Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 62

ರಚನೆಗಾರ: ದಾವೀದ.

62 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.
    ಆತನಿಂದಲೇ ನನಗೆ ರಕ್ಷಣೆಯಾಗುವುದು.
ಆತನು ನನಗೆ ಬಂಡೆಯೂ ರಕ್ಷಣೆಯೂ ಕೋಟೆಯೂ ಆಗಿದ್ದಾನೆ.
    ನಾನೆಂದಿಗೂ ಕದಲೆನು.

ಇನ್ನೆಷ್ಟರವರೆಗೆ ನೀವು ನನ್ನ ಮೇಲೆ ಆಕ್ರಮಣ ಮಾಡುವಿರಿ?
ನಾನು ಬಾಗಿದ ಗೋಡೆಯಂತೆಯೂ
    ಬೀಳಲಿರುವ ಪ್ರಾಕಾರದಂತೆಯೂ ಇದ್ದೇನೆ.
ನನ್ನನ್ನು ಉನ್ನತಸ್ಥಾನದಿಂದ ಕೆಳಗಿಳಿಸಬೇಕೆಂದು
    ಅವರು ಕುತಂತ್ರ ಮಾಡುತ್ತಿದ್ದಾರೆ.
ನನ್ನ ಕುರಿತು ಸುಳ್ಳಾಡುವುದು ಅವರಿಗೆ ಸಂತೋಷ.
    ಬಾಯಿಂದ ಆಶೀರ್ವದಿಸಿ, ಹೃದಯದಲ್ಲಿ ಶಪಿಸುವರು.

ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
    ನನ್ನ ನಿರೀಕ್ಷೆ ದೇವರಲ್ಲಿಯೇ.
ಆತನೇ ನನಗೆ ಬಂಡೆಯೂ
    ರಕ್ಷಣೆಯೂ ಆಶ್ರಯದುರ್ಗವೂ ಆಗಿದ್ದಾನೆ.
ನನ್ನ ರಕ್ಷಣೆಯೂ ಮಾನವೂ ದೇವರೇ.
    ಆತನೇ ನನಗೆ ಭದ್ರವಾದ ದುರ್ಗವೂ ಆಶ್ರಯಸ್ಥಾನವೂ ಆಗಿದ್ದಾನೆ.
ಜನರೇ, ಯಾವಾಗಲೂ ದೇವರನ್ನೇ ನಂಬಿಕೊಂಡಿರಿ.
    ನಿಮ್ಮ ಕಷ್ಟಗಳನ್ನೆಲ್ಲಾ ಆತನಿಗೆ ಹೇಳಿಕೊಳ್ಳಿರಿ.
    ಆತನೇ ನಮ್ಮ ಆಶ್ರಯಸ್ಥಾನ.

ಸಾಮಾನ್ಯ ಜನರು ಕೇವಲ ಉಸಿರಷ್ಟೇ.
    ಶ್ರೇಷ್ಠರು ಕೇವಲ ಕ್ಷಣಕಾಲವಷ್ಟೇ.
ತೂಗಿನೋಡಿದರೆ ಅವರು ಕೇವಲ ಶೂನ್ಯ;
    ಉಸಿರಿಗಿಂತಲೂ ಹಗುರ.
10 ಅನ್ಯಾಯದಿಂದ ಸಂಪಾದಿಸಿದ್ದರಲ್ಲಿ ನಂಬಿಕೆ ಇಡಬೇಡಿ.
    ಕದ್ದವಸ್ತುಗಳಲ್ಲಿ ಜಂಬಪಡಬೇಡಿ.
ಐಶ್ವರ್ಯವು ಅಧಿಕವಾಗುತ್ತಿದ್ದರೂ
    ಅದರಲ್ಲಿ ಮನಸ್ಸಿಡಬೇಡಿ.
11 “ಶಕ್ತಿಯೂ ದೇವರಿಂದಲೇ”
    ಎಂದು ದೇವರು ನುಡಿದಿದ್ದಾನೆ.

