Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 24:34-38

ರೆಬೆಕ್ಕಳನ್ನು ಇಸಾಕನಿಗಾಗಿ ಕೇಳಿದ್ದು

34 ಆ ಸೇವಕನು “ನಾನು ಅಬ್ರಹಾಮನ ಸೇವಕನು. 35 ಯೆಹೋವನು ನನ್ನ ಒಡೆಯನನ್ನು ಪ್ರತಿಯೊಂದರಲ್ಲಿಯೂ ಬಹಳವಾಗಿ ಆಶೀರ್ವದಿಸಿದ್ದಾನೆ. ನನ್ನ ಒಡೆಯನು ಮಹಾವ್ಯಕ್ತಿಯಾಗಿದ್ದಾನೆ. ಯೆಹೋವನು ಅಬ್ರಹಾಮನಿಗೆ ಅನೇಕ ಕುರಿಹಿಂಡುಗಳನ್ನೂ ದನಕರುಗಳ ಮಂದೆಗಳನ್ನೂ ಕೊಟ್ಟಿದ್ದಾನೆ. ಅಬ್ರಹಾಮನಿಗೆ ಬೇಕಾದಷ್ಟು ಬೆಳ್ಳಿಬಂಗಾರಗಳಿವೆ. ಅನೇಕ ಸೇವಕರಿದ್ದಾರೆ. ಅನೇಕ ಒಂಟೆಗಳೂ ಕತ್ತೆಗಳೂ ಇವೆ. 36 ಸಾರಳು ನನ್ನ ಒಡೆಯನ ಹೆಂಡತಿ. ಆಕೆ ತುಂಬಾ ವಯಸ್ಸಾಗಿರುವಾಗ ಒಬ್ಬ ಗಂಡುಮಗನನ್ನು ಹೆತ್ತಳು. ನನ್ನ ಒಡೆಯನು ತನ್ನ ಆಸ್ತಿಯನ್ನೆಲ್ಲ ಆ ಮಗನಿಗೇ ಕೊಟ್ಟಿದ್ದಾನೆ. 37 ನನ್ನ ಒಡೆಯನ್ನು ನನ್ನಿಂದ ಒಂದು ಪ್ರಮಾಣವನ್ನು ಬಲವಂತವಾಗಿ ಮಾಡಿಸಿದನು. ನನ್ನ ಒಡೆಯನು ನನಗೆ, ‘ನನ್ನ ಮಗನಿಗೆ ಕಾನಾನಿನ ಹುಡುಗಿಯೊಡನೆ ಮದುವೆಯಾಗದಂತೆ ನೀನು ನೋಡಿಕೊಳ್ಳಬೇಕು; ನಾವು ಈ ಜನರೊಡನೆ ವಾಸಿಸುತ್ತಿದ್ದೇವೆ. ಆದರೆ ಕಾನಾನಿನ ಹುಡುಗಿಯೊಂದಿಗೆ ನನ್ನ ಮಗನಿಗೆ ಮದುವೆಯಾಗುವುದು ನನಗೆ ಇಷ್ಟವಿಲ್ಲ. 38 ಆದ್ದರಿಂದ ನೀನು ನನ್ನ ಸ್ವದೇಶಕ್ಕೆ ಹೋಗಿ ನನ್ನ ಸ್ವಜನರಿಂದಲೇ ನನ್ನ ಮಗನಿಗೆ ಕನ್ಯೆಯನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದನು.

