Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 83

ಸ್ತುತಿಗೀತೆ. ರಚನೆಗಾರ: ಆಸಾಫ.

83 ದೇವರೇ, ಸುಮ್ಮನಿರಬೇಡ!
    ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
    ದೇವರೇ, ದಯವಿಟ್ಟು ಮಾತನಾಡು.
ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
    ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
    ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
    ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”
ನಿನಗೂ ನೀನು ನಮ್ಮೊಂದಿಗೆ ಮಾಡಿಕೊಂಡ ಒಪ್ಪಂದಕ್ಕೂ
    ವಿರೋಧವಾಗಿ ಅವರೆಲ್ಲರೂ ಒಂದು ಗೂಡಿದ್ದಾರೆ.
6-7 ಅವರು ಯಾರೆಂದರೆ: ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು ಮತ್ತು ಹಗ್ರೀಯ ಸಂತತಿಯವರು,
    ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು,
    ಫಿಲಿಷ್ಟಿಯರು ಮತ್ತು ತೂರ್ ಸಂಸ್ಥಾನದವರು.
    ಇವರೆಲ್ಲರೂ ನಮಗೆ ವಿರೋಧವಾಗಿ ಸೇರಿಬಂದಿದ್ದಾರೆ.
ಅಶ್ಶೂರ್ಯದವರು ಸಹ ಅವರೊಡನೆ ಸೇರಿಕೊಂಡು
    ಲೋಟನ ಸಂತತಿಯವರನ್ನು ಪ್ರಬಲರನ್ನಾಗಿ ಮಾಡಿದ್ದಾರೆ.

ನೀನು ಮಿದ್ಯಾನ್ಯರನ್ನೂ ಕೀಷೋನ್ ನದಿಯ ಸಮೀಪದಲ್ಲಿ
    ಸೀಸೆರನನ್ನೂ ಯಾಬೀನನನ್ನೂ ಸೋಲಿಸಿದಂತೆ ಅವರನ್ನು ಸೋಲಿಸು.
10 ನೀನು ಅವರನ್ನು ಎಂದೋರಿನಲ್ಲಿ ಸೋಲಿಸಿದೆ.
    ಅವರ ದೇಹಗಳು ನೆಲದ ಮೇಲೆ ಕೊಳೆತುಹೋದವು.
11 ದೇವರೇ, ಶತ್ರುಗಳ ನಾಯಕರುಗಳನ್ನು ಸೋಲಿಸು.
ನೀನು ಓರೇಬ್ ಮತ್ತು ಜೇಬ್ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
    ನೀನು ಜೇಬಹ ಮತ್ತು ಚಲ್ಮುನ್ನ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
12 ನನ್ನ ದೇವರೇ, ಅವರು ನಿನ್ನ ನಾಡಿನಿಂದ ನಮ್ಮನ್ನು ಹೊರಗಟ್ಟಬೇಕೆಂದಿದ್ದರು.
13 ಗಾಳಿಗೆ ತೂರಿಹೋಗುವ ಮೊಟಕುಬೇರಿನ ಕಳೆಯಂತೆ ಅವರನ್ನು ಮಾಡು.
    ಗಾಳಿಯು ಹೊಟ್ಟನ್ನು ಚದರಿಸುವಂತೆ ಅವರನ್ನು ಚದರಿಸು.
14 ಕಾಡನ್ನು ನಾಶಮಾಡುವ ಬೆಂಕಿಯಂತೆಯೂ
    ಬೆಟ್ಟಗಳನ್ನು ಸುಟ್ಟುಹಾಕುವ ಅಗ್ನಿಜ್ವಾಲೆಯಂತೆಯೂ ಅವರನ್ನು ನಾಶಮಾಡು.
15 ಬಿರುಗಾಳಿಯಿಂದ ಕೊಚ್ಚಿಕೊಂಡು ಹೋಗುವ ಧೂಳಿನಂತೆ ಅವರನ್ನು ಬೆನ್ನಟ್ಟಿಹೋಗು.
    ಸುಂಟರ ಗಾಳಿಯಂತೆ ಅವರನ್ನು ನಡುಗಿಸು.
16 ಯೆಹೋವನೇ, ತಾವು ನಿಜವಾಗಿಯೂ ಬಲಹೀನರೆಂಬುದನ್ನು ಅವರು ಕಲಿತುಕೊಳ್ಳುವಂತೆ ಮಾಡು;
    ಆಗ ಅವರು ನಿನ್ನ ಹೆಸರನ್ನು ಆರಾಧಿಸಬೇಕೆನ್ನುವರು.
17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
    ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
    ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
    ದೇವರೆಂದು ಅವರು ಅರಿತುಕೊಳ್ಳುವರು.

