M’Cheyne Bible Reading Plan
ಯೆಹೋಶುವನು ವಂದನೆಗಳನ್ನು ಹೇಳಿದನು
24 ಯೆಹೋಶುವನು ಶೆಕೆಮಿನಲ್ಲಿ ಇಸ್ರೇಲಿನ ಎಲ್ಲ ಕುಲದವರನ್ನು, ಹಿರಿಯ ನಾಯಕರನ್ನು, ಕುಲದ ಪ್ರಧಾನರನ್ನು, ನ್ಯಾಯಾಧೀಶರನ್ನು, ಮುಖಂಡರನ್ನು ಮತ್ತು ಇಸ್ರೇಲಿನ ಅಧಿಕಾರಿಗಳನ್ನು ಒಟ್ಟಾಗಿ ಸೇರಿಸಿದನು. ಈ ಜನರು ದೇವರ ಸನ್ನಿಧಿಯಲ್ಲಿ ನಿಂತರು.
2 ಆಗ ಯೆಹೋಶುವನು ಅವರೆಲ್ಲರಿಗೆ, “ಇಸ್ರೇಲಿನ ದೇವರಾದ ಯೆಹೋವನು ನಿಮಗೆ ಹೇಳುವುದನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ: ‘ಬಹಳ ಹಿಂದಿನ ಕಾಲದಲ್ಲಿ ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆಯ ದಡದಲ್ಲಿದ್ದರು, ನಾನು ಅಬ್ರಹಾಮ್ ಮತ್ತು ನಾಹೋರ್ ಎಂಬವರ ತಂದೆಯಾದ “ತೆರಹ” ಮೊದಲಾದ ಜನರ ಬಗ್ಗೆ ಮಾತನಾಡುತ್ತಿದ್ದೇನೆ. ಆ ಸಮಯದಲ್ಲಿ ಅವರು ಬೇರೆ ದೇವರುಗಳನ್ನು ಪೂಜಿಸುತ್ತಿದ್ದರು. 3 ಆದರೆ ಯೆಹೋವನಾದ ನಾನು ನಿಮ್ಮ ಪೂರ್ವಿಕನಾದ ಅಬ್ರಹಾಮನನ್ನು ಆ ಪ್ರದೇಶದಿಂದ ನದಿಯ ಮತ್ತೊಂದು ದಡಕ್ಕೆ ಕರೆದುಕೊಂಡು ಬಂದೆ. ನಾನು ಅವನನ್ನು ಕಾನಾನ್ ಪ್ರದೇಶದಲ್ಲೆಲ್ಲ ಸಂಚಾರ ಮಾಡಿಸಿ ಅವನಿಗೆ ಅನೇಕ ಮಕ್ಕಳನ್ನು ಕೊಟ್ಟೆನು, ನಾನು ಅಬ್ರಹಾಮನಿಗೆ ಇಸಾಕನೆಂಬ ಮಗನನ್ನು ಕೊಟ್ಟೆ. 4 ಇಸಾಕನಿಗೆ ಯಾಕೋಬ ಮತ್ತು ಏಸಾವ ಎಂಬ ಗಂಡುಮಕ್ಕಳನ್ನು ಕೊಟ್ಟೆನು. ಏಸಾವನಿಗೆ ಸೇಯೀರ್ ಪರ್ವತಗಳ ಸುತ್ತಮುತ್ತಲಿನ ಪ್ರದೇಶವನ್ನು ಕೊಟ್ಟೆನು. ಯಾಕೋಬ ಮತ್ತು ಅವನ ಮಕ್ಕಳು ಅಲ್ಲಿ ಇರಲಿಲ್ಲ. ಅವರು ಈಜಿಪ್ಟ್ ದೇಶದಲ್ಲಿ ವಾಸಮಾಡಲು ಹೋಗಿದ್ದರು.
5 “‘ತರುವಾಯ ನಾನು ಮೋಶೆ ಆರೋನರನ್ನು ಈಜಿಪ್ಟಿಗೆ ಕಳುಹಿಸಿದೆ. ಅವರು ನನ್ನ ಜನರನ್ನು ಈಜಿಪ್ಟಿನಿಂದ ಹೊರತರಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಈಜಿಪ್ಟಿನಲ್ಲಿ ಅನೇಕ ಅದ್ಭುತವಾದ ಕಾರ್ಯಗಳನ್ನು ನಡೆಸಿ ನಾನು ನಿಮ್ಮ ಜನರನ್ನು ಈಜಿಪ್ಟಿನಿಂದ ಹೊರಗೆ ತಂದೆ. 6 ಹೀಗೆ ನಿಮ್ಮ ಪೂರ್ವಿಕರು ಈಜಿಪ್ಟಿನಿಂದ ಹೊರಡು ಕೆಂಪು ಸಮುದ್ರಕ್ಕೆ ಬಂದರು. ಈಜಿಪ್ಟಿನ ಜನರು ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಅವರನ್ನು ಬೆನ್ನಟ್ಟಿಕೊಂಡು ಬಂದರು. 7 ಆಗ ನಿಮ್ಮ ಜನರು ಯೆಹೋವನಾದ ನನ್ನ ಸಹಾಯ ಕೋರಿದರು. ನಾನು ಈಜಿಪ್ಟಿನ ಜನರಿಗೂ ಅವರಿಗೂ ಮಧ್ಯದಲ್ಲಿ ಕತ್ತಲೆಯಾಗುವಂತೆ ಮಾಡಿದೆ; ಸಮುದ್ರವು ಅವರನ್ನು ಮುಚ್ಚಿಬಿಡುವಂತೆ ಮಾಡಿದೆ. ಈಜಿಪ್ಟಿನ ಸೈನ್ಯಕ್ಕೆ ನಾನು ಮಾಡಿದ್ದನ್ನು ನೀವೇ ನೋಡಿದ್ದೀರಿ.
“‘ತರುವಾಯ ಬಹಳ ಕಾಲದವರೆಗೆ ನೀವು ಅರಣ್ಯದಲ್ಲಿ ಪ್ರವಾಸ ಮಾಡಿಕೊಂಡಿದ್ದಿರಿ. 8 ಆಗ ನಾನು ನಿಮ್ಮನ್ನು ಜೋರ್ಡನ್ ನದಿಯ ಪೂರ್ವದಲ್ಲಿರುವ ಅಮೋರಿಯರ ಪ್ರದೇಶಕ್ಕೆ ಕರೆತಂದೆನು. ಆ ಜನರು ನಿಮ್ಮೊಂದಿಗೆ ಯುದ್ಧಮಾಡಿದರು. ಆದರೆ ನೀವು ಅವರನ್ನು ಸೋಲಿಸುವಂತೆ ನಾನು ಮಾಡಿದೆ. ಆ ಜನರನ್ನು ನಾಶಮಾಡುವ ಶಕ್ತಿಯನ್ನು ನಾನು ನಿಮಗೆ ಕೊಟ್ಟೆನು. ಆಗ ನೀವು ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿರಿ.
9 “‘ಅನಂತರ ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು ಇಸ್ರೇಲರೊಂದಿಗೆ ಯುದ್ಧಮಾಡಲು ಸಿದ್ಧತೆಮಾಡಿದನು. ಅವನು ಬೆಯೋರನ ಮಗನಾದ ಬಿಳಾಮನನ್ನು ಕರೆಯಿಸಿ ನಿಮ್ಮನ್ನು ಶಪಿಸಲು ಹೇಳಿದನು. 10 ಆದರೆ ಯೆಹೋವನಾದ ನಾನು ಬಿಳಾಮನಿಗೆ ಶಪಿಸಲು ಅನುಮತಿ ಕೊಡಲಿಲ್ಲ. ಅದಕ್ಕಾಗಿ ಬಿಳಾಮನು ನಿಮಗೆ ಶುಭವನ್ನೇ ಕೋರಿದನು. ಅವನು ಅನೇಕ ಸಲ ನಿಮ್ಮನ್ನು ಆಶೀರ್ವದಿಸಿದನು. ನಾನು ನಿಮ್ಮನ್ನು ಅವನ ಕೈಗಳಿಂದ ಬಿಡುಗಡೆ ಮಾಡಿದೆ.
11 “‘ತರುವಾಯ ನೀವು ಜೋರ್ಡನ್ ನದಿಯನ್ನು ದಾಟಿ ಜೆರಿಕೊ ನಗರಕ್ಕೆ ಹೋದಿರಿ. ಜೆರಿಕೊ ನಗರದ ಜನರು ನಿಮ್ಮ ಮೇಲೆ ಯುದ್ಧ ಮಾಡಿದರು. ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷಿಯರು, ಹಿವ್ವಿಯರು, ಯೆಬೂಸಿಯರು ಕೂಡ ನಿಮ್ಮ ಮೇಲೆ ಯುದ್ಧಕ್ಕೆ ಬಂದರು. ಆದರೆ ನೀವು ಅವರೆಲ್ಲರನ್ನು ಸೋಲಿಸುವಂತೆ ನಾನು ಮಾಡಿದೆನು. 12 ನಿಮ್ಮ ಸೈನಿಕರು ಯುದ್ಧಮಾಡಲು ಹೋಗುತ್ತಿರುವಾಗ ನಾನು ಅವರಿಗಿಂತ ಮುಂಚೆಯೇ ಕಡಜದ ಹುಳಗಳ ಗುಂಪನ್ನು ಕಳಿಸಿದ್ದೆ. ಈ ಹುಳಗಳು ಅಮೋರಿಯರ ಅರಸರಿಬ್ಬರನ್ನೂ ಓಡಿಸಿಬಿಟ್ಟವು. ಹೀಗೆ ನೀವು ಖಡ್ಗಗಳನ್ನು ಮತ್ತು ಬಿಲ್ಲುಬಾಣಗಳನ್ನು ಉಪಯೋಗಿಸದೆಯೇ ಆ ಪ್ರದೇಶವನ್ನು ವಶಪಡಿಸಿಕೊಂಡಿರಿ.