ಆದಿಕಾಂಡ 24:42-49

42 “ಇಂದು ನಾನು ಈ ಬಾವಿಯ ಬಳಿಗೆ ಬಂದು, ‘ನನ್ನ ಒಡೆಯನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ದಯವಿಟ್ಟು ನನ್ನ ಪ್ರವಾಸವನ್ನು ಯಶಸ್ವಿಗೊಳಿಸು. 43 ನಾನು ಬಾವಿಯ ಬಳಿಯಲ್ಲಿ ನಿಂತುಕೊಂಡು ನೀರನ್ನು ತೆಗೆದುಕೊಳ್ಳಲು ಬರುವ ಒಬ್ಬ ಯುವತಿಗಾಗಿ ಕಾದಿರುತ್ತೇನೆ. ಆಮೇಲೆ ನಾನು ಆಕೆಗೆ, “ದಯವಿಟ್ಟು ಕುಡಿಯಲು ನಿನ್ನ ಕೊಡದಿಂದ ನೀರನ್ನು ಕೊಡು” ಎಂದು ಕೇಳುತ್ತೇನೆ. 44 ಅವಳು ನನಗೆ, “ನೀನೂ ನೀರನ್ನು ಕುಡಿ, ನಿನ್ನ ಒಂಟೆಗಳಿಗೂ ನೀರನ್ನು ತಂದುಕೊಡುವೆ” ಎಂದು ಹೇಳಿದರೆ, ನನ್ನ ಒಡೆಯನ ಮಗನಿಗೆ ಯೆಹೋವನು ಆರಿಸಿಕೊಂಡಿರುವ ಕನ್ನಿಕೆ ಇವಳೇ ಎಂಬುದಾಗಿ ತಿಳಿದುಕೊಳ್ಳುವೆ’ ಎಂದು ಪ್ರಾರ್ಥಿಸಿದೆ.

45 “ನಾನು ಪ್ರಾರ್ಥನೆ ಮುಗಿಸುವಷ್ಟರಲ್ಲಿ ರೆಬೆಕ್ಕಳು ನೀರಿಗಾಗಿ ಬಾವಿಗೆ ಬಂದಳು. ಆಕೆ ಹೆಗಲ ಮೇಲೆ ಕೊಡವನ್ನು ಹೊತ್ತುಕೊಂಡಿದ್ದಳು. ಆಕೆ ಬಾವಿಗೆ ಹೋಗಿ ನೀರನ್ನು ತೆಗೆದುಕೊಂಡಳು. ನಾನು ಆಕೆಗೆ, ದಯವಿಟ್ಟು ಸ್ವಲ್ಪ ನೀರನ್ನು ಕೊಡು ಎಂದು ಕೇಳಿದೆ. 46 ಆ ಕೂಡಲೆ ಆಕೆಯು ಕೊಡವನ್ನು ಹೆಗಲಿನಿಂದ ಕೆಳಗಿಳಿಸಿ, ನನಗೆ ನೀರನ್ನು ಕೊಟ್ಟು, ‘ನೀರನ್ನು ಕುಡಿ; ನಿನ್ನ ಒಂಟೆಗಳಿಗೂ ನೀರನ್ನು ತಂದುಕೊಡುವೆ’ ಎಂದು ಹೇಳಿದಳು. ನಾನು ನೀರನ್ನು ಕುಡಿದ ಮೇಲೆ ಆಕೆ ನನ್ನ ಒಂಟೆಗಳಿಗೂ ನೀರನ್ನು ತಂದುಕೊಟ್ಟಳು. 47 ಆಮೇಲೆ ನಾನು ಆಕೆಗೆ, ‘ನಿನ್ನ ತಂದೆ ಯಾರು?’ ಎಂದು ಕೇಳಿದೆ, ಆಕೆ ‘ನನ್ನ ತಂದೆಯ ಹೆಸರು ಬೆತೂವೇಲ. ಅವನು ಮಿಲ್ಕಳ ಮತ್ತು ನಾಹೋರನ ಮಗನು’ ಎಂದು ಹೇಳಿದಳು. ಆಗ ನಾನು ಆಕೆಗೆ ಉಂಗುರವನ್ನೂ ಕೈಬಳೆಗಳನ್ನೂ ಕೊಟ್ಟೆನು. 48 ಆ ಸಮಯದಲ್ಲಿ ನಾನು ತಲೆಬಾಗಿ ಯೆಹೋವನಿಗೆ ವಂದನೆ ಸಲ್ಲಿಸಿದೆನು. ನನ್ನ ಒಡೆಯನಾದ ಅಬ್ರಹಾಮನ ದೇವರಾದ ಯೆಹೋವನನ್ನು ಸ್ತುತಿಸಿ ಕೊಂಡಾಡಿದೆನು; ಯಾಕೆಂದರೆ ಆತನು ನನ್ನನ್ನು ನನ್ನ ಒಡೆಯನ ತಮ್ಮನ ಮೊಮ್ಮಗಳ ಬಳಿಗೆ ನೇರವಾಗಿ ನಡೆಸಿದನು. 49 ಈಗ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ. ನೀವು ನನ್ನ ಒಡೆಯನಿಗೆ ಪ್ರೀತಿಯಿಂದಲೂ ನಂಬಿಕೆಯಿಂದಲೂ ನಿಮ್ಮ ಮಗಳನ್ನು ಕೊಡುವಿರಾ? ಅಥವಾ ಕೊಡುವುದಿಲ್ಲವೇ? ನಿಮ್ಮ ಉತ್ತರಕ್ಕನುಸಾರವಾಗಿ ನಾನು ಮುಂದಿನ ಕಾರ್ಯದ ಬಗ್ಗೆ ಆಲೋಚಿಸುವೆ” ಎಂದು ಹೇಳಿದನು.

