Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಪ್ರಸಂಗಿ 5-8

ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ

ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ. ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ:

“ಅನೇಕ ಚಿಂತೆಗಳಿಂದ ದುಸ್ವಪ್ನಗಳಾಗುವಂತೆ
    ಮೂಢನು ಅನೇಕ ಮಾತುಗಳನ್ನಾಡುವನು.”

ನೀವು ಹರಕೆ ಮಾಡಿಕೊಂಡರೆ ತಡಮಾಡದೆ ಅದನ್ನು ನೆರವೇರಿಸಿ. ಮೂಢರ ವಿಷಯದಲ್ಲಿ ದೇವರಿಗೆ ಸಂತೋಷವಿಲ್ಲ. ನೀವು ದೇವರಿಗೆ ಹರಕೆ ಮಾಡಿಕೊಂಡದ್ದನ್ನು ಸಲ್ಲಿಸಿರಿ. ಹರಕೆ ಮಾಡಿ ಸಲ್ಲಿಸದಿರುವುದಕ್ಕಿಂತ ಹರಕೆ ಮಾಡದಿರುವುದೇ ಉತ್ತಮ. ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು. ಉಪಯೋಗವಿಲ್ಲದ ನಿಮ್ಮ ಕನಸುಗಳಾಗಲಿ ಜಂಬದ ಮಾತುಗಳಾಗಲಿ ನಿಮ್ಮನ್ನು ಕೇಡಿಗೆ ನಡೆಸದಂತೆ ನೋಡಿಕೊಳ್ಳಿರಿ; ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.

ಯಾವನೂ ಸರ್ವಾಧಿಪತಿಯಲ್ಲ

ದೇಶದಲ್ಲಿ ಬಡವರಿಂದ ಬಲವಂತ ಸೇವೆಮಾಡಿಸುವುದನ್ನು ಕಂಡು ಅವರಿಗೆ ಅನ್ಯಾಯವಾಗಿದೆಯೆಂದೂ ಹಕ್ಕಿಗೆ ಚ್ಯುತಿಯಾಗಿದೆಯೆಂದೂ ಆಶ್ಚರ್ಯಪಡಬೇಡಿ. ಅವರಿಂದ ಬಲವಂತವಾಗಿ ದುಡಿಸುವ ಅಧಿಪತಿಗೆ ಬಲವಂತದಿಂದ ದುಡಿಸುವ ಮತ್ತೊಬ್ಬ ಅಧಿಪತಿಯಿರುವನು. ಈ ಇಬ್ಬರು ಅಧಿಪತಿಗಳಿಗೂ ಮತ್ತೊಬ್ಬ ಅಧಿಪತಿಯಿರುವನು. ರಾಜನು ಸಹ ಸೇವಕನಾಗಿದ್ದಾನೆ; ಅವನ ದೇಶವು ಅವನನ್ನು ಗಳಿಸಿಕೊಂಡಿದೆ.

ಐಶ್ವರ್ಯವು ಸಂತೋಷವನ್ನು ಖರೀದಿ ಮಾಡಲಾರದು

10 ಹಣದಾಸೆಯುಳ್ಳವನು ತನ್ನಲ್ಲಿ ಎಷ್ಟೇ ಹಣವಿದ್ದರೂ ತೃಪ್ತನಾಗಲಾರನು. ಐಶ್ವರ್ಯದಾಸೆಯುಳ್ಳವನು ಎಷ್ಟೇ ಸಂಪಾದಿಸಿದರೂ ತೃಪ್ತನಾಗುವುದಿಲ್ಲ. ಇದು ಸಹ ವ್ಯರ್ಥ.

11 ಐಶ್ವರ್ಯ ಹೆಚ್ಚಿದಂತೆಲ್ಲಾ “ಅನುಭವಿಸುವವರ” ಸಂಖ್ಯೆಯೂ ಹೆಚ್ಚುವುದು. ಐಶ್ವರ್ಯವಂತನು ಅದನ್ನು ಕಣ್ಣಿಂದ ನೋಡಬಹುದಷ್ಟೇ ಹೊರತು ಬೇರೆ ಯಾವ ಲಾಭವೂ ಅವನಿಗಿಲ್ಲ.

12 ದಿನವೆಲ್ಲಾ ಪ್ರಯಾಸಪಟ್ಟು ದುಡಿಯುವವನು ಸಮಾಧಾನದಿಂದ ಮಲಗಿಕೊಳ್ಳುವನು. ಅವನಿಗೆ ತಿನ್ನಲು ಸ್ವಲ್ಪವೇ ಇರಲಿ ಅಥವಾ ಹೆಚ್ಚೇ ಇರಲಿ, ಅದು ಮುಖ್ಯವಲ್ಲ. ಐಶ್ವರ್ಯವಂತನಿಗಾದರೋ ತನ್ನ ಸಂಪತ್ತಿನ ಕುರಿತು ಚಿಂತಿಸುತ್ತಾ ನಿದ್ರಿಸಲಾರನು.

