Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 101

ರಚನೆಗಾರ: ದಾವೀದ.

101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
    ಯೆಹೋವನೇ, ನಿನಗೆ ಗಾಯನ ಮಾಡುವೆನು.
ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
    ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
    ನೀನು ನನ್ನ ಬಳಿಗೆ ಬರುವುದು ಯಾವಾಗ?
ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
    ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
    ನಾನು ಅವರಂತೆ ಮಾಡುವುದಿಲ್ಲ!
ನಾನು ನಿನಗೆ ಯಥಾರ್ಥನಾಗಿರುವೆನು;
    ದುಷ್ಕೃತ್ಯಗಳನ್ನು ಮಾಡುವುದಿಲ್ಲ.
ನೆರೆಯವನ ಕುರಿತು ಗುಟ್ಟಾಗಿ
    ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
    ನಾನು ಅವರಿಗೆ ಅವಕಾಶ ಕೊಡುವುದಿಲ್ಲ.

ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
    ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
    ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
    ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
    ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.

2 ರಾಜರುಗಳು 18:19-25

19 ಸೇನಾಧಿಪತಿಗಳಲ್ಲಿ ಒಬ್ಬನಾದ ರಬ್ಷಾಕೆಯು ಅವರಿಗೆ, “ಅಶ್ಶೂರದ ಮಹಾರಾಜನು ಹಿಜ್ಕೀಯನಿಗೆ ತಿಳಿಸುವುದೇನೆಂದರೆ:

‘ನಿನ್ನ ನಂಬಿಕೆಗೆ ಆಧಾರವು ಎಲ್ಲಿದೆ? 20 “ಯುದ್ಧದಲ್ಲಿ ನನಗೆ ಸಹಾಯಮಾಡಲು ನನ್ನಲ್ಲಿ ಬೇಕಾದಷ್ಟು ವಿವೇಕವೂ ಬಲವೂ ಇದೆ” ಎಂದು ನೀನು ಹೇಳುವೆ. ಆದರೆ ನೀನು ಯಾರನ್ನು ನಂಬಿಕೊಂಡು ನನಗೆ ವಿರುದ್ಧವಾಗಿ ದಂಗೆ ಎದ್ದಿರುವೆ? 21 ನೀನು ಮುರಿದುಬಿದ್ದಿರುವ ದಂಟನ್ನು ಊರುಗೋಲೆಂದು ನಂಬಿ ಭರವಸೆಯಿಟ್ಟಿರುವೆ! ಈಜಿಪ್ಟ್ ಊರುಗೋಲಾಗಿದೆ. ಒಬ್ಬ ಮನುಷ್ಯನು ಈ ಊರುಗೋಲಿನ ಮೇಲೆ ಭರವಸೆಯಿಟ್ಟರೆ ಅದು ಮುರಿದು ಬೀಳುತ್ತದೆ ಮತ್ತು ಅವನ ಕೈಯನ್ನೇ ಚುಚ್ಚಿ ಅವನಿಗೆ ನೋವನ್ನು ಉಂಟುಮಾಡುತ್ತದೆ! ಈಜಿಪ್ಟಿನ ರಾಜನು ತನ್ನನ್ನು ನಂಬಿದ ಜನರೆಲ್ಲರಿಗೂ ಇದೇ ರೀತಿಯಲ್ಲಿದ್ದಾನೆ. 22 ಬಹುಶಃ ನೀನು, “ನಾವು ನಮ್ಮ ದೇವರಾದ ಯೆಹೋವನಲ್ಲಿ ಭರವಸೆಯಿಟ್ಟಿದ್ದೇವೆ” ಎಂದು ಹೇಳುವೆ. ಆದರೆ ಹಿಜ್ಕೀಯನು ಯೆಹೋವನ ಉನ್ನತಸ್ಥಳಗಳನ್ನು ಮತ್ತು ಯಜ್ಞವೇದಿಕೆಯನ್ನು ನಾಶಪಡಿಸಿ ಯೆಹೂದಕ್ಕೆ ಮತ್ತು ಜೆರುಸಲೇಮಿಗೆ, “ನೀವು ಜೆರುಸಲೇಮಿನಲ್ಲಿರುವ ಯಜ್ಞವೇದಿಕೆಯ ಸನ್ನಿಧಿಯಲ್ಲಿ ಮಾತ್ರ ಆರಾಧಿಸಬೇಕು” ಎಂದು ಹೇಳಿದನೆಂಬುದು ನನಗೆ ತಿಳಿದಿದೆ.

