Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 60

ದಾವೀದನು ಅರಾಮ್ ನಹಾರಾಯಿಮ್ ಮತ್ತು ಅರಾಮ್ ಜೋಬಾ ಎಂಬುವರೊಂದಿಗೆ ಹೋರಾಡಿದಾಗ ಮತ್ತು ಯೋವಾಬನು ಹಿಂತಿರುಗಿ ಬಂದು ಉಪ್ಪಿನ ಕಣಿವೆಯಲ್ಲಿ ಎದೋಮ್ಯರ 12,000 ಮಂದಿ ಸೈನಿಕರನ್ನು ಸೋಲಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

60 ದೇವರೇ, ನೀನು ನಮ್ಮನ್ನು ಕೋಪದಿಂದ ಕೈಬಿಟ್ಟಿರುವೆ;
    ನಮ್ಮನ್ನು ನಾಶಗೊಳಿಸಿರುವೆ.
    ನಮ್ಮನ್ನು ಪುನರ್‌ಸ್ಥಾಪಿಸು.
ನೀನು ಭೂಮಿಯನ್ನು ನಡುಗಿಸಿ ಸೀಳಿಬಿಟ್ಟಿರುವೆ.
    ನಮ್ಮ ದೇಶವು ಕುಸಿದುಬೀಳುತ್ತಿದೆ;
    ಅದನ್ನು ಸರಿಪಡಿಸು.
ನೀನು ನಿನ್ನ ಜನರಿಗೆ ಅನೇಕ ಕಷ್ಟಗಳನ್ನು ಕೊಟ್ಟಿರುವೆ.
    ನಾವು ಕುಡಿದವರಂತೆ ತೂರಾಡುತ್ತಾ ಬೀಳುತ್ತಿದ್ದೇವೆ.
ನಿನ್ನ ಆರಾಧಕರನ್ನು ನೀನು ಎಚ್ಚರಿಸುವೆ.
    ಈಗ ಅವರು ಶತ್ರುಗಳಿಂದ ಪಾರಾಗಬಹುದು.

ನಿನ್ನ ಮಹಾಶಕ್ತಿಯಿಂದ ನಮ್ಮನ್ನು ರಕ್ಷಿಸು!
    ನಮ್ಮ ಪ್ರಾರ್ಥನೆಗೆ ಉತ್ತರನೀಡಿ ನಿನ್ನ ಪ್ರಿಯರನ್ನು ರಕ್ಷಿಸು!

ದೇವರು ತನ್ನ ಆಲಯದೊಳಗೆ ಹೀಗೆಂದನು:
    “ನಾನು ಅವರಿಗೆ ಶೆಕೆಮನ್ನು ಕೊಡುವೆನು;
    ಸುಕ್ಕೋತ್ ಕಣಿವೆಯನ್ನೂ ಅವರಿಗೆ ಕೊಡುವೆನು.
    ಗಿಲ್ಯಾದ್ ಮತ್ತು ಮನಸ್ಸೆ ನನ್ನವೇ.
    ಎಫ್ರಾಯೀಮ್ ನನ್ನ ಶಿರಸ್ತ್ರಾಣ.
    ಯೆಹೂದ ನನ್ನ ರಾಜದಂಡ.
    ಮೋವಾಬ್ ನನ್ನ ಸ್ನಾನಪಾತ್ರೆ.
    ಎದೋಮ್ ನನ್ನ ಪಾದರಕ್ಷೆಗಳ ಸ್ಥಳ.
    ನಾನು ಫಿಲಿಷ್ಟಿಯರನ್ನು ಸೋಲಿಸಿ ಜಯಘೋಷ ಮಾಡುವೆ.”

