Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 140

ಸ್ತುತಿಗೀತೆ. ರಚನೆಗಾರ: ದಾವೀದ.

140 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ.
ಅವರ ನಾಲಿಗೆಗಳು ಸರ್ಪಗಳಂತಿವೆ.
    ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ.

ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ.
ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ;
    ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ;
    ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ.

ಯೆಹೋವನೇ, ನನ್ನ ದೇವರು ನೀನೇ.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ.
    ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ.
ಯೆಹೋವನೇ, ಆ ದುಷ್ಟರ ದುರಾಶೆಯೂ
    ದುರಾಲೋಚನೆಯೂ ನೆರವೇರಲು ಬಿಡಬೇಡ.

ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ.
    ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು.
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು
    ಬೆಂಕಿಯೊಳಗೆ ಎಸೆದುಬಿಡು;
    ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು.
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ.
    ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು.
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ.
    ದೇವರು ಅಸಹಾಯಕರಿಗೆ ಸಹಾಯಮಾಡುವನು.
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು;
    ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.

ಯೆರೆಮೀಯ 3:15-18

15 ನಿಮಗೆ ಹೊಸ ಪಾಲಕರನ್ನು ನೇಮಿಸುವೆನು. ಆ ಪಾಲಕರು ನನಗೆ ನಂಬಿಗಸ್ತರಾಗಿರುತ್ತಾರೆ. ಅವರು ಬುದ್ಧಿ ಮತ್ತು ಜ್ಞಾನಗಳಿಂದ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. 16 ಆಗ ದೇಶದಲ್ಲಿ ನಿಮ್ಮ ಸಂಖ್ಯೆ ಬೆಳೆಯುವದು” ಇದು ಯೆಹೋವನ ನುಡಿ.

“ಆ ಕಾಲದಲ್ಲಿ ಜನರು, ‘ನಮ್ಮಲ್ಲಿ ಯೆಹೋವನ ಒಡಂಬಡಿಕೆಯ ಪೆಟ್ಟಿಗೆ ಇದ್ದ ದಿನಗಳನ್ನು ಜ್ಞಾಪಿಸಿಕೊಳ್ಳುವ’ ಎಂದು ಹೇಳುವುದಿಲ್ಲ. ಅವರು, ‘ಪವಿತ್ರ ಪೆಟ್ಟಿಗೆ’ಯ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ಅವರು ಅದನ್ನು ಜ್ಞಾಪಿಸುವುದೂ ಇಲ್ಲ. ಅದರ ಅಭಾವವನ್ನು ಮನಸ್ಸಿಗೆ ತಂದುಕೊಳ್ಳುವುದೂ ಇಲ್ಲ. ಅವರು ಇನ್ನೊಂದು ‘ಪವಿತ್ರ ಪೆಟ್ಟಿಗೆ’ಯನ್ನು ಸಿದ್ಧಪಡಿಸುವದಿಲ್ಲ. 17 ಆ ಕಾಲದಲ್ಲಿ ಜೆರುಸಲೇಮ್ ನಗರಕ್ಕೆ ‘ಯೆಹೋವನ ಸಿಂಹಾಸನ’ ಎಂದು ಕರೆಯುವರು. ಯೆಹೋವನ ಹೆಸರಿಗೆ ಗೌರವ ಸೂಚಿಸಲು ಎಲ್ಲಾ ಜನಾಂಗದವರು ಜೆರುಸಲೇಮಿನಲ್ಲಿ ಬಂದು ಸೇರುವರು. ಅವರು ತಮ್ಮ ದುಷ್ಟ ಮತ್ತು ಹಟಮಾರಿ ಹೃದಯಗಳನ್ನು ಅನುಸರಿಸುವುದಿಲ್ಲ. 18 ಆ ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನ್ನು ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಬರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಬರುವರು.”

ಎಫೆಸದವರಿಗೆ 5:6-20

ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ. ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ. ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. 10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. 11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ. 12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ. 13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. 14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:

“ನಿದ್ರೆಮಾಡುವವನೇ, ಎಚ್ಚರವಾಗು!
    ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”

15 ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ. 16 ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ. 17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ. 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ. 20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International