Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
121 ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ.
ನನಗೆ ಸಹಾಯವು ಎಲ್ಲಿಂದ ಬರುವುದು?
2 ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ಯೆಹೋವನಿಂದಲೇ
ನನಗೆ ಸಹಾಯವು ಬರುವುದು.
3 ಆತನು ನಿನ್ನನ್ನು ಬೀಳಗೊಡಿಸುವುದಿಲ್ಲ;
ನಿನ್ನ ಸಂರಕ್ಷಕನು ನಿದ್ರೆಹೋಗುವುದಿಲ್ಲ.
4 ಇಸ್ರೇಲಿನ ಸಂರಕ್ಷಕನು ತೂಕಡಿಸುವುದಿಲ್ಲ,
ನಿದ್ರಿಸುವುದೂ ಇಲ್ಲ!
5 ನಿನ್ನನ್ನು ಕಾಯುವವನು ಯೆಹೋವನೇ.
ನಿನ್ನನ್ನು ರಕ್ಷಿಸಲು ಆತನು ನಿನ್ನ ಬಲಗಡೆಯಲ್ಲಿ ನಿಂತಿದ್ದಾನೆ.
6 ಹಗಲಲ್ಲಿ ಸೂರ್ಯನೂ
ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ.
7 ಯೆಹೋವನು ನಿನ್ನನ್ನು ಎಲ್ಲಾ ಅಪಾಯಗಳಿಂದ ರಕ್ಷಿಸುವನು;
ನಿನ್ನ ಪ್ರಾಣವನ್ನು ಕಾಯುವನು.
8 ನೀನು ಹೋಗುವಾಗಲೂ ಬರುವಾಗಲೂ ಯೆಹೋವನು ನಿನಗೆ ಸಹಾಯಮಾಡುವನು.
ಆತನು ನಿನ್ನನ್ನು ಸದಾಕಾಲ ಕಾಪಾಡುವನು.
13 ಬಳಿಕ ಯೆಹೋವನು ಮೋಶೆಗೆ, 2 “ಇಸ್ರೇಲರಲ್ಲಿ ಹುಟ್ಟಿದ ಚೊಚ್ಚಲು ಗಂಡುಮಕ್ಕಳೆಲ್ಲಾ ನನಗೆ ಮೀಸಲಾಗಿರಬೇಕು; ಪ್ರತಿಯೊಬ್ಬ ಚೊಚ್ಚಲು ಮಗನು ನನ್ನವನೇ. ಪ್ರತಿಯೊಂದು ಚೊಚ್ಚಲು ಪಶುವು ನನ್ನದೇ” ಎಂದು ಹೇಳಿದನು.
3 ಮೋಶೆಯು ಜನರಿಗೆ, “ನೀವು ಈಜಿಪ್ಟಿನ ಗುಲಾಮತನದಿಂದ ಬಿಡುಗಡೆಯಾದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಆದರೆ ಈ ದಿನದಲ್ಲಿ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ನೀವು ಹುಳಿಯಿರುವ ರೊಟ್ಟಿಯನ್ನು ತಿನ್ನಬಾರದು. 4 ಅಬೀಬ್ ತಿಂಗಳಿನ ಈ ದಿನದಲ್ಲಿ ನೀವು ಈಜಿಪ್ಟನ್ನು ಬಿಟ್ಟು ಹೊರಟಿರಿ. 5 ಆಗ ಯೆಹೋವನು ಒಂದು ವಿಶೇಷ ವಾಗ್ದಾನವನ್ನು ನಿಮ್ಮ ಪೂರ್ವಿಕರಿಗೆ ಮಾಡಿದನು. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸಿಸುವ ಸಮೃದ್ಧಿಕರವಾದ ದೇಶವನ್ನು ನಿಮಗೆ ಕೊಡುವುದಾಗಿ ಯೆಹೋವನು ವಾಗ್ದಾನ ಮಾಡಿದನು. ಆತನು ನಿಮಗೆ ಆ ದೇಶವನ್ನು ಕೊಟ್ಟಾಗ ಪ್ರತಿವರ್ಷದ ಮೊದಲನೆಯ ತಿಂಗಳ ಈ ದಿನವನ್ನು ಆರಾಧನೆಯ ವಿಶೇಷ ದಿನವನ್ನಾಗಿ ಇಟ್ಟುಕೊಳ್ಳಬೇಕು.
6 “ಏಳು ದಿನಗಳವರೆಗೆ ನೀವು ಕೇವಲ ಹುಳಿಯಿಲ್ಲದ ರೊಟ್ಟಿಯನ್ನೇ ತಿನ್ನಬೇಕು. ಏಳನೆಯ ದಿನದಲ್ಲಿ ಯೊಹೋವನ ಘನತೆಗಾಗಿ ಒಂದು ದೊಡ್ಡ ಹಬ್ಬ ಮಾಡಬೇಕು. 7 ಆದ್ದರಿಂದ ಹುಳಿಯಿರುವ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಬಾರದು. ನಿಮ್ಮ ದೇಶದಲ್ಲಿ ಹುಳಿಯಿರುವ ರೊಟ್ಟಿ ಇರಲೇಕೂಡದು. 8 ಈ ದಿನದಲ್ಲಿ ನೀವು ನಿಮ್ಮ ಮಕ್ಕಳಿಗೆ, ‘ಯೆಹೋವನು ನಮ್ಮನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದದ್ದರಿಂದ ನಾವು ಈ ಹಬ್ಬವನ್ನು ಮಾಡುತ್ತಿದ್ದೇವೆ’ ಎಂದು ಹೇಳಬೇಕು.
9 “ಈ ಹಬ್ಬವು ನಿಮ್ಮ ಕೈಗಳಲ್ಲಿ ಜ್ಞಾಪಕಪಟ್ಟಿಯಂತಿದ್ದು ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ಮತ್ತು ನಿಮಗೆ ಆತನು ನೀಡಿದ ಉಪದೇಶಗಳನ್ನು ನೆನಪಿಗೆ ತರುತ್ತದೆ. 10 ಆದ್ದರಿಂದ ಪ್ರತಿವರ್ಷ ನಿಯಮಿತವಾದ ಕಾಲದಲ್ಲಿ ನೀವು ಈ ಹಬ್ಬವನ್ನು ಆಚರಿಸಬೇಕು.
ನಂಬಿಕೆಗಿರುವ ಶಕ್ತಿ
(ಮಾರ್ಕ 11:12-14,20-24)
18 ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19 ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು.
20 ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು.
21 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. 22 ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International