Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 1

ಮೊದಲನೆ ಭಾಗ

(ಕೀರ್ತನೆಗಳು 1–41)

ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
    ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
    ಅವನೇ ಭಾಗ್ಯವಂತನು.
ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
    ಅದನ್ನೇ ಹಗಲಿರುಳು ಧ್ಯಾನಿಸುವನು.
ಅವನು ನೀರಿನ ಕಾಲುವೆಗಳ ಬಳಿಯಲ್ಲಿ
    ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
    ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.

ದುಷ್ಟರಾದರೋ ಹಾಗಲ್ಲ!
    ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
    ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
    ದುಷ್ಟರನ್ನಾದರೋ ನಾಶಪಡಿಸುವನು.

ಧರ್ಮೋಪದೇಶಕಾಂಡ 7:12-26

12 “ನೀವು ಈ ಕಟ್ಟಳೆಗಳಿಗೆ ಕಿವಿಗೊಡುವುದಾದರೆ ಮತ್ತು ಅವುಗಳಿಗೆ ಎಚ್ಚರಿಕೆಯಿಂದ ವಿಧೇಯರಾದರೆ, ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರೊಡನೆ ಮಾಡಿಕೊಂಡ ಪ್ರೀತಿಯ ಒಡಂಬಡಿಕೆಯನ್ನು ನೆರವೇರಿಸುವನು; 13 ಮತ್ತು ಆತನು ಆಶೀರ್ವದಿಸುವನು. ನಿಮ್ಮ ಜನಾಂಗವು ವೃದ್ಧಿಯಾಗುವಂತೆ ಮಾಡುವನು. ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಶೀರ್ವದಿಸುವನು. ನಿಮ್ಮ ಹೊಲಗಳಲ್ಲಿ ಸಮೃದ್ಧಿಯಾದ ಬೆಳೆಯು ಉಂಟಾಗುವಂತೆ ಆಶೀರ್ವದಿಸುವನು. ಆತನು ನಿಮಗೆ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಕೊಡುವನು. ನಿಮ್ಮ ದನಕುರಿಗಳು ಮರಿಗಳನ್ನು ಈಯುವಂತೆ ಆಶೀರ್ವದಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದಲ್ಲಿ ನೀವು ನೆಲೆಸಿರುವಾಗ ನಿಮಗೆ ಈ ಆಶೀರ್ವಾದಗಳೆಲ್ಲಾ ಪ್ರಾಪ್ತವಾಗುವವು.

14 “ಎಲ್ಲಾ ಜನರಿಗಿಂತ ನೀವು ಹೆಚ್ಚಾಗಿ ಆಶೀರ್ವದಿಸಲ್ಪಡುವಿರಿ. ಪ್ರತಿಯೊಂದು ಕುಟುಂಬದಲ್ಲಿ ಹೆಚ್ಚು ಮಕ್ಕಳಿರುವರು. ನಿಮ್ಮ ಹಸುಗಳು ಮರಿಗಳನ್ನು ಈಯುವವು. 15 ನಿಮ್ಮಿಂದ ಎಲ್ಲಾ ತರದ ಕಾಯಿಲೆಗಳನ್ನು ಯೆಹೋವನು ತೆಗೆದುಹಾಕುವನು. ಈಜಿಪ್ಟಿನಲ್ಲಿ ನಿಮ್ಮನ್ನು ಬಾಧಿಸುತ್ತಿದ್ದ ಭಯಂಕರ ಕಾಯಿಲೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಆ ಕಾಯಿಲೆಗಳು ನಿಮ್ಮ ವೈರಿಗಳಿಗೆ ಉಂಟಾಗುವವು. 16 ಆ ದೇಶದಲ್ಲಿ ನೀವು ಯೆಹೋವನ ಸಹಾಯದಿಂದ ಸೋಲಿಸುವ ಜನರನ್ನೆಲ್ಲಾ ಕೊಂದುಬಿಡಬೇಕು. ಅವರಿಗೆ ಕನಿಕರ ತೋರಬಾರದು. ಅವರ ದೇವರುಗಳನ್ನು ಪೂಜಿಸಕೂಡದು! ಯಾಕೆಂದರೆ ಅವು ನಿಮಗೆ ಉರುಲಾಗಿ ನಿಮ್ಮ ಜೀವಿತವನ್ನು ಹಾಳುಮಾಡುತ್ತವೆ.

