Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಹೋಶೇಯ 1:2-10

ಹೋಶೇಯನಿಗೆ ಯೆಹೋವನಿಂದ ಬಂದ ಸಂದೇಶದಲ್ಲಿ ಇದು ಮೊದಲನೆಯದು. ಯೆಹೋವನು ಹೇಳಿದ್ದೇನೆಂದರೆ, “ನೀನು ಹೋಗಿ ಒಬ್ಬ ವೇಶ್ಯೆಯನ್ನು ಮದುವೆಯಾಗು. ಆ ವೇಶ್ಯೆಯಿಂದ[a] ಮಕ್ಕಳನ್ನು ಪಡೆದುಕೊ. ಯಾಕೆಂದರೆ ಈ ದೇಶದ ಜನರು ಸೂಳೆಯಂತೆ ವರ್ತಿಸಿರುತ್ತಾರೆ. ಅವರು ಯೆಹೋವನಿಗೆ ಅಪನಂಬಿಗಸ್ತಿಕೆಯುಳ್ಳವರಾಗಿರುತ್ತಾರೆ.”

ಇಜ್ರೇಲನ ಜನನ

ಹಾಗೆ ಹೋಶೇಯನು ದಿಬ್ಲಯೀಮನ ಮಗಳಾದ ಗೋಮೆರ್ ಎಂಬಾಕೆಯನ್ನು ಮದುವೆಯಾದನು. ಗೋಮೆರಳು ಗರ್ಭಿಣಿಯಾಗಿ ಹೋಶೇಯನಿಗೆ ಗಂಡುಮಗುವನ್ನು ಹೆತ್ತಳು. ಹೋಶೇಯನಿಗೆ ಯೆಹೋವನು ಹೇಳಿದ್ದೇನೆಂದರೆ, “ಅವನಿಗೆ ಇಜ್ರೇಲ್ ಎಂದು ಹೆಸರನ್ನಿಡು. ಯಾಕೆಂದರೆ, ಇನ್ನು ಸ್ವಲ್ಪ ಸಮಯದಲ್ಲಿ ನಾನು ಯೇಹುವಿನ ಸಂತತಿಯವರನ್ನು ಶಿಕ್ಷಿಸುವೆನು. ಅವನು ಇಜ್ರೇಲ್ ತಗ್ಗಿನಲ್ಲಿ ರಕ್ತವನ್ನು ಸುರಿಸಿರುತ್ತಾನಲ್ಲಾ? ಆ ಮೇಲೆ ನಾನು ಇಸ್ರೇಲ್ ರಾಜ್ಯಕ್ಕೆ ಅಂತ್ಯವನ್ನು ತರುವೆನು. ಆಗ ಇಜ್ರೇಲ್ ತಗ್ಗಿನಲ್ಲಿ ಇಸ್ರೇಲಿನ ಬಿಲ್ಲನ್ನು ತುಂಡು ಮಾಡುವೆನು.”

ಲೋರುಹಾಮಳ ಜನನ

ಗೋಮೆರಳು ತಿರುಗಿ ಗರ್ಭಿಣಿಯಾಗಿ ಹೆಣ್ಣುಮಗುವನ್ನು ಹೆತ್ತಳು. ಯೆಹೋವನು ಹೋಶೇಯನಿಗೆ, ಆಕೆಗೆ, “ಲೋರುಹಾಮ” ಎಂಬ ಹೆಸರನ್ನಿಡಲು ಹೇಳಿದನು. “ಯಾಕೆಂದರೆ, ನಾನು ಇನ್ನು ಮುಂದೆ ಇಸ್ರೇಲ್ ಜನಾಂಗವನ್ನು ಕ್ಷಮಿಸುವುದಿಲ್ಲ. ಆದರೆ ನಾನು ಯೆಹೂದ ದೇಶಕ್ಕೆ ಕರುಣೆಯನ್ನು ತೋರಿಸುವೆನು. ನಾನು ಅವರನ್ನು ರಕ್ಷಿಸುವೆನು. ಅವರನ್ನು ರಕ್ಷಿಸಲು ನಾನು ಬಿಲ್ಲುಬಾಣಗಳನ್ನು ಉಪಯೋಗಿಸುವದಿಲ್ಲ. ಅಥವಾ ಯುದ್ಧಾಶ್ವಗಳನ್ನಾಗಲಿ ಸೈನ್ಯವನ್ನಾಗಲಿ ಉಪಯೋಗಿಸುವದಿಲ್ಲ. ನನ್ನ ಸ್ವಂತ ಸಾಮರ್ಥ್ಯದಿಂದಲೇ ನಾನು ಅವರನ್ನು ರಕ್ಷಿಸುವೆನು.”

