Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 7-8

ಬೆಳಗಿನ ಜಾವ ಯೆರುಬ್ಬಾಳನು (ಗಿದ್ಯೋನನು) ಮತ್ತು ಅವನ ಎಲ್ಲಾ ಜನರು ಹೋಗಿ ಹರೋದಿನ ಬುಗ್ಗೆಯ ಬಳಿಯಲ್ಲಿ ಪಾಳೆಯ ಮಾಡಿಕೊಂಡರು. ಮಿದ್ಯಾನ್ಯರು ಮೋರೆ ಎಂಬ ಬೆಟ್ಟದ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡರು. ಇದು ಗಿದ್ಯೋನ ಮತ್ತು ಅವನ ಜನರ ಉತ್ತರಕ್ಕಿತ್ತು.

ಆಗ ಯೆಹೋವನು ಗಿದ್ಯೋನನಿಗೆ, “ನಾನು ಮಿದ್ಯಾನ್ಯರನ್ನು ಸೋಲಿಸಲು ನಿನ್ನ ಜನರಿಗೆ ಸಹಾಯ ಮಾಡುತ್ತೇನೆ. ಆದರೆ ಈ ಕೆಲಸಕ್ಕೆ ನಿನ್ನ ಜನರು ತುಂಬ ಹೆಚ್ಚು. ಇಸ್ರೇಲರು ನನ್ನನ್ನು ಮರೆತು ತಾವೇ ತಮ್ಮನ್ನು ರಕ್ಷಿಸಿಕೊಂಡೆವೆಂದು ಜಂಬಕೊಚ್ಚಿಕೊಳ್ಳುವುದು ನನಗೆ ಇಷ್ಟವಿಲ್ಲ. ಅದಕ್ಕಾಗಿ ಈಗ, ‘ಭಯಪಡುವವರೆಲ್ಲರು ಗಿಲ್ಯಾದ್ ಬೆಟ್ಟವನ್ನು ಬಿಟ್ಟುಹೋಗಬಹುದು’ ಎಂದು ಪ್ರಕಟಿಸು” ಎಂದು ಹೇಳಿದನು.

ಆ ಸಮಯದಲ್ಲಿ ಇಪ್ಪತ್ತೆರಡು ಸಾವಿರ ಜನರು ಗಿದ್ಯೋನನನ್ನು ಬಿಟ್ಟು ಮನೆಗೆ ಹಿಂದಿರುಗಿದರು. ಆದರೆ ಇನ್ನೂ ಹತ್ತು ಸಾವಿರ ಜನರು ಉಳಿದುಕೊಂಡರು.

ಆಗ ಯೆಹೋವನು ಗಿದ್ಯೋನನಿಗೆ, “ಇನ್ನೂ ಬಹಳಷ್ಟು ಜನರಿದ್ದಾರೆ. ಇವರನ್ನು ನೀನು ನದಿಗೆ ಕರೆದುಕೊಂಡು ಹೋಗು. ಅಲ್ಲಿ ನಾನು ಅವರನ್ನು ನಿನಗಾಗಿ ಪರೀಕ್ಷಿಸುತ್ತೇನೆ. ‘ಯಾವನು ನಿನ್ನ ಜೊತೆಯಲ್ಲಿ ಹೋಗಬಹುದು’ ಎಂದು ನಾನು ಹೇಳುತ್ತೇನೋ ಅವನು ಹೋಗಲಿ. ‘ಯಾವನು ನಿನ್ನ ಜೊತೆಯಲ್ಲಿ ಹೋಗುವುದು ಬೇಡ’ ಎಂದು ನಾನು ಹೇಳುತ್ತೇನೋ ಅವನು ಹೋಗದಿರಲಿ” ಎಂದು ಹೇಳಿದನು.

ಆದ್ದರಿಂದ ಗಿದ್ಯೋನನು ಅವರನ್ನು ನದಿಯ ಹತ್ತಿರ ಕರೆದುಕೊಂಡು ಹೋದನು. ಅಲ್ಲಿ ಯೆಹೋವನು ಗಿದ್ಯೋನನಿಗೆ, “ನೀರನ್ನು ನಾಯಿಯಂತೆ ತಮ್ಮ ನಾಲಿಗೆಯಿಂದ ನೆಕ್ಕಿ ಕುಡಿಯುವವರನ್ನು ಒಂದು ಗುಂಪನ್ನಾಗಿ ಮತ್ತು ನೆಲಕ್ಕೆ ಮೊಣಕಾಲೂರಿ ನೀರನ್ನು ಕುಡಿಯುವವರನ್ನು ಇನ್ನೊಂದು ಗುಂಪನ್ನಾಗಿ ವಿಂಗಡಿಸು” ಎಂದು ಹೇಳಿದನು.

ಅವರಲ್ಲಿ ಮೂನ್ನೂರು ಮಂದಿ ಗಂಡಸರು ಕೈಯಿಂದ ನೀರನ್ನು ಬಾಯಿಯವರೆಗೆ ತೆಗೆದುಕೊಂಡು ನಾಯಿಯಂತೆ ನೆಕ್ಕಿದರು. ಉಳಿದವರೆಲ್ಲರು ಬಗ್ಗಿ ಮೊಣಕಾಲೂರಿ ನೀರನ್ನು ಕುಡಿದರು. ಯೆಹೋವನು ಗಿದ್ಯೋನನಿಗೆ, “ನಾಯಿಯಂತೆ ನೀರನ್ನು ನೆಕ್ಕಿದ ಮುನ್ನೂರು ಮಂದಿಯಿಂದಲೇ ಮಿದ್ಯಾನ್ಯರನ್ನು ಸೋಲಿಸಿ ನಿಮ್ಮನ್ನು ರಕ್ಷಿಸುವೆನು. ಉಳಿದವರು ತಮ್ಮ ಮನೆಗಳಿಗೆ ಹೋಗಲಿ” ಎಂದು ಹೇಳಿದನು.

ಗಿದ್ಯೋನನು ಉಳಿದ ಇಸ್ರೇಲರನ್ನು ಮನೆಗೆ ಕಳುಹಿಸಿ ಆಯ್ಕೆಗೊಂಡ ಮುನ್ನೂರು ಜನರನ್ನು ಉಳಿಸಿಕೊಂಡನು. ಆ ಮುನ್ನೂರು ಜನರು ಮನೆಗೆ ಹಿಂತಿರುಗಿ ಹೋದವರ ಆಹಾರವನ್ನೂ ತುತ್ತೂರಿಗಳನ್ನೂ ತೆಗೆದುಕೊಂಡರು.