13 ಈ ಲೋಕದಲ್ಲಿ ದುರ್ಗತಿಯೊಂದನ್ನು ನೋಡಿದ್ದೇನೆ. ಒಬ್ಬನು ತನ್ನ ಭವಿಷ್ಯತ್ತಿಗಾಗಿ ಹಣವನ್ನು ಕೂಡಿಡುತ್ತಾನೆ. 14 ಬಳಿಕ ಅವನು ಯಾವುದೋ ಕೇಡಿಗೆ ಗುರಿಯಾಗಿ ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು; ಕೊನೆಯಲ್ಲಿ ತನ್ನ ಮಗನಿಗೆ ಕೊಡಲು ಅವನಲ್ಲಿ ಏನೂ ಉಳಿದಿರುವುದಿಲ್ಲ.

15 ಮನುಷ್ಯನು ತಾಯಿಯ ಗರ್ಭದಿಂದ ಬರಿದಾಗಿ ಈ ಲೋಕಕ್ಕೆ ಬರುವನು; ಸಾಯುವಾಗ ಅದೇ ರೀತಿ ಬರಿದಾಗಿ ಹೋಗುವನು; ತಾನು ಪ್ರಯಾಸಪಟ್ಟು ಸಂಪಾದಿಸಿದವುಗಳಲ್ಲಿ ಒಂದನ್ನೂ ಅವನು ತನ್ನೊಡನೆ ತೆಗೆದುಕೊಂಡು ಹೋಗಲಾರನು. 16 ಅದು ಸಹ ತುಂಬ ದುಃಖಕರ. ಅವನು ಬಂದ ರೀತಿಯಲ್ಲಿಯೇ ಈ ಲೋಕವನ್ನು ಬಿಟ್ಟುಹೋಗುವನು. “ಗಾಳಿಯನ್ನು ಹಿಂದಟ್ಟುವುದರಿಂದ” ಅವನಿಗಾಗುವ ಪ್ರಯೋಜನವೇನು? 17 ಅವನ ಜೀವಮಾನವೆಲ್ಲಾ ವ್ಯಸನದಿಂದಲೂ ದುಃಖದಿಂದಲೂ ಕೂಡಿದೆ. ನಿರಾಶೆಯೂ ಕಾಯಿಲೆಯೂ ಕೋಪವೂ ಅವನನ್ನು ಕಾಡುತ್ತಲೇ ಇರುತ್ತವೆ.

ನಿನ್ನ ಜೀವನದ ಕೆಲಸದಲ್ಲಿ ಆನಂದಿಸು

18 ನಾನು ಕಂಡುಕೊಂಡದ್ದೇನೆಂದರೆ, ಒಬ್ಬನು ತನ್ನ ಅಲ್ಪಕಾಲದ ಜೀವಮಾನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದೇ ಅವನಿಗೆ ಮೇಲು. ಇದೇ ಅವನ ಪಾಲು.

19 ದೇವರು ಒಬ್ಬನಿಗೆ ಐಶ್ವರ್ಯವನ್ನೂ ಆಸ್ತಿಯನ್ನೂ ಮತ್ತು ಅವುಗಳನ್ನು ಅನುಭವಿಸುವ ಭಾಗ್ಯವನ್ನೂ ಕೊಟ್ಟಿದ್ದರೆ ಅವನು ಅವುಗಳನ್ನು ಅನುಭವಿಸಲಿ. ಅವನು ತನಗಿರುವಂಥವುಗಳನ್ನು ಹೊಂದಿಕೊಂಡು ತನ್ನ ದುಡಿಮೆಯಲ್ಲಿ ಸಂತೋಷಿಸಲಿ. ಅದು ದೇವರ ಅನುಗ್ರಹವಷ್ಟೇ. 20 ತನ್ನ ಜೀವಿತವು ಅಲ್ಪಕಾಲದ್ದೆಂದು ಅವನು ನೆನಪುಮಾಡಿಕೊಳ್ಳಬೇಕು. ಯಾಕೆಂದರೆ ಅವನನ್ನು ಅವನಿಗೆ ಇಷ್ಟವಾದ ಕೆಲಸದಲ್ಲಿ ನಿರತನನ್ನಾಗಿ ಮಾಡಿರುವಾತನು ದೇವರೇ.

