Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 15

ರಚನೆಗಾರ: ದಾವೀದ.

15 ಯೆಹೋವನೇ, ನಿನ್ನ ಪವಿತ್ರ ಗುಡಾರದಲ್ಲಿ ಎಂಥವನು ವಾಸಿಸಬಲ್ಲನು?
    ನಿನ್ನ ಪವಿತ್ರ ಪರ್ವತದ ಮೇಲೆ ಎಂಥವನು ನೆಲಸಬಲ್ಲನು?
ಅವನು ನಿರ್ದೋಷಿಯೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ
    ಹೃದಯದಿಂದ ಸತ್ಯವನ್ನು ಮಾತಾಡುವವನೂ ಆಗಿರಬೇಕು.
ಅವನು ಚಾಡಿ ಹೇಳದವನೂ ನೆರೆಯವರಿಗೆ ಕೇಡನ್ನು ಮಾಡದವನೂ
    ತನ್ನ ಸ್ವಂತ ಕುಟುಂಬದವರನ್ನು ನಿಂದಿಸದವನೂ ಆಗಿರಬೇಕು.
ಅವನು ದೇವದೂಷಕರನ್ನು ತಿರಸ್ಕರಿಸುವವನೂ
    ಯೆಹೋವನಲ್ಲಿ ಭಯಭಕ್ತಿಯುಳ್ಳವರನ್ನು ಗೌರವಿಸುವವನೂ
ತನಗೆ ತೊಂದರೆಯಾದರೂ
    ಕೊಟ್ಟ ಮಾತಿಗೆ ತಪ್ಪದವನೂ ಆಗಿರಬೇಕು.
ಅವನು ಕೊಟ್ಟ ಸಾಲಕ್ಕೆ ಬಡ್ಡಿ ಕೇಳದವನೂ
    ನಿರಪರಾಧಿಗೆ ಕೇಡುಮಾಡಲು ಲಂಚ ತೆಗೆದುಕೊಳ್ಳದವನೂ ಆಗಿರಬೇಕು.
ಹೀಗೆ ಜೀವಿಸುವವನು
    ದೇವರಿಗೆ ಸಮೀಪವಾಗಿಯೇ ಇರುತ್ತಾನೆ.[a]

ಆದಿಕಾಂಡ 14:1-16

ಲೋಟನ ಸೆರೆ

14 ಆ ದಿನಗಳಲ್ಲಿ ಅಮ್ರಾಫೆಲನು ಶಿನಾರಿನ ರಾಜನಾಗಿದ್ದನು; ಅರಿಯೋಕನು ಎಲ್ಲಸಾರಿನ ರಾಜನಾಗಿದ್ದನು; ಕೆದೊರ್ಲಗೋಮರನು ಏಲಾಮಿನ ರಾಜನಾಗಿದ್ದನು; ತಿದ್ಗಾಲನು ಗೋಯಿಮದ ರಾಜನಾಗಿದ್ದನು. ಈ ರಾಜರುಗಳೆಲ್ಲ ಸೊದೋಮಿನ ರಾಜನಾದ ಬೆರಗನಿಗೂ ಗೊಮೋರದ ರಾಜನಾದ ಬಿರ್ಶಗನಿಗೂ ಅದ್ಮಾಹದ ರಾಜನಾದ ಶಿನಾಬನಿಗೂ ಚೆಬೋಯೀಮಿನ ರಾಜನಾದ ಶೆಮೇಬರನಿಗೂ ಚೋಗರ್ ಎಂಬ ಬೇಲಗಿನ ರಾಜನಿಗೂ ವಿರುದ್ಧವಾಗಿ ಯುದ್ಧಮಾಡಿದರು.

