Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ನ್ಯಾಯಸ್ಥಾಪಕರು 4:1-7

ದೆಬೋರಾ—ಮಹಿಳಾ ನ್ಯಾಯಾಧೀಶೆ

ಏಹೂದನು ಮರಣಹೊಂದಿದ ಮೇಲೆ ಇಸ್ರೇಲರು ಮತ್ತೆ ಯೆಹೋವನ ವಿರೋಧವಾಗಿ ಪಾಪ ಮಾಡಿದರು. ಆದ್ದರಿಂದ ಕಾನಾನ್ಯರ ಅರಸನಾದ ಯಾಬೀನನು ಇಸ್ರೇಲರನ್ನು ಸೋಲಿಸುವಂತೆ ಯೆಹೋವನು ಅವಕಾಶ ಮಾಡಿದನು. ಯಾಬೀನನು ಹಾಚೋರ್ ಎಂಬ ನಗರದಲ್ಲಿ ಆಳುತ್ತಿದ್ದನು. ಸೀಸೆರ ಎಂಬವನು ಅವನ ಸೇನಾಧಿಪತಿಯಾಗಿದ್ದನು. ಸೀಸೆರನು ಹರೋಷೆತ್ ಹಗ್ಗೋಯಿಮ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದನು. ಸೀಸೆರನ ಹತ್ತಿರ ಒಂಭೈನೂರು ಕಬ್ಬಿಣದ ರಥಗಳಿದ್ದವು. ಅವನು ಇಪ್ಪತ್ತು ವರ್ಷಗಳ ಕಾಲ ಇಸ್ರೇಲರನ್ನು ತುಂಬ ಬಾಧಿಸಿದನು. ಆದ್ದರಿಂದ ಇಸ್ರೇಲರು ಸಹಾಯಕ್ಕಾಗಿ ಯೆಹೋವನಲ್ಲಿ ಮೊರೆಯಿಟ್ಟರು.

ಆಗ ದೆಬೋರಳೆಂಬ ಒಬ್ಬ ಪ್ರವಾದಿನಿ ಇದ್ದಳು. ಅವಳು ಲಪ್ಪೀದೋತ್ ಎಂಬವನ ಪತ್ನಿಯಾಗಿದ್ದಳು. ಅವಳು ಆಗ ಇಸ್ರೇಲಿನ ನ್ಯಾಯಾಧೀಶೆಯಾಗಿದ್ದಳು. ಒಂದು ದಿನ, ಆಕೆ ದೆಬೋರಳ ಖರ್ಜೂರದ ಮರವೆಂದು ಪ್ರಸಿದ್ಧವಾದ ಮರದ ಕೆಳಗೆ ಕುಳಿತಿದ್ದಳು. ಆಗ ಇಸ್ರೇಲಿನ ಜನರು ಆಕೆಯ ಹತ್ತಿರ ಬಂದು, “ಸೀಸೆರನ ಬಗ್ಗೆ ಏನು ಮಾಡಬೇಕು?” ಎಂದು ಕೇಳಿದರು. ದೆಬೋರಳ ಖರ್ಜೂರಮರವು ಎಫ್ರಾಯೀಮ್ ಬೆಟ್ಟಪ್ರದೇಶದ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿ ಇದೆ. ದೆಬೋರಳು ತನ್ನನ್ನು ಬಂದು ಕಾಣಬೇಕೆಂದು ಬಾರಾಕನೆಂಬ ವ್ಯಕ್ತಿಗೆ ಹೇಳಿ ಕಳುಹಿಸಿದಳು. ಬಾರಾಕನು ಅಬೀನೋವಮನ ಮಗ. ಬಾರಾಕನು ನಫ್ತಾಲಿ ಪ್ರದೇಶದ ಕೆದೆಷ್ ಎಂಬ ಊರಲ್ಲಿ ವಾಸಮಾಡುತ್ತಿದ್ದನು. ದೆಬೋರಳು ಬಾರಾಕನಿಗೆ, “ಇಸ್ರೇಲಿನ ದೇವರಾದ ಯೆಹೋವನು, ‘ನೀನು ಹೋಗಿ ನಫ್ತಾಲಿ ಮತ್ತು ಜೆಬುಲೂನ್ ಕುಲಗಳವರ ಹತ್ತು ಸಾವಿರ ಜನರನ್ನು ಸೇರಿಸಿ ಅವರನ್ನು ತಾಬೋರ್ ಬೆಟ್ಟಕ್ಕೆ ಕರೆದುಕೊಂಡು ಹೋಗು. ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನ್ ನದಿಗೆ ಬರುವಂತೆ ಮಾಡುತ್ತೇನೆ. ಅಲ್ಲಿ ನೀನು ಸೀಸೆರನನ್ನು ಸೋಲಿಸುವಂತೆ ಮಾಡುತ್ತೇನೆ’ ಎಂದು ಹೇಳಿದ್ದಾನೆ” ಎಂದಳು.

