Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:9-16

ಯೌವನಸ್ಥನು ಪವಿತ್ರನಾಗಿ ಜೀವಿಸುವುದು ಯಾವುದರಿಂದ?
    ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದರಿಂದಲೇ.
10 ನಾನು ಪೂರ್ಣಹೃದಯದಿಂದ ದೇವರ ಸೇವೆಮಾಡುವೆ;
    ದೇವರೇ, ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನನಗೆ ಸಹಾಯಮಾಡು.
11 ನಾನು ನಿನಗೆ ವಿರೋಧವಾಗಿ ಪಾಪಮಾಡದಂತೆ
    ನಿನ್ನ ಉಪದೇಶಗಳನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ.
12 ಯೆಹೋವನೇ, ನಿನಗೆ ಸ್ತೋತ್ರವಾಗಲಿ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
13 ನನ್ನ ತುಟಿಗಳು
    ನಿನ್ನ ಜ್ಞಾನದ ನಿರ್ಧಾರಗಳ ಕುರಿತು ವರ್ಣಿಸುತ್ತವೆ.
14 ಸಕಲ ಸಂಪತ್ತಿನಲ್ಲಿ ಹೇಗೋ
    ಹಾಗೆಯೇ ನಿನ್ನ ಒಡಂಬಡಿಕೆಯನ್ನು ಅಭ್ಯಾಸ ಮಾಡುವುದರಲ್ಲಿ ಆನಂದಿಸುವೆನು.
15 ನಾನು ನಿನ್ನ ನಿಯಮಗಳನ್ನು ಚರ್ಚಿಸುವೆನು
    ನಿನ್ನ ಜೀವಮಾರ್ಗವನ್ನು ಅನುಸರಿಸುವೆನು.
16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು,
    ನಿನ್ನ ಮಾತುಗಳನ್ನು ಮರೆಯುವುದಿಲ್ಲ.

ಜ್ಞಾನೋಕ್ತಿಗಳು 2:1-15

ಜ್ಞಾನದ ಮೌಲ್ಯ

ನನ್ನ ಮಗನೇ, ನಾನು ಹೇಳುವ ಈ ಮಾತುಗಳನ್ನು ಸ್ವೀಕಾರಮಾಡಿಕೊ. ನನ್ನ ಆಜ್ಞೆಗಳನ್ನು ನೆನಪು ಮಾಡಿಕೊ. ಜ್ಞಾನಕ್ಕೆ ಕಿವಿಗೊಡು; ಅದನ್ನು ಅರ್ಥಮಾಡಿಕೊಳ್ಳಲು ನಿನ್ನಿಂದಾದಷ್ಟು ಪ್ರಯತ್ನಿಸು. ಬುದ್ಧಿಗಾಗಿ ಮೊರೆಯಿಡು! ವಿವೇಕಕ್ಕಾಗಿ ಕೂಗಿಕೊ! ಬೆಳ್ಳಿಯನ್ನು ಹುಡುಕುವಂತೆ ವಿವೇಕವನ್ನು ಹುಡುಕು. ಅಡಗಿರುವ ಭಂಡಾರದಂತೆ ಅದನ್ನು ಹುಡುಕು. ಆಗ ನೀನು ಯೆಹೋವನಲ್ಲಿ ಭಯಭಕ್ತಿಯಿಂದಿರಲು ಕಲಿತುಕೊಳ್ಳುವೆ; ದೈವಜ್ಞಾನವನ್ನು ಹೊಂದಿಕೊಳ್ಳುವೆ.

ಜ್ಞಾನವನ್ನು ಕೊಡುವಾತನು ಯೆಹೋವನೇ. ವಿವೇಕ ಮತ್ತು ತಿಳುವಳಿಕೆ ಆತನ ಬಾಯಿಂದ ಬರುತ್ತವೆ. ಆತನು ನೀತಿವಂತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು; ನಿರ್ದೋಷಿಗಳಿಗೆ ಗುರಾಣಿಯಂತಿರುವನು. ಆತನು ನ್ಯಾಯವಂತರನ್ನು ಕಾಪಾಡುತ್ತಾನೆ; ತನ್ನ ಪವಿತ್ರ ಜನರಿಗೆ ಕಾವಲಾಗಿರುತ್ತಾನೆ.