13 “‘ಯೆಹೋವನಾದ ನಾನು ನಿಮಗೆ ಆ ದೇಶವನ್ನು ಕೊಟ್ಟಿದ್ದೇನೆ. ನೀವು ಆ ದೇಶಕ್ಕಾಗಿ ಏನನ್ನೂ ಮಾಡಿಲ್ಲ. ನಿಮಗೆ ಅದನ್ನು ಕೊಟ್ಟವನು ನಾನೇ. ನೀವು ಆ ನಗರಗಳನ್ನು ಕಟ್ಟಲೇ ಇಲ್ಲ. ಅವುಗಳನ್ನು ನಿಮಗೆ ಕೊಟ್ಟವನು ನಾನೇ. ಈಗ ನೀವು ಆ ಪ್ರದೇಶದಲ್ಲಿ ಮತ್ತು ಆ ನಗರಗಳಲ್ಲಿ ವಾಸಮಾಡುತ್ತಿದ್ದೀರಿ. ನೀವು ದ್ರಾಕ್ಷಿ ಮತ್ತು ಆಲಿವ್ ಮರದ ತೋಟಗಳನ್ನು ಹೊಂದಿರುವಿರಿ. ಆದರೆ ಆ ತೋಟಗಳನ್ನು ನೀವು ಬೆಳೆಸಲಿಲ್ಲ.’”
14 ತರುವಾಯ ಯೆಹೋಶುವನು ಜನರಿಗೆ, “ಈಗ ನೀವು ಯೆಹೋವನ ಮಾತುಗಳನ್ನು ಕೇಳಿದ್ದೀರಿ. ನೀವು ಆತನಲ್ಲಿ ಭಯಭಕ್ತಿಯಿಂದಿರಬೇಕು. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆಯಲ್ಲಿಯೂ ಈಜಿಪ್ಟಿನಲ್ಲಿಯೂ ಪೂಜಿಸುತ್ತಿದ್ದ ಸುಳ್ಳುದೇವರುಗಳನ್ನು ಎಸೆದುಬಿಡಿ. ಈಗ ನೀವು ಯೆಹೋವನ ಸೇವೆಯನ್ನು ಮಾತ್ರ ಮಾಡಬೇಕು.
15 “ನೀವು ಯೆಹೋವನ ಸೇವೆಮಾಡಲು ಇಷ್ಟಪಡದಿದ್ದರೆ ಯಾರ ಸೇವೆಯನ್ನು ಮಾಡಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. ನಿಮ್ಮ ಪೂರ್ವಿಕರು ಯೂಫ್ರೇಟೀಸ್ ನದಿಯ ಆಚೆ ಇದ್ದಾಗ ಪೂಜಿಸುತ್ತಿದ್ದ ದೇವರುಗಳ ಸೇವೆಮಾಡುವಿರೋ ಅಥವಾ ಈ ಪ್ರದೇಶದಲ್ಲಿದ್ದ ಅಮೋರಿಯರ ದೇವತೆಗಳ ಸೇವೆಮಾಡುವಿರೋ ಎಂಬುದನ್ನು ನೀವು ಇಂದು ನಿರ್ಧರಿಸಬೇಕು. ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ ನಾನು ಮತ್ತು ನನ್ನ ಕುಟುಂಬದವರು ಯೆಹೋವನನ್ನೇ ಸೇವಿಸುತ್ತೇವೆ” ಅಂದನು.
16 ಅದಕ್ಕೆ ಜನರು, “ನಾವು ಯೆಹೋವನನ್ನು ಅನುಸರಿಸುವುದನ್ನು ಎಂದಿಗೂ ನಿಲ್ಲಿಸುವದಿಲ್ಲ. ನಾವು ಬೇರೆ ದೇವರುಗಳ ಸೇವೆಯನ್ನು ಎಂದಿಗೂ ಮಾಡುವುದಿಲ್ಲ. 17 ನಮ್ಮ ಜನರನ್ನು ಈಜಿಪ್ಟಿನಿಂದ ಹೊರತಂದವನು ನಮ್ಮ ದೇವರಾದ ಯೆಹೋವನೆಂದು ನಮಗೆ ಗೊತ್ತು. ನಾವು ಈಜಿಪ್ಟಿನಲ್ಲಿ ಗುಲಾಮರಾಗಿದ್ದೆವು; ಆದರೆ ಯೆಹೋವನು ಅಲ್ಲಿ ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿ ನಮ್ಮನ್ನು ಅಲ್ಲಿಂದ ಬಿಡಿಸಿಕೊಂಡು ಬಂದನು. ನಾವು ಬೇರೆ ದೇಶಗಳಲ್ಲಿ ಪ್ರವಾಸ ಮಾಡಿಕೊಂಡು ಬರುವಾಗ ನಮ್ಮನ್ನು ರಕ್ಷಿಸಿದನು. 18 ಆ ದೇಶಗಳ ಜನರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದನು. ಈಗ ನಾವಿರುವ ಸ್ಥಳದಲ್ಲಿ ಮುಂಚೆ ವಾಸಮಾಡಿಕೊಂಡಿದ್ದ ಅಮೋರಿಯರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದ್ದಾನೆ. ಅದಕ್ಕಾಗಿ ನಾವು ಯೆಹೋವನ ಸೇವೆಯನ್ನು ಮುಂದುವರಿಸುತ್ತೇವೆ; ಏಕೆಂದರೆ ಆತನು ನಮ್ಮ ದೇವರು” ಎಂದು ಉತ್ತರಕೊಟ್ಟರು.
19 ಆಗ ಯೆಹೋಶುವನು ಅವರಿಗೆ, “ಅದು ನಿಜವಲ್ಲ, ನೀವು ಯೆಹೋವನ ಸೇವೆಯನ್ನು ಮುಂದುವರೆಸಿಕೊಂಡು ಹೋಗಲಾರಿರಿ. ನಮ್ಮ ದೇವರಾದ ಯೆಹೋವನು ಪವಿತ್ರನಾಗಿದ್ದಾನೆ; ತನ್ನ ಜನರು ಅನ್ಯದೇವರುಗಳನ್ನು ಪೂಜಿಸುವುದನ್ನು ಆತನು ದ್ವೇಷಿಸುತ್ತಾನೆ. ಒಂದುವೇಳೆ ನೀವೇನಾದರೂ ಆತನ ವಿರುದ್ಧವಾಗಿ ತಿರುಗಿಕೊಂಡರೆ ಆತನು ನಿಮ್ಮನ್ನು ಕ್ಷಮಿಸುವುದಿಲ್ಲ. 20 ನೀವು ಯೆಹೋವನನ್ನು ಬಿಟ್ಟು ಅನ್ಯದೇವರುಗಳ ಸೇವೆಮಾಡಿದರೆ ಆತನು ನಿಮಗೆ ಕೇಡನ್ನು ಬರಮಾಡುವನು. ಯೆಹೋವನು ನಿಮ್ಮನ್ನು ನಾಶಮಾಡುತ್ತಾನೆ. ನಿಮ್ಮ ದೇವರಾದ ಯೆಹೋವನು ನಿಮಗೆ ಒಳ್ಳೆಯವನಾಗಿದ್ದಾನೆ. ಆದರೆ ನೀವು ಆತನಿಗೆ ವಿಮುಖರಾದರೆ ಆತನು ನಿಮ್ಮನ್ನು ನಾಶಮಾಡುತ್ತಾನೆ” ಅಂದನು.
21 ಆದರೆ ಜನರು, “ಇಲ್ಲ! ನಾವು ಯೆಹೋವನ ಸೇವೆ ಮಾಡುತ್ತೇವೆ” ಎಂದು ಹೇಳಿದರು.
22 ಅದಕ್ಕೆ ಯೆಹೋಶುವನು, “ನೀವು ನಿಮ್ಮನ್ನೂ ನಿಮ್ಮ ಸುತ್ತಲಿರುವ ಜನರನ್ನೂ ನೋಡಿರಿ. ನೀವು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೀರಿ ಎಂಬುದು ನಿಮ್ಮೆಲ್ಲರಿಗೆ ಗೊತ್ತು ಮತ್ತು ಅದಕ್ಕೆ ನೀವು ಒಪ್ಪಿದ್ದೀರಿ. ನೀವೆಲ್ಲರೂ ಇದಕ್ಕೆ ಸಾಕ್ಷಿಯಾಗಿರುವಿರಾ?” ಎಂದು ಕೇಳಿದನು.
ಜನರು, “ಹೌದು, ಇದು ನಿಜ! ನಾವೆಲ್ಲರು ಯೆಹೋವನ ಸೇವೆಯನ್ನೇ ಆರಿಸಿಕೊಂಡಿದ್ದೇವೆ” ಎಂದು ಉತ್ತರಿಸಿದರು.
23 ಆಗ ಯೆಹೋಶುವನು, “ಹಾಗಾದರೆ ನಿಮ್ಮಲ್ಲಿರುವ ಸುಳ್ಳುದೇವರುಗಳನ್ನು ಎಸೆದುಬಿಡಿ. ಇಸ್ರೇಲರ ದೇವರಾದ ಯೆಹೋವನ ಕಡೆಗೆ ನಿಮ್ಮ ಮನಸ್ಸನ್ನು ತಿರುಗಿಸಿಕೊಳ್ಳಿರಿ” ಎಂದು ಹೇಳಿದನು.
24 ಆಗ ಜನರು ಯೆಹೋಶುವನಿಗೆ, “ನಾವು ನಮ್ಮ ದೇವರಾದ ಯೆಹೋವನ ಸೇವೆಯನ್ನೇ ಮಾಡುವೆವು. ನಾವು ಆತನ ಆಜ್ಞೆಯನ್ನು ಪಾಲಿಸುವೆವು” ಎಂದರು.
25 ಆದ್ದರಿಂದ ಯೆಹೋಶುವನು ಶೆಕೆಮಿನಲ್ಲಿ ಜನರಿಗಾಗಿ ಒಂದು ಒಡಂಬಡಿಕೆಯನ್ನು ಮಾಡಿದನು. ಅದು ಅವರಿಗೆ ಪಾಲಿಸಬೇಕಾದ ಒಂದು ವಿಧಿಯಾಯಿತು. 26 ಯೆಹೋಶುವನು ಇವುಗಳನ್ನು ದೇವರ ಧರ್ಮಶಾಸ್ತ್ರ ಗ್ರಂಥದಲ್ಲಿ ಬರೆದನು. ಯೆಹೋಶುವನು ಅಲ್ಲಿದ್ದ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಈ ಒಡಂಬಡಿಕೆಗೆ ಸಾಕ್ಷಿಯಾಗಿ ಅದನ್ನು ಯೆಹೋವನ ಪವಿತ್ರಗುಡಾರದ ಹತ್ತಿರವಿದ್ದ ಓಕ್ ಮರದ ಕೆಳಗೆ ನಿಲ್ಲಿಸಿದನು.
