Revised Common Lectionary (Semicontinuous)
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 18 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನಾನು ನಿಮ್ಮನ್ನು ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. 19 ನೀವು ಆ ದೇಶದ ಭೂಮಿಯ ಬೆಳೆಯನ್ನು ಅನುಭೋಗಿಸುವಾಗ, ಸ್ವಲ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. 20 ನೀವು ಕಣದಲ್ಲಿರುವ ಗೋಧಿಯಲ್ಲಿ ಪ್ರಥಮಫಲವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡುವಂತೆಯೇ ನೀವು ಪ್ರಥಮವಾಗಿ ನಾದಿದ ಹಿಟ್ಟಿನಿಂದ ಒಂದು ರೊಟ್ಟಿಯನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. 21 ನೀವೂ ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು.
22-23 “ಯೆಹೋವನು ಮೋಶೆಯ ಮೂಲಕ ಪ್ರಕಟಿಸಿದ ಆಜ್ಞೆಗಳನ್ನು ಅಂದರೆ ಯೆಹೋವನು ಆಜ್ಞೆಯನ್ನು ಕೊಟ್ಟ ದಿನದಿಂದಿಡಿದು ಮುಂದಿನ ಎಲ್ಲಾ ಕಾಲದಲ್ಲಿ ನೀವು ತಿಳಿಯದೆ ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿದರೆ ಹೀಗೆ ಮಾಡಬೇಕು: 24 ನಿರುದ್ದೇಶದಿಂದ ಮತ್ತು ಸಮುದಾಯಕ್ಕೆ ತಿಳಿಯದಂತೆ ಇದನ್ನು ಮಾಡಿದ್ದಾಗಿದ್ದರೆ, ಯೆಹೋವನಿಗೆ ಸುಗಂಧ ವಾಸನೆಯನ್ನು ಉಂಟುಮಾಡುವುದಕ್ಕಾಗಿ ಒಂದು ಎಳೆಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಬೇಕು ಮತ್ತು ಅದರೊಡನೆ ಧಾನ್ಯಾರ್ಪಣೆಯನ್ನೂ ಪಾನಾರ್ಪಣೆಯನ್ನೂ ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನೂ ಅರ್ಪಿಸಬೇಕು.
25 “ಈ ರೀತಿಯಲ್ಲಿ ಇಸ್ರೇಲರ ಇಡೀ ಸಮುದಾಯದವರ ಕ್ಷಮೆಗಾಗಿ ಯಾಜಕನು ಪ್ರಾಯಶ್ಚಿತ್ತ ಮಾಡುವನು. ಯಾಕೆಂದರೆ ಅದು ತಿಳಿಯದೆ ಮಾಡಿದ ತಪ್ಪಾಗಿತ್ತು ಮತ್ತು ಆ ತಪ್ಪಿಗಾಗಿ ಅವರು ತಮ್ಮ ಅರ್ಪಣೆಯನ್ನು ಯೆಹೋವನಿಗೆ ಕಾಣಿಕೆಯಾಗಿ ತಂದರು ಮತ್ತು ಯೆಹೋವನ ಎದುರಿನಲ್ಲಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿದರು.[a] 26 ಆದ್ದರಿಂದ ಇಡೀ ಇಸ್ರೇಲ್ ಸಮುದಾಯದವರಿಗೆ ಕ್ಷಮಾಪಣೆಯಾಗುವುದು ಮತ್ತು ಅವರ ಮಧ್ಯದಲ್ಲಿ ವಾಸಿಸುವ ಪರದೇಶಸ್ಥರಿಗೂ ಕ್ಷಮಾಪಣೆಯಾಗುವುದು; ಯಾಕೆಂದರೆ ಜನರೆಲ್ಲರೂ ನಿರುದ್ದೇಶದಿಂದ ಮಾಡಿದ ಆ ತಪ್ಪಿನಲ್ಲಿ ಸಿಕ್ಕಿಕೊಂಡಿದ್ದರು.
ರಾಜ ಅಗ್ರಿಪ್ಪನ ಮುಂದೆ ಪೌಲನು
26 ಅಗ್ರಿಪ್ಪನು ಪೌಲನಿಗೆ, “ಈಗ ನೀನು ನಿನ್ನ ಪರವಾಗಿ ಮಾತಾಡಬಹುದು” ಎಂದು ಹೇಳಿದನು. ಆಗ ಪೌಲನು ತನ್ನ ಕೈಯೆತ್ತಿ ಮಾತಾಡಲಾರಂಭಿಸಿ ಹೀಗೆಂದನು: 2 “ರಾಜನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆಲ್ಲಾ ನಾನು ಉತ್ತರಕೊಡುವೆನು. ಇಂದು ನಿನ್ನ ಮುಂದೆ ನಿಂತುಕೊಂಡು ಪ್ರತಿವಾದ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದೇ ಎಣಿಸುತ್ತೇನೆ. 3 ನಾನು ನಿನ್ನೊಂದಿಗೆ ಮಾತಾಡಲು ಬಹು ಸಂತೋಷಪಡುತ್ತೇನೆ. ಯಾಕೆಂದರೆ, ಯೆಹೂದ್ಯರ ಎಲ್ಲಾ ಸಂಪ್ರದಾಯಗಳ ಬಗ್ಗೆ ಮತ್ತು ಯೆಹೂದ್ಯರು ವಾದಿಸುತ್ತಿರುವ ಸಂಗತಿಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ದಯವಿಟ್ಟು ನನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸು.
