ಯಾಜಕಕಾಂಡ 4:13-21
Kannada Holy Bible: Easy-to-Read Version
13 “ಇಸ್ರೇಲರ ಇಡೀ ಜನಾಂಗವೆಲ್ಲಾ ತಿಳಿಯದೆ ಪಾಪಮಾಡುವ ಸ್ಥಿತಿ ಸಂಭವಿಸಬಹುದು. ಯೆಹೋವನು ಮಾಡಬಾರದೆಂದು ಆಜ್ಞಾಪಿಸಿದವುಗಳಲ್ಲಿ ಯಾವುದಾದರೊಂದನ್ನು ಅವರು ಮಾಡಿದರೆ ಅವರು ದೋಷಿಗಳಾಗುವರು. 14 ಆ ಪಾಪದ ಕುರಿತು ಅವರಿಗೆ ತಿಳಿದುಬಂದರೆ ಆಗ ಅವರು ಒಂದು ಹೋರಿಯನ್ನು ಇಡೀ ಜನಾಂಗದ ಪಾಪಪರಿಹಾರ ಮಾಡುವ ಸಮರ್ಪಣೆಯಾಗಿ ಅರ್ಪಿಸಬೇಕು. ಅವರು ಹೋರಿಯನ್ನು ದೇವದರ್ಶನಗುಡಾರಕ್ಕೆ ತರಬೇಕು. 15 ಜನರ ಹಿರಿಯರು ಯೆಹೋವನ ಸನ್ನಿಧಿಯಲ್ಲಿ ತಮ್ಮ ಕೈಗಳನ್ನು ಹೋರಿಯ ತಲೆಯ ಮೇಲಿಡಬೇಕು. ತರುವಾಯ ಒಬ್ಬನು ಯೆಹೋವನ ಸನ್ನಿಧಿಯಲ್ಲಿ ಹೋರಿಯನ್ನು ವಧಿಸಬೇಕು. 16 ಬಳಿಕ ಅಭಿಷಿಕ್ತನಾದ ಯಾಜಕನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗೆ ಹೋಗಬೇಕು. 17 ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯೆಹೋವನ ಸನ್ನಿಧಿಯಲ್ಲಿ ತೆರೆಯ ಮುಂದೆ ಏಳು ಸಾರಿ ಚಿಮಿಕಿಸಬೇಕು. 18 ಬಳಿಕ ಯಾಜಕನು ರಕ್ತದಲ್ಲಿ ಸ್ವಲ್ಪವನ್ನು ವೇದಿಕೆಯ ಮೂಲೆಗಳಲ್ಲಿ ಹಾಕಬೇಕು. (ಈ ವೇದಿಕೆಯು ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇರುತ್ತದೆ.) ಯಾಜಕನು ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿದುಬಿಡಬೇಕು. (ಈ ವೇದಿಕೆಯು ದೇವದರ್ಶನ ಗುಡಾರದ ಬಾಗಿಲಲ್ಲಿ ಇರುತ್ತದೆ.) 19 ತರುವಾಯ ಯಾಜಕನು ಪಶುವಿನಿಂದ ಕೊಬ್ಬನ್ನೆಲ್ಲಾ ತೆಗೆದು ಅದನ್ನು ವೇದಿಕೆಯ ಮೇಲೆ ಹೋಮಮಾಡಬೇಕು. 20 ಯಾಜಕನು ಪಾಪಪರಿಹಾರಕ ಯಜ್ಞದ ಹೋರಿಯ ಭಾಗಗಳನ್ನು ಸಮರ್ಪಿಸಿದಂತೆಯೇ ಈ ಭಾಗಗಳನ್ನು ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಜನರಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ದೇವರು ಅವರನ್ನು ಕ್ಷಮಿಸುವನು. 21 ಯಾಜಕನು ಈ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ, ಆ ಮೊದಲನೆಯ ಹೋರಿಯನ್ನು ಸುಟ್ಟುಹಾಕಿದ ಸ್ಥಳದಲ್ಲಿಯೇ ಅದನ್ನು ಸುಡಬೇಕು. ಇದು ಇಡೀ ಸಮೂಹದ ಪಾಪವನ್ನು ಪರಿಹಾರ ಮಾಡುವ ಸಮರ್ಪಣೆಯಾಗಿದೆ.
Read full chapterKannada Holy Bible: Easy-to-Read Version. All rights reserved. © 1997 Bible League International