27 ಆಗ ಯೆಹೋಶುವನು ಜನರೆಲ್ಲರಿಗೆ, “ನಾವು ಇಂದು ಹೇಳಿದ ಎಲ್ಲವನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಈ ಕಲ್ಲು ನಿಮಗೆ ಸಾಕ್ಷಿಯಾಗಿರುವುದು. ಇಂದು ಯೆಹೋವನು ನಮ್ಮೊಡನೆ ಮಾತನಾಡುತ್ತಿದ್ದಾಗ ಈ ಕಲ್ಲು ಇಲ್ಲಿಯೇ ಇತ್ತು. ಅದಕ್ಕಾಗಿ ಈ ಕಲ್ಲು ಇಂದು ನಡೆದ ಸಂಗತಿಯನ್ನು ನೆನಪಿನಲ್ಲಿಡಲು ನಮಗೆ ಸಹಾಯಕವಾಗುವುದು. ನೀವು ನಿಮ್ಮ ದೇವರಾದ ಯೆಹೋವನಿಗೆ ವಿಮುಖರಾದರೆ ಈ ಕಲ್ಲೇ ನಿಮಗೆ ವಿರೋಧವಾಗಿ ಸಾಕ್ಷಿ ಹೇಳುವುದು” ಎಂದು ಹೇಳಿದನು.
28 ಬಳಿಕ ಯೆಹೋಶುವನು ಜನರಿಗೆ ತಮ್ಮ ಮನೆಗಳಿಗೆ ಹೋಗುವಂತೆ ತಿಳಿಸಿದನು. ಆದ್ದರಿಂದ ಪ್ರತಿಯೊಬ್ಬರೂ ತಮ್ಮತಮ್ಮ ಸ್ವನಾಡಿಗೆ ಹೊರಟುಹೋದರು.
ಯೆಹೋಶುವನ ಮರಣ
29 ಇದಾದ ಮೇಲೆ ನೂನನ ಮಗನಾದ ಯೆಹೋಶುವನು ಮರಣ ಹೊಂದಿದನು. ಯೆಹೋಶುವನು ನೂರಹತ್ತು ವರ್ಷ ಬದುಕಿದನು. 30 ಯೆಹೋಶುವನನ್ನು ತಿಮ್ನತ್ ಸೆರಹದ ಅವನ ಸ್ವಂತ ಭೂಮಿಯಲ್ಲಿ ಸಮಾಧಿ ಮಾಡಿದರು. ಇದು ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿರುವ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿದೆ.
31 ಯೆಹೋಶುವನು ಜೀವಿಸಿದಾಗ ಇಸ್ರೇಲರು ಯೆಹೋವನ ಸೇವೆಮಾಡಿದರು; ಯೆಹೋಶುವನ ಮರಣಾನಂತರವೂ ಅವರು ಯೆಹೋವನ ಸೇವೆಯನ್ನು ಮುಂದುವರೆಸಿದರು. ಯೆಹೋವನು ಇಸ್ರೇಲರಿಗಾಗಿ ಮಾಡಿದ ಮಹತ್ಕಾರ್ಯಗಳನ್ನು ನೋಡಿದ್ದ ಅವರ ನಾಯಕರು ಜೀವಿಸಿದ್ದಾಗಲೂ ಇಸ್ರೇಲರು ಯೆಹೋವನ ಸೇವೆಮಾಡಿದರು.
ಯೋಸೇಫನ ಎಲುಬುಗಳನ್ನು ಸ್ವದೇಶದಲ್ಲಿ ಹೂಳಿಟ್ಟದ್ದು
32 ಇಸ್ರೇಲರು ಈಜಿಪ್ಟಿನಿಂದ ಹೊರಟಾಗ ತಮ್ಮೊಂದಿಗೆ ಯೋಸೇಫನ ಎಲುಬುಗಳನ್ನೂ ತೆಗೆದುಕೊಂಡು ಬಂದಿದ್ದರು. ಅವರು ಯೋಸೇಫನ ಎಲುಬುಗಳನ್ನು ಶೆಕೆಮಿನಲ್ಲಿ ಹೂಳಿಟ್ಟರು. ಯಾಕೋಬನು ಶೆಕೆಮನ ತಂದೆಯಾದ ಹಮೋರನ ಗಂಡುಮಕ್ಕಳಿಂದ ನೂರು ಬೆಳ್ಳಿನಾಣ್ಯಗಳನ್ನು ಕೊಟ್ಟು ಕೊಂಡುಕೊಂಡ ಶೆಕೆಮ್ ಊರಿನ ಹೊಲದಲ್ಲಿ ಆ ಎಲುಬುಗಳನ್ನು ಹೂಳಿಟ್ಟರು. ಈ ಭೂಮಿಯ ಯೋಸೇಫನ ಮಕ್ಕಳದಾಗಿತ್ತು.
33 ಆರೋನನ ಮಗನಾದ ಎಲ್ಲಾಜಾರನು ಮರಣಹೊಂದಿದನು. ಗಿಬೇತ್‌ನಲ್ಲಿ ಎಲ್ಲಾಜಾರನನ್ನು ಸಮಾಧಿ ಮಾಡಲಾಯಿತು. ಗಿಬೇತ್ ಊರು ಎಫ್ರಾಯೀಮ್ ಪರ್ವತ ಪ್ರಾಂತ್ಯದಲ್ಲಿತ್ತು. ಆ ಊರನ್ನು ಎಲ್ಲಾಜಾರನ ಮಗನಾದ ಫೀನೆಹಾಸನಿಗೆ ಕೊಡಲಾಗಿತ್ತು.
ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ
4 ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. 2 ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. 3 ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. 4 ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.
5 ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು. 6 ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು. 7 ಅವರು ಪೇತ್ರ ಯೋಹಾನರನ್ನು ಅಲ್ಲಿದ್ದ ಎಲ್ಲಾ ಜನರ ಮುಂದೆ ನಿಲ್ಲಿಸಿದರು. ಯೆಹೂದ್ಯನಾಯಕರು ಅವರನ್ನು “ನೀವು ಈ ಕುಂಟನನ್ನು ಹೇಗೆ ಗುಣಪಡಿಸಿದಿರಿ? ನೀವು ಯಾವ ಶಕ್ತಿಯನ್ನು ಉಪಯೋಗಿಸಿದಿರಿ? ಇದನ್ನು ಯಾರ ಅಧಿಕಾರದಿಂದ ಮಾಡಿದಿರಿ?” ಎಂದು ಅನೇಕ ಸಲ ಕೇಳಿದರು.
8 ಆಗ ಪೇತ್ರನು ಪವಿತ್ರಾತ್ಮಭರಿತನಾದನು. ಅವನು ಅವರಿಗೆ, “ಜನನಾಯಕರೇ ಮತ್ತು ಹಿರಿಯನಾಯಕರೇ, 9 ಈ ಕುಂಟನಿಗಾದ ಒಳ್ಳೆಯದರ ಬಗ್ಗೆ ನೀವು ನಮ್ಮನ್ನು ಕೇಳುತ್ತಿದ್ದೀರಿ. 10 ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದ ಈ ಮನುಷ್ಯನಿಗೆ ಗುಣವಾಯಿತೆಂಬುದನ್ನು ನೀವು ಮತ್ತು ಯೆಹೂದ್ಯರೆಲ್ಲರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ! ನೀವು ಯೇಸುವನ್ನು ಶಿಲುಬೆಗೇರಿಸಿದಿರಿ. ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಈ ಮನುಷ್ಯನು ಕುಂಟನಾಗಿದ್ದನು, ಆದರೆ ಈಗ ಇವನು ಗುಣಹೊಂದಿದ್ದಾನೆ ಮತ್ತು ಯೇಸುವಿನ ಹೆಸರಿನಿಂದ ನಿಮ್ಮ ಮುಂದೆ ನಿಂತುಕೊಳ್ಳಲು ಶಕ್ತನಾಗಿದ್ದಾನೆ!
11 ‘ಕಟ್ಟುವವರಾದ ನೀವು ಬೇಡವೆಂದು ಬಿಟ್ಟ ಕಲ್ಲೇ (ಯೇಸು)
ಮುಖ್ಯವಾದ ಮೂಲೆಗಲ್ಲಾಯಿತು.’(A)
12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.
13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು. 14 ಈ ಇಬ್ಬರು ಅಪೊಸ್ತಲರ ಪಕ್ಕದಲ್ಲೇ ನಿಂತುಕೊಂಡಿದ್ದ ಕುಂಟನನ್ನು ಅವರು ನೋಡಿದರು. ಅವನಿಗೆ ಗುಣವಾಗಿರುವುದನ್ನು ಅವರು ಕಂಡರು. ಆದ್ದರಿಂದ ಅಪೊಸ್ತಲರ ಮಾತಿಗೆ ವಿರುದ್ಧವಾಗಿ ಅವರೇನೂ ಹೇಳಲಾಗಲಿಲ್ಲ.
15 ಯೆಹೂದ್ಯನಾಯಕರು ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಿ, 16 “ಇವರಿಗೆ ನಾವೇನು ಮಾಡೋಣ? ಇವರು ದೊಡ್ಡ ಅದ್ಭುತಕಾರ್ಯ ಮಾಡಿರುವುದು ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಅದ್ಭುತಕಾರ್ಯವು ಸ್ಪಷ್ಟವಾಗಿರುವುದರಿಂದ ಅದನ್ನು ಅಸತ್ಯವೆಂದು ಹೇಳಲಾಗದು. 17 ಆದರೆ ಈ ಮನುಷ್ಯನ (ಯೇಸುವಿನ) ಬಗ್ಗೆ ಜನರಿಗೆ ಹೇಳದಂತೆ ನಾವು ಅವರನ್ನು ಬೆದರಿಸಬೇಕು. ಆಗ ಈ ಸಮಾಚಾರ ಜನರ ಮಧ್ಯದಲ್ಲಿ ಹರಡುವುದಿಲ್ಲ” ಎಂದು ಅವರು ಮಾತಾಡಿಕೊಂಡರು.