ಲೋಅಮ್ಮಿಯ ಜನನ

ಗೋಮೆರಳು ಲೋರುಹಾಮಳಿಗೆ ಮೊಲೆಯುಣಿಸುವದನ್ನು ನಿಲ್ಲಿಸಿದ ಬಳಿಕ ಆಕೆಯು ತಿರುಗಿ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತಳು. ಆಗ ಯೆಹೋವನು, “ಅವನಿಗೆ ಲೋಅಮ್ಮಿ ಎಂದು ಹೆಸರಿಡು. ಯಾಕೆಂದರೆ ನೀವು ನನ್ನ ಜನರಲ್ಲ; ನಾನು ನಿಮ್ಮ ದೇವರಲ್ಲ” ಎಂದು ಹೇಳಿದನು.

ಇಸ್ರೇಲ್ ಜನಾಂಗದವರೊಂದಿಗೆ ಯೆಹೋವನು ಮಾತಾಡುತ್ತಾನೆ

10 “ಇನ್ನು ಮುಂದೆ ಇಸ್ರೇಲರ ಜನಸಂಖ್ಯೆಯು ಸಮುದ್ರದ ಮರಳಿನಂತಿರುವದು. ನೀವು ಮರಳನ್ನು ಅಳತೆಮಾಡಲೂ ಅದನ್ನು ಲೆಕ್ಕಿಸಲೂ ಸಾಧ್ಯವಿಲ್ಲ. ಆಗ, ‘ನೀವು ನನ್ನ ಜನರಲ್ಲ’ ಎಂಬ ಹೇಳಿಕೆಯ ಬದಲಾಗಿ, ‘ನೀವು ಜೀವಸ್ವರೂಪನಾದ ದೇವರ ಮಕ್ಕಳು’ ಎಂಬುದಾಗಿ ಕರೆಯಲ್ಪಡುವಿರಿ.

ಕೀರ್ತನೆಗಳು 85

ಸ್ತುತಿಗೀತೆ. ರಚನೆಗಾರರು: ಕೋರಹೀಯರು.

85 ಯೆಹೋವನೇ, ನಿನ್ನ ದೇಶಕ್ಕೆ ಕರುಣೆತೋರು.
    ಯಾಕೋಬನ ಜನರು ಪರದೇಶದಲ್ಲಿ ಸೆರೆಯಾಳುಗಳಾಗಿದ್ದಾರೆ.
    ಅವರನ್ನು ಸ್ವದೇಶಕ್ಕೆ ಮತ್ತೆ ಕರೆದುಕೊಂಡು ಬಾ.
ನಿನ್ನ ಜನರ ದ್ರೋಹವನ್ನು ಕ್ಷಮಿಸು!
    ಅವರ ಪಾಪಗಳನ್ನು ಅಳಿಸಿಬಿಡು!

ನಿನ್ನ ರೌದ್ರವನ್ನು ತೊರೆದುಬಿಡು.
    ಉಗ್ರ ಕೋಪದಿಂದಿರಬೇಡ.
ನಮ್ಮ ರಕ್ಷಕನಾದ ದೇವರೇ, ನಮ್ಮ ಮೇಲೆ
    ನಿನಗಿರುವ ಕೋಪವನ್ನು ತೊರೆದು ನಮ್ಮನ್ನು ಮತ್ತೆ ಸ್ವೀಕರಿಸು.
ನಮ್ಮ ಮೇಲೆ ಸದಾಕಾಲ ಕೋಪದಿಂದಿರುವೆಯಾ?
    ನಮ್ಮ ಮೇಲೆ ತಲತಲಾಂತರಗಳವರೆಗೂ ಕೋಪವನ್ನು ಬೆಳೆಸಬೇಕೆಂದಿರುವೆಯಾ?
ದಯವಿಟ್ಟು ನಮ್ಮನ್ನು ಮತ್ತೆ ಜೀವಿಸಮಾಡು!
    ನಿನ್ನ ಜನರನ್ನು ಸಂತೋಷಗೊಳಿಸು.
ಯೆಹೋವನೇ, ನಮ್ಮ ಮೇಲೆ ನಿನಗಿರುವ ಪ್ರೀತಿಯನ್ನು ತೋರಿಸು.
    ನಮ್ಮನ್ನು ರಕ್ಷಿಸು.

