Revised Common Lectionary (Complementary)
ಪ್ರತಿಯೊಂದಕ್ಕೂ ಸೂಕ್ತ ಸಮಯವಿದೆ
3 ಪ್ರತಿಯೊಂದಕ್ಕೂ ಸೂಕ್ತವಾದ ಸಮಯವಿದೆ. ಭೂಮಿಯ ಮೇಲೆ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವಿದೆ.
2 ಹುಟ್ಟುವ ಸಮಯ,
ಸಾಯುವ ಸಮಯ.
ನೆಡುವ ಸಮಯ,
ಸಸಿಗಳನ್ನು ಕೀಳುವ ಸಮಯ.
3 ಕೊಲ್ಲುವ ಸಮಯ,
ವಾಸಿಮಾಡುವ ಸಮಯ.
ನಾಶಮಾಡುವ ಸಮಯ,
ಕಟ್ಟುವ ಸಮಯ.
4 ಅಳುವ ಸಮಯ,
ನಗುವ ಸಮಯ.
ಗೋಳಾಡುವ ಸಮಯ,
ಕುಣಿದಾಡುವ ಸಮಯ.
5 ಆಯುಧಗಳನ್ನು ಬಿಸಾಡುವ ಸಮಯ,
ಆಯುಧಗಳನ್ನು ಎತ್ತಿಕೊಳ್ಳುವ ಸಮಯ.
ಅಪ್ಪಿಕೊಳ್ಳುವ ಸಮಯ,
ಅಪ್ಪಿಕೊಳ್ಳದಿರುವ ಸಮಯ.
6 ಹುಡುಕುವ ಸಮಯ,
ಹುಡುಕದಿರುವ ಸಮಯ.
ವಸ್ತುಗಳನ್ನು ಇಟ್ಟುಕೊಳ್ಳುವ ಸಮಯ,
ವಸ್ತುಗಳನ್ನು ಬಿಸಾಡುವ ಸಮಯ.
7 ಬಟ್ಟೆಯನ್ನು ಹರಿಯುವ ಸಮಯ,
ಬಟ್ಟೆಯನ್ನು ಹೊಲಿಯುವ ಸಮಯ.
ಮೌನವಾಗಿರುವ ಸಮಯ,
ಮಾತಾಡುವ ಸಮಯ.
8 ಪ್ರೀತಿ ಮಾಡುವ ಸಮಯ,
ದ್ವೇಷಿಸುವ ಸಮಯ.
ಯುದ್ಧಮಾಡುವ ಸಮಯ,
ಶಾಂತಿಯಿಂದಿರುವ ಸಮಯ.
ಲೋಕವು ದೇವರ ಹತೋಟಿಯಲ್ಲಿದೆ
9 ದುಡಿಯುವವನಿಗೆ ಅವನ ಪ್ರಯಾಸದಿಂದ ಲಾಭವೇನು? 10 ದೇವರು ಮನುಷ್ಯರಿಗೆ ಕೊಟ್ಟಿರುವ ಪ್ರಯಾಸದ ಕೆಲಸವನ್ನೆಲ್ಲಾ ನೋಡಿದ್ದೇನೆ. 11 ಈ ಲೋಕವನ್ನು ಕುರಿತು ಆಲೋಚಿಸುವುದಕ್ಕೆ ದೇವರು ನನಗೆ ಜ್ಞಾನವನ್ನು ಕೊಟ್ಟಿದ್ದರೂ ದೇವರ ಕಾರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವೇ ಇಲ್ಲ. ದೇವರು ಪ್ರತಿಯೊಂದನ್ನೂ ತಕ್ಕ ಸಮಯದಲ್ಲಿ ಮಾಡುವನು.
12 ಬದುಕಿರುವಷ್ಟು ಕಾಲ ಸಂತೋಷವಾಗಿದ್ದು ಸುಖಪಡುವುದಕ್ಕಿಂತ ಬೇರೆ ಯಾವ ಮೇಲೂ ಮನುಷ್ಯರಿಗೆ ಇಲ್ಲವೆಂದು ಕಲಿತುಕೊಂಡೆನು. 13 ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಕೆಲಸವನ್ನು ಸಂತೋಷದಿಂದ ಮಾಡುವುದು ದೇವರಿಗೆ ಇಷ್ಟವಾಗಿದೆ. ಅವು ದೇವರ ವರವಾಗಿವೆ.
ರಚನೆಗಾರ: ದಾವೀದ.
8 ನಮ್ಮ ಒಡೆಯನಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಅತಿಶಯವಾದದ್ದು.
ನಿನ್ನ ಹೆಸರು ಪರಲೋಕದಲ್ಲೆಲ್ಲಾ ನಿನ್ನನ್ನು ಮಹಿಮೆಪಡಿಸುವುದು.