ಮಿದ್ಯಾನ್ಯರು ಗಿದ್ಯೋನನ ಪಾಳೆಯದ ಕೆಳಭಾಗದ ತಗ್ಗಿನಲ್ಲಿ ಪಾಳೆಯಮಾಡಿಕೊಂಡಿದ್ದರು. ಅಂದು ರಾತ್ರಿ ಯೆಹೋವನು ಗಿದ್ಯೋನನಿಗೆ, “ಏಳು, ನೀನು ಮಿದ್ಯಾನ್ಯರ ಸೈನ್ಯವನ್ನು ಸೋಲಿಸುವಂತೆ ಮಾಡುತ್ತೇನೆ. ಅವರ ಪಾಳೆಯಕ್ಕೆ ಹೋಗು. 10 ಒಬ್ಬನೇ ಹೋಗಲು ನಿನಗೆ ಹೆದರಿಕೆಯಾದರೆ ನಿನ್ನ ಸೇವಕನಾದ ಪುರನನ್ನು ಜೊತೆಗೆ ಕರೆದುಕೊಂಡು ಹೋಗು. 11 ಮಿದ್ಯಾನ್ಯರ ಶಿಬಿರದ ಒಳಗಡೆ ಹೋಗಿ ಅವರ ಮಾತುಗಳನ್ನು ಕೇಳಿಸಿಕೋ. ಆಗ ನೀನು ಅವರ ಮೇಲೆ ಧಾಳಿಮಾಡುವುದಕ್ಕೆ ಹೆದರುವುದಿಲ್ಲ” ಎಂದನು.

ಗಿದ್ಯೋನನು ಮತ್ತು ಅವನ ಸೇವಕನಾದ ಪುರನು ಇಬ್ಬರೂ ಶತ್ರುಗಳ ಪಾಳೆಯದ ಗಡಿಯವರೆಗೂ ಹೋದರು. 12 ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಪೂರ್ವದೇಶದ ಉಳಿದೆಲ್ಲ ಜನರು ಆ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿದ್ದರು. ಅವರು ಅಸಂಖ್ಯಾತವಾಗಿದ್ದು ಮಿಡತೆಯ ಗುಂಪಿನಂತೆ ಕಂಡರು. ಅವರಲ್ಲಿದ್ದ ಒಂಟೆಗಳೋ ಲೆಕ್ಕವಿಲ್ಲದ ಸಮುದ್ರ ತೀರದ ಮರಳಿನಂತೆ ಎದ್ದುಕಾಣುತ್ತಿದ್ದವು.

13 ಗಿದ್ಯೋನನು ಶತ್ರುಗಳ ಪಾಳೆಯಕ್ಕೆ ಬಂದಾಗ ಒಬ್ಬನ ಮಾತನ್ನು ಕೇಳಿಸಿಕೊಂಡನು. ಆ ಮನುಷ್ಯನು ತಾನು ಕಂಡ ಒಂದು ಕನಸಿನ ಬಗ್ಗೆ ತನ್ನ ಮಿತ್ರನಿಗೆ ಹೇಳುತ್ತಿದ್ದನು. “ನಾನು ಕನಸಿನಲ್ಲಿ ಒಂದು ದುಂಡಾದ ರೊಟ್ಟಿಯು ಉರುಳಿಕೊಂಡು ಮಿದ್ಯಾನ್ಯರ ಪಾಳೆಯದಲ್ಲಿ ಬರುವುದನ್ನು ಕಂಡೆ. ಆ ರೊಟ್ಟಿಯು ರಭಸದಿಂದ ಬಂದು ಒಂದು ಗುಡಾರಕ್ಕೆ ಅಪ್ಪಳಿಸಲು ಆ ಗುಡಾರವು ಕುಸಿದುಬಿತ್ತು” ಎಂದನು.

14 ಆ ಮನುಷ್ಯನ ಸ್ನೇಹಿತನು ಕನಸಿನ ಅರ್ಥವನ್ನು ತಿಳಿದುಕೊಂಡು ಅವನಿಗೆ, “ನಿನ್ನ ಕನಸು ಇಸ್ರೇಲಿನ ಯೋವಾಷನ ಮಗನಾದ ಗಿದ್ಯೋನನ ಕುರಿತಾಗಿದೆ. ಗಿದ್ಯೋನನು ಮಿದ್ಯಾನ್ಯರ ಇಡೀ ಸೈನ್ಯವನ್ನು ಸೋಲಿಸುವಂತೆ ದೇವರು ಮಾಡುತ್ತಾನೆ” ಎಂದನು.

15 ಕನಸಿನ ಬಗ್ಗೆ ಮತ್ತು ಅದರ ಅರ್ಥದ ಬಗ್ಗೆ ಅವರು ಮಾತನಾಡುವುದನ್ನು ಕೇಳಿದ ಗಿದ್ಯೋನನು ಯೆಹೋವನಿಗೆ ತಲೆಬಾಗಿ ನಮಸ್ಕರಿಸಿದನು. ಆಮೇಲೆ ಗಿದ್ಯೋನನು ಇಸ್ರೇಲರ ಪಾಳೆಯಕ್ಕೆ ಹಿಂದಿರುಗಿದನು. ಗಿದ್ಯೋನನು ಜನರನ್ನು, “ಏಳಿರಿ! ಯೆಹೋವನು ಮಿದ್ಯಾನ್ಯರನ್ನು ಸೋಲಿಸಲು ನಮಗೆ ಸಹಾಯ ಮಾಡುತ್ತಾನೆ” ಎಂದು ಕೂಗಿಕರೆದನು. 16 ಆಮೇಲೆ ಗಿದ್ಯೋನನು ಆ ಮುನ್ನೂರು ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಗಿದ್ಯೋನನು ಪ್ರತಿಯೊಬ್ಬನಿಗೆ ಒಂದು ತುತ್ತೂರಿ ಮತ್ತು ಒಂದು ಬರಿದಾದ ಮಣ್ಣಿನ ಪಾತ್ರೆಯನ್ನು ಕೊಟ್ಟನು. ಪ್ರತಿಯೊಂದು ಪಾತ್ರೆಯ ಒಳಗಡೆ ಒಂದು ಉರಿಯುತ್ತಿರುವ ಪಂಜು ಇತ್ತು. 17 ಗಿದ್ಯೋನನು ಅವರಿಗೆ, “ನನ್ನನ್ನು ಗಮನಿಸುತ್ತಾ ನಾನು ಮಾಡಿದಂತೆ ಮಾಡಿರಿ. ಶತ್ರುಗಳ ಪಾಳೆಯದ ಸೀಮೆಯವರೆಗೆ ನನ್ನನ್ನು ಹಿಂಬಾಲಿಸಿ ಬನ್ನಿ. ನಾನು ಪಾಳೆಯದ ಗಡಿಯನ್ನು ಮುಟ್ಟಿದ ಮೇಲೆ ನಾನು ಮಾಡಿದಂತೆಯೇ ಮಾಡಿರಿ. 18 ನೀವು ಶತ್ರುಗಳ ಪಾಳೆಯಕ್ಕೆ ಮುತ್ತಿಗೆ ಹಾಕಿರಿ. ನನ್ನ ಸಂಗಡವಿರುವ ಜನರು ತುತ್ತೂರಿಯನ್ನು ಊದುವರು. ನಾವು ನಮ್ಮ ತುತ್ತೂರಿಗಳನ್ನು ಊದಿದಾಗ ನೀವು ಸಹ ನಿಮ್ಮ ತುತ್ತೂರಿಗಳನ್ನು ಊದಿರಿ. ‘ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ,’ ಎಂದು ಕೂಗಿರಿ” ಎಂದು ಹೇಳಿದನು.

