Revised Common Lectionary (Semicontinuous)
119 ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸುತ್ತಾ
ಪವಿತ್ರರಾಗಿ ಜೀವಿಸುವವರು ಧನ್ಯರಾಗಿದ್ದಾರೆ.
2 ಆತನ ಒಡಂಬಡಿಕೆಗೆ ಸಂಪೂರ್ಣಹೃದಯದಿಂದ
ವಿಧೇಯರಾಗುವವರು ಧನ್ಯರು.
3 ಅವರು ಕೆಟ್ಟದ್ದನ್ನು ಮಾಡದೆ
ಆತನಿಗೆ ವಿಧೇಯರಾಗಿರುವರು.
4 ಯೆಹೋವನೇ, ನಮಗೆ ಆಜ್ಞೆಗಳನ್ನು ಕೊಟ್ಟವನೂ ನೀನೇ.
ಅವುಗಳಿಗೆ ಸಂಪೂರ್ಣವಾಗಿ ವಿಧೇಯರಾಗಬೇಕೆಂದು ನಮಗೆ ಹೇಳಿದವನೂ ನೀನೇ.
5 ನಿನ್ನ ಕಟ್ಟಳೆಗಳಿಗೆ
ನಾನು ಯಾವಾಗಲೂ ವಿಧೇಯನಾಗಿದ್ದರೆ,
6 ನಿನ್ನ ಆಜ್ಞೆಗಳನ್ನು ಕಲಿಯುವಾಗ
ನನಗೆ ನಾಚಿಕೆಯಾಗದು.
7 ನಾನು ನಿನ್ನ ನ್ಯಾಯವನ್ನೂ
ನೀತಿಯನ್ನೂ ಕಲಿತಂತೆಲ್ಲಾ ನಿನ್ನನ್ನು ಕೊಂಡಾಡುವೆನು.
8 ನಾನು ನಿನ್ನ ಕಟ್ಟಳೆಗಳಿಗೆ ವಿಧೇಯನಾಗಿದ್ದೇನೆ.
ದಯವಿಟ್ಟು ನನ್ನನ್ನು ಕೈಬಿಡಬೇಡ!
34 “ನೀವು ನಿಮ್ಮ ವೈರಿಗಳ ದೇಶಕ್ಕೆ ಒಯ್ಯಲ್ಪಟ್ಟಾಗ, ನಿಮ್ಮ ದೇಶ ಬರಿದಾಗುವುದಲ್ಲದೆ ಭೂಮಿಯು ಹಾಳುಬಿದ್ದು ವಿಶ್ರಾಂತಿಯನ್ನು ಅನುಭವಿಸುವುದು. 35 ಪ್ರತಿ ಏಳು ವರ್ಷದ ನಂತರ ಭೂಮಿಗೆ ವಿಶ್ರಾಂತಿ ಕೊಡಬೇಕೆಂದು ಧರ್ಮಶಾಸ್ತ್ರ ಹೇಳಿದಂತೆ, ನೀವು ವೈರಿಗಳ ದೇಶದಲ್ಲಿ ವಾಸಿಸಿದ ಕಾಲವೆಲ್ಲಾ ನೀವು ಭೂಮಿಗೆ ಕೊಡದೆ ಇದ್ದ ವಿಶ್ರಾಂತಿಯನ್ನು ಆ ಸಮಯದಲ್ಲಿ ಭೂಮಿಯು ಪಡೆದುಕೊಳ್ಳುವುದು. 36 ಜೀವಂತವಾಗಿ ಉಳಿದವರು ತಮ್ಮ ವೈರಿಗಳ ದೇಶದಲ್ಲಿ ಅಧೈರ್ಯಗೊಳ್ಳುವರು. ಅವರು ಪ್ರತಿಯೊಂದಕ್ಕೂ ದಿಗಿಲುಪಡುವರು. ಗಾಳಿಯಿಂದ ತೂರಿಹೋಗುವ ಎಲೆಯ ಶಬ್ದಕ್ಕೆ ಅವರು ಓಡಿಹೋಗುವರು. ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುತ್ತಿದ್ದಾರೋ ಎಂಬಂತೆ ಅವರು ಓಡಿಹೋಗುವರು. ಯಾರೂ ಬೆನ್ನಟ್ಟದಿದ್ದಾಗಲೂ ಅವರು ಎಡವಿ ಬೀಳುವರು. 37 ಒಬ್ಬನು ಕತ್ತಿಯನ್ನು ಹಿಡಿದುಕೊಂಡು ಬೆನ್ನಟ್ಟುವಾಗ ಓಡಿಹೋಗುವಂತೆ ಅವರು ಓಡಿಹೋಗುವರು. ಯಾರೂ ಅವರನ್ನು ಬೆನ್ನಟ್ಟದಿದ್ದಾಗಲೂ ಅವರು ಒಬ್ಬರ ಮೇಲೊಬ್ಬರು ಬೀಳುವರು.
