Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 99

99 ಯೆಹೋವನೇ ರಾಜನು!
    ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
    ಭೂಮಿಯು ಭಯದಿಂದ ನಡುಗಲಿ.
ಚೀಯೋನಿನ ಯೆಹೋವನು ದೊಡ್ಡವನು!
    ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
    ಆತನೇ ಪರಿಶುದ್ಧನು.
ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
    ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
    ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
    ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
    ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
    ಅವರು ಆಜ್ಞೆಗಳಿಗೆ ವಿಧೇಯರಾದರು.
    ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
    ನೀನು ಕ್ಷಮಿಸುವ ದೇವರೆಂದೂ
    ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
    ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!

ವಿಮೋಚನಕಾಂಡ 39:32-43

ಮೋಶೆಯು ಪವಿತ್ರಗುಡಾರವನ್ನು ಪರೀಕ್ಷಿಸಿದ್ದು

32 ಹೀಗೆ ಪವಿತ್ರಗುಡಾರವಾದ ದೇವದರ್ಶನ ಗುಡಾರದ ಕೆಲಸವೆಲ್ಲವೂ ಮುಗಿಯಿತು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರೇಲರು ಪ್ರತಿಯೊಂದನ್ನೂ ಮಾಡಿದರು. 33 ಬಳಿಕ ಅವರು ಪವಿತ್ರಗುಡಾರವನ್ನು ಮೋಶೆಗೆ ತೋರಿಸಿದರು. ಅವರು ಗುಡಾರವನ್ನೂ ಅದರಲ್ಲಿರುವ ವಸ್ತುಗಳನ್ನೆಲ್ಲಾ ಅವನಿಗೆ ತೋರಿಸಿದರು. ಬಳೆಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳನ್ನೆಲ್ಲಾ ಅವನಿಗೆ ತೋರಿಸಿದರು. 34 ಅವರು ಕೆಂಪುಬಣ್ಣದ ಕುರಿತೊಗಲಿನಿಂದ ಮಾಡಿದ ಗುಡಾರದ ಮೇಲ್ಹೊದಿಕೆಯನ್ನು ಅವನಿಗೆ ತೋರಿಸಿದರು; ಶ್ರೇಷ್ಠವಾದ ತೊಗಲಿನಿಂದ ಮಾಡಿದ ಹೊದಿಕೆಯನ್ನೂ ಅವನಿಗೆ ತೋರಿಸಿದರು. ಮಹಾಪವಿತ್ರಸ್ಥಳವನ್ನು ಮುಚ್ಚುವ ಪರದೆಯನ್ನೂ ಅವನಿಗೆ ತೋರಿಸಿದರು.

35 ಅವರು ಮೋಶೆಗೆ ಒಡಂಬಡಿಕೆಯ ಪೆಟ್ಟಿಗೆಯನ್ನೂ ಆ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಉಪಯೋಗಿಸುವ ಕೋಲುಗಳನ್ನೂ ಪೆಟ್ಟಿಗೆಯ ಕೃಪಾಸನವನ್ನೂ ಮೋಶೆಗೆ ತೋರಿಸಿದರು. 36 ಅವರು ಮೇಜನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ನೈವೇದ್ಯದ ರೊಟ್ಟಿಯನ್ನೂ ಅವನಿಗೆ ತೋರಿಸಿದರು. 37 ಅವರು ಅಪ್ಪಟ ಬಂಗಾರದ ದೀಪಸ್ತಂಭವನ್ನೂ ಅದರಲ್ಲಿರುವ ಹಣತೆಗಳನ್ನೂ ಎಣ್ಣೆಯನ್ನೂ ಹಣತೆಗಳೊಂದಿಗೆ ಉಪಯೋಗಿಸುವ ಇತರ ವಸ್ತುಗಳನ್ನೂ ತೋರಿಸಿದರು. 38 ಅವರು ಚಿನ್ನದ ವೇದಿಕೆಯನ್ನೂ ಅಭಿಷೇಕತೈಲವನ್ನೂ ಪರಿಮಳಧೂಪವನ್ನೂ ಗುಡಾರದ ಪ್ರವೇಶದಲ್ಲಿರುವ ಪರದೆಯನ್ನೂ ಮೋಶೆಗೆ ತೋರಿಸಿದರು. 39 ಅವರು ಅವನಿಗೆ ತಾಮ್ರದ ವೇದಿಕೆಯನ್ನೂ ತಾಮ್ರದ ಜಾಳಿಗೆಯನ್ನೂ ವೇದಿಕೆಯನ್ನು ಹೊರುವುದಕ್ಕೆ ಉಪಯೋಗಿಸುವ ಕೋಲುಗಳನ್ನೂ ವೇದಿಕೆಯ ಎಲ್ಲಾ ಉಪರಕಣಗಳನ್ನೂ ಗಂಗಾಳವನ್ನೂ ಮತ್ತು ಅದರ ಕೆಳಗಿರುವ ಗದ್ದಿಗೇಕಲ್ಲನ್ನೂ ಮೋಶೆಗೆ ತೋರಿಸಿದರು.