ದೇವರಾದ ಯೆಹೋವನು ಹೇಳಿದ್ದು ನನಗೆ ಕೇಳಿಸಿತು.
    ತನ್ನ ಜನರಿಗೂ ತನ್ನ ಸದ್ಭಕ್ತರಿಗೂ ಶಾಂತಿ ಇರುವುದೆಂದು ಆತನು ಹೇಳಿದನು.
    ಆದ್ದರಿಂದ ಅವರು ತಮ್ಮ ಮೂಢಜೀವನಕ್ಕೆ ಹೋಗಕೂಡದು.
ದೇವರು ತನ್ನ ಭಕ್ತರನ್ನು ರಕ್ಷಿಸುವ ಕಾಲ ಸಮೀಪವಾಗಿದೆ.
    ನಾವು ಸ್ವದೇಶದಲ್ಲಿ ಗೌರವದೊಂದಿಗೆ ನೆಲೆಸುವ ಸಮಯ ಹತ್ತಿರವಾಗಿದೆ.
10 ದೇವರ ನಿಜಪ್ರೀತಿಯು ಆತನ ಭಕ್ತರನ್ನು ಸಂಧಿಸುತ್ತದೆ.
    ನೀತಿಯೂ ಸಮಾಧಾನವೂ ಅವರಿಗೆ ಮುದ್ದಿಡುತ್ತವೆ.
11 ನಿವಾಸಿಗಳೆಲ್ಲರೂ ದೇವರಿಗೆ ನಂಬಿಗಸ್ತರಾಗಿರುವರು.
    ಪರಲೋಕದ ದೇವರು ಅವರಿಗೆ ಒಳ್ಳೆಯವನಾಗಿರುವನು.[a]
12 ಯೆಹೋವನು ನಮಗೆ ಒಳ್ಳೆಯವುಗಳನ್ನು ಹೇರಳವಾಗಿ ಒದಗಿಸುವನು.
    ಭೂಮಿಯು ಒಳ್ಳೆಯ ಬೆಳೆಗಳನ್ನು ಬೆಳೆಯಿಸುವುದು.
13 ನೀತಿಯು ಆತನ ಮುಂದೆ ಹೋಗುತ್ತಾ
    ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದು.

ಕೊಲೊಸ್ಸೆಯವರಿಗೆ 2:6-15

ಕ್ರಿಸ್ತನಲ್ಲಿ ನೆಲೆಗೊಂಡಿರಿ

ಪ್ರಭುವಾದ ಕ್ರಿಸ್ತ ಯೇಸುವನ್ನು ನೀವು ಸ್ವೀಕರಿಸಿಕೊಂಡಿರುವುದರಿಂದ ಆತನಲ್ಲಿ ನೆಲೆಗೊಂಡಿದ್ದು ಜೀವಿಸಿರಿ. ಕ್ರಿಸ್ತನನ್ನು ಮಾತ್ರ ನೀವು ಅವಲಂಬಿಸಬೇಕು. ಜೀವವೂ ಶಕ್ತಿಯೂ ಆತನಿಂದಲೇ ಬರುತ್ತವೆ. ನಿಮಗೆ ಸತ್ಯವನ್ನು ಉಪದೇಶಿಸಲಾಗಿದೆ. ನೀವು ಆ ಸತ್ಯ ಬೋಧನೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಮತ್ತು ದೇವರಿಗೆ ಸಲ್ಲತಕ್ಕ ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು.