9-10 ದೇವರೇ, ನೀನು ನಮ್ಮನ್ನು ಕೈಬಿಟ್ಟಿರುವೆ.
    ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲ.
ಹೀಗಿರಲು, ಕೋಟೆಕೊತ್ತಲುಗಳುಳ್ಳ ಪಟ್ಟಣಕ್ಕೆ ನನ್ನನ್ನು ನಡೆಸುವವರು ಯಾರು?
    ಎದೋಮಿನ ವಿರುದ್ಧ ನನ್ನನ್ನು ನಡೆಸುವವರು ಯಾರು?
11 ದೇವರೇ, ವೈರಿಗಳನ್ನು ಸೋಲಿಸಲು ನಮಗೆ ಸಹಾಯಮಾಡು!
    ಜನರು ನಮಗೆ ಸಹಾಯಮಾಡಲಾರರು!
12 ದೇವರೊಬ್ಬನೇ ನಮ್ಮನ್ನು ಬಲಗೊಳಿಸಬಲ್ಲನು.
    ಆತನೊಬ್ಬನೇ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು!

ಹೋಶೇಯ 13

ಇಸ್ರೇಲ್ ತನ್ನನ್ನು ತಾನೇ ನಾಶಮಾಡಿಕೊಂಡಿತು

13 “ಎಫ್ರಾಯೀಮ್ ಇಸ್ರೇಲರೊಳಗೆ ತನ್ನನ್ನು ತಾನೇ ಮುಖ್ಯಸ್ಥನನ್ನಾಗಿ ಮಾಡಿಕೊಂಡನು. ಎಫ್ರಾಯೀಮನು ಮಾತನಾಡಿದಾಗ ಜನರು ಹೆದರಿ ನಡುಗಿದರು. ಆದರೆ ಅವನು ಪಾಪದಲ್ಲಿ ಬಿದ್ದನು. ಬಾಳನನ್ನು ಪೂಜಿಸಲು ಪ್ರಾರಂಭಿಸಿದನು. ಈಗ ಇಸ್ರೇಲರು ಹೆಚ್ಚೆಚ್ಚಾಗಿ ಪಾಪ ಮಾಡುತ್ತಿರುತ್ತಾರೆ. ತಮಗಾಗಿ ವಿಗ್ರಹಗಳನ್ನು ಮಾಡಿಕೊಳ್ಳುತ್ತಾರೆ. ಅಕ್ಕಸಾಲಿಗರು ಬೆಳ್ಳಿಯಿಂದ ವಿಗ್ರಹಗಳನ್ನು ಮಾಡುವರು. ತಾವು ಮಾಡಿದ ಮೂರ್ತಿಗಳೊಂದಿಗೆ ಮಾತನಾಡುವರು. ಆ ವಿಗ್ರಹಗಳಿಗೆ ಯಜ್ಞವನ್ನರ್ಪಿಸುವರು. ಬಂಗಾರದ ಬಸವನ ವಿಗ್ರಹಕ್ಕೆ ಮುದ್ದು ಕೊಡುವರು. ಆದ್ದರಿಂದ ಆ ಜನರು ಬೇಗನೇ ಕಣ್ಮರೆಯಾಗುವರು. ಅವರು ಬೆಳಗಿನ ಜಾವದ ಇಬ್ಬನಿಯಂತೆ ಬೇಗನೇ ಮಾಯವಾಗುವರು. ಇಸ್ರೇಲರು ಕಣದಲ್ಲಿರುವ ಹೊಟ್ಟಿನಂತೆ ಗಾಳಿಯಲ್ಲಿ ಹೊಡೆದುಕೊಂಡು ಹೋಗುವರು. ಇಸ್ರೇಲರು ಮನೆಯೊಳಗಿಂದ ಮೇಲಕ್ಕೆ ಹೊರಟು ಆಮೇಲೆ ಕಾಣದೆಹೋಗುವ ಹೊಗೆಯಂತಿದ್ದಾರೆ.

