Revised Common Lectionary (Semicontinuous)
ಇಸ್ರೇಲರು ದಾವೀದನನ್ನು ರಾಜನನ್ನಾಗಿ ಮಾಡುವರು
5 ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ. 2 ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು.
3 ರಾಜನಾದ ದಾವೀದನಿದ್ದ ಹೆಬ್ರೋನಿಗೆ ಇಸ್ರೇಲಿನ ಎಲ್ಲಾ ನಾಯಕರೂ ಬಂದರು. ಹೆಬ್ರೋನಿನಲ್ಲಿ ರಾಜನಾದ ದಾವೀದನು ಯೆಹೋವನ ಸನ್ನಿಧಿಯಲ್ಲಿ ಈ ನಾಯಕರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಆಗ ನಾಯಕರು ದಾವೀದನನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸಿದರು.
4 ದಾವೀದನು ಆಳುವುದಕ್ಕೆ ಪ್ರಾರಂಭಿಸಿದಾಗ ಅವನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಅವನು ನಲವತ್ತು ವರ್ಷಗಳ ಕಾಲ ಆಳಿದನು. 5 ಅವನು ಏಳು ವರ್ಷ ಆರು ತಿಂಗಳ ಕಾಲ ಹೆಬ್ರೋನಿನಲ್ಲಿದ್ದು ಯೆಹೂದ್ಯರನ್ನು ಆಳಿದನು. ಅವನು ಮೂವತ್ತಮೂರು ವರ್ಷ ಜೆರುಸಲೇಮಿನಲ್ಲಿದ್ದು ಸಮಸ್ತ ಇಸ್ರೇಲನ್ನು ಮತ್ತು ಯೆಹೂದವನ್ನು ಆಳಿದನು.
9 ದಾವೀದನು ಕೋಟೆಯಲ್ಲಿ ನೆಲೆಸಿದ್ದನು. ಅವನು ಆ ಕೋಟೆಗೆ “ದಾವೀದನ ನಗರ”ವೆಂದು ಕರೆದನು. ದಾವೀದನು ಮಿಲ್ಲೋವನ್ನು ಕಟ್ಟಿಸಿದನು. ಅವನು ನಗರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 10 ಸರ್ವಶಕ್ತನಾದ ಯೆಹೋವನು ದಾವೀದನೊಂದಿಗೆ ಇದ್ದುದರಿಂದ ಅವನು ಬಲಶಾಲಿಯಾಗುತ್ತಲೇ ಇದ್ದನು.
ರಚನೆಗಾರರು: ಕೋರಹೀಯರು.
48 ಯೆಹೋವನೇ ಮಹೋನ್ನತನು.
ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
2 ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
ಅದೇ ಆ ಮಹಾರಾಜನ ಪರ್ವತ.
3 ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
4 ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
5 ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
ಭಯದಿಂದ ಓಡಿಹೋದರು.
6 ಭಯವು ಅವರನ್ನು
ಪ್ರಸವವೇದನೆಯಂತೆ ಆವರಿಸಿಕೊಂಡಿತು.
7 ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
ನೀನು ಅವರನ್ನು ನಾಶಮಾಡಿದೆ.
8 ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.
9 ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!
2 ಮೂರನೆಯ ಆಕಾಶಕ್ಕೆ ಒಯ್ಯಲ್ಪಟ್ಟಿದ್ದ ಒಬ್ಬ ವ್ಯಕ್ತಿಯನ್ನು ನಾನು ಬಲ್ಲೆನು. ಇದು ಸಂಭವಿಸಿ ಹದಿನಾಲ್ಕು ವರ್ಷಗಳಾದವು. ಆ ವ್ಯಕ್ತಿಯು ದೇಹಸಹಿತವಾಗಿ ಹೋಗಿದ್ದನೊ ಅಥವಾ ದೇಹರಹಿತನಾಗಿ ಹೋಗಿದ್ದನೊ ನನಗೆ ಗೊತ್ತಿಲ್ಲ. ದೇವರಿಗೆ ಗೊತ್ತು. 3-4 ಈ ವ್ಯಕ್ತಿಯು ಪರದೈಸಿಗೆ ಒಯ್ಯಲ್ಪಟ್ಟದ್ದು ನನಗೆ ಗೊತ್ತಿದೆ. ಅವನು ನುಡಿಯಲಶಕ್ಯವಾದ ಮತ್ತು ಹೇಳಕೂಡದಂಥ ಮಾತುಗಳನ್ನು ಕೇಳಿದನು. 5 ಅಂಥವನ ಬಗ್ಗೆ ನಾನು ಹೊಗಳಿಕೊಳ್ಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳದೆ, ನನ್ನ ಬಲಹೀನತೆಗಳ ಬಗ್ಗೆ ಹೊಗಳಿಕೊಳ್ಳುತ್ತೇನೆ.