ಯಾರೂ ನಿಮ್ಮನ್ನು ಮೋಸಕರವಾದ ಮತ್ತು ನಿರರ್ಥಕವಾದ ತತ್ವಜ್ಞಾನ ಬೋಧನೆಯಿಂದ ತಪ್ಪು ದಾರಿಗೆ ನಡೆಸದಂತೆ ಜಾಗ್ರತೆಯಿಂದಿರಿ. ಆ ತತ್ವಜ್ಞಾನಗಳು ಜನರಿಂದ ಬಂದುವೇ ಹೊರತು ಕ್ರಿಸ್ತನಿಂದಲ್ಲ. ಅವು ಈ ಲೋಕದ ಜನರ ನಿರರ್ಥಕ ತತ್ವಗಳು. ದೇವರ ಸರ್ವಸಂಪೂರ್ಣತೆಯು ಕ್ರಿಸ್ತನಲ್ಲಿ ನೆಲೆಗೊಂಡಿದೆ. (ಕ್ರಿಸ್ತನು ಈ ಲೋಕದಲ್ಲಿದ್ದಾಗಲೂ ಸಹ ನೆಲೆಗೊಂಡಿತ್ತು.) 10 ನೀವೆಲ್ಲರೂ ಕ್ರಿಸ್ತನಲ್ಲಿ ಸಂಪೂರ್ಣರಾಗಿದ್ದೀರಿ. ನಿಮಗೆ ಬೇರೇನೂ ಬೇಕಿಲ್ಲ. ಕ್ರಿಸ್ತನು ಎಲ್ಲ ದೊರೆತನಗಳನ್ನು ಮತ್ತು ಅಧಿಕಾರಗಳನ್ನು ಆಳುತ್ತಾನೆ.

11 ಕ್ರಿಸ್ತನಲ್ಲಿ ನೀವು ಬೇರೊಂದು ಸುನ್ನತಿಯನ್ನು ಪಡೆದಿರುವಿರಿ. ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ. ಅಂದರೆ ನಿಮ್ಮ ಪಾಪಾಧೀನಸ್ವಭಾವದಿಂದ ನಿಮಗೆ ಬಿಡುಗಡೆಯಾಯಿತು. ಇದುವೇ ಕ್ರಿಸ್ತನು ಮಾಡುವ ಸುನ್ನತಿ. 12 ನೀವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನೊಂದಿಗೆ ಹೂಳಲ್ಪಟ್ಟಿರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸುವುದರ ಮೂಲಕ ತೋರಿದ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಆ ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಮೇಲಕ್ಕೆ ಎದ್ದುಬಂದಿರಿ.

13 ನೀವು ನಿಮ್ಮ ಪಾಪಗಳ ದೆಸೆಯಿಂದ ಮತ್ತು ನಿಮ್ಮ ಪಾಪ ಸ್ವಭಾವದ ಹಿಡಿತದಿಂದ ಇನ್ನೂ ಮುಕ್ತರಾಗದೆ ಇದ್ದುದರಿಂದ ಆತ್ಮಿಕವಾಗಿ ಸತ್ತವರಾಗಿದ್ದಿರಿ. ಆದರೆ ದೇವರು ನಿಮಗೆ ಕ್ರಿಸ್ತನೊಂದಿಗೆ ಜೀವವನ್ನು ದಯಪಾಲಿಸಿದನು. ಆತನು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದನು. 14 ದೇವರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ನಾವು ಅಪರಾಧಿಗಳಾಗಿದ್ದೆವು. ನಮ್ಮ ಮೇಲೆ ಹೊರಿಸಲಾದ ದೋಷಾರೋಪಣೆಯ ಪಟ್ಟಿಯಲ್ಲಿ ನಾವು ಉಲ್ಲಂಘಿಸಿದ ಆಜ್ಞೆಗಳನ್ನೆಲ್ಲ ಲಿಖಿತಗೊಳಿಸಲಾಗಿತ್ತು. ಆದರೆ ದೇವರು ನಮ್ಮ ಅಪರಾಧಗಳನ್ನೆಲ್ಲ ಕ್ಷಮಿಸಿ ಅವುಗಳನ್ನು ಶಿಲುಬೆಗೆ ಜಡಿದನು. 15 ದೇವರು ತನಗೆ ವಿರೋಧವಾಗಿದ್ದ ದೊರೆತನಗಳನ್ನೂ ಅಧಿಕಾರಗಳನ್ನೂ ಸೋಲಿಸಿ, ಅವುಗಳನ್ನು ನಿರಾಯುಧರನ್ನಾಗಿ ಮಾಡಿ ಶಿಲುಬೆಯ ವಿಜಯೋತ್ಸವದಲ್ಲಿ ಅವುಗಳನ್ನು ಇಡೀ ಲೋಕದ ಎದುರಿನಲ್ಲಿ ಸೆರೆಯಾಳುಗಳನ್ನಾಗಿ ಮೆರವಣಿಗೆ ಮಾಡಿದನು.