ಈ ರಾಜರುಗಳೆಲ್ಲ ಸಿದ್ದೀಮ್ ಕಣಿವೆಯಲ್ಲಿ ತಮ್ಮ ಸೈನ್ಯಗಳನ್ನು ಒಟ್ಟಿಗೆ ಸೇರಿಸಿದರು. (ಸಿದ್ದೀಮ್ ಕಣಿವೆಯು ಈಗ ಉಪ್ಪುಸಮುದ್ರವಾಗಿದೆ). ಈ ರಾಜರುಗಳು ಕೆದೊರ್ಲಗೋಮರನ ಅಧೀನದಲ್ಲಿ ಹನ್ನೆರಡು ವರ್ಷವಿದ್ದರು. ಆದರೆ ಹದಿಮೂರನೆಯ ವರ್ಷದಲ್ಲಿ, ಅವರೆಲ್ಲರೂ ಅವನಿಗೆ ವಿರೋಧವಾಗಿ ದಂಗೆ ಎದ್ದರು. ಆದ್ದರಿಂದ ಹದಿನಾಲ್ಕನೆಯ ವರ್ಷದಲ್ಲಿ, ರಾಜನಾದ ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅವರ ವಿರೋಧವಾಗಿ ಯುದ್ಧಮಾಡಲು ಬಂದರು. ಕೆದೊರ್ಲಗೋಮರನು ಮತ್ತು ಅವನೊಡನಿದ್ದ ರಾಜರುಗಳು ಅಷ್ಟರೋತ್-ಕರ್ನಯಿಮಿನಲ್ಲಿದ್ದ ರೆಫಾಯರನ್ನೂ ಹಾಮಿನಲ್ಲಿದ್ದ ಜೂಜ್ಯರನ್ನೂ ಶಾವೆಕೆರ್ಯಾತಯಿಮಿನಲ್ಲಿದ್ದ ಏಮಿಯರನ್ನೂ ಸೋಲಿಸಿದರು. ಇದಲ್ಲದೆ ಅವರು ಹೋರಿಯರನ್ನು ಬೆಟ್ಟದ ಸೀಮೆಯಿಂದ ಮರುಭೂಮಿಯ ಸಮೀಪದಲ್ಲಿರುವ ಎಲ್ಪಾರಾನಿನವರೆಗೂ ಹಿಂದಟ್ಟಿದರು. ಆ ಬಳಿಕ ರಾಜ ಕೆದೊರ್ಲಗೋಮರನು ಉತ್ತರದ ಕಡೆಗೆ ತಿರುಗಿ ಕಾದೇಶ್ ಎನ್ನುವ ಎನ್ಮಿಷ್ಪಾಟಿಗೆ ಬಂದು ಎಲ್ಲಾ ಅಮಾಲೇಕ್ಯರನ್ನು ಸೋಲಿಸಿದನು. ಇದಲ್ಲದೆ ಅವನು ಹಚಚೋನ್‌ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನು ಸೋಲಿಸಿದನು.

ಆ ಕಾಲದಲ್ಲಿ, ಸೊದೋಮಿನ ರಾಜನೂ ಗೊಮೋರದ ರಾಜನೂ ಅದ್ಮಾಹದ ರಾಜನೂ ಚೆಬೋಯೀಮಿನ ರಾಜನೂ ಬೇಲಗದ, ಅಂದರೆ ಚೋಗರದ ರಾಜನೂ ಒಟ್ಟಾಗಿ ಸೇರಿಕೊಂಡು ತಮ್ಮ ಶತ್ರುಗಳ ವಿರುದ್ಧವಾಗಿ ದಂಡೆತ್ತಿಕೊಂಡು ಸಿದ್ದೀಮ್ ಕಣಿವೆಗೆ ಹೋದರು. ಅವರು ಏಲಾಮಿನ ರಾಜ ಕೆದೊರ್ಲಗೋಮರನಿಗೂ ಗೋಯಿಮದ ರಾಜ ತಿದ್ಗಾಲನಿಗೂ ಶಿನಾರಿನ ರಾಜ ಅಮ್ರಾಫೆಲನಿಗೂ, ಎಲ್ಲಸಾರಿನ ರಾಜ ಅರಿಯೋಕನಿಗೂ ವಿರುದ್ಧವಾಗಿ ಹೋರಾಡಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರ ವಿರುದ್ಧವಾಗಿ ಹೋರಾಡಿದರು.

