Beginning
—19—
24 ಕೆಡುಕರ ವಿಷಯದಲ್ಲಿ ಹೊಟ್ಟೆಕಿಚ್ಚುಪಡಬೇಡ; ಅವರೊಂದಿಗಿರಲು ಅಪೇಕ್ಷಿಸಬೇಡ. 2 ಅವರು ಕೇಡು ಮಾಡಲು ತಮ್ಮ ಹೃದಯಗಳಲ್ಲಿ ಆಲೋಚಿಸಿಕೊಳ್ಳುವರು; ಅವರು ಕೇಡನ್ನೇ ಕುರಿತು ಮಾತಾಡುವರು.
—20—
3 ಒಳ್ಳೆಯ ಮನೆಯು ಜ್ಞಾನದ ಮೇಲೂ ವಿವೇಕದ ಮೇಲೂ ಕಟ್ಟಲ್ಪಟ್ಟಿರುವುದು. 4 ಅದರ ಕೋಣೆಗಳು ಅಮೂಲ್ಯವಾದ ಭಂಡಾರಗಳಿಂದ ತುಂಬಿರುವುದು ಜ್ಞಾನದಿಂದಲೇ.
—21—
5 ಜ್ಞಾನವು ಮನುಷ್ಯನನ್ನು ಬಲಿಷ್ಠನನ್ನಾಗಿ ಮಾಡುವುದು. ವಿವೇಕವು ಮನುಷ್ಯನಿಗೆ ಬಲವನ್ನು ಕೊಡುತ್ತದೆ. 6 ಯುದ್ಧವನ್ನು ಆರಂಭಿಸುವ ಮೊದಲೇ ಎಚ್ಚರಿಕೆಯಿಂದ ಆಲೋಚಿಸು. ಜಯವನ್ನು ಗಳಿಸಬೇಕಾದರೆ ನಿನಗೆ ಅನೇಕ ಒಳ್ಳೆಯ ಆಲೋಚನೆಗಾರರು ಅಗತ್ಯ.
—22—
7 ಮೂಢರು ಜ್ಞಾನವನ್ನು ಅರ್ಥಮಾಡಿಕೊಳ್ಳಲಾರರು; ಮುಖ್ಯವಾದ ವಿಷಯಗಳನ್ನು ಚರ್ಚಿಸುವಾಗ ಮೂಢನು ಏನೂ ಹೇಳಲಾರ.
—23—
8 ಕೇಡುಮಾಡುವವನನ್ನು ಜನರು “ಕೆಡುಕ” ಎಂದು ಕರೆಯುವರು. 9 ಮೂಢನ ಆಲೋಚನೆಗಳೆಲ್ಲಾ ಪಾಪಮಯ. ದುರಾಭಿಮಾನಿಯು ಜನರಿಗೆ ಅಸಹ್ಯ.
—24—
10 ಕಷ್ಟದ ಸಮಯಗಳಲ್ಲಿ ನೀನು ಬಲಹೀನನಾಗಿದ್ದರೆ, ನೀನು ನಿಜವಾಗಿಯೂ ಬಲಹೀನ.
—25—
11 ಜನರು ಯಾರನ್ನಾದರೂ ಕೊಲ್ಲಬೇಕೆಂದಿದ್ದರೆ, ಅವನನ್ನು ಉಳಿಸಲು ಪ್ರಯತ್ನಿಸು. 12 “ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ” ಎಂದು ನೀನು ಹೇಳಲಾಗದು. ಯೆಹೋವನಿಗೆ ಪ್ರತಿಯೊಂದು ತಿಳಿದಿದೆ. ನಿನ್ನ ಕಾರ್ಯಗಳ ಉದ್ದೇಶವೂ ಆತನಿಗೆ ತಿಳಿದಿದೆ. ಯೆಹೋವನು ನಿನ್ನನ್ನು ಗಮನಿಸಿ ನಿನ್ನ ಕಾರ್ಯಗಳಿಗೆ ಪ್ರತಿಫಲ ಕೊಡುವನು.
