Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 6:1-26

ಯೇಸು ಸಬ್ಬತ್‌ದಿನಕ್ಕೆ ಒಡೆಯನು

(ಮತ್ತಾಯ 12:1-8; ಮಾರ್ಕ 2:23-28)

ಒಂದಾನೊಂದು ಸಬ್ಬತ್‌ದಿನದಲ್ಲಿ ಯೇಸು ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದನು. ಆತನ ಶಿಷ್ಯರು ತೆನೆಗಳನ್ನು ಕಿತ್ತು, ಕೈಗಳಲ್ಲಿ ಹೊಸಕಿ ಕಾಳನ್ನು ತಿಂದರು. ಕೆಲವು ಫರಿಸಾಯರು, “ನೀವು ಸಬ್ಬತ್‌ದಿನದಲ್ಲಿ ಹೀಗೆ ಮಾಡುವುದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ” ಎಂದು ಹೇಳಿದರು.

ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಿದ್ದೀರಿ. ದಾವೀದನು ದೇವರ ಮಂದಿರದೊಳಕ್ಕೆ ಹೋಗಿ, ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ತೆಗೆದುಕೊಂಡು ತಿಂದನು. ತನ್ನ ಜೊತೆ ಇದ್ದ ಜನರಿಗೂ ಸ್ವಲ್ಪ ಕೊಟ್ಟನು. ಇದು ಮೋಶೆಯ ಧರ್ಮಶಾಸ್ತ್ರಕ್ಕೆ ವಿರುದ್ಧ. ಯಾಜಕರು ಮಾತ್ರವೇ ಈ ರೊಟ್ಟಿಯನ್ನು ತಿನ್ನಬಹುದು ಎಂದು ಧರ್ಮಶಾಸ್ತ್ರ ಹೇಳುತ್ತದೆ” ಎಂದು ಉತ್ತರಿಸಿ, “ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಒಡೆಯನಾಗಿದ್ದಾನೆ” ಎಂದು ಹೇಳಿದನು.

ಸಬ್ಬತ್‌ದಿನದಲ್ಲಿ ಗುಣಹೊಂದಿದ ವ್ಯಕ್ತಿ

(ಮತ್ತಾಯ 12:9-14; ಮಾರ್ಕ 3:1-6)

ಮತ್ತೊಂದು ಸಬ್ಬತ್‌ದಿನದಲ್ಲಿ ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಿಸಿದನು. ಬಲಗೈ ಬತ್ತಿಹೋಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಯೇಸು ಅವನನ್ನು ವಾಸಿಮಾಡಿದರೆ, ಆತನ ಮೇಲೆ ತಪ್ಪು ಹೊರಿಸಬಹುದೆಂದು ಧರ್ಮೋಪದೇಶಕರು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಆದರೆ ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಯೇಸುವು ಕೈಬತ್ತಿಹೋಗಿದ್ದ ಮನುಷ್ಯನಿಗೆ, “ಬಂದು ಇಲ್ಲಿ ನಿಂತುಕೊ” ಎಂದು ಹೇಳಿದನು. ಅವನು ಎದ್ದುಬಂದು ನಿಂತನು. ಆಗ ಯೇಸು ಅವರಿಗೆ, “ಸಬ್ಬತ್‌ದಿನದಲ್ಲಿ ಯಾವ ಕಾರ್ಯವನ್ನು ಮಾಡುವುದು ಸರಿ? ಒಳ್ಳೆಯ ಕಾರ್ಯವನ್ನೋ ಅಥವಾ ಕೆಟ್ಟಕಾರ್ಯವನ್ನೋ? ಜೀವವನ್ನು ಉಳಿಸುವುದೋ? ಅಥವಾ ನಾಶಮಾಡುವುದೋ?” ಎಂದು ಕೇಳಿದನು.

10 ಯೇಸು ಸುತ್ತಲೂ ನಿಂತಿದ್ದ ಅವರೆಲ್ಲರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಯನ್ನು ನನಗೆ ತೋರಿಸು” ಎಂದನು. ಅವನು ತನ್ನ ಕೈಯನ್ನು ಚಾಚಿದನು. ಆ ಕೂಡಲೇ ಅವನ ಕೈ ವಾಸಿಯಾಯಿತು. 11 ಫರಿಸಾಯರು ಮತ್ತು ಧರ್ಮೋಪದೇಶಕರು ಬಹಳವಾಗಿ ಕೋಪಗೊಂಡರು. ಅವರು, “ನಾವು ಯೇಸುವಿಗೆ ಏನು ಮಾಡೋಣ?” ಎಂದು ತಮ್ಮತಮ್ಮೊಳಗೆ ಸಂಚುಮಾಡಿದರು.

ಯೇಸುವಿನ ಹನ್ನೆರಡು ಮಂದಿ ಅಪೊಸ್ತಲರು

(ಮತ್ತಾಯ 10:1-4; ಮಾರ್ಕ 3:13-19)

12 ಆ ಸಮಯದಲ್ಲಿ ಯೇಸು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು. ದೇವರಲ್ಲಿ ಪ್ರಾರ್ಥಿಸುತ್ತಾ ರಾತ್ರಿಯೆಲ್ಲಾ ಅಲ್ಲೇ ಇದ್ದನು. 13 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರನ್ನು ಕರೆದನು. ಅವರಲ್ಲಿ ಹನ್ನೆರಡು ಮಂದಿಯನ್ನು ಆತನು ಆರಿಸಿಕೊಂಡನು. ಯೇಸು ಈ ಹನ್ನೆರಡು ಜನರಿಗೆ, “ಅಪೊಸ್ತಲರು” ಎಂದು ಹೆಸರಿಟ್ಟನು. ಅವರು ಯಾರೆಂದರೆ:

14 ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರಿಟ್ಟನು.)