ತನ್ನ ಜನರಿಗೆ ಸಹಾಯ ಮಾಡುವುದಾಗಿ ಯೆಹೋವನ ವಾಗ್ದಾನ

17 “ನಿಮ್ಮ ಮನಸ್ಸಿನಲ್ಲಿ, ‘ಈ ಜನಾಂಗಗಳು ನಮ್ಮ ಜನಾಂಗಗಳಿಗಿಂತ ದೊಡ್ಡದಾಗಿವೆ. ಇವರನ್ನು ಹೀಗೆ ಹೊರಡಿಸಲು ಸಾಧ್ಯವೇ ಎಂದು ಯಾಕೆ ಅಂದುಕೊಳ್ಳುತ್ತೀರಿ.’ 18 ನೀವು ಅವರಿಗೆ ಭಯಪಡಬಾರದು. ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಈಜಿಪ್ಟಿನ ಎಲ್ಲಾ ಜನರಿಗೂ ಮಾಡಿದ್ದನ್ನು ನೆನಪು ಮಾಡಿಕೊಳ್ಳಿರಿ. 19 ಆತನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನಡೆಸಿದ್ದನ್ನು ನೀವು ನೋಡಿದಿರಿ. ಆತನು ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬರಲು ತನ್ನ ಮಹಾಶಕ್ತಿಯನ್ನೂ ಬಲವನ್ನೂ ಬಳಸಿದ್ದನ್ನು ನೀವು ನೋಡಿದಿರಿ. ನೀವು ಭಯಪಡುವ ಎಲ್ಲಾ ಜನರ ಮೇಲೆ ದೇವರಾದ ಯೆಹೋವನು ಅದೇ ಶಕ್ತಿಯನ್ನು ಬಳಸುವನು.

20 “ನಿಮ್ಮಿಂದ ತಪ್ಪಿಸಿಕೊಂಡು ಅಡಗಿಕೊಳ್ಳುವ ಜನರನ್ನು ಶಿಕ್ಷಿಸಲು ದೇವರು ಕಡಜದ ಹುಳಗಳನ್ನು ಅವರ ಮಧ್ಯಕ್ಕೆ ಕಳುಹಿಸುವನು ಮತ್ತು ಅವರನ್ನೆಲ್ಲಾ ನಾಶಮಾಡುವನು. 21 ಅವರಿಗೆ ನೀವು ಭಯಪಡಬೇಡಿರಿ; ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿದ್ದಾನೆ. ಆತನು ಭಯಂಕರನೂ ಮಹಾ ದೇವರೂ ಆಗಿದ್ದಾನೆ. 22 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸ್ವಲ್ಪ ಸ್ವಲ್ಪವಾಗಿಯೇ ಅಲ್ಲಿಂದ ತೆಗೆದುಬಿಡುವನು. ನೀವು ಒಂದೇ ಸಮಯಕ್ಕೆ ಎಲ್ಲರನ್ನು ನಾಶಮಾಡಬಾರದು. ಹಾಗೆ ಮಾಡಿದ್ದಲ್ಲಿ ದೇಶದಲ್ಲೆಲ್ಲಾ ಕಾಡುಪ್ರಾಣಿಗಳು ತುಂಬಿಹೋಗುತ್ತವೆ. 23 ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳವರನ್ನು ಸೋಲಿಸಲು ನಿಮಗೆ ಅವಕಾಶ ಮಾಡಿಕೊಡುವನು. ಯುದ್ಧಮಾಡುವಾಗ ಅವರ ಮಧ್ಯದಲ್ಲಿ ಗಲಿಬಿಲಿ ಹುಟ್ಟಿಸಿ ಅವರು ನಾಶವಾಗುವಂತೆ ಮಾಡುವನು. 24 ಅವರ ರಾಜರನ್ನು ನೀವು ಸೋಲಿಸುವಂತೆ ಮಾಡುವನು. ನೀವು ಅವರನ್ನು ಕೊಂದು ಅವರ ಹೆಸರು ಉಳಿಯದಂತೆ ಮಾಡುವಿರಿ. ನಿಮ್ಮನ್ನು ಯಾರೂ ತಡೆಯಲಾರರು. ನೀವು ಪ್ರತಿಯೊಬ್ಬರನ್ನು ನಾಶಮಾಡಿಬಿಡುವಿರಿ.

