Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಲೂಕ 1:46-55

ಮರಿಯಳು ದೇವರನ್ನು ಸ್ತುತಿಸಿದಳು

46 ಆಗ ಮರಿಯಳು,

47 “ನನ್ನ ಪ್ರಾಣವು ಪ್ರಭುವನ್ನು ಸ್ತುತಿಸುತ್ತದೆ.
    ದೇವರೇ ನನ್ನ ರಕ್ಷಕನಾಗಿರುವುದರಿಂದ ನನ್ನ ಹೃದಯವು ಸಂತೋಷಗೊಂಡಿದೆ.
48 ದೇವರು ತನ್ನ ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದಾನೆ.
    ಇಂದಿನಿಂದ, ಎಲ್ಲಾ ಜನರು ನನ್ನನ್ನು ಧನ್ಯಳೆಂದು ಹೇಳುವರು.
49 ಏಕೆಂದರೆ ಸರ್ವಶಕ್ತನು (ದೇವರು) ನನಗೆ ಮಹಾಕಾರ್ಯಗಳನ್ನು ಮಾಡಿದ್ದಾನೆ.
    ಆತನ ಹೆಸರು ಅತಿ ಪರಿಶುದ್ಧವಾದದ್ದು.
50 ದೇವರು ತನ್ನಲ್ಲಿ ಭಯಭಕ್ತಿಯುಳ್ಳ ಜನರಿಗೆ ಎಂದೆಂದಿಗೂ ಕರುಣೆ ತೋರುವನು.
51 ಆತನು ತನ್ನ ಭುಜಬಲವನ್ನು ತೋರಿ
    ಗರ್ವಿಷ್ಠರನ್ನು ಚದರಿಸುತ್ತಾನೆ.
52 ದೇವರು ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ
    ದೀನರನ್ನು ಉನ್ನತಿಗೇರಿಸುತ್ತಾನೆ.
53 ಆತನು ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಗೊಳಿಸಿ
    ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಡುತ್ತಾನೆ.
54 ದೇವರು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನಕ್ಕನುಸಾರವಾಗಿ
    ಅಬ್ರಹಾಮನಿಗೂ ಅವನ ಸಂತತಿಯವರಿಗೂ ಯಾವಾಗಲೂ
55 ಕರುಣೆ ತೋರಬೇಕೆಂದುಕೊಂಡು ತನ್ನ ಸೇವಕನಾದ ಇಸ್ರೇಲನನ್ನು ಕೈ ಹಿಡಿದಿದ್ದಾನೆ” ಎಂದಳು.

1 ಸಮುವೇಲನು 2:1-10

ಹನ್ನಳ ಸ್ತೋತ್ರ

ಹನ್ನಳು ಇಂತೆಂದಳು:

