Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
1 ಕೊರಿಂಥದವರಿಗೆ 11:17-34

ಪ್ರಭುವಿನ ರಾತ್ರಿಭೋಜನ

17 ಈಗ ನಾನು ನಿಮಗೆ ಹೇಳಲಿರುವ ವಿಷಯದಲ್ಲಿ ನಿಮ್ಮನ್ನು ಹೊಗಳುವುದಿಲ್ಲ. ನಿಮ್ಮ ಸಭಾಕೂಟಗಳು ನಿಮಗೆ ಒಳ್ಳೆಯದನ್ನು ಮಾಡುವುದಕ್ಕಿಂತಲೂ ಹೆಚ್ಚು ಕೇಡುಗಳನ್ನೇ ಮಾಡುತ್ತವೆ. 18 ಮೊದಲನೆಯದಾಗಿ, ನೀವು ಸಭೆಯಾಗಿ ಸೇರಿಬರುವಾಗ ನಿಮ್ಮಲ್ಲಿ ಪಂಗಡಗಳಿರುವುದಾಗಿ ಕೇಳಿದ್ದೇನೆ. ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ. 19 (ನಿಮ್ಮಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ನಿಮ್ಮಲ್ಲಿ ಯಾರು ನಿಜವಾಗಿಯೂ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.)

20 ನೀವೆಲ್ಲರೂ ಒಟ್ಟಾಗಿ ಸೇರಿದಾಗ ನೀವು ಮಾಡುವಂಥದ್ದು ನಿಜವಾಗಿಯೂ ಪ್ರಭುವಿನ ರಾತ್ರಿಭೋಜನವಲ್ಲ. 21 ಏಕೆಂದರೆ, ನೀವು ಊಟ ಮಾಡುವಾಗ, ಇತರರಿಗೋಸ್ಕರ ಕಾಯದೆ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವೇ ಊಟ ಮಾಡುತ್ತಾರೆ. ಕೆಲವು ಜನರಲ್ಲಿ ಊಟಮಾಡಲು ಸಾಕಷ್ಟು ಆಹಾರ ಇರುವುದಿಲ್ಲ. ಇನ್ನು ಕೆಲವರಲ್ಲಿ ತಿಂದು, ಕುಡಿದು ಮತ್ತರಾಗುವಷ್ಟು ಆಹಾರವಿರುತ್ತದೆ. 22 ನೀವು ನಿಮ್ಮ ಸ್ವಂತ ಮನೆಗಳಲ್ಲಿ ತಿನ್ನಬಹುದು, ಕುಡಿಯಬಹುದು. ದೇವರ ಸಭೆಯು ಮುಖ್ಯವಾದದ್ದಲ್ಲವೆಂದು ನೀವು ಯೋಚಿಸುವಂತೆ ತೋರುತ್ತದೆ. ನೀವು ಬಡವರನ್ನು ನಾಚಿಕೆಗೆ ಗುರಿಮಾಡುತ್ತೀರಿ. ನಾನು ನಿಮಗೆ ಏನು ಹೇಳಲಿ? ನೀವು ಮಾಡುತ್ತಿರುವ ಈ ಕಾರ್ಯಕ್ಕೋಸ್ಕರ ನಾನು ನಿಮ್ಮನ್ನು ಹೊಗಳಬೇಕೇ? ನಾನು ನಿಮ್ಮನ್ನು ಹೊಗಳುವುದಿಲ್ಲ.

23 ನಾನು ಪ್ರಭುವಿನಿಂದ ಹೊಂದಿಕೊಂಡದ್ದನ್ನೇ ನಿಮಗೆ ಉಪದೇಶಿಸಿದೆನು. ಅದೇನೆಂದರೆ: ಯೇಸುವನ್ನು ಕೊಲ್ಲುವುದಕ್ಕಾಗಿ ಒಪ್ಪಿಸಿಕೊಟ್ಟ ರಾತ್ರಿಯಲ್ಲಿ, ಆತನು ರೊಟ್ಟಿಯನ್ನು ತೆಗೆದುಕೊಂಡು, 24 ಅದಕ್ಕಾಗಿ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ಇದು ನನ್ನ ದೇಹ; ಇದನ್ನು ನಿಮಗೋಸ್ಕರ ಕೊಡಲಾಗಿದೆ. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಎಂದು ಹೇಳಿದನು. 25 ಅದೇ ರೀತಿಯಲ್ಲಿ ಅವರು ಊಟಮಾಡಿದ ಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಈ ದ್ರಾಕ್ಷಾರಸ ಸೂಚಿಸುತ್ತದೆ. ಈ ಹೊಸ ಒಡಂಬಡಿಕೆ ನನ್ನ ರಕ್ತದಿಂದ ಆರಂಭವಾಗುತ್ತದೆ. ನೀವು ಇದನ್ನು ಕುಡಿಯುವಾಗಲೆಲ್ಲಾ ನನ್ನನ್ನು ನೆನಸಿಕೊಳ್ಳವವರಾಗಿದ್ದೀರಿ” ಎಂದು ಹೇಳಿದನು. 26 ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಕುಡಿಯುವಾಗಲೆಲ್ಲಾ ಪ್ರಭುವಿನ ಮರಣವನ್ನು ಆತನು ಬರುವ ತನಕ ಪ್ರಚುರಪಡಿಸುತ್ತೀರಿ.