18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು. 19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ. 20 ನಾವಂತೂ ಸುಮ್ಮನಿರಲಾರೆವು. ನಾವು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಜನರಿಗೆ ಹೇಳಲೇಬೇಕು” ಎಂದು ಉತ್ತರಕೊಟ್ಟರು.
21-22 ಯೆಹೂದ್ಯನಾಯಕರಿಗೆ ಅಪೊಸ್ತಲರನ್ನು ದಂಡಿಸಲು ಯಾವ ಮಾರ್ಗವೂ ತೋಚಲಿಲ್ಲ, ಯಾಕೆಂದರೆ ಸಂಭವಿಸಿದ ಕಾರ್ಯಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. (ಈ ಸೂಚಕಕಾರ್ಯದಿಂದ ಗುಣಹೊಂದಿದ ವ್ಯಕ್ತಿಗೆ ನಲವತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು.) ಆದ್ದರಿಂದ ಯೆಹೂದ್ಯನಾಯಕರು ಅಪೊಸ್ತಲರನ್ನು ಮತ್ತೆ ಎಚ್ಚರಿಸಿ ಕಳುಹಿಸಿಬಿಟ್ಟರು.
ಪೇತ್ರ ಮತ್ತು ಯೋಹಾನರು ಹಿಂತಿರುಗಿದರು
23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:
‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!
26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’(B)
27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.
31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.
ವಿಶ್ವಾಸಿಗಳ ಅನ್ಯೋನ್ಯ ಜೀವನ
32 ವಿಶ್ವಾಸಿಗಳ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಸಮುದಾಯದಲ್ಲಿದ್ದ ಯಾವನಾಗಲಿ ತನ್ನಲ್ಲಿರುವವುಗಳನ್ನು ತನ್ನದೆಂದು ಹೇಳುತ್ತಿರಲಿಲ್ಲ. ಬದಲಾಗಿ, ಅವರು ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದರು. 33 ಪ್ರಭುವಾದ ಯೇಸು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ಅಪೊಸ್ತಲರು ಬಹುಬಲವಾಗಿ ಜನರಿಗೆ ಹೇಳುತ್ತಿದ್ದರು. ದೇವರು ವಿಶ್ವಾಸಿಗಳೆಲ್ಲರನ್ನು ಬಹಳವಾಗಿ ಆಶೀರ್ವದಿಸಿದನು. 34 ಅವರೆಲ್ಲರ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಜಮೀನುಗಳನ್ನು ಮತ್ತು ಮನೆಗಳನ್ನು ಹೊಂದಿದ್ದ ಪ್ರತಿಯೊಬ್ಬರು ಅವುಗಳನ್ನು ಮಾರಿ, 35 ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಡುತ್ತಿದ್ದರು. ಬಳಿಕ ಅದನ್ನು ಪ್ರತಿಯೊಬ್ಬರಿಗೂ ಅವರವರ ಅಗತ್ಯತೆಗಳಿಗನುಸಾರವಾಗಿ ಹಂಚಲಾಗುತ್ತಿತ್ತು.
36 ಆ ವಿಶ್ವಾಸಿಗಳಲ್ಲಿ ಯೋಸೇಫ ಎಂಬವನೂ ಇದ್ದನು. ಅಪೊಸ್ತಲರು ಅವನನ್ನು ಬಾರ್ನಬ ಎಂದು ಕರೆಯುತ್ತಿದ್ದರು. (ಬಾರ್ನಬ ಅಂದರೆ “ಧೈರ್ಯದಾಯಕ.”) ಸೈಪ್ರಸ್‌ನಲ್ಲಿ ಹುಟ್ಟಿದ ಇವನು ಲೇವಿಯನಾಗಿದ್ದನು.[a] 37 ಯೋಸೇಫನಿಗೆ ಒಂದು ಹೊಲವಿತ್ತು. ಅವನು ಅದನ್ನು ಮಾರಿ ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಟ್ಟನು.
ನಡುಪಟ್ಟಿಯ ಸಂಕೇತ
13 ಯೆಹೋವನು ನನಗೆ ಹೀಗೆ ಹೇಳಿದನು, “ಯೆರೆಮೀಯನೇ, ಹೋಗಿ ಒಂದು ನಾರಿನ ನಡುಪಟ್ಟಿಯನ್ನು ಕೊಂಡುಕೊ. ಅದನ್ನು ನಿನ್ನ ಸೊಂಟಕ್ಕೆ ಸುತ್ತಿಕೊ. ಆ ನಡುಪಟ್ಟಿ ನೀರಿನಲ್ಲಿ ನೆನೆಯದಂತೆ ನೋಡಿಕೊ.”
2 ಯೆಹೋವನು ಹೇಳಿದಂತೆ ನಾನು ಒಂದು ನಾರಿನ ನಡುಪಟ್ಟಿಯನ್ನು ಕೊಂಡು ತಂದೆನು. ಅದನ್ನು ನನ್ನ ಸೊಂಟಕ್ಕೆ ಸುತ್ತಿಕೊಂಡೆನು. 3 ಆಗ ಎರಡನೇ ಸಲ ನನಗೆ ಯೆಹೋವನ ಸಂದೇಶ ಬಂದಿತು. 4 ಆ ಸಂದೇಶವಿದು, “ಯೆರೆಮೀಯನೇ, ನೀನು ಕೊಂಡ ತಂದು ಸುತ್ತಿಕೊಂಡ ನಡುಪಟ್ಟಿಯನ್ನು ತೆಗೆದುಕೊಂಡು ಪೆರಾತ್‌ಗೆ ಹೋಗು. ಆ ನಡುಪಟ್ಟಿಯನ್ನು ಬೆಟ್ಟದ ಸಂದಿನಲ್ಲಿ ಬಚ್ಚಿಡು.”
5 ಆದ್ದರಿಂದ ನಾನು ಪೆರಾತ್‌ಗೆ ಹೋದೆ. ಯೆಹೋವನು ಹೇಳಿದ ಪ್ರಕಾರ ನಡುಪಟ್ಟಿಯನ್ನು ಬಚ್ಚಿಟ್ಟೆ. 6 ಬಹಳ ದಿನಗಳಾದ ತರುವಾಯ, ಯೆಹೋವನು ನನಗೆ, “ಯೆರೆಮೀಯನೇ, ಪೆರಾತ್‌ಗೆ ಹೋಗು, ನಾನು ನಿನಗೆ ಅಲ್ಲಿ ಬಚ್ಚಿಡಲು ಹೇಳಿದ ನಡುಪಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
7 ನಾನು ಪೆರಾತ್‌ಗೆ ಹೋದೆ ಮತ್ತು ನಡುಪಟ್ಟಿಯನ್ನು ಬಚ್ಚಿಟ್ಟ ಬೆಟ್ಟದ ಸಂದಿನಿಂದ ಹೊರತೆಗೆದೆ. ಆದರೆ ಆ ನಡುಪಟ್ಟಿ ಹಾಳಾಗಿಹೋಗಿತ್ತು. ನಾನು ಅದನ್ನು ಧರಿಸಲಾಗಲಿಲ್ಲ. ಅದು ಯಾವುದಕ್ಕೂ ಪ್ರಯೋಜನವಿರಲಿಲ್ಲ.
8 ಆಗ ನನಗೆ ಯೆಹೋವನ ಸಂದೇಶ ಬಂದಿತು. 9 ಯೆಹೋವನು ಹೀಗೆ ಹೇಳಿದನು, “ನಡುಪಟ್ಟಿಯು ಹಾಳಾಗಿ ನಿಷ್ಪ್ರಯೋಜಕವಾಗಿದೆ. ಅಂತೆಯೇ ನಾನು ಯೆಹೂದದ ಮತ್ತು ಜೆರುಸಲೇಮಿನ ಜಂಬದ ಜನರನ್ನು ಹಾಳುಮಾಡುತ್ತೇನೆ. 10 ಯೆಹೂದದಲ್ಲಿ ದುಷ್ಟರೂ ಗರ್ವಿಷ್ಠರೂ ಆಗಿರುವ ಜನರನ್ನು ಹಾಳುಮಾಡುವೆನು. ಅವರು ನನ್ನ ಸಂದೇಶವನ್ನು ಕೇಳುವುದಿಲ್ಲ. ಅವರು ಹಟಮಾರಿಗಳೂ ತಮ್ಮ ಮನಸ್ಸಿಗೆ ಬಂದಂತೆ ಮಾಡುವವರೂ ಆಗಿದ್ದಾರೆ. ಅವರು ಬೇರೆ ದೇವರುಗಳನ್ನು ಅನುಸರಿಸುತ್ತಾರೆ ಮತ್ತು ಪೂಜಿಸುತ್ತಾರೆ. ಯೆಹೂದದ ಜನರು ಈ ನಾರಿನ ನಡುಪಟ್ಟಿಯಂತೆ ಆಗುವರು. ಅವರು ಹಾಳಾಗಿ ನಿಷ್ಪ್ರಯೋಜಕರಾಗುವರು. 11 ಪುರುಷನೊಬ್ಬನು ನಡುಪಟ್ಟಿಯನ್ನು ಬಿಗಿಯಾಗಿ ಸೊಂಟಕ್ಕೆ ಸುತ್ತಿಕೊಳ್ಳುವಂತೆ ನಾನು ಇಸ್ರೇಲಿನ ಎಲ್ಲಾ ವಂಶಗಳನ್ನು ಮತ್ತು ಯೆಹೂದದ ಎಲ್ಲಾ ವಂಶಗಳನ್ನು ನನ್ನ ಸುತ್ತಲೂ ಬಿಗಿದುಕೊಂಡೆನು.” ಇದು ಯೆಹೋವನಿಂದ ಬಂದ ಮಾತು. “ಅವರು ನನ್ನ ಜನರಾಗುವರು ಎಂದುಕೊಂಡು ನಾನು ಹಾಗೆ ಮಾಡಿದೆ. ನನ್ನ ಜನರು ನನಗೆ ಕೀರ್ತಿ, ಸ್ತುತಿ, ಗೌರವ ತರುವರೆಂದು ತಿಳಿದಿದ್ದೆ. ಆದರೆ ನನ್ನ ಜನರು ನನ್ನ ಮಾತನ್ನು ಕೇಳದೆಹೋದರು.”