19 ಗಿದ್ಯೋನನು ಮತ್ತು ಅವನ ಜೊತೆಯಲ್ಲಿದ್ದ ನೂರು ಜನರು ಶತ್ರುಗಳ ಪಾಳೆಯದ ಬಳಿಗೆ ಹೋದರು. ಶತ್ರುಗಳ ಪಾಳೆಯದ ಕಾವಲುಗಾರರು ಬದಲಾದ ಕೂಡಲೆ ಅವರು ಅಲ್ಲಿಗೆ ಹೋಗಿದ್ದರು. ಆಗ ಮಧ್ಯರಾತ್ರಿಯಾಗಿತ್ತು. ಗಿದ್ಯೋನ ಮತ್ತು ಅವನ ಜನರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ಮಡಕೆಗಳನ್ನು ಒಡೆದುಹಾಕಿದರು. 20 ಆಗ ಗಿದ್ಯೋನನ ಮೂರು ಗುಂಪಿನ ಜನರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ತಮ್ಮ ಮಡಕೆಗಳನ್ನು ಒಡೆದುಹಾಕಿದರು. ಅವರು ಪಂಜುಗಳನ್ನು ತಮ್ಮ ಎಡಗೈಗಳಲ್ಲಿಯೂ ತುತ್ತೂರಿಗಳನ್ನು ತಮ್ಮ ಬಲಗೈಗಳಲ್ಲಿಯೂ ಹಿಡಿದುಕೊಂಡರು. ಅವರು ತಮ್ಮ ತುತ್ತೂರಿಗಳನ್ನು ಊದುತ್ತಾ “ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ” ಎಂದು ಕೂಗಿಕೊಂಡರು.

21 ಗಿದ್ಯೋನನ ಜನರು ನಿಂತಲ್ಲಿಯೇ ನಿಂತುಕೊಂಡರು. ಮಿದ್ಯಾನ್ಯರು ಕೂಗಿಕೊಂಡು ಓಡಿಹೋಗಲು ಆರಂಭಿಸಿದರು. 22 ಗಿದ್ಯೋನನ ಮುನ್ನೂರು ಜನರು ತಮ್ಮ ತುತ್ತೂರಿಗಳನ್ನು ಊದಿದ ಕೂಡಲೆ ಮಿದ್ಯಾನ್ಯರು ತಮ್ಮತಮ್ಮಲ್ಲಿಯೇ ಒಬ್ಬರನ್ನೊಬ್ಬರು ಕತ್ತಿಯಿಂದ ಇರಿದು ಕೊಲ್ಲುವಂತೆ ಯೆಹೋವನು ಮಾಡಿದನು. ಶತ್ರುಗಳ ಸೈನ್ಯವು ಚೆರೇರದ ದಾರಿಯಲ್ಲಿರುವ ಬೇತ್‌ಷಿಟ್ಟಿನವರೆಗೂ ಓಡಿಹೋಯಿತು. ಅವರು ಟಬ್ಬಾತಿನ ಬಳಿಯಲ್ಲಿರುವ ಅಬೇಲ್ಮೆಹೋಲಾ ನಗರದವರೆಗೂ ಓಡಿಹೋದರು.

23 ಆಗ ನಫ್ತಾಲಿ, ಆಶೇರ ಮತ್ತು ಮನಸ್ಸೆ ಕುಲಗಳ ಎಲ್ಲ ಸೈನಿಕರಿಗೆ ಮಿದ್ಯಾನ್ಯರನ್ನು ಬೆನ್ನಟ್ಟಲು ಹೇಳಲಾಯಿತು. 24 ಗಿದ್ಯೋನನು ಎಫ್ರಾಯೀಮ್ ಬೆಟ್ಟಪ್ರದೇಶಗಳಿಗೆ ದೂತರನ್ನು ಕಳುಹಿಸಿದನು. ಆ ದೂತರು, “ಬನ್ನಿ, ಮಿದ್ಯಾನ್ಯರ ಮೇಲೆ ಧಾಳಿ ಮಾಡಿರಿ. ಬೇತ್‌ಬಾರದವರೆಗಿನ ನದಿಯ ಮತ್ತು ಜೋರ್ಡನ್ ನದಿಯ ಪ್ರದೇಶವನ್ನು ಹಿಡಿದುಕೊಳ್ಳಿರಿ. ಮಿದ್ಯಾನ್ಯರು ಅಲ್ಲಿಗೆ ಬರುವ ಮೊದಲೇ ಈ ಕೆಲಸವನ್ನು ಮಾಡಿರಿ” ಎಂದು ತಿಳಿಸಿದರು.