ಕೀರ್ತನೆಗಳು 123

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

123 ಪರಲೋಕದಲ್ಲಿ ಸಿಂಹಾಸನಾರೂಢನಾಗಿರುವಾತನೇ,
    ನಿನ್ನ ಕಡೆಗೆ ಕಣ್ಣೆತ್ತಿ ನೋಡುತ್ತಾ ಪ್ರಾರ್ಥಿಸುವೆನು.
ಸೇವಕರು ತಮಗೆ ಬೇಕಾದವುಗಳಿಗಾಗಿ ತಮ್ಮ ಯಜಮಾನರನ್ನು ಅವಲಂಬಿಸಿಕೊಳ್ಳುವರು;
    ಸೇವಕಿಯರು ತಮ್ಮ ಯಜಮಾನಿಯರನ್ನು ಅವಲಂಬಿಸಿಕೊಳ್ಳುವರು.
ಅಂತೆಯೇ, ನಾವು ನಮ್ಮ ದೇವರಾದ ಯೆಹೋವನನ್ನು ಅವಲಂಬಿಸಿಕೊಳ್ಳುವೆವು.
    ಆತನ ಕರುಣೆಯನ್ನೇ ನಿರೀಕ್ಷಿಸುವೆವು.
ಯೆಹೋವನೇ, ನಮಗೆ ಕರುಣೆತೋರು,
    ಬಹುಕಾಲದಿಂದ ನಾವು ಅವಮಾನಿತರಾಗಿದ್ದೇವೆ.
ಗರ್ವಿಷ್ಠರೂ ಮೊಂಡರೂ
    ನಮ್ಮನ್ನು ಸಾಕಷ್ಟು ಗೇಲಿ ಮಾಡಿದ್ದಾರೆ.

1 ಥೆಸಲೋನಿಕದವರಿಗೆ 5:1-11

ಪ್ರಭುವು ಪ್ರತ್ಯಕ್ಷನಾಗುವಾಗ ಸಿದ್ಧರಾಗಿರಿ

ಸಹೋದರ ಸಹೋದರಿಯರೇ, ಈಗ ನಾವು ಕಾಲ ಮತ್ತು ದಿನಗಳ ಬಗ್ಗೆ ನಿಮಗೆ ಬರೆಯುವ ಅವಶ್ಯವಿಲ್ಲ. ಪ್ರಭುವು ಪ್ರತ್ಯಕ್ಷನಾಗುವ ದಿನವು ರಾತ್ರಿಕಾಲದಲ್ಲಿ ಕಳ್ಳನು ಬರುವಂತೆ ಇದ್ದಕ್ಕಿದ್ದಂತೆ ಬರುತ್ತದೆ ಎಂಬುದು ನಿಮಗೆಲ್ಲ ಚೆನ್ನಾಗಿ ತಿಳಿದಿದೆ. “ನಮಗೆ ಶಾಂತಿಯಿದೆ. ನಾವು ಸುರಕ್ಷಿತರಾಗಿದ್ದೇವೆ” ಎಂದು ಜನರು ಹೇಳುವಾಗಲೇ ಅವರಿಗೆ ವಿನಾಶವು ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ ಬರುತ್ತದೆ. ಆ ಜನರು ತಪ್ಪಿಸಿಕೊಳ್ಳಲಾಗುವುದಿಲ್ಲ.

ಆದರೆ ಸಹೋದರ ಸಹೋದರಿಯರೇ, ನೀವು ಕತ್ತಲಿನಲ್ಲಿ (ಪಾಪದಲ್ಲಿ) ವಾಸಿಸುತ್ತಿಲ್ಲ. ಆ ದಿನವು ನಿಮಗೆ ಕಳ್ಳನಂತೆ ಇದ್ದಕ್ಕಿದ್ದಂತೆ ಬರುವುದಿಲ್ಲ. ನೀವೆಲ್ಲರೂ ಬೆಳಕಿಗೆ ಸೇರಿದವರು ಮತ್ತು ಹಗಲಿಗೆ ಸೇರಿದವರು. ನಾವು ರಾತ್ರಿಗಾಗಲಿ ಅಥವಾ ಕತ್ತಲೆಗಾಗಲಿ ಸೇರಿದವರಲ್ಲ. ಆದುದರಿಂದ ನಾವು ಇತರ ಜನರಂತಿರಬಾರದು. ನಾವು ನಿದ್ರೆ ಮಾಡುವುದೇ ಬೇಡ. ನಾವು ಎಚ್ಚರದಿಂದ ಇದ್ದು, ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು. ನಿದ್ದೆ ಮಾಡುವ ಜನರು ರಾತ್ರಿಯಲ್ಲಿ ನಿದ್ರಿಸುತ್ತಾರೆ. ಕುಡಿದು ಅಮಲೇರುವವರು ರಾತ್ರಿಯಲ್ಲಿ ಕುಡಿದು ಅಮಲೇರುತ್ತಾರೆ. ಆದರೆ ನಾವು ಹಗಲಿಗೆ ಸೇರಿದವರಾದ್ದರಿಂದ ನಮ್ಮನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ನಾವು ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಪ್ರೀತಿಯನ್ನೂ ನಂಬಿಕೆಯನ್ನೂ ಧರಿಸಿಕೊಳ್ಳಬೇಕು. ರಕ್ಷಣೆಯ ನಿರೀಕ್ಷೆಯು ನಮಗೆ ಶಿರಸ್ತ್ರಾಣವಾಗಿರಬೇಕು.

