Add parallel Print Page Options

ಯೇಸುವಿನ ಮರಣ

(ಮತ್ತಾಯ 27:45-56; ಲೂಕ 23:44-49; ಯೋಹಾನ 19:28-30)

33 ಮಧ್ಯಾಹ್ನವಾದಾಗ, ಇಡೀ ದೇಶವೇ ಕತ್ತಲಾಯಿತು. ಈ ಕತ್ತಲೆಯು ಸಾಯಂಕಾಲ ಮೂರು ಗಂಟೆಯವರೆಗೆ ಇತ್ತು. 34 ಮೂರು ಗಂಟೆಗೆ, ಯೇಸು ದೊಡ್ಡ ಧ್ವನಿಯಿಂದ, “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದು ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟೆ?”(A) ಎಂಬುದೇ ಇದರರ್ಥ.

35 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ನೋಡಿ! ಆತನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದರು.

36 ಅಲ್ಲಿದ್ದ ಒಬ್ಬನು ಓಡಿಹೋಗಿ, ಸ್ಪಂಜನ್ನು ತೆಗೆದುಕೊಂಡು ಅದನ್ನು ಹುಳಿರಸದಿಂದ ತುಂಬಿಸಿ, ಒಂದು ಕೋಲಿಗೆ ಕಟ್ಟಿ ಯೇಸುವಿಗೆ ಕುಡಿಯಲು ಕೊಡುತ್ತಾ, “ಎಲೀಯನು ಇವನನ್ನು ಶಿಲುಬೆಯಿಂದ ಕೆಳಗಿಳಿಸಲು ಬರಬಹುದೇನೋ ನಾವು ಕಾಯ್ದು ನೋಡಬೇಕು” ಎಂದನು.

37 ನಂತರ ಯೇಸು ಮಹಾಧ್ವನಿಯಿಂದ ಕೂಗಿ, ಪ್ರಾಣಬಿಟ್ಟನು.

38 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗಗಳಾಗಿ ಹರಿದುಹೋಯಿತು. 39 ಶಿಲುಬೆಯ ಮುಂದೆ ನಿಂತಿದ್ದ ಸೈನ್ಯದ ಅಧಿಕಾರಿಯು ಯೇಸು ಪ್ರಾಣಬಿಟ್ಟಾಗ ನಡೆದದ್ದನ್ನು ನೋಡಿ, “ಈ ಮನುಷ್ಯನು ನಿಜವಾಗಿಯೂ ದೇವರ ಮಗನು” ಎಂದನು.

40 ಕೆಲವು ಸ್ತ್ರೀಯರು ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ನೋಡುತ್ತಾ ಇದ್ದರು. ಈ ಸ್ತ್ರೀಯರಲ್ಲಿ ಕೆಲವರೆಂದರೆ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬ ಯೋಸೆಯರ ತಾಯಿಯಾದ ಮರಿಯಳು (ಯಾಕೋಬನು ಅವಳ ಕಿರಿಯ ಮಗ.) 41 ಈ ಸ್ತ್ರೀಯರು ಗಲಿಲಾಯದಲ್ಲಿ ಯೇಸುವನ್ನು ಹಿಂಬಾಲಿಸಿ ಆತನ ಸೇವೆ ಮಾಡಿದವರು. ಯೇಸುವಿನೊಡನೆ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಅಲ್ಲಿದ್ದರು.

Read full chapter