Revised Common Lectionary (Complementary)
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
28 ಅಹೀಮಾಚನು ರಾಜನ ಬಳಿಗೆ ಬಂದು, “ಎಲ್ಲವೂ ಶುಭಕರವಾಗಿದೆ” ಎಂದು ಹೇಳಿ ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಅಹೀಮಾಚನು, “ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ರಾಜನಾದ ಒಡೆಯನೇ, ನಿನ್ನ ವಿರುದ್ಧವಾಗಿದ್ದ ಜನರನ್ನು ಯೆಹೋವನು ಸೋಲಿಸಿದ್ದಾನೆ” ಎಂದು ಹೇಳಿದನು.
29 ರಾಜನು, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಅಹೀಮಾಚನು, “ಯೋವಾಬನು ನನ್ನನ್ನು ಕಳುಹಿಸಿದಾಗ, ನಾನು ಒಂದು ದೊಡ್ಡ ಕೋಲಾಹಲವನ್ನು ನೋಡಿದೆನು. ಆದರೆ ಅದು ಏನೆಂದು ನನಗೆ ಗೊತ್ತಿಲ್ಲ” ಎಂದು ಉತ್ತರಿಸಿದನು.
30 ಆಗ ರಾಜನು, “ಅತ್ತ ಸರಿದು ನಿಲ್ಲು” ಎಂದನು. ಅಹೀಮಾಚನು ಸರಿದು ನಿಂತುಕೊಂಡನು.
31 ಇಥಿಯೋಪ್ಯದವನು ಬಂದನು. ಅವನು, “ನನ್ನ ರಾಜನಾದ ಪ್ರಭುವಿಗೆ ಸುದ್ದಿಯಿದೆ, ನಿನ್ನ ವಿರುದ್ಧವಾಗಿದ್ದ ಜನರನ್ನು ಇಂದು ಯೆಹೋವನು ದಂಡಿಸಿದನು!” ಎಂದು ಹೇಳಿದನು.
32 ರಾಜನು ಅವನಿಗೆ, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.
ಇಥಿಯೋಪ್ಯದವನು, “ನಿನ್ನ ಶತ್ರುಗಳು ಮತ್ತು ನಿನಗೆ ಕೇಡುಮಾಡಲು ನಿನಗೆ ವಿರುದ್ಧವಾಗಿ ಬಂದ ಜನರೆಲ್ಲರು ಈ ಯುವಕನಂತೆಯೇ ದಂಡಿಸಲ್ಪಡುವರು” ಎಂದು ಉತ್ತರಿಸಿದನು.
33 ಅಬ್ಷಾಲೋಮನು ಸತ್ತಿದ್ದಾನೆಂಬುದು ಆಗ ರಾಜನಿಗೆ ತಿಳಿಯಿತು. ರಾಜನು ಬಹಳ ತಳಮಳಗೊಂಡನು. ಅವನು ನಗರ ದ್ವಾರದಲ್ಲಿದ್ದ ಕೊಠಡಿಗೆ ಹೋಗಿ ಅಲ್ಲಿ ಗೋಳಾಡಿದನು. ಬಳಿಕ ಅಲ್ಲಿಂದ ತನ್ನ ಕೊಠಡಿಗೆ ಹೋಗುತ್ತಾ, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನಾದ ಅಬ್ಷಾಲೋಮನೇ! ನಿನಗೆ ಬದಲಾಗಿ ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ!” ಎಂದು ಗೋಳಾಡಿದನು.
ಯೋವಾಬನು ದಾವೀದನನ್ನು ಖಂಡಿಸಿದ್ದು
19 ಈ ಸುದ್ದಿಯನ್ನು ಜನರು ಯೋವಾಬನಿಗೆ ತಿಳಿಸಿದರು. ಅವರು ಯೋವಾಬನಿಗೆ, “ನೋಡು, ರಾಜನು ಅಳುತ್ತಿದ್ದಾನೆ ಮತ್ತು ಅಬ್ಷಾಲೋಮನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂದು ಹೇಳಿದರು. 2 ದಾವೀದನ ಸೈನ್ಯವು ಅಂದು ಯುದ್ಧದಲ್ಲಿ ಜಯಗಳಿಸಿತು. ಆದರೆ ಜನರಿಗೆಲ್ಲ ಆ ದಿನವೇ ಅತ್ಯಂತ ಶೋಕದ ದಿನವೂ ಆಯಿತು. “ರಾಜನು ಮಗನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂಬುದನ್ನು ಜನರು ಕೇಳಿ ದುಃಖಪಟ್ಟರು.
