Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
1 ರಾಜರುಗಳು 19:15-16

15 ಯೆಹೋವನು, “ನೀನು ಬಂದ ದಾರಿಯಿಂದ ಹಿಂತಿರುಗಿ ದಮಸ್ಕದ ಅರಣ್ಯಕ್ಕೆ ಹೋಗು. ಅಲ್ಲಿಂದ ದಮಸ್ಕಕ್ಕೆ ಹೋಗಿ, ಹಜಾಯೇಲನನ್ನು ಅರಾಮ್ಯರ ರಾಜನನ್ನಾಗಿ ಅಭಿಷೇಕಿಸು. 16 ನಂತರ ನಿಂಷಿಯ ಮಗನಾದ ಯೇಹುವನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸು. ಅಬೇಲ್ ಮೆಹೋಲದ ಶಾಫಾಟನ ಮಗನಾದ ಎಲೀಷನನ್ನು ನಿನ್ನ ಜಾಗದಲ್ಲಿ ಪ್ರವಾದಿಯನ್ನಾಗಿ ಅಭಿಷೇಕಿಸು.

1 ರಾಜರುಗಳು 19:19-21

ಎಲೀಷನು ಪ್ರವಾದಿಯಾದನು

19 ಎಲೀಯನು ಆ ಸ್ಥಳದಿಂದ ಹೊರಟು ಶಾಫಾಟನ ಮಗನಾದ ಎಲೀಷನನ್ನು ಕಂಡುಹಿಡಿಯಲು ಹೋದನು. ಎಲೀಷನು ಹನ್ನೆರಡು ಜೋಡಿ ಎತ್ತುಗಳನ್ನು ತಂದು ಭೂಮಿಯನ್ನು ಉಳುತ್ತಿದ್ದನು. ಎಲೀಯನು ಬಂದಾಗ ಎಲೀಷನು ಹನ್ನೆರಡನೆಯ ಜೋಡಿಯಿಂದ ತಾನಾಗಿ ಭೂಮಿಯನ್ನು ಉಳುತ್ತಿದ್ದನು. ಎಲೀಯನು ಎಲೀಷನ ಹತ್ತಿರಕ್ಕೆ ಹೋಗಿ ತನ್ನ ಮೇಲಂಗಿಯನ್ನು ಎಲೀಷನಿಗೆ ತೊಡಿಸಿದನು. 20 ಎಲೀಷನು ತಕ್ಷಣ ತನ್ನ ಎತ್ತುಗಳನ್ನು ಬಿಟ್ಟು ಎಲೀಯನ ಹಿಂದೆ ಹೋದನು. ಎಲೀಷನು, “ನನ್ನ ತಾಯಿಗೆ ಮುದ್ದಿಟ್ಟು, ತಂದೆಗೆ ನಮಸ್ಕರಿಸಿ, ನಿನ್ನನ್ನು ಹಿಂಬಾಲಿಸುತ್ತೇನೆ” ಎಂದು ಹೇಳಿದನು.

ಎಲೀಯನು, “ಸರಿ, ನಾನು ನಿನ್ನನ್ನು ತಡೆಯುವುದಿಲ್ಲ” ಎಂದು ಉತ್ತರಿಸಿದನು.

21 ನಂತರ ಎಲೀಷನು ಹೋಗಿ ತಾನು ಉಳುತ್ತಿದ್ದ ಎತ್ತುಗಳನ್ನು ವಧಿಸಿ, ಮಾಂಸವನ್ನು ನೊಗದಿಂದಲೇ ಬೇಯಿಸಿ ಜನರೆಲ್ಲರಿಗೆ ಔತಣವನ್ನು ಏರ್ಪಡಿಸಿದನು. ನಂತರ ಅವನು ಎಲೀಯನನ್ನು ಹಿಂಬಾಲಿಸಿ ಅವನ ಸಹಾಯಕನಾದನು.

ಕೀರ್ತನೆಗಳು 16

ರಚನೆಗಾರ: ದಾವೀದ.

16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
    ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
    ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.

ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
    ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
    ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
    ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
ನನ್ನ ಪಾಲು[a] ರಮಣೀಯವಾಗಿದೆ.
    ನನ್ನ ಸ್ವಾಸ್ತ್ಯವು[b] ಬಹು ಸುಂದರವಾಗಿದೆ.
ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
    ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.

ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
    ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
    ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
    ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
    ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
    ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.

ಗಲಾತ್ಯದವರಿಗೆ 5:1

ಸ್ವತಂತ್ರರಾಗಿರಿ

ಈಗ ನಮಗೆ ಸ್ವತಂತ್ರವಿದೆ. ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ದೃಢವಾಗಿರಿ. ಮನಸ್ಸನ್ನು ಬದಲಾಯಿಸಿಕೊಂಡು ಮತ್ತೆ ಧರ್ಮಶಾಸ್ತ್ರದ ಗುಲಾಮಗಿರಿಗೆ ಹೋಗಬೇಡಿರಿ.