“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ.
    ನಾನು ನನ್ನ ದೇವರಾದ ಯೆಹೋವನಲ್ಲಿ ಬಲಶಾಲಿಯಾಗಿದ್ದೇನೆ.
ನಾನು ನನ್ನ ಶತ್ರುಗಳ ಬಗ್ಗೆ ನಗುವೆನು.[a]
    ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ.
ಯೆಹೋವನಂತಹ ಪವಿತ್ರ ದೇವರು ಬೇರೆ ಯಾರೂ ಇಲ್ಲ.
    ನಿನ್ನ ಹೊರತು ಅನ್ಯದೇವರಿಲ್ಲ!
    ನಮ್ಮ ದೇವರಿಗಿಂತ ಬೇರೊಂದು ಬಂಡೆಯಿಲ್ಲ.
ಇನ್ನು ಮುಂದೆ ಬಡಾಯಿಕೊಚ್ಚಬೇಡಿ!
    ಸೊಕ್ಕಿನ ಮಾತುಗಳನ್ನು ಆಡಬೇಡಿ!
ಏಕೆಂದರೆ ಯೆಹೋವನು ಪ್ರತಿಯೊಂದನ್ನು ಬಲ್ಲನು.
    ಆತನು ಮನುಷ್ಯರನ್ನು ಮುನ್ನಡೆಸುತ್ತಾನೆ ಮತ್ತು ತೂಗಿ ನೋಡುತ್ತಾನೆ.
ಶಕ್ತಿಶಾಲಿ ಯೋಧರ ಬಿಲ್ಲುಗಳು ಮುರಿದುಹೋಗುತ್ತವೆ.
    ಬಲಹೀನರು ಶಕ್ತಿವಂತರಾಗುವರು.
ಹಿಂದೆ ಆಹಾರವನ್ನು ಸಮೃದ್ಧಿಕರವಾಗಿ ಹೊಂದಿದ್ದವರು
    ಆಹಾರಕ್ಕಾಗಿ ದುಡಿಯಬೇಕಾಗುವುದು.
ಹಿಂದೆ ಆಹಾರವಿಲ್ಲದೆ ಹಸಿದಿದ್ದವರಿಗೆ
    ಇಂದು ಆಹಾರ ಸಮೃದ್ಧಿಕರವಾಗಿರುವುದು!
ಬಂಜೆಗೆ ಈಗ ಏಳು ಜನ ಮಕ್ಕಳಿರುವರು.
ಆದರೆ ಹೆಚ್ಚು ಮಕ್ಕಳಿದ್ದ ತಾಯಿ ಇಂದು ವೇದನೆಗೊಂಡಿರುವಳು
    ಏಕೆಂದರೆ ಅವಳ ಮಕ್ಕಳೆಲ್ಲ ಸತ್ತುಹೋಗಿದ್ದಾರೆ.
ಯೆಹೋವನು ಜನರಿಗೆ ಸಾವನ್ನೂ ತರುವನು.
    ಅಂತೆಯೇ ಅವರಿಗೆ ಜೀವವನ್ನೂ ದಯಪಾಲಿಸುವನು.
ಆತನು ಅವರಿಗೆ ಮರುಜೀವವನ್ನು ದಯಪಾಲಿಸಬಲ್ಲನು.
    ಯೆಹೋವನು ಜನರನ್ನು ಮರಣ ಸ್ಥಳವಾದ ಪಾತಾಳಕ್ಕೆ ತಳ್ಳುವನು.
ಯೆಹೋವನು ಜನರನ್ನು ಬಡವರನ್ನಾಗಿಸುತ್ತಾನೆ.
    ಆತನು ಜನರನ್ನು ಹಣವಂತರನ್ನಾಗಿಸುತ್ತಾನೆ.
ಯೆಹೋವನು ಜನರನ್ನು ದೀನರನ್ನಾಗಿಸುತ್ತಾನೆ.
    ಆತನು ಜನರನ್ನು ದೊಡ್ಡವರನ್ನಾಗಿಸುತ್ತಾನೆ.
ಯೆಹೋವನು ಬಡವರನ್ನು ಧೂಳಿನಿಂದ ಮೇಲಕ್ಕೆತ್ತುತ್ತಾನೆ.
    ಯೆಹೋವನು ದೀನರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ.
ಯೆಹೋವನು ಬಡವರನ್ನು ರಾಜಕುಮಾರರೊಂದಿಗೆ ಕುಳ್ಳಿರಿಸುತ್ತಾನೆ.
    ಆತನು ಬಡವರನ್ನು ಗೌರವಪೀಠದಲ್ಲಿ ಕುಳ್ಳಿರಿಸುತ್ತಾನೆ.
ಲೋಕವೂ ಅದರ ಅಡಿಪಾಯಗಳೂ ಯೆಹೋವನವೇ.
    ಆತನು ಆ ಕಂಬಗಳ ಮೇಲೆ ಲೋಕವನ್ನು ನಿಲ್ಲಿಸಿರುವನು.
ಯೆಹೋವನು ತನ್ನ ಪವಿತ್ರ ಜನರನ್ನು ರಕ್ಷಿಸುವನು.
    ಆತನು ಅವರನ್ನು ಎಡವದಂತೆ ಕಾಪಾಡುವನು.
ಆದರೆ ಕೆಟ್ಟವರು ನಾಶವಾಗಿ ಕತ್ತಲೆಯಲ್ಲಿ ಬೀಳುವರು.
    ಅವರ ಶಕ್ತಿ ಅವರಿಗೆ ಜಯನೀಡಲಾರದು.
10 ಯೆಹೋವನು ತನ್ನ ಶತ್ರುಗಳನ್ನು ನಾಶಗೊಳಿಸುವನು.
    ಮಹೋನ್ನತನಾದ ದೇವರು ಪರಲೋಕದಲ್ಲಿ ಜನರಿಗೆ ವಿರುದ್ಧವಾಗಿ ಗುಡುಗುವನು.
ಯೆಹೋವನು ಬಹುದೂರದ ದೇಶಗಳಿಗೂ ತೀರ್ಪನ್ನು ಕೊಡುವನು.
    ಆತನು ತನ್ನ ರಾಜನಿಗೆ ಶಕ್ತಿಯನ್ನು ಕೊಡುವನು.
    ತಾನು ಅಭಿಷೇಕಿಸಿದ ರಾಜನನ್ನು ಬಲಗೊಳಿಸುವನು.”