12 ನನ್ನ ಒಡೆಯನೇ, ನೀನು ಪ್ರೀತಿಸ್ವರೂಪನಾಗಿರುವೆ.
    ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವವನು ನೀನೇ.

ಹೋಶೇಯ 12:2-14

ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿಗೆ ವಿರುದ್ಧವಾಗಿ ನಾನು ವಾದ ಮಾಡುತ್ತೇನೆ. ತಾನು ಮಾಡಿದ ಸಂಗತಿಗಳಿಗಾಗಿ ಯಾಕೋಬನು ಶಿಕ್ಷೆ ಅನುಭವಿಸಬೇಕು. ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಯಾಕೋಬನು ತನ್ನ ಅಣ್ಣನಿಗೆ ಮೋಸ ಮಾಡಲು ಪ್ರಾರಂಭಮಾಡಿದ್ದನು. ಯಾಕೋಬನು ಬಲಶಾಲಿಯಾದ ಯೌವನಸ್ಥನು. ಆಗ ಅವನು ದೇವರೊಂದಿಗೆ ಹೋರಾಡಿದನು. ಯಾಕೋಬನು ದೇವದೂತನೊಡನೆ ಹೋರಾಡಿ ಗೆದ್ದನು. ಅವನು ಕನಿಕರಕ್ಕಾಗಿ ಮೊರೆಯಿಟ್ಟನು. ಇದು ಬೇತೇಲ್ ಎಂಬಲ್ಲಿ ನಡೆಯಿತು. ಆ ಸ್ಥಳದಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು. ಹೌದು ಯೆಹೋವನು ಸೈನ್ಯಗಳ ದೇವರಾಗಿದ್ದಾನೆ. ಆತನ ಹೆಸರು ಯೆಹೋವನು. ಆದ್ದರಿಂದ ನಿನ್ನ ಯೆಹೋವನ ಬಳಿಗೆ ಹಿಂದಿರುಗಿ ಬಾ. ಆತನಿಗೆ ವಿಧೇಯನಾಗಿರು. ಸರಿಯಾಗಿರುವದನ್ನೇ ಮಾಡು. ಯಾವಾಗಲೂ ನಿನ್ನ ದೇವರ ಮೇಲೆ ಭರವಸವಿಡು.

“ಯಾಕೋಬನು ಒಬ್ಬ ವ್ಯಾಪಾರಿ.[a] ಅವನು ತನ್ನ ಸ್ನೇಹಿತನಿಗೇ ಮೋಸಮಾಡುತ್ತಾನೆ. ಅವನ ತ್ರಾಸು ಮೋಸದ್ದು, ಎಫ್ರಾಯೀಮು, ‘ನಾನು ಐಶ್ವರ್ಯವಂತನು. ನನ್ನಲ್ಲಿ ನಿಜವಾದ ಐಶ್ವರ್ಯವಿದೆ. ನನ್ನ ಅಪರಾಧಗಳನ್ನು ಯಾರೂ ಕಂಡುಹಿಡಿಯಲಾರರು. ನನ್ನ ದುಷ್ಟತ್ವದ ಬಗ್ಗೆ ಯಾರಿಗೂ ತಿಳಿಯದು’ ಎಂದು ಅನ್ನುತ್ತಾನೆ.