23 ‘ಈಗ ನಮ್ಮ ಒಡೆಯನಾದ ಅಶ್ಶೂರದ ರಾಜನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊ. ನಿನ್ನಲ್ಲಿ ಸವಾರಿಮಾಡಬಲ್ಲ ಸವಾರರು ಇದ್ದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆಂದು ನಾನು ಪ್ರಮಾಣ ಮಾಡುತ್ತೇನೆ. 24 ನನ್ನ ಒಡೆಯನ ಅಧಿಕಾರಿಗಳಲ್ಲಿ ಕನಿಷ್ಠನಾದ ಒಬ್ಬ ಅಧಿಕಾರಿಯನ್ನು ನೀನು ಸೋಲಿಸಲಾಗುವುದಿಲ್ಲ! ನಿನಗೆ ರಥಗಳನ್ನು ಮತ್ತು ಕುದುರೆಯ ಸವಾರರನ್ನು ಕೊಡಲು ನೀನು ಈಜಿಪ್ಟನ್ನು ಅವಲಂಬಿಸಿರುವೆ.

25 ‘ನಾನು ಯೆಹೋವನ ಚಿತ್ತವಿಲ್ಲದೆ ಜೆರುಸಲೇಮನ್ನು ನಾಶಗೊಳಿಸಲು ಬಂದೆನೆಂದು ನೆನಸುತ್ತೀಯೋ? “ಈ ದೇಶದ ವಿರುದ್ಧವಾಗಿ ನುಗ್ಗಿ ನಾಶಗೊಳಿಸು” ಎಂದು ಯೆಹೋವನೇ ನನಗೆ ಆಜ್ಞಾಪಿಸಿದನು”’ ಎಂದು ಹೇಳಿದನು.

2 ರಾಜರುಗಳು 19:1-7

ಹಿಜ್ಕೀಯನು ತನ್ನ ಅಧಿಕಾರಿಗಳನ್ನು ಪ್ರವಾದಿಯಾದ ಯೆಶಾಯನ ಬಳಿಗೆ ಕಳುಹಿಸಿದನು

19 ರಾಜನಾದ ಹಿಜ್ಕೀಯನು ಅವುಗಳನ್ನೆಲ್ಲ ಕೇಳಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯದೊಳಕ್ಕೆ ಹೋದನು.

ಹಿಜ್ಕೀಯನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ ಮತ್ತು ಹಿರಿಯರಾದ ಯಾಜಕರನ್ನು ಆಮೋಚನ ಮಗನೂ ಪ್ರವಾದಿಯೂ ಆಗಿದ್ದ ಯೆಶಾಯನ ಬಳಿಗೆ ಕಳುಹಿಸಿದನು. ಅವರು ತಮ್ಮ ದುಃಖವನ್ನೂ ಕಳವಳವನ್ನೂ ತೋರ್ಪಡಿಸುವಂತೆ ಗೋಣಿತಟ್ಟನ್ನು ಧರಿಸಿದ್ದರು. ಅವರು ಯೆಶಾಯನಿಗೆ, “ಹಿಜ್ಕೀಯನು ಹೇಳುವುದೇನೆಂದರೆ, ಇಂದು ಮಹಾಕಷ್ಟದ ದಿನವಾಗಿದೆ. ನಾವು ಶಿಕ್ಷೆಯನ್ನೂ ನಿಂದೆಯನ್ನೂ ಅನುಭವಿಸಬೇಕಾಯಿತು. ಇದು ಪ್ರಸವವೇದನೆಯ ದಿನದಂತಿದೆ. ಆದರೆ ಹೆರಲು ಶಕ್ತಿಯೇ ಇಲ್ಲವಾಗಿದೆ. ಸೇನಾಧಿಪತಿಯ ಒಡೆಯನಾದ ಅಶ್ಶೂರದ ರಾಜನು, ಜೀವಸ್ವರೂಪನಾದ ದೇವರ ಬಗ್ಗೆ ಕೆಟ್ಟದ್ದನ್ನು ನುಡಿಯಲು ಅವನನ್ನು ಕಳುಹಿಸಿದನು. ನಿಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲ ಕೇಳಿರುತ್ತಾನೆ. ಯೆಹೋವನು ಶತ್ರುಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಬಹುದು! ಆದ್ದರಿಂದ ಇನ್ನೂ ಜೀವಸಹಿತ ಉಳಿದಿರುವ ಜನರಿಗಾಗಿ ಪ್ರಾರ್ಥಿಸಿ” ಎಂದು ಹೇಳಿದರು.