ಮಾರ್ಕ 11:1-11

ರಾಜನಂತೆ ಜೆರುಸಲೇಮಿಗೆ ಪ್ರವೇಶ

(ಮತ್ತಾಯ 21:1-11; ಲೂಕ 19:28-40; ಯೋಹಾನ 12:12-19)

11 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನ ಸಮೀಪಕ್ಕೆ ಬಂದಿದ್ದರು. ಅವರು ಆಲಿವ್ ಗುಡ್ಡದ ಬಳಿಯಿರುವ ಬೆತ್ಛಗೆ ಹಾಗೂ ಬೆಥಾನಿ ಎಂಬ ಊರುಗಳಿಗೆ ಬಂದಾಗ ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ಅಲ್ಲಿ ಕಾಣುತ್ತಿರುವ ಊರಿಗೆ ಹೋಗಿರಿ. ನೀವು ಅದನ್ನು ಪ್ರವೇಶಿಸಿದಾಗ, ಯಾರೂ ಸವಾರಿ ಮಾಡಿಲ್ಲದ ಒಂದು ಕತ್ತೆ ಮರಿಯನ್ನು ಅಲ್ಲಿ ಕಟ್ಟಿರುವುದನ್ನು ಕಾಣುವಿರಿ. ಆ ಕತ್ತೆಯನ್ನು ಬಿಚ್ಚಿಕೊಂಡು, ನನ್ನ ಬಳಿಗೆ ತನ್ನಿರಿ. ಯಾವನಾದರೂ ‘ಆ ಕತ್ತೆಯನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ’ ಎಂದು ನಿಮ್ಮನ್ನು ಕೇಳಿದರೆ, ‘ಒಡೆಯನಿಗೆ ಈ ಕತ್ತೆ ಬೇಕಾಗಿದೆ. ಆತನು ಇದನ್ನು ಬೇಗನೆ ಕಳುಹಿಸಿಕೊಡುವನು’ ಎಂದು ಅವನಿಗೆ ಹೇಳಿರಿ” ಎಂದನು.

ಶಿಷ್ಯರು ಊರಿನೊಳಗೆ ಹೋದಾಗ ರಸ್ತೆಯಲ್ಲಿನ ಒಂದು ಮನೆಯ ಬಾಗಿಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕತ್ತೆಮರಿಯೊಂದನ್ನು ಕಂಡರು. ಶಿಷ್ಯರು ಹೋಗಿ ಆ ಕತ್ತೆಯನ್ನು ಬಿಚ್ಚಿದಾಗ, ಅಲ್ಲಿ ನಿಂತಿದ್ದ ಕೆಲವು ಜನರು, “ನೀವು ಮಾಡುತ್ತಿರುವುದೇನು? ಆ ಕತ್ತೆಯನ್ನು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದರು. ಯೇಸು ತಮಗೆ ಹೇಳಿದ ರೀತಿಯಲ್ಲಿಯೇ ಶಿಷ್ಯರು ಉತ್ತರಿಸಿದರು. ಆಗ ಜನರು ಆ ಕತ್ತೆಯನ್ನು ಶಿಷ್ಯರಿಗೆ ಬಿಟ್ಟುಕೊಟ್ಟರು.

ಶಿಷ್ಯರು ಕತ್ತೆಯನ್ನು ಯೇಸುವಿನ ಬಳಿಗೆ ತಂದು ತಮ್ಮ ಹೊದಿಕೆಗಳನ್ನು ಅದರ ಮೇಲೆ ಹಾಸಿದರು. ಆಗ ಯೇಸು ಅದರ ಮೇಲೆ ಕುಳಿತನು. ಅನೇಕ ಜನರು ಯೇಸುವಿಗಾಗಿ ರಸ್ತೆಯ ಮೇಲೆ ತಮ್ಮ ಹೊದಿಕೆಗಳನ್ನು ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಲೆಗಳನ್ನು ಕೊಯ್ದುತಂದು ರಸ್ತೆಯ ಮೇಲೆ ಹರಡಿದರು. ಕೆಲವು ಜನರು ಯೇಸುವಿನ ಮುಂದೆ ಹೋಗುತ್ತಿದ್ದರು. ಇತರ ಜನರು ಆತನ ಹಿಂದೆ ಹೋಗುತ್ತಿದ್ದರು. ಜನರೆಲ್ಲರೂ,

“‘ಆತನನ್ನು ಕೊಂಡಾಡಿರಿ![a]
    ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದವಾಗಲಿ.’(A)

10 “ನಮ್ಮ ಪಿತೃವಾದ ದಾವೀದನ
    ರಾಜ್ಯವು ಬರಲಿ!
ಮೇಲೋಕಗಳಲ್ಲಿ ದೇವರಿಗೆ ಜಯವಾಗಲಿ” ಎಂದು ಕೂಗಿದರು.

11 ಯೇಸು ಜೆರುಸಲೇಮನ್ನು ತಲುಪಿದಾಗ, ದೇವಾಲಯಕ್ಕೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನೂ ನೋಡಿದನು. ಆದರೆ ಆಗಲೇ ತಡವಾಗಿತ್ತು. ಆದ್ದರಿಂದ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಬೆಥಾನಿಯಕ್ಕೆ ಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International