“ನೀವು ಈಜಿಪ್ಟಿನಲ್ಲಿದ್ದ ದಿವಸಗಳಿಂದ ನಾನೇ ನಿಮ್ಮ ಯೆಹೋವನಾಗಿದ್ದೇನೆ. ನನ್ನ ಹೊರತು ಬೇರೆ ಯಾವ ದೇವರನ್ನೂ ನೀವು ತಿಳಿದಿರಲಿಲ್ಲ. ನನ್ನ ಹೊರತು ಬೇರೆ ಯಾವ ರಕ್ಷಕನೂ ಇಲ್ಲ. ಮರುಭೂಮಿಯಲ್ಲಿ ನಿಮ್ಮನ್ನು ತಿಳಿದುಕೊಂಡಿದ್ದೆನು. ಆ ಒಣಭೂಮಿಯಲ್ಲಿ ನಾನು ನಿಮ್ಮನ್ನು ಬಲ್ಲೆನು. ನಾನು ಇಸ್ರೇಲರಿಗೆ ಆಹಾರ ಒದಗಿಸಿದೆನು. ಅವರು ಆ ಆಹಾರವನ್ನು ಉಂಡು ತಿಂದು ತೃಪ್ತರಾಗಿ ಕೊಬ್ಬೇರಿದ್ದರಿಂದ ನನ್ನನ್ನು ಮರೆತರು.

“ಆದ್ದರಿಂದಲೇ ನಾನು ಅವರಿಗೆ ಸಿಂಹದಂತಿರುವೆನು. ದಾರಿ ಬದಿಯಲ್ಲಿ ಹೊಂಚುಹಾಕುವ ಚಿರತೆಯಂತಿರುವೆನು. ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲರಗಿ ಅವರನ್ನು ಗಾಯಗೊಳಿಸಿ ಅವರ ಎದೆಯನ್ನು ಸೀಳಿ ಬಿಡುವೆನು. ನಾನು ಸಿಂಹದಂತೆಯೂ ಕ್ರೂರ ಮೃಗದಂತೆಯೂ ಅವರನ್ನು ಸೀಳಿ ತಿಂದುಬಿಡುವೆನು.”

ದೈವಕೋಪದಿಂದ ಯಾರೂ ಇಸ್ರೇಲರನ್ನು ರಕ್ಷಿಸಲಾರರು

“ಇಸ್ರೇಲೇ, ನಾನು ನಿನಗೆ ಸಹಾಯ ಮಾಡಿದರೂ ನೀನು ನನಗೆ ವಿರೋಧವಾಗಿ ಎದ್ದಿರುವೆ. ಆದ್ದರಿಂದ ನಾನು ನಿನ್ನನ್ನು ನಾಶಮಾಡುವೆನು. 10 ನಿನ್ನ ಅರಸನೆಲ್ಲಿ? ನಿನ್ನ ಯಾವ ಪಟ್ಟಣದಲ್ಲಿಯಾಗಲಿ ಅವನು ನಿನ್ನನ್ನು ರಕ್ಷಿಸಲಾರ. ನಿನ್ನ ನ್ಯಾಯಾಧೀಶರುಗಳೆಲ್ಲಿ? ನೀನು, ‘ನಮಗೆ ರಾಜನನ್ನೂ ನಾಯಕರನ್ನೂ ಕೊಡು’ ಎಂದು ಕೇಳಿಕೊಂಡೆ. 11 ನಾನು ಕೋಪಗೊಂಡೆನು ಮತ್ತು ಒಬ್ಬ ಅರಸನನ್ನು ಕೊಟ್ಟೆನು. ನಾನು ಹೆಚ್ಚಾಗಿ ಕೋಪಗೊಂಡಾಗ ಅವನನ್ನು ತೆಗೆದುಬಿಟ್ಟೆನು.

12 “ಎಫ್ರಾಯೀಮ್ ತನ್ನ ಅಪರಾಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದನು.
    ತಾನು ಮಾಡಿದ ಪಾಪಗಳು ಯಾರಿಗೂ ತಿಳಿದಿಲ್ಲವೆಂದು ಅವನು ಭಾವಿಸಿದನು;
    ಆದರೆ ಅವನು ಶಿಕ್ಷಿಸಲ್ಪಡುವನು;
13 ಅವನಿಗಾಗುವ ಶಿಕ್ಷೆಯು ಒಬ್ಬ ಸ್ತ್ರೀಯ ಪ್ರಸವವೇದನೆಯಂತಿರುವದು.
    ಅವನು ಜಾಣನಾದ ಮಗನಾಗಿರುವದಿಲ್ಲ;
ಹುಟ್ಟುವ ಸಮಯ ಬಂದರೂ
    ಅವನು ಜೀವಿಸುವದಿಲ್ಲ.