ಮಲಾಕಿ 3:5-12

ಆಗ ನಾನು ನಿಮ್ಮ ಬಳಿಗೆ ಬಂದು ಯೋಗ್ಯವಾದ ಕಾರ್ಯವನ್ನು ಮಾಡುವೆನು. ದುಷ್ಟ ಕ್ರಿಯೆಗಳನ್ನು ಮಾಡಿದ ಜನರ ಬಗ್ಗೆ ನ್ಯಾಯಾಧೀಶರೊಡನೆ ದೂರು ಹೇಳುವ ಮನುಷ್ಯನಂತಿರುವೆನು. ಕೆಲವರು ಮಾಟಮಂತ್ರ ಮಾಡುವರು; ಕೆಲವರು ವ್ಯಭಿಚಾರ ಮಾಡುವರು; ಕೆಲವರು ಸುಳ್ಳು ವಾಗ್ದಾನಗಳನ್ನು ಮಾಡುವರು; ಕೆಲವರು ಕೂಲಿಯಾಳುಗಳಿಗೆ ಹೇಳಿದ ಕೂಲಿಯನ್ನು ಕೊಡದೆ ಅವರಿಗೆ ಮೋಸಮಾಡುವರು. ಜನರು ವಿಧವೆಯರಿಗೂ ಅನಾಥರಿಗೂ ಸಹಾಯ ಮಾಡುವದಿಲ್ಲ. ಪರದೇಶಿಗಳಿಗೆ ಸಹಾಯ ಮಾಡುವದಿಲ್ಲ. ನನಗೆ ಗೌರವ ಸಲ್ಲಿಸುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.

ದೇವರಿಂದ ಕದ್ದುಕೊಳ್ಳುವದು

“ನಾನು ದೇವರಾದ ಯೆಹೋವನು. ನಾನು ಬದಲಾಗದ ದೇವರು. ನೀವು ಯಾಕೋಬನ ಮಕ್ಕಳು. ನೀವು ಸಂಪೂರ್ಣವಾಗಿ ನಾಶ ಹೊಂದಲಿಲ್ಲ. ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಿಮ್ಮ ಪೂರ್ವಿಕರು ನನ್ನನ್ನು ಅನುಸರಿಸುವದನ್ನು ನಿಲ್ಲಿಸಿಬಿಟ್ಟಿದ್ದರು. ನೀವು ಹಿಂತಿರುಗಿ ನನ್ನ ಬಳಿಗೆ ಬಂದರೆ ನಾನು ನಿಮ್ಮ ಬಳಿಗೆ ಬರುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.

“ನಾವು ಹೇಗೆ ಹಿಂತಿರುಗಿ ಬರಬಹುದು?” ಎಂದು ನೀವು ಕೇಳುತ್ತೀರೋ?

ದೇವರಿಂದ ಕದ್ದುಕೊಳ್ಳುವದನ್ನು ನಿಲ್ಲಿಸಿರಿ. ಮನುಷ್ಯನು ದೇವರಿಂದ ಕದ್ದುಕೊಳ್ಳಬಾರದು. ಆದರೆ ನೀವು ನನ್ನಿಂದ ಕದ್ದುಕೊಂಡಿದ್ದೀರಿ.