ಅವರು ಎಫ್ರಾಯೀಮ್ ಕುಲದ ಎಲ್ಲ ಜನರನ್ನು ಕರೆದರು. ಅವರು ಬೇತ್‌ಬಾರಾದವರೆಗೆ ನದಿಯ ಪ್ರದೇಶವನ್ನು ಹಿಡಿದುಕೊಂಡರು. 25 ಎಫ್ರಾಯೀಮ್ಯರು ಮಿದ್ಯಾನ್ಯರ ಇಬ್ಬರು ನಾಯಕರನ್ನು ಹಿಡಿದುಕೊಂಡರು. ಆ ಇಬ್ಬರು ನಾಯಕರುಗಳ ಹೆಸರುಗಳು ಓರೇಬ್ ಮತ್ತು ಜೇಬ್. ಎಫ್ರಾಯೀಮ್ಯರು ಓರೇಬನನ್ನು, ಓರೇಬ್ ಬಂಡೆಯ ಮೇಲೆಯೂ ಜೇಬನನ್ನು, ಜೇಬ್ ದ್ರಾಕ್ಷಿಯ ಆಲೆಯಲ್ಲಿಯೂ ಕೊಂದುಹಾಕಿದರು. ಎಫ್ರಾಯೀಮ್ಯರು ಮಿದ್ಯಾನ್ಯರನ್ನು ಬೆನ್ನಟ್ಟುತ್ತಲೇ ಹೋದರು. ಅವರು ಓರೇಬ್ ಮತ್ತು ಜೇಬನ ತಲೆಗಳನ್ನು ಕತ್ತರಿಸಿ ಅವುಗಳನ್ನು ತೆಗೆದುಕೊಂಡು ಜೋರ್ಡನ್ ನದಿಯ ಹಾಯಗಡದಲ್ಲಿದ್ದ ಗಿದ್ಯೋನನ ಬಳಿಗೆ ತೆಗೆದುಕೊಂಡು ಬಂದರು.

ಎಫ್ರಾಯೀಮ್ಯರು ಗಿದ್ಯೋನನ ಮೇಲೆ ಕೋಪಗೊಂಡಿದ್ದರು. ಎಫ್ರಾಯೀಮ್ಯರು ಗಿದ್ಯೋನನನ್ನು ಕಂಡಾಗ, “ನೀನು ನಮ್ಮ ಸಂಗಡ ಹೀಗೇಕೆ ವರ್ತಿಸಿದೆ? ನೀನು ಮಿದ್ಯಾನ್ಯರೊಂದಿಗೆ ಯುದ್ಧಮಾಡಲು ಹೋದಾಗ ನಮ್ಮನ್ನು ಏಕೆ ಕರೆಯಲಿಲ್ಲ?” ಎಂದು ಗಿದ್ಯೋನನನ್ನು ಕೇಳಿದರು.

ಗಿದ್ಯೋನನು ಎಫ್ರಾಯೀಮ್ಯರಿಗೆ, “ನೀವು ಮಾಡಿದಷ್ಟು ದೊಡ್ಡ ಕೆಲಸವನ್ನು ನಾನು ಮಾಡಿಲ್ಲ. ನನ್ನ ಅಬೀಯೆಜೆರನ ಕುಟುಂಬದವರಿಗಿಂತ ಎಫ್ರಾಯೀಮ್ಯರಾದ ನಿಮ್ಮ ಸುಗ್ಗಿಯೇ ಬಹಳ ಚೆನ್ನಾಗಿ ಆಗಿದೆಯಲ್ಲವೇ? ಸುಗ್ಗಿಯ ಕಾಲದಲ್ಲಿ ನಮ್ಮ ಕುಟುಂಬದವರು ಕೂಡಿಸುವ ದ್ರಾಕ್ಷಿಗಿಂತ ಹೆಚ್ಚು ದ್ರಾಕ್ಷಿಯನ್ನು ನೀವು ಹೊಲದಲ್ಲಿಯೇ ಬಿಟ್ಟುಬಿಡುತ್ತೀರಿ! ಇದು ನಿಜವಲ್ಲವೇ? ಅದೇ ರೀತಿ ಈಗಲೂ ಕೂಡ ನಿಮ್ಮದೇ ದೊಡ್ಡ ರಾಶಿ. ಮಿದ್ಯಾನ್ಯರ ನಾಯಕರಾದ ಓರೇಬನನ್ನು ಮತ್ತು ಜೇಬನನ್ನು ಸೆರೆಹಿಡಿಯುವಂತೆ ದೇವರು ನಿಮಗೆ ಸಹಾಯ ಮಾಡಿದನು. ನೀವು ಮಾಡಿದ ಕೆಲಸಕ್ಕೆ ನನ್ನ ಜಯವನ್ನು ಹೋಲಿಸಲು ಹೇಗೆ ಸಾಧ್ಯ?” ಎಂದು ಹೇಳಿದನು. ಗಿದ್ಯೋನನ ಉತ್ತರವನ್ನು ಕೇಳಿದ ಮೇಲೆ ಎಫ್ರಾಯೀಮ್ಯರ ಕೋಪ ಕಡಿಮೆಯಾಯಿತು.

ಗಿದ್ಯೋನನು ಮಿದ್ಯಾನ್ಯರ ಇಬ್ಬರು ಅರಸರನ್ನು ಸೆರೆಹಿಡಿದನು

ಗಿದ್ಯೋನ ಮತ್ತು ಅವನ ಮುನ್ನೂರು ಜನರು ಜೋರ್ಡನ್ ನದಿಯನ್ನು ದಾಟಿ ಆಚೆದಡಕ್ಕೆ ಹೋದರು. ಅವರು ಬಹಳ ದಣಿದಿದ್ದರು ಮತ್ತು ಹಸಿದಿದ್ದರು.[a] ಗಿದ್ಯೋನನು ಸುಖೋತ್ ನಗರದ ಜನರಿಗೆ, “ನನ್ನ ಸೈನಿಕರಿಗೆ ತಿನ್ನಲು ಏನಾದರೂ ಕೊಡಿ; ಅವರು ಬಹಳ ದಣಿದು ಹೋಗಿದ್ದಾರೆ. ನಾವು ಮಿದ್ಯಾನ್ಯರ ಅರಸನಾದ ಜೆಬಹನನ್ನೂ ಚಲ್ಮುನ್ನನನ್ನೂ ಬೆನ್ನಟ್ಟಿಕೊಂಡು ಹೋಗುತ್ತಿದ್ದೇವೆ” ಎಂದು ಹೇಳಿದನು.

ಆದರೆ ಸುಖೋತ್ ನಗರದ ನಾಯಕರು ಗಿದ್ಯೋನನಿಗೆ, “ನಾವು ನಿಮ್ಮ ಸೈನಿಕರಿಗೆ ಆಹಾರವನ್ನು ಏಕೆ ಕೊಡಬೇಕು? ನೀವು ಜೆಬಹನನ್ನು ಮತ್ತು ಚಲ್ಮುನ್ನನನ್ನು ಇನ್ನೂ ಬಂಧಿಸಲೇ ಇಲ್ಲ” ಎಂದು ಹೇಳಿದರು.