—26—
13 ನನ್ನ ಮಗನೇ, ಜೇನುತುಪ್ಪವನ್ನು ತಿನ್ನು, ಅದು ಒಳ್ಳೆಯದು. ಜೇನುಗೂಡಿನ ಜೇನುತುಪ್ಪ ಸಿಹಿ. 14 ಅದೇರೀತಿ ಜ್ಞಾನವು ನಿನ್ನ ಆತ್ಮಕ್ಕೆ ಒಳ್ಳೆಯದು. ನೀನು ಅದನ್ನು ಕಂಡುಕೊಂಡರೆ ನಿನಗೆ ಒಳ್ಳೆಯ ಭವಿಷ್ಯವಿರುವುದು; ನಿನ್ನ ನಿರೀಕ್ಷೆ ಎಂದಿಗೂ ಕೊನೆಗೊಳ್ಳುವುದಿಲ್ಲ.
—27—
15 ಒಳ್ಳೆಯವನಿಂದ ಕದ್ದುಕೊಳ್ಳುವ ಅಥವಾ ಅವನ ಮನೆಯನ್ನೇ ತೆಗೆದುಕೊಳ್ಳುವ ಕಳ್ಳನಂತೆ ಇರಬೇಡ. 16 ಒಳ್ಳೆಯವನು ಏಳುಸಲ ಬಿದ್ದರೂ ಅವನು ಮತ್ತೆ ಎದ್ದುನಿಲ್ಲುವನು. ಆದರೆ ಕೆಡುಕರು ಒಂದೇ ಆಪತ್ತಿನಿಂದ ಶಾಶ್ವತವಾಗಿ ಸೋತುಹೋಗುವರು.
—28—
17 ನಿನ್ನ ವೈರಿ ತೊಂದರೆಯಲ್ಲಿರುವಾಗ ಸಂತೋಷಪಡಬೇಡ; ಅವನು ಬೀಳುವಾಗಲೂ ಸಂತೋಷಪಡಬೇಡ. 18 ಇಲ್ಲವಾದರೆ, ಯೆಹೋವನು ನಿನ್ನ ಮೇಲೆ ಕೋಪಗೊಂಡು ನಿನ್ನ ವೈರಿಯನ್ನು ದಂಡಿಸದೆ ಹೋಗಬಹುದು.
—29—
19 ಕೆಡುಕರ ಬಗ್ಗೆ ಅತಿಯಾಗಿ ಬೇಸರಗೊಳ್ಳಬೇಡ, ಅವರ ಮೇಲೆ ಹೊಟ್ಟೆಕಿಚ್ಚುಪಡಬೇಡ. 20 ಆ ಕೆಡುಕರಿಗೆ ನಿರೀಕ್ಷೆಯಿಲ್ಲ. ಅವರ ಬೆಳಕು ಕತ್ತಲೆಯಾಗುವುದು.
—30—
21 ಮಗನೇ, ಯೆಹೋವನನ್ನೂ ರಾಜನನ್ನೂ ಗೌರವಿಸು. ಅವರನ್ನು ವಿರೋಧಿಸುವವರ ಜೊತೆ ಸೇರಬೇಡ. 22 ಯಾಕೆಂದರೆ ಅವರು ಬೇಗನೆ ನಾಶವಾಗುವರು. ದೇವರು ಮತ್ತು ರಾಜನು ತಮ್ಮ ವೈರಿಗಳಿಗೆ ಎಷ್ಟು ಕೇಡುಮಾಡಬಲ್ಲರೆಂಬುದು ನಿನಗೆ ತಿಳಿಯದು.
ಮತ್ತಷ್ಟು ಜ್ಞಾನೋಕ್ತಿಗಳು
23 ಇವು ಸಹ ಜ್ಞಾನಿಗಳ ಮಾತುಗಳು:
ನ್ಯಾಯಾಧಿಪತಿ ನ್ಯಾಯವಂತನಾಗಿರಬೇಕು. ಅವನು ಕೇವಲ ಪರಿಚಯದ ನಿಮಿತ್ತ ಯಾರಿಗೂ ಸಹಾಯ ಮಾಡಕೂಡದು. 24 ನ್ಯಾಯಾಧೀಶನು ಅಪರಾಧಿಗೆ, “ನೀನು ನಿರಪರಾಧಿ” ಎಂದು ಹೇಳಿದರೆ, ಜನರು ನ್ಯಾಯಾಧೀಶನನ್ನು ಶಪಿಸುವರು; ಜನಾಂಗಗಳು ಅವನನ್ನು ಖಂಡಿಸುವವು. 25 ಆದರೆ ನ್ಯಾಯಾಧೀಶನು ಅಪರಾಧಿಯನ್ನು ದಂಡಿಸಿದರೆ, ಜನರೆಲ್ಲರೂ ಅವನನ್ನು ಮೆಚ್ಚಿಕೊಳ್ಳುವರು; ಅವನಿಗೆ ಮಹಾ ಆಶೀರ್ವಾದ ದೊರೆಯುವುದು.