“ನಿನ್ನಿಂದ ಏನು ಕದ್ದುಕೊಂಡಿದ್ದೇವೆ” ಎಂದು ಕೇಳುತ್ತೀರಾ?

“ನಿಮ್ಮ ದಶಮ ಭಾಗವನ್ನು ನೀವು ನನಗೆ ಅರ್ಪಿಸಬೇಕಿತ್ತು. ವಿಶೇಷ ಕಾಣಿಕೆಗಳನ್ನು ನೀವು ನನಗೆ ಕೊಡಬೇಕಾಗಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. ಈ ರೀತಿಯಾಗಿ ನಿಮ್ಮ ಇಡೀ ಜನಾಂಗವೇ ನನ್ನಿಂದ ಕದ್ದುಕೊಂಡಿದ್ದಾರೆ. ಆದ್ದರಿಂದ ನಿಮಗೆ ದುರ್ದೆಶೆ ಸಂಭವಿಸುತ್ತಲಿದೆ.” ಇದು ಸರ್ವಶಕ್ತನಾದ ಯೆಹೋವನ ನುಡಿ.

10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ಈ ಪರೀಕ್ಷೆ ಮಾಡಿನೋಡಿ. ನಿಮ್ಮ ವಸ್ತುಗಳ ಹತ್ತನೇ ಒಂದು ಅಂಶವನ್ನು ನನಗೆ ತೆಗೆದುಕೊಂಡು ಬನ್ನಿರಿ. ಅವುಗಳನ್ನು ಆಲಯದ ಬಂಡಾರದೊಳಗೆ ಹಾಕಿರಿ. ನನ್ನ ಮನೆಗೆ ನೀವು ಆಹಾರ ವಸ್ತುಗಳನ್ನು ತನ್ನಿರಿ. ನನ್ನನ್ನು ಪರೀಕ್ಷಿಸಿರಿ. ನೀವು ಹೀಗೆ ಮಾಡುವುದಾದರೆ ಖಂಡಿತವಾಗಿಯೂ ನಾನು ನಿಮ್ಮನ್ನು ಆಶೀರ್ವದಿಸುವೆನು. ಆಕಾಶದಿಂದ ಮಳೆ ಸುರಿಯುವ ಹಾಗೆ ನಿಮಗೆ ಶುಭವು ಸುರಿಯುವವು. ನಿಮ್ಮ ಮನೆಯಲ್ಲಿ ಬೇಕಾಗಿರುವದಕ್ಕಿಂತ ಹೆಚ್ಚು ಯಾವಾಗಲೂ ಇರುವದು. 11 ನಿಮ್ಮ ಬೆಳೆಗಳು ಹುಳಗಳಿಂದ ನಾಶವಾಗದಂತೆ ನಾನು ಸಂರಕ್ಷಿಸುವೆನು; ನಿಮ್ಮ ದ್ರಾಕ್ಷಾಲತೆಗಳೆಲ್ಲಾ ದ್ರಾಕ್ಷಿಯನ್ನು ಫಲಿಸುವವು.” ಇದು ಸರ್ವಶಕ್ತನಾದ ಯೆಹೋವನ ನುಡಿ.

12 “ಇತರ ಜನಾಂಗಗಳವರು ನಿಮ್ಮೊಂದಿಗೆ ಸಮಾಧಾನದಿಂದಿರುವರು. ನಿಜವಾಗಿಯೂ ನಿಮ್ಮ ದೇಶವು ಆಗ ಆಶ್ಚರ್ಯಕರವಾದ ದೇಶವಾಗಿರುವುದು.” ಇದು ಸರ್ವಶಕ್ತನಾದ ಯೆಹೋವನ ನುಡಿ.

