Add parallel Print Page Options

ದೇವರು ಕೊಡುವ ವರಗಳನ್ನು ಉಪಯೋಗಿಸಿರಿ

(ಮತ್ತಾಯ 25:14-30)

11 ಯೇಸು ಪ್ರಯಾಣ ಮಾಡುತ್ತಾ ಜೆರುಸಲೇಮಿನ ಸಮೀಪಕ್ಕೆ ಬಂದನು. ಕೆಲವು ಜನರು ದೇವರ ರಾಜ್ಯವು ಬೇಗನೆ ಬರಲಿದೆ ಎಂದುಕೊಂಡರು. 12 ಜನರ ಈ ಭಾವನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಈ ಸಾಮ್ಯವನ್ನು ಹೇಳಿದನು: “ಬಹಳ ಪ್ರಾಮುಖ್ಯನಾದ ಒಬ್ಬನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರುವುದಕ್ಕಾಗಿ ದೂರದೇಶಕ್ಕೆ[a] ಹೊರಟನು. ರಾಜ್ಯಾಧಿಕಾರವನ್ನು ಪಡೆದುಕೊಂಡ ಮೇಲೆ ಹಿಂತಿರುಗಿ ಬಂದು ತನ್ನ ಜನರನ್ನು ಆಳಬೇಕೆಂಬುದು ಅವನ ಬಯಕೆಯಾಗಿತ್ತು. 13 ಆದ್ದರಿಂದ ಅವನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಒಟ್ಟಾಗಿ ಕರೆದು ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಾವಿರ ರೂಪಾಯಿ ಕೊಟ್ಟು, ‘ನಾನು ಹಿಂತಿರುಗಿ ಬರುವವರೆಗೆ ಈ ಹಣದಿಂದ ವ್ಯಾಪಾರ ಮಾಡಿರಿ’ ಎಂದು ಹೇಳಿದನು. 14 ಆದರೆ ಅವನ ದೇಶದ ಜನರು ಅವನನ್ನು ದ್ವೇಷಿಸಿ, ಜನರ ಒಂದು ಗುಂಪನ್ನು ಅವನ ಹಿಂದೆ ಕಳುಹಿಸಿದರು. ಆ ಗುಂಪಿನ ಜನರು ದೂರದೇಶದಲ್ಲಿ, ‘ಇವನು ನಮ್ಮ ರಾಜನಾಗುವುದು ನಮಗೆ ಇಷ್ಟವಿಲ್ಲ!’ ಎಂದು ಹೇಳಿದರು.

15 “ಆದರೂ ಅವನು ಅರಸನಾದನು. ಅವನು ತನ್ನ ದೇಶಕ್ಕೆ ಹಿಂತಿರುಗಿದಾಗ, ‘ನನ್ನ ಹಣ ಹೊಂದಿರುವ ಸೇವಕರನ್ನು ಕರೆಯಿರಿ. ಅವರು ಅದರಿಂದ ಎಷ್ಟು ಹೆಚ್ಚು ಹಣ ಸಂಪಾದಿಸಿದ್ದಾರೆಂದು ನಾನು ನೋಡಬೇಕು’ ಎಂದು ಹೇಳಿದನು. 16 ಮೊದಲನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ ಸಂಪಾದಿಸಿದ್ದೇನೆ!’ ಎಂದು ಹೇಳಿದನು. 17 ಅರಸನು ಆ ಸೇವಕನಿಗೆ, ‘ಭಲೇ! ನೀನು ಒಳ್ಳೆಯ ಆಳು. ಚಿಕ್ಕವಿಷಯಗಳಲ್ಲಿ ನಾನು ನಿನ್ನ ಮೇಲೆ ಭರವಸೆ ಇಡಬಹುದೆಂದು ನನಗೆ ತಿಳಿಯಿತು. ಆದ್ದರಿಂದ ನನ್ನ ಹತ್ತು ಪಟ್ಟಣಗಳನ್ನು ಆಳುವುದಕ್ಕೆ ನಿನ್ನನ್ನು ನೇಮಿಸುವೆನು!’ ಎಂದು ಹೇಳಿದನು.

18 “ಎರಡನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿ ಸಂಪಾದಿಸಿದ್ದೇನೆ’ ಅಂದನು. 19 ಅರಸನು ಆ ಸೇವಕನಿಗೆ, ‘ನೀನು ನನ್ನ ಐದು ಪಟ್ಟಣಗಳಿಗೆ ಅಧಿಕಾರಿಯಾಗಿರು’ ಎಂದು ಹೇಳಿದನು.