6 ನನ್ನ ಬಗ್ಗೆ ಹೊಗಳಿಕೊಳ್ಳಬೇಕೆಂದಿದ್ದರೂ ಬುದ್ಧಿಹೀನನಾಗುವುದಿಲ್ಲ, ಏಕೆಂದರೆ ಸತ್ಯವನ್ನೇ ಹೇಳುತ್ತೇನೆ. ಆದರೆ ನನ್ನ ಬಗ್ಗೆ ಹೊಗಳಿಕೊಳ್ಳುವುದಿಲ್ಲ, ಏಕೆಂದರೆ ಜನರು ನನ್ನಲ್ಲಿ ನೋಡುವುದಕ್ಕಿಂತಲೂ ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಬಗ್ಗೆ ಯೋಚಿಸುವುದು ನನಗೆ ಇಷ್ಟವಿಲ್ಲ.
7 ಆದರೆ ನನಗೆ ತೋರಿಸಲ್ಪಟ್ಟ ಆಶ್ಚರ್ಯಕರವಾದ ಸಂಗತಿಗಳ ಬಗ್ಗೆ ನಾನು ಬಹು ಹೆಮ್ಮೆಪಡಕೂಡದು. ಆದ್ದರಿಂದಲೇ ಬಾಧೆಯ ಸಮಸ್ಯೆಯೊಂದು ನನಗೆ ಕೊಡಲ್ಪಟ್ಟಿತು. ಸೈತಾನನಿಂದ ಬಂದ ದೂತನೇ ಈ ಸಮಸ್ಯೆ. ಬಹಳವಾಗಿ ಹೆಮ್ಮೆಪಡದಂತೆ ನನ್ನನ್ನು ಹೊಡೆಯುವುದಕ್ಕಾಗಿ ಅದನ್ನು ಕಳುಹಿಸಲಾಗಿತ್ತು. 8 ನನ್ನಿಂದ ಅದನ್ನು ತೆಗೆದುಹಾಕಬೇಕೆಂದು ನಾನು ಮೂರು ಸಲ ಪ್ರಭುವನ್ನು ಬೇಡಿಕೊಂಡೆನು. 9 ಆದರೆ ಪ್ರಭುವು ನನಗೆ, “ನನ್ನ ಕೃಪೆಯೇ ನಿನಗೆ ಸಾಕು, ನೀನು ಬಲಹೀನನಾಗಿರುವಾಗ ನನ್ನ ಶಕ್ತಿಯು ನಿನ್ನಲ್ಲಿ ಪರಿಪೂರ್ಣವಾಗಿರುತ್ತದೆ” ಎಂದು ಹೇಳಿದನು. 10 ಆದ್ದರಿಂದ ನನ್ನಲ್ಲಿ ಬಲಹೀನತೆಗಳಿರುವಾಗ, ಜನರು ನನ್ನ ಬಗ್ಗೆ ಕೆಟ್ಟಸಂಗತಿಗಳನ್ನು ಹೇಳುವಾಗ, ಜನರು ನನ್ನನ್ನು ಹಿಂಸಿಸುವಾಗ, ನನಗೆ ಸಮಸ್ಯೆಗಳಿರುವಾಗ ಸಂತೋಷಿಸುತ್ತೇನೆ. ಇವುಗಳೆಲ್ಲಾ ಕ್ರಿಸ್ತನಿಗೋಸ್ಕರವಾಗಿಯೆ. ಇವುಗಳ ಬಗ್ಗೆ ಸಂತೋಷಪಡುತ್ತೇನೆ, ಏಕೆಂದರೆ ಬಲಹೀನನಾಗಿರುವಾಗಲೇ ನಿಜವಾಗಿಯೂ ಶಕ್ತಿಶಾಲಿಯಾಗಿರುತ್ತೇನೆ.
ಸ್ವಂತ ಊರಿಗೆ ಯೇಸುವಿನ ಪ್ರಯಾಣ
(ಮತ್ತಾಯ 13:53-58; ಲೂಕ 4:16-30)
6 ಯೇಸು ಅಲ್ಲಿಂದ ಹೊರಟು, ತನ್ನ ಸ್ವಂತ ಊರಿಗೆ ಹೋದನು. ಆತನ ಶಿಷ್ಯರು ಆತನೊಂದಿಗೆ ಹೋದರು. 2 ಸಬ್ಬತ್ ದಿನದಂದು ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. ಆತನ ಉಪದೇಶವನ್ನು ಕೇಳಿ ಆಶ್ಚರ್ಯಗೊಂಡ ಅನೇಕ ಜನರು, “ಈ ಉಪದೇಶವನ್ನು ಮತ್ತು ಈ ಜ್ಞಾನವನ್ನು ಇವನು ಎಲ್ಲಿಂದ ಪಡೆದನು? ಇವನಿಗೆ ಕೊಟ್ಟವರು ಯಾರು? ಇವನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯು ಎಲ್ಲಿಂದ ಬಂತು? 3 ಇವನು ಕೇವಲ ಬಡಗಿಯಲ್ಲವೋ? ಇವನ ತಾಯಿ ಮರಿಯಳು. ಇವನು ಯಾಕೋಬ, ಯೋಸೆ, ಯೂದ ಮತ್ತು ಸಿಮೋನರ ಅಣ್ಣ. ಇವನ ತಂಗಿಯರು ಇಲ್ಲಿ ನಮ್ಮೊಂದಿಗಿದ್ದಾರೆ” ಎಂದು ಹೇಳಿ ಆತನನ್ನು ತಾತ್ಸಾರ ಮಾಡಿದರು.