26 ಯಥಾರ್ಥವಾದ ಉತ್ತರ ಜನರೆಲ್ಲರನ್ನು ಸಂತೋಷಗೊಳಿಸುವುದು; ಅದು ತುಟಿಯ ಮೇಲಿನ ಮುದ್ದಿನಂತಿದೆ.
27 ಹೊಲಗಳಲ್ಲಿ ಬಿತ್ತುವ ಮೊದಲು ಮನೆಯನ್ನು ಕಟ್ಟಬೇಡ. ವಾಸಕ್ಕಾಗಿ ಮನೆಯನ್ನು ಕಟ್ಟುವ ಮೊದಲೇ ನೀನು ಬೇಸಾಯ ಮಾಡಲು ಸಿದ್ಧನಾಗಿರುವಿಯೋ ಎಂಬುದನ್ನು ಖಾತರಿಪಡಿಸಿಕೊ.
28 ಬೇರೊಬ್ಬನ ವಿರೋಧವಾಗಿ ಸಕಾರಣವಿಲ್ಲದೆ ಸಾಕ್ಷಿ ಹೇಳಬೇಡ, ಸುಳ್ಳನ್ನೂ ಹೇಳಬೇಡ.
29 “ಅವನು ನನಗೆ ಕೇಡುಮಾಡಿದನು. ಆದ್ದರಿಂದ ನಾನೂ ಅವನಿಗೆ ಕೇಡುಮಾಡುವೆ. ಅವನು ಮಾಡಿದ ಕೇಡುಗಳಿಗಾಗಿ ಸೇಡು ತೀರಿಸಿಕೊಳ್ಳುವೆ” ಎಂದು ಹೇಳಬೇಡ.
30 ಸೋಮಾರಿಯ ಹೊಲದ ಸಮೀಪದಲ್ಲೂ ಅಜ್ಞಾನಿಯ ದ್ರಾಕ್ಷಿತೋಟದ ಬಳಿಯಲ್ಲೂ ನಡೆದುಹೋದೆನು. 31 ಆ ಹೊಲಗಳಲ್ಲಿ ಮುಳ್ಳುಗಿಡಗಳೂ ಉಪಯೋಗವಿಲ್ಲದ ಸಸಿಗಳೂ ಬೆಳೆಯುತ್ತಿದ್ದವು. ಹೊಲಗಳ ಸುತ್ತಲೂ ಇದ್ದ ಗೋಡೆ ಒಡೆದುಹೋಗಿತ್ತು; ಕುಸಿದು ಬೀಳುತ್ತಿತ್ತು. 32 ಅದನ್ನು ನೋಡಿ, ಆಲೋಚಿಸಿದೆ; ಒಂದು ಪಾಠವನ್ನು ಕಲಿತುಕೊಂಡೆ; 33 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ವಿಶ್ರಾಂತಿ, ಇನ್ನು ಸ್ವಲ್ಪ ಕೈಮುದುರಿಕೊಳ್ಳುವೆ, ಮಧ್ಯಾಹ್ನ ಇನ್ನು ಸ್ವಲ್ಪ ನಿದ್ರೆ ಮಾಡುವೆ ಎನ್ನುವೆಯಾ? 34 ಇವು ನಿನ್ನನ್ನು ಬೇಗನೆ ಬಡವನನ್ನಾಗಿ ಮಾಡಿ ಬರಿದು ಮಾಡುತ್ತದೆ; ಇದ್ದಕ್ಕಿದ್ದಂತೆ ಬಂದು ಎಲ್ಲವನ್ನು ದೋಚಿಕೊಂಡು ಹೋಗುವ ಕಳ್ಳನಂತಿವೆ.