ಆದಿಕಾಂಡ 24:58-67

58 ಅವರು ರೆಬೆಕ್ಕಳನ್ನು ಕರೆದು, “ಈಗಲೇ ಈ ಮನುಷ್ಯನೊಡನೆ ಹೋಗಲು ನಿನಗೆ ಇಷ್ಟವಿದೆಯೋ?” ಎಂದು ಕೇಳಿದರು.

ರೆಬೆಕ್ಕಳು, “ಹೌದು, ನಾನು ಹೋಗುತ್ತೇನೆ” ಅಂದಳು.

59 ಆದ್ದರಿಂದ ಅವರು ರೆಬೆಕ್ಕಳನ್ನು ಅಬ್ರಹಾಮನ ಸೇವಕನೊಂದಿಗೂ ಅವನ ಸಂಗಡಿಗರೊಂದಿಗೂ ಕಳುಹಿಸಿಕೊಟ್ಟರು. ರೆಬೆಕ್ಕಳ ಸೇವಕಿ ಸಹ ಅವರೊಂದಿಗೆ ಹೋದಳು. 60 ಅವರು ಹೊರಡಲು ಸಿದ್ಧರಾಗಿದ್ದಾಗ ಅವರು ರೆಬೆಕ್ಕಳಿಗೆ,

“ನಮ್ಮ ತಂಗಿಯೇ,
    ನೀನು ಕೋಟ್ಯಾನುಕೋಟಿ ಜನರ ತಾಯಿಯಾಗು.
ನಿನ್ನ ಸಂತತಿಗಳವರು ತಮ್ಮ ಶತ್ರುಗಳನ್ನು ಸೋಲಿಸಿ
    ಅವರ ನಗರಗಳನ್ನು ವಶಮಾಡಿಕೊಳ್ಳಲಿ”

ಎಂದು ಹೇಳಿ ಹರಸಿದರು.

61 ಆಮೇಲೆ ರೆಬೆಕ್ಕಳು ಮತ್ತು ಆಕೆಯ ಸೇವಕಿಯರು ಒಂಟೆಯ ಮೇಲೆ ಹತ್ತಿ ಕುಳಿತುಕೊಂಡು ಆ ಸೇವಕನನ್ನೂ ಅವನ ಸಂಗಡಿಗರನ್ನೂ ಹಿಂಬಾಲಿಸಿದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರೆದುಕೊಂಡು ಮನೆಗೆ ಮರಳಿ ಪ್ರಯಾಣಮಾಡಿದನು.