2 ಚಿಕ್ಕಮಕ್ಕಳ ಬಾಯಿಗಳೂ ಕೂಸುಗಳ ಬಾಯಿಗಳೂ ನಿನ್ನನ್ನು ಸ್ತುತಿಸಿ ಕೊಂಡಾಡುತ್ತವೆ;
ನಿನ್ನ ವೈರಿಗಳ ಬಾಯಿ ಮುಚ್ಚಿಸುವುದಕ್ಕಾಗಿಯೇ ನೀನು ಹೀಗೆ ಮಾಡಿರುವೆ.
3 ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ
ನೀನು ಸೃಷ್ಟಿಸಿದ ಚಂದ್ರನಕ್ಷತ್ರಗಳನ್ನೂ ನೋಡಿ ಆಶ್ಚರ್ಯಗೊಳ್ಳುವೆನು.
4 ಮನುಷ್ಯರಿಗೆ ನೀನೇಕೆ ಪ್ರಾಮುಖ್ಯತೆ ಕೊಡಬೇಕು?
ನೀನೇಕೆ ಅವರನ್ನು ಜ್ಞಾಪಿಸಿಕೊಳ್ಳಬೇಕು?
ಮನುಷ್ಯರು ಎಷ್ಟರವರು?
ನೀನೇಕೆ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕು?
5 ಆದರೆ ನೀನು ಮನುಷ್ಯರಿಗೆ ಪ್ರಾಮುಖ್ಯತೆ ಕೊಟ್ಟಿರುವೆ.
ನೀನು ಅವರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಸೃಷ್ಟಿಸಿದೆ.
ನೀನು ಅವರಿಗೆ ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿಟ್ಟಿರುವೆ.
6 ನೀನು ಸೃಷ್ಟಿಸಿದ ಪ್ರತಿಯೊಂದರ ಮೇಲೂ ಅವರನ್ನು ಅಧಿಪತಿಯನ್ನಾಗಿ ಮಾಡಿರುವೆ.
ನೀನು ಪ್ರತಿಯೊಂದನ್ನೂ ಅವರಿಗೆ ಅಧೀನಗೊಳಿಸಿರುವೆ.
7 ಅವರು ಎಲ್ಲಾ ಪಶುಗಳ ಮೇಲೆಯೂ ಕಾಡುಪ್ರಾಣಿಗಳ ಮೇಲೆಯೂ ದೊರೆತನ ಮಾಡುವರು.
8 ಆಕಾಶದ ಪಕ್ಷಿಗಳ ಮೇಲೆಯೂ ಸಾಗರದ ಮೀನುಗಳ ಮೇಲೆಯೂ
ದೊರೆತನ ಮಾಡುವರು.
9 ನಮ್ಮ ದೇವರಾದ ಯೆಹೋವನೇ, ನಿನ್ನ ಹೆಸರು ಭೂಲೋಕದಲ್ಲೆಲ್ಲಾ ಎಷ್ಟೋ ಅತಿಶಯವಾಗಿದೆ.
ನೂತನ ಜೆರುಸಲೇಮ್
21 ನಂತರ ನೂತನ ಪರಲೋಕವನ್ನು ಮತ್ತು ನೂತನ ಭೂಮಿಯನ್ನು[a] ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭೂಮಿ ಅದೃಶ್ಯವಾಗಿದ್ದವು. ಅಲ್ಲಿ ಸಮುದ್ರವಿರಲಿಲ್ಲ. 2 ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜೆರುಸಲೇಮ್. ವಧುವು ತನ್ನ ಪತಿಗಾಗಿ ಶೃಂಗರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.
3 ಸಿಂಹಾಸನದಿಂದ ಒಂದು ಗಟ್ಟಿಯಾದ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು, “ಈಗ ದೇವರ ಮನೆಯು ಜನರ ಸಂಗಡವಿದೆ. ಆತನು ಅವರೊಂದಿಗೆ ನೆಲೆಸುತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರಾಗಿರುತ್ತಾನೆ. 4 ದೇವರು ಅವರ ಕಣ್ಣೀರನ್ನೆಲ್ಲ ಒರಸಿ ಬಿಡುವನು. ಅಲ್ಲಿ ಇನ್ನು ಮರಣವಿರುವುದಿಲ್ಲ, ದುಃಖವಿರುವುದಿಲ್ಲ, ಗೋಳಾಟವಿರುವುದಿಲ್ಲ ಮತ್ತು ನೋವಿರುವುದಿಲ್ಲ. ಹಳೆಯ ಮಾರ್ಗಗಳೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.