10 ಸಿದ್ದೀಮ್ ಕಣಿವೆಯಲ್ಲಿ ಕಲ್ಲರಗಿನ ಕೆಸರುಕುಣಿಗಳು ಬಹಳಷ್ಟಿದ್ದವು. ಸೊದೋಮ್ ಮತ್ತು ಗೊಮೋರಗಳ ರಾಜರುಗಳು ಮತ್ತು ಅವರ ಸೈನ್ಯಗಳವರು ಓಡಿಹೋಗುವಾಗ ಈ ಕುಣಿಗಳಲ್ಲಿ ಬಿದ್ದುಹೋದರು; ಉಳಿದವರು ಬೆಟ್ಟಗಳಿಗೆ ಓಡಿಹೋದರು.

11 ಗೆದ್ದವರು ಸೊದೋಮ್ ಮತ್ತು ಗೊಮೋರಗಳ ಜನರು ಹೊಂದಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡರು. ಅವರು ಅವರೆಲ್ಲರ ಆಹಾರವನ್ನೂ ಬಟ್ಟೆಗಳನ್ನೂ ತೆಗೆದುಕೊಂಡರು. 12 ಅಬ್ರಾಮನ ಸಹೋದರನಾದ ಲೋಟನು ಸೊದೋಮಿನಲ್ಲಿ ವಾಸವಾಗಿದ್ದನು. ಶತ್ರುಗಳು ಅವನನ್ನು ಸೆರೆಹಿಡಿದು, ಅವನ ಸ್ವತ್ತುಗಳನ್ನೆಲ್ಲ ದೋಚಿಕೊಂಡು ಹೋದರು. 13 ತಪ್ಪಿಸಿಕೊಂಡ ಒಬ್ಬನು ಇಬ್ರಿಯನಾದ ಅಬ್ರಾಮನ ಬಳಿಗೆ ಹೋಗಿ ನಡೆದ ವಿಷಯವನ್ನೆಲ್ಲಾ ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆ, ಎಷ್ಕೋಲ ಮತ್ತು ಆನೇರ್ ಒಬ್ಬರಿಗೊಬ್ಬರು ಸಹಾಯಮಾಡಲು ಒಂದು ಒಪ್ಪಂದವನ್ನು ಮಾಡಿಕೊಂಡಿದ್ದರು. ಅಲ್ಲದೆ ಅಬ್ರಾಮನಿಗೂ ಸಹಾಯಮಾಡುವುದಾಗಿ ಒಂದು ಒಪ್ಪಂದಕ್ಕೆ ಸಹಿ ಮಾಡಿದ್ದರು.

ಅಬ್ರಾಮನು ಲೋಟನನ್ನು ಬಿಡಿಸಿದ್ದು

14 ಲೋಟನು ಸೆರೆಯಾಳಾಗಿರುವುದು ಅಬ್ರಾಮನಿಗೆ ತಿಳಿಯಿತು. ಆದ್ದರಿಂದ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿದ ಗಂಡಾಳುಗಳನ್ನೆಲ್ಲ ಒಟ್ಟಾಗಿ ಸೇರಿಸಿದನು. ಅವರಲ್ಲಿ ಮುನ್ನೂರ ಹದಿನೆಂಟು ಮಂದಿ ತರಬೇತಿ ಹೊಂದಿದ್ದ ಸೈನಿಕರಾಗಿದ್ದರು. ಅಬ್ರಾಮನು ಅವರೊಡನೆ ಹೊರಟು ಶತ್ರುಗಳನ್ನು ದಾನ್ ಊರಿನವರೆಗೂ ಹಿಂದಟ್ಟಿದನು. 15 ಆ ರಾತ್ರಿ ಅವನು ಮತ್ತು ಅವನ ಸೇವಕರು ಹಠಾತ್ತನೆ ಶತ್ರುಗಳನ್ನು ಎದುರಿಸಿ ಸೋಲಿಸಿದರು; ದಮಸ್ಕಕ್ಕೆ ಉತ್ತರದಲ್ಲಿರುವ ಹೋಬಾದವರೆಗೂ ಹಿಂದಟ್ಟಿದರು. 16 ಆಮೇಲೆ ಶತ್ರುಗಳು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಮತ್ತು ಲೋಟನ ಆಸ್ತಿಯನ್ನು ಅಬ್ರಾಮನು ತೆಗೆದುಕೊಂಡು ಲೋಟನೊಡನೆ ಬಂದನು. ಅಲ್ಲದೆ ಸೆರೆಹಿಡಿಯಲ್ಪಟ್ಟಿದ್ದ ಸ್ತ್ರೀಯರನ್ನು ಮತ್ತು ಇತರ ಜನರನ್ನು ಹಿಂದಕ್ಕೆ ಕರೆದುಕೊಂಡು ಬಂದನು.