ದೇವರು ನಮ್ಮನ್ನು ಆರಿಸಿಕೊಂಡದ್ದು ತನ್ನ ಕೋಪಕ್ಕೆ ಗುರಿಯಾಗಲಿ ಎಂದಲ್ಲ. ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ರಕ್ಷಣೆಯಾಗಲೆಂದೇ ದೇವರು ನಮ್ಮನ್ನು ಆರಿಸಿಕೊಂಡನು. 10 ನಾವು ತನ್ನೊಂದಿಗೆ ಜೀವಿಸಲೆಂದು ಯೇಸು ನಮಗಾಗಿ ಸತ್ತನು. ಯೇಸು ಪ್ರತ್ಯಕ್ಷನಾದಾಗ, ನಾವು ಜೀವಿಸುತ್ತಿರುತ್ತೇವೋ ಇಲ್ಲವೆ ಸತ್ತಿರುತ್ತೇವೋ ಎಂಬುದು ಮುಖ್ಯವಲ್ಲ. 11 ಆದ್ದರಿಂದ ಒಬ್ಬರನ್ನೊಬ್ಬರು ಸಂತೈಸಿ ಬಲಪಡಿಸಿರಿ. ಈಗ ನೀವು ಮಾಡುತ್ತಿರುವುದು ಅದನ್ನೇ.

ಮತ್ತಾಯ 25:14-30

ಮೂವರು ಸೇವಕರನ್ನು ಕುರಿತ ಸಾಮ್ಯ

(ಲೂಕ 19:11-27)

14 “ಪರಲೋಕರಾಜ್ಯವು, ತನ್ನ ಮನೆಯನ್ನು ಬಿಟ್ಟು ಬೇರೆ ಸ್ಥಳವನ್ನು ಸಂದರ್ಶಿಸುವುದಕ್ಕೆ ಪ್ರಯಾಣ ಮಾಡಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆ ಮನುಷ್ಯನು ತಾನು ಹೊರಡುವುದಕ್ಕೆ ಮುಂಚೆ ತನ್ನ ಸೇವಕರೊಂದಿಗೆ ಮಾತನಾಡಿ, ತನ್ನ ಆಸ್ತಿಯನ್ನು ನೋಡಿಕೊಳ್ಳಲು ಅವರಿಗೆ ಹೇಳಿದನು. 15 ಅವನು ಆ ಸೇವಕರ ಸಾಮರ್ಥ್ಯಕ್ಕನುಸಾರವಾಗಿ ಎಷ್ಟೆಷ್ಟು ಜವಾಬ್ದಾರಿಕೆಯನ್ನು ಕೊಡಬೇಕೆಂಬುದನ್ನು ನಿರ್ಧರಿಸಿದನು. ಅವನು ಒಬ್ಬ ಸೇವಕನಿಗೆ ಐದು ತಲಾಂತು[a] ಮತ್ತೊಬ್ಬನಿಗೆ ಎರಡು ತಲಾಂತು ಕೊಟ್ಟನು. ಮೂರನೇ ಸೇವಕನಿಗೆ ಒಂದು ತಲಾಂತು ಕೊಟ್ಟನು. ಬಳಿಕ ಅವನು ಬೇರೆ ಸ್ಥಳಕ್ಕೆ ಹೊರಟುಹೋದನು. 16 ಐದು ತಲಾಂತು ತೆಗೆದುಕೊಂಡ ಸೇವಕನು ತಕ್ಷಣವೇ ಹೋಗಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಸಂಪಾದಿಸಿದನು. 17 ಎರಡು ತಲಾಂತು ಹೊಂದಿದ ಸೇವಕನೂ ಅದೇ ರೀತಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಎರಡು ತಲಾಂತು ಸಂಪಾದಿಸಿದನು. 18 ಆದರೆ ಒಂದು ತಲಾಂತು ಹೊಂದಿದವನು ಹೊರಟುಹೋಗಿ ನೆಲದಲ್ಲಿ ಒಂದು ಗುಂಡಿ ತೋಡಿ ಆ ಹಣವನ್ನು ಅಡಗಿಸಿಟ್ಟನು.

