Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 72

ರಚನೆಗಾರ: ಸೊಲೊಮೋನ.

72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
    ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
    ತೀರ್ಪುಮಾಡಲು ಅವನಿಗೆ ಸಹಾಯಮಾಡು.
ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
    ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
    ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
    ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
    ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
    ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
    ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
    ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
    ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
    ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
    ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
    ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
    ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
    ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
    ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
    ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
    ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
    ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
    ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.

18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
    ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
    ಆಮೆನ್, ಆಮೆನ್!

20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)

1 ರಾಜರುಗಳು 10:14-25

14 ರಾಜನಾದ ಸೊಲೊಮೋನನು ಪ್ರತಿವರ್ಷವೂ ಇಪ್ಪತ್ತೆರಡು ಸಾವಿರದ ಆರುನೂರ ನಲವತ್ನಾಲ್ಕು ಕಿಲೋಗ್ರಾಂ ಬಂಗಾರವನ್ನು ಪಡೆಯುತ್ತಿದ್ದನು. 15 ಹಡಗುಗಳಿಂದ ಸಿಗುತ್ತಿದ್ದ ಬಂಗಾರವಲ್ಲದೆ ವ್ಯಾಪಾರಿಗಳಿಂದಲೂ ಅರೇಬಿಯಾದ ರಾಜರಿಂದಲೂ ರಾಜ್ಯಪಾಲರುಗಳಿಂದಲೂ ಬಂಗಾರವನ್ನು ಅವನು ಪಡೆಯುತ್ತಿದ್ದನು.

16 ರಾಜನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ದೊಡ್ಡ ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಯಲ್ಲಿ ಏಳು ಕಿಲೋಗ್ರಾಂ ಬಂಗಾರವಿತ್ತು. 17 ಅವನು ಬಂಗಾರದ ತಗಡಿನಿಂದ ಮುನ್ನೂರು ಚಿಕ್ಕ ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಯಲ್ಲಿ ನಾಲ್ಕು ಪೌಂಡುಗಳಷ್ಟು ಬಂಗಾರವಿತ್ತು. ರಾಜನು ಅವುಗಳನ್ನು “ಲೆಬನೋನಿನ ಅರಣ್ಯ” ಎಂದು ಕರೆಯುವ ಕಟ್ಟಡದಲ್ಲಿಟ್ಟನು.

18 ರಾಜನಾದ ಸೊಲೊಮೋನನು ವಿಶಾಲವಾದ ದಂತದ ಸಿಂಹಾಸನವನ್ನು ಸಹ ಮಾಡಿಸಿದನು. ಅವನು ಅಪ್ಪಟ ಚಿನ್ನದ ತಗಡನ್ನು ಅದಕ್ಕೆ ಹೊದಿಸಿದನು. 19 ಸಿಂಹಾಸನದ ಮೇಲಕ್ಕೆ ಹತ್ತಲು ಅದರಲ್ಲಿ ಆರು ಮೆಟ್ಟಿಲುಗಳಿದ್ದವು. ಸಿಂಹಾಸನದ ಮೇಲ್ಭಾಗವು ವೃತ್ತಾಕಾರವಾಗಿತ್ತು. ಆ ಸಿಂಹಾಸನದ ಎರಡು ಕಡೆಗಳಲ್ಲಿ ಎರಡು ತೋಳುಗಳಿದ್ದವು. ಆ ಸಿಂಹಾಸನದ ತೋಳುಗಳ ಕೆಳಭಾಗದಲ್ಲಿ ಸಿಂಹದ ಚಿತ್ರಗಳಿದ್ದವು. 20 ಆರು ಮೆಟ್ಟಿಲುಗಳ ಪ್ರತಿಯೊಂದು ಮೆಟ್ಟಿಲಿನಲ್ಲಿ ಎರಡು ಸಿಂಹಗಳಿದ್ದವು. ಪ್ರತಿಯೊಂದು ಕೊನೆಯಲ್ಲಿ ಒಂದು ಸಿಂಹವಿತ್ತು. ಬೇರೆ ಯಾವ ರಾಜ್ಯದಲ್ಲೂ ಇಂತಹ ಸಿಂಹಾಸನ ಇರಲಿಲ್ಲ.