40 ಅವರು ಅಂಗಳದ ಸುತ್ತಲಿರುವ ಪರದೆಗಳ ಗೋಡೆಯನ್ನೂ ಅದರ ಕಂಬಗಳನ್ನೂ ಗದ್ದಿಗೇಕಲ್ಲುಗಳನ್ನೂ ಅಂಗಳದ ಪ್ರವೇಶವನ್ನು ಮುಚ್ಚುವ ಪರದೆಯನ್ನೂ ಹಗ್ಗಗಳನ್ನೂ ಗುಡಾರದ ಗೂಟಗಳನ್ನೂ ದೇವದರ್ಶನದ ಪವಿತ್ರಗುಡಾರದ ಎಲ್ಲಾ ವಸ್ತುಗಳನ್ನೂ ಮೋಶೆಗೆ ತೋರಿಸಿದರು.

41 ತರುವಾಯ ಮೋಶೆಗೆ ಪವಿತ್ರಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಯಾಜಕರಿಗಾಗಿ ಮಾಡಿದ ಬಟ್ಟೆಗಳನ್ನು ಅಂದರೆ ಯಾಜಕನಾದ ಆರೋನನಿಗೆ ಮತ್ತು ಅವನ ಮಕ್ಕಳಿಗಾಗಿ ಮಾಡಿದ ವಿಶೇಷ ಬಟ್ಟೆಗಳನ್ನು ಅವರು ತೋರಿಸಿದರು. ಅವರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಬಟ್ಟೆಗಳು ಇವುಗಳೇ.

42 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರೇಲರು ಇವುಗಳನ್ನೆಲ್ಲಾ ಮಾಡಿದರು. 43 ಮೋಶೆಯು ಎಲ್ಲಾ ಕೆಲಸವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಎಲ್ಲವೂ ಮಾಡಲ್ಪಟ್ಟಿದ್ದರಿಂದ ಮೋಶೆ ಅವರನ್ನು ಆಶೀರ್ವದಿಸಿದನು.

ಮತ್ತಾಯ 14:1-12

ಯೇಸುವಿನ ಕುರಿತು ಹೆರೋದನ ಅಭಿಪ್ರಾಯ

(ಮಾರ್ಕ 6:14-29; ಲೂಕ 9:7-9)

14 ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು. ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು.

ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟ ರೀತಿ

ಈ ಸಮಯಕ್ಕೆ ಮೊದಲೇ ಹೆರೋದ್ಯಳ ನಿಮಿತ್ತವಾಗಿ ಹೆರೋದನು ಯೋಹಾನನನ್ನು ಸರಪಣಿಗಳಿಂದ ಬಂಧಿಸಿ, ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಹೆಂಡತಿ. ಯೋಹಾನನು ಹೆರೋದನಿಗೆ, “ಹೆರೋದ್ಯಳನ್ನು ನೀನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದುದೇ ಈ ಸೆರೆವಾಸಕ್ಕೆ ಕಾರಣ. ಹೆರೋದನು ಯೋಹಾನನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟು ಕೊಲ್ಲಿಸಿರಲಿಲ್ಲ. ಜನರು ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು.

ಹೆರೋದನ ಹುಟ್ಟುಹಬ್ಬದ ದಿನದಂದು ಹೆರೋದ್ಯಳ ಮಗಳು ಹೆರೋದನ ಮತ್ತು ಅವನ ಅತಿಥಿಗಳ ಮುಂದೆ ನರ್ತಿಸಿದಳು. ಹೆರೋದನು ಅವಳನ್ನು ಬಹಳ ಮೆಚ್ಚಿಕೊಂಡನು. ಆದ್ದರಿಂದ ಅವನು, “ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ” ಎಂದು ಅವಳಿಗೆ ವಾಗ್ದಾನ ಮಾಡಿದನು. ಏನು ಕೇಳಿಕೊಳ್ಳಬೇಕೆಂದು ಹೆರೋದ್ಯಳು ತನ್ನ ಮಗಳಿಗೆ ಹೇಳಿಕೊಟ್ಟಳು. ಆದ್ದರಿಂದ ಅವಳು ಹೆರೋದನಿಗೆ, “ಸ್ನಾನಿಕ ಯೋಹಾನನ ತಲೆಯನ್ನು ಇಲ್ಲಿಯೇ ಈ ತಟ್ಟೆಯ ಮೇಲೆಯೇ ನನಗೆ ಕೊಡು” ಎಂದು ಹೇಳಿದಳು.

ರಾಜ ಹೆರೋದನು ಬಹಳವಾಗಿ ದುಃಖಪಟ್ಟನು. ಆದರೆ ಏನು ಕೇಳಿದರೂ ಕೊಡುತ್ತೇನೆಂದು ಅವನು ಅವಳಿಗೆ ವಾಗ್ದಾನ ಮಾಡಿದ್ದನು. ಹೆರೋದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರು ಸಹ ಆ ವಾಗ್ದಾನವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ಕೊಡುವುದಕ್ಕೆ ಹೆರೋದನು ಅಪ್ಪಣೆಕೊಟ್ಟನು. 10 ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿಕೊಂಡು ಬರಲು ಅವನು ಸೈನಿಕರನ್ನು ಕಳುಹಿಸಿಕೊಟ್ಟನು. 11 ಅವರು ಯೋಹಾನನ ತಲೆಯನ್ನು ತಟ್ಟೆಯ ಮೇಲೆ ತಂದು ಅವಳಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ತೆಗೆದುಕೊಂಡು ಹೋದಳು. 12 ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಬಳಿಕ ಅವರು ಯೇಸುವಿನ ಬಳಿಗೆ ಹೋಗಿ ಸಂಭವಿಸಿದ್ದನ್ನೆಲ್ಲ ತಿಳಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International