“ನೀವು ನಿಮ್ಮ ವೈರಿಗಳ ವಿರುದ್ಧವಾಗಿ ನಿಲ್ಲುವಷ್ಟು ಶಕ್ತಿಯುಳ್ಳವರಾಗಿರುವುದಿಲ್ಲ. 38 ನೀವು ಬೇರೆ ಜನಾಂಗಗಳಲ್ಲಿ ಬೆರೆತು ಇಲ್ಲದಂತಾಗುವಿರಿ. ನಿಮ್ಮ ವೈರಿಗಳ ದೇಶದಲ್ಲಿ ನೀವು ಮಾಯವಾಗಿ ಹೋಗುವಿರಿ. 39 ಆದ್ದರಿಂದ ನಿಮ್ಮಲ್ಲಿ ಜೀವಂತವಾಗಿ ಉಳಿದವರು ತಮ್ಮ ಪಾಪದ ದೆಸೆಯಿಂದಲೂ ತಮ್ಮ ಪೂರ್ವಿಕರ ಪಾಪದ ದೆಸೆಯಿಂದಲೂ ಅವರಂತೆಯೇ ಶತ್ರುಗಳ ದೇಶಗಳಲ್ಲಿ ಕ್ಷಯಿಸಿಹೋಗುವರು.
40 “ಒಂದುವೇಳೆ ಜನರು ತಮ್ಮ ಪಾಪಗಳನ್ನೂ ತಮ್ಮ ಪೂರ್ವಿಕರ ಪಾಪಗಳನ್ನೂ ಅರಿಕೆ ಮಾಡಬಹುದು; ನನಗೆ ವಿರುದ್ಧವಾಗಿ ಪಾಪಮಾಡಿರುವುದಾಗಿಯೂ ನನಗೆ ವಿರೋಧವಾಗಿ ತಿರುಗಿರುವುದಾಗಿಯೂ ಅವರು ಒಪ್ಪಿಕೊಂಡು 41 ನಾನು ಅವರಿಗೆ ವಿಮುಖನಾಗಿ ಅವರನ್ನು ಶತ್ರುಗಳ ದೇಶಕ್ಕೆ ಕರೆದುಕೊಂಡು ಬಂದೆನೆಂದು ಅವರು ಅರಿತುಕೊಂಡು ತಮ್ಮನ್ನು ತಗ್ಗಿಸಿಕೊಂಡು[a] ತಮ್ಮ ಪಾಪಕ್ಕೆ ಬರತಕ್ಕ ಶಿಕ್ಷೆಯನ್ನು ಸ್ವೀಕರಿಸಲು ಯೋಗ್ಯರೆಂದು ಹೇಳಿಕೊಂಡರೆ 42 ಆಗ ನಾನು ಯಾಕೋಬನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ಇಸಾಕನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನೂ ದೇಶವನ್ನೂ ಜ್ಞಾಪಕಮಾಡಿಕೊಳ್ಳುವೆನು.
43 “ದೇಶವು ಬರಿದಾಗಿದ್ದು ವಿಶ್ರಾಂತಿಯನ್ನು ಅನುಭವಿಸುವುದು. ಆಗ ಜೀವಂತವಾಗಿ ಉಳಿದವರು ತಮ್ಮ ಪಾಪಗಳಿಗೆ ಬರತಕ್ಕ ಶಿಕ್ಷೆಯನ್ನು ಅನುಭವಿಸುವರು. ನನ್ನ ನಿಯಮಗಳನ್ನು ದ್ವೇಷಿಸಿ ನನ್ನ ವಿಧಿಗಳಿಗೆ ಅವಿಧೇಯರಾದ್ದರಿಂದ ತಮಗೆ ಶಿಕ್ಷೆಯಾಯಿತೆಂದು ಅವರು ಅರಿತುಕೊಳ್ಳುವರು. 44 ಅವರು ನಿಜವಾಗಿ ಪಾಪಮಾಡಿದ್ದರೂ ಸಹಾಯಕ್ಕಾಗಿ ಅವರು ನನ್ನ ಬಳಿಗೆ ಬಂದರೆ ನಾನು ಅವರಿಗೆ ವಿಮುಖನಾಗುವುದಿಲ್ಲ. ಅವರು ತಮ್ಮ ಶತ್ರುಗಳ ದೇಶದಲ್ಲಿದ್ದರೂ ನಾನು ಅವರಿಗೆ ಕಿವಿಗೊಡುವೆನು. ಅವರನ್ನು ಸಂಪೂರ್ಣವಾಗಿ ನಾಶಮಾಡುವುದಿಲ್ಲ. ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆಯುವುದಿಲ್ಲ. ಯಾಕೆಂದರೆ ನಾನೇ ಅವರ ದೇವರಾದ ಯೆಹೋವನು! 45 ಅವರಿಗೋಸ್ಕರ ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ಅವರಿಗೆ ಹಿತವನ್ನು ಮಾಡುವೆ. ನಾನು ಅವರ ದೇವರಾಗಿರಬೇಕೆಂದು ಅವರ ಪೂರ್ವಿಕರನ್ನು ಈಜಿಪ್ಟ್ ದೇಶದಿಂದ ಹೊರಗೆ ಕರೆದುಕೊಂಡು ಬಂದೆನು. ಬೇರೆ ಜನಾಂಗಗಳವರು ಆ ಸಂಗತಿಗಳನ್ನು ನೋಡಿದರು. ನಾನೇ ಯೆಹೋವನು!”