ಅದಕ್ಕೆ ಗಿದ್ಯೋನನು, “ನೀವು ನಮಗೆ ಆಹಾರವನ್ನು ಕೊಡುವುದಿಲ್ಲವಾದರೆ ಜೆಬಹನನ್ನು ಮತ್ತು ಚಲ್ಮುನ್ನನನ್ನು ಬಂಧಿಸಲು ಯೆಹೋವನೇ ನಮಗೆ ಸಹಾಯ ಮಾಡುತ್ತಾನೆ. ಆಮೇಲೆ ನಾನು ಇಲ್ಲಿಗೆ ಬಂದು ನಿಮ್ಮನ್ನು ಮರುಳುಗಾಡಿನ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡಿಸುತ್ತೇನೆ” ಎಂದು ಉತ್ತರಿಸಿದನು.

ಗಿದ್ಯೋನನು ಸುಖೋತ್ ಎಂಬ ನಗರವನ್ನು ಬಿಟ್ಟು ಪೆನೂವೇಲ್ ಎಂಬ ನಗರಕ್ಕೆ ಬಂದನು; ಆಹಾರಕ್ಕಾಗಿ ಸುಖೋತ್ ಜನರನ್ನು ಕೇಳಿದಂತೆ ಪೆನೂವೇಲಿನ ಜನರನ್ನೂ ಕೇಳಿದನು. ಆದರೆ ಪೆನೂವೇಲಿನ ಜನರು ಸಹ ಸುಖೋತಿನ ಜನರಂತೆಯೇ ಉತ್ತರಿಸಿದರು. ಪೆನೂವೇಲಿನ ಜನರಿಗೆ ಗಿದ್ಯೋನನು, “ನಾನು ಜಯ ಸಂಪಾದಿಸಿದ ಮೇಲೆ ಇಲ್ಲಿಗೆ ಬಂದು ಈ ಬುರುಜನ್ನು ಕೆಡವಿಬಿಡುತ್ತೇನೆ” ಅಂದನು.

10 ಜೆಬಹ ಮತ್ತು ಚಲ್ಮುನ್ನ ಮತ್ತು ಅವರ ಸೈನಿಕರು ಕರ್ಕೋರ ಎಂಬ ನಗರದಲ್ಲಿದ್ದರು. ಅವರ ಸೈನ್ಯದಲ್ಲಿ ಹದಿನೈದು ಸಾವಿರ ಸೈನಿಕರಿದ್ದರು. ಪೂರ್ವದೇಶದವರ ಸೈನ್ಯದಲ್ಲಿ ಉಳಿದವರು ಇಷ್ಟೇ ಜನ. ಆ ಸೈನ್ಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು ಈಗಾಗಲೇ ಯುದ್ಧದಲ್ಲಿ ಸತ್ತಿದ್ದರು. 11 ಗಿದ್ಯೋನ ಮತ್ತು ಅವನ ಸೈನಿಕರು ಕಾಡುಗೊಲ್ಲರ ಪ್ರದೇಶದ ಮಾರ್ಗವನ್ನು ಬಳಸಿದರು. ಆ ಮಾರ್ಗವು ನೋಬಹ, ಯೊಗ್ಬೆಹಾ ನಗರಗಳ ಪೂರ್ವಕ್ಕೆ ಇದೆ. ಗಿದ್ಯೋನನು ಕರ್ಕೋರ ನಗರಕ್ಕೆ ಬಂದು ಶತ್ರುಗಳ ಮೇಲೆ ಧಾಳಿ ಮಾಡಿದನು. ಶತ್ರುಸೈನ್ಯವು ಈ ಧಾಳಿಯನ್ನು ನಿರೀಕ್ಷಿಸಿರಲಿಲ್ಲ. 12 ಮಿದ್ಯಾನ್ಯರ ಅರಸರಾದ ಜೆಬಹನೂ ಚಲ್ಮುನ್ನನೂ ಓಡಿಹೋದರು. ಆದರೆ ಗಿದ್ಯೋನನು ಬೆನ್ನಟ್ಟಿ ಆ ಅರಸರನ್ನು ಹಿಡಿದುಕೊಂಡನು. ಗಿದ್ಯೋನ ಮತ್ತು ಅವನ ಸೈನಿಕರು ಶತ್ರುಸೈನ್ಯವನ್ನು ಸೋಲಿಸಿದರು.

13 ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹಿಂದಿರುಗಿದನು. ಗಿದ್ಯೋನ ಮತ್ತು ಅವನ ಸೈನಿಕರು ಹೆರೆಸ್ ಎಂಬ ಒಂದು ಬೆಟ್ಟದ ಕಣಿವೆಯ ಮಾರ್ಗವಾಗಿ ಹಿಂದಿರುಗಿದರು. 14 ಗಿದ್ಯೋನನು ಸುಖೋತ್ ನಗರದ ಒಬ್ಬ ತರುಣನನ್ನು ಹಿಡಿದುಕೊಂಡನು. ಗಿದ್ಯೋನನು ಆ ತರುಣನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು. ಆ ತರುಣನು ಗಿದ್ಯೋನನಿಗಾಗಿ ಕೆಲವು ಹೆಸರುಗಳನ್ನು ಬರೆದನು. ಆ ತರುಣನು ಸುಖೋತ್ ನಗರದ ನಾಯಕರ ಮತ್ತು ಹಿರಿಯರ ಹೆಸರುಗಳನ್ನು ಬರೆದನು. ಅವನು ಎಪ್ಪತ್ತೇಳು ಜನರ ಹೆಸರುಗಳನ್ನು ಕೊಟ್ಟನು.

15 ಗಿದ್ಯೋನನು ಸುಖೋತ್ ನಗರಕ್ಕೆ ಬಂದು ಆ ನಗರದ ಜನರಿಗೆ, “ನೋಡಿರಿ, ಜೆಬಹ ಮತ್ತು ಚಲ್ಮುನ್ನ ಇಲ್ಲಿದ್ದಾರೆ. ‘ಜೆಬಹ ಮತ್ತು ಚಲ್ಮುನ್ನರನ್ನು ನೀವು ಇನ್ನೂ ಸೆರೆಹಿಡಿದಿಲ್ಲ. ನಿಮ್ಮ ದಣಿದ ಸೈನಿಕರಿಗೆ ಆಹಾರವನ್ನು ನಾವೇಕೆ ಕೊಡಬೇಕು?’ ಎಂದು ನನ್ನನ್ನು ತಮಾಷೆ ಮಾಡಿದಿರಿ” ಎಂದನು. 16 ಗಿದ್ಯೋನನು ಸುಖೋತ್ ನಗರದ ಹಿರಿಯರಿಗೆ ಮರುಭೂಮಿಯ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡೆಸಿ ಶಿಕ್ಷಿಸಿದನು. 17 ಗಿದ್ಯೋನನು ಪೆನೂವೇಲಿನ ಬುರುಜನ್ನೂ ಸಹ ಕೆಡವಿ ಆ ಪಟ್ಟಣದ ಜನರನ್ನು ಕೊಂದುಹಾಕಿದನು.