ಯೆಹೂದಕ್ಕೆ ಕೊಟ್ಟ ಎಚ್ಚರಿಕೆಗಳು
12 “ಯೆರೆಮೀಯನೇ, ಯೆಹೂದದ ಜನರಿಗೆ, ‘ಇಸ್ರೇಲಿನ ದೇವರಾದ ಯೆಹೋವನು ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕು ಎಂದು ಹೇಳುತ್ತಾನೆ’ ಎಂದು ಹೇಳು. ಆಗ ಆ ಜನರು ನಕ್ಕು, ‘ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು’ ಎಂದು ನಿನಗೆ ಹೇಳುತ್ತಾರೆ. 13 ಆಗ ನೀನು ಅವರಿಗೆ, ‘ಯೆಹೋವನು ಹೀಗೆ ಹೇಳುತ್ತಾನೆ ಎಂದು ಹೇಳು. ಈ ಪ್ರದೇಶದಲ್ಲಿ ವಾಸಮಾಡುವ ಪ್ರತಿಯೊಬ್ಬ ಮನುಷ್ಯನನ್ನು ಕುಡಿದು ಮತ್ತನಾದವನಂತೆ ಅಸಹಾಯಕನನ್ನಾಗಿ ಮಾಡುತ್ತೇನೆ. ನಾನು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ರಾಜರ ಬಗ್ಗೆ ಹೇಳುತ್ತಿದ್ದೇನೆ. ನಾನು ಯಾಜಕರ, ಪ್ರವಾದಿಗಳ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಎಲ್ಲಾ ಜನರ ಬಗ್ಗೆಯೂ ಹೇಳುತ್ತಿದ್ದೇನೆ. 14 ಯೆಹೂದದ ಜನರು ಎಡವಿ, ಒಬ್ಬರಮೇಲೊಬ್ಬರು ಬೀಳುವಂತೆ ನಾನು ಮಾಡುವೆನು. ತಂದೆ ಮತ್ತು ಮಕ್ಕಳು ಒಬ್ಬರಮೇಲೊಬ್ಬರು ಬೀಳುವರು.’” ಇದು ಯೆಹೋವನ ನುಡಿ. “‘ನಾನು ಅವರಿಗಾಗಿ ಕನಿಕರಪಡುವದಿಲ್ಲ ಅಥವಾ ಕರುಣೆ ತೋರಿಸುವದಿಲ್ಲ. ಯೆಹೂದದ ಜನರ ವಿನಾಶವನ್ನು ಕರುಣೆಯು ತಡೆಯದಂತೆ ನೋಡಿಕೊಳ್ಳುತ್ತೇನೆ.’”
15 ಕೇಳಿರಿ, ಗಮನ ಕೊಡಿರಿ;
ದೇವರು ನಿಮಗೆ ಹೇಳಿದ್ದಾನೆ.
ಗರ್ವಪಡಬೇಡಿರಿ.
16 ನಿಮ್ಮ ದೇವರಾದ ಯೆಹೋವನು
ಅಂಧಕಾರವನ್ನು ಉಂಟುಮಾಡುವ ಮೊದಲೇ ಆತನನ್ನು ಗೌರವಿಸಿರಿ,
ಕಗ್ಗತ್ತಲಿನ ಬೆಟ್ಟಗಳ ಮೇಲೆ ನೀವು ಬೀಳುವ ಮೊದಲೇ ಆತನನ್ನು ಸ್ತುತಿಸಿರಿ.
ಯೆಹೂದದ ಜನರಾದ ನೀವು ಬೆಳಕನ್ನು ನಿರೀಕ್ಷಿಸುತ್ತಿದ್ದೀರಿ.
ಆದರೆ ಯೆಹೋವನು ಬೆಳಕನ್ನು ಗಾಢಾಂಧಕಾರವನ್ನಾಗಿ ಪರಿವರ್ತಿಸುವನು.
17 ಯೆಹೂದದ ಜನರಾದ ನೀವು ಯೆಹೋವನ ಮಾತನ್ನು ಕೇಳದಿದ್ದರೆ,
ನಾನು ಗುಟ್ಟಾದ ಸ್ಥಳದಲ್ಲಿ ಅಳುವೆನು.
ನಿಮ್ಮ ಅಹಂಕಾರವು ನನ್ನನ್ನು ಅಳುವ ಹಾಗೆ ಮಾಡುವುದು.
ನಾನು ಬಹಳ ಗಟ್ಟಿಯಾಗಿ ಅಳುವೆನು,
ನನ್ನ ಕಣ್ಣುಗಳಿಂದ ಕಣ್ಣೀರು ಹೊರಸೂಸುವುದು.
ಏಕೆಂದರೆ ಯೆಹೋವನ ಮಂದೆಯು ಸೆರೆಹಿಡಿಯಲ್ಪಡುವುದು.
18 ಈ ಸಂಗತಿಗಳನ್ನು ರಾಜನಿಗೂ ರಾಣಿಗೂ ಹೇಳಿರಿ:
“ನಿಮ್ಮ ಸಿಂಹಾಸನಗಳಿಂದ ಕೆಳಗಿಳಿದು ಬನ್ನಿ.
ನಿಮ್ಮ ಸುಂದರವಾದ ಕಿರೀಟಗಳು ನಿಮ್ಮ ತಲೆಯಿಂದ ಉರುಳಿ ಕೆಳಗೆ ಬಿದ್ದಿವೆ” ಎಂದು ಹೇಳಿರಿ.
19 ನೆಗೆವ್ ಮರುಭೂಮಿಯ ಎಲ್ಲಾ ನಗರಗಳಿಗೆ ಬೀಗ ಹಾಕಲಾಗಿದೆ.
ಅವುಗಳನ್ನು ತೆರೆಯುವುದು ಯಾರಿಂದಲೂ ಸಾಧ್ಯವಿಲ್ಲ.
ಯೆಹೂದದ ಎಲ್ಲಾ ಜನರು ಸೆರೆ ಒಯ್ಯಲ್ಪಟ್ಟಿದ್ದಾರೆ.
ಅವರೆಲ್ಲರನ್ನು ಸೆರೆಯಾಳುಗಳಾಗಿ ತೆಗೆದುಕೊಂಡು ಹೋಗಲಾಗಿದೆ.
20 ಜೆರುಸಲೇಮೇ, ಮುಖವೆತ್ತಿ ನೋಡು.
ಉತ್ತರ ದಿಕ್ಕಿನಿಂದ ಬರುವ ಶತ್ರುಗಳನ್ನು ನೋಡು.
ನಿನ್ನ ಮಂದೆ[a] ಎಲ್ಲಿದೆ? ದೇವರು ನಿನಗೆ ಆ ಸುಂದರವಾದ ಮಂದೆಯನ್ನು ದಯಪಾಲಿಸಿದನು.
ನೀನು ಆ ಮಂದೆಯನ್ನು ನೋಡಿಕೊಳ್ಳಬೇಕಾಗಿತ್ತು.
21 ಯೆಹೋವನು ನಿನಗೆ ಆ ಮಂದೆಯ ಲೆಕ್ಕವನ್ನೊಪ್ಪಿಸು ಎಂದು ಕೇಳಿದರೆ ಏನು ಹೇಳುವೆ?
ಜನರಿಗೆ ದೇವರ ಬಗ್ಗೆ ತಿಳಿಸುವದು ನಿನ್ನ ಕರ್ತವ್ಯವಾಗಿತ್ತು.
ನಿನ್ನ ನಾಯಕರು ಜನರಿಗೆ ಮಾರ್ಗದರ್ಶನ ಮಾಡಬೇಕಾಗಿತ್ತು.
ಆದರೆ ಅವರು ತಮ್ಮ ಕೆಲಸವನ್ನು ಮಾಡಲಿಲ್ಲ.
ಆದ್ದರಿಂದ ನಿನಗೆ ಹೆಚ್ಚಿನ ನೋವು ಮತ್ತು ಕಷ್ಟಗಳು ಉಂಟಾಗುವವು.
ಪ್ರಸವವೇದನೆಯಂಥ ನೋವು ನಿನಗಾಗುವುದು.
22 “ಇಂಥ ಕೇಡು ನನಗೆ ಏಕೆ ಉಂಟಾಯಿತು?”
ಎಂದು ನಿನ್ನನ್ನು ನೀನೇ ಕೇಳಿಕೊಳ್ಳಬಹುದು.
ನೀನು ಮಾಡಿದ ಅನೇಕ ಪಾಪಗಳ ಫಲದಿಂದಲೇ ಆಯಿತು.
ನಿನ್ನ ಪಾಪಗಳ ಫಲವಾಗಿ ನಿನ್ನ ಲಂಗವನ್ನು ಹರಿಯಲಾಯಿತು.
ನಿನ್ನ ಪಾದರಕ್ಷೆಯನ್ನು ಕಿತ್ತುಕೊಳ್ಳಲಾಯಿತು.
ನಿನ್ನನ್ನು ಕಂಗೆಡಿಸುವದಕ್ಕಾಗಿ ಅವರು ಹೀಗೆ ಮಾಡಿದರು.
23 ಕಪ್ಪಗಿರುವವನು ತನ್ನ ಚರ್ಮದ ಬಣ್ಣವನ್ನು ಬದಲಿಸಲಾರನು.
ಚಿರತೆಯು ತನ್ನ ಮೈಮೇಲಿನ ಚುಕ್ಕೆಗಳನ್ನು ಬದಲಾಯಿಸಲಾರದು.
ಅದೇ ರೀತಿ, ಜೆರುಸಲೇಮ್ ನಗರವೇ, ನೀನು ಸಹ ಮಾರ್ಪಾಟು ಹೊಂದಿ ಒಳ್ಳೆಯದನ್ನು ಮಾಡಲಾರೆ.
ನೀನು ಯಾವಾಗಲೂ ಕೆಟ್ಟದ್ದನ್ನೇ ಮಾಡುವೆ.
24 “ನಾನು ನಿಮಗೆ ನಿಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯ ಮಾಡುತ್ತೇನೆ.