ಐಶ್ವರ್ಯವು ಸಂತೋಷವನ್ನು ಕೊಡಲಾರದು

ಈ ಲೋಕದಲ್ಲಿ ಮತ್ತೊಂದು ಅನ್ಯಾಯವನ್ನು ಕಂಡಿದ್ದೇನೆ. ಅದನ್ನು ಗ್ರಹಿಸಿಕೊಳ್ಳುವುದಕ್ಕೂ ಕಷ್ಟ. ದೇವರು ಒಬ್ಬನಿಗೆ ಐಶ್ವರ್ಯವನ್ನು, ಆಸ್ತಿಪಾಸ್ತಿಯನ್ನು ಮತ್ತು ಘನತೆಯನ್ನು ಕೊಡುವನು. ಅವನು ತನಗೆ ಈಗ ಬೇಕಾಗಿರುವ ಮತ್ತು ಮುಂದೆ ಬೇಕಾಗುವ ಎಲ್ಲವನ್ನೂ ಹೊಂದಿರುವನು. ಆದರೆ ಅವುಗಳನ್ನು ಅನುಭವಿಸಲು ದೇವರು ಅವನಿಗೆ ಅವಕಾಶಕೊಡುವುದಿಲ್ಲ. ಮತ್ತೊಬ್ಬನು ಬಂದು ಎಲ್ಲವನ್ನೂ ತೆಗೆದುಕೊಳ್ಳುವನು. ಇದು ಸಹ ತುಂಬ ಕೆಟ್ಟದ್ದೂ ಅರ್ಥವಿಲ್ಲದ್ದೂ ಆಗಿದೆ.

ಒಬ್ಬನು ಬಹುಕಾಲ ಬದುಕಬಹುದು. ಅವನಿಗೆ ನೂರು ಮಂದಿ ಮಕ್ಕಳಿರಬಹುದು. ಆದರೆ ಅವನಿಗೆ ಸುಖತೃಪ್ತಿಯೂ ಸತ್ತ ಮೇಲೆ ಉತ್ತರಕ್ರಿಯೆಯೂ ಇಲ್ಲದಿದ್ದರೆ ಹುಟ್ಟುವಾಗಲೇ ಸಾಯುವ ಮಗು ಅವನಿಗಿಂತಲೂ ಉತ್ತಮ. ಮಗುವು ಹುಟ್ಟುವಾಗಲೇ ಸತ್ತುಹೋದರೆ ಅದಕ್ಕೆ ನಿಜವಾಗಿಯೂ ಅರ್ಥವಿಲ್ಲ. ಅದು ಹೆಸರನ್ನೂ ಹೊಂದಿಲ್ಲದೆ ಕತ್ತಲೆಯ ಗುಂಡಿಯಲ್ಲಿ ಹೂಳಲ್ಪಡುವುದು. ಅದು ಸೂರ್ಯನನ್ನು ನೋಡಲೇ ಇಲ್ಲ. ಅದಕ್ಕೆ ತಿಳಿವಳಿಕೆಯೂ ಇಲ್ಲ. ಆದರೆ ದೇವರು ಅನುಗ್ರಹಿಸಿದವುಗಳಲ್ಲಿ ಸಂತೋಷಪಡದವನಿಗಿಂತ ಆ ಮಗುವೇ ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳುವುದು. ಅವನು ಎರಡು ಸಾವಿರ ವರ್ಷಗಳ ಕಾಲ ಬದುಕಿಯೂ ಜೀವನದಲ್ಲಿ ಸಂತೋಷಪಡದಿದ್ದರೆ ಏನು ಪ್ರಯೋಜನ? ಆ ಮಗುವೂ ಅವನೂ ಕತ್ತಲೆ ಗುಂಡಿಗೇ ಹೋಗುವರು.

ಮನುಷ್ಯನು ದುಡಿಯುವುದೆಲ್ಲಾ ಊಟಕ್ಕಾಗಿಯೇ. ಆದರೂ ಅವನಿಗೆ ತೃಪ್ತಿಯೇ ಇಲ್ಲ. ಆದ್ದರಿಂದ ಜ್ಞಾನಿಯು ಮೂಢನಿಗಿಂತ ಉತ್ತಮನಲ್ಲ. ಬಡವರಾಗಿದ್ದರೂ ಜೀವನವನ್ನು ಅರ್ಥಮಾಡಿಕೊಂಡು ಜೀವಿಸುವುದೇ ಮೇಲು, ದುರಾಶೆಪಡುವುದಕ್ಕಿಂತ ಇರುವುದರಲ್ಲಿ ಸಂತೋಷಪಡುವುದೇ ಉತ್ತಮ. ದುರಾಶೆಯಿಂದ ಪ್ರಯೋಜನವಿಲ್ಲ. ಅದು ಸಹ ಗಾಳಿಯನ್ನು ಹಿಂದಟ್ಟಿದಂತಿದೆ.

10-11 ಮನುಷ್ಯನು ಕೇವಲ ಮನುಷ್ಯನಾಗಿ ಸೃಷ್ಟಿಸಲ್ಪಟ್ಟಿದ್ದಾನೆ. ಅದರ ಬಗ್ಗೆ ವಾದಮಾಡುವುದರಿಂದ ಉಪಯೋಗವಿಲ್ಲ. ಅಲ್ಲದೆ ಮನುಷ್ಯನು ದೇವರೊಂದಿಗೆ ವಾದಮಾಡಲಾರನು. ಯಾಕೆಂದರೆ ದೇವರು ಮನುಷ್ಯನಿಗಿಂತಲೂ ಬಲಿಷ್ಠನಾಗಿದ್ದಾನೆ. ಆದ್ದರಿಂದ ವಾದವು ಕೇವಲ ನಿರರ್ಥಕವಾಗಿದೆ.