ಮಾರ್ಕ 2:1-12

ಪಾರ್ಶ್ವವಾಯುರೋಗಿಗೆ ಸ್ವಸ್ಥತೆ

(ಮತ್ತಾಯ 9:1-8; ಲೂಕ 5:17-26)

ಕೆಲವು ದಿನಗಳ ತರುವಾಯ, ಯೇಸು ಕಪೆರ್ನೌಮಿಗೆ ಹಿಂದಿರುಗಿ ಬಂದನು. ಯೇಸು ಮನೆಯಲ್ಲಿದ್ದಾನೆಂಬ ಸುದ್ದಿಯು ಹಬ್ಬಿತು. ಜನರು ಗುಂಪುಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಒಟ್ಟುಗೂಡಿದರು. ಮನೆಯು ತುಂಬಿಹೋಯಿತು. ಅಲ್ಲಿ ನಿಲ್ಲಲು ಹೊರಗಡೆಯಲ್ಲಿಯೂ ಸ್ಥಳವಿರಲಿಲ್ಲ. ಯೇಸು ಉಪದೇಶಿಸುತ್ತಿದ್ದನು. ಕೆಲವು ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು. ಅವನನ್ನು ನಾಲ್ಕು ಮಂದಿ ಹೊತ್ತುಕೊಂಡಿದ್ದರು. ಮನೆಯು ಜನರಿಂದ ತುಂಬಿಹೋಗಿದ್ದುದರಿಂದ ಅವರು ಅವನನ್ನು ಯೇಸುವಿನ ಬಳಿಗೆ ತರಲಾಗಲಿಲ್ಲ. ಆದ್ದರಿಂದ ಅವರು ಯೇಸುವಿದ್ದ ಮನೆಯ ಮೇಲ್ಛಾವಣೆಯ ಮೇಲಕ್ಕೆ ಹೋಗಿ ಯೇಸುವಿದ್ದ ಸ್ಥಳದ ಮೇಲೆ ಹೆಂಚುಗಳನ್ನು ತೆಗೆದುಹಾಕಿದರು. ಹೀಗೆ ಅಲ್ಲಿ ಒಂದು ದ್ವಾರವನ್ನು ಮಾಡಿ ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. ಈ ಜನರ ದೊಡ್ಡ ನಂಬಿಕೆಯನ್ನು ಕಂಡ ಯೇಸು ರೋಗಿಗೆ, “ಯುವಕನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

ಕೆಲವು ಮಂದಿ ಧರ್ಮೋಪದೇಶಕರು ಅಲ್ಲಿ ಕುಳಿತಿದ್ದರು. ಯೇಸು ಹೇಳಿದ್ದನ್ನು ಕೇಳಿದ ಅವರು, “ಇವನು ಹೀಗೇಕೆ ಹೇಳುತ್ತಿದ್ದಾನೆ? ಇದು ದೇವದೂಷಣೆ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಲು ಸಾಧ್ಯ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಂಡರು.

ಧರ್ಮೋಪದೇಶಕರ ಆಲೋಚನೆಯನ್ನು ತಕ್ಷಣವೇ ಗ್ರಹಿಸಿಕೊಂಡ ಯೇಸು ಅವರಿಗೆ, “ನೀವು ಹೀಗೇಕೆ ಆಲೋಚಿಸುತ್ತೀರಿ? ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೋ? ಇಲ್ಲವೇ, ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಹೋಗು’ ಎಂದು ಹೇಳುವುದೋ? 10 ಆದರೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಎಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿದನು. ಬಳಿಕ ಯೇಸು ರೋಗಿಗೆ, 11 “ನಾನು ನಿನಗೆ ಹೇಳುತ್ತಿದ್ದೇನೆ, ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.

12 ಆ ಕೂಡಲೇ ರೋಗಿಯು ಎದ್ದುನಿಂತು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಗೆ ಹೋದನು. ಇದನ್ನು ಕಂಡ ಆ ಜನರೆಲ್ಲರೂ ಆಶ್ಚರ್ಯಚಕಿತರಾಗಿ, “ನಾವು ಹಿಂದೆಂದೂ ಇಂಥ ಸಂಗತಿಯನ್ನು ನೋಡಿಯೇ ಇಲ್ಲ” ಎಂದು ಹೇಳಿ ದೇವರನ್ನು ಕೊಂಡಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International