ಕೊಲೊಸ್ಸೆಯವರಿಗೆ 2:16-19

ಮಾನವ ನಿರ್ಮಿತ ನಿಯಮಗಳನ್ನು ಅನುಸರಿಸಬೇಡಿ

16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್‌ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. 17 ಪೂರ್ವಕಾಲದಲ್ಲಿ ಈ ಸಂಗತಿಗಳೆಲ್ಲ ಮುಂದೆ ಬರಬೇಕಾಗಿದ್ದವುಗಳ ಛಾಯೆಗಳಾಗಿದ್ದವು. ಅವುಗಳ ನಿಜರೂಪವು ಕ್ರಿಸ್ತನಲ್ಲಿ ತೋರಿಬಂದಿತು. 18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. 19 ಆ ಜನರು ತಮ್ಮನ್ನು ಕ್ರಿಸ್ತನೆಂಬ ಶಿರಸ್ಸಿನ ಅಧೀನಕ್ಕೆ ಒಳಪಡಿಸುವುದಿಲ್ಲ. ಇಡೀ ದೇಹವು ಆತನನ್ನೇ ಅವಲಂಬಿಸಿಕೊಂಡಿದೆ. ಆತನಿಂದಲೇ ದೇಹದ ಅಂಗಾಂಗಗಳು ಇತರ ಅಂಗಗಳ ಬಗ್ಗೆ ಚಿಂತಿಸುತ್ತವೆ ಮತ್ತು ಪರಸ್ಪರ ಸಹಾಯ ಮಾಡುತ್ತವೆ. ಇದರಿಂದ ದೇಹವು ಬಲಗೊಂಡು ಒಂದಾಗಿ ಕೂಡಿಸಲ್ಪಡುತ್ತದೆ. ಹೀಗೆ, ದೇವರ ಇಚ್ಛೆಯಂತೆ ದೇಹವು ಬೆಳೆಯುತ್ತದೆ.

ಲೂಕ 11:1-13

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಮತ್ತಾಯ 6:9-15)

11 ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಿದ್ದನು. ಯೇಸು ಪ್ರಾರ್ಥನೆ ಮಾಡಿ ಮುಗಿಸಿದಾಗ, ಆತನ ಶಿಷ್ಯರಲ್ಲೊಬ್ಬನು, “ಪ್ರಭುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧಾನವನ್ನು ಕಲಿಸಿದಂತೆ, ದಯಮಾಡಿ ನಮಗೂ ಪ್ರಾರ್ಥಿಸುವ ವಿಧಾನವನ್ನು ಹೇಳಿಕೊಡು” ಎಂದನು.

ಯೇಸು ಅವರಿಗೆ ಹೀಗೆಂದನು: “ನೀವು ಹೀಗೆ ಪ್ರಾರ್ಥಿಸಿರಿ:

‘ತಂದೆಯೇ, ನಿನ್ನ ನಾಮವು ಯಾವಾಗಲೂ ಪರಿಶುದ್ಧವಾಗಿರಲಿ.
ನಿನ್ನ ರಾಜ್ಯವು ಬರಲಿ.
ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು.
ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವಂತೆ
    ನಮ್ಮಪಾಪಗಳನ್ನೂ ಕ್ಷಮಿಸು.
ನಮ್ಮನ್ನು ಶೋಧನೆಗೆ ಒಳಪಡಿಸಬೇಡ.’”

ಎಡಬಿಡದೆ ಪ್ರಾರ್ಥಿಸಿ

(ಮತ್ತಾಯ 7:7-11)

5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International