New Testament in a Year
ಪಿಲಾತನ ಸೈನಿಕರು ಯೇಸುವಿಗೆ ಮಾಡಿದ ಅಪಹಾಸ್ಯ
(ಮಾರ್ಕ 15:16-20; ಯೋಹಾನ 19:2-3)
27 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಸೈನಿಕರೆಲ್ಲರೂ ಯೇಸುವನ್ನು ಸುತ್ತುಗಟ್ಟಿದರು. 28 ಸೈನಿಕರು ಆತನ ಬಟ್ಟೆಗಳನ್ನು ತೆಗೆದುಹಾಕಿ ಆತನಿಗೆ ಒಂದು ಕೆಂಪು ನಿಲುವಂಗಿಯನ್ನು ತೊಡಿಸಿದರು. 29 ಮುಳ್ಳಿನ ಬಳ್ಳಿಯಿಂದ ಒಂದು ಕಿರೀಟವನ್ನು ಹೆಣೆದು ಆತನ ತಲೆಯ ಮೇಲಿಟ್ಟರು. ಆತನ ಬಲಗೈಗೆ ಒಂದು ಕೋಲನ್ನು ಕೊಟ್ಟರು. ಬಳಿಕ ಸೈನಿಕರು ಯೇಸುವಿನ ಮುಂದೆ ಬಾಗಿ, “ಯೆಹೂದ್ಯರ ರಾಜನೇ, ನಮಸ್ಕಾರ” ಎಂದು ಅಪಹಾಸ್ಯ ಮಾಡಿದರು. 30 ಆತನ ಮೇಲೆ ಉಗುಳಿದರು. ಆತನ ಕೈಯಿಂದ ಕೋಲನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದರು. 31 ಹೀಗೆ ಅಪಹಾಸ್ಯ ಮಾಡಿದ ಬಳಿಕ, ಆತನ ನಿಲುವಂಗಿಯನ್ನು ತೆಗೆದುಹಾಕಿ ಆತನ ಬಟ್ಟೆಗಳನ್ನು ಮತ್ತೆ ಆತನಿಗೆ ತೊಡಿಸಿ ಶಿಲುಬೆಗೇರಿಸಲು ಕರೆದೊಯ್ದರು.
ಶಿಲುಬೆಗೇರಿಸಲ್ಪಟ್ಟ ಯೇಸು
(ಮಾರ್ಕ 15:21-32; ಲೂಕ 23:26-43; ಯೋಹಾನ 19:17-27)
32 ಸೈನಿಕರು ಯೇಸುವಿನೊಂದಿಗೆ ನಗರದಿಂದ ಹೊರಕ್ಕೆ ಹೋಗುತ್ತಿರುವಾಗ ಸಿರೇನ ಪಟ್ಟಣದ “ಸಿಮೋನ” ಎಂಬ ವ್ಯಕ್ತಿಯನ್ನು ಕಂಡರು. ಆತನ ಶಿಲುಬೆ ಹೊರುವುದಕ್ಕಾಗಿ ಅವರು ಅವನನ್ನು ಬಲವಂತಪಡಿಸಿದರು. 33 ಅವರು ಗೊಲ್ಗೊಥಾ ಎಂಬ ಸ್ಥಳಕ್ಕೆ ಬಂದರು. (ಗೊಲ್ಗೊಥಾ ಎಂದರೆ “ಕಪಾಲ ಸ್ಥಳ” ಎಂದರ್ಥ.) 34 ಗೊಲ್ಗೊಥಾದಲ್ಲಿ ಸೈನಿಕರು ಆತನಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟರು. ಈ ದ್ರಾಕ್ಷಾರಸಕ್ಕೆ ನೋವು ನಿವಾರಕ ಔಷಧಿಯನ್ನು ಬೆರೆಸಿದ್ದರು. ಆತನು ದ್ರಾಕ್ಷಾರಸದ ರುಚಿ ನೋಡಿ ಅದನ್ನು ಕುಡಿಯಲಿಲ್ಲ.
35 ಸೈನಿಕರು ಆತನನ್ನು ಶಿಲುಬೆಗೆ ಮೊಳೆಗಳಿಂದ ಜಡಿದರು. ನಂತರ ಉಡುಪಿಗಾಗಿ ತಮ್ಮಲ್ಲಿಯೇ ಚೀಟಿಹಾಕಿ ತೆಗೆದುಕೊಂಡರು. 36 ಸೈನಿಕರು ಯೇಸುವನ್ನು ಕಾಯುತ್ತಾ ಅಲ್ಲೇ ಕುಳಿತಿದ್ದರು. 37 ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು. “ಈತನು ಯೇಸು, ಯೆಹೂದ್ಯರ ರಾಜ” ಎಂಬುದೇ ಆ ಅಪರಾಧ.
