿ ಉಂಟುಮಾಡುವೆನು. ಅವರು ತಮ್ಮ ಜೀವಮಾನವೆಲ್ಲಾ ನನ್ನನ್ನು ಆರಾಧಿಸಬೇಕೆಂಬ ಬಯಕೆಯನ್ನು ಹೊಂದಿರುವರು. ಹೌದು, ಅವರ ಬಯಕೆಯೂ ಅವರ ಮಕ್ಕಳ ಬಯಕೆಯೂ ಇದೇ ಆಗಿರುವುದು.
40 “‘ನಾನು ಇಸ್ರೇಲರ ಮತ್ತು ಯೆಹೂದ್ಯರ ಸಂಗಡ ಶಾಶ್ವತವಾದ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಗನುಸಾರವಾಗಿ ನಾನು ಅವರಿಗೆ ವಿಮುಖನಾಗುವುದೇ ಇಲ್ಲ. ನಾನು ಯಾವಾಗಲೂ ಅವರಿಗೆ ಒಳ್ಳೆಯವನಾಗಿರುತ್ತೇನೆ. ನನ್ನನ್ನು ಗೌರವಿಸಬೇಕೆಂಬ ಇಚ್ಛೆಯನ್ನು ಅವರಲ್ಲಿ ಬರಮಾಡುತ್ತೇನೆ. ಆಗ ಅವರೆಂದಿಗೂ ನನಗೆ ವಿಮುಖರಾಗುವದಿಲ್ಲ. 41 ಅವರು ನನ್ನನ್ನು ಸಂತೋಷಪಡಿಸುವರು. ಅವರಿಗೆ ಒಳ್ಳೆಯದನ್ನು ಮಾಡುವದರಲ್ಲಿ ನಾನು ಸಂತೋಷಪಡುವೆನು. ನಾನು ಖಂಡಿತವಾಗಿ ಅವರನ್ನು ಈ ದೇಶದಲ್ಲಿ ನೆಟ್ಟು ಬೆಳೆಯುವಂತೆ ಮಾಡುತ್ತೇನೆ. ಇದನ್ನು ನಾನು ಮನಃಪೂರ್ವಕವಾಗಿ ಮಾಡುತ್ತೇನೆ.’”
ಯೇಸುವನ್ನು ವಂಚಿಸಲು ಕೆಲವು ಸದ್ದುಕಾಯರ ಪ್ರಯತ್ನ
(ಮಾರ್ಕ 12:18-27; ಲೂಕ 20:27-40)
23 ಅದೇ ದಿನದಲ್ಲಿ ಕೆಲವು ಸದ್ದುಕಾಯರು ಯೇಸುವಿನ ಬಳಿಗೆ ಬಂದು, (ಯಾರಿಗೂ ಪುನರುತ್ಥಾನವಿಲ್ಲ ಎಂಬುದು ಸದ್ದುಕಾಯರ ನಂಬಿಕೆ.) 24 “ಬೋಧಕನೇ, ವಿವಾಹಿತನೊಬ್ಬನು ಮಕ್ಕಳನ್ನು ಪಡೆಯದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗಾಗಿ ಸಂತಾನ ಪಡೆಯಬೇಕೆಂದು[a] ಮೋಶೆ ಹೇಳಿದ್ದಾನೆ. 25 ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸತ್ತನು. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾದನು. 26 ಬಳಿಕ ಎರಡನೆಯ ಸಹೋದರನೂ ಸತ್ತನು. ಹೀಗೆಯೇ ಮೂರನೆಯ ಸಹೋದರನಿಗೂ ಮತ್ತು ಉಳಿದೆಲ್ಲ ಸಹೋದರರಿಗೂ ಆಯಿತು. 27 ಕಡೆಯಲ್ಲಿ ಆ ಹೆಂಗಸೂ ಸತ್ತಳು. 28 ಆದರೆ ಏಳು ಮಂದಿಯೂ ಅವಳನ್ನು ಮದುವೆ ಆಗಿದ್ದರು. ಹೀಗಿರಲಾಗಿ ಅವರು ಮರಣದಿಂದ ಮೇಲೇಳುವಾಗ ಅವಳು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
29 ಯೇಸು, “ನೀವು ತಪ್ಪಾಗಿ ತಿಳಿದುಕೊಂಡಿರಲು ಕಾರಣವೇನೆಂದರೆ, ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ತಿಳಿದಿಲ್ಲ ಮತ್ತು ದೇವರ ಶಕ್ತಿಯ ಬಗ್ಗೆಯೂ ನಿಮಗೆ ಗೊತ್ತಿಲ್ಲ. 30 ಸ್ತ್ರೀಯರು ಮತ್ತು ಪುರುಷರು ಪುನರುತ್ಥಾನ ಹೊಂದಿದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ. ಅವರೆಲ್ಲರೂ ಪರಲೋಕದ ದೇವದೂತರಂತೆ ಇರುತ್ತಾರೆ. 31 ಸತ್ತವರ ಪುನರುತ್ಥಾನದ ಕುರಿತು ದೇವರು, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿರುವುದನ್ನು ನೀವು ಓದಿಲ್ಲವೇ? ಹೀಗಿರುವಲ್ಲಿ, ದೇವರು ಜೀವಿತರಿಗೆ ಮಾತ್ರ ದೇವರೇ ಹೊರತು ಸತ್ತವರಿಗಲ್ಲಾ” ಅಂದನು.
33 ಜನರೆಲ್ಲರೂ ಇದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು.
Kannada Holy Bible: Easy-to-Read Version. All rights reserved. © 1997 Bible League International