27 ಹೀಗಿರಲಾಗಿ ಒಬ್ಬನು ಪ್ರಭುವಿನ ರೊಟ್ಟಿಯನ್ನು ತಿನ್ನುವಾಗ, ಪಾತ್ರೆಯಲ್ಲಿ ಕುಡಿಯುವಾಗ ಇವುಗಳ ನಿಜವಾದ ಅರ್ಥವನ್ನು ಕಾರ್ಯಗಳ ಮೂಲಕ ತೋರ್ಪಡಿಸಬೇಕು, ಇಲ್ಲವಾದರೆ ಅವನು ಪ್ರಭುವಿನ ದೇಹಕ್ಕೂ ರಕ್ತಕ್ಕೂ ದೋಷಿಯಾಗುತ್ತಾನೆ. 28 ಪ್ರತಿಯೊಬ್ಬ ವ್ಯಕ್ತಿಯು ರೊಟ್ಟಿಯನ್ನು ತಿನ್ನುವುದಕ್ಕಿಂತಲೂ ಪಾತ್ರೆಯಲ್ಲಿ ಕುಡಿಯುವುದಕ್ಕಿಂತಲೂ ಮುಂಚಿತವಾಗಿ ತನ್ನ ಹೃದಯವನ್ನು ಪರಿಶೀಲಿಸಿಕೊಳ್ಳಬೇಕು. 29 ಯಾವನಾದರೂ ಪ್ರಭುವಿನ ದೇಹವೆಂದು ಗುರುತಿಸದೆ ರೊಟ್ಟಿಯನ್ನು ತಿಂದರೆ ಮತ್ತು ದ್ರಾಕ್ಷಾರಸವನ್ನು ಕುಡಿದರೆ ಅವನು ತಿಂದದ್ದಕ್ಕೂ ಕುಡಿದದ್ದಕ್ಕೂ ದೋಷಿಯೆಂಬ ತೀರ್ಪಿಗೆ ಒಳಗಾಗುತ್ತಾನೆ. 30 ಆದಕಾರಣವೇ, ನಿಮ್ಮ ಸಭೆಯಲ್ಲಿರುವ ಅನೇಕರು ರೋಗಿಗಳೂ ಬಲಹೀನರೂ ಆಗಿದ್ದಾರೆ ಮತ್ತು ಅನೇಕರು ಸತ್ತು ಹೋದರು. 31 ಆದರೆ ನಮ್ಮನ್ನು ನಾವೇ ಪರಿಶೋಧಿಸಿಕೊಂಡರೆ ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ. 32 ಆದರೆ ಪ್ರಭುವು ನಮಗೆ ತೀರ್ಪು ಮಾಡುವಾಗ, ನಮಗೆ ಸರಿಯಾದ ಮಾರ್ಗವನ್ನು ತೋರಿಸುವುದಕ್ಕಾಗಿಯೂ ಈ ಲೋಕದ ಇತರ ಜನರೊಂದಿಗೆ ನಮಗೆ ಅಪರಾಧಿಗಳೆಂಬ ತೀರ್ಪಾಗದಂತೆಯೂ ಆತನು ನಮ್ಮನ್ನು ಶಿಕ್ಷಿಸುತ್ತಾನೆ.

33 ಆದ್ದರಿಂದ ನನ್ನ ಪ್ರಿಯ ಸಹೋದರ ಸಹೋದರಿಯರೇ, ನೀವು ಊಟ ಮಾಡುವುದಕ್ಕಾಗಿ ಒಟ್ಟಾಗಿ ಸೇರುವಾಗ ಒಬ್ಬರಿಗೊಬ್ಬರು ಕಾದುಕೊಂಡಿರಿ. 34 ಒಬ್ಬ ವ್ಯಕ್ತಿಯು ಹಸಿವೆಗೊಂಡಿದ್ದರೆ, ಅವನು ಮನೆಯಲ್ಲಿ ಊಟಮಾಡಲಿ. ನೀವು ಹೀಗೆ ಮಾಡಿದರೆ, ನಿಮ್ಮ ಸಭಾಕೂಟವು ನಿಮ್ಮ ಮೇಲೆ ನ್ಯಾಯತೀರ್ಪನ್ನು ಬರಮಾಡುವುದಿಲ್ಲ. ಉಳಿದ ವಿಷಯಗಳ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ನಿಮ್ಮಲ್ಲಿಗೆ ಬಂದಾಗ ತಿಳಿಸಿಕೊಡುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International