Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 1

ಮೊದಲನೆ ಭಾಗ

(ಕೀರ್ತನೆಗಳು 1–41)

ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
    ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
    ಅವನೇ ಭಾಗ್ಯವಂತನು.
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
    ಅದನ್ನೇ ಹಗಲಿರುಳು ಧ್ಯಾನಿಸುವನು.
ಅವನು ನೀರಿನ ಕಾಲುವೆಗಳ ಬಳಿಯಲ್ಲಿ
    ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
    ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ದುಷ್ಟರಾದರೋ ಹಾಗಲ್ಲ!
    ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
    ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
    ದುಷ್ಟರನ್ನಾದರೋ ನಾಶಪಡಿಸುವನು.

ಜ್ಞಾನೋಕ್ತಿಗಳು 5

ವ್ಯಭಿಚಾರಕ್ಕೆ ದೂರವಾಗಿರು

ನನ್ನ ಮಗನೇ, ನನ್ನ ಜ್ಞಾನೋಪದೇಶವನ್ನು ಕೇಳು. ನನ್ನ ವಿವೇಕದ ಮಾತುಗಳಿಗೆ ಗಮನಕೊಡು. ಆಗ ನೀನು ಯೋಗ್ಯವಾಗಿ ನಡೆದುಕೊಳ್ಳುವೆ; ತಿಳುವಳಿಕೆಯಿಂದ ಮಾತಾಡುವೆ. ಮತ್ತೊಬ್ಬನ ಹೆಂಡತಿಯ ಮಾತುಗಳು ಜೇನಿನಂತೆ ಸಿಹಿಯಾಗಿವೆ; ಎಣ್ಣೆಗಿಂತ ನಯವಾಗಿವೆ. ಆದರೆ ಕೊನೆಗೆ ಆಕೆಯು ವಿಷದಂತೆ ಕಹಿಯಾಗುವಳು; ಖಡ್ಗದಂತೆ ತೀಕ್ಷ್ಣವಾಗುವಳು. ಆಕೆಯ ಹೆಜ್ಜೆಗಳು ಮರಣದ ಕಡೆಗೆ ಹೋಗುತ್ತವೆ. ಆಕೆ ನಿನ್ನನ್ನು ನೇರವಾಗಿ ಪಾತಾಳಕ್ಕೆ ನಡೆಸುತ್ತಾಳೆ! ಆಕೆಯನ್ನು ಹಿಂಬಾಲಿಸಬೇಡ! ಆಕೆ ನೀತಿಮಾರ್ಗವನ್ನು ಬಿಟ್ಟುಹೋಗಿದ್ದಾಳೆ; ಅದು ಆಕೆಗೆ ಗೊತ್ತೇ ಇಲ್ಲ. ಎಚ್ಚರಿಕೆಯಿಂದಿರು! ಜೀವ ಮಾರ್ಗವನ್ನು ಹಿಂಬಾಲಿಸು!

ಹೀಗಿರಲು, ನನ್ನ ಮಗನೇ, ನನಗೆ ಕಿವಿಗೊಡು, ನನ್ನ ಮಾತುಗಳನ್ನು ಮರೆಯಬೇಡ. ವ್ಯಭಿಚಾರಿಣಿಯಿಂದ ದೂರವಾಗಿರು. ಅವಳ ಮನೆಯ ಬಾಗಿಲ ಸಮೀಪಕ್ಕೂ ಹೋಗಬೇಡ. ಒಂದುವೇಳೆ ನೀನು ಹೋದರೆ, ನಿನ್ನ ಮೇಲೆ ಜನರಿಗಿರುವ ಗೌರವವನ್ನು ಕಳೆದುಕೊಳ್ಳುವಿ; ಕ್ರೂರಿಗಳಿಂದ ಯೌವನದಲ್ಲಿಯೇ ಸಾವಿಗೀಡಾಗುವಿ. 10 ನಿನಗೆ ಗೊತ್ತಿಲ್ಲದವರು ನಿನ್ನ ಐಶ್ವರ್ಯವನ್ನೆಲ್ಲಾ ತೆಗೆದುಕೊಳ್ಳುವರು; ನೀನು ದುಡಿದು ಸಂಪಾದಿಸಿದ್ದನ್ನು ಬೇರೆಯವರು ಪಡೆದುಕೊಳ್ಳುವರು. 11 ಕೊನೆಯಲ್ಲಿ, ನಿನ್ನ ಆರೋಗ್ಯವೆಲ್ಲಾ ಕೆಟ್ಟುಹೋಗಿ ನಿನ್ನಲ್ಲಿರುವುದನ್ನೆಲ್ಲಾ ಕಳೆದುಕೊಂಡು ನೀನು ಗೋಳಾಡುವಿ. 12-13 ಆಗ ನೀನು, “ನಾನೇಕೆ ನನ್ನ ತಂದೆತಾಯಿಗಳ ಮಾತನ್ನು ಕೇಳಲಿಲ್ಲ? ನಾನೇಕೆ ನನ್ನ ಉಪದೇಶಕರ ಮಾತಿಗೆ ಕಿವಿಗೊಡಲಿಲ್ಲ? ನಾನು ಅವರ ಸದುಪದೇಶವನ್ನು ದ್ವೇಷಿಸಿದ್ದರಿಂದಲೂ ಅವರ ಬುದ್ಧಿಮಾತನ್ನು ತಳ್ಳಿಬಿಟ್ಟಿದ್ದರಿಂದಲೂ 14 ನಾನು ಜನರೆಲ್ಲರ ಎದುರಿನಲ್ಲಿ ನಾಚಿಕೆಗೀಡಾಗಿದ್ದೇನೆ” ಎಂದು ಹೇಳುವಿ.