ಆಗ ನೀನು ಒಳ್ಳೆಯದನ್ನೂ ನ್ಯಾಯನೀತಿಗಳನ್ನೂ ಸನ್ಮಾರ್ಗಗಳನ್ನೂ ಅರ್ಥಮಾಡಿಕೊಳ್ಳುವೆ. 10 ಆಗ ಜ್ಞಾನವು ನಿನ್ನ ಹೃದಯದ ಒಳಗೆ ಬರುವುದು; ನಿನ್ನ ಆತ್ಮವು ತಿಳುವಳಿಕೆಯೊಡನೆ ಸಂತೋಷವಾಗಿರುವುದು.

11 ವಿವೇಕವು ನಿನ್ನನ್ನು ಕಾಪಾಡುವುದು; ಬುದ್ಧಿಯು ನಿನಗೆ ಕಾವಲಾಗಿರುವುದು; 12 ಹೀಗೆ ನೀನು ದುರ್ಮಾರ್ಗಗಳಿಂದಲೂ ಸುಳ್ಳುಗಾರರಿಂದಲೂ ತಪ್ಪಿಸಿಕೊಳ್ಳುವೆ. 13 ಅವರಾದರೋ ನೀತಿಮಾರ್ಗವನ್ನು ಬಿಟ್ಟು ಪಾಪವೆಂಬ ಕತ್ತಲೆಯಲ್ಲಿ ಜೀವಿಸುತ್ತಿದ್ದಾರೆ. 14 ಅವರಿಗೆ ಕೆಟ್ಟದ್ದನ್ನು ಮಾಡುವುದರಲ್ಲೇ ಸಂತೋಷ; ಕೆಡುಕರ ಕೆಟ್ಟಕಾರ್ಯಗಳಲ್ಲೇ ಆನಂದ. 15 ಅವರ ಮಾರ್ಗಗಳು ವಕ್ರವಾಗಿವೆ; ಅವರ ನಡತೆಗಳು ದುರ್ನಡತೆಗಳಾಗಿವೆ.

ಮತ್ತಾಯ 19:1-12

ವಿವಾಹ ವಿಚ್ಛೇದನದ ಕುರಿತು ಯೇಸುವಿನ ಬೋಧನೆ

(ಮಾರ್ಕ 10:1-12)

19 ಯೇಸು ಈ ಸಂಗತಿಗಳನ್ನು ಹೇಳಿದ ಬಳಿಕ ಗಲಿಲಾಯದಿಂದ ಹೊರಟು ಜೋರ್ಡನ್ ನದಿಯ ಮತ್ತೊಂದು ತೀರದಲ್ಲಿದ್ದ ಜುದೇಯ ಪ್ರಾಂತ್ಯಕ್ಕೆ ಬಂದನು. ಯೇಸುವನ್ನು ಅನೇಕ ಜನರು ಹಿಂಬಾಲಿಸಿದರು. ಯೇಸು ಅಲ್ಲಿ ರೋಗಿಗಳನ್ನು ಗುಣಪಡಿಸಿದನು.

ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ತಪ್ಪಿನಲ್ಲಿ ಸಿಕ್ಕಿಸುವುದಕ್ಕಾಗಿ, “ತನ್ನದೇ ಆದ ಯಾವ ಕಾರಣಕ್ಕಾಗಲಿ ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.