ನೀವು ಎಲ್ಲಾ ದಿಕ್ಕುಗಳಲ್ಲಿಯೂ ಓಡಿಹೋಗುವಿರಿ.
ನೀವು ಮರುಭೂಮಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತಾಗುವಿರಿ.
25 ನಿಮ್ಮ ಗತಿ ಹೀಗಾಗುವುದು.
ನನ್ನ ಯೋಜನೆಗಳಲ್ಲಿ ಇದು ನಿಮ್ಮ ಪಾತ್ರ.”
ಇದು ಯೆಹೋವನ ನುಡಿ.
“ಏಕೆ ಹೀಗಾಗುವದು?
ಏಕೆಂದರೆ ನೀವು ನನ್ನನ್ನು ಮರೆತುಬಿಟ್ಟಿರಿ.
ಸುಳ್ಳುದೇವರುಗಳನ್ನು ನಂಬಿದಿರಿ.
26 ಜೆರುಸಲೇಮ್ ನಗರವೇ, ನಾನು ನಿನ್ನ ಲಂಗವನ್ನು ನಿನ್ನ ಮುಖದವರೆಗೆ ಎತ್ತಿಬಿಡುತ್ತೇನೆ.
ಎಲ್ಲರೂ ನಿನ್ನನ್ನು ನೋಡುತ್ತಾರೆ.
ನಿನಗೆ ನಾಚಿಕೆಯಾಗುತ್ತದೆ.
27 ನೀನು ಮಾಡಿದ ಭಯಾನಕ ಕೃತ್ಯಗಳನ್ನು ನಾನು ನೋಡಿದ್ದೇನೆ.
ನಿನ್ನ ಪ್ರಿಯತಮರ ಜೊತೆಗೆ ನಗುವದನ್ನೂ ಕಾಮದಾಟವಾಡುವದನ್ನೂ ನಾನು ನೋಡಿದ್ದೇನೆ.
ನೀನು ವೇಶ್ಯೆಯಂತೆ ನಡೆದುಕೊಳ್ಳಬೇಕೆಂದು ಯೋಚನೆ ಮಾಡಿದ್ದು ನನಗೆ ಗೊತ್ತು.
ನೀನು ಹೊಲಗಳಲ್ಲಿಯೂ ಬೆಟ್ಟಗಳಲ್ಲಿಯೂ ಮಾಡಿದ ಅಸಹ್ಯಕೃತ್ಯಗಳನ್ನು ನಾನು ನೋಡಿದ್ದೇನೆ.
ಜೆರುಸಲೇಮೇ, ಇದರಿಂದ ನಿನಗೆ ತುಂಬಾ ಕೇಡಾಗುವದು.
ನೀನು ಎಷ್ಟು ದಿನ ಹೀಗೆಯೇ ನಿನ್ನ ಪಾಪಕೃತ್ಯಗಳನ್ನು ಮುಂದುವರಿಸುವೆ ಎಂದು ನಾನು ಯೋಚಿಸುತ್ತಿದ್ದೇನೆ.”
ರಾಜ್ಯಪಾಲನ ಮುಂದೆ ಯೇಸು
(ಮಾರ್ಕ 15:1; ಲೂಕ 23:1-2; ಯೋಹಾನ 18:28-32)
27 ಮರುದಿನ ಮುಂಜಾನೆ, ಮಹಾಯಾಜಕರೆಲ್ಲರೂ ಮತ್ತು ಹಿರಿಯ ನಾಯಕರೆಲ್ಲರೂ ಯೇಸುವನ್ನು ಕೊಲ್ಲಲು ತೀರ್ಮಾನಿಸಿದರು. 2 ಅವರು ಆತನನ್ನು ಸರಪಣಿಗಳಿಂದ ಬಂಧಿಸಿ ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದೊಯ್ದು ಅವನಿಗೆ ಒಪ್ಪಿಸಿದರು.
ಯೂದನ ಆತ್ಮಹತ್ಯೆ
(ಅ.ಕಾ. 1:18-19)
3 ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿಕೊಟ್ಟ ಯೂದನು, ಯೇಸುವಿಗೆ ಸಂಭವಿಸಿದ್ದನ್ನು ಕಂಡು, ತಾನು ಮಾಡಿದ ದ್ರೋಹಕ್ಕಾಗಿ ಬಹಳ ಪಶ್ಚಾತ್ತಾಪಪಟ್ಟನು. ಅವನು ಬೆಳ್ಳಿಯ ನಾಣ್ಯಗಳನ್ನು ಮಹಾಯಾಜಕರ ಮತ್ತು ಹಿರಿಯನಾಯಕರ ಬಳಿಗೆ ತೆಗೆದುಕೊಂಡು ಹೋಗಿ, 4 “ನಾನು ಪಾಪ ಮಾಡಿದೆ, ನಿರಪರಾಧಿಯನ್ನು ಕೊಲ್ಲಲು ನಿಮಗೆ ಒಪ್ಪಿಸಿಬಿಟ್ಟೆ” ಎಂದು ಹೇಳಿದನು.
ಯೆಹೂದ್ಯ ನಾಯಕರು, “ಅದಕ್ಕೆ ನಾವೇನು ಮಾಡೋಣ! ಅದು ನಿನ್ನ ಸಮಸ್ಯೆ, ನಮ್ಮದಲ್ಲ!” ಎಂದು ಉತ್ತರಕೊಟ್ಟರು.
5 ಆಗ ಯೂದನು ಆ ಹಣವನ್ನು ದೇವಾಲಯದೊಳಗೆ ಬಿಸಾಡಿ ಹೊರಟುಹೋಗಿ ನೇಣು ಹಾಕಿಕೊಂಡನು.
6 ಮಹಾಯಾಜಕರು ದೇವಾಲಯದಲ್ಲಿದ್ದ ಬೆಳ್ಳಿಯ ನಾಣ್ಯಗಳನ್ನು ಆಯ್ದುಕೊಂಡು, “ಈ ಹಣವನ್ನು ಒಬ್ಬ ಮನುಷ್ಯನ ಹತ್ಯೆಗಾಗಿ ಕೊಟ್ಟಿದ್ದ ಕಾರಣ ಇದನ್ನು ದೇವಾಲಯದ ಹಣದೊಂದಿಗೆ ಸೇರಿಸುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧ” ಎಂದು ಹೇಳಿದರು. 7 ಆದ್ದರಿಂದ ಅವರು ಆ ಹಣದಿಂದ “ಕುಂಬಾರನ ಹೊಲ” ಎಂಬ ಜಮೀನನ್ನು ಕೊಂಡುಕೊಳ್ಳಲು ತೀರ್ಮಾನಿಸಿದರು. ಜೆರುಸಲೇಮಿಗೆ ಪ್ರವಾಸ ಬಂದವರು ಸತ್ತರೆ, ಅವರನ್ನು ಈ ಹೊಲದಲ್ಲಿ ಸಮಾಧಿ ಮಾಡಬೇಕೆಂದು ನಿರ್ಧರಿಸಲಾಯಿತು. 8 ಆದಕಾರಣವೇ ಆ ಹೊಲವನ್ನು ಇಂದಿಗೂ “ಜೀವಹತ್ಯೆಯ ಹೊಲ”ವೆಂದು ಕರೆಯುತ್ತಾರೆ. 9 ಹೀಗೆ ಪ್ರವಾದಿಯಾದ ಯೆರೆಮೀಯನು ಹೇಳಿದ ಮಾತು ನೆರವೇರಿತು. ಅದೇನೆಂದರೆ:
“ಅವರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡರು. ಯೆಹೂದ್ಯರು ಆತನ ಜೀವಕ್ಕೆ ನಿರ್ಧರಿಸಿದ ಬೆಲೆಯೇ ಅಷ್ಟು. 10 ಪ್ರಭುವು ನನಗೆ ಆಜ್ಞಾಪಿಸಿದಂತೆ, ಅವರು ಮೂವತ್ತು ಬೆಳ್ಳಿಯ ನಾಣ್ಯಗಳಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.”[a]
ರಾಜ್ಯಪಾಲ ಪಿಲಾತನಿಂದ ಯೇಸುವಿಗಾದ ವಿಚಾರಣೆ
(ಮಾರ್ಕ 15:2-5; ಲೂಕ 23:3-5; ಯೋಹಾನ 18:33-38)
11 ಯೇಸುವನ್ನು ರಾಜ್ಯಪಾಲ ಪಿಲಾತನ ಎದುರಿನಲ್ಲಿ ನಿಲ್ಲಿಸಿದರು. ಪಿಲಾತನು ಆತನಿಗೆ, “ನೀನು ಯೆಹೂದ್ಯರ ರಾಜನೇ?” ಎಂದು ಕೇಳಿದನು.
ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು” ಎಂದು ಉತ್ತರಕೊಟ್ಟನು.
12 ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಯೇಸುವಿನ ಮೇಲೆ ದೂರು ಹೇಳಿದಾಗ, ಆತನು ಮೌನವಾಗಿದ್ದನು.
13 ಆದ್ದರಿಂದ ಪಿಲಾತನು ಯೇಸುವನ್ನು, “ಈ ಜನರು ನಿನ್ನ ಮೇಲೆ ಹೇಳುತ್ತಿರುವ ಈ ದೂರುಗಳನ್ನೆಲ್ಲ ನೀನು ಕೇಳುತ್ತಿದ್ದರೂ ಏಕೆ ಉತ್ತರ ಕೊಡುತ್ತಿಲ್ಲ?” ಎಂದು ಕೇಳಿದನು.
14 ಆದರೆ ಯೇಸು ಪಿಲಾತನಿಗೆ ಉತ್ತರ ಕೊಡಲೇ ಇಲ್ಲ. ಪಿಲಾತನಿಗೆ ಬಹಳ ಆಶ್ಚರ್ಯವಾಯಿತು.
