Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 6:9-22

ನೋಹ ಮತ್ತು ಮಹಾ ಜಲಪ್ರಳಯ

ಇದು ನೋಹನ ಚರಿತ್ರೆ. ಅವನು ತನ್ನ ಜೀವಮಾನವೆಲ್ಲಾ ನೀತಿವಂತನಾಗಿದ್ದನು; ಯಾವಾಗಲೂ ದೇವರನ್ನೇ ಅನುಸರಿಸುತ್ತಿದ್ದನು. 10 ಅವನಿಗೆ ಮೂವರು ಗಂಡುಮಕ್ಕಳಿದ್ದರು: ಶೇಮ್, ಹಾಮ್, ಯೆಫೆತ್.

11-12 ದೇವರು ಭೂಮಿಯ ಕಡೆಗೆ ನೋಡಿದಾಗ ಜನರಿಂದ ಅದು ಕೆಟ್ಟುಹೋಗಿರುವುದನ್ನು ಕಂಡನು. ಎಲ್ಲೆಲ್ಲೂ ಹಿಂಸೆ ತುಂಬಿಕೊಂಡಿತ್ತು; ಜನರು ದುಷ್ಟರಾಗಿಯೂ ಕ್ರೂರಿಗಳಾಗಿಯೂ ತಮ್ಮ ಜೀವಿತವನ್ನು ಕೆಡಿಸಿಕೊಂಡಿದ್ದರು.

13 ಆದ್ದರಿಂದ ದೇವರು ನೋಹನಿಗೆ, “ನಾನು ಎಲ್ಲಾ ಜನರಿಗೂ ಅಂತ್ಯವನ್ನು ಬರಮಾಡಬೇಕೆಂದಿದ್ದೇನೆ; ಯಾಕೆಂದರೆ ಅವರು ಕೋಪ, ಹಿಂಸೆಗಳಿಂದ ಭೂಮಿಯನ್ನು ತುಂಬಿಸಿದ್ದಾರೆ. ಆದಕಾರಣ ನಾನು ಎಲ್ಲಾ ಜೀವಿಗಳನ್ನು ನಾಶಮಾಡುವೆನು. 14 ನಿನಗೋಸ್ಕರ ಒಂದು ನಾವೆಯನ್ನು ತುರಾಯಿ ಮರದಿಂದ ತಯಾರಿಸು. ಆ ನಾವೆಯಲ್ಲಿ ಕೋಣೆಗಳನ್ನು ಮಾಡು. ಇಡೀ ನಾವೆಗೆ ಒಳಭಾಗದಲ್ಲೂ ಹೊರಭಾಗದಲ್ಲೂ ರಾಳವನ್ನು ಹಚ್ಚು.

15 “ನೀನು ತಯಾರಿಸುವ ನಾವೆಯು ನಾನೂರೈವತ್ತು ಅಡಿ ಉದ್ದವಾಗಿಯೂ ಎಪ್ಪತ್ತೈದು ಅಡಿ ಅಗಲವಾಗಿಯೂ ನಲವತ್ತೈದು ಅಡಿ ಎತ್ತರವಾಗಿಯೂ ಇರಬೇಕು. 16 ಕಿಟಕಿಯ ಮೇಲ್ಛಾವಣಿಗೆ ಹದಿನೆಂಟು ಇಂಚು ಕೆಳಗಿರಲಿ. ನಾವೆಯ ಪಾರ್ಶ್ವದಲ್ಲಿ ಬಾಗಿಲಿರಲಿ. ನಾವೆಯಲ್ಲಿ ಮೇಲಂತಸ್ತು ಮಧ್ಯಂತಸ್ತು ಮತ್ತು ಕೆಳಂತಸ್ತು ಎಂಬ ಮೂರು ಅಂತಸ್ತುಗಳಿರಲಿ.

