Revised Common Lectionary (Semicontinuous)
57 ಯೆಹೋವನೇ, ನನ್ನ ಪಾಲು ನೀನೇ;
ನಿನ್ನ ಆಜ್ಞೆಗಳಿಗೆ ವಿಧೇಯನಾಗುವುದೇ ನನ್ನ ಕರ್ತವ್ಯವೆಂದು ನಿರ್ಧರಿಸಿರುವೆ.
58 ನಿನ್ನನ್ನೇ ಸಂಪೂರ್ಣವಾಗಿ ಆಶ್ರಯಿಸಿಕೊಂಡಿದ್ದೇನೆ.
ನಿನ್ನ ವಾಗ್ದಾನದಂತೆ ನನಗೆ ಕರುಣೆತೋರು.
59 ನನ್ನ ಜೀವಿತದ ಕುರಿತು ಎಚ್ಚರಿಕೆಯಿಂದ ಆಲೋಚಿಸಿ
ನಿನ್ನ ಕಟ್ಟಳೆಗಳನ್ನು ಅನುಸರಿಸಲು ನಿರ್ಧರಿಸಿದ್ದೇನೆ.
60 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
ತಡಮಾಡದೆ ಬೇಗನೆ ಹಿಂತಿರುಗಿದೆನು.
61 ಗುಂಪಾಗಿ ಸೇರಿದ್ದ ದುಷ್ಟರು ನನ್ನನ್ನು ದೂಷಿಸಿದರೂ
ನಿನ್ನ ಉಪದೇಶಗಳನ್ನು ನಾನು ಮರೆಯಲಿಲ್ಲ.
62 ನಿನ್ನ ಒಳ್ಳೆಯ ನಿರ್ಧಾರಗಳಿಗಾಗಿ ಕೃತಜ್ಞತೆ ಸಲ್ಲಿಸಲು
ನಾನು ಮಧ್ಯರಾತ್ರಿಯಲ್ಲಿ ಎದ್ದೇಳುವೆನು.
63 ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಾನು ಸ್ನೇಹಿತನಾಗಿದ್ದೇನೆ.
ನಿನ್ನ ನಿಯಮಗಳಿಗೆ ವಿಧೇಯರಾಗುವ ಪ್ರತಿಯೊಬ್ಬರಿಗೂ ನಾನು ಸ್ನೇಹಿತನಾಗಿದ್ದೇನೆ.
64 ನಿನ್ನ ಶಾಶ್ವತ ಪ್ರೀತಿಯು ಭೂಮಿಯನ್ನು ತುಂಬಿಕೊಂಡಿದೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
27 ನಿನಗೆ ಸಾಧ್ಯವಾದಾಗಲೆಲ್ಲಾ ಉಪಕಾರಮಾಡು. 28 ನಿನ್ನ ನೆರೆಯವನಿಗೆ ಕೊಡತಕ್ಕದ್ದು ನಿನ್ನಲ್ಲಿರುವಾಗ, “ನಾಳೆ ಬಾ, ಕೊಡುತ್ತೇನೆ” ಎಂದು ಹೇಳಬೇಡ.
29 ನಿನ್ನ ನೆರೆಯವನಿಗೆ ಕೇಡನ್ನು ಕಲ್ಪಿಸಬೇಡ. ನಿನ್ನ ಸುರಕ್ಷತೆಗಾಗಿಯೇ ನಿನ್ನ ನೆರೆಯವನ ಸಮೀಪದಲ್ಲಿ ವಾಸಿಸುತ್ತಿದ್ದೀಯಲ್ಲಾ!
30 ನಿನಗೆ ಕೇಡನ್ನು ಮಾಡಿಲ್ಲದಿರುವವನನ್ನು ನಿಷ್ಕಾರಣವಾಗಿ ನ್ಯಾಯಾಲಯಕ್ಕೆ ಕೊಂಡೊಯ್ಯಬೇಡ.