12 ಮನುಷ್ಯನ ಅಲ್ಪಕಾಲದ ಜೀವನದಲ್ಲಿ ಅವನಿಗೆ ಯಾವುದು ಉತ್ತಮವೆಂದು ಯಾರಿಗೆ ಗೊತ್ತು? ಅವನ ಜೀವನವು ನೆರಳಿನಂತೆ ಕಳೆದುಹೋಗುವುದು. ಮುಂದೆ ಏನಾಗುವುದೆಂದು ಯಾರೂ ಅವನಿಗೆ ಹೇಳಲಾರರು.

ಜ್ಞಾನೋಪದೇಶಗಳ ಭಂಡಾರ

ಸುಗಂಧತೈಲಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ.
    ಜನನ ದಿನಕ್ಕಿಂತಲೂ ಮರಣ ದಿನವೇ ಉತ್ತಮ.
ಔತಣಕೂಟಕ್ಕೆ ಹೋಗುವುದಕ್ಕಿಂತ ಶವಸಂಸ್ಕಾರಕ್ಕೆ ಹೋಗುವುದು ಇನ್ನೂ ಉತ್ತಮ.
ಯಾಕೆಂದರೆ ಎಲ್ಲರೂ ಒಂದು ದಿನ ಸಾಯಲೇಬೇಕು.
    ಸಾವನ್ನು ಕಂಡ ಪ್ರತಿಯೊಬ್ಬನು ಇದನ್ನು ಸ್ಮರಿಸಿಕೊಳ್ಳುವನು.
ನಗುವಿಗಿಂತ ವ್ಯಸನವು ಇನ್ನೂ ಉತ್ತಮ.
    ಯಾಕೆಂದರೆ ನಮ್ಮ ಮುಖವು ವ್ಯಸನದಿಂದಿರುವಾಗ ನಮ್ಮ ಹೃದಯಕ್ಕೆ ಒಳ್ಳೆಯದಾಗುವುದು.
ಜ್ಞಾನಿಯು ಮರಣದ ಬಗ್ಗೆ ಆಲೋಚಿಸುವನು;
    ಮೂಢನಾದರೋ ಉಲ್ಲಾಸ ಸಮಯದ ಬಗ್ಗೆ ಆಲೋಚಿಸುವನು.
ಮೂಢರ ಹೊಗಳಿಕೆಗಿಂತ
    ಜ್ಞಾನಿಗಳ ಗದರಿಕೆಯೇ ಉತ್ತಮ.
ಮೂಢರ ನಗು ಉಪಯೋಗವಿಲ್ಲದ್ದು.
    ಅದು ಮಡಕೆಯ ಕೆಳಗೆ ಚಟಪಟನೆ ಉರಿದುಹೋಗುವ ಮುಳ್ಳುಕಡ್ಡಿಯಂತಿದೆ.
ಹಣವು ಜ್ಞಾನಿಯನ್ನೂ ಮೂರ್ಖನನ್ನಾಗಿ ಮಾಡುವುದು.
    ಲಂಚವು ಅವನ ವಿವೇಕವನ್ನು ಕೆಡಿಸುವುದು.
ಆರಂಭಿಸುವ ಸಮಯಕ್ಕಿಂತಲೂ
    ಪೂರ್ಣಗೊಳಿಸುವ ಸಮಯವೇ ಮೇಲು.
ಗರ್ವಕ್ಕಿಂತಲೂ ತಾಳ್ಮೆಯೇ ಉತ್ತಮ.
ಮುಂಗೋಪಿಯಾಗಿರಬೇಡ.
    ಯಾಕೆಂದರೆ ಕೋಪವು ಕೇವಲ ಮೂಢತನ.
10 “ಈ ಕಾಲಕ್ಕಿಂತ ‘ಹಿಂದಿನ ಕಾಲವೇ’ ಚೆನ್ನಾಗಿತ್ತಲ್ಲವೇ?” ಎನ್ನಬೇಡ.
    ಅದು ಜ್ಞಾನವುಳ್ಳವರ ಪ್ರಶ್ನೆಯಲ್ಲ.