20 “ಆ ಬಳಿಕ ಇನ್ನೊಬ್ಬ ಆಳು ಬಂದು ಅರಸನಿಗೆ, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿ ಇಲ್ಲಿದೆ. 21 ನೀನು ಬಲಿಷ್ಠನೂ ಕಠಿಣ ಮನುಷ್ಯನೂ ಸ್ವತಃ ಸಂಪಾದನೆ ಮಾಡದ ಹಣವನ್ನು ದೋಚಿಕೊಳ್ಳುವವನೂ ಸ್ವತಃ ನೀನೇ ಬೆಳೆಯದ ದವಸಧಾನ್ಯಗಳನ್ನು ಒಟ್ಟುಗೂಡಿಸುವವನೂ ಆಗಿರುವೆ. ಆದ್ದರಿಂದ ನಿನಗೆ ಹೆದರಿ ನಿನ್ನ ಹಣವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದೆ’ ಎಂದನು.

22 “ಆಗ ಅರಸನು ಆ ಸೇವಕನಿಗೆ, ‘ನೀನು ಕೆಟ್ಟ ಆಳು! ನಿನ್ನ ಸ್ವಂತ ಮಾತುಗಳಿಂದಲೇ ನಿನಗೆ ತೀರ್ಪು ಮಾಡುತ್ತೇನೆ. ನನ್ನನ್ನು ಕಠಿಣ ಮನುಷ್ಯನೆಂದು ನೀನು ಹೇಳಿದೆ. ಸ್ವತಃ ನಾನೇ ಸಂಪಾದನೆ ಮಾಡದ ಹಣವನ್ನು ನಾನು ತೆಗೆದುಕೊಳ್ಳುವುದಾಗಿಯೂ ಸ್ವತಃ ನಾನೇ ಬೆಳೆಯದ ದವಸಧಾನ್ಯಗಳನ್ನು ನಾನು ಸಂಗ್ರಹಿಸುವುದಾಗಿಯೂ ನೀನು ಹೇಳಿದೆ. 23 ಅದು ನಿಜವಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ನಾನು ಮರಳಿ ಬಂದಾಗ, ನನಗೆ ಸ್ವಲ್ಪ ಬಡ್ಡಿಯಾದರೂ ಸಿಕ್ಕುತ್ತಿತ್ತು’ ಎಂದನು. 24 ಬಳಿಕ ಅರಸನು ಅಲ್ಲಿದ್ದ ಜನರಿಗೆ, ‘ಈ ಸೇವಕನ ಒಂದುಸಾವಿರ ರೂಪಾಯಿ ತೆಗೆದುಕೊಂಡು ಹತ್ತುಸಾವಿರ ರೂಪಾಯಿ ಸಂಪಾದಿಸಿದವನಿಗೆ ಕೊಡಿರಿ’ ಎಂದು ಹೇಳಿದನು.

25 “ಆ ಜನರು ಅರಸನಿಗೆ, ‘ಸ್ವಾಮೀ, ಆ ಸೇವಕನ ಬಳಿ ಈಗಾಗಲೇ ಹತ್ತುಸಾವಿರ ರೂಪಾಯಿ ಇದೆಯಲ್ಲಾ!’ ಎಂದು ಹೇಳಿದರು.

26 “ಅರಸನು, ‘ತನ್ನಲ್ಲಿರುವುದನ್ನು ಉಪಯೋಗಿಸುವವನು ಹೆಚ್ಚು ಪಡೆಯುವನು. ಆದರೆ ತನ್ನಲ್ಲಿರುವುದನ್ನು ಉಪಯೋಗಿಸದವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು. 27 ಈಗ ನನ್ನ ವೈರಿಗಳೆಲ್ಲಿ? ನಾನು ಅರಸನಾಗುವುದನ್ನು ವಿರೋಧಿಸಿದ ಜನರೆಲ್ಲಿ? ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಕಣ್ಣೆದುರಿನಲ್ಲಿಯೇ ಕೊಲ್ಲಿರಿ!’ ಎಂದು ಹೇಳಿದನು.”

Read full chapter

Footnotes

  1. 19:12 ದೂರದೇಶ ಬಹುಶಃ, ರೋಮ್‌ನಗರ. ಅರಸರು ರೋಮ್ ಚಕ್ರವರ್ತಿಯಿಂದ ನೇಮಿಸಲ್ಪಡುತ್ತಿದ್ದರು.