ಮತ್ತು ಪೇತ್ರನ ಸಹೋದರನಾದ ಅಂದ್ರೆಯ,

ಯಾಕೋಬ

ಮತ್ತು ಯೋಹಾನ,

ಫಿಲಿಪ್ಪ

ಮತ್ತು ಬಾರ್ತೊಲೊಮಾಯ,

15 ಮತ್ತಾಯ,

ತೋಮ,

ಯಾಕೋಬ (ಅಲ್ಫಾಯನ ಮಗ)

ಮತ್ತು ದೇಶಾಭಿಮಾನಿ[a] ಎನಿಸಿಕೊಂಡಿದ್ದ ಸಿಮೋನ,

16 ಯೂದ (ಯಾಕೋಬನ ಮಗ)

ಮತ್ತು ಇಸ್ಕರಿಯೋತ ಯೂದ (ಯೇಸುವಿಗೆ ದ್ರೋಹ ಮಾಡಿದವನು ಇವನೇ.)

ಯೇಸುವಿನ ಉಪದೇಶ ಮತ್ತು ಜನರಿಗೆ ಆರೋಗ್ಯದಾನ

(ಮತ್ತಾಯ 4:23-25; 5:1-12)

17 ಯೇಸು ಮತ್ತು ಅಪೊಸ್ತಲರು ಬೆಟ್ಟದಿಂದಿಳಿದು ಸಮತಟ್ಟಾದ ಸ್ಥಳಕ್ಕೆ ಬಂದರು. ಆತನ ಹಿಂಬಾಲಕರ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮಿನಿಂದಲೂ ಜನಸಮೂಹವು ಅಲ್ಲಿಗೆ ಬಂದಿತ್ತು. 18 ಅವರೆಲ್ಲರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ ಆತನಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಜನರನ್ನು ಯೇಸು ವಾಸಿಮಾಡಿದನು. 19 ಜನರೆಲ್ಲರೂ ಯೇಸುವನ್ನು ಮುಟ್ಟುವುದಕ್ಕೆ ಪ್ರಯತ್ನಿಸಿದರು, ಏಕೆಂದರೆ ಆತನಿಂದ ಶಕ್ತಿಯು ಹರಿದುಬಂದು ಎಲ್ಲರನ್ನೂ ಗುಣಪಡಿಸುತ್ತಿತ್ತು!

20 ಯೇಸು ತನ್ನ ಶಿಷ್ಯರನ್ನು ನೋಡಿ ಹೇಳಿದ್ದೇನೆಂದರೆ,

“ಬಡವರಾದ ನೀವು ಧನ್ಯರು;
    ದೇವರ ರಾಜ್ಯವು ನಿಮ್ಮದೇ.
21 ಹಸಿವೆಗೊಂಡಿರುವ ನೀವು ಧನ್ಯರು;
    ನಿಮಗೆ ತೃಪ್ತಿಯಾಗುವುದು.
ಅಳುತ್ತಿರುವ ನೀವು ಧನ್ಯರು;
    ಆನಂದದಿಂದ ನೀವು ನಗುವಿರಿ.

22 “ನೀವು ಮನುಷ್ಯಕುಮಾರನಿಗೆ ಸೇರಿದವರಾಗಿರುವುದರಿಂದ ಜನರು ನಿಮ್ಮನ್ನು ದ್ವೇಷಿಸಿದರೆ, ತುಚ್ಛೀಕರಿಸಿದರೆ, ಅವಮಾನ ಮಾಡಿದರೆ, ನಿಮ್ಮನ್ನು ಕೆಟ್ಟವರೆಂದು ಹೇಳಿದರೆ ನೀವು ಧನ್ಯರು. 23 ಆ ಸಮಯದಲ್ಲಿ ಆನಂದಪಡಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು. ಈ ಜನರು ನಿಮಗೆ ಮಾಡಿದಂತೆಯೇ ಅವರ ಪಿತೃಗಳು ಪ್ರವಾದಿಗಳಿಗೆ ಮಾಡಿದರು.

24 “ಐಶ್ವರ್ಯವಂತರೇ, ನಿಮ್ಮ ಗತಿಯನ್ನು ಏನು ಹೇಳಲಿ!
    ನೀವು ಸುಖಕರವಾದ ಜೀವನವನ್ನು ಅನುಭವಿಸಿದಿರಿ.
25 ಈಗ ಹೊಟ್ಟೆ ತುಂಬಿರುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ!
    ನೀವು ಹಸಿಯುವಿರಿ.
ನಗುವ ಜನರೇ, ನಿಮ್ಮ ಗತಿಯನ್ನು ಏನು ಹೇಳಲಿ!
    ನೀವು ದುಃಖಪಡುವಿರಿ ಮತ್ತು ಅಳುವಿರಿ.

26 “ಜನರಿಂದ ಯಾವಾಗಲೂ ಹೊಗಳಿಸಿಕೊಳ್ಳುವವರೇ, ನಿಮ್ಮ ಗತಿಯನ್ನು ಏನು ಹೇಳಲಿ! ಅವರ ಪಿತೃಗಳು ಸುಳ್ಳು ಪ್ರವಾದಿಗಳನ್ನು ಯಾವಾಗಲೂ ಹೊಗಳುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International