15 ನಿನ್ನ ಸ್ವಂತ ಹೆಂಡತಿಗೆ ನಂಬಿಗಸ್ತನಾಗಿರು; ನಿನ್ನ ಪ್ರೀತಿಯು ಆಕೆಗೆ ಮಾತ್ರ ಸಲ್ಲಲಿ. 16 ಬೇರೆ ಸ್ತ್ರೀಯರಲ್ಲಿ ನೀನು ಮಕ್ಕಳನ್ನು ಪಡೆಯುವುದು ಒಳ್ಳೆಯದಲ್ಲ. 17 ನಿನ್ನ ಮಕ್ಕಳು ನಿನ್ನವರೇ ಆಗಿರಲಿ; ಪರರು ನಿನ್ನೊಂದಿಗೆ ಪಾಲುಗಾರರಾಗದಿರಲಿ. 18 ಆದ್ದರಿಂದ ಯೌವನಪ್ರಾಯದಲ್ಲಿ ನೀನು ಮದುವೆಮಾಡಿಕೊಂಡ ಸ್ತ್ರೀಯೊಡನೆ ಸಂತೋಷಿಸು. 19 ಆಕೆ ಸುಂದರವಾದ ಜಿಂಕೆಯಂತೆಯೂ ಅಂದವಾದ ಕಾಡುಮೇಕೆಯಂತೆಯೂ ಇದ್ದಾಳೆ. ಆಕೆಯ ಸ್ತನಗಳು ನಿನ್ನನ್ನು ಸಂಪೂರ್ಣವಾಗಿ ತೃಪ್ತಿಪಡಿಸಲಿ. ಆಕೆಯ ಪ್ರೀತಿಯಲ್ಲೇ ಲೀನವಾಗಿರು. 20 ಪರಸ್ತ್ರೀಯಲ್ಲಿ ಮೋಹಗೊಂಡು ಆಕೆಯನ್ನು ಅಪ್ಪಿಕೊಳ್ಳಬೇಡ.

21 ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ; ಯೆಹೋವನು ಅವುಗಳನ್ನು ಪರೀಕ್ಷಿಸುತ್ತಾನೆ. 22 ಕೆಡುಕನ ದುಷ್ಕೃತ್ಯಗಳು ಅವನನ್ನೇ ಹಿಡಿಯುತ್ತವೆ. ಅವನ ಪಾಪಗಳು ಹಗ್ಗದಂತೆ ಅವನನ್ನೇ ಬಂಧಿಸುತ್ತವೆ. 23 ಅವನು ಬುದ್ಧಿವಾದವನ್ನು ತಿರಸ್ಕರಿಸಿದ್ದರಿಂದ ಸಾಯುವನು; ತನ್ನ ಅತಿಮೂರ್ಖತನದಿಂದ ದಾರಿತಪ್ಪುವನು.

ಲೂಕ 14:34-35

ನಿಮ್ಮ ಪ್ರಭಾವವನ್ನು ಕಳೆದುಕೊಳ್ಳಬೇಡಿರಿ

(ಮತ್ತಾಯ 5:13; ಮಾರ್ಕ 9:50)

34 “ಉಪ್ಪು ಒಳ್ಳೆಯ ಪದಾರ್ಥ. ಆದರೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯವಿಲ್ಲ. 35 ಅದರಿಂದ ಮಣ್ಣಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ.

“ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International