17 “ನಾನು ನಿನಗೆ ಹೇಳುತ್ತಿರುವುದನ್ನು ಅರ್ಥಮಾಡಿಕೊ. ನಾನು ಭೂಮಿಯ ಮೇಲೆ ಮಹಾ ಜಲಪ್ರಳಯವನ್ನು ತರುವೆನು. ಆಕಾಶದ ಕೆಳಗಿರುವ ಎಲ್ಲಾ ಜೀವಿಗಳನ್ನು ನಾಶಮಾಡುವೆನು. ಭೂಮಿಯ ಮೇಲಿರುವ ಪ್ರತಿಯೊಂದೂ ಸಾಯುವುದು. 18 ನಾನು ನಿನ್ನೊಂದಿಗೆ ವಿಶೇಷ ಒಡಂಬಡಿಕೆಯನ್ನು ಮಾಡಿಕೊಳ್ಳುವೆ. ಅದೇನೆಂದರೆ, ನೀನು ಮತ್ತು ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ಸೊಸೆಯಂದಿರು ನಾವೆಯೊಳಗೆ ಹೋಗುವಿರಿ. 19 ಇದಲ್ಲದೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು ಗಂಡನ್ನೂ ಒಂದು ಹೆಣ್ಣನ್ನೂ ನಾವೆಯೊಳಗೆ ಸೇರಿಸಿಕೊ. ನಿನ್ನೊಡನೆ ಅವುಗಳನ್ನು ಜೀವದಿಂದುಳಿಸಿ ಕಾಪಾಡು. 20 ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪಕ್ಷಿಗಳಲ್ಲಿ ಎರಡೆರಡೂ ಪ್ರತಿಯೊಂದು ಪ್ರಾಣಿಗಳಲ್ಲಿ ಎರಡೆರಡೂ ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಜಂತುಗಳಲ್ಲಿ ಎರಡೆರಡೂ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಿನ್ನೊಂದಿಗಿರಲಿ. 21 ಭೂಮಿಯ ಮೇಲೆ ದೊರೆಯುವ ಎಲ್ಲಾ ಬಗೆಯ ಆಹಾರವನ್ನು ನಿಮಗಾಗಿಯೂ ಮತ್ತು ಪ್ರಾಣಿಗಳಿಗಾಗಿಯೂ ನಾವೆಯಲ್ಲಿ ತುಂಬಿಸಿಕೊ” ಎಂದು ಹೇಳಿದನು.

22 ದೇವರು ಆಜ್ಞಾಪಿಸಿದಂತೆಯೇ ನೋಹನು ಮಾಡಿದನು.

ಆದಿಕಾಂಡ 7:24

24 ನೂರೈವತ್ತು ದಿನಗಳವರೆಗೆ ನೀರು ಭೂಮಿಯನ್ನು ಆವರಿಸಿಕೊಂಡಿತ್ತು.

ಆದಿಕಾಂಡ 8:14-19

14 ಎರಡನೆಯ ತಿಂಗಳ ಇಪ್ಪತ್ತೇಳನೆಯ ದಿನದೊಳಗೆ ನೆಲವೆಲ್ಲಾ ಸಂಪೂರ್ಣವಾಗಿ ಒಣಗಿಹೋಯಿತು.

15-16 ಆಮೇಲೆ ದೇವರು ನೋಹನಿಗೆ, “ನೀನು, ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ನಿನ್ನ ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬನ್ನಿ. 17 ನಿಮ್ಮೊಡನೆ ನಾವೆಯೊಳಗಿದ್ದ ಎಲ್ಲಾ ಜೀವಿಗಳು ಅಂದರೆ ಎಲ್ಲಾ ಪಕ್ಷಿಗಳು, ಪ್ರಾಣಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ ಹೊರಗೆ ಬರಲಿ. ಅವುಗಳ ಸಂತಾನವು ಹೆಚ್ಚೆಚ್ಚಾಗಲಿ; ಭೂಮಿಯ ಮೇಲೆಲ್ಲಾ ಅವು ತುಂಬಿಕೊಳ್ಳಲಿ” ಅಂದನು.

18 ಆದ್ದರಿಂದ ನೋಹನು ತನ್ನ ಹೆಂಡತಿ, ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬಂದನು. 19 ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಹರಿದಾಡುವ ಜೀವಿಗಳು ನಾವೆಯಿಂದ ಹೊರಬಂದವು.

ಕೀರ್ತನೆಗಳು 46

ರಚನೆಗಾರರು: ಕೋರಹೀಯರು.

46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
    ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
    ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
    ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
    ದೇವನಗರವನ್ನು ಸಂತೋಷಪಡಿಸುತ್ತದೆ.
ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
    ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
    ಭೂಮಿಯು ಕರಗಿಹೋಗುವುದು.
ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
    ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
    ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
    ನಾನು ಜನಾಂಗಗಳನ್ನು ಸೋಲಿಸುವೆನು!
    ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