ಗಲಾತ್ಯದವರಿಗೆ 5:13-25

13 ನನ್ನ ಸಹೋದರ ಸಹೋದರಿಯರೇ, ನೀವು ಸ್ವತಂತ್ರರಾಗಬೇಕೆಂದು ದೇವರು ನಿಮ್ಮನ್ನು ಕರೆದಿದ್ದಾನೆ. ಆದರೆ ಪಾಪಮಯವಾದ ನಿಮ್ಮ ಸ್ವಭಾವವನ್ನು ಮೆಚ್ಚಿಸುವುದಕ್ಕಾಗಿ ನಿಮ್ಮ ಸ್ವತಂತ್ರವನ್ನು ನೆಪಮಾಡಿಕೊಳ್ಳಬೇಡಿ. ಆದರೆ ಪ್ರೀತಿಯಿಂದ ಒಬ್ಬರ ಸೇವೆಯನ್ನೊಬ್ಬರು ಮಾಡಿರಿ. 14 “ನೀವು ನಿಮ್ಮನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಿರಿ”(A) ಎಂಬ ಒಂದೇ ಒಂದು ಆಜ್ಞೆಯಲ್ಲಿ ಇಡೀ ಧರ್ಮಶಾಸ್ತ್ರವೇ ಅಡಕವಾಗಿದೆ. 15 ನೀವು ಒಬ್ಬರನ್ನೊಬ್ಬರು ಕಚ್ಚಿ ಹರಿದುಹಾಕಿ ನುಂಗುವುದಾದರೆ ಒಬ್ಬರಿಂದೊಬ್ಬರು ನಾಶವಾಗುತ್ತೀರಿ. ಆದ್ದರಿಂದ ಎಚ್ಚರಿಕೆಯಿಂದಿರಿ!

ದೇವರಾತ್ಮನು ಮತ್ತು ಮಾನವ ಸ್ವಭಾವ

16 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಪವಿತ್ರಾತ್ಮನನ್ನು ಅನುಸರಿಸುವವರಾಗಿರಿ. ಆಗ, ನಿಮ್ಮ ಶರೀರಭಾವವು ಬಯಸುವ ಕೆಟ್ಟ ಸಂಗತಿಗಳನ್ನು ನೀವು ಮಾಡುವುದಿಲ್ಲ. 17 ನಮ್ಮ ಶರೀರಭಾವವು ದೇವರಾತ್ಮನಿಗೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತದೆ. ದೇವರಾತ್ಮನು ನಮ್ಮ ಶರೀರಭಾವಕ್ಕೆ ವಿರುದ್ಧವಾದ ಸಂಗತಿಗಳನ್ನು ಬಯಸುತ್ತಾನೆ. ಆದ್ದರಿಂದ ನೀವು ನಿಜವಾಗಿಯೂ ಬಯಸುವಂಥವುಗಳನ್ನು ಮಾಡಲಾಗದಂತೆ ಅವು ಒಂದಕ್ಕೊಂದು ಹೋರಾಡುತ್ತವೆ. 18 ಆದರೆ ನೀವು ನಿಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಟ್ಟರೆ ನೀವು ಧರ್ಮಶಾಸ್ತ್ರದ ಅಧೀನದಲ್ಲಿಲ್ಲ.

19 ನಮ್ಮ ಶರೀರಭಾವವು ಮಾಡುವ ಕೆಟ್ಟ ಸಂಗತಿಗಳು ಸ್ಪಷ್ಟವಾಗಿವೆ. ಜಾರತ್ವ, ಅಶುದ್ಧತ್ವ, 20 ಸುಳ್ಳುದೇವರುಗಳ ಆರಾಧನೆ, ಮಾಟಮಂತ್ರ, ದ್ವೇಷ, ಜಗಳ, ಹೊಟ್ಟೆಕಿಚ್ಚು, ಕಡುಕೋಪ, ಸ್ವಾರ್ಥ, ಸಿಟ್ಟು, ಕಕ್ಷಭೇದ, 21 ಮತ್ಸರ, ಕುಡಿಕತನ ಮತ್ತು ಸ್ವೇಚ್ಫಾಚಾರದ ಕೂಟ, ಮೊದಲಾದವುಗಳೇ. ನಾನು ನಿಮ್ಮನ್ನು ಮೊದಲು ಎಚ್ಚರಿಸಿದಂತೆ ಈಗಲೂ ಎಚ್ಚರಿಸುತ್ತೇನೆ. ಇಂಥವುಗಳನ್ನು ಮಾಡುವ ಜನರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 22 ಆದರೆ ದೇವರಾತ್ಮನು ಹುಟ್ಟಿಸುವುದು ಪ್ರೀತಿ, ಆನಂದ, ಶಾಂತಿ, ತಾಳ್ಮೆ, ಕರುಣೆ, ಉಪಕಾರ, ನಂಬಿಗಸ್ತಿಕೆ, 23 ಸಾಧುತ್ವ, ಇಂದ್ರಿಯ ನಿಗ್ರಹ ಇಂಥವುಗಳೇ. ಇವುಗಳನ್ನು ತಪ್ಪೆಂದು ಯಾವ ಧರ್ಮಶಾಸ್ತ್ರವೂ ಹೇಳುವುದಿಲ್ಲ. 24 ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಶಿಲುಬೆಗೇರಿಸಿದ್ದಾರೆ. ಅವರು ತಮ್ಮ ಹಳೆಯ ಸ್ವಾರ್ಥಪರವಾದ ಅಭಿಲಾಷೆಗಳನ್ನು ಮತ್ತು ತಾವು ಮಾಡಬೇಕೆಂದಿದ್ದ ಕೆಟ್ಟಕಾರ್ಯಗಳನ್ನು ಬಿಟ್ಟುಕೊಟ್ಟವರಾಗಿದ್ದಾರೆ. 25 ನಮ್ಮ ಹೊಸ ಜೀವಿತವನ್ನು ಪವಿತ್ರಾತ್ಮನಿಂದ ಪಡೆದುಕೊಂಡಿರುವುದರಿಂದ ನಾವು ಆತನನ್ನೇ ಅನುಸರಿಸಬೇಕು.