ಸೊಲೊಮೋನನಿಂದ ಮತ್ತಷ್ಟು ಜ್ಞಾನೋಕ್ತಿಗಳು
25 ಇವು ಸಹ ಸೊಲೊಮೋನನು ಹೇಳಿದ ಜ್ಞಾನೋಕ್ತಿಗಳು. ಈ ನುಡಿಗಳನ್ನು ಯೆಹೂದದ ರಾಜನಾಗಿದ್ದ ಹಿಜ್ಕೀಯನ ಸೇವಕರು ನಕಲು ಮಾಡಿದರು:
2 ವಿಷಯಗಳನ್ನು ರಹಸ್ಯಗೊಳಿಸಿದ್ದರಿಂದ ದೇವರಿಗೆ ಸನ್ಮಾನ; ವಿಷಯಗಳನ್ನು ಕಂಡುಹಿಡಿಯುವುದರಿಂದ ರಾಜನಿಗೆ ಸನ್ಮಾನ.
3 ಆಕಾಶದ ಎತ್ತರವನ್ನಾಗಲಿ ಭೂಮಿಯ ಆಳವನ್ನಾಗಲಿ ಅಳೆಯಲು ಯಾರಿಗೆ ಸಾಧ್ಯ? ಅಂತೆಯೇ ರಾಜರುಗಳ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲಾರರು.
4 ನೀನು ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿ ಶುದ್ಧಗೊಳಿಸಿದರೆ, ಅಕ್ಕಸಾಲಿಗನು ಅದರಿಂದ ಸುಂದರವಾದ ವಸ್ತುಗಳನ್ನು ಮಾಡಬಲ್ಲನು. 5 ಅಂತೆಯೇ, ರಾಜನಿಂದ ಕೆಟ್ಟ ಆಲೋಚನೆಗಾರರನ್ನು ತೆಗೆದುಹಾಕಿದರೆ, ಒಳ್ಳೆಯತನವು ಅವನ ಆಡಳಿತವನ್ನು ಭದ್ರಗೊಳಿಸುತ್ತದೆ.
6 ರಾಜನ ಮುಂದೆ ಜಂಬಕೊಚ್ಚಿಕೊಳ್ಳಬೇಡ. ಪ್ರಮುಖರ ಸ್ಥಳದಲ್ಲಿ ನಿಂತುಕೊಳ್ಳಬೇಡ. 7 ಗಣ್ಯರ ಮುಂದೆ ಅವಮಾನಿತನಾಗುವುದಕ್ಕಿಂತ, “ಮೇಲಕ್ಕೆ ಬಾ” ಎಂದು ಹೇಳಿಸಿಕೊಳ್ಳುವುದೇ ಉತ್ತಮ.
8 ನೀನು ಕಂಡ ಯಾವುದನ್ನಾದರೂ ನ್ಯಾಯಾಧೀಶನಿಗೆ ತಿಳಿಸಲು ಆತುರಪಡಬೇಡ. ನೀನು ತಪ್ಪಿತಸ್ಥನೆಂದು ಬೇರೊಬ್ಬನು ಹೇಳಿದರೆ, ನಿನಗೆ ಅವಮಾನವಾಗುವುದು.
9 ನೀನು ನಿನ್ನ ನೆರೆಯವನೊಂದಿಗೆ ವಾಗ್ವಾದ ಮಾಡಿದ್ದರೆ, ಗುಟ್ಟಾದ ವಿಷಯಗಳನ್ನು ಬೇರೊಬ್ಬನಿಗೆ ಪ್ರಕಟಿಸಬೇಡ. 10 ಇಲ್ಲವಾದರೆ ಅದನ್ನು ಕೇಳಿದವರೆಲ್ಲರೂ ನಿನ್ನನ್ನು ಖಂಡಿಸುವರು; ಆ ಕೆಟ್ಟ ಹೆಸರು ನಿನ್ನನ್ನೆಂದಿಗೂ ಬಿಟ್ಟುಹೋಗದು.