4 “ನನ್ನ ಇಡೀ ಜೀವಮಾನದ ಬಗ್ಗೆ ಎಲ್ಲಾ ಯೆಹೂದ್ಯರಿಗೆ ಗೊತ್ತಿದೆ. ನಾನು ಆರಂಭದಿಂದ ನನ್ನ ಸ್ವದೇಶದಲ್ಲಿಯೂ ಅನಂತರ ಜೆರುಸಲೇಮಿನಲ್ಲಿಯೂ ಜೀವಿಸಿದ ರೀತಿಯನ್ನು ಅವರು ಬಲ್ಲರು. 5 ಈ ಯೆಹೂದ್ಯರು ಬಹುಕಾಲದಿಂದಲೂ ನನ್ನನ್ನು ತಿಳಿದಿದ್ದಾರೆ. ನೀನು ಅವರನ್ನು ಕೇಳುವುದಾದರೆ, ನಾನು ಒಳ್ಳೆಯ ಫರಿಸಾಯನಾಗಿದ್ದೆನೆಂದು ಅವರು ನಿನಗೆ ಹೇಳಬಲ್ಲರು. ಯೆಹೂದ್ಯರ ಇತರ ಯಾವುದೇ ಪಂಗಡಗಿಳಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಫರಿಸಾಯರು ಯೆಹೂದ್ಯ ಧರ್ಮದ ಕಟ್ಟೆಳೆಗಳಿಗೆ ವಿಧೇಯರಾಗುತ್ತಾರೆ. 6 ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನಾನು ನಿರೀಕ್ಷಿಸಿಕೊಂಡಿರುವುದರಿಂದಲೇ ಈಗ ವಿಚಾರಣೆಗೆ ಗುರಿಯಾಗಿದ್ದೇನೆ. 7 ಈ ವಾಗ್ದಾನವು ಖಂಡಿತವಾಗಿ ನೆರವೇರುತ್ತದೆ ಎಂದು ಹನ್ನೆರಡು ಕುಲಗಳ ನಮ್ಮ ಜನರು ನಿರೀಕ್ಷಿಸಿಕೊಂಡಿದ್ದಾರೆ. ಯೆಹೂದ್ಯರು ಹಗಲಿರುಳು ದೇವರ ಸೇವೆ ಮಾಡುತ್ತಿರುವುದು ಈ ನಿರೀಕ್ಷೆಯಿಂದಲೇ. ನಾನು ಸಹ ಇದೇ ನಿರೀಕ್ಷೆಯನ್ನು ಹೊಂದಿರುವುದರಿಂದ ಇವರು ನನ್ನ ಮೇಲೆ ಆಪಾದನೆಗಳನ್ನು ಹೊರಿಸಿದ್ದಾರೆ! 8 ಸತ್ತವರನ್ನು ದೇವರು ಜೀವಂತವಾಗಿ ಎಬ್ಬಿಸುತ್ತಾನೆ ಎಂಬುದು ನಂಬತಕ್ಕದ್ದಲ್ಲವೆಂದು ನೀವು ಭಾವಿಸಿಕೊಂಡಿರುವುದೇಕೆ?
9 “ನಾನು ಫರಿಸಾಯನಾಗಿದ್ದಾಗ ನಜರೇತಿನ ಯೇಸುವಿನ ಹೆಸರಿಗೆ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಬೇಕೆಂದು ಆಲೋಚಿಸಿಕೊಂಡೆನು. 10 ಜೆರುಸಲೇಮಿನಲ್ಲಿ ವಿಶ್ವಾಸಿಗಳ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಿದೆ. ಈ ವಿಶ್ವಾಸಿಗಳಲ್ಲಿ ಅನೇಕರನ್ನು ಸೆರೆಮನೆಗೆ ಹಾಕಲು ಮಹಾಯಾಜಕರು ನನಗೆ ಅಧಿಕಾರವನ್ನು ಕೊಟ್ಟರು. ಯೇಸುವಿನ ಶಿಷ್ಯರನ್ನು ಕೊಂದಾಗ ಅದಕ್ಕೆ ನಾನೂ ನನ್ನ ಸಮ್ಮತಿಯನ್ನು ಸೂಚಿಸಿದೆ. 11 ಪ್ರತಿಯೊಂದು ಸಭಾಮಂದಿರದಲ್ಲಿಯೂ ನಾನು ಅವರನ್ನು ದಂಡಿಸಿದೆನು. ಯೇಸುವಿನ ವಿರುದ್ಧ ದೂಷಣೆಯ ಮಾತುಗಳನ್ನು ಅವರ ಬಾಯಿಂದ ಹೊರಡಿಸಲು ನಾನು ಪ್ರಯತ್ನಿಸಿದೆನು. ಆ ವಿಶ್ವಾಸಿಗಳ ಮೇಲೆ ಬಹುಕೋಪವುಳ್ಳವನಾಗಿದ್ದು ಅವರನ್ನು ಹುಡುಕಿಹುಡುಕಿ ಹಿಂಸಿಸುವುದಕ್ಕಾಗಿ ವಿದೇಶದ ಪಟ್ಟಣಗಳಿಗೂ ಹೋದೆನು.
Kannada Holy Bible: Easy-to-Read Version. All rights reserved. © 1997 Bible League International