ಯೇಸುವನ್ನು ಬಿಡಿಸಲು ಪಿಲಾತನ ವಿಫಲ ಯತ್ನ
(ಮಾರ್ಕ 15:6-15; ಲೂಕ 23:13-25; ಯೋಹಾನ 18:39–19:16)
15 ಪ್ರತಿವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸುವ ಕೈದಿಗಳಲ್ಲಿ ಒಬ್ಬನನ್ನು ರಾಜ್ಯಪಾಲನು ಬಿಡುಗಡೆ ಮಾಡಬೇಕೆಂಬುದು ಅಂದಿನ ಪದ್ಧತಿಯಾಗಿತ್ತು. 16 ಆ ಕಾಲದಲ್ಲಿ ಪ್ರಸಿದ್ಧನಾದ ಕೈದಿಯೊಬ್ಬನು ಸೆರೆಮನೆಯಲ್ಲಿದ್ದನು. ಅವನ ಹೆಸರು ಬರಬ್ಬ.[b]
17 ಜನರೆಲ್ಲರೂ ಪಿಲಾತನ ಭವನದ ಬಳಿ ನೆರೆದಿದ್ದರು. ಪಿಲಾತನು ಅವರಿಗೆ, “ನಾನು ನಿಮಗಾಗಿ ಯಾವ ಕೈದಿಯನ್ನು ಬಿಡುಗಡೆ ಮಾಡಲಿ, ಬರಬ್ಬನನ್ನೋ ಅಥವಾ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು. 18 ಜನರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ಗೊತ್ತಿತ್ತು.
19 ಪಿಲಾತನು ನ್ಯಾಯಸ್ಥಾನದಲ್ಲಿ ಕುಳಿತುಕೊಂಡಿದ್ದಾಗ ಅವನ ಪತ್ನಿಯು ಒಂದು ಸಂದೇಶವನ್ನು ಕಳುಹಿಸಿದ್ದಳು. “ಆ ಮನುಷ್ಯನಿಗೆ ಏನನ್ನೂ ಮಾಡಬೇಡ. ಅವನು ತಪ್ಪಿತಸ್ಥನಲ್ಲ. ಆತನ ನಿಮಿತ್ತ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ” ಎಂಬುದೇ ಆ ಸಂದೇಶ.
20 ಆದರೆ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಬರಬ್ಬನನ್ನು ಬಿಡುಗಡೆ ಮಾಡಬೇಕೆಂದೂ ಯೇಸುವನ್ನು ಕೊಲ್ಲಿಸಬೇಕೆಂದೂ ಕೇಳಿಕೊಳ್ಳಲು ಜನರಿಗೆ ಹೇಳಿಕೊಟ್ಟರು.
21 ಪಿಲಾತನು, “ನಿಮಗಾಗಿ ನಾನು ಯಾರನ್ನು ಬಿಡುಗಡೆ ಮಾಡಲಿ? ಬರಬ್ಬನನ್ನೋ? ಯೇಸುವನ್ನೋ?” ಎಂದು ಕೇಳಿದನು.
ಜನರು “ಬರಬ್ಬನನ್ನು!” ಎಂದು ಉತ್ತರಕೊಟ್ಟರು.
22 ಪಿಲಾತನು, “ಹಾಗಾದರೆ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಿದನು.
ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಉತ್ತರಕೊಟ್ಟರು.
23 ಪಿಲಾತನು, “ಅವನನ್ನು ಶಿಲುಬೆಗೇರಿಸೆಂದು ನೀವು ಕೇಳುವುದೇಕೆ? ಅವನೇನು ತಪ್ಪುಮಾಡಿದ್ದಾನೆ?” ಎಂದು ಕೇಳಿದನು.
ಆದರೆ ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಕೂಗಿದರು.
24 ಜನರ ಮನಸ್ಸನ್ನು ಬದಲಾಯಿಸಲು ತನಗೆ ಸಾಧ್ಯವಿಲ್ಲವೆಂದೂ ಜನರು ಗಲಭೆ ಆರಂಭಿಸಲಿದ್ದಾರೆಂದೂ ತಿಳಿದುಕೊಂಡ ಪಿಲಾತನು ಸ್ವಲ್ಪ ನೀರನ್ನು ತೆಗೆದುಕೊಂಡು ಜನರೆಲ್ಲರ ಎದುರಿನಲ್ಲಿ ತನ್ನ ಕೈಗಳನ್ನು ತೊಳೆದುಕೊಳ್ಳುತ್ತಾ, “ಈ ಮನುಷ್ಯನ ಸಾವಿಗೆ ನಾನು ಜವಾಬ್ದಾರನಲ್ಲ. ಆತನನ್ನು ಶಿಲುಬೆಗೇರಿಸುತ್ತಿರುವವರು ನೀವೇ!” ಎಂದು ಹೇಳಿದನು.
25 ಜನರೆಲ್ಲರೂ, “ಅವನ ಸಾವಿಗೆ ನಾವೇ ಜವಾಬ್ದಾರರು. ಅವನ ಸಾವಿಗೆ ಏನಾದರೂ ದಂಡನೆಯಿದ್ದರೆ ಅದನ್ನು ನಾವು ಮತ್ತು ನಮ್ಮ ಮಕ್ಕಳು ಅನುಭವಿಸುತ್ತೇವೆ” ಎಂದು ಉತ್ತರಕೊಟ್ಟರು.
26 ಆಗ ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊರಡೆಗಳಿಂದ ಹೊಡೆಯಿಸಿ ಶಿಲುಬೆಗೇರಿಸಲು ಸೈನಿಕರಿಗೆ ಒಪ್ಪಿಸಿಬಿಟ್ಟನು.
ಪಿಲಾತನ ಸೈನಿಕರು ಯೇಸುವಿಗೆ ಮಾಡಿದ ಅಪಹಾಸ್ಯ
(ಮಾರ್ಕ 15:16-20; ಯೋಹಾನ 19:2-3)
27 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಸೈನಿಕರೆಲ್ಲರೂ ಯೇಸುವನ್ನು ಸುತ್ತುಗಟ್ಟಿದರು. 28 ಸೈನಿಕರು ಆತನ ಬಟ್ಟೆಗಳನ್ನು ತೆಗೆದುಹಾಕಿ ಆತನಿಗೆ ಒಂದು ಕೆಂಪು ನಿಲುವಂಗಿಯನ್ನು ತೊಡಿಸಿದರು. 29 ಮುಳ್ಳಿನ ಬಳ್ಳಿಯಿಂದ ಒಂದು ಕಿರೀಟವನ್ನು ಹೆಣೆದು ಆತನ ತಲೆಯ ಮೇಲಿಟ್ಟರು. ಆತನ ಬಲಗೈಗೆ ಒಂದು ಕೋಲನ್ನು ಕೊಟ್ಟರು. ಬಳಿಕ ಸೈನಿಕರು ಯೇಸುವಿನ ಮುಂದೆ ಬಾಗಿ, “ಯೆಹೂದ್ಯರ ರಾಜನೇ, ನಮಸ್ಕಾರ” ಎಂದು ಅಪಹಾಸ್ಯ ಮಾಡಿದರು. 30 ಆತನ ಮೇಲೆ ಉಗುಳಿದರು. ಆತನ ಕೈಯಿಂದ ಕೋಲನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದರು. 31 ಹೀಗೆ ಅಪಹಾಸ್ಯ ಮಾಡಿದ ಬಳಿಕ, ಆತನ ನಿಲುವಂಗಿಯನ್ನು ತೆಗೆದುಹಾಕಿ ಆತನ ಬಟ್ಟೆಗಳನ್ನು ಮತ್ತೆ ಆತನಿಗೆ ತೊಡಿಸಿ ಶಿಲುಬೆಗೇರಿಸಲು ಕರೆದೊಯ್ದರು.
ಶಿಲುಬೆಗೇರಿಸಲ್ಪಟ್ಟ ಯೇಸು
(ಮಾರ್ಕ 15:21-32; ಲೂಕ 23:26-43; ಯೋಹಾನ 19:17-27)
32 ಸೈನಿಕರು ಯೇಸುವಿನೊಂದಿಗೆ ನಗರದಿಂದ ಹೊರಕ್ಕೆ ಹೋಗುತ್ತಿರುವಾಗ ಸಿರೇನ ಪಟ್ಟಣದ “ಸಿಮೋನ” ಎಂಬ ವ್ಯಕ್ತಿಯನ್ನು ಕಂಡರು. ಆತನ ಶಿಲುಬೆ ಹೊರುವುದಕ್ಕಾಗಿ ಅವರು ಅವನನ್ನು ಬಲವಂತಪಡಿಸಿದರು. 33 ಅವರು ಗೊಲ್ಗೊಥಾ ಎಂಬ ಸ್ಥಳಕ್ಕೆ ಬಂದರು. (ಗೊಲ್ಗೊಥಾ ಎಂದರೆ “ಕಪಾಲ ಸ್ಥಳ” ಎಂದರ್ಥ.) 34 ಗೊಲ್ಗೊಥಾದಲ್ಲಿ ಸೈನಿಕರು ಆತನಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟರು. ಈ ದ್ರಾಕ್ಷಾರಸಕ್ಕೆ ನೋವು ನಿವಾರಕ ಔಷಧಿಯನ್ನು ಬೆರೆಸಿದ್ದರು. ಆತನು ದ್ರಾಕ್ಷಾರಸದ ರುಚಿ ನೋಡಿ ಅದನ್ನು ಕುಡಿಯಲಿಲ್ಲ.
35 ಸೈನಿಕರು ಆತನನ್ನು ಶಿಲುಬೆಗೆ ಮೊಳೆಗಳಿಂದ ಜಡಿದರು. ನಂತರ ಉಡುಪಿಗಾಗಿ ತಮ್ಮಲ್ಲಿಯೇ ಚೀಟಿಹಾಕಿ ತೆಗೆದುಕೊಂಡರು. 36 ಸೈನಿಕರು ಯೇಸುವನ್ನು ಕಾಯುತ್ತಾ ಅಲ್ಲೇ ಕುಳಿತಿದ್ದರು. 37 ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು. “ಈತನು ಯೇಸು, ಯೆಹೂದ್ಯರ ರಾಜ” ಎಂಬುದೇ ಆ ಅಪರಾಧ.
38 ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದ್ದರು. ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. 39 ದಾರಿಯಲ್ಲಿ ಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, 40 “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆಂದು ಹೇಳುತ್ತಿದ್ದೆ. ಆದರೆ ಈಗ ನಿನ್ನನ್ನು ನೀನೇ ರಕ್ಷಿಸಿಕೊ! ನೀನು ನಿಜವಾಗಿಯೂ ದೇವರ ಮಗನಾಗಿದ್ದರೆ, ಶಿಲುಬೆಯಿಂದ ಕೆಳಗಿಳಿದು ಬಾ!” ಎಂದು ಹಾಸ್ಯಮಾಡಿದರು.