11 ನೀನು ಸರಿಸಮಯದಲ್ಲಿ ಒಳ್ಳೆಯದನ್ನು ಹೇಳಿದರೆ, ಅದು ಬೆಳ್ಳಿಯ ತಟ್ಟೆಯಲ್ಲಿರುವ ಚಿನ್ನದ ಸೇಬಿನಂತಿರುವುದು. 12 ಜ್ಞಾನಿಯು ನಿನಗೆ ಕೊಡುವ ಎಚ್ಚರಿಕೆಯು ಚಿನ್ನದ ಉಂಗುರಗಳಿಗಿಂತಲೂ ಬಂಗಾರದ ಆಭರಣಗಳಿಗಿಂತಲೂ ಹೆಚ್ಚು ಬೆಲೆ ಬಾಳುತ್ತದೆ.
13 ನಂಬಿಗಸ್ತನಾದ ಸಂದೇಶಕನಿಂದ ಯಜಮಾನನಿಗೆ ಉಲ್ಲಾಸ. ಅವನು ಸುಗ್ಗೀಕಾಲದ ಬಿಸಿಲಿನ ದಿನಗಳಲ್ಲಿರುವ ತಣ್ಣನೆಯ ಹಿಮದಂತಿರುವನು.
14 ದಾನ ಮಾಡುವುದಾಗಿ ಹೇಳಿಯೂ ಮಾಡದವರು ಮಳೆಯನ್ನು ತಾರದ ಮೋಡಗಳಂತೆಯೂ ಗಾಳಿಯಂತೆಯೂ ಇರುವರು.
15 ತಾಳ್ಮೆಯು ಅಧಿಪತಿಯನ್ನು ಸಹ ಮನವೊಪ್ಪಿಸುವುದು. ನಯವಾದ ಮಾತಿಗೆ ಬಹುಬಲ.
16 ಜೇನುತುಪ್ಪ ಒಳ್ಳೆಯದು. ಆದರೆ ಅತಿಯಾಗಿ ತಿನ್ನಬೇಡ. ಇಲ್ಲವಾದರೆ, ಕಾಯಿಲೆಬೀಳುವೆ. 17 ಅಂತೆಯೇ, ನಿನ್ನ ನೆರೆಯವನ ಮನೆಗೆ ಪದೇಪದೇ ಹೋಗಬೇಡ. ನೀನು ಹೋದರೆ, ಅವನು ನಿನ್ನ ಮೇಲೆ ಬೇಸರಗೊಳ್ಳುವನು.
18 ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಅಪಾಯಕಾರಿ. ಅವನು ದೊಣ್ಣೆಯಂತೆಯೂ ಕತ್ತಿಯಂತೆಯೂ ಚೂಪಾದ ಬಾಣದಂತೆಯೂ ಇದ್ದಾನೆ. 19 ಕಷ್ಟಕಾಲಗಳಲ್ಲಿ ಅಪನಂಬಿಗಸ್ತನನ್ನು ಆಶ್ರಯಿಸಿಕೊಳ್ಳುವುದು ಮುರುಕು ಹಲ್ಲಿನಿಂದ ತಿನ್ನುವಂತೆಯೂ ಕುಂಟುಕಾಲಿನಿಂದ ನಡೆಯುವಂತೆಯೂ ಇದೆ.
20 ವ್ಯಸನದಿಂದಿರುವವನಿಗೆ ಸಂತಸದ ಗೀತೆಗಳನ್ನು ಹಾಡಿದರೆ ಚಳಿಯಲ್ಲಿರುವವನ ಬಟ್ಟೆಯನ್ನು ತೆಗೆದುಹಾಕಿದಂತೆಯೂ ಗಾಯದ ಮೇಲೆ ಹುಳಿರಸವನ್ನು ಸುರಿದಂತೆಯೂ ಇರುವುದು.
21 ನಿನ್ನ ವೈರಿ ಹಸಿವೆಗೊಂಡಿದ್ದರೆ, ಅವನಿಗೆ ಊಟಕೊಡು. ನಿನ್ನ ವೈರಿ ಬಾಯಾರಿದ್ದರೆ, ಅವನಿಗೆ ನೀರು ಕೊಡು. 22 ಆಗ, ಉರಿಯುವ ಕೆಂಡಗಳನ್ನು ಅವನ ತಲೆಯ ಮೇಲೆ ಇಟ್ಟಂತಾಗುವುದು. ಯೋಹೋವನು ನಿನಗೆ ಅದರ ಪ್ರತಿಫಲವನ್ನು ಕೊಡುವನು.