“ಆದರೆ ನೀನು ಈಜಿಪ್ಟ್ ದೇಶದಲ್ಲಿರುವಾಗಲೇ ನಾನು ನಿನ್ನ ದೇವರಾಗಿದ್ದೇನೆ. ನೀನು ಗುಡಾರಗಳಲ್ಲಿ ವಾಸಿಸುವಂತೆ ಮಾಡುವೆನು. 10 ನಾನು ಪ್ರವಾದಿಗಳೊಂದಿಗೆ ಮಾತನಾಡಿದೆನು. ಅವರಿಗೆ ಅನೇಕ ದರ್ಶನಗಳನ್ನು ಕೊಟ್ಟೆನು. ನನ್ನ ಪಾಠಗಳನ್ನು ನಿಮಗೆ ಕಲಿಸುವಂತೆ ಅನೇಕ ಮಾರ್ಗಗಳನ್ನು ಪ್ರವಾದಿಗಳಿಗೆ ತೋರಿಸಿಕೊಟ್ಟೆನು. 11 ಆದರೆ ಗಿಲ್ಯಾದಿನ ಜನರು ಪಾಪ ಮಾಡಿದ್ದಾರೆ. ಅವರ ಬಳಿಯಲ್ಲಿ ಅನೇಕ ಭಯಂಕರವಾದ ವಿಗ್ರಹಗಳಿವೆ. ಗಿಲ್ಗಾಲಿನಲ್ಲಿ ಬಸವನ ವಿಗ್ರಹಗಳಿಗೆ ಜನರು ಯಜ್ಞವನ್ನರ್ಪಿಸುತ್ತಾರೆ. ಅವರಲ್ಲಿ ಅನೇಕ ಯಜ್ಞವೇದಿಕೆಗಳಿವೆ. ಹೇಗೆ ಉಳಿಮೆ ಮಾಡಿದ ಹೊಲದಲ್ಲಿ ಮಣ್ಣಿನ ಸಾಲುಗಳಿರುತ್ತದೋ ಅದೇ ರೀತಿಯಲ್ಲಿ ಅವರ ಬಳಿಯಲ್ಲಿ ವಿಗ್ರಹಗಳ ಸಾಲಿದೆ.

12 “ಯಾಕೋಬನು ಅರಾಮ್ ದೇಶಕ್ಕೆ ಓಡಿಹೋದನು. ಅಲ್ಲಿ ಇಸ್ರೇಲನು ಒಬ್ಬ ಹೆಂಡತಿಗಾಗಿ ಸೇವೆ ಮಾಡಿದನು. ಇನ್ನೊಂದು ಹೆಂಡತಿಯನ್ನು ಮಾಡಿಕೊಳ್ಳಲಿಕ್ಕೆ ಕುರಿಗಳನ್ನು ಕಾಯ್ದನು. 13 ಆದರೆ ದೇವರು ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದಕ್ಕಾಗಿ ಒಬ್ಬ ಪ್ರವಾದಿಯನ್ನು ಉಪಯೋಗಿಸಿದನು. ಇಸ್ರೇಲರನ್ನು ಪ್ರವಾದಿಯ ಮೂಲಕ ಬಿಡಿಸಿದನು. 14 ಆದರೆ ಎಫ್ರಾಯೀಮನು ಯೆಹೋವನನ್ನು ಅತಿಯಾಗಿ ಕೋಪಿಸಿಕೊಳ್ಳುವಂತೆ ಮಾಡಿದನು. ಎಫ್ರಾಯೀಮನು ಅನೇಕ ಮಂದಿಯನ್ನು ಕೊಲೆ ಮಾಡಿದನು. ಅವನ ಅಪರಾಧಗಳಿಗಾಗಿ ಅವನು ಶಿಕ್ಷಿಸಲ್ಪಡುವನು. ಅವನ ದೇವರಾದ ಯೆಹೋವನು ಅವನು ಮಾಡಿದ ಅಪರಾಧಕ್ಕೆ ತಕ್ಕ ದಂಡನೆಯನ್ನು ವಿಧಿಸಿ ಅವಮಾನ ಹೊರುವಂತೆ ಮಾಡುವನು.”

ಮತ್ತಾಯ 19:16-22

ಧನಿಕ ಯುವಕನ ಸಮಸ್ಯೆ

(ಮಾರ್ಕ 10:17-31; ಲೂಕ 18:18-30)

16 ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.

17 ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು.

18 ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು.

ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. 19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು”(A) ಎಂದು ಉತ್ತರಕೊಟ್ಟನು.

20 ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು.

21 ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.

22 ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟುಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International