11 ನಿನಗೆ ಆಸ್ತಿಯಿದ್ದರೆ ಜ್ಞಾನವು ಮತ್ತಷ್ಟು ಉಪಯುಕ್ತವಾಗಿದೆ. ನಿಜವಾಗಿಯೂ ಜ್ಞಾನಿಗಳು ಐಶ್ವರ್ಯವನ್ನು ಹೇರಳವಾಗಿ ಪಡೆದುಕೊಳ್ಳುವರು. 12 ಜ್ಞಾನಿಯು ಐಶ್ವರ್ಯವಂತನಾಗುವನು; ಜ್ಞಾನವು ತನ್ನ ಯಜಮಾನನನ್ನು ನೋಡಿಕೊಳ್ಳುವುದು.

13 ದೇವರ ಕಾರ್ಯಗಳನ್ನು ನೋಡು. ಆತನು ಸೊಟ್ಟಗೆ ಮಾಡಿದ್ದನ್ನು ನೆಟ್ಟಗೆ ಮಾಡಲು ಯಾರಿಗೆ ಸಾಧ್ಯ? 14 ಸುಖದ ದಿನಗಳಲ್ಲಿ ಸಂತೋಷಿಸು. ದುಃಖದ ದಿನಗಳಲ್ಲಿ, ಸುಖದುಃಖಗಳನ್ನು ಕೊಡುವವನು ದೇವರೇ ಎಂಬುದನ್ನು ಜ್ಞಾಪಿಸಿಕೊ. ಮುಂದೆ ಏನಾಗುವುದೋ ಯಾರಿಗೂ ಗೊತ್ತಿಲ್ಲ.

ಪಾಪವನ್ನೇ ಮಾಡದವರಿಲ್ಲ

15 ನನ್ನ ಅಲ್ಪಕಾಲದ ಜೀವನದಲ್ಲಿ ನಾನು ಪ್ರತಿಯೊಂದನ್ನೂ ನೋಡಿದ್ದೇನೆ. ನೀತಿವಂತರು ಯೌವನ ಪ್ರಾಯದಲ್ಲಿ ಸಾಯುವುದನ್ನೂ ನೋಡಿದ್ದೇನೆ. ದುಷ್ಟರು ಬಹುಕಾಲ ಬದುಕುವುದನ್ನೂ ನೋಡಿದ್ದೇನೆ. 16-17 ಆದ್ದರಿಂದ ನೀನು ನಿನ್ನನ್ನೇ ಯಾಕೆ ನಾಶಮಾಡಿಕೊಳ್ಳುವೆ? ಬಹಳ ನೀತಿವಂತನಾಗಿಯೂ ಇರಬೇಡ; ಬಹಳ ಕೆಟ್ಟವನಾಗಿಯೂ ಇರಬೇಡ. ಬಹು ಜ್ಞಾನಿಯಾಗಿಯೂ ಇರಬೇಡ; ಬಹು ಮೂಢನಾಗಿಯೂ ಇರಬೇಡ. ನಿನ್ನ ಕಾಲಕ್ಕಿಂತ ಮೊದಲೇ ನೀನು ಯಾಕೆ ಸಾಯಬೇಕು?

18 ಇವೆರಡರಲ್ಲಿಯೂ ಮಿತವಾಗಿರಬೇಕು. ದೇವಭಕ್ತರಲ್ಲಿ ಇವೆರಡೂ ಅತಿಯಾಗಿರುವುದಿಲ್ಲ. 19-20 ಒಳ್ಳೆಯದನ್ನೇ ಮಾಡುವ ಮತ್ತು ಪಾಪವನ್ನೇ ಮಾಡದ ನೀತಿವಂತನು ಭೂಮಿಯ ಮೇಲೆ ಇಲ್ಲವೇ ಇಲ್ಲ. ಜ್ಞಾನವು ಒಬ್ಬನಿಗೆ ಶಕ್ತಿಯನ್ನು ಕೊಡುತ್ತದೆ. ಒಬ್ಬ ಜ್ಞಾನಿಯು ನಗರದಲ್ಲಿರುವ ಹತ್ತುಮಂದಿ ಮೂಢ ನಾಯಕರುಗಳಿಗಿಂತಲೂ ಬಲಶಾಲಿ.

21 ಜನರ ಮಾತಿಗೆಲ್ಲಾ ಕಿವಿಗೊಡಬೇಡ. ನಿನ್ನ ಸ್ವಂತ ಸೇವಕನೇ ನಿನ್ನನ್ನು ಶಪಿಸಬಹುದು. 22 ನೀನು ಸಹ ಅನೇಕಸಲ ಬೇರೆಯವರನ್ನು ಶಪಿಸಿರುವುದಕ್ಕೆ ನಿನ್ನ ಮನಸ್ಸೇ ಸಾಕ್ಷಿಯಾಗಿದೆ.