ಲೂಕ 8:4-10

ಯೇಸು ಹೇಳಿದ ಬೀಜ ಬಿತ್ತುವವನ ಸಾಮ್ಯ

(ಮತ್ತಾಯ 13:1-17; ಮಾರ್ಕ 4:1-12)

ಅನೇಕ ಜನರು ಊರೂರುಗಳಿಂದ ಯೇಸುವಿನ ಬಳಿಗೆ ಸೇರಿಬಂದರು. ಆಗ ಯೇಸು ಅವರಿಗೆ ಈ ಸಾಮ್ಯ ಹೇಳಿದನು:

“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೊಲಕ್ಕೆ ಹೋದನು. ಬೀಜ ಬಿತ್ತುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದು ಜನರ ತುಳಿತಕ್ಕೆ ಸಿಕ್ಕಿಕೊಂಡವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದುಬಿಟ್ಟವು. ಕೆಲವು ಬೀಜಗಳು ಬಂಡೆಯ ಮೇಲೆ ಬಿದ್ದವು. ಅವುಗಳು ಮೊಳೆಯತೊಡಗಿದರೂ ನೀರಿಲ್ಲದೆ ಒಣಗಿಹೋದವು. ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯೆ ಬಿದ್ದವು. ಅವುಗಳು ಮೊಳೆತರೂ ಮುಳ್ಳುಗಿಡಗಳಿಂದ ಬೆಳೆಯಲಾಗಲಿಲ್ಲ. ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಮೊಳೆತು ಬೆಳೆದು ನೂರರಷ್ಟು ಹೆಚ್ಚು ಫಲವನ್ನು ಕೊಟ್ಟವು.”

ಯೇಸು ಈ ಸಾಮ್ಯವನ್ನು ಹೇಳಿ ಮುಗಿಸಿದ ಮೇಲೆ, “ನನ್ನ ಮಾತನ್ನು ಆಲಿಸುತ್ತಿರುವ ಜನರೇ, ಕೇಳಿರಿ” ಎಂದು ಹೇಳಿದನು.

ಶಿಷ್ಯರು ಆತನಿಗೆ, “ಈ ಸಾಮ್ಯದ ಅರ್ಥವೇನು?” ಎಂದು ಕೇಳಿದರು.

10 ಯೇಸು, “ನೀವು ದೇವರ ರಾಜ್ಯದ ಗುಟ್ಟುಗಳನ್ನು ತಿಳಿದುಕೊಳ್ಳಬೇಕೆಂದು ನಿಮ್ಮನ್ನು ಆರಿಸಿಕೊಳ್ಳಲಾಗಿದೆ. ಆದರೆ ಬೇರೆ ಜನರೊಂದಿಗೆ ನಾನು ಸಾಮ್ಯಗಳ ಮೂಲಕ ಮಾತಾಡುತ್ತೇನೆ, ಏಕೆಂದರೆ,

‘ಅವರು ನೋಡಿದರೂ ಕಾಣುವುದಿಲ್ಲ,
    ಕೇಳಿದರೂ ಗ್ರಹಿಸಿಕೊಳ್ಳುವುದಿಲ್ಲ.’(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International