14 “ಸಮಾಧಿಯಿಂದ ಅವರನ್ನು ರಕ್ಷಿಸುವೆನು;
    ಮರಣದಿಂದ ಅವರನ್ನು ಪಾರುಮಾಡುವೆನು.
ಮರಣವೇ, ನಿನ್ನ ವ್ಯಾಧಿಗಳೆಲ್ಲಿ?
    ಸಮಾಧಿಯೇ, ನಿನ್ನ ಶಕ್ತಿ ಎಲ್ಲಿ?
    ನಾನು ಪ್ರತಿಕಾರ ಸಲ್ಲಿಸುವದಿಲ್ಲ.
15 ಇಸ್ರೇಲ್ ತನ್ನ ಸಹೋದರರ ಮಧ್ಯದಲ್ಲಿ ಬೆಳೆಯುವನು.
    ಒಂದು ಬಲವಾದ ಪೂರ್ವದಿಕ್ಕಿನ ಗಾಳಿಯು ಬರುವದು.
    ಯೆಹೋವನ ಗಾಳಿಯು ಮರುಭೂಮಿಯಿಂದ ಬೀಸುವದು.
ಅವನ ನೀರಿನ ಒರತೆಯು ಒಣಗಿಹೋಗುವದು,
    ಆ ಗಾಳಿಯು ಇಸ್ರೇಲರ ಐಶ್ವರ್ಯವನ್ನೆಲ್ಲಾ ಎತ್ತಿಕೊಂಡು ಹೋಗಿಬಿಡುವದು.
16 ಸಮಾರ್ಯವು ಶಿಕ್ಷಿಸಲ್ಪಡಬೇಕು.
    ಯಾಕೆಂದರೆ ಆಕೆಯು ತನ್ನ ದೇವರಿಗೆ ವಿರುದ್ಧವಾಗಿ ನಡೆದಳು.
ಇಸ್ರೇಲರು ಖಡ್ಗದಿಂದ ಸಾಯುವರು.
    ಅವರ ಮಕ್ಕಳು ಹರಿಯಲ್ಪಟ್ಟು ಚೂರುಚೂರಾಗುವರು.
    ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವರು.”

ಕೊಲೊಸ್ಸೆಯವರಿಗೆ 4:2-6

ಕ್ರೈಸ್ತರು ಮಾಡತಕ್ಕ ಕಾರ್ಯಗಳು

ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ, ನೀವು ಪ್ರಾರ್ಥಿಸುವಾಗ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ. ಈ ಸತ್ಯವನ್ನು ನಾನು ಜನರಿಗೆ ಸ್ಪಷ್ಟವಾಗಿಯೂ ಸರಳವಾಗಿಯೂ ತಿಳಿಸಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

ಅವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಜ್ಞಾನವುಳ್ಳವರಾಗಿರಿ. ನಿಮ್ಮ ಸಮಯವನ್ನು ಅತ್ಯುತ್ತಮವಾದ ರೀತಿಯಲ್ಲಿ ಬಳಸಿರಿ. ನೀವು ಮಾತನಾಡುವಾಗಲೆಲ್ಲಾ ದಯೆಯುಳ್ಳವರಾಗಿಯೂ ಜ್ಞಾನವುಳ್ಳವರಾಗಿಯೂ ಮಾತನಾಡಿರಿ. ಆಗ ಪ್ರತಿಯೊಬ್ಬರಿಗೂ ಯೋಗ್ಯವಾದ ರೀತಿಯಲ್ಲಿ ಉತ್ತರಿಸಲು ಶಕ್ತರಾಗುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International