18 ಆಮೇಲೆ ಗಿದ್ಯೋನನು ಜೆಬಹ ಮತ್ತು ಚಲ್ಮುನ್ನರನ್ನು, “ನೀವು ತಾಬೋರ್ ಪರ್ವತದಲ್ಲಿ ಕೆಲವು ಜನರನ್ನು ಕೊಂದಿರುವಿರಿ. ಅವರು ಹೇಗಿದ್ದರು?” ಎಂದು ಕೇಳಿದನು.

ಅವರು “ನಿನ್ನ ಹಾಗೆಯೇ ಇದ್ದರು. ಅವರಲ್ಲಿ ಪ್ರತಿಯೊಬ್ಬನೂ ಒಬ್ಬ ರಾಜಕುಮಾರನಂತೆ ಕಂಡನು” ಎಂದು ಉತ್ತರಕೊಟ್ಟರು.

19 ಗಿದ್ಯೋನನು, “ಆ ಜನರು ನನ್ನ ಸಹೋದರರಾಗಿದ್ದರು. ಅವರು ನನ್ನ ತಾಯಿಯ ಮಕ್ಕಳು! ಯೆಹೋವನ ಮೇಲೆ ಆಣೆಮಾಡಿ ಹೇಳುತ್ತೇನೆ, ನೀವು ಅವರನ್ನು ಕೊಲ್ಲದೆ ಇದಿದ್ದರೆ ನಾನು ಈಗ ನಿಮ್ಮನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿದನು.

20 ಗಿದ್ಯೋನನು ಎತೆರನ ಕಡೆಗೆ ತಿರುಗಿದನು. ಎತೆರನು ಗಿದ್ಯೋನನ ಹಿರಿಯ ಮಗ. ಗಿದ್ಯೋನನು ಅವನಿಗೆ, “ಈ ಅರಸರನ್ನು ಕೊಲ್ಲು” ಎಂದು ಹೇಳಿದನು. ಆದರೆ ಎತೆರನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟನು. ಅವನು ತನ್ನ ಕತ್ತಿಯನ್ನು ಹೊರ ತೆಗೆಯಲಿಲ್ಲ.

21 ಆಗ ಜೆಬಹ ಮತ್ತು ಚಲ್ಮುನ್ನರು ಗಿದ್ಯೋನನಿಗೆ, “ನೀನೇ ನಮ್ಮನ್ನು ಕೊಲ್ಲು. ನೀನು ಈ ಕೆಲಸವನ್ನು ಮಾಡುವುದಕ್ಕೆ ಯೋಗ್ಯವಯಸ್ಸಿನವನೂ ಗಟ್ಟಿಗನೂ ಆಗಿರುವೆ” ಎಂದರು. ಗಿದ್ಯೋನನು ಎದ್ದು ಜೆಬಹ ಮತ್ತು ಚಲ್ಮುನ್ನರನ್ನು ಕೊಂದುಹಾಕಿದನು. ಆಮೇಲೆ ಗಿದ್ಯೋನನು ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.

ಗಿದ್ಯೋನನು ಒಂದು ಏಫೋದನ್ನು ಮಾಡಿಸಿದನು

22 ಇಸ್ರೇಲಿಯರು ಗಿದ್ಯೋನನಿಗೆ, “ನೀನು ನಮ್ಮನ್ನು ಮಿದ್ಯಾನ್ಯರಿಂದ ರಕ್ಷಿಸಿರುವೆ. ಅದಕ್ಕಾಗಿ ಈಗ ನಮ್ಮ ಮೇಲೆ ಆಳ್ವಿಕೆ ಮಾಡು. ನೀನೂ ನಿನ್ನ ಮಗನೂ ನಿನ್ನ ಮೊಮ್ಮಗನೂ ನಮ್ಮನ್ನು ಆಳಬೇಕೆಂಬುದು ನಮ್ಮ ಆಶೆ” ಎಂದು ಹೇಳಿದರು.

23 ಗಿದ್ಯೋನನು ಇಸ್ರೇಲರಿಗೆ, “ಯೆಹೋವನು ನಿಮ್ಮನ್ನು ಆಳುತ್ತಾನೆ. ನಾನು ನಿಮ್ಮನ್ನು ಆಳುವುದಿಲ್ಲ; ನನ್ನ ಮಗನೂ ನಿಮ್ಮನ್ನು ಆಳುವುದಿಲ್ಲ” ಎಂದು ಹೇಳಿದನು.

24 ಇಸ್ರೇಲರು ಸೋಲಿಸಿದ ಜನರಲ್ಲಿ ಕೆಲವರು ಇಷ್ಮಾಯೇಲ್ಯರಾಗಿದ್ದರು. ಇಷ್ಮಾಯೇಲ್ಯರು ಕಿವಿಗಳಲ್ಲಿ ಚಿನ್ನದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು. ಆದ್ದರಿಂದ ಗಿದ್ಯೋನನು ಇಸ್ರೇಲರಿಗೆ, “ನೀವು ನನಗಾಗಿ ಈ ಒಂದು ಕೆಲಸವನ್ನು ಮಾಡಬೇಕೆಂದು ನನ್ನ ಕೋರಿಕೆ. ನೀವು ಯುದ್ಧದಲ್ಲಿ ಕೊಳ್ಳೆಹೊಡೆದ ವಸ್ತುಗಳಿಂದ ಪ್ರತಿಯೊಬ್ಬನು ಒಂದು ಬಂಗಾರದ ಮುರುವನ್ನು ನನಗೆ ಕೊಡಬೇಕು” ಎಂದು ಕೇಳಿದನು.