31 ಬಲಾತ್ಕಾರಿಯನ್ನು ಕಂಡು ಹೊಟ್ಟೆಕಿಚ್ಚುಪಡಬೇಡ; ಅವನ ನಡತೆಯನ್ನು ಅನುಸರಿಸಬೇಡ. 32 ಯೆಹೋವನಿಗೆ ವಕ್ರಬುದ್ಧಿಯುಳ್ಳವರು ಅಸಹ್ಯ. ಆದರೆ ಆತನು ಯಥಾರ್ಥರೊಂದಿಗೆ ಸ್ನೇಹದಿಂದಿರುವನು.
33 ದುಷ್ಟರ ಮನೆಯ ಮೇಲೆ ಯೆಹೋವನ ಶಾಪವಿರುವುದು; ಆದರೆ ನೀತಿವಂತರ ಮನೆಯ ಮೇಲೆ ಆತನ ಆಶೀರ್ವಾದವಿರುವುದು.
34 ಯಾರು ಗರ್ವದಿಂದ ಬೇರೆಯವರನ್ನು ಗೇಲಿಮಾಡುತ್ತಾರೋ ಅವರನ್ನು ಯೆಹೋವನೂ ಗೇಲಿಮಾಡುತ್ತಾನೆ. ದೀನರಿಗಾದರೋ ಆತನ ಕರುಣೆ ದೊರೆಯುವುದು.
35 ಜ್ಞಾನಿಗಳು ಸನ್ಮಾನ ಹೊಂದುವರು; ಮೂಢರಿಗೆ ಅವಮಾನವಾಗುವುದು.
ಐಶ್ವರ್ಯವಂತನೊಬ್ಬನು ಯೇಸುವಿಗೆ ಕೇಳಿದ ಪ್ರಶ್ನೆ
(ಮತ್ತಾಯ 19:16-30; ಮಾರ್ಕ 10:17-31)
18 ಒಬ್ಬ ಯೆಹೂದ್ಯನಾಯಕನು ಯೇಸುವಿಗೆ, “ಒಳ್ಳೆಯ ಉಪದೇಶಕನೇ, ನಿತ್ಯಜೀವ ಹೊಂದಲು ನಾನೇನು ಮಾಡಬೇಕು?” ಎಂದು ಕೇಳಿದನು.
19 ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ನೀನು ಏಕೆ ಕರೆಯುತ್ತೀ? ದೇವರೊಬ್ಬನೇ ಒಳ್ಳೆಯವನು. 20 ದೇವರ ಈ ಆಜ್ಞೆಗಳು ನಿನಗೆ ಗೊತ್ತೇ ಇವೆ: ‘ನೀನು ವ್ಯಭಿಚಾರ ಮಾಡಬಾರದು, ಯಾರನ್ನೂ ಕೊಲೆಮಾಡಬಾರದು, ಯಾವುದನ್ನೂ ಕದಿಯಬಾರದು, ಬೇರೆ ಜನರ ಬಗ್ಗೆ ನೀನು ಸುಳ್ಳನ್ನು ಹೇಳಬಾರದು ಮತ್ತು ನೀನು ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’”(A) ಎಂದನು.
21 ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಆ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ!” ಎಂದು ಹೇಳಿದನು.
22 ಆಗ ಯೇಸು ಅವನಿಗೆ, “ನೀನು ಮಾಡಬೇಕಾದ ಇನ್ನೊಂದು ಕಾರ್ಯವಿದೆ. ನಿನ್ನ ಆಸ್ತಿಯನ್ನೆಲ್ಲಾ ಮಾರಿ ಅದರಿಂದ ಬಂದ ಹಣವನ್ನು ಬಡ ಜನರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ದೊರೆಯುವುದು. ನೀನಾದರೋ ಬಂದು ನನ್ನನ್ನು ಹಿಂಬಾಲಿಸು!” ಅಂದನು. 23 ಯೇಸುವಿನ ಈ ಮಾತುಗಳನ್ನು ಕೇಳಿದಾಗ ಅವನಿಗೆ ಬಹಳ ದುಃಖವಾಯಿತು. ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
24 ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25 ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
ಯಾರಿಗೆ ರಕ್ಷಣೆಯಾಗುವುದು?
26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.
27 ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು.
28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.
29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30 ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International