23 ಉತ್ತರದಿಕ್ಕಿನಿಂದ ಬೀಸುವ ಗಾಳಿ ಮಳೆಯನ್ನು ತರುವುದು. ಅಂತೆಯೇ ಚಾಡಿಮಾತು ಕೋಪಕ್ಕೆ ಕಾರಣ.
24 ವಾದಿಸುವ ಹೆಂಡತಿಯೊಡನೆ ಮನೆಯಲ್ಲಿ ಇರುವುದಕ್ಕಿಂತ ಮೇಲ್ಛಾವಣಿಗೆಯ ಒಂದು ಮೂಲೆಯಲ್ಲಿ ವಾಸಿಸುವುದೇ ಮೇಲು.
25 ಬಹುದೂರದ ಒಳ್ಳೆಯ ಸುದ್ದಿಯು ಬಾಯಾರಿದವನಿಗೆ ಕೊಟ್ಟ ತಣ್ಣನೆ ನೀರಿನಂತಿರುವುದು.
26 ದುಷ್ಟನು ಒಳ್ಳೆಯವನಿಗೆ ಆಪತ್ತನ್ನು ಬರಮಾಡಿದರೆ, ಅದು ಚಿಲುಮೆಗೆ ಮಣ್ಣುಹಾಕಿದಂತೆಯೂ ಒರತೆಯನ್ನು ಹೊಲಸು ಮಾಡಿದಂತೆಯೂ ಇದೆ.
27 ಜೇನುತುಪ್ಪವನ್ನು ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಅಂತೆಯೇ, ನಿನಗೋಸ್ಕರ ಅತಿಯಾಗಿ ಸನ್ಮಾನವನ್ನು ಬಯಸಬೇಡ.
28 ತನ್ನನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾರದವನು ಕೋಟೆ ಬಿದ್ದುಹೋದ ಪಟ್ಟಣದಂತಿರುವನು.
ಮೂಢರ ಬಗ್ಗೆ ಜ್ಞಾನದ ನುಡಿಗಳು
26 ಮೂಢನನ್ನು ಗೌರವಿಸುವುದು ಸರಿಯಲ್ಲ. ಅದು ಬೇಸಿಗೆಕಾಲದಲ್ಲಿ ಬೀಳುವ ಹಿಮದಂತೆಯೂ ಸುಗ್ಗೀಕಾಲದಲ್ಲಿ ಬೀಳುವ ಮಳೆಯಂತೆಯೂ ಇದೆ.
2 ಅಯೋಗ್ಯವಾದ ಶಾಪ ನಿರಪರಾಧಿಗೆ ತಟ್ಟುವುದಿಲ್ಲ. ಆ ಶಾಪದ ಮಾತುಗಳು ಹಾರಿಹೋಗಿ ಎಂದೂ ಕೆಳಗಿಳಿಯದ ಪಕ್ಷಿಗಳಂತಿವೆ.
3 ಕುದುರೆಗೆ ಚಬುಕಬೇಕು. ಹೇಸರಕತ್ತೆಗೆ ಕಡಿವಾಣಬೇಕು. ಮೂಢನಿಗೆ ಹೊಡೆತಬೇಕು.
4 ಮೂಢನಿಗೆ ಅವನ ಮೂರ್ಖತನದ ಮಟ್ಟದಲ್ಲಿ ಉತ್ತರ ಕೊಡಬೇಡ; ಇಲ್ಲವಾದರೆ ನೀನೂ ಅವನಂತಾಗುವೆ.
5 ಮೂಢನಿಗೆ ಅವನ ಮೂಢತನದ ಮಟ್ಟದಲ್ಲಿ ಉತ್ತರಿಸು; ಇಲ್ಲವಾದರೆ ಅವನು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಳ್ಳುವನು.
6 ನಿನ್ನ ಸಂದೇಶವನ್ನು ಮೂಢನ ಮೂಲಕ ಎಂದಿಗೂ ಕಳುಹಿಸಿಕೊಡಬೇಡ. ಅದು ನಿನ್ನ ಸ್ವಂತ ಕಾಲನ್ನೇ ಕತ್ತರಿಸಿಕೊಂಡಂತಿರುವುದು; ನೀನೇ ಕೇಡಿಗಾಗಿ ಕೇಳಿಕೊಂಡಂತಾಗುವುದು.