25 ಇಸ್ರೇಲರು, “ನೀನು ಕೇಳಿದ್ದನ್ನು ಸಂತೋಷದಿಂದ ಕೊಡುತ್ತೇವೆ” ಎಂದು ಹೇಳಿ ನೆಲದ ಮೇಲೆ ಒಂದು ಮೇಲಂಗಿಯನ್ನು ಹಾಸಿದರು. ಪ್ರತಿಯೊಬ್ಬನು ಒಂದೊಂದು ಮುರುವನ್ನು ಆ ಅಂಗಿಯ ಮೇಲೆ ಎಸೆದನು. 26 ಆ ಮುರುವುಗಳನ್ನು ಒಟ್ಟುಗೂಡಿಸಿ ತೂಕ ಹಾಕಿದಾಗ ಅವುಗಳ ತೂಕ ನಲವತ್ತಮೂರು ಪೌಂಡಿನಷ್ಟಿತ್ತು. ಗಿದ್ಯೋನನಿಗೆ ಇಸ್ರೇಲರು ಕೊಟ್ಟ ಬೇರೆ ಕಾಣಿಕೆಗಳು ಇದರಲ್ಲಿ ಸೇರಿಲ್ಲ. ಅವರು ಅರ್ಧಚಂದ್ರಾಕಾರದ ಮತ್ತು ಕಣ್ಣೀರಿನಾಕಾರದ ಆಭರಣಗಳನ್ನು ಸಹ ಕೊಟ್ಟಿದ್ದರು. ಅವರು ಅವನಿಗೆ ನೇರಳೆ ಬಣ್ಣದ ನಿಲುವಂಗಿಗಳನ್ನು ಕೊಟ್ಟಿದ್ದರು. ಈ ವಸ್ತ್ರಗಳನ್ನು ಮಿದ್ಯಾನ್ಯರ ಅರಸರು ಧರಿಸುತ್ತಿದ್ದರು. ಅವರು ಮಿದ್ಯಾನ್ಯರ ಒಂಟೆಗಳ ಸರಗಳನ್ನು ಸಹ ಕೊಟ್ಟರು.

27 ಗಿದ್ಯೋನನು ಈ ಚಿನ್ನವನ್ನು ಒಂದು ಏಫೋದ್ ಮಾಡುವುದಕ್ಕೆ ಬಳಸಿದನು. ಆ ಏಫೋದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಇಸ್ರೇಲರು ಈ ಏಫೋದನ್ನು ಆರಾಧಿಸಿದರು. ಹೀಗಾಗಿ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಗಿದ್ಯೋನನನ್ನು ಮತ್ತು ಅವನ ಕುಟುಂಬದವರನ್ನು ಪಾಪಮಾರ್ಗಕ್ಕೆ ಎಳೆಯಲು ಏಫೋದ್ ಒಂದು ಉರುಲಾಗಿ ಪರಿಣಮಿಸಿತು.

ಗಿದ್ಯೋನನ ಮರಣ

28 ಮಿದ್ಯಾನ್ಯರು ಇಸ್ರೇಲರ ಅಧೀನದಲ್ಲಿರಬೇಕಾಯಿತು. ಮಿದ್ಯಾನ್ಯರು ಯಾವ ಹೆಚ್ಚಿನ ತೊಂದರೆಗಳನ್ನು ಕೊಡಲಿಲ್ಲ. ಗಿದ್ಯೋನನು ಬದುಕಿರುವವರೆಗೆ ನಲವತ್ತು ವರ್ಷ ಆ ದೇಶದಲ್ಲಿ ಶಾಂತಿ ನೆಲೆಸಿತ್ತು.

29 ಯೋವಾಷನ ಮಗ ಯೆರುಬ್ಬಾಳನು (ಗಿದ್ಯೋನನು) ತನ್ನ ಮನೆಯಲ್ಲಿ ವಾಸವಾಗಿದ್ದನು. 30 ಗಿದ್ಯೋನನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಅವನಿಗೆ ಅನೇಕ ಹೆಂಡತಿಯರಿದ್ದರು. 31 ಗಿದ್ಯೋನನಿಗೆ ಒಬ್ಬ ಉಪಪತ್ನಿಯೂ ಇದ್ದಳು. ಅವಳು ಶೆಕೆಮಿನಲ್ಲಿರುತ್ತಿದ್ದಳು. ಅವಳಲ್ಲಿ ಅವನಿಗೆ ಒಬ್ಬ ಮಗನು ಹುಟ್ಟಿದನು. ಗಿದ್ಯೋನನು ಅವನಿಗೆ ಅಬೀಮೆಲೆಕ ಎಂದು ಹೆಸರಿಟ್ಟನು.

32 ಯೋವಾಷನ ಮಗನಾದ ಗಿದ್ಯೋನನು ದಿನ ತುಂಬಿದ ಮುದುಕನಾಗಿ ಮರಣಹೊಂದಿದನು. ಗಿದ್ಯೋನನ ಶವವನ್ನು ಅವನ ತಂದೆಯಾದ ಯೋವಾಷನಿಗೆ ಸೇರಿದ್ದ ಒಂದು ಸಮಾಧಿಯಲ್ಲಿ ಹೂಳಿಟ್ಟರು. ಆ ಸಮಾಧಿಯು ಅಬೀಯೆಜೆರ್ ಕುಟುಂಬದವರ ಒಫ್ರದಲ್ಲಿತ್ತು. 33 ಗಿದ್ಯೋನನು ಸತ್ತಮೇಲೆ ಇಸ್ರೇಲರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವರು ಬಾಳನನ್ನು ಪೂಜಿಸಿದರು. ಬಾಳ್‌ಬೇರಿತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು. 34 ಯೆಹೋವನು ಅವರನ್ನು ಅವರ ಸುತ್ತಮುತ್ತಲಿನ ಎಲ್ಲ ಶತ್ರುಗಳಿಂದ ರಕ್ಷಿಸಿದ್ದರೂ ಇಸ್ರೇಲರು ತಮ್ಮ ದೇವರಾದ ಯೆಹೋವನನ್ನು ಜ್ಞಾಪಿಸಿಕೊಳ್ಳಲಿಲ್ಲ. 35 ಯೆರುಬ್ಬಾಳನು ಅನೇಕ ಸತ್ಕಾರ್ಯಗಳನ್ನು ಮಾಡಿದರೂ ಸಹ ಇಸ್ರೇಲರು ಅವನ ಕುಟುಂಬದವರಿಗೆ ಕೃತಜ್ಞತೆಯುಳ್ಳವರಾಗಿರಲಿಲ್ಲ.