ರಾಜನಾದ ಹಿಜ್ಕೀಯನ ಅಧಿಕಾರಿಗಳು ಯೆಶಾಯನ ಬಳಿಗೆ ಹೋದರು. ಯೆಶಾಯನು ಅವರಿಗೆ, “ನಿಮ್ಮ ಒಡೆಯನಾದ ಹಿಜ್ಕೀಯನಿಗೆ ಈ ಸಂದೇಶವನ್ನು ತಿಳಿಸಿ: ‘ಯೆಹೋವನು ಹೀಗೆನ್ನುತ್ತಾನೆ: ಅಶ್ಶೂರದ ರಾಜನ ಅಧಿಕಾರಿಗಳು ನನ್ನನ್ನು ಅಪಹಾಸ್ಯಮಾಡಲೆಂದು ಹೇಳಿದ ಸಂಗತಿಗಳಿಂದ ನೀವು ಹೆದರಬೇಡಿ. ನಾನು ಅವನಲ್ಲಿ ಒಂದು ಆತ್ಮವನ್ನಿರಿಸುತ್ತೇನೆ. ಅವನು ಒಂದು ಸುದ್ದಿಯನ್ನು ಕೇಳುತ್ತಾನೆ. ನಂತರ ಅವನು ತನ್ನ ಸ್ವಂತ ದೇಶಕ್ಕೆ ಹಿಂದಿರುಗಿ ಓಡಿಹೋಗುತ್ತಾನೆ. ನಾನು ಅವನನ್ನು ಅವನ ಸ್ವಂತ ದೇಶದಲ್ಲಿ ಖಡ್ಗದಿಂದ ಕೊಲ್ಲಲ್ಪಡುವಂತೆ ಮಾಡುತ್ತೇನೆ’” ಎಂದು ಹೇಳಿದನು.

ಲೂಕ 18:18-30

ಐಶ್ವರ್ಯವಂತನೊಬ್ಬನು ಯೇಸುವಿಗೆ ಕೇಳಿದ ಪ್ರಶ್ನೆ

(ಮತ್ತಾಯ 19:16-30; ಮಾರ್ಕ 10:17-31)

18 ಒಬ್ಬ ಯೆಹೂದ್ಯನಾಯಕನು ಯೇಸುವಿಗೆ, “ಒಳ್ಳೆಯ ಉಪದೇಶಕನೇ, ನಿತ್ಯಜೀವ ಹೊಂದಲು ನಾನೇನು ಮಾಡಬೇಕು?” ಎಂದು ಕೇಳಿದನು.

19 ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ನೀನು ಏಕೆ ಕರೆಯುತ್ತೀ? ದೇವರೊಬ್ಬನೇ ಒಳ್ಳೆಯವನು. 20 ದೇವರ ಈ ಆಜ್ಞೆಗಳು ನಿನಗೆ ಗೊತ್ತೇ ಇವೆ: ‘ನೀನು ವ್ಯಭಿಚಾರ ಮಾಡಬಾರದು, ಯಾರನ್ನೂ ಕೊಲೆಮಾಡಬಾರದು, ಯಾವುದನ್ನೂ ಕದಿಯಬಾರದು, ಬೇರೆ ಜನರ ಬಗ್ಗೆ ನೀನು ಸುಳ್ಳನ್ನು ಹೇಳಬಾರದು ಮತ್ತು ನೀನು ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’”(A) ಎಂದನು.

21 ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಆ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ!” ಎಂದು ಹೇಳಿದನು.

22 ಆಗ ಯೇಸು ಅವನಿಗೆ, “ನೀನು ಮಾಡಬೇಕಾದ ಇನ್ನೊಂದು ಕಾರ್ಯವಿದೆ. ನಿನ್ನ ಆಸ್ತಿಯನ್ನೆಲ್ಲಾ ಮಾರಿ ಅದರಿಂದ ಬಂದ ಹಣವನ್ನು ಬಡ ಜನರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ದೊರೆಯುವುದು. ನೀನಾದರೋ ಬಂದು ನನ್ನನ್ನು ಹಿಂಬಾಲಿಸು!” ಅಂದನು. 23 ಯೇಸುವಿನ ಈ ಮಾತುಗಳನ್ನು ಕೇಳಿದಾಗ ಅವನಿಗೆ ಬಹಳ ದುಃಖವಾಯಿತು. ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.

24 ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25 ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.

ಯಾರಿಗೆ ರಕ್ಷಣೆಯಾಗುವುದು?

26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.

27 ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು.

28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.

29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30 ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International