4 ಯೇಸು, “ಪ್ರವಾದಿಯನ್ನು ಬೇರೆ ಜನರು ಗೌರವಿಸುತ್ತಾರೆ, ಆದರೆ ಪ್ರವಾದಿಗೆ ಸ್ವಂತ ಊರಿನಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ದೊರೆಯುವುದಿಲ್ಲ” ಎಂದು ಜನರಿಗೆ ಹೇಳಿದನು. 5 ಯೇಸು ಆ ಊರಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆತನು ತನ್ನ ಕೈಗಳನ್ನು ಕೆಲವು ಮಂದಿ ಕಾಯಿಲೆಯವರ ಮೇಲಿಟ್ಟು ಅವರ ಕಾಯಿಲೆಗಳನ್ನು ವಾಸಿಮಾಡಿದನು. ಇವುಗಳಲ್ಲದೆ ಬೇರೆ ಯಾವ ಅದ್ಭುತಕಾರ್ಯಗಳನ್ನೂ ಆತನು ಮಾಡಲಿಲ್ಲ. 6 ಆ ಜನರಲ್ಲಿ ನಂಬಿಕೆಯಿಲ್ಲದಿರುವುದನ್ನು ಕಂಡು ಯೇಸುವಿಗೆ ಬಹಳ ಆಶ್ಚರ್ಯವಾಯಿತು. ಬಳಿಕ ಯೇಸು ಆ ಪ್ರದೇಶದ ಇತರ ಹಳ್ಳಿಗಳಿಗೆ ಹೋಗಿ ಉಪದೇಶಿಸಿದನು.
ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸಿದ್ದು
(ಮತ್ತಾಯ 10:1,5-15; ಲೂಕ 9:1-6)
7 ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಾಗಿ ಕರೆದು ಅವರನ್ನು ಇಬ್ಬರಿಬ್ಬರಾಗಿ ಹೊರಗೆ ಕಳುಹಿಸಿದನು. ಯೇಸು ಅವರಿಗೆ ದೆವ್ವಗಳ ಮೇಲೆ ಅಧಿಕಾರವನ್ನು ನೀಡಿದನು. 8 ಯೇಸು ಅವರಿಗೆ ಹೇಳಿದ್ದೇನೆಂದರೆ: “ನಿಮ್ಮ ಪ್ರವಾಸಕ್ಕೆ ಏನನ್ನೂ ತೆಗೆದುಕೊಳ್ಳಬೇಡಿ. ಊರುಗೋಲನ್ನು ಮಾತ್ರ ತೆಗೆದುಕೊಳ್ಳಿ, ರೊಟ್ಟಿಯನ್ನಾಗಲಿ ಚೀಲವನ್ನಾಗಲಿ ತೆಗೆದುಕೊಳ್ಳಬೇಡಿ. ನಿಮ್ಮ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳಬೇಡಿ. 9 ಪಾದರಕ್ಷೆಗಳನ್ನು ತೊಟ್ಟುಕೊಳ್ಳಿರಿ. ನೀವು ಧರಿಸಿಕೊಂಡಿರುವ ಉಡುಪೇ ಸಾಕು. 10 ನೀವು ಒಂದು ಮನೆಯಲ್ಲಿ ಇಳಿದುಕೊಂಡ ಮೇಲೆ ಆ ಊರನ್ನು ಬಿಡುವವರೆಗೆ ಆ ಮನೆಯಲ್ಲಿರಿ. 11 ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದಿದ್ದರೆ ಮತ್ತು ನಿಮ್ಮ ಬೋಧನೆಯನ್ನು ಕೇಳದಿದ್ದರೆ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿ ಆ ಊರನ್ನು ಬಿಟ್ಟುಹೋಗಿರಿ. ಇದು ಅವರಿಗೆ ಎಚ್ಚರಿಕೆಯಾಗಿರುತ್ತದೆ.”
12 ಶಿಷ್ಯರು ಅಲ್ಲಿಂದ ಹೊರಟು, ಇತರ ಸ್ಥಳಗಳಿಗೆ ಹೋಗಿ ಜನರಿಗೆ, “ನಿಮ್ಮಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಉಪದೇಶಿಸಿದರು. 13 ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಶಿಷ್ಯರು ಬಿಡುಗಡೆ ಮಾಡಿದರು ಮತ್ತು ಕಾಯಿಲೆಯ ಜನರಿಗೆ ಎಣ್ಣೆಯನ್ನು ಹಚ್ಚಿ ಗುಣಪಡಿಸಿದರು.
Kannada Holy Bible: Easy-to-Read Version. All rights reserved. © 1997 Bible League International