19 “ಬಹುಕಾಲದ ನಂತರ ಯಜಮಾನನು ಮನೆಗೆ ಬಂದನು. ತಾನು ಕೊಟ್ಟಿದ್ದ ಹಣದ ಕುರಿತಾಗಿ ಅವನು ಸೇವಕರನ್ನು ವಿಚಾರಿಸಿ ಲೆಕ್ಕ ಕೇಳಿದನು. 20 ಐದು ತಲಾಂತು ಪಡೆದ ಸೇವಕನು ಇನ್ನೂ ಐದು ತಲಾಂತನ್ನು ತನ್ನ ಯಜಮಾನನ ಬಳಿಗೆ ತಂದು, ‘ಧಣಿಯೇ, ನೀನು ನನ್ನಲ್ಲಿ ಭರವಸೆಯಿಟ್ಟು ಐದು ತಲಾಂತನ್ನು ಕೊಟ್ಟೆ. ನಾನು ಅದನ್ನು ವಿನಿಯೋಗಿಸಿ ಇನ್ನೂ ಐದು ತಲಾಂತು ಸಂಪಾದಿಸಿದ್ದೇನೆ’ ಎಂದನು.

21 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.

22 “ಆಮೇಲೆ ಎರಡು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ನನಗೆ ಎರಡು ತಲಾಂತು ಕೊಟ್ಟೆ. ನಾನು ಆ ಹಣವನ್ನು ಉಪಯೋಗಿಸಿ ಇನ್ನೂ ಎರಡು ತಲಾಂತು ಸಂಪಾದಿಸಿರುವೆ’ ಅಂದನು.

23 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ನೀನು ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು, ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.

24 “ಬಳಿಕ ಒಂದು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ಬಹಳ ಕಠಿಣ ಮನುಷ್ಯನು ಎಂದು ನಾನು ಬಲ್ಲೆ. ನೀನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನು. 25 ಆದ್ದರಿಂದ ನಾನು ಹೆದರಿಕೊಂಡು ನಿನ್ನ ಹಣವನ್ನು ಭೂಮಿಯಲ್ಲಿ ಅಡಗಿಸಿಟ್ಟೆನು. ನೀನು ನನಗೆ ಕೊಟ್ಟ ಹಣ ಇಲ್ಲಿದೆ, ತೆಗೆದುಕೊ’ ಅಂದನು.

26 “ಅದಕ್ಕೆ ಯಜಮಾನನು, ‘ನೀನು ಸೋಮಾರಿಯಾದ ಕೆಟ್ಟ ಸೇವಕ! ನಾನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನೆಂದು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನೆಂದು ನಿನಗೆ ಗೊತ್ತಿತ್ತೇ? 27 ಹಾಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ಆಗ ನಾನು ಅಸಲಿನೊಡನೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದೆನು’ ಎಂದು ಉತ್ತರಕೊಟ್ಟನು.

28 “ಬಳಿಕ ಯಜಮಾನನು ತನ್ನ ಬೇರೆ ಸೇವಕರಿಗೆ, ‘ಅವನ ಒಂದು ತಲಾಂತನ್ನು ತೆಗೆದುಕೊಂಡು ಐದು ತಲಾಂತು ಹೊಂದಿರುವ ಸೇವಕನಿಗೆ ಕೊಡಿರಿ. 29 ತನ್ನಲ್ಲಿರುವುದನ್ನು ವಿನಿಯೋಗಿಸುವ ಪ್ರತಿಯೊಬ್ಬನಿಗೂ ಹೆಚ್ಚಾಗಿ ಕೊಡಲ್ಪಡುವುದು, ಆದರೆ ತನ್ನಲ್ಲಿರುವುದನ್ನು ವಿನಿಯೋಗಿಸದಿರುವ ವ್ಯಕ್ತಿಯಿಂದ ಇದ್ದದ್ದನ್ನೂ ಕಸಿದುಕೊಳ್ಳಲಾಗುವುದು’ ಎಂದು ಹೇಳಿದನು. 30 ಬಳಿಕ ಆ ಯಜಮಾನನು, ‘ಕೆಲಸಕ್ಕೆ ಬಾರದ ಆ ಸೇವಕನನ್ನು, ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವ ಕಗ್ಗತ್ತಲೆಯ ಸ್ಥಳಕ್ಕೆ ದಬ್ಬಿರಿ’ ಎಂದು ಆಜ್ಞಾಪಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International