62 ಆ ಸಮಯದಲ್ಲಿ, ಇಸಾಕನು ಬೀರ್‌ಲಹೈರೋಯಿಗೆ ಹೋಗಿ ಬಂದಿದ್ದನು; ಯಾಕೆಂದರೆ ಅವನು ನೆಗವ್‌ನಲ್ಲಿ ವಾಸವಾಗಿದ್ದನು. 63 ಸಾಯಂಕಾಲದಲ್ಲಿ ಇಸಾಕನು ಧ್ಯಾನಮಾಡಲು ಹೊಲಕ್ಕೆ ಹೋದನು. ಇಸಾಕನು ಕಣ್ಣೆತ್ತಿ ನೋಡಿದಾಗ ಬಹುದೂರದಲ್ಲಿ ಒಂಟೆಗಳು ಬರುತ್ತಿರುವುದನ್ನು ಕಂಡನು.

64 ರೆಬೆಕ್ಕಳು ಕಣ್ಣೆತ್ತಿ ನೋಡಿದಾಗ ಇಸಾಕನನ್ನು ಕಂಡಳು. ಆಮೇಲೆ ಆಕೆ ಒಂಟೆಯಿಂದ ಬೇಗನೆ ಇಳಿದು ಬಂದಳು. 65 ಆಕೆ, ಆ ಸೇವಕನಿಗೆ, “ನಮ್ಮನ್ನು ಭೇಟಿಯಾಗಲು ಹೊಲದಲ್ಲಿ ಬರುತ್ತಿರುವ ಆ ಯೌವನಸ್ಥನು ಯಾರು?” ಎಂದು ಕೇಳಿದಳು.

ಆ ಸೇವಕನು, “ಅವನು ನನ್ನ ಒಡೆಯನ ಮಗನು” ಎಂದು ಹೇಳಿದನು. ಆ ಕೂಡಲೇ ರೆಬೆಕ್ಕಳು ತನ್ನ ಮುಖಕ್ಕೆ ಮುಸುಕನ್ನು ಹಾಕಿಕೊಂಡಳು.

66 ಆ ಸೇವಕನು ನಡೆದ ಸಂಗತಿಯನ್ನೆಲ್ಲಾ ಇಸಾಕನಿಗೆ ತಿಳಿಸಿದನು. 67 ನಂತರ ಇಸಾಕನು ಆಕೆಯನ್ನು ಕರೆದುಕೊಂಡು ತನ್ನ ತಾಯಿಯ ಗುಡಾರಕ್ಕೆ ಬಂದನು. ಅಂದು ರೆಬೆಕ್ಕಳು ಇಸಾಕನ ಹೆಂಡತಿಯಾದಳು. ಇಸಾಕನು ಅವಳನ್ನು ಬಹಳವಾಗಿ ಪ್ರೀತಿಸಿದನು. ತಾಯಿಯ ಸಾವಿನಿಂದ ಉಂಟಾಗಿದ್ದ ದುಃಖವು ಕಡಿಮೆಯಾಗಿ ಇಸಾಕನಿಗೆ ಆದರಣೆಯಾಯಿತು.

ಕೀರ್ತನೆಗಳು 45:10-17

10 ರಾಣಿಯೇ, ನನಗೆ ಕಿವಿಗೊಡು.
    ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ.
ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
11     ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು.
ಅವನು ನಿನಗೆ ಹೊಸ ಯಜಮಾನನಾಗಿರುವನು.
    ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[a]
12 ತೂರ್ ಪಟ್ಟಣದ ಶ್ರೀಮಂತರು
    ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.

13 ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು;
    ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14 ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು
    ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
15 ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ
    ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.

16 ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು;
    ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
17 ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು;
    ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.