23 ನನ್ನ ಜ್ಞಾನದಿಂದ ಇವೆಲ್ಲವುಗಳ ಕುರಿತಾಗಿ ಆಲೋಚಿಸಿದೆನು; ಜ್ಞಾನಿಯಾಗುವೆನು ಎಂದುಕೊಂಡೆನು; ಆದರೆ ಅದು ಅಸಾಧ್ಯವಾಗಿತ್ತು. 24 ಪ್ರತಿಯೊಂದು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದನ್ನು ಅರ್ಥಮಾಡಿಕೊಳ್ಳುವುದಕ್ಕೂ ಕಷ್ಟ. 25 ನಿಜವಾದ ಜ್ಞಾನವನ್ನು ಕಂಡುಕೊಳ್ಳಲು ನಾನು ವ್ಯಾಸಂಗ ಮಾಡಿದೆ ಮತ್ತು ತುಂಬ ಕಷ್ಟಪಟ್ಟು ಪ್ರಯತ್ನಿಸಿದೆ. ಪ್ರತಿಯೊಂದಕ್ಕೂ ಕಾರಣವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸಿದೆ.

ನಾನು ಕಲಿತಿದ್ದೇನು? ಕೆಡುಕನಾಗಿರುವುದು ಮೂಢತನ ಮತ್ತು ಮೂಢನಂತೆ ವರ್ತಿಸುವುದು ಹುಚ್ಚುತನ ಎಂಬುದನ್ನು ನಾನು ಕಲಿತುಕೊಂಡೆ. 26 ಇದಲ್ಲದೆ ಕೆಲವು ಸ್ತ್ರೀಯರು ಅಪಾಯಕರವಾದ ಬೋನುಗಳಂತಿರುವರು ಎಂಬುದನ್ನು ನಾನು ಕಂಡುಕೊಂಡೆ. ಅವರ ಹೃದಯಗಳು ಬಲೆಗಳಂತಿವೆ; ಅವರ ಕೈಗಳು ಸರಪಣಿಗಳಂತಿವೆ. ಆ ಸ್ತ್ರೀಯರಿಗೆ ಸಿಕ್ಕಿಬೀಳುವುದು ಮರಣಕ್ಕಿಂತಲೂ ಅಪಾಯಕರ. ದೇವರ ಭಕ್ತನು ಆ ಸ್ತ್ರೀಯರ ಬಳಿಯಿಂದ ಓಡಿಹೋಗುವನು; ಪಾಪಿಯಾದರೋ ಅವರಿಗೆ ಸಿಕ್ಕಿಕೊಳ್ಳುವನು.

27-28 ಪ್ರಸಂಗಿಯು ಹೀಗೆನ್ನುತ್ತಾನೆ: “ಒಂದು ತೀರ್ಮಾನಕ್ಕೆ ಬರಬೇಕೆಂದು ಇವೆಲ್ಲವುಗಳನ್ನು ಒಟ್ಟಾಗಿ ಸೇರಿಸಿದೆ. ಆದರೂ ಒಂದು ತೀರ್ಮಾನಕ್ಕೆ ಬರಲಾಗುತ್ತಿಲ್ಲ. ಆದರೆ ನಾನು ಒಂದನ್ನು ಕಂಡುಕೊಂಡೆ. ಅದೇನೆಂದರೆ, ಸಾವಿರ ಪುರುಷರಲ್ಲಿ ಒಬ್ಬ ನೀತಿವಂತನು ಇದ್ದರೂ ಇರಬಹುದು; ಆದರೆ ಸಾವಿರ ಸ್ತ್ರೀಯರಲ್ಲಿ ಒಬ್ಬ ನೀತಿವಂತಳನ್ನೂ ನಾನು ಕಾಣಲಿಲ್ಲ.

29 “ನಾನು ಮತ್ತೊಂದು ವಿಷಯವನ್ನು ತಿಳಿದುಕೊಂಡೆನು. ಅದೇನೆಂದರೆ, ದೇವರು ಮನುಷ್ಯರನ್ನು ನೀತಿವಂತರನ್ನಾಗಿ ಸೃಷ್ಟಿಸಿದನು. ಆದರೆ ಜನರು ಕೆಟ್ಟವರಾಗಿರಲು ಅನೇಕ ದಾರಿಗಳನ್ನು ಕಂಡುಕೊಂಡರು.”

ಜ್ಞಾನ ಮತ್ತು ಶಕ್ತಿ

ಜ್ಞಾನಿಯು ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ವಿವರಿಸುವಂತೆ ಬೇರೆ ಯಾರೂ ಅರ್ಥಮಾಡಿಕೊಳ್ಳಲಾರರು ಮತ್ತು ವಿವರಿಸಲಾರರು. ಜ್ಞಾನಿಯ ಮುಖವು ಜ್ಞಾನದಿಂದ ಪ್ರಕಾಶಮಾನವಾಗಿರುವುದು; ಅದು ವ್ಯಸನದ ಮುಖವನ್ನು ಸಂತೋಷದ ಮುಖವನ್ನಾಗಿ ಮಾರ್ಪಡಿಸುವುದು.