3 ಜನರು ನಾಚಿಕೆಯಿಂದ ನಗರದೊಳಕ್ಕೆ ಸದ್ದಿಲ್ಲದೆ ಬಂದರು. ಅವರು ಯುದ್ಧದಲ್ಲಿ ಸೋತುಬಂದವರಂತೆ ಕಾಣುತ್ತಿದ್ದರು. 4 ರಾಜನು ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. ರಾಜನು, “ನನ್ನ ಮಗನೇ, ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ” ಎಂದು ಗಟ್ಟಿಯಾಗಿ ಅಳುತ್ತಿದ್ದನು.
5 ಯೋವಾಬನು ರಾಜನ ಮನೆಗೆ ಬಂದನು. ಅವನು ರಾಜನಿಗೆ, “ನೀನು ನಿನ್ನ ಎಲ್ಲಾ ಸೈನಿಕರನ್ನು ಅವಮಾನ ಮಾಡುತ್ತಿರುವೆ! ನಿನ್ನ ಸೈನಿಕರು ಇಂದು ನಿನ್ನ ಜೀವವನ್ನು ರಕ್ಷಿಸಿದರು. ಅವರು ನಿನ್ನ ಗಂಡುಮಕ್ಕಳ, ಹೆಣ್ಣುಮಕ್ಕಳ, ಪತ್ನಿಯರ ಮತ್ತು ದಾಸಿಯರ ಜೀವಗಳನ್ನು ರಕ್ಷಿಸಿದರು. 6 ನಿನ್ನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸುವೆ; ನಿನ್ನನ್ನು ಪ್ರೀತಿಸುವ ಜನರನ್ನು ನೀನು ದ್ವೇಷಿಸುವೆ. ಆದ್ದರಿಂದ ನಿನ್ನ ಸೇವಕರು ಅವಮಾನಿತರಾಗಿದ್ದಾರೆ. ನಿನ್ನ ಅಧಿಕಾರಿಗಳು ಮತ್ತು ನಿನ್ನ ಜನರು ನಿನಗೆ ಮುಖ್ಯವಲ್ಲ ಎಂಬುದನ್ನು ನೀನಿಂದು ರುಜುವಾತುಪಡಿಸಿದೆ. ಇಂದು ಅಬ್ಷಾಲೋಮನು ಬದುಕಿದ್ದು, ನಾವೆಲ್ಲರೂ ಸತ್ತಿದ್ದರೆ, ನೀನು ಬಹಳ ಹರ್ಷಗೊಳುತ್ತಿದ್ದೆ ಎಂಬುದನ್ನು ನಾನು ಈ ದಿನ ಕಂಡುಕೊಂಡೆನು. 7 ಈಗ ಮೇಲೆದ್ದು ನಿನ್ನ ಸೇವಕರೊಂದಿಗೆ ಮಾತನಾಡು; ಅವರನ್ನು ಪ್ರೋತ್ಸಾಹಿಸು. ಯೆಹೋವನಾಣೆ, ಈ ಕಾರ್ಯವನ್ನು ಮಾಡಲು ನೀನಿಂದು ಹೊರಗೆ ಹೋಗದಿದ್ದರೆ, ರಾತ್ರಿಯ ವೇಳೆಗೆ ನಿನ್ನೊಂದಿಗೆ ಯಾವ ಮನುಷ್ಯನೂ ಉಳಿಯುವುದಿಲ್ಲ. ನೀನು ನಿನ್ನ ಚಿಕ್ಕಂದಿನಿಂದ ಈವರೆಗೆ ಅನುಭವಿಸಿದ ಸಂಕಷ್ಟಗಳಲ್ಲೆಲ್ಲ ಇದು ತೀರ ಕೆಟ್ಟದಾಗಿರುತ್ತದೆ” ಎಂದು ಹೇಳಿದನು.
8 ಆಗ ರಾಜನು ನಗರದ ಬಾಗಿಲಿಗೆ ಹೋದನು. ರಾಜನು ಬಾಗಿಲಿನ ಬಳಿಯಲ್ಲಿದ್ದಾನೆಂಬ ಸುದ್ದಿಯು ಹರಡಿತು. ಆದ್ದರಿಂದ ಜನರೆಲ್ಲರೂ ರಾಜನನ್ನು ನೋಡಲು ಬಂದರು. ಅಬ್ಷಾಲೋಮನ ಹಿಂಬಾಲಕರಾದ ಇಸ್ರೇಲರೆಲ್ಲ ಮನೆಗಳಿಗೆ ಓಡಿಹೋದರು.