25 “ಅವರ ದೇವರುಗಳ ಪ್ರತಿಮೆಗಳನ್ನು ಬೆಂಕಿಯಲ್ಲಿ ಸುಟ್ಟುಬಿಡಬೇಕು. ಅವರ ವಿಗ್ರಹಗಳಲ್ಲಿರುವ ಬೆಳ್ಳಿಬಂಗಾರಗಳನ್ನು ನೀವು ತೆಗೆದುಕೊಳ್ಳಬೇಡಿ. ನೀವು ತೆಗೆದುಕೊಂಡರೆ ಅವು ನಿಮಗೆ ಉರುಲಾಗಿ ನಿಮ್ಮನ್ನೇ ನಾಶಮಾಡುತ್ತವೆ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ವಿಗ್ರಹಗಳನ್ನು ದ್ವೇಷಿಸುತ್ತಾನೆ. 26 ಅಂಥ ಅಸಹ್ಯ ವಿಗ್ರಹಗಳನ್ನು ನಿಮ್ಮ ಮನೆಯೊಳಗೆ ತರಲೂಬಾರದು, ಅವುಗಳನ್ನು ಬಯಸಲೂಬಾರದು; ನೀವು ಅವುಗಳನ್ನು ದ್ವೇಷಿಸಬೇಕು ಮತ್ತು ನಾಶಮಾಡಬೇಕು. ಇಲ್ಲವಾದರೆ ನೀವೂ ಅವುಗಳಂತೆಯೇ ನಾಶನಕ್ಕೆ ಗುರಿಯಾಗುವಿರಿ.

ಕೊಲೊಸ್ಸೆಯವರಿಗೆ 4:7-17

ಪೌಲನೊಂದಿಗಿರುವ ಜನರನ್ನು ಕುರಿತ ಸುದ್ಧಿ

ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ. ಆದಕಾರಣವೇ ನಾನು ಅವನನ್ನು ಕಳುಹಿಸುತ್ತಿದ್ದೇನೆ. ನಾವು ಹೇಗಿರುವೆವು ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮನ್ನು ಪ್ರೋತ್ಸಾಹಿಸಲು ನಾನು ಅವನನ್ನು ಒನೇಸಿಮನ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ. ಒನೇಸಿಮನು ಕ್ರಿಸ್ತನಲ್ಲಿ ನಂಬಿಗಸ್ತನಾದ ಪ್ರೀತಿಯ ಸಹೋದರನಾಗಿದ್ದಾನೆ. ಅವನು ನಿಮ್ಮ ಊರಿನವನೇ. ಇಲ್ಲಿ ಸಂಭವಿಸಿದ್ದೆಲ್ಲವನ್ನು ಅವರು ನಿಮಗೆ ತಿಳಿಸುತ್ತಾರೆ.