21 ಸೊಲೊಮೋನನ ಬಟ್ಟಲುಗಳು ಮತ್ತು ಲೋಟಗಳು ಬಂಗಾರದಿಂದ ತಯಾರಿಸಲಾಗಿದ್ದವು. “ಲೆಬನೋನಿನ ಅರಣ್ಯ” ಎಂದು ಕರೆಯುವ ಕಟ್ಟಡದಲ್ಲಿದ್ದ ಎಲ್ಲಾ ಆಯುಧಗಳನ್ನು ಅಪ್ಪಟ ಚಿನ್ನದಿಂದ ಮಾಡಿದ್ದರು. ಅರಮನೆಯ ಯಾವ ವಸ್ತುವನ್ನೂ ಬೆಳ್ಳಿಯಿಂದ ಮಾಡಿರಲಿಲ್ಲ. ಜನರು ಬೆಳ್ಳಿಯನ್ನು ಅಮೂಲ್ಯವೆಂದು ಯೋಚಿಸದಷ್ಟು ಬಂಗಾರವು ಸೊಲೊಮೋನನ ಕಾಲದಲ್ಲಿತ್ತು!

22 ರಾಜನಾದ ಸೊಲೊಮೋನನ ಹತ್ತಿರ ಅನೇಕ ಸರಕು ಸಾಗಣಿಕೆಯ ಹಡಗುಗಳಿದ್ದವು. ಅವನು ಅವುಗಳನ್ನು ಇತರ ದೇಶಗಳಲ್ಲಿನ ವ್ಯಾಪಾರಕ್ಕಾಗಿ ಕಳುಹಿಸುತ್ತಿದ್ದನು. ಇವು ಹೀರಾಮನ ಹಡಗುಗಳು. ಈ ಹಡಗುಗಳು ಬಂಗಾರ, ಬೆಳ್ಳಿ, ದಂತ ಮತ್ತು ಪ್ರಾಣಿಗಳನ್ನು ಹೊಸದಾಗಿ ತುಂಬಿಕೊಂಡು ಮೂರು ವರ್ಷಕ್ಕೊಮ್ಮೆ ಹಿಂದಿರುಗುತ್ತಿದ್ದವು.

23 ಸೊಲೊಮೋನನು ಭೂಲೋಕದ ರಾಜರುಗಳಲ್ಲೆಲ್ಲಾ ಅತ್ಯಂತ ಬಲಿಷ್ಠನಾಗಿದ್ದನು. ಅವನು ರಾಜರುಗಳಲ್ಲೆಲ್ಲಾ ಹೆಚ್ಚು ಶ್ರೀಮಂತನೂ ಜ್ಞಾನಿಯೂ ಆಗಿದ್ದನು. 24 ಭೂಲೋಕದವರೆಲ್ಲರೂ ರಾಜನಾದ ಸೊಲೊಮೋನನನ್ನು ನೋಡುವುದಕ್ಕೂ ದೇವರು ಸೊಲೊಮೋನನಿಗೆ ದಯಪಾಲಿಸಿರುವ ಜ್ಞಾನವಾಕ್ಯಗಳನ್ನು ಕೇಳುವುದಕ್ಕೂ ಅಪೇಕ್ಷಿಸುತ್ತಿದ್ದರು. 25 ಪ್ರತಿವರ್ಷವೂ ರಾಜನನ್ನು ನೋಡಲು ಜನರು ಬರುತ್ತಿದ್ದರು. ಪ್ರತಿಯೊಬ್ಬನೂ ಕಾಣಿಕೆಯನ್ನು ತರುತ್ತಿದ್ದನು. ಅವರು ಬೆಳ್ಳಿಬಂಗಾರದಿಂದ ಮಾಡಿದ ವಸ್ತುಗಳನ್ನು, ಆಯುಧಗಳನ್ನು, ಉಡುಪುಗಳನ್ನು, ಸಾಂಬಾರ ಪದಾರ್ಥಗಳನ್ನು, ಕುದುರೆಗಳನ್ನು ಮತ್ತು ಹೇಸರಕತ್ತೆಗಳನ್ನು ತರುತ್ತಿದ್ದರು.

ಎಫೆಸದವರಿಗೆ 4:7

ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ.

ಎಫೆಸದವರಿಗೆ 4:11-16

11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು. 12 ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು. 13 ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.

14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ. 15 ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ. 16 ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International