7 ಮೂಢನು ಜ್ಞಾನದ ಮಾತನ್ನು ಹೇಳಲು ಮಾಡುವ ಪ್ರಯತ್ನವು ಕುಂಟನು ನಡೆಯಲು ಮಾಡುವ ಪ್ರಯತ್ನದಂತಿದೆ.
8 ಮೂಢನಿಗೆ ತೋರುವ ಗೌರವ, ಕವಣೆಯಲ್ಲಿರುವ ಕಲ್ಲಿನಷ್ಟೇ ಕೆಟ್ಟದ್ದು.
9 ಮೂಢನು ಜ್ಞಾನೋಕ್ತಿಯನ್ನು ಬಳಸಲು ಮಾಡುವ ಪ್ರಯತ್ನವು ಕುಡುಕನೊಬ್ಬನು ಮುಳ್ಳುಕೊಂಬೆಯೊಂದನ್ನು ತನ್ನ ಕೈಯಲ್ಲಿ ಝಳಪಿಸುವಂತಿರುವುದು.
10 ಮೂಢನನ್ನಾಗಲಿ ಕುಡುಕನನ್ನಾಗಲಿ ಕೂಲಿಗೆ ನೇಮಿಸಿಕೊಳ್ಳುವವನು ಹಾದುಹೋಗುವವರಿಗೆಲ್ಲ ಗಾಯ ಮಾಡುವ ಬಿಲ್ಲುಗಾರನಂತಿರುವನು.
11 ನಾಯಿ ತಾನು ಕಕ್ಕಿದ್ದನ್ನೇ ನೆಕ್ಕಲು ಹಿಂತಿರುಗುವಂತೆ ಮೂಢನು ತನ್ನ ಮೂಢತನವನ್ನು ಪದೇಪದೇ ಮಾಡುವನು.
12 ಅಜ್ಞಾನಿಯು ತನ್ನನ್ನು ಜ್ಞಾನಿಯೆಂದು ಭಾವಿಸಿಕೊಂಡರೆ ಅವನು ಮೂಢನಿಗಿಂತಲೂ ಕೀಳಾದವನು.
13 “ನಾನು ನನ್ನ ಮನೆಯಿಂದ ಹೊರಗೆ ಹೋಗಲಾರೆ. ಬೀದಿಯಲ್ಲಿ ಸಿಂಹವಿದೆ” ಎನ್ನುತ್ತಾನೆ ಸೋಮಾರಿ.
14 ಬಾಗಿಲು ತಿರುಗುಣಿಯ ಮೇಲೆ ಸುತ್ತುವಂತೆ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುವನು.
15 ಸೋಮಾರಿಯು ತಟ್ಟೆಯಲ್ಲಿರುವ ಊಟವನ್ನು ತಿನ್ನುವುದಕ್ಕೂ ಬಹು ಆಯಾಸಪಡುವನು.
16 ತಮ್ಮ ಆಲೋಚನೆಗಳಿಗೆ ಒಳ್ಳೆಯ ಕಾರಣಗಳನ್ನು ಕೊಡುವ ಏಳು ಜನರಿಗಿಂತಲೂ ತಾನು ಜ್ಞಾನಿಯೆಂದು ಸೋಮಾರಿಯು ಭಾವಿಸುವನು.
17 ಬೇರೆಯವರ ವಾಗ್ವಾದದಲ್ಲಿ ಮಧ್ಯೆ ಪ್ರವೇಶಿಸಲು ಮಾಡುವ ಪ್ರಯತ್ನ ಹಾದಿಯಲ್ಲಿ ಹೋಗುತ್ತಿರುವ ನಾಯಿಯ ಕಿವಿಗಳನ್ನು ಹಿಡಿದುಕೊಳ್ಳುವಷ್ಟೇ ಅಪಾಯಕರ.