ನೀವು ದೇವರ ಮೇಲೆ ಆಣೆಯಿಟ್ಟಿರುವುದರಿಂದ ರಾಜನ ಆಜ್ಞೆಗೆ ವಿಧೇಯರಾಗಿರಬೇಕು. ರಾಜನಿಗೆ ನಿಮ್ಮ ಆಲೋಚನೆಗಳನ್ನು ತಿಳಿಸಲು ಭಯಪಡಬಾರದು; ನೀವು ಯಾವ ತಪ್ಪಿಗೂ ಬೆಂಬಲ ಕೊಡಬಾರದು. ಆದರೆ ರಾಜನು ತನಗೆ ಇಷ್ಟಬಂದಂತೆ ಆಜ್ಞೆಗಳನ್ನು ಕೊಡುತ್ತಾನೆಂಬುದು ಜ್ಞಾಪಕದಲ್ಲಿರಲಿ. ಆಜ್ಞೆಗಳನ್ನು ಕೊಡಲು ರಾಜನಿಗೆ ಅಧಿಕಾರವಿದೆ. ಅವನನ್ನು ಬಲವಂತ ಮಾಡಲು ಯಾರಿಗೂ ಸಾಧ್ಯವಿಲ್ಲ. ರಾಜನ ಆಜ್ಞೆಗೆ ವಿಧೇಯನಾಗುವವನು ಸುರಕ್ಷಿತವಾಗಿರುವನು. ಆದರೆ ಜ್ಞಾನಿಯು ಸೂಕ್ತ ಸಮಯದಲ್ಲಿ ಸೂಕ್ತ ಕಾರ್ಯವನ್ನು ಮಾಡಲು ತಿಳಿದಿದ್ದಾನೆ.

ಪ್ರತಿಯೊಂದು ಕಾರ್ಯಕ್ಕೂ ಸೂಕ್ತ ಸಮಯವೂ ಸೂಕ್ತ ಮಾರ್ಗವೂ ಮನುಷ್ಯನಿಗೆ ಇವೆ. ಮನುಷ್ಯನು ತನ್ನ ಅನೇಕ ತೊಂದರೆಗಳಲ್ಲಿಯೂ ಅವುಗಳಿಗೆ ತಕ್ಕಂತೆ ನಿರ್ಧಾರವನ್ನು ಕೈಕೊಳ್ಳಬೇಕು. ಯಾಕೆಂದರೆ ಮುಂದೆ ಏನಾಗುವುದೋ ಅವನಿಗೆ ತಿಳಿಯದು. ಮುಂದೆ ಅದು ಹೇಗೆ ಆಗುವುದೋ ಎಂದು ಅವನಿಗೆ ತಿಳಿಸುವವರು ಯಾರು ಇಲ್ಲ.

ಯಾರಿಗೂ ತಮ್ಮ ಆತ್ಮವನ್ನು ತಡೆದು ನಿಲ್ಲಿಸಿಕೊಳ್ಳುವ ಶಕ್ತಿ ಇಲ್ಲ. ಯಾರಿಗೂ ತಮ್ಮ ಮರಣವನ್ನು ತಡೆದು ನಿಲ್ಲಿಸುವ ಶಕ್ತಿಯಿಲ್ಲ. ಯುದ್ಧಕಾಲದಲ್ಲಿ ಸೈನಿಕರಿಗೆ ರಜೆ ದೊರೆಯುವುದಿಲ್ಲ. ಅದೇ ರೀತಿಯಲ್ಲಿ, ಪಾಪವು ಪಾಪಿಯನ್ನು ಬಿಟ್ಟುಹೋಗುವುದಿಲ್ಲ.

ನಾನು ಇವುಗಳನ್ನೆಲ್ಲಾ ನೋಡಿ ಈ ಲೋಕದ ಕಾರ್ಯಗಳನ್ನು ಪರಿಶೀಲಿಸಿದೆನು. ಮನುಷ್ಯರು ಇನ್ನೊಬ್ಬರ ಮೇಲೆ ಅಧಿಪತಿಗಳಾಗಿರಲು ಪ್ರಯಾಸಪಡುತ್ತಾರೆ. ಇದು ಅವರಿಗೆ ಹಾನಿಕರ.

10 ಇದಲ್ಲದೆ ದುಷ್ಟರಿಗೆ ಶವಸಂಸ್ಕಾರವನ್ನು ವೈಭವದಿಂದ ಮಾಡುವುದನ್ನು ನಾನು ನೋಡಿದ್ದೇನೆ. ಶವಸಂಸ್ಕಾರವಾದ ಮೇಲೆ ಜನರು ಸತ್ತುಹೋದ ದುಷ್ಟರನ್ನು ಹೊಗಳುತ್ತಾ ತಮ್ಮ ಮನೆಗಳಿಗೆ ಹೋದರು; ನೀತಿವಂತರಾದರೋ ಪರಿಶುದ್ಧ ಸ್ಥಾನದಿಂದ ತೊಲಗಬೇಕಾಯಿತು. ನಗರದಲ್ಲಿ ಅವರ ಜ್ಞಾಪಕವೇ ಇಲ್ಲವಾಯಿತು. ಇದು ಸಹ ವ್ಯರ್ಥ.