ರೋಮ್ನಗರದವರಿಗೆ 1:16-17

16 ನಾನು ಸುವಾರ್ತೆಯ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನಂಬುವ ಪ್ರತಿಯೊಬ್ಬರನ್ನು ರಕ್ಷಿಸುವುದಕ್ಕಾಗಿ ಅಂದರೆ ಮೊದಲನೆಯದಾಗಿ, ಯೆಹೂದ್ಯರನ್ನು ಅನಂತರ ಯೆಹೂದ್ಯರಲ್ಲದವರನ್ನು ಸಹ ರಕ್ಷಿಸುವುದಕ್ಕಾಗಿ ದೇವರು ಸುವಾರ್ತೆ ಎಂಬ ಶಕ್ತಿಯನ್ನು ಉಪಯೋಗಿಸುತ್ತಾನೆ. 17 ಹೇಗೆಂದರೆ, ದೇವರಿಂದ ದೊರೆಯುವ ನೀತಿಯು ಅದರಲ್ಲಿ ತೋರಿಬರುತ್ತದೆ. ಆ ನೀತಿಯು ನಂಬಿಕೆಯ ಫಲವಾಗಿದ್ದು ನಂಬಿಕೆಯನ್ನು ಪ್ರಕಟಿಸುತ್ತದೆ. ಪವಿತ್ರ ಗ್ರಂಥವು ಹೇಳುವಂತೆ, “ನೀತಿವಂತನು ನಂಬಿಕೆಯಿಂದಲೇ ಜೀವಿಸುತ್ತಾನೆ.”(A)

ರೋಮ್ನಗರದವರಿಗೆ 3:22-28

22 ನಂಬಿಕೆಯ ಮೂಲಕವಾಗಿ ಅಂದರೆ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಎಲ್ಲಾ ಜನರನ್ನು ದೇವರು ನೀತಿವಂತರನ್ನಾಗಿ ಮಾಡುತ್ತಾನೆ. ಆತನಿಗೆ ಎಲ್ಲಾ ಜನರು ಒಂದೇ. 23 ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದವರಾಗಿದ್ದಾರೆ. 24 ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವರವಾದ ಕೃಪೆಯಿಂದಲೇ. ದೇವರು ಯೇಸು ಕ್ರಿಸ್ತನ ಮೂಲಕವಾಗಿ ಜನರನ್ನು ಪಾಪದಿಂದ ಬಿಡುಗಡೆ ಮಾಡಿ, ನೀತಿವಂತರನ್ನಾಗಿ ಮಾಡುತ್ತಾನೆ. 25 ದೇವರು ನಂಬಿಕೆಯ ಮೂಲಕ ಜನರ ಪಾಪಗಳನ್ನು ಕ್ಷಮಿಸುವ ಮಾರ್ಗವನ್ನು ಮಾಡಿದ್ದಾನೆ. ಆ ಮಾರ್ಗವೇ ಯೇಸು. ದೇವರು ಯೇಸುವಿನ ರಕ್ತದ ಮೂಲಕ ಪಾಪವನ್ನು ಕ್ಷಮಿಸುತ್ತಾನೆ. ದೇವರು ಮಾಡುವಂಥದ್ದು ಯಾವಾಗಲೂ ಸರಿಯಾಗಿರುತ್ತದೆ ಮತ್ತು ನ್ಯಾಯಬದ್ಧವಾಗಿರುತ್ತದೆ ಎಂಬುದನ್ನು ಇದು ತೋರಿಸುತ್ತದೆ. ದೇವರು ಹಿಂದಿನ ಕಾಲದಲ್ಲಿ ತಾಳ್ಮೆಯಿಂದಿದ್ದು ಜನರನ್ನು ಅವರ ಪಾಪಗಳಿಗಾಗಿ ದಂಡಿಸದೆ ಹೋದಾಗಲೂ ದೇವರು ನೀತಿವಂತನಾಗಿದ್ದನು. 26 ಹೀಗೆ ದೇವರು ತಾನೇ ನೀತಿವಂತನೆಂಬುದನ್ನು ಮತ್ತು ಯೇಸುವಿನಲ್ಲಿ ನಂಬಿಕೆಯಿಡುವ ಯಾವನನ್ನೇ ಆಗಲಿ ನೀತಿವಂತನನ್ನಾಗಿ ಮಾಡುತ್ತೇನೆಂಬದನ್ನು ನಿರೂಪಿಸಿದ್ದಾನೆ.

27 ಹೀಗಿರಲು, ನಮ್ಮ ಬಗ್ಗೆ ಹೊಗಳಿಕೊಳ್ಳಲು ನಮಗೆ ಏನಾದರೂ ಕಾರಣಗಳಿವೆಯೋ? ಇಲ್ಲ! ಏಕೆ? ಎಲ್ಲಾ ಹೊಗಳಿಕೆಯನ್ನು ನಿಲ್ಲಿಸುವಂಥದ್ದು ನಂಬಿಕೆಯ ಮಾರ್ಗವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸುವ ಮಾರ್ಗವಲ್ಲ. 28 ಏಕೆಂದರೆ ಒಬ್ಬನು ನೀತಿವಂತನಾಗುವುದು ನಂಬಿಕೆಯ ಮೂಲಕವೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಲು ಅವನು ಮಾಡಿದ ಕಾರ್ಯಗಳಿಂದಲ್ಲ. ನಾವು ನಂಬುವುದೂ ಇದನ್ನೇ.