ಯೇಸುವಿನಿಂದ ಗುಣಹೊಂದಿದ ಪಾರ್ಶ್ವವಾಯು ರೋಗಿ
(ಮತ್ತಾಯ 9:1-8; ಮಾರ್ಕ 2:1-12)
17 ಒಂದು ದಿನ ಯೇಸು ಜನರಿಗೆ ಬೋಧಿಸುತ್ತಿದ್ದನು. ಫರಿಸಾಯರು ಮತ್ತು ಧರ್ಮೋಪದೇಶಕರು ಸಹ ಅಲ್ಲಿ ಕುಳಿತುಕೊಂಡಿದ್ದರು. ಅವರು, ಗಲಿಲಾಯದಿಂದಲೂ ಜುದೇಯ ಪ್ರಾಂತ್ಯದ ಊರುಗಳಿಂದಲೂ ಜೆರುಸಲೇಮಿನಿಂದಲೂ ಬಂದಿದ್ದರು. ರೋಗಿಗಳನ್ನು ಗುಣಪಡಿಸಲು ಪ್ರಭುವಿನ ಶಕ್ತಿಯು ಆತನಲ್ಲಿತ್ತು. 18 ಒಬ್ಬ ಪಾರ್ಶ್ವವಾಯು ರೋಗಿ ಅಲ್ಲಿದ್ದನು. ಒಂದು ಚಿಕ್ಕ ಹಾಸಿಗೆಯಲ್ಲಿ ಅವನನ್ನು ಕೆಲವು ಮಂದಿ ಗಂಡಸರು ಹೊತ್ತುಕೊಂಡು ಬಂದು ಯೇಸುವಿನ ಮುಂದೆ ಇಡಲು ಪ್ರಯತ್ನಿಸಿದರು. 19 ಆದರೆ ಅಲ್ಲಿ ಬಹಳ ಜನ ಇದ್ದುದರಿಂದ ಯೇಸುವಿನ ಬಳಿಗೆ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಮನೆಯ ಮೇಲೆ ಹತ್ತಿ ಹೆಂಚುಗಳನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. 20 ಈ ಜನರ ನಂಬಿಕೆಯನ್ನು ನೋಡಿ ಯೇಸು ಆ ರೋಗಿಗೆ, “ಸ್ನೇಹಿತನೇ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
21 ಯೆಹೂದ್ಯ ಧರ್ಮೋಪದೇಶಕರು ಮತ್ತು ಫರಿಸಾಯರು, “ಈ ಮನುಷ್ಯನು (ಯೇಸು) ಯಾರು? ಈತನು ದೇವರಿಗೆ ವಿರುದ್ಧವಾದ ಸಂಗತಿಗಳನ್ನು ಹೇಳುತ್ತಾನಲ್ಲಾ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಬಲ್ಲನು” ಎಂದು ತಮ್ಮತಮ್ಮೊಳಗೆ ಯೋಚಿಸಿದರು.
22 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ನೀವು ಆ ರೀತಿ ಯೋಚಿಸುವುದೇಕೆ? 23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಪಾರ್ಶ್ವವಾಯು ರೋಗಿಗೆ ಹೇಳುವುದೋ? ಅಥವಾ ‘ಎದ್ದುನಿಂತು ನಡೆ’ ಎನ್ನುವುದೋ? 24 ಆದರೆ ಮನುಷ್ಯಕುಮಾರನಿಗೆ[a] ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರ ಉಂಟೆಂಬುದು ನಿಮಗೆ ಖಚಿತವಾಗಬೇಕು” ಎಂದು ಹೇಳಿ, ಪಾರ್ಶ್ವವಾಯು ರೋಗಿಗೆ, “ಏಳು! ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ಮನೆಗೆ ಹೋಗು!” ಎಂದು ಹೇಳಿದನು.
25 ಆ ಕೂಡಲೇ ಅವನು ಜನರು ಮುಂದೆ ಎದ್ದುನಿಂತು, ತನ್ನ ಹಾಸಿಗೆಯನ್ನು ಹೊತ್ತುಕೊಂಡು ದೇವರನ್ನು ಸ್ತುತಿಸುತ್ತಾ ಮನೆಗೆ ಹೋದನು. 26 ಜನರೆಲ್ಲರೂ ಬಹಳ ಆಶ್ಚರ್ಯಪಟ್ಟು ದೇವರನ್ನು ಸ್ತುತಿಸತೊಡಗಿದರು ಮತ್ತು ದೇವರಲ್ಲಿ ಭಯಭಕ್ತಿಯುಳ್ಳವರಾಗಿ, “ಈ ದಿನ ನಾವು ಆಶ್ಚರ್ಯಕರವಾದ ಸಂಗತಿಯನ್ನು ಕಂಡೆವು!” ಎಂದರು.
Kannada Holy Bible: Easy-to-Read Version. All rights reserved. © 1997 Bible League International