5 ಸಿಂಹಾಸನದ ಮೇಲೆ ಕುಳಿತಿದ್ದವನು, “ನೋಡು! ನಾನು ಎಲ್ಲವನ್ನೂ ಹೊಸದಾಗಿ ಸೃಷ್ಟಿಸುತ್ತೇನೆ!” ಎಂದು ಹೇಳಿದನು. ನಂತರ ಆತನು, “ಈ ವಾಕ್ಯಗಳು ಸತ್ಯವಾದುವುಗಳೂ ನಂಬತಕ್ಕವುಗಳೂ ಆಗಿರುವುದರಿಂದ ಇವುಗಳನ್ನು ಬರೆ” ಎಂದು ಹೇಳಿದನು.
6 ಸಿಂಹಾಸನದ ಮೇಲೆ ಕುಳಿತಿದ್ದಾತನು ನನಗೆ ಹೀಗೆ ಹೇಳಿದನು: “ಎಲ್ಲವೂ ನೆರವೇರಿತು! ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದೇನೆ. ಬಾಯಾರಿದವರಿಗೆ ನಾನು ಜೀವಜಲದ ಬುಗ್ಗೆಯಿಂದ ನೀರನ್ನು ಉಚಿತವಾಗಿ ಕೊಡುತ್ತೇನೆ.
ಸರ್ವರಿಗೂ ಮನುಷ್ಯಕುಮಾರನು ನೀಡುವ ತೀರ್ಪು
31 “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಮತ್ತೆ ಬರುವಾಗ ರಾಜನಾಗಿ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ. 32 ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು; 33 ಮನುಷ್ಯಕುಮಾರನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.
34 “ಆಗ ರಾಜನು ತನ್ನ ಬಲಗಡೆಯಲ್ಲಿರುವ ಜನರಿಗೆ, ‘ಬನ್ನಿರಿ, ನನ್ನ ತಂದೆ ನಿಮಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬನ್ನಿರಿ, ದೇವರು ನಿಮಗೆ ವಾಗ್ದಾನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿರಿ. ಆ ರಾಜ್ಯವು ಲೋಕ ಉಂಟಾದಂದಿನಿಂದ ನಿಮಗಾಗಿ ಸಿದ್ಧಮಾಡಲ್ಪಟ್ಟಿದೆ. 35 ನೀವು ಈ ರಾಜ್ಯವನ್ನು ಪಡೆದುಕೊಳ್ಳಿರಿ. ಏಕೆಂದರೆ ನಾನು ಹಸಿದಿದ್ದೆನು. ನೀವು ನನಗೆ ಊಟ ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಒಬ್ಬಂಟಿಗನಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಂಡಿರಿ. 36 ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು, ನೀವು ನನಗೆ ಆರೈಕೆ ಮಾಡಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುತ್ತಾನೆ.
37 “ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು? 38 ನೀನು ಒಬ್ಬಂಟಿಗನಾಗಿ ಮನೆಯಿಂದ ದೂರವಾಗಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳೊಳಗೆ ಸೇರಿಸಿಕೊಂಡೆವು? ನಿನಗೆ ಬಟ್ಟೆಯಿಲ್ಲದಿರುವುದನ್ನು ನೋಡಿ ಯಾವಾಗ ಉಡುವುದಕ್ಕೆ ಕೊಟ್ಟೆವು? 39 ನೀನು ಕಾಯಿಲೆ ಬಿದ್ದಿದ್ದನ್ನು ಅಥವಾ ಸೆರೆಯಲ್ಲಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ಆರೈಕೆ ಮಾಡಿದೆವು?’ ಎಂದು ಹೇಳುವರು.
40 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಏನೇನು ಮಾಡುತ್ತೀರೋ ಅದೆಲ್ಲವನ್ನು ನನಗೂ ಮಾಡಿದಂತಾಯಿತು’ ಎಂದು ಉತ್ತರಕೊಡುವನು.
41 “ಆಮೇಲೆ ರಾಜನು ತನ್ನ ಎಡಗಡೆಯಿದ್ದ ಜನರಿಗೆ, ‘ನನ್ನಿಂದ ತೊಲಗಿಹೋಗಿರಿ, ನಿಮಗೆ ಶಿಕ್ಷೆಯಾಗಬೇಕೆಂದು ದೇವರು ತೀರ್ಮಾನಿಸಿದ್ದಾನೆ. ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. 42 ಏಕೆಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ. 43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.
44 “ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.
45 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡದಂತಾಯಿತು’ ಎಂದು ಉತ್ತರಕೊಡುವನು.
46 “ಆಗ ಕೆಟ್ಟಜನರು ಅಲ್ಲಿಂದ ಹೊರಟುಹೋಗುವರು. ಅವರಿಗೆ ನಿತ್ಯದಂಡನೆಯಾಗುವುದು. ಒಳ್ಳೆಯ ಜನರಾದರೋ ನಿತ್ಯಜೀವವನ್ನು ಹೊಂದುವರು.”
Kannada Holy Bible: Easy-to-Read Version. All rights reserved. © 1997 Bible League International