18-19 ಮತ್ತೊಬ್ಬನನ್ನು ಮೋಸಗೊಳಿಸಿ ತಾನು ಕೇವಲ ತಮಾಷೆಮಾಡಿದ್ದಾಗಿ ಹೇಳುವವನು ಉರಿಯುವ ಬಾಣಗಳನ್ನು ಆಕಾಶದ ಕಡೆಗೆ ಎಸೆದು ಬೇರೊಬ್ಬನನ್ನು ಆಕಸ್ಮಿಕವಾಗಿ ಕೊಲ್ಲುವ ಹುಚ್ಚನಂತಿರುವನು.
20 ಸೌದೆ ಇಲ್ಲದಿದ್ದರೆ ಬೆಂಕಿಯು ಆರಿಹೋಗುವುದು. ಅಂತೆಯೇ ಹುರುಳಿಲ್ಲದ ವಾಗ್ವಾದ ನಿಂತುಹೋಗುವುದು.
21 ಕೆಂಡದಿಂದ ಕಲ್ಲಿದ್ದಲು ಉರಿಯುತ್ತದೆ; ಸೌದೆಯಿಂದ ಬೆಂಕಿ ಉರಿಯುತ್ತದೆ; ಅಂತೆಯೇ ಜಗಳಗಂಟರು ವಾಗ್ವಾದವನ್ನು ಮುಂದುವರಿಸುವರು.
22 ಹರಟೆಮಾತು ಜನರಿಗೆ ಪ್ರಿಯ. ಅವರಿಗೆ ಅದು ಒಳ್ಳೆಯ ಆಹಾರವನ್ನು ತಿಂದಂತಿರುವುದು.
23 ಕೆಟ್ಟ ಆಲೋಚನೆಯನ್ನು ಅಡಗಿಸಿಡುವ ಕನಿಕರದ ಮಾತುಗಳು ಕಡಿಮೆ ಬೆಲೆಯ ಮಡಿಕೆಯ ಮೇಲಿನ ಬೆಳ್ಳಿಯ ಲೇಪನದಂತಿವೆ. 24 ಕೆಡುಕನು ತಾನು ಹೇಳುವ ಸಂಗತಿಗಳ ಮೂಲಕ ತನ್ನನ್ನು ಒಳ್ಳೆಯವನನ್ನಾಗಿ ತೋರಿಸಿಕೊಳ್ಳುವನು. ಆದರೆ ಅವನು ತನ್ನ ಕೆಟ್ಟ ಆಲೋಚನೆಗಳನ್ನು ತನ್ನ ಹೃದಯದಲ್ಲಿ ಅಡಗಿಸಿಕೊಳ್ಳುವನು. 25 ಅವನು ಹೇಳುವ ಸಂಗತಿಗಳು ಒಳ್ಳೆಯದಾಗಿ ಕಂಡರೂ ಅವನನ್ನು ನಂಬಬೇಡಿ. ಅವನ ಹೃದಯವು ಕೆಟ್ಟ ಆಲೋಚನೆಗಳಿಂದ ತುಂಬಿದೆ. 26 ದ್ವೇಷವು ತನ್ನನ್ನು ಮೋಸದಿಂದ ಮರೆಮಾಡಿಕೊಳ್ಳುತ್ತದೆ. ಆದರೆ ಅವನು ಕೀಳಾದವನು; ಕೊನೆಯಲ್ಲಿ, ಅವನ ಕೆಟ್ಟಕಾರ್ಯಗಳನ್ನು ಜನರೆಲ್ಲರೂ ನೋಡುವರು.
27 ಮತ್ತೊಬ್ಬನಿಗೆ ಬಲೆಹಾಕುವವನು ತನಗೇ ಬಲೆಹಾಕಿಕೊಳ್ಳುವನು. ಮತ್ತೊಬ್ಬನ ಮೇಲೆ ಬಂಡೆ ಉರುಳಿಸಲು ಪ್ರಯತ್ನಿಸುವವನು ಅದರಿಂದಲೇ ಜಜ್ಜಲ್ಪಡುವನು.
28 ಸುಳ್ಳುಗಾರನು ತಾನು ಕೇಡುಮಾಡಲಿರುವ ಜನರನ್ನು ದ್ವೇಷಿಸುವನು. ಕಪಟದ ಸಂಗತಿಗಳನ್ನು ಹೇಳುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.
Kannada Holy Bible: Easy-to-Read Version. All rights reserved. © 1997 Bible League International