ಲೂಕ 9:51-62

ಸಮಾರ್ಯ ಪಟ್ಟಣ

51 ಯೇಸು ಮತ್ತೆ ಪರಲೋಕಕ್ಕೆ ಹಿಂತಿರುಗುವ ಸಮಯ ಹತ್ತಿರವಾಗುತ್ತಿತ್ತು. ಆದ್ದರಿಂದ ಆತನು ಜೆರುಸಲೇಮಿಗೆ ಹೋಗಲು ತೀರ್ಮಾನಿಸಿದನು. 52 ಯೇಸು ಕೆಲವರನ್ನು ತನ್ನ ಮುಂದಾಗಿ ಕಳುಹಿಸಿದನು. ಯೇಸುವಿಗಾಗಿ ಪ್ರತಿಯೊಂದನ್ನು ಸಿದ್ಧಪಡಿಸಲು ಅವರು ಸಮಾರ್ಯ ಪಟ್ಟಣಕ್ಕೆ ಹೋದರು. 53 ಆದರೆ ಆತನು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಸಮಾರ್ಯದ ಜನರು ಆತನನ್ನು ಸ್ವಾಗತಿಸಲಿಲ್ಲ. 54 ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನ ಇದನ್ನು ಕಂಡು, “ಸ್ವಾಮೀ, ಆಕಾಶದಿಂದ ಬೆಂಕಿ ಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಆಜ್ಞಾಪಿಸಬೇಕೆನ್ನುವಿಯೋ!”[a] ಎಂದು ಕೇಳಿದರು.

55 ಆದರೆ ಯೇಸು ಅವರ ಕಡೆಗೆ ತಿರುಗಿ ಗದರಿಸಿದನು.[b] 56 ಬಳಿಕ ಯೇಸು ಮತ್ತು ಆತನ ಶಿಷ್ಯರು ಇನ್ನೊಂದು ಪಟ್ಟಣಕ್ಕೆ ಹೋದರು.

ಯೇಸುವನ್ನು ಹಿಂಬಾಲಿಸಿ

(ಮತ್ತಾಯ 8:19-22)

57 ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ, ಒಬ್ಬನು ಯೇಸುವಿಗೆ, “ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.

58 ಯೇಸು, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಉತ್ತರಿಸಿದನು.

59 ಯೇಸು ಇನೊಬ್ಬನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.

ಆದರೆ ಅವನು, “ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಅವಕಾಶ ನೀಡು” ಎಂದು ಹೇಳಿದನು.

60 ಯೇಸು ಅವನಿಗೆ, “ಸತ್ತಜನರೇ ತಮ್ಮವರಲ್ಲಿ ಸತ್ತುಹೋದವರ ಅಂತ್ಯಕ್ರಿಯೆ ಮಾಡಲಿ! ನೀನು ಹೋಗಿ ದೇವರ ರಾಜ್ಯದ ಬಗ್ಗೆ ತಿಳಿಸು” ಎಂದು ಹೇಳಿದನು.

61 ಮತ್ತೊಬ್ಬನು, “ಸ್ವಾಮೀ, ನಾನು ನಿನ್ನನ್ನು ಹಿಂಬಾಲಿಸುವೆನು. ಆದರೆ ಮೊದಲು ನನ್ನ ಕುಟುಂಬದವರ ಬಳಿಗೆ ಹೋಗಿಬರಲು ಅವಕಾಶ ನೀಡು” ಎಂದು ಹೇಳಿದನು.

62 ಯೇಸು, “ನೇಗಿಲಿನ ಮೇಲೆ ಕೈಯನ್ನು ಹಾಕಿ ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಅಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International