10 ಅರಿಸ್ತಾರ್ಕನು ವಂದನೆ ತಿಳಿಸಿದ್ದಾನೆ. ಅವನೂ ನನ್ನೊಡನೆ ಸೆರೆಯಲ್ಲಿದ್ದಾನೆ. ಬಾರ್ನಬನಿಗೆ ಸೋದರ ಬಾಂಧ್ಯವ್ಯವುಳ್ಳ ಮಾರ್ಕನೂ ವಂದನೆಯನ್ನು ಹೇಳುತ್ತಾನೆ. (ಮಾರ್ಕನ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಅವನು ಬಂದರೆ ಅವನನ್ನು ಸ್ವಾಗತಿಸಿರಿ.) 11 ಯೇಸುವು (ಯುಸ್ತನೆಂದೂ ಅವನನ್ನು ಕರೆಯುತ್ತಾರೆ.) ಸಹ ವಂದನೆಯನ್ನು ಹೇಳುತ್ತಾನೆ. ಯೆಹೂದ್ಯರಲ್ಲಿ ವಿಶ್ವಾಸಿಗಳಾಗಿರುವ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರೇ ನನಗೆ ಆದರಣೆಯಾಗಿದ್ದಾರೆ.

12 ಎಪಫ್ರನು ಸಹ ವಂದನೆ ತಿಳಿಸಿದ್ದಾನೆ. ಅವನು ಯೇಸು ಕ್ರಿಸ್ತನ ಸೇವಕನು. ಅವನು ನಿಮ್ಮವರಲ್ಲಿ ಒಬ್ಬನಾಗಿದ್ದಾನೆ. ಅವನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಆತ್ಮಿಕತೆಯಲ್ಲಿ ಬೆಳೆಯುತ್ತಾ ಸಂಪೂರ್ಣತೆಯನ್ನು ಮುಟ್ಟಬೇಕೆಂತಲೂ ದೇವರ ಚಿತ್ತವನ್ನು ಪೂರ್ಣವಾಗಿ ತಿಳಿದುಕೊಂಡು ದೃಢವಾಗಿರಬೇಕೆಂತಲೂ ಪ್ರಾರ್ಥಿಸುತ್ತಾನೆ. 13 ಅವನು ನಿಮಗೋಸ್ಕರ, ಲವೊದಿಕೀಯ ಮತ್ತು ಹಿರೆಯಾ ಪೊಲಿಯದ ಜನರಿಗೋಸ್ಕರ ಬಹಳ ಪ್ರಯಾಸಪಟ್ಟು ಕೆಲಸ ಮಾಡಿದನೆಂಬುದು ನನಗೆ ತಿಳಿದಿದೆ. 14 ದೇಮನು ಮತ್ತು ಪ್ರೀತಿಯ ಸ್ನೇಹಿತನಾದ ವೈದ್ಯ ಲೂಕನು ವಂದನೆಗಳನ್ನು ಹೇಳುತ್ತಾರೆ.

15 ಲವೊದಿಕೀಯದಲ್ಲಿರುವ ಸಹೋದರ ಸಹೋದರಿಯರಿಗೆ ವಂದನೆಗಳನ್ನು ತಿಳಿಸಿರಿ. ನುಂಫಳಿಗೂ ಅವಳ ಮನೆಯಲ್ಲಿ ಸೇರುವ ಸಭೆಯವರಿಗೂ ವಂದನೆಗಳನ್ನು ತಿಳಿಸಿರಿ. 16 ಈ ಪತ್ರವನ್ನು ಓದಿದ ನಂತರ ಲವೊದಿಕೀಯದ ಸಭೆಯವರಿಗೂ ಓದಲು ಕೊಡಿರಿ. ನಾನು ಲವೊದಿಕೀಯದವರಿಗೆ ಬರೆದಿರುವ ಪತ್ರವನ್ನು ನೀವೂ ಓದಿರಿ. 17 ಅರ್ಖಿಪ್ಪನಿಗೆ, “ಪ್ರಭುವು ನಿನಗೆ ವಹಿಸಿರುವ ಸೇವೆಯನ್ನು ಖಂಡಿತವಾಗಿ ನೆರವೇರಿಸಬೇಕು” ಎಂದು ತಿಳಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International