Add parallel Print Page Options

ಯೇಸುವಿಗೆ ಮರಣದಂಡನೆ

(ಮತ್ತಾಯ 27:15-26; ಮಾರ್ಕ 15:6-15; ಯೋಹಾನ 18:39–19:16)

13 ಪಿಲಾತನು ಮಹಾಯಾಜಕರನ್ನೂ ಯೆಹೂದ್ಯನಾಯಕರನ್ನೂ ಇತರ ಜನರನ್ನೂ ಒಟ್ಟಾಗಿ ಕರೆಸಿ, 14 ಅವರಿಗೆ, “ನೀವು ಈ ಮನುಷ್ಯನನ್ನು (ಯೇಸುವನ್ನು) ನನ್ನ ಬಳಿಗೆ ಕರೆದುಕೊಂಡು ಬಂದಿರಿ. ಇವನು ಜನರನ್ನು ತಪ್ಪುದಾರಿಗೆ ನಡೆಸುತ್ತಿದ್ದಾನೆ ಎಂದು ಹೇಳಿದಿರಿ. ಆದರೆ ನಾನು ನಿಮ್ಮೆಲ್ಲರ ಮುಂದೆ ಇವನನ್ನು ವಿಚಾರಣೆ ಮಾಡಿದೆನು. ಆದರೆ ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ನಿಮ್ಮ ದೋಷಾರೋಪಣೆಗಳು ಇವನಿಗೆ ಅನ್ವಯಿಸುವುದಿಲ್ಲ. 15 ಇದಲ್ಲದೆ ಹೆರೋದನು ಸಹ ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಹೆರೋದನು ಯೇಸುವನ್ನು ನಮ್ಮ ಬಳಿಗೆ ಮತ್ತೆ ಕಳುಹಿಸಿದನು. ನೋಡಿರಿ, ಯೇಸು ಯಾವ ತಪ್ಪನ್ನೂ ಮಾಡಿಲ್ಲ. ಅವನಿಗೆ ಮರಣದಂಡನೆ ಆಗಬಾರದು. 16 ಆದ್ದರಿಂದ ನಾನು ಇವನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು. 17 [a]

18 ಆದರೆ ಜನರೆಲ್ಲರೂ, “ಅವನನ್ನು ಕೊಲ್ಲಿಸು! ಬರಬ್ಬನನ್ನು ಬಿಟ್ಟುಕೊಡು” ಎಂದು ಕೂಗಿದರು. 19 (ಬರಬ್ಬನು ಪಟ್ಟಣದಲ್ಲಿ ದಂಗೆ ಎಬ್ಬಿಸಿದ್ದರಿಂದ ಸೆರೆಮನೆಯಲ್ಲಿದ್ದನು. ಅವನು ಕೆಲವು ಜನರನ್ನು ಕೊಂದಿದ್ದನು.)

20 ಪಿಲಾತನು ಯೇಸುವನ್ನು ಬಿಡಿಸಬೇಕೆಂದಿದ್ದನು. ಆದ್ದರಿಂದ ಯೇಸುವನ್ನು ಬಿಟ್ಟುಬಿಡೋಣ ಎಂದು ಪಿಲಾತನು ಮತ್ತೆ ಅವರಿಗೆ ಹೇಳಿದನು. 21 ಆದರೆ ಅವರು ಮತ್ತೆ, “ಅವನನ್ನು ಕೊಲ್ಲಿಸು! ಅವನನ್ನು ಶಿಲುಬೆಗೇರಿಸು!” ಎಂದು ಕೂಗಿದರು.

22 ಮೂರನೇ ಸಲ ಪಿಲಾತನು ಜನರಿಗೆ, “ಏಕೆ? ಆತನು ಏನು ತಪ್ಪುಮಾಡಿದನು? ಆತನು ತಪ್ಪಿತಸ್ಥನಲ್ಲ. ಆತನನ್ನು ಕೊಲ್ಲಿಸುವುದಕ್ಕೆ ನನಗೆ ಯಾವ ಕಾರಣವೂ ಕಾಣಿಸುವುದಿಲ್ಲ. ಆದ್ದರಿಂದ ಆತನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು.

23 ಆದರೆ ಅವರು ಕೂಗಾಟವನ್ನು ಮುಂದುವರಿಸಿ ಯೇಸುವನ್ನು ಶಿಲುಬೆಗೆ ಹಾಕಿ ಕೊಲ್ಲಿಸಬೇಕೆಂದು ಬಲವಂತಪಡಿಸಿದರು. ಅವರ ಕೂಗಾಟ ಬಹಳ ಹೆಚ್ಚಾದದ್ದರಿಂದ, 24 ಪಿಲಾತನು ಅವರ ಬಯಕೆಯನ್ನು ಈಡೇರಿಸಲು ನಿರ್ಧರಿಸಿದನು. 25 ಬರಬ್ಬನನ್ನು ಬಿಡುಗಡೆ ಮಾಡಬೇಕೆಂದು ಜನರು ಕೇಳಿಕೊಂಡರು. ದಂಗೆ ಎಬ್ಬಿಸಿದ್ದರಿಂದ ಮತ್ತು ಕೊಲೆಮಾಡಿದ್ದರಿಂದ ಬರಬ್ಬನು ಸೆರೆಮನೆಯಲ್ಲಿದ್ದನು. ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊಲ್ಲಿಸುವುದಕ್ಕೆ ಜನರಿಗೆ ಒಪ್ಪಿಸಿದನು. ಜನರ ಬಯಕೆಯೂ ಇದೇ ಆಗಿತ್ತು.

Read full chapter

Footnotes

  1. 23:17 ಕೆಲವು ಗ್ರೀಕ್ ಪ್ರತಿಗಳಲ್ಲಿ 17ನೇ ವಚನವನ್ನು ಸೇರಿಸಲಾಗಿದೆ. ಅದರಲ್ಲಿ, “ಪ್ರತಿವರ್ಷ ಪಸ್ಕಹಬ್ಬದ ಸಮಯದಲ್ಲಿ ಪಿಲಾತನು ಜನರಿಗೆ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕಾಗಿತ್ತು” ಎಂದು ಬರೆದದೆ.