ಪರಮ ಗೀತ 2:8-13

ಪ್ರಿಯತಮೆ

ಅಗೋ, ನನ್ನ ಪ್ರಿಯನ ಸ್ವರ!
    ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ
    ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
ನನ್ನ ಪ್ರಿಯನು ಸಾರಂಗದಂತೆಯೂ
    ಪ್ರಾಯದ ಜಿಂಕೆಯಂತೆಯೂ ಇದ್ದಾನೆ.
ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ;
    ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ;
    ಕಿಟಕಿಗಳಿಂದ ನೋಡುತ್ತಿದ್ದಾನೆ.
10 ನನ್ನ ಪ್ರಿಯನು ನನಗೆ ಹೀಗೆಂದನು:
“ನನ್ನ ಪ್ರಿಯಳೇ, ನನ್ನ ಸುಂದರಿಯೇ,
    ಎದ್ದೇಳು, ನಾವು ದೂರ ಹೋಗೋಣ!
11 ಇಗೋ, ಚಳಿಗಾಲ ಕಳೆಯಿತು;
    ಮಳೆಗಾಲ ಮುಗಿದುಹೋಯಿತು.
12 ಭೂಮಿಯ ಮೇಲೆ ಹೂವುಗಳು ಕಾಣುತ್ತವೆ;
    ಪಕ್ಷಿಗಳು ಹಾಡುವ ಸಮಯವು ಬಂದಿದೆ.
    ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
13 ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ;
    ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ.
ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು,
    ನಾವು ದೂರ ಹೋಗೋಣ!”

ರೋಮ್ನಗರದವರಿಗೆ 7:15-25

15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.

21 ಹೀಗಿರಲಾಗಿ, ನಾನು ಈ ನಿಯಮವನ್ನು ಕಲಿತುಕೊಂಡಿದ್ದೇನೆ: ನಾನು ಒಳ್ಳೆಯದನ್ನು ಮಾಡಲಿಚ್ಛಿಸುವಾಗ, ಕೆಟ್ಟದ್ದು ನನ್ನೊಳಗೇ ಇರುತ್ತದೆ. 22 ನನ್ನ ಅಂತರಂಗದಲ್ಲಿ ದೇವರ ನಿಯಮದ ವಿಷಯದಲ್ಲಿ ನಾನು ಸಂತೋಷಪಡುತ್ತೇನೆ. 23 ಆದರೆ ನನ್ನ ದೇಹದಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತಿರುವುದನ್ನು ನಾನು ಕಾಣುತ್ತೇನೆ. ನನ್ನ ಅಂತರಂಗ ಒಪ್ಪಿಕೊಳ್ಳುವ ನಿಯಮಕ್ಕೆ ವಿರುದ್ಧವಾಗಿ ಆ ನಿಯಮ ಹೋರಾಡುತ್ತದೆ. ನನ್ನ ದೇಹದಲ್ಲಿ ಕೆಲಸ ಮಾಡುತ್ತಿರುವ ಆ ಮತ್ತೊಂದು ನಿಯಮವೇ ಪಾಪದ ನಿಯಮವಾಗಿದೆ. ಆ ನಿಯಮವು ನನ್ನನ್ನು ತನ್ನ ಸೆರೆಯಾಳನ್ನಾಗಿ ಮಾಡುತ್ತದೆ. 24 ನಾನು ದುರಾವಸ್ಥೆಗೆ ಒಳಗಾಗಿದ್ದೇನೆ. ನನಗೆ ಮರಣವನ್ನು ತರುವ ಈ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25 ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ!

ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.

ಮತ್ತಾಯ 11:16-19

16 “ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ:

17 ‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು.
    ನೀವು ಕುಣಿಯಲಿಲ್ಲ;
ನಾವು ಶೋಕಗೀತೆ ಹಾಡಿದೆವು,
    ನೀವು ದುಃಖಿಸಲಿಲ್ಲ.’

18 ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ.’ 19 ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”

ಮತ್ತಾಯ 11:25-30

ಯೇಸು ಜನರಿಗೆ ವಿಶ್ರಾಂತಿದಾಯಕ

(ಲೂಕ 10:21-22)

25 ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಈ ಜನರಿಗೆ ನೀನು ಗೋಚರಪಡಿಸಿರುವೆ. 26 ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ.

27 “ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೋ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ.

28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. 29 ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International