38 ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದ್ದರು. ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. 39 ದಾರಿಯಲ್ಲಿ ಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, 40 “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆಂದು ಹೇಳುತ್ತಿದ್ದೆ. ಆದರೆ ಈಗ ನಿನ್ನನ್ನು ನೀನೇ ರಕ್ಷಿಸಿಕೊ! ನೀನು ನಿಜವಾಗಿಯೂ ದೇವರ ಮಗನಾಗಿದ್ದರೆ, ಶಿಲುಬೆಯಿಂದ ಕೆಳಗಿಳಿದು ಬಾ!” ಎಂದು ಹಾಸ್ಯಮಾಡಿದರು.
41 ಮಹಾಯಾಜಕರೂ ಧರ್ಮೋಪದೇಶಕರೂ ಮತ್ತು ಹಿರಿಯ ಯೆಹೂದ್ಯ ನಾಯಕರೂ ಅಲ್ಲಿದ್ದರು. ಇವರು ಸಹ ಇತರ ಜನರಂತೆ ಯೇಸುವನ್ನು ಗೇಲಿ ಮಾಡಿದರು. 42 “ಇವನು ಬೇರೆಯವರನ್ನು ರಕ್ಷಿಸಿದನು. ಆದರೆ ತನ್ನನ್ನು ರಕ್ಷಿಸಿಕೊಳ್ಳಲಾರ! ಇಸ್ರೇಲರ ರಾಜ ಎಂದು ಜನ ಹೇಳುತ್ತಾರೆ. ಇವನು ರಾಜನಾಗಿದ್ದರೆ ಶಿಲುಬೆಯಿಂದ ಕೆಳಗಿಳಿದು ಬರಲಿ. ಆಗ ನಾವು ಇವನನ್ನು ನಂಬುತ್ತೇವೆ. 43 ಇವನು ದೇವರನ್ನು ನಂಬಿದ್ದನು. ಈಗ ದೇವರಿಗೆ ನಿಜವಾಗಿಯೂ ಇವನು ಬೇಕಿದ್ದರೆ, ದೇವರೇ ಇವನನ್ನು ಕಾಪಾಡಲಿ. ‘ನಾನು ದೇವರ ಮಗನು’ ಎಂದು ಇವನೇ ಹೇಳಿಕೊಂಡನಲ್ಲಾ” ಎಂದು ಅವರು ಹೇಳಿದರು. 44 ಅದೇ ರೀತಿಯಲ್ಲಿ ಯೇಸುವಿನ ಎಡಬಲಗಳಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ನಿಂದಿಸಿದರು.
ಯೇಸುವಿನ ಮರಣ
(ಮಾರ್ಕ 15:33-41; ಲೂಕ 23:44-49; ಯೋಹಾನ 19:28-30)
45 ಅಂದು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯವರೆಗೆ ದೇಶದಲ್ಲೆಲ್ಲಾ ಕತ್ತಲೆ ಕವಿಯಿತು. 46 ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸು, “ಏಲೀ, ಏಲೀ, ಲಮಾ ಸಬಕ್ತಾನಿ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದನು. ಹೀಗೆಂದರೆ, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟುಬಿಟ್ಟೆ?”(A) ಎಂದರ್ಥ.
47 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದರು.
48 ಆ ಜನರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು, ಅದರಲ್ಲಿ ಹುಳಿರಸವನ್ನು ತುಂಬಿಸಿ, ಅದನ್ನು ಒಂದು ಕೋಲಿಗೆ ಕಟ್ಟಿ ಆ ಕೋಲಿನಿಂದ ಸ್ಪಂಜನ್ನು ಯೇಸುವಿಗೆ ಕುಡಿಯಲು ಕೊಟ್ಟನು. 49 ಆದರೆ ಇತರ ಜನರು, “ಅವನ ಬಗ್ಗೆ ಚಿಂತಿಸಬೇಡ, ಅವನನ್ನು ರಕ್ಷಿಸಲು ಎಲೀಯನು ಬರಬಹುದೇನೋ ನೋಡೋಣ” ಎಂದು ಹೇಳಿದರು.
50 ಬಳಿಕ ಯೇಸು ಮತ್ತೆ ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಪ್ರಾಣಬಿಟ್ಟನು.
Kannada Holy Bible: Easy-to-Read Version. All rights reserved. © 1997 Bible League International