ರೋಮ್ನಗರದವರಿಗೆ 3:29-31

29 ದೇವರು ಕೇವಲ ಯೆಹೂದ್ಯರ ದೇವರಲ್ಲ. ಆತನು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾನೆ. 30 ದೇವರು ಒಬ್ಬನೇ. ಆತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. 31 ಹೀಗಿರಲು, ನಂಬಿಕೆಯ ಮಾರ್ಗವನ್ನು ಅನುಸರಿಸುವುದರ ಮೂಲಕ ನಾವು ಧರ್ಮಶಾಸ್ತ್ರವನ್ನು ಅಲ್ಲಗಳೆಯುತ್ತೇವೋ? ಇಲ್ಲ! ನಾವು ಧರ್ಮಶಾಸ್ತ್ರವನ್ನು ಸಮರ್ಥಿಸುತ್ತೇವೆ.

ಮತ್ತಾಯ 7:21-29

21 “‘ನಾನು ಪ್ರಭುವಿನವನು’ ಎಂದು ಹೇಳಿದ ಮಾತ್ರಕ್ಕೆ ಮನುಷ್ಯನು ಪರಲೋಕರಾಜ್ಯಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ. ಪರಲೋಕದಲ್ಲಿರುವ ನನ್ನ ತಂದೆಯ ಇಷ್ಟದಂತೆ ಮಾಡುವವರೇ ಪರಲೋಕರಾಜ್ಯಕ್ಕೆ ಪ್ರವೇಶಿಸುವರು. 22 ಕೊನೆಯ ದಿನಗಳಲ್ಲಿ ಅನೇಕರು ನನಗೆ, ‘ನೀನೇ ನಮ್ಮ ಪ್ರಭು! ನಿನ್ನ ವಿಷಯವಾಗಿ ನಾವು ಬೋಧಿಸಿದೆವು. ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆವು’ ಎಂದು ಹೇಳುವರು. 23 ಆದರೆ ನಾನು ಅವರಿಗೆ, ‘ಅಧರ್ಮಿಗಳೇ, ನನ್ನಿಂದ ತೊಲಗಿರಿ. ನೀವು ಯಾರೋ ನನಗೆ ತಿಳಿಯದು’ ಎಂದು ಸ್ಪಷ್ಟವಾಗಿ ಹೇಳಿಬಿಡುವೆನು.

ಬುದ್ಧಿವಂತ ಮತ್ತು ಬುದ್ಧಿಹೀನ

(ಲೂಕ 6:47-49)

24 “ನನ್ನ ಈ ಮಾತುಗಳನ್ನು ಕೇಳಿ ಅವುಗಳಿಗೆ ವಿಧೇಯನಾಗಿರುವ ಪ್ರತಿಯೊಬ್ಬನೂ ತನ್ನ ಮನೆಯನ್ನು ಬಂಡೆಯ ಮೇಲೆ ಕಟ್ಟಿದ ಬುದ್ಧಿವಂತನಿಗೆ ಹೋಲಿಕೆಯಾಗಿದ್ದಾನೆ. 25 ಬಿರುಸಾದ ಮಳೆಯು ಸುರಿದು ನೀರು ಮೇಲಕ್ಕೆ ಏರುತ್ತದೆ. ಗಾಳಿ ಬೀಸಿ ಆ ಮನೆಗೆ ಬಡಿಯುತ್ತದೆ. ಆದರೆ ಆ ಮನೆಯನ್ನು ಬಂಡೆಯ ಮೇಲೆ ಕಟ್ಟಿದ್ದರಿಂದ ಅದು ಬೀಳಲಿಲ್ಲ.

26 “ಆದರೆ ನನ್ನ ಮಾತುಗಳನ್ನು ಕೇಳಿಯೂ ಅವುಗಳಿಗೆ ವಿಧೇಯನಾಗದವನು ಬುದ್ಧಿಹೀನನಾಗಿದ್ದಾನೆ. ಆ ಬುದ್ಧಿಹೀನನು ಮರಳಿನ ಮೇಲೆ ತನ್ನ ಮನೆಯನ್ನು ಕಟ್ಟಿದನು. 27 ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆಗ ಆ ಮನೆಯು ಕುಸಿದು ಬಿತ್ತು.”

28 ಯೇಸು ಉಪದೇಶಿಸಿದ ಈ ಸಂಗತಿಗಳನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು. 29 ಏಕೆಂದರೆ, ಆತನು ಧರ್ಮೋಪದೇಶಕರಂತೆ ಉಪದೇಶಿಸದೆ ಅಧಿಕಾರವಿದ್ದವನಂತೆ ಉಪದೇಶಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International