ಯೇಸು, “ನೀವು ನಿಜವಾಗಿಯೂ ಇದನ್ನು ಪವಿತ್ರಗ್ರಂಥದಲ್ಲಿ ಓದಿದ್ದೀರಿ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಸೃಷ್ಟಿಸಿದನು.’(A) ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’(B) ಎಂದು ಹೇಳಿದನು. ಆದ್ದರಿಂದ ಇವರಿಬ್ಬರು ಇನ್ನು ಮೇಲೆ ಇಬ್ಬರಲ್ಲ, ಒಬ್ಬರೇ. ಅವರಿಬ್ಬರನ್ನು ದೇವರೇ ಒಟ್ಟಿಗೆ ಕೂಡಿಸಿದ್ದಾನೆ. ಆದ್ದರಿಂದ ಯಾವ ಮನುಷ್ಯನೂ ಅವರನ್ನು ಪ್ರತ್ಯೇಕಿಸಬಾರದು” ಎಂದು ಉತ್ತರಕೊಟ್ಟನು.

ಫರಿಸಾಯರು, “ಹಾಗಾದರೆ ಒಬ್ಬ ಪುರುಷನು ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದೇಕೆ?” ಎಂದು ಕೇಳಿದರು.[a]

ಯೇಸು, “ನೀವು ದೇವರ ಬೋಧನೆಯನ್ನು ಸ್ವೀಕರಿಸದಿದ್ದ ಕಾರಣ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಮೋಶೆ ಅವಕಾಶಕೊಟ್ಟನು. ಆದರೆ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ಆರಂಭದಲ್ಲಿ ಅವಕಾಶ ಇರಲಿಲ್ಲ. ನಾನು ನಿಮಗೆ ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರಿಯಾಗುತ್ತಾನೆ. ಮೊದಲಿನ ಹೆಂಡತಿಯು ಬೇರೊಬ್ಬನೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವನು ಆಕೆಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆ ಆಗಬಹುದು” ಎಂದು ಉತ್ತರಿಸಿದನು.

10 ಶಿಷ್ಯರು ಯೇಸುವಿಗೆ, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡಲು ಇದೊಂದೇ ಕಾರಣವಾಗಿದ್ದರೆ, ಮದುವೆ ಆಗದಿರುವುದೇ ಉತ್ತಮ” ಎಂದರು.

11 ಅದಕ್ಕೆ ಯೇಸು, “ಮದುವೆಯ ವಿಷಯವಾದ ಈ ಸತ್ಯವನ್ನು ಪ್ರತಿಯೊಬ್ಬರೂ ಸ್ವೀಕರಿಸಲು ಸಾಧ್ಯವಿಲ್ಲ. ಇದನ್ನು ಸ್ವೀಕರಿಸಲು ದೇವರು ಯಾರನ್ನು ಸಮರ್ಥರನ್ನಾಗಿ ಮಾಡಿದ್ದಾನೋ ಅವರಿಗೆ ಮಾತ್ರ ಸಾಧ್ಯ. 12 ಕೆಲವರು ಮದುವೆ ಆಗದಿರಲು ಬೇರೆಬೇರೆ ಕಾರಣಗಳಿವೆ. ಹುಟ್ಟಿದಂದಿನಿಂದಲೇ ಕೆಲವರು ನಪುಂಸಕರಾಗಿರುತ್ತಾರೆ. ಇನ್ನು ಕೆಲವರು ಬೇರೆಯವರಿಂದ ನಪುಂಸಕರಾಗಿ ಮಾಡಲ್ಪಡುತ್ತಾರೆ. ಬೇರೆ ಕೆಲವರು ಪರಲೋಕರಾಜ್ಯಕ್ಕೋಸ್ಕರ ಮದುವೆಯನ್ನು ತೊರೆದುಬಿಡುತ್ತಾರೆ. ಆದರೆ ಮದುವೆ ಆಗುವಂಥವನು ಮದುವೆ ವಿಷಯವಾದ ಈ ಬೋಧನೆಯನ್ನು ಸ್ವೀಕರಿಸಬೇಕು” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International