ಲೂಕ 5:1-16

ಯೇಸುವನ್ನು ಹಿಂಬಾಲಿಸಿದ ಪೇತ್ರ, ಯಾಕೋಬ, ಯೋಹಾನ

(ಮತ್ತಾಯ 4:18-22; ಮಾರ್ಕ 1:16-20)

ಯೇಸು ಗೆನೆಸರೇತ್ (ಗಲಿಲಾಯ) ಸರೋವರದ ಬಳಿ ನಿಂತುಕೊಂಡಿದ್ದಾಗ, ದೇವರ ವಾಕ್ಯವನ್ನು ಕೇಳಲು ಅನೇಕ ಜನರು ನೂಕಾಡುತ್ತಾ ಆತನ ಸುತ್ತಲೂ ಸೇರಿಬಂದರು. ಸರೋವರದ ದಡದಲ್ಲಿ ನಿಂತಿದ್ದ ಎರಡು ದೋಣಿಗಳನ್ನು ಯೇಸು ನೋಡಿದನು. ಬೆಸ್ತರು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಯೇಸು ಸೀಮೋನನ ದೋಣಿಯಲ್ಲಿ ಹತ್ತಿ ಕುಳಿತುಕೊಂಡು ದೋಣಿಯನ್ನು ದಡದಿಂದ ಸ್ವಲ್ಪದೂರಕ್ಕೆ ನೂಕಬೇಕೆಂದು ಸೀಮೋನನಿಗೆ ಹೇಳಿದನು.

ಉಪದೇಶ ಮಾಡಿದಮೇಲೆ ಯೇಸು ಸೀಮೋನನಿಗೆ, “ದೋಣಿಯನ್ನು ಆಳವಾದ ನೀರಿನ ಸ್ಥಳಕ್ಕೆ ನಡೆಸಿ, ಮೀನುಹಿಡಿಯಲು ನಿಮ್ಮ ಬಲೆಗಳನ್ನು ನೀರಿನಲ್ಲಿ ಹಾಕಿರಿ” ಎಂದು ಹೇಳಿದನು.

ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಒಂದು ಮೀನೂ ಸಿಕ್ಕಲಿಲ್ಲ. ಆದರೆ, ನೀನು ಹೇಳಿದ್ದರಿಂದ ಬೀಸುತ್ತೇವೆ” ಎಂದನು. ಬೆಸ್ತರು ತಮ್ಮ ಬಲೆಗಳನ್ನು ನೀರಿನೊಳಗೆ ಬೀಸಿದಾಗ, ಅವರ ಬಲೆಗಳು ಹರಿದುಹೋಗುವಷ್ಟು ಮೀನುಗಳು ರಾಶಿರಾಶಿಯಾಗಿ ಬಲೆಗಳಲ್ಲಿ ತುಂಬಿಕೊಂಡವು. ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸ್ನೇಹಿತರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಮೀನುಗಳನ್ನು ತುಂಬಿಸಲು ದೋಣಿಗಳೆರಡೂ ಮುಳುಗುವಂತಾದವು.

8-9 ಇದನ್ನು ಕಂಡ ಬೆಸ್ತರಿಗೆಲ್ಲಾ ವಿಸ್ಮಯವಾಯಿತು. ಸೀಮೋನ್ ಪೇತ್ರನಂತೂ ಯೇಸುವಿನ ಮುಂದೆ ಮೊಣಕಾಲೂರಿ “ಪ್ರಭುವೇ ನನ್ನನ್ನು ಬಿಟ್ಟುಹೋಗು, ನಾನು ಪಾಪಿಯಾಗಿದ್ದೇನೆ!” ಎಂದನು. 10 ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಆಶ್ಚರ್ಯಪಟ್ಟರು. (ಇವರಿಬ್ಬರೂ ಸೀಮೋನನ ಪಾಲುಗಾರರಾಗಿದ್ದರು.)

ಯೇಸು ಸೀಮೋನನಿಗೆ, “ಭಯಪಡಬೇಡ. ಇಂದಿನಿಂದ ನೀನು ಮೀನನ್ನು ಹಿಡಿಯದೆ, ಮನುಷ್ಯರನ್ನು ಒಟ್ಟುಗೂಡಿಸಲು ದುಡಿಯುವೆ!” ಎಂದು ಹೇಳಿದನು.

11 ಅವರು ತಮ್ಮ ದೋಣಿಗಳನ್ನು ದಡಕ್ಕೆ ಸಾಗಿಸಿದ ಮೇಲೆ ಎಲ್ಲವನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಯೇಸುವಿನಿಂದ ಗುಣಹೊಂದಿದ ಕುಷ್ಠರೋಗಿ

(ಮತ್ತಾಯ 8:1-4; ಮಾರ್ಕ 1:40-45)

12 ಒಮ್ಮೆ ಯೇಸು ಒಂದು ಊರಿನಲ್ಲಿದ್ದಾಗ ಕುಷ್ಠರೋಗಿಯೊಬ್ಬನು ಆತನನ್ನು ಕಂಡು, ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಮನಸ್ಸು ಮಾಡಿದರೆ ನನ್ನನ್ನು ಗುಣಪಡಿಸಬಲ್ಲೆ ಎಂದು ನನಗೆ ಗೊತ್ತಿದೆ” ಎಂದು ಬೇಡಿಕೊಂಡನು.

13 ಯೇಸು, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸುಂಟು. ನಿನಗೆ ಗುಣವಾಗಲಿ!” ಎಂದು ಹೇಳಿ ಅವನನ್ನು ಮುಟ್ಟಿದನು. ಕೂಡಲೆ ಅವನಿಗೆ ಗುಣವಾಯಿತು. 14 ಯೇಸು ಅವನಿಗೆ, “ನಿನಗೆ ಹೇಗೆ ಗುಣವಾಯಿತು ಎಂಬುದರ ಬಗ್ಗೆ ಯಾರಿಗೂ ಹೇಳದೆ ಯಾಜಕನ ಬಳಿಗೆ ಹೋಗಿ ನಿನ್ನ ಮೈಯನ್ನು ತೋರಿಸಿ ಮೋಶೆಯ ನಿಯಮಗಳಿಗನುಸಾರವಾಗಿ ಕಾಣಿಕೆಯನ್ನು ದೇವರಿಗೆ ಸಮರ್ಪಿಸು. ನಿನಗೆ ವಾಸಿಯಾಯಿತೆಂಬುದಕ್ಕೆ ಇದೇ ಜನರಿಗೆಲ್ಲಾ ಸಾಕ್ಷಿಯಾಗಿರುವುದು” ಎಂದು ಹೇಳಿದನು. ಆದರೆ ಯೇಸುವಿನ ಸುದ್ದಿಯು ಹೆಚ್ಚೆಚ್ಚಾಗಿ ಹಬ್ಬಿತು.[a]

15 ಅನೇಕ ಜನರು ಆತನ ಬೋಧನೆಗಳನ್ನು ಕೇಳುವುದಕ್ಕೂ ತಮ್ಮ ಕಾಯಿಲೆಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ ಬಂದರು. 16 ಯೇಸು ಆಗಾಗ್ಗೆ ನಿರ್ಜನ ಸ್ಥಳಗಳಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International