41 ಮಹಾಯಾಜಕರೂ ಧರ್ಮೋಪದೇಶಕರೂ ಮತ್ತು ಹಿರಿಯ ಯೆಹೂದ್ಯ ನಾಯಕರೂ ಅಲ್ಲಿದ್ದರು. ಇವರು ಸಹ ಇತರ ಜನರಂತೆ ಯೇಸುವನ್ನು ಗೇಲಿ ಮಾಡಿದರು. 42 “ಇವನು ಬೇರೆಯವರನ್ನು ರಕ್ಷಿಸಿದನು. ಆದರೆ ತನ್ನನ್ನು ರಕ್ಷಿಸಿಕೊಳ್ಳಲಾರ! ಇಸ್ರೇಲರ ರಾಜ ಎಂದು ಜನ ಹೇಳುತ್ತಾರೆ. ಇವನು ರಾಜನಾಗಿದ್ದರೆ ಶಿಲುಬೆಯಿಂದ ಕೆಳಗಿಳಿದು ಬರಲಿ. ಆಗ ನಾವು ಇವನನ್ನು ನಂಬುತ್ತೇವೆ. 43 ಇವನು ದೇವರನ್ನು ನಂಬಿದ್ದನು. ಈಗ ದೇವರಿಗೆ ನಿಜವಾಗಿಯೂ ಇವನು ಬೇಕಿದ್ದರೆ, ದೇವರೇ ಇವನನ್ನು ಕಾಪಾಡಲಿ. ‘ನಾನು ದೇವರ ಮಗನು’ ಎಂದು ಇವನೇ ಹೇಳಿಕೊಂಡನಲ್ಲಾ” ಎಂದು ಅವರು ಹೇಳಿದರು. 44 ಅದೇ ರೀತಿಯಲ್ಲಿ ಯೇಸುವಿನ ಎಡಬಲಗಳಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ನಿಂದಿಸಿದರು.
ಯೇಸುವಿನ ಮರಣ
(ಮಾರ್ಕ 15:33-41; ಲೂಕ 23:44-49; ಯೋಹಾನ 19:28-30)
45 ಅಂದು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯವರೆಗೆ ದೇಶದಲ್ಲೆಲ್ಲಾ ಕತ್ತಲೆ ಕವಿಯಿತು. 46 ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸು, “ಏಲೀ, ಏಲೀ, ಲಮಾ ಸಬಕ್ತಾನಿ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದನು. ಹೀಗೆಂದರೆ, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟುಬಿಟ್ಟೆ?”(A) ಎಂದರ್ಥ.
47 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದರು.
48 ಆ ಜನರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು, ಅದರಲ್ಲಿ ಹುಳಿರಸವನ್ನು ತುಂಬಿಸಿ, ಅದನ್ನು ಒಂದು ಕೋಲಿಗೆ ಕಟ್ಟಿ ಆ ಕೋಲಿನಿಂದ ಸ್ಪಂಜನ್ನು ಯೇಸುವಿಗೆ ಕುಡಿಯಲು ಕೊಟ್ಟನು. 49 ಆದರೆ ಇತರ ಜನರು, “ಅವನ ಬಗ್ಗೆ ಚಿಂತಿಸಬೇಡ, ಅವನನ್ನು ರಕ್ಷಿಸಲು ಎಲೀಯನು ಬರಬಹುದೇನೋ ನೋಡೋಣ” ಎಂದು ಹೇಳಿದರು.
50 ಬಳಿಕ ಯೇಸು ಮತ್ತೆ ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಪ್ರಾಣಬಿಟ್ಟನು.
51 ಆಗ ದೇವಾಲಯದ ತೆರೆಯು ಮೇಲ್ಗಡೆಯಿಂದ ತಳಭಾಗದವರೆಗೂ ಹರಿದು ಎರಡು ಭಾಗವಾಯಿತು. ಭೂಮಿಯು ನಡುಗಿತು. ಬಂಡೆಗಳು ಒಡೆದುಹೋದವು. 52 ಸಮಾಧಿಗಳು ತೆರೆದವು, ಸತ್ತುಹೋಗಿದ್ದ ಅನೇಕ ದೇವಜನರು ಸಮಾಧಿಗಳೊಳಗಿಂದ ಜೀವಂತವಾಗಿ ಮೇಲೆದ್ದರು. 53 ಯೇಸು ಪುನರುತ್ಥಾನ ಹೊಂದಿದ ಬಳಿಕ, ಅವರು ಪವಿತ್ರ ನಗರವಾದ ಜೆರುಸಲೇಮಿಗೆ ಹೋದರು. ಜನರು ಅವರನ್ನು ಕಣ್ಣಾರೆ ಕಂಡರು.
54 ಯೇಸುವನ್ನು ಕಾಯುತ್ತಿದ್ದ ಸೇನಾಧಿಪತಿ ಮತ್ತು ಸೈನಿಕರು ಭೂಕಂಪವನ್ನು ಮತ್ತು ನಡೆದದ್ದನ್ನು ಕಂಡು ಬಹಳವಾಗಿ ಹೆದರಿ, “ಈತನು ನಿಜವಾಗಿಯೂ ದೇವರ ಮಗನಾಗಿದ್ದನು!” ಎಂದು ಹೇಳಿದರು.
55 ಯೇಸುವಿನ ಸೇವೆ ಮಾಡುತ್ತಾ ಗಲಿಲಾಯದಿಂದ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಅನೇಕ ಸ್ತ್ರೀಯರು ದೂರದಲ್ಲಿ ನೋಡುತ್ತಾ ನಿಂತಿದ್ದರು. 56 ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೇಫನ ತಾಯಿಯಾದ ಮರಿಯಳು, ಹಾಗೂ ಯೋಹಾನ ಮತ್ತು ಯಾಕೋಬನ ತಾಯಿ ಅಲ್ಲಿದ್ದರು.
ಯೇಸುವಿನ ಸಮಾಧಿ
(ಮಾರ್ಕ 15:42-47; ಲೂಕ 23:50-56; ಯೋಹಾನ 19:38-42)
57 ಆ ಸಂಜೆ ಯೋಸೇಫ ಎಂಬ ಶ್ರೀಮಂತ ವ್ಯಕ್ತಿ ಜೆರುಸಲೇಮಿಗೆ ಬಂದನು. ಅರಿಮತಾಯ ಪಟ್ಟಣದವನಾದ ಇವನು ಯೇಸುವಿನ ಶಿಷ್ಯನಾಗಿದ್ದನು. 58 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಕೇಳಿದನು. ಯೇಸುವಿನ ದೇಹವನ್ನು ಯೋಸೇಫನಿಗೆ ಕೊಡುವಂತೆ ಪಿಲಾತನು ಸೈನಿಕರಿಗೆ ಅಪ್ಪಣೆ ಮಾಡಿದನು. 59 ಯೋಸೇಫನು ಆತನ ದೇಹವನ್ನು ತೆಗೆದುಕೊಂಡು, ಅದನ್ನು ಹೊಸ ನಾರುಮಡಿಯ ಬಟ್ಟೆಯಿಂದ ಸುತ್ತಿ 60 ಬಂಡೆಯಲ್ಲಿ ತಾನು ತೋಡಿಸಿದ್ದ ಹೊಸ ಸಮಾಧಿಯಲ್ಲಿ ಇಟ್ಟನು. ಸಮಾಧಿಯ ಬಾಗಿಲಿಗೆ ಒಂದು ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು. 61 ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಯ ಹತ್ತಿರ ಕುಳಿತುಕೊಂಡಿದ್ದರು.
ಯೇಸುವಿನ ಸಮಾಧಿಗೆ ಕಾವಲು
62 ಶುಕ್ರವಾರ ಮುಗಿದ ಮೇಲೆ ಮಹಾಯಾಜಕರು ಮತ್ತು ಫರಿಸಾಯರು ಪಿಲಾತನ ಬಳಿಗೆ ಹೋಗಿ, 63 “ಸ್ವಾಮೀ, ಆ ಸುಳ್ಳುಗಾರನು ಬದುಕಿದ್ದಾಗ, ‘ಮೂರು ದಿನಗಳ ಬಳಿಕ ನಾನು ಪುನರುತ್ಥಾನ ಹೊಂದುತ್ತೇನೆ’ ಎಂದು ಹೇಳಿದ್ದು ನಮಗಿನ್ನೂ ನೆನಪಿದೆ. 64 ಆದ್ದರಿಂದ ಮೂರು ದಿನಗಳವರೆಗೆ ಆ ಸಮಾಧಿಯನ್ನು ಭದ್ರವಾಗಿ ಕಾಯಲು ಆಜ್ಞಾಪಿಸಿರಿ. ಅವನ ಶಿಷ್ಯರು ಬಂದು, ಅವನ ದೇಹವನ್ನು ಕದ್ದುಕೊಂಡು ಹೋಗಿ, ಅವನು ಸಮಾಧಿಯಿಂದ ಮೇಲೆದ್ದಿದ್ದಾನೆ ಎಂದು ಜನರಿಗೆ ಹೇಳಬಹುದು. ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡು ಮೋಸವಾದೀತು” ಎಂದು ಹೇಳಿದರು.
65 ಪಿಲಾತನು, “ಕೆಲವು ಸೈನಿಕರನ್ನು ಕರೆದುಕೊಂಡು ಹೋಗಿ, ನಿಮಗೆ ಬೇಕಾದ ರೀತಿಯಲ್ಲಿ ಸಮಾಧಿಯನ್ನು ಭದ್ರಪಡಿಸಿರಿ” ಎಂದು ಹೇಳಿದನು. 66 ಅವರು ಹೋಗಿ, ಸಮಾಧಿಗೆ ಮುದ್ರೆ ಹಾಕಿ, ಸೈನಿಕರನ್ನು ಕಾವಲಿರಿಸಿ, ಸಮಾಧಿಯನ್ನು ಸುಭದ್ರಪಡಿಸಿದರು.
Kannada Holy Bible: Easy-to-Read Version. All rights reserved. © 1997 Bible League International