ನ್ಯಾಯ, ಪ್ರತಿಫಲ ಮತ್ತು ದಂಡನೆ

11 ಜನರ ಅಪರಾಧಗಳಿಗೆ ದಂಡನೆಯು ಕೂಡಲೇ ಬರದಿರುವುದರಿಂದ ದುಷ್ಕೃತ್ಯಗಳನ್ನು ಮಾಡಲು ಇತರರು ಸಹ ಪ್ರೇರಿತರಾಗುತ್ತಾರೆ.

12 ಒಬ್ಬ ಪಾಪಿಯು ನೂರು ದುಷ್ಕೃತ್ಯಗಳನ್ನು ಮಾಡಿ ಬಹುಕಾಲ ಬದುಕಬಹುದು. ಆದರೆ ದೇವರಲ್ಲಿ ಭಯಭಕ್ತಿಯುಳ್ಳವರಿಗೆ ಅದಕ್ಕಿಂತಲೂ ಮೇಲೇ ಆಗುವುದು. 13 ದುಷ್ಟರಿಗೆ ದೇವರಲ್ಲಿ ಭಯಭಕ್ತಿಯಿಲ್ಲದಿರುವುದರಿಂದ ಅವರಿಗೆ ಒಳ್ಳೆಯದಾಗುವುದಿಲ್ಲ; ಅವರ ಜೀವಿತವು ಸಾಯಂಕಾಲದ ನೆರಳಿನಂತೆ ಇಲ್ಲವಾಗುವುದು.

14 ಲೋಕದಲ್ಲಿ ಮತ್ತೊಂದು ಅನ್ಯಾಯವಿದೆ. ದುಷ್ಟರಿಗೆ ಕೇಡಾಗಬೇಕು, ಕೆಟ್ಟವುಗಳು ಕೆಟ್ಟ ಜನರಿಗೆ ಆಗಬೇಕು. ನೀತಿವಂತರಿಗೆ ಒಳ್ಳೆಯದಾಗಬೇಕು. ಆದರೆ ಕೆಲವು ಸಲ ನೀತಿವಂತರಿಗೆ ಕೇಡಾಗುತ್ತದೆ. ದುಷ್ಟರಿಗೆ ಒಳ್ಳೆಯದಾಗುತ್ತದೆ. ಅದು ನ್ಯಾಯವಲ್ಲ. 15 ಆದ್ದರಿಂದ ಜೀವನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವುದೇ ಉತ್ತಮವೆಂದು ನಿರ್ಧರಿಸಿದೆನು. ಯಾಕೆಂದರೆ ದೇವರು ಮನುಷ್ಯನಿಗೆ ಈ ಲೋಕದಲ್ಲಿ ಅನುಗ್ರಹಿಸಿರುವ ಪ್ರಯಾಸಕರ ಕೆಲಸಗಳಲ್ಲಿಯೂ ಮನುಷ್ಯನು ಸಂತೋಷವಾಗಿರಬೇಕು.

ದೇವರ ಕಾರ್ಯ ಗ್ರಹಿಕೆಗೆ ಮೀರಿದೆ

16 ಈ ಲೋಕದಲ್ಲಿ ಜನರ ಕಾರ್ಯಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದೆ. ಅವರು ಹಗಲುರಾತ್ರಿ ಕೆಲಸ ಮಾಡುವರು; ಕೆಲವೊಮ್ಮೆ ನಿದ್ರೆಯನ್ನೂ ಮಾಡುವುದಿಲ್ಲ. 17 ಇದಲ್ಲದೆ ದೇವರ ಅನೇಕ ಕಾರ್ಯಗಳನ್ನು ಸಹ ನಾನು ನೋಡಿದ್ದೇನೆ. ಭೂಮಿಯ ಮೇಲೆ ದೇವರು ಮಾಡುವ ಕಾರ್ಯಗಳನ್ನೆಲ್ಲಾ ಜನರು ಅರ್ಥಮಾಡಿಕೊಳ್ಳಲಾರರು. ಒಬ್ಬನು ಅರ್ಥಮಾಡಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅವನು ಅರ್ಥಮಾಡಿಕೊಳ್ಳಲಾರನು. ದೇವರ ಕಾರ್ಯವನ್ನು ಅರ್ಥಮಾಡಿಕೊಳ್ಳಬಲ್ಲೆನೆಂದು ಜ್ಞಾನಿಯು ಹೇಳಿಕೊಂಡರೂ ಅದು ಸತ್ಯವಲ್ಲ. ಅವುಗಳನ್ನೆಲ್ಲ ಯಾರೂ ಅರ್ಥಮಾಡಿಕೊಳ್ಳಲಾರರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International