46 ಯೆಹೋವನು ಇಸ್ರೇಲರಿಗೆ ಕೊಟ್ಟ ಕಟ್ಟಳೆಗಳು, ನಿಯಮಗಳು ಮತ್ತು ಉಪದೇಶಗಳು ಇವೇ. ಇದು ಯೆಹೋವನ ಮತ್ತು ಇಸ್ರೇಲರ ನಡುವೆ ಆದ ಒಡಂಬಡಿಕೆಯ ನಿಯಮಗಳಾಗಿವೆ. ಯೆಹೋವನು ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಕೊಟ್ಟನು. ಮೋಶೆ ಅವುಗಳನ್ನು ಜನರಿಗೆ ಕೊಟ್ಟನು.
ಇತರರನ್ನು ಪ್ರೀತಿಸಿ
7 ನನ್ನ ಪ್ರಿಯ ಸ್ನೇಹೀತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು. ನೀವು ಈಗಾಗಲೇ ಕೇಳಿರುವ ವಾಕ್ಯವೇ ಈ ಆಜ್ಞೆಯಾಗಿದೆ. 8 ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೇಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೆಯು ಕಳೆದುಹೋಗುತ್ತಿದೆ ಮತ್ತು ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
9 “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನನ್ನು ದ್ವೇಷಿಸುತ್ತಿದ್ದರೆ, ಅವನಿನ್ನೂ ಅಂಧಕಾರದಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿದ್ದಾನೆ. ಬೇರೊಬ್ಬನನ್ನು ಪಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವುದಿಲ್ಲ. 11 ಆದರೆ ತನ್ನ ಸಹೋದರನನ್ನು ದ್ವೇಷಿಸುವವನು ಅಂಧಕಾರದಲ್ಲಿದ್ದಾನೆ. ಅವನು ಅಂಧಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಏಕೆಂದರೆ ಅಂಧಕಾರವು ಅವನನ್ನು ಕುರುಡನನ್ನಾಗಿ ಮಾಡಿದೆ.
12 ಪ್ರಿಯ ಮಕ್ಕಳೇ, ನಿಮ್ಮ ಪಾಪಗಳು ಕ್ರಿಸ್ತನ ಮೂಲಕ ಕ್ಷಮಿಸಲ್ಪಟ್ಟಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
13 ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
14 ಮಕ್ಕಳೇ, ನೀವು ತಂದೆಯನ್ನು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ತಂದೆಗಳೇ, ಆದಿಯಿಂದ ಇರುವಾತನನ್ನು ನೀವು ತಿಳಿದಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದ,
ದೇವರ ವಾಕ್ಯವು ನಿಮ್ಮಲ್ಲಿ ನೆಲಸಿರುವುದರಿಂದ
ಮತ್ತು ನೀವು ಕೆಡುಕನನ್ನು ಸೋಲಿಸಿರುವುದರಿಂದ
ನಾನು ನಿಮಗೆ ಬರೆಯುತ್ತಿದ್ದೇನೆ.
15 ಈ ಲೋಕವನ್ನಾಗಲಿ ಈ ಲೋಕದಲ್ಲಿರುವ ವಸ್ತುಗಳನ್ನಾಗಲಿ ನೀವು ಪ್ರೀತಿಸಬೇಡಿ. ಈ ಲೋಕವನ್ನು ಪ್ರೀತಿಸುವವನಿಗೆ ತಂದೆಯ (ದೇವರ) ಮೇಲೆ ಪ್ರೀತಿಯಿರುವುದಿಲ್ಲ. 16 ಈ ಲೋಕದಲ್ಲಿರುವ ಕೆಟ್ಟವುಗಳು ಇಂತಿವೆ: ನಮ್ಮ ಪಾಪಸ್ವಭಾವವನ್ನು ತಣಿಸಲು ಮಾಡಲಿಚ್ಛಿಸುವ ಕಾರ್ಯಗಳು, ನಾವು ನೋಡುವ ಪಾಪಪೂರಿತವಾದದ್ದನ್ನು ಪಡೆಯಲಿಚ್ಛಿಸುವುದು, ಮತ್ತು ನಮ್ಮಲ್ಲಿರುವ ವಸ್ತುಗಳಲ್ಲಿಯೇ ದುರಹಂಕಾರಪಡುವುದು. ಆದರೆ ಇವುಗಳಲ್ಲಿ ಯಾವುದೂ ತಂದೆಯಿಂದ ಬರುವುದಿಲ್ಲ. ಇವುಗಳೆಲ್ಲ ಈ ಲೋಕದಿಂದ ಬರುತ್ತವೆ. 17 ಈ ಲೋಕವು ಮತ್ತು ಜನರು ಬಯಸುವಂಥವುಗಳು ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತಕ್ಕನುಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು.
Kannada Holy Bible